ಅನಾಹುತಗಳಿಗೆ ಮಳೆಯನ್ನು ಹಳಿಯುವ ಮುನ್ನ…

Team Udayavani, Aug 14, 2019, 5:14 AM IST

ನಮ್ಮೂರಿನಲ್ಲಿ ಮಳೆಗಾಲದಲ್ಲಿ ಮಳೆ ಎಡೆಬಿಡದೆ ಸುರಿಯುವುದು ಕಳೆದ ವರ್ಷವೋ ಈ ವರ್ಷವೋ ಪ್ರಾರಂಭಗೊಂಡ ಪ್ರಕ್ರಿಯೆಯಲ್ಲ. ದಶಕಗಳಿಗಿಂತ ಹಿಂದಿನ ಮಳೆಗಾಲವನ್ನು ನೆನಪಿಸಿಕೊಳ್ಳುವ ಹಿರಿಯರು ಆಗೆಲ್ಲ ಮೂರು ನಾಲ್ಕು ದಿನ ಹನಿ ನಿಲ್ಲದೆ ನಿರಂತರ ಮಳೆ ಸುರಿಯುತ್ತಿತ್ತು ಎನ್ನುತ್ತಾರೆ. ಶುಕ್ರವಾರವೇನಾದರೂ ಮಳೆ ಶುರುವಿಟ್ಟುಕೊಂಡರೆ ಅದು ಮುಂದಿನ ಶುಕ್ರವಾರದವರೆಗೆ ಎಡೆಬಿಡದೆ ಬರುತ್ತದೆ ಎಂಬ ನಂಬಿಕೆ ಕರಾವಳಿ ಭಾಗದ ರೈತಾಪಿ ಜನರಲ್ಲಿ ಹಿಂದೆ ಇತ್ತಂತೆ. ಆ ಮಳೆಗೆ ಹೋಲಿಸಿದರೆ ಈಗಿನ ಮಳೆಗಾಲದ ಮಳೆ ಏನೇನೂ ಅಲ್ಲ ಎಂಬುದು ಹಿರಿಯರ ಅಂಬೋಣ.

ಮಳೆ…ಜನ ಜಾನುವಾರುಗಳನ್ನು ಬಲಿ ತೆಗೆದುಕೊಂಡ ಮಾರಣ ಮಳೆ, ಬೆಳೆಯನ್ನು ಸರ್ವನಾಶ ಮಾಡಿದ ರಣ ಮಳೆ, ಗುಡ್ಡ ಬೆಟ್ಟ ಮರ ಹೆಮ್ಮರಗಳನ್ನು ಅಡಿ ಮೇಲು ಮಾಡಿದ ಪ್ರಳಯಾಂತಕ ಮಳೆ, ಮುಂದಿನ ತಾಸುಗಳಲ್ಲಿ ಭಯಂಕರವಾಗಿ ಸುರಿಯುವ ಮುನ್ಸೂಚನೆ ನೀಡಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತಡೆಯೊಡ್ಡಿದ ಭಾರೀ ಮಳೆ, ಡೆಂಗ್ಯೂ ಮಲೇರಿಯಾದಂತಹ ರೋಗಗಳಿಗೆ ಕಾರಣವಾದ ಹಾಳು ಮಳೆ, ಮೇಘ ಸ್ಫೋಟಕ್ಕೆ ಹಾದಿ ಬೀದಿ ಮನೆ ಮಠಗಳಿಗೆ ನುಗ್ಗಿದ ನೀರು, ಕಾರು ಬಸ್ಸುಗಳ ಮೇಲೆ ಮರದ ಗೆಲ್ಲುಗಳನ್ನು ಉರುಳಿಸಿದ ಬಿರುಗಾಳಿ … ಹೀಗೆ ಮಳೆಯ ಮೇಲೆ ಹೊರಿಸುವ ಆರೋಪ ಪಟ್ಟಿ ಇನ್ನೂ ಉದ್ದಕ್ಕೆ ಸಾಗುತ್ತದೆ. ಕಳೆದ ಮಳೆಗಾಲದಲ್ಲಿ ಕರ್ನಾಟಕದ ಕೊಡಗು ಮತ್ತು ಕೇರಳದಲ್ಲಿ ತನ್ನ ಪ್ರತಾಪ ಮೆರೆದ ಮಳೆ ಈ ವರ್ಷ ಕರ್ನಾಟಕ, ಕೇರಳ, ಮಹಾರಾಷ್ಟ್ರ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲೂ ತನ್ನ ಆಟಾಟೋಪ ತೋರಿಸಿದೆ. ಮಳೆಗಾಲಕ್ಕೆ ಮುನ್ನ ಒಂದು ಮಳೆ ಬರಲಿ ಎಂದು ಪ್ರಲಾಪಿಸುವ ಜನರಿಗೆ ಭರದಲ್ಲಿ ನಾಲ್ಕು ಮಳೆ ಸುರಿಯುವಾಗಲೇ ‘ಅಯ್ಯಪ್ಪ’ ಅನ್ನಿಸುತ್ತದೆ. ಹಾಗಿದ್ದರೆ ಪ್ರಕೃತಿದತ್ತವಾಗಿ ಸುರಿಯುವ ಮಳೆಯ ಕ್ರಮದಿಂದ ಅನಾಹುತ ಸೃಷ್ಟಿಯಾಗುತ್ತದೆಯೇ? ಇದೀಗ ಜಿಜ್ಞಾಸೆಗೊಡ್ಡಬೇಕಾದ ಪ್ರಶ್ನೆ.

ನಮ್ಮೂರಿನಲ್ಲಿ ಮಳೆಗಾಲದಲ್ಲಿ ಮಳೆ ಎಡೆಬಿಡದೆ ಸುರಿಯುವುದು ಕಳೆದ ವರ್ಷವೋ ಈ ವರ್ಷವೋ ಪ್ರಾರಂಭಗೊಂಡ ಪ್ರಕ್ರಿಯೆಯಲ್ಲ. ದಶಕಗಳಿಗಿಂತ ಹಿಂದಿನ ಮಳೆಗಾಲವನ್ನು ನೆನಪಿಸಿಕೊಳ್ಳುವ ಹಿರಿಯರು ಆಗೆಲ್ಲ ಮೂರು ನಾಲ್ಕು ದಿನ ಹನಿ ನಿಲ್ಲದೆ ನಿರಂತರ ಮಳೆ ಸುರಿಯುತ್ತಿತ್ತು ಎನ್ನುತ್ತಾರೆ. ಶುಕ್ರವಾರವೇನಾದರೂ ಮಳೆ ಶುರುವಿಟ್ಟುಕೊಂಡರೆ ಅದು ಮತ್ತಿನ ಶುಕ್ರವಾರದ ವರೆಗೆ ಎಡೆಬಿಡದೆ ಬರುತ್ತದೆ ಎಂಬ ನಂಬಿಕೆ ಕರಾವಳಿ ಭಾಗದ ರೈತಾಪಿ ಜನರಲ್ಲಿ ಹಿಂದೆ ಇತ್ತಂತೆ. ಆ ಮಳೆಗೆ ಹೋಲಿಸಿದರೆ ಈಗಿನ ಮಳೆಗಾಲದ ಮಳೆ ಏನೇನೂ ಅಲ್ಲ ಎಂಬುದು ಹಿರಿಯರ ಅಂಬೋಣ. ಮಳೆಗಾಲದ ಕೊನೆಯಲ್ಲಿ ಇಡೀ ಋತುವಿನಲ್ಲಿ ಸುರಿದ ಸರಾಸರಿ ಮಳೆಯನ್ನು ಲೆಕ್ಕ ಹಾಕಿದಾಗ ವರ್ಷದಿಂದ ವರ್ಷಕ್ಕೆ ಈ ಸರಾಸರಿ ಕಡಿಮೆಯಿರುತ್ತದೆ. ಇದರರ್ಥ ಮಳೆಯ ಸುರಿಯುವಿಕೆ ಹೆಚ್ಚಾಗಿಲ್ಲ. ಅದನ್ನು ಎದುರಿಸುವ ನಮ್ಮ ಸಾಮರ್ಥ್ಯ ಕಡಿಮೆಯಾಗುತ್ತಿದೆ.

ಮಳೆಗಾಲದ ಪ್ರಾರಂಭವಾಗಲಿ, ಅಂತ್ಯವಾಗಲಿ ಈಗ ಹಿಂದಿನಂತಿಲ್ಲ ಎಂಬುದು ಒಪ್ಪಿಕೊಳ್ಳಲೇಬೇಕಾದ ವಿಚಾರ. ಹಿಂದೆ ವೃಷಭದ ಹತ್ತನಾವಧಿ (ಪತ್ತನಾಜೆ)ಯ ಹೊತ್ತಿಗೆ ಮಳೆ ಪ್ರಾರಂಭವಾಗಿ ಗದ್ದೆಗಳಲ್ಲಿ ನೇಜಿ ಕೆಲಸ ಅರ್ಧದಷ್ಟು ಮುಗಿದುಹೋಗಿರುತ್ತಿತ್ತು. ದೀಪಾವಳಿ ಹೊತ್ತಿಗೆ ಅಂದರೆ ಗದ್ದೆ ಕೊಯ್ಲು ಮುಗಿಯುವವರೆಗೆ ಮಳೆ ಬರುತ್ತಲೇ ಇರುತ್ತಿತ್ತು. ಆದರೆ ಆಗ ಜನರಿಗೂ ಜನವಾಸದ ನೆಲಕ್ಕೂ ಮಳೆಗಾಲವನ್ನು ಎದುರಿಸಲು ಅಡ್ಡಿ ಆತಂಕವಿರುತ್ತಿರಲಿಲ್ಲ. ಮಳೆನೀರು ಊರು ಕೇರಿಗೆ ನುಗ್ಗುವ ಪರಿಪಾಠವಿರಲಿಲ್ಲ. ಆದರೆ ಆಗಿನ ಪರಿಸ್ಥಿತಿ ಈಗಿಲ್ಲ.

ಮಳೆಯನ್ನು ಎದುರಿಸುವ ಇಳೆಯ ವ್ಯವಸ್ಥೆ ಈಗ ಸಂಪೂರ್ಣ ಬದಲಾಗಿದೆ. ಹಿಂದೆ ಅಲ್ಲಲ್ಲಿ ಕೃಷಿ ಭೂಮಿ, ಬೆಟ್ಟ ಬಯಲು, ಗಿಡ ಮರಗಳನ್ನು ಹೇರಳವಾಗಿ ಕಾಣಬಹುದಾಗಿತ್ತು. ಹಳ್ಳ, ಕಣಿವೆ, ತೋಡು ನದಿಗಳ ರೂಪದಲ್ಲಿ ಮಳೆಯಿಂದ ಸುರಿಯುವ ನೀರಿಗೆ ನಿಲ್ಲುವ ಮತ್ತು ಹರಿಯುವ ಉತ್ತಮ ವ್ಯವಸ್ಥೆಗಳಿದ್ದವು. ಭೂಮಿಗೆ ಇಂಗಲು ಈಗಿರುವ ಕಾಂಕ್ರೀಟು, ಪ್ಲಾಸ್ಟಿಕ್‌ ಕಸಗಳಂತಹ ಯಾವುದೇ ಅಡೆತಡೆಯಿರಲಿಲ್ಲ. ಹರಿಯುವ ನೀರನ್ನು ತೆವಳುವಂತೆ ಮಾಡುವ, ತೆವಳುವ ನೀರನ್ನು ತಂಗುವಂತೆ ಮಾಡುವ, ತಂಗಿದ ನೀರನ್ನು ಇಂಗುವಂತೆ ಮಾಡುವ ನಿಸರ್ಗದತ್ತ ವ್ಯವಸ್ಥೆ ಆ ಕಾಲದಲ್ಲಿತ್ತು. ಇದು ಸಮತೋಲನದಿಂದ ಕೂಡಿದ ಮಳೆಗಾಲಕ್ಕೆ ಪೂರಕವಾಗಿತ್ತು. ಆದರೆ ಈಗ ಐಷಾರಾಮ ಬಯಸುವ ನಮ್ಮ ಜೀವನ ಪದ್ಧತಿಯಿಂದ ಕಲುಷಿತಗೊಂಡ ಪ್ರಕೃತಿ ಮಳೆಯ ಮೇಲೆ ನೇರ ಪರಿಣಾಮ ಬೀರಿದೆ.

ಅಭಿವೃದ್ಧಿಯ ನೆಪದಲ್ಲಿ ಗಿಡ ಮರಗಳನ್ನು ನಾಶ ಮಾಡಿ ಕಾಂಕ್ರೀಟು ಹಾಸುವ ಮತ್ತು ಹೊಲಗದ್ದೆಗಳನ್ನು ಅಳಿಸಿ ಕಾರ್ಖಾನೆಗಳನ್ನು ನಿರ್ಮಿಸುವ ಮಾನವ ಪ್ರವೃತ್ತಿಯಿಂದ ಮಳೆಯ ಸಮತೋಲನ ತಪ್ಪಿದೆ. ಗದ್ದೆಗಳೇ ಇಲ್ಲ, ಇರುವ ಗದ್ದೆಗಳಲ್ಲೂ ಕೃಷಿ ಪ್ರಕ್ರಿಯೆ ಪ್ರಾರಂಭಿಸಲು ಜುಲೈ ತಿಂಗಳ ಅಂತ್ಯದವರೆಗೆ ಕಾಯಬೇಕಾದ ಪರಿಸ್ಥಿತಿ . ಕೆಲವು ವರ್ಷಗಳಲ್ಲಿ ಕೃಷಿ ಚಟುವಟಿಕೆಗೆ ಇನ್ನೂ ತಯಾರಿಯಾಗಿಲ್ಲದ ಹೊತ್ತಿಗೇ ಮಳೆ ಪ್ರಾರಂಭವಾಗುವುದಿದೆ. ಮಳೆಯ ಈ ಅನಿಶ್ಚಿತತೆಗೆ ಪ್ರಕೃತಿಯನ್ನು ಅಶಿಸ್ತಿನಿಂದ ಅನುಭೋಗಿಸುವ ನಾವೇ ಕಾರಣರಾಗಿರುತ್ತೇವೆ.

ಈ ವರ್ಷದ ಮಳೆಗಾಲವನ್ನೇ ಗಮನಿಸಿದಾಗ ತಡವಾಗಿ ಕಾಲಿಟ್ಟ ಮಳೆ ಘನಘೋರವಾಗಿ ಸಿಡಿಲು ಬಿರುಗಾಳಿ ಸಹಿತ ಸುರಿಯುತ್ತಿದೆ. ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ಕರಾವಳಿ ಮಲೆನಾಡುಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲ್ಪಟ್ಟಿದೆ. ಸುರಿದ ಮಳೆಗೆ ನೀರು ಎಲ್ಲೆಂದರಲ್ಲಿ ನುಗ್ಗಿದೆ. ಊರು ಕೇರಿಗಳನ್ನು ಮುಳುಗಿಸಿದೆ. ಬಿರುಗಾಳಿಯೂ ನಾಶ ನಷ್ಟವನ್ನುಂಟುಮಾಡಿದೆ. ಇನ್ನೇನಾಗಲು ಸಾಧ್ಯ? ನೀರು ನಿಲ್ಲುವ ಹಳ್ಳ, ಕೆರೆ, ಬಾವಿ ತೋಡುಗಳು ಮುಚ್ಚಿಹೋಗಿದ್ದು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯೂ ಇಲ್ಲದಿರುವುದರಿಂದ ಆ ನೀರು ಹಾದಿ ಬೀದಿ ಮನೆ ಮಠಗಳಿಗೆ ನುಗ್ಗಿದೆ. ಅಲ್ಲಲ್ಲಿ ಕಾಂಕ್ರೀಟು ಹಾಸಿರುವುದರಿಂದ ಮಣ್ಣಿಗೆ ಇಂಗಿ ಹೋಗಲು ಅವಕಾಶವಿಲ್ಲದೆ ಹರಿಯುವ ನೀರು ನೆರೆಯಾಗಿ ಪರಿವರ್ತನೆಗೊಂಡಿದೆ. ಪ್ಲಾಸ್ಟಿಕ್‌ ಮೂಲದ ಕಸಕಡ್ಡಿಗಳ ಜೊತೆಯಲ್ಲಿ ಕೊಳೆಯಬಹುದಾದ ವಸ್ತುಗಳೂ ಸೇರಿ ರಾಶಿ ಬಿದ್ದಿರುವುದರಿಂದ ಮತ್ತು ನೀರು ನಿಲ್ಲಬಹುದಾದ ಟಯರ್‌ನಂತಹ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಈ ಮಳೆಗಾಲ ರೋಗಕಾರಕ ಜೀವಿಗಳ ಉತ್ಪತ್ತಿಗೂ ಕಾರಣವಾಗಿದೆ. ಮಂಗಳೂರಿನಂತಹ ಮಹಾನಗರಗಳಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್‌ ಕಟ್ಟಡಗಳು ಮಳೆಗಾಲಕ್ಕೆ ಸವಾಲೇ ಆಗಿವೆ. ಇದನ್ನು ಲೆಕ್ಕಿಸದ ಆಡಳಿತ ವ್ಯವಸ್ಥೆ ಮಳೆಗಾಲಕ್ಕೂ ಮುನ್ನ ಯಾವುದೇ ಮುನ್ನೆಚ್ಚರಿಕೆ ವಹಿಸದೆ ಯಾವ ತಯಾರಿಯನ್ನೂ ಮಾಡಿಕೊಳ್ಳದೆ ಮಳೆಗಾಲವನ್ನು ಎದುರಿಸಿದೆ. ಪರಿಣಾಮವಾಗಿ ಮಳೆ ವಿಪರೀತವಾಗಿ ಸುರಿದು ಸಮಸ್ಯೆ ಬಿಗಡಾಯಿಸಿದೆ. ಜಿಲ್ಲಾಡಳಿತ ರೆಡ್‌ ಅಲರ್ಟ್‌ ಘೋಷಿಸಿ ಶಾಲೆ ಕಾಲೇಜುಗಳನ್ನು ಮುಚ್ಚಿದೆ. ಈ ಪ್ರಾಕೃತಿಕ ವಿಕೋಪವನ್ನು ಅನುಭವಿಸಿ ಜನರು ಕಲಿಯಬೇಕಾದ ಪಾಠವನ್ನು ಕಲಿಯದೇ ಹೋದಲ್ಲಿ ಮುಂದಿನ ಮಳೆಗಾಲಗಳಲ್ಲಿ ಇವೆಲ್ಲ ಸಾಮಾನ್ಯ ಪ್ರಕ್ರಿಯೆಗಳಾಗಿ ಮಳೆ ಕಣ್ಣೀರ ಹೊಳೆಯಾಗುವ ಭೀತಿ ಇದ್ದೇ ಇದೆ.

ಇತ್ತೀಚೆಗಿನ ವರ್ಷಗಳಲ್ಲಿ ಮಳೆ ಕಡಿಮೆಯಾಗುತ್ತಿದ್ದು ಅದರಿಂದಾಗುವ ಅನಾಹುತಗಳು ಹೆಚ್ಚುತ್ತಿವೆ. ಈ ಅನಾಹುತಗಳಿಗೆ ಬಲಿಬಿದ್ದು ಮಳೆಯನ್ನು ಹಳಿಯುವ ಬದಲು ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಮಳೆಗಾಲಕ್ಕೆ ಮೊದಲೇ ಅನುಸರಿಸಿದರೆ ಮತ್ತು ಪ್ರತಿ ಮಳೆಗಾಲದಲ್ಲಿ ಒಂದು ಸಮತೋಲನದಿಂದ ಕೂಡಿದ ಸಾಮಾನ್ಯ ಮಳೆಯನ್ನು ಪಡೆಯುವುದು ಹೇಗೆಂದು ಚಿಂತಿಸಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಭವಿಷ್ಯದಲ್ಲಿ ಉತ್ತಮ ಮಳೆಗಾಲವನ್ನು ನಿರೀಕ್ಷಿಸಬಹುದೇನೋ.

ಭಾಸ್ಕರ ಕೆ. ಕುಂಟಪದವು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ