ಅಧಿಕಾರ ವಿಕೇಂದ್ರೀಕರಣವನ್ನು ಸಾಕಾರಗೊಳಿಸುವತ್ತ ಒಂದು ಮಹತ್ವದ ಹೆಜ್ಜೆ

ಪಂಚಾಯತ್‌ ಮಟ್ಟದಲ್ಲಿ ಕೆಡಿಪಿ ಸಭೆ

Team Udayavani, Jun 25, 2019, 5:00 AM IST

ಜೂ.6ರ ಸರ್ಕಾರಿ ಆದೇಶದಲ್ಲಿ 20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ ಕರ್ನಾಟಕ ರಾಜ್ಯದ ಅಭಿವೃದ್ದಿ ಪರಿಶೀಲನೆಯನ್ನು ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತ್‌ ಮಟ್ಟದಲ್ಲಿ ನಡೆಸಲು ಅನುವು ಮಾಡಿಕೊಡಲಾಗಿದೆ. ಇನ್ನು ಮುಂದೆ ಗ್ರಾಮ ಪಂಚಾಯತ್‌ಗಳು ತ್ರೈಮಾಸಿಕವಾಗಿ ಏಪ್ರಿಲ್, ಜುಲೈ, ಅಕ್ಟೋಬರ್‌ ಹಾಗೂ ಡಿಸೆಂಬರ್‌ ಮೊದಲ ವಾರದಲ್ಲಿ ಕೆಡಿಪಿ ಸಭೆ ಕರೆಯಬೇಕು.

ಸಂವಿಧಾನದ 73ನೇ ತಿದ್ದುಪಡಿಯ ಮೂಲ ಉದ್ದೇಶದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಪಂಚಾಯತ್‌ ರಾಜ್‌ ಸಂಸ್ಥೆ ಹೊಂದಿರುತ್ತದೆ. ಆಡಳಿತ, ಅನುದಾನ, ಕಾರ್ಯಕ್ರಮ (3F= Functionary, Finance & Function) ಈ ಮೂರು ಸ್ತರದ ಹೊಣೆಯನ್ನು, ಕಾಯಿದೆ ಪಂಚಾಯತ್‌ಗೆ ವರ್ಗಾಯಿಸಿದೆ. ಸ್ವಾಭಾವಿಕವಾಗಿ ತ್ರಿ ಸ್ತರದ ಆಡಳಿತ ಮತ್ತು ಅನುಷ್ಠಾನದ ಕಣ್ಗಾವಲು ಮಾಡಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕೆಡಿಪಿ ಸಭೆಯನ್ನು ನಡೆಸಲಾಗುತ್ತಿದ್ದು, ತಾಲೂಕು ಮಟ್ಟದಲ್ಲೂ ಶಾಸಕರ ನೇತೃತ್ವದಲ್ಲಿ 20 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲಿಸಲು ಸಮಿತಿಗಳಿವೆ. ಆದರೆ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಕೆಡಿಪಿ ಸಭೆ ನಡೆಸಬೇಕೆಂಬ ದಶಕಗಳ ಬೇಡಿಕೆಗೆ ಗ್ರಾಮೀಣ ಅಭಿವೃದ್ದಿ ಇಲಾಖೆ ಪ್ರಥಮ ಬಾರಿಗೆ ಒತ್ತುಕೊಟ್ಟು ಇದೀಗ ಕರ್ನಾಟಕ ರಾಜ್ಯವು 20 ಅಂಶಗಳ ಅಭಿವೃದ್ದಿ ಕಾರ್ಯಕ್ರಮವನ್ನು ಅಂದರೆ ಪಂಚಾಯತ್‌ ಮಟ್ಟದ ಕೆಡಿಪಿ ಸಭೆಯನ್ನು ನಡೆಸಲು ಅಧಿಕೃತ ಆದೇಶ ಹೊರಡಿಸಿದೆ.

ಜೂ.6ರ ಸರ್ಕಾರಿ ಆದೇಶದಲ್ಲಿ 20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ ಕರ್ನಾಟಕ ರಾಜ್ಯದ ಅಭಿವೃದ್ದಿ ಪರಿಶೀಲನೆಯನ್ನು ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತ್‌ ಮಟ್ಟದಲ್ಲಿ ನಡೆಸಲು ಅನುವು ಮಾಡಿಕೊಡಲಾಗಿದೆ. ಇನ್ನು ಮುಂದೆ ಗ್ರಾಮ ಪಂಚಾಯತ್‌ಗಳು ತ್ರೈಮಾಸಿಕವಾಗಿ ಏಪ್ರಿಲ್, ಜುಲೈ, ಅಕ್ಟೋಬರ್‌ ಹಾಗೂ ಡಿಸೆಂಬರ್‌ ಮೊದಲ ವಾರದಲ್ಲಿ ಕೆಡಿಪಿ ಸಭೆ ಕರೆಯಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಈ ಸಭೆಗೆ ಹೋಬಳಿ ಮತ್ತು ತಾಲೂಕು ಮಟ್ಟದ ಎಲ್ಲಾ ಅಭಿವೃದ್ದಿ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು, ಬಡವರ ಕಲ್ಯಾಣ ಯೋಜನೆಗಳೂ ಸೇರಿದಂತೆ ಅಭಿವೃದ್ದಿ ಮತ್ತು ಅನುದಾನದ ವಿವರಗಳನ್ನು ಹಾಗೂ ಇವುಗಳ ಅನುಷ್ಠಾನದಲ್ಲಿ ಸಾಧಿಸಿರುವ ಪ್ರಗತಿಯನ್ನು ಪಂಚಾಯತ್‌ ಕೆಡಿಪಿ ಸಭೆಯಲ್ಲಿ ಮಂಡಿಸಬೇಕಾಗುತ್ತದೆ. ಹಿಂದೆ ಯಾವ ಮಾದರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಗತಿ ಪರಿಶೀಲನೆ ಮಾಡುತ್ತಿದ್ದರೋ, ಅದೇ ಮಾದರಿಯಲ್ಲಿ ಪಂಚಾಯತ್‌ ಕೆಡಿಪಿ ಸಭೆಯ ನಡಾವಳಿ ಹಾಗೂ ಚಟುವಟಿಕೆ ಇರುತ್ತದೆ. ಈಗಾಗಲೇ ಸ್ವಾಭಾವಿಕವಾಗಿ ಗ್ರಾಮ ಪಂಚಾಯತ್‌ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್‌ ಅಧ್ಯಕ್ಷರು ವಹಿಸುತ್ತಾರೆ. ಅಧ್ಯಕ್ಷರು ಗೈರು ಹಾಜರಾದರೆ ಉಪಾಧ್ಯಕ್ಷರ ಅಧ್ಯ ಕ್ಷತೆಯಲ್ಲಿ ಸಭೆ ನಡೆಯುತ್ತದೆ. ಮೇಲಿನ ಇಬ್ಬರು ಭಾಗವಹಿಸದೆ ಇದ್ದರೆ ಪಂಚಾಯತ್‌ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರು ಸಭೆಯ ಅಧ್ಯಕ್ಷತೆಯನ್ನು ವಹಿಸಬೇಕೆಂದು ಸರ್ಕಾರಿ ಆದೇಶ ಹೇಳಿದೆ. ಕೆಡಿಪಿ ಸಭೆಗೆ ಪಂಚಾಯತ್‌ ಅಭಿವೃದ್ದಿ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿದ್ದು, ಕಾಲಕಾಲಕ್ಕೆ ತಪ್ಪದೇ ಸಭೆ ಕರೆಯುವ ಪೂರ್ಣ ಹೊಣೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯದ್ದಾಗಿರುತ್ತದೆ. ಸಭೆಯಲ್ಲಿ ಕೃಷಿ, ತೋಟಗಾರಿಕೆ, ನೀರಾವರಿ, ವಿದ್ಯುತ್‌, ಕಂದಾಯ, ವಸತಿ, ಸಹಕಾರವೂ ಸೇರಿದಂತೆ 30 ಇಲಾಖೆಗಳ ಹೋಬಳಿ ಮಟ್ಟದ, ಯಾ ಅಧಿಕಾರಿಗಳು ಅಗತ್ಯವೆನಿಸಿದರೆ ಇತರ ಅಧಿಕಾರಿಗಳನ್ನು ಭಾಗವಹಿಸಲು ನಿರ್ದೇಶಿಸುವ ಅಧಿಕಾರ ಗ್ರಾಮ ಪಂಚಾಯತ್‌ ಹೊಂದಿರುತ್ತದೆ.

ಕೆಡಿಪಿ ಸಭೆಯ ದಿನಾಂಕದ ಕುರಿತು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಒಂದು ವಾರದ ಮುಂಚಿತವಾಗಿ ಸಮಿತಿಯ ಸದಸ್ಯರಿಗೆ ತಿಳಿವಳಿಕೆಯ ಸೂಚನಾ ಪತ್ರವನ್ನು ನೀಡಬೇಕು. ಸಂಬಂಧಪಟ್ಟ ಹೋಬಳಿ ಮತ್ತು ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟಂತೆ ಕೆಡಿಪಿ ಸಭೆಗೆ ಹಾಜರಾಗಲು ನಿರ್ದಿಷ್ಟ ಪಡಿಸಬೇಕೆಂಬ ಆದೇಶವಿದೆ. ಪಂಚಾಯತ್‌ ಕೆಡಿಪಿ ಸಭೆಯಲ್ಲಿ ಚರ್ಚಿಸಬಹುದಾದ ವಿಷಯಗಳ ಕುರಿತು ಹಾಗೂ ಅನುಷ್ಠಾನ ಗೊಳಿಸುತ್ತಿರುವ ಯೋಜನೆಯ ಕುರಿತು ಮಾಹಿತಿಗಳನ್ನು ಸರ್ಕಾರ ನಿರ್ದಿಷ್ಟಪಡಿಸಿದ ನಮೂನೆಯಲ್ಲಿ ವಿವಿಧ ಇಲಾಖೆಗಳು ಒದಗಿಸ ಬೇಕು. ಅಲ್ಲದೆ ಬೇರೆ ಬೇರೆ ಇಲಾಖೆಗೆ ಸಂಬಂಧಿಸಿದಂತೆ, ಆರ್ಥಿಕ ಮತ್ತು ಭೌತಿಕ ಪ್ರಗತಿಯ ವಿವರಗಳನ್ನು ಪ್ರತ್ಯೇಕ ನಮೂನೆಯ ಮೂಲಕ ಸಭೆಯ ಮುಂದೆ ಮಂಡಿಸಬೇಕಾಗುತ್ತದೆ. ಅಂದರೆ ಪ್ರತೀ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ವರದಿ ಮಂಡಿಸುತ್ತಲೇ ಯಾ ಪರಿಶೀಲನಾ ನಡವಳಿಯ ಚರ್ಚೆ ಬರುತ್ತಲೆ ತತ್ಸಬಂದಿ ಇಲಾಖೆಯ ಪ್ರಗತಿಯ ಬಗ್ಗೆ ಚರ್ಚೆ ನಡೆಸುವ ಅವಕಾಶವಿದೆ. ಅಲ್ಲದೆ ಮರು ಪ್ರಶ್ನೆ ಹಾಗೂ ಸಮಜಾಯಿಸಿ ಮತ್ತು ಸ್ಪಷ್ಟತೆಗಳನ್ನು ಪಡೆಯುವ ಅಧಿಕಾರ ಸ್ವಾಭಾವಿಕವಾಗಿ ಸಭಾಧ್ಯಕ್ಷರಿಗೆ ಅಂದರೆ ಪಂಚಾಯತ್‌ ಅಧ್ಯಕ್ಷರಿಗೆ ಇರುತ್ತದೆ.

ಪಂಚಾಯತ್‌ ಕೆಡಿಪಿ ಸಭೆಯ ಆನಂತರ ಸಭಾ ನಡಾವಳಿಯನ್ನು ಮೂರು ದಿನಗಳ ಒಳಗೆ ಸಿದ್ಧಪಡಿಸಿ ಸಂಬಂಧಪಟ್ಟ ಎಲ್ಲಾ ಸದಸ್ಯರಿಗೆ, ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಅಗತ್ಯ ಕ್ರಮಕ್ಕಾಗಿ ಕಳುಹಿಸುವುದಲ್ಲದೆ ಕೆಡಿಪಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಮತ್ತು ನಿರ್ಣಯಗಳನ್ನು ಹಾಗೂ ಅಧಿಕಾರಿಗಳ ಅನುಪಾಲನಾ ವರದಿಯನ್ನು ಮುಂದಿನ ಸಭೆಯಲ್ಲಿ ಮಂಡಿಸಿ, ಚರ್ಚಿಸಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲು ಅಗತ್ಯ ಕ್ರಮ ಕೈಗೊಳುವಂತೆ ಸರ್ಕಾರಿ ಆದೇಶ ಸೂಚಿಸಿದೆ. ಕರ್ನಾಟಕ ಅಭಿವೃದ್ದಿ ಪರಿಶೀಲನಾ ಕಾರ್ಯಕ್ರಮದಲ್ಲಿ ಈಗಾಗಲೇ ನೀಡಿರುವ ಅಧಿಕಾರ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಕೇಂದ್ರ ಹಣಕಾಸು ಆಯೋಗದ ಅನುಷ್ಠಾನ ಅನುದಾನ, ಮರಳುಗಾರಿಕೆ ರಾಜಧನ ಪಾವತಿ, ಕಿರು ನೀರು ಸರಬರಾಜುಗಳು ಸೇರಿದಂತೆ, 20 ಕ್ಕೂ ಹೆಚ್ಚು ವಿಷಯಗಳ ಪ್ರಗತಿಗಳನ್ನು ಗಮನಿಸ ಬಹುದಾಗಿದೆ. ಅಲ್ಲದೆ, ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ, ಬೆಳೆ ವಿಮೆ ಮತ್ತು ಬೆಳೆ ಸಮೀಕ್ಷೆ, ಸಬ್ಸಿಡಿ ದರದಲ್ಲಿ ಕೃಷಿ ಸಲಕರಣೆಗಳ ವಿತರಣೆ, ಬೆಳೆಯ ಹೊಸ ತಳಿಗಳ ಪರಿಚಯ, ರೈತರ ಬೆಂಬಲ ಬೆಲೆಯ ಪ್ರಗತಿ, ಕೃಷಿ ದಾಸ್ತಾನು ಗೋದಾಮುಗಳ ಪರಿಶೀಲನೆ, ಮಣ್ಣು ಪರಿಶೀಲನೆ, ಭೂ ಸಾರ ಸಂರಕ್ಷಣೆ ಮುಂತಾದ 11 ಕ್ಕೂ ಹೆಚ್ಚು ವಿಷಯಗಳು ಕೃಷಿ ವ್ಯಾಪ್ತಿಯಲ್ಲಿ ಬಂದರೆ, ತೋಟಗಾರಿಕೆ ಬೆಳೆಗಳ ಉತ್ಪಾದನೆ ಮತ್ತು ಪ್ರಗತಿ, ರೇಷ್ಮೆ ಇಲಾಖೆಯ ಯೋಜನೆಗಳು, ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಮಕ್ಕಳ ಹಾಜರಾತಿ, ಶೈಕ್ಷಣಿಕ ಗುಣಮಟ್ಟ, ಬಿಸಿ ಊಟದ ಅನುಷ್ಠಾನ, ಪೌಷ್ಟಿಕಾಂಶದ ಕೊರತೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮೂಲ ಸೌಕರ್ಯಗಳು, ಸಮವಸ್ತ್ರ, ಸೈಕಲ್ ವಿತರಣೆ, ಶೌಚಾಲಯ, ಎಸ್‌ಡಿಎಮ್‌ಸಿ ಸಮಿತಿಗಳ ರಚನೆ ಮುಂತಾದ ಗಮನಾರ್ಹ ವಿಷ¿ ುಗಳ ಕುರಿತು ಇನ್ನು ಮುಂದೆ ಕೆಡಿಪಿಯಲ್ಲಿ ಚರ್ಚಿಸಬಹುದಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಮಹಿಳೆಯರು ಋತುಮತಿ ಯರಾದ ಸಂದರ್ಭದಲ್ಲಿ ಮನೆ ಮತ್ತು ಊರಿನಿಂದ ಹೊರಗಿಡುವ ಅನಿಷ್ಠ ಪದ್ಧತಿ, ಅಂಗನವಾಡಿ ಕೇಂದ್ರಗಳ ಮೂಲ ಸೌಕರ್ಯಗಳು, ಗರ್ಭಿಣಿ ಬಾಣಂತಿಯರ ಆರೈಕೆ ಕುರಿತು ಇನ್ನು ಮುಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಅಧಿಕಾರಿಗಳು ಪಂಚಾಯತ್‌ ಕೆಡಿಪಿಗೆ ಉತ್ತರಿಸಬೇಕಾಗುತ್ತದೆ.

ಪಶು ಸಂಗೋಪನಾ ಇಲಾಖೆಗಳ ಲೋಪದೋಷಗಳು, ಮೀನು ಗಾರಿಕಾ ಇಲಾಖೆಯ ಪ್ರಗತಿ, ಸಾಮಾಜಿಕ ಅರಣ್ಯದಲ್ಲಿನ ನೆಡುತೋಪು, ಔಷಧೀಯ ಸಸ್ಯ ಸಂಪತ್ತುಗಳ ರಕ್ಷಣೆ ಈ ಎಲ್ಲಾ ವಿಚಾರಗಳು ಪಂಚಾಯತ್‌ ಕೆಡಿಪಿಯಲ್ಲಿ ಪ್ರತಿಧ್ವನಿಸಲಿದೆ. ಸಣ್ಣ ನೀರಾವರಿ, ಗ್ರಾಮೀಣ ರಸ್ತೆ, ಸೇತುವೆಗಳು, ವಿದ್ಯುತ್‌ ಇಲಾಖೆಯ ಕಾರ್ಯಕ್ರಮಗಳು, ರೇಶನ್‌ ವ್ಯವಸ್ಥೆ ಅದರಲ್ಲೂ ರೇಶನ್‌ ಕೊಡುವಲ್ಲಿ ಬಯೋ ಮೆಟ್ರಿಕ್‌ ಅಳವಡಿಕೆ, ಆಹಾರ ಪದಾರ್ಥದಲ್ಲಿನ ಗುಣ ಮಟ್ಟದ ಖಾತರಿ, ತೂಕದಲ್ಲಿನ ಕ್ರಮಬದ್ಧತೆ ಇವೆಲ್ಲವೂ ಪಂಚಾಯತ್‌ ಕೆಡಿಪಿಯಲ್ಲಿ ಲೋಪದೋಷಗಳಡಿಯಲ್ಲಿ ಚರ್ಚೆಗೆ ಒಳಪಡಿಸುವ ವಿಷಯಗಳು. ಆರೋಗ್ಯ ಇಲಾಖೆಯ ಮೂಲಕ ರೋಗಿಗಳ ಅಂಕಿ ಸಂಖ್ಯೆ, ಆಸ್ಪತ್ರೆಗಳ ಪ್ರಗತಿ ಪರಿಶೀಲನೆ, ಆಯಾ ಗ್ರಾಮ ಪಂಚಾಯತ್‌ಗಳಲ್ಲಿ ಸ್ಥಾಪಿತವಾಗಿರುವ ಸಮುದಾಯ ಆರೋಗ್ಯ ಕೇಂದ್ರ, ಪಿಎಚ್ಸಿ ಮತ್ತು ಆರೋಗ್ಯ ಘಟಕಗಳಲ್ಲಿರುವ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯ ಚಟುವಟಿಕೆಯ ವರದಿಯೂ ಸೇರಿದಂತೆ ಗ್ರಂಥಾ ಲಯಗಳು ಸಮಾಜ ಕಲ್ಯಾಣ ಇಲಾಖೆಯ ಚಟುವಟಿಕೆಗಳು, ಪ್ರವಾ ಸೋದ್ಯಮ, ಕೈಗಾರಿಕೆ, ಗ್ರಾಮೀಣ ವಸತಿ, ಬಡತನ ನಿರ್ಮೂಲನೆ, ಕ್ರೀಡೆ, ನೈರ್ಮಲ್ಯ, ಸಹಕಾರ ಇಲಾಖೆಯ ಒಟ್ಟು 28ಕ್ಕೂ ಹೆಚ್ಚು ಇಲಾಖೆಗಳು ಮತ್ತು ವಿಷಯಗಳು ಗ್ರಾಮ ಪಂಚಾಯತ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಳವಡಿಕೆಯಾಗಿದೆ. ಶಾಲಾ ವಿದ್ಯಾರ್ಥಿಗಳ ಹಾಜರಾತಿಯೂ ಸೇರಿದಂತೆ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ಇನ್ನು ಮುಂದೆ ಪಂಚಾಯತ್‌ ಕೆಡಿಪಿ ಮೂಲಕ ಸಾಗಲಿದೆ.

ಇಲ್ಲಿಯವರೆಗೆ ಜಿಲ್ಲಾ ಮಟ್ಟದಲ್ಲಿ ಸರ್ಕಾರದ 20 ಅಂಶಗಳ ಕಾರ್ಯಕ್ರಮದ ಬಗ್ಗೆ ಪ್ರಗತಿ ಪರಿಶೀಲನೆ ಮಾಡುವ ಅಧಿಕಾರವಿದ್ದದ್ದು ಆಯಾಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ. ಆದ್ದರಿಂದಲೇ, ಪಂಚಾಯತ್‌ ಕೆಡಿಪಿಗೆ ಹೆಚ್ಚು ಅರ್ಥ ಮತ್ತು ಶಕ್ತಿ ಬರುವ ಸಂಭವವಿದೆ. ಹಾಗೆಂದು ಪಂಚಾಯತ್‌ ಮಟ್ಟಕ್ಕೆ ಪ್ರಗತಿ ಪರಿಶೀಲನೆಯ ಅವಕಾಶ ಸಿಕ್ಕಿತೆಂದು ವಿಕೇಂದ್ರಿಕರಣದ ಬಗ್ಗೆ ಒಲವುಳ್ಳವರು ಒಮ್ಮೆಲೇ ಖುಷಿ ಪಡುವಂತಿಲ್ಲ. ಸಂವಿಧಾನದ ತಿದ್ದುಪಡಿಗೆ ಪೂರಕವಾಗಿ ಕೊಟ್ಟಿರುವ ಅನೇಕ ಅಧಿಕಾರಗಳು ಅನುಷ್ಠಾನವಾಗಿಲ್ಲದೆ ಇರುವುದು ನಮ್ಮ ಕಣ್ಣಮುಂದೆ ಇರುವಾಗ ಪಂಚಾಯತ್‌ ಕೆಡಿಪಿಯ ಯಶಸ್ಸಿಗೆ ಯೋಜನಾಬದ್ದ ಕಾರ್ಯಕ್ರಮ ಹಾಕಬೇಕಾಗಿದೆ. ಕೆಡಿಪಿ ಸಭೆಗೆ ಖುದ್ದು ಹಾಜರಾತಿಗಾಗಿ ನಿರ್ದಿಷ್ಟ ಪಡಿಸಿದ ಅಧಿಕಾರಿಗಳು ಯಾ ಹುದ್ದೆಗಳು ಎಲ್ಲಾ ಪಂಚಾಯತ್‌ ಕೆಡಿಪಿಯಲ್ಲಿ ಭಾಗವಹಿಸುವಲ್ಲಿ ಸಾಧ್ಯವಾಗುವಂತೆ ದಿನಾಂಕ ನಿಗದಿಗೊಳಿಸ ಬೇಕಾಗಿದೆ. ಉದಾಹರಣೆಗೆ ಪಂಚಾಯತ್‌ ಕೆಡಿಪಿಗೆ ತಾಲೂಕು ಮಟ್ಟದ ಸಹಾಯಕ ಕೃಷಿ ಅಧಿಕಾರಿ, ತೋಟಗಾರಿಕೆ ಅಧಿಕಾರಿ, ರೇಷ್ಮೆ ವಿಸ್ತರಣಾ ಅಧಿಕಾರಿಗಳು ಹಾಗೂ ಪಶು ಸಂಗೋಪನಾ ನಿರೀಕ್ಷಕರು ಮುಂತಾದ ಅಧಿಕಾರಿಗಳ ಹಾಜರಾತಿ ಕಡ್ಡಾಯಗೊಳಿಸಿದೆ. ತಾಲೂಕು ಮಟ್ಟದ ಅಧಿಕಾರಿಗಳು ಪ್ರತಿ ತಾಲೂಕಿನಲ್ಲಿರುವ 50ಕ್ಕೂ ಹೆಚ್ಚು ಪಂಚಾಯತ್‌ ಕೆಡಿಪಿಗಳಲ್ಲಿ ಭಾಗವಹಿಸುವುದು ಸುಲಭವಲ್ಲ. ಆದ್ದರಿಂದಲೇ ಪಂಚಾಯತ್‌ ಕೆಡಿಪಿ ಅಧಿಕಾರಿಗಳಿಲ್ಲದೆ ಮತ್ತೂಂದು ಗ್ರಾಮ ಸಭೆಯಂತಾಗದೆ ವ್ಯವಸ್ಥಿತವಾಗಿ ನಡೆದಾಗಲೇ ಮೂಲ ಉದ್ದೇಶ ಈಡೇರಲು ಸಾಧ್ಯ.

ಪ್ರಸ್ತುತ ಕೆಡಿಪಿ ಸಭೆಯ ಮೂಲಕ ಪ್ರಗತಿ ಪರಿಶೀಲನೆ ಅಗತ್ಯವಾಗಿ ರುವುದೇಕೆಂದರೆ ಇಡೀ ರಾಜ್ಯದಲ್ಲಿ ಜನಸಾಮಾನ್ಯರನ್ನು ಕಾಡುವ ಸಮಸ್ಯೆಗಳನ್ನು ಬೆನ್ನಟ್ಟಿ ಪರಿಹಾರ ಮಾಡುವ ಪ್ರಯತ್ನವೇ ಆಡಳಿತ ಯಂತ್ರದಲ್ಲಿ ಕಾಣುತ್ತಿಲ್ಲ. ಇತ್ತೀಚೆಗೆ ಕಂದಾಯ ಸಚಿವರು ರಾಜ್ಯದ ಜಿಲ್ಲೆಯೊಂದರಲ್ಲಿ ಸಿ.ಎಸ್‌ ಅವರನ್ನು ಉದ್ದೇಶಿಸಿ, ತಾಲೂಕು ಪಂಚಾ ಯತ್‌ಗೆ ಭೇಟಿಕೊಟ್ಟು ನಡೆದ ಪ್ರಗತಿ ಗಮನಿಸಿದ್ದೀರಾ ಎಂದು ಪ್ರಶ್ನಿಸಿದಾಗ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಾಹಣಾ ಧಿಕಾರಿ ಮೌನ ವಹಿಸುತ್ತಾರೆ. ತಾಲೂಕು ಪಂಚಾಯತ್‌ನ ಇ.ಓ. ಗಳನ್ನು ಎದುರು ನಿಲ್ಲಿಸಿಕೊಂಡು ನಿಮ್ಮ ತಾಲೂಕುಗಳಲ್ಲಿ ತಿಂಗಳಿಗೆ ಎಷ್ಟು ಗ್ರಾಮ ಪಂಚಾಯತ್‌ ಗಳಿಗೆ ಭೇಟಿ ನೀಡಿ ಬಾಕಿ ಉಳಿದಿರುವ ಯೋಜನೆ, ಬಡವರ ಮನೆ, ಕುಡಿಯುವ ನೀರು, ಬಾಕಿ ಕಡತಗಳು ಸೇರಿದಂತೆ, ಪ್ರಗತಿ ಪರಿಶೀಲನೆ ಮಾಡಿದ್ದೀರಾ ಎಂದು ಪ್ರಶ್ನಿಸಿದರೆ ಯಾವ ತಾಲೂಕು ಕಾರ್ಯ ನಿರ್ವಹಣಾಧಿಕಾರಿಯೂ ಉತ್ತರಿಸುತ್ತಿಲ್ಲ. ಜಿಲ್ಲಾ ಪಂಚಾಯತ್‌ರಾಜ್‌ ಮುಖ್ಯ ಕಾರ್ಯಪಾಲಕ ಇಂಜಿನಿಯರ್‌ ಅವರನ್ನು ಕರೆದು ಜಿಲ್ಲೆಯಲ್ಲಿ ಎಷ್ಟು ಕೊಳವೆ ಬಾವಿಗಳಿವೆ, ಸ್ಥಗಿತವಾದವುಗಳೆಷ್ಟು ಎಂಬ ಪ್ರಶ್ನೆಗೆ ಉತ್ತರಿಸುವುದಿರಲಿ, ಜಗತ್ತಿನಲ್ಲಿ ಪ್ರಥಮ ಬಾರಿಗೆ ಇಂತಹ ಪ್ರಶ್ನೆಯೊಂದು ಬಂತೆಂಬಂತೆ ಗರ ಬಡಿದು ಅಧಿಕಾರಿಗಳು ನಿಂತಿರುವುದನ್ನು ಕಂಡೆ. ಒಟ್ಟಾರೆ ಆರೆಂಟು ತಿಂಗಳಿನಿಂದ ಸ್ಥಗಿತಗೊಂಡ ಪಿಂಚಣಿ ಪಡೆಯಲು ತಾಲೂಕು ಕಚೇರಿಯಿಂದ ಸರ್ಕಾರಿ ಕಚೇರಿಗೆೆ ನಿತ್ಯ ಅಲೆದಾಡುವ ನತದೃಷ್ಟೆ ವಿಧವೆಯಿಂದ ಹಿಡಿದು, ಬಡವರಿಗೆ ಮಂಜೂರಾದ ಮನೆ ಕಟ್ಟುವ ಕಂತು ಪಾವತಿಗಾಗಿ ಬಡಿದಾಡುವ ಕೂಲಿಕಾರ್ಮಿಕರವರೆಗೆ ಜನಸಾಮಾನ್ಯರ ಗೋಳು ಆಡಳಿತ ಯಂತ್ರದ ಮಟ್ಟಿಗೆ ಬದುಕಿನ ಭಾಗವಾಗಿ ಬಿಟ್ಟಿದೆ.

ಕಳೆದ ಸದನದಲ್ಲಿ ಬಿಜಾಪುರ ಜಿಲ್ಲೆಯ ಜಿಲ್ಲಾ ಪಂಚಾಯತ್‌ ಮಹಿಳಾ ಕಾರ್ಯ ನಿರ್ವಹಣಾಧಿಕಾರಿಯೊಬ್ಬರ ಮೇಲೆ ಕರ್ತವ್ಯ ನಿರ್ವಹಣೆಯ ಅತಿರೇಕದ ಕುರಿತು ಸೀಮಿತ ಚರ್ಚೆಯಾಗಿತ್ತು. ಸದ್ರಿ ಅಧಿಕಾರಿಯ ವಿರುದ್ಧ ಶಾಲಾ ಶಿಕ್ಷಕರು, ಅಂಗನವಾಡಿಯ ಸಿಬ್ಬಂದಿ ಗಳು, ಗ್ರಾಮ ಪಂಚಾಯತ್‌ ನೌಕರರು ಸೇರಿದಂತೆ ಸಾವಿರಾರು ಜನ ಸರ್ಕಾರಿ ನೌಕರರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಆಕೆಯ ಮೇಲೆ ಇರುವ ಗುರುತರ ದೂರೆಂದರೆ ತನ್ನ ಅಧೀನ ಕಚೇರಿಗಳಿಗೆ ದಿಢೀರ್‌ ಭೇಟಿ ನೀಡಿ ಕರ್ತವ್ಯಲೋಪ ಎಸಗಿರುವ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಕೆಲವರಿಗೆ ನೋಟಿಸು ನೀಡಿ ಕ್ರಮ ಜರಗಿ ಸುತ್ತಿದ್ದಾರೆ ಎಂಬುದಾಗಿತ್ತು. ಘಟನೆಯ ಕುರಿತು ವಿವರಗಳನ್ನು ಕೆದ ಕುತ್ತಾ ಹೋದಾಗ, ಮೇಲಾಧಿಕಾರಿ ಭೇಟಿ ನೀಡಿದ ಕಚೇರಿಗಳಲ್ಲಿ ಕೆಲ ಸಿಬ್ಬಂದಿಗಳು ರಜಾ ಅರ್ಜಿಯನ್ನು ನೀಡದೆ ಗೈರು ಹಾಜರಾಗಿದ್ದದ್ದು ಅರಿವಿಗೆ ಬಂತು. ತುಕ್ಕು ಹಿಡಿದ ಆಡಳಿತ ಯಂತ್ರಕ್ಕೆ ಸರಾಗತೆ ತರಲು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಸಕಾಲ’ದ ಆಡಿದ ಮಾತು ತಪ್ಪಲ್ಲ, ಹೇಳಿದ ಸಮಯಕ್ಕೆ ಮೀರೊಲ್ಲ ಎಂಬ ಘೋಷಣೆ ಬಿಟ್ಟರೆ, ವೃದ್ಧಾಪ್ಯ ಯೋಜನೆಯ ಅರ್ಜಿ ಸಲ್ಲಿಸಿದವರೂ ಸಾಯುವುದರ ಒಳಗಾಗಿ ಪಿಂಚಣಿ ಬರಲಿ ಎಂಬಂತಾಗಿದೆ. ಈ ಎಲ್ಲಾ ಜಂಜಾಟದ ನಡುವೆ ಗ್ರಾಮ ಪಂಚಾಯತ್‌ ಗಳಿಗೆ ಕೆಡಿಪಿ ಸಭೆ ಮಾಡಲು ಅವಕಾಶ ಸಿಕ್ಕಿರುವುದು ಸ್ಥಳಿಯಾಡಳಿತ ಸಂಸ್ಥೆಗಳ ಬತ್ತಳಿಕೆಗೆ ಸಿಕ್ಕ ಒಂದು ಪ್ರಬಲ ಅಸ್ತ್ರ. ಇದರ ಪೂರ್ಣ ಅವಕಾಶವನ್ನು ಗ್ರಾಮ ಪಂಚಾಯತ್‌ ಗಳು ಪಡೆಯಬೇಕು.

ರಾಜ್ಯದಲ್ಲಿ ಇರುವ 6, 020 ಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ ಇನ್ನು ಮುಂದೆ ತ್ರೈಮಾಸಿಕ ಪ್ರಗತಿ ಪರಿಶೀಲನೆ ಮೂಲಕ ಹೊಸ ಚಟುವಟಿಕೆಯೊಂದಿಗೆ ಗಟ್ಟಿ ನಡಿಗೆಯ ಹೆಜ್ಜೆ ಹಾಕಲಿದೆ. ವಾರ್ಡ್‌ ಸಭೆಗೆ ಮತ್ತು ಗ್ರಾಮ ಸಭೆಗೆ ಅಧಿಕಾರಿಗಳು ಬಂದಿಲ್ಲ, ತಾಲೂಕು ಮತ್ತು ಹೋಬಳಿ ಮಟ್ಟದ ಅಧಿಕಾರಿಗಳು ಸೂಚನ ಪತ್ರ ಪಡೆದು ಬರುತಿಲ್ಲ ಎನ್ನುವ ಸಣ್ಣ ಪುಟ್ಟ ದೂರುಗಳು ಮಾಯವಾಗಿ ಪಂಚಾಯತ್‌ ಕೆಡಿಪಿ ಅರ್ಥ ಪೂರ್ಣ ಚಟುವಟಿಕೆಗಳ ತಾಣವಾಗಿ ತನ್ನ ಕಾರ್ಯಕ್ರಮ ಪ್ರಾರಂಭಿಸಲಿದೆ. ಈಗಾಗಲೇ ಸರಕಾರ ಗ್ರಾಮ ಗ್ರಂಥಾಲಯಗಳನ್ನು ಪಂಚಾಯತ್‌ಗೆ ವರ್ಗಾಯಿಸಿರುವುದು ಒಂದು ಪ್ರಮುಖ ಹೆಜ್ಜೆಯಾಗಿದ್ದು, ಸಂವಿಧಾನದ ಆಶಯಕ್ಕೆ ಪೂರಕವಾಗಿದೆ.

ಕೆಡಿಪಿ ಸಭೆಯನ್ನು ಅತ್ಯಂತ ಅರ್ಥಪೂರ್ಣವಾಗಿಸಿ ಮುನ್ನಡೆಸಬೇಕಾದ ಜವಾಬ್ದಾರಿ ಜನ ಪ್ರತಿನಿಧಿಗಳದ್ದಾಗಿದ್ದು, ಸದಸ್ಯ ಕಾರ್ಯದರ್ಶಿಗಳಾದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಗೆ ಹೆಚ್ಚು ಶಕ್ತಿಕೊಡಲು ಪರಿಪೂರ್ಣ ಮಟ್ಟದಲ್ಲಿ ತೊಡಗಿಸಿ ಕೊಳ್ಳಬೇಕು. ಪಂಚಾಯತ್‌ ಮಟ್ಟದಲ್ಲಿ ಕೆಡಿಪಿ ಸಭೆ ನಡೆಸಲು ಸಿಕ್ಕಿರುವ ಅವಕಾಶ ನಮ್ಮ ಪಂಚಾಯತ್‌ ಅಧ್ಯಕ್ಷರು ಮತ್ತು ಸದಸ್ಯರು ಸಮರ್ಪಕವಾಗಿ ಬಳಸಿಕೊಳ್ಳುವ ಅಗತ್ಯವಿದ್ದು, ಸಿಕ್ಕಿರುವ ಅವಕಾಶವನ್ನು ಉಪಯೋಗಿಸಿಕೊಂಡು ಪ್ರತಿ ಗ್ರಾಮ ಪಂಚಾಯತ್‌ ಒಂದು ಸರಕಾರದಂತೆ ಕೆಲಸ ಮಾಡಬೇಕು. ಹಾಗಾಗದೇ ಹೋದರೆ ‘ಕೊಟ್ಟ ಕುದುರೆಯನ್ನು ಏರಲಾಗದವನು ಧೀರನೂ ಅಲ್ಲ, ಶೂರನೂ ಅಲ್ಲ’ ಎಂಬ ಮಾತಿನಂತಾಗಬಹುದು.

• ಕೋಟ ಶ್ರೀನಿವಾಸ ಪೂಜಾರಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ