ಆರ್‌ಸಿಇಪಿ ಒಪ್ಪಂದ ತಿರಸ್ಕರಿಸಿದ ದಿಟ್ಟ ಭಾರತ

Team Udayavani, Nov 7, 2019, 5:57 AM IST

ಕೃಷಿಕರು ಹಾಗೂ ಹೈನುಗಾರರ ಆತಂಕ ವಾಸ್ತವವಾದದ್ದು. ಆಸಿಯಾನ್‌ ದೇಶಗಳೊಂದಿಗೆ 2010ರಲ್ಲಿ ಮುಕ್ತ ವ್ಯಾಪಾರ ಆದ ನಂತರ ಆ ದೇಶಗಳಿಂದ ಅಡಿಕೆ, ತೆಂಗಿನಕಾಯಿ, ಕಾಳುಮೆಣಸು, ರಬ್ಬರ್‌, ಏಲಕ್ಕಿ ಮುಂತಾದ ತೋಟಗಾರಿಕೆ ಬೆಳೆಗಳು ಆಮದು ವಿಪರೀತ ಏರಿಕೆಯಾಗಿ ಬೆಲೆಗಳು ಬಿದ್ದು ಹೋಗುತ್ತಿವೆ.

ನವೆಂಬರ್‌ 4ರ ಸೋಮವಾರ ಬೆಳಗಾದಂತೆ ದೇಶದ ಬಹುಪಾಲು ಕೃಷಿಕರು, ಹೈನುಗಾರರು, ಕೈಗಾರಿಕೋದ್ಯಮಿಗಳು ಹಾಗೂ ಉದ್ಯೋಗಾಕಾಂಕ್ಷಿ ಯುವ ಜನಗಳ ಎದೆಬಡಿತ ಜೋರಾಗಿತ್ತು. ಪ್ರಧಾನಿ ಮೋದಿ ಬ್ಯಾಂಕಾಕ್‌ನಲ್ಲಿ ಆರ್‌ಸಿಇಪಿ ಒಪ್ಪಂದಕ್ಕೆ ಎಲ್ಲಿ ಸಹಿ ಮಾಡಿ ಬಿಡುವರೋ ಎಂಬುದೇ ಭಾರತೀಯರ ಆತಂಕಕ್ಕೆ ಕಾರಣವಾಗಿತ್ತು. ಕಳೆದ 8-10ದಿನಗಳಿಂದ ಆರ್‌ಸಿಇಪಿ ಒಪ್ಪಂದದ ವಿರುದ್ಧ ದೇಶಾದ್ಯಂತ ವ್ಯಾಪಕವಾಗಿ ಚರ್ಚೆ-ಪ್ರತಿಭಟನೆಗಳು ನಡೆದಿದ್ದವು. ಸಂತೋಷದ ಸಂಗತಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಲು ತಿರಸ್ಕರಿಸಿ ಎಲ್ಲ ಭಾರತೀಯರ ಮನಗೆದ್ದುಬಿಟ್ಟರು. ಅಂತಾರಾಷ್ಟ್ರೀಯ ಕಿರೀಟಕ್ಕಿಂತ ರಾಷ್ಟ್ರದ ಆರ್ಥಿಕ ಸಂರಕ್ಷಣೆ ತನಗೆ ಹೆಚ್ಚು ಮುಖ್ಯವಾದುದು ಎಂಬುದನ್ನು ಮೋದಿ ಸಾಬೀತು ಮಾಡಿದರು.

ಈಗಾಗಲೇ ತಿಳಿದಿರುವಂತೆ ಆರ್‌ಸಿಇಪಿ (Regional Comprehensive Economic Partnership) 10 ಆಸಿಯಾನ್‌ ರಾಷ್ಟ್ರಗಳು ಹಾಗೂ ಅದರೊಂದಿಗೆ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದ ಹೊಂದಿರುವ ಚೀನಾ, ಭಾರತ, ಜಪಾನ್‌, ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌- ಈ ಆರು ದೇಶಗಳು ಸೇರಿ 16 ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದ. 2012ರಲ್ಲಿ ಆರ್‌ಸಿಇಪಿ ಒಪ್ಪಂದದ ಮಾತುಕತೆ ಪ್ರಾರಂಭವಾದವು.

ಯಾವುದೇ ಮುಕ್ತ ವ್ಯಾಪಾರದ ಒಪ್ಪಂದದ ಪ್ರಮುಖ ಉದ್ದೇಶ ಎಲ್ಲ ಪಾಲುದಾರ ದೇಶಗಳಿಗೂ ಲಾಭವಾಗಬೇಕು ಎಂಬುದೇ ಆಗಿರುತ್ತದೆ. ಆದರೆ ಮುಕ್ತ ವ್ಯಾಪಾರ ಒಪ್ಪಂದಗಳೊಂದಿಗೆ ಭಾರತದ ಅನುಭವ ಬಹಳ ಕೆಟ್ಟದಾಗಿದೆ. 2010ರಲ್ಲಿ ಭಾರತ ಆಸಿಯಾನ್‌, ಜಪಾನ್‌ ಮತ್ತು ಕೊರಿಯಾ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿತು. ಈ 9 ವರ್ಷಗಳಲ್ಲಿ ಭಾರತ ನಿರಂತರವಾಗಿ ವ್ಯಾಪಾರ ಕೊರತೆಯನ್ನೇ ಅನುಭವಿಸುತ್ತಾ ಬಂದಿದೆ. 2010-11ರಲ್ಲಿ ಆಸಿಯಾನ್‌-ಕೊರಿಯಾ ಮತ್ತು ಜಪಾನ್‌ ದೇಶಗಳೊಂದಿಗೆ ನಮ್ಮ ವ್ಯಾಪಾರ ಕೊರತೆ 15 ಶತಕೋಟಿ ಡಾಲರ್‌ ಇತ್ತು. 2016-17ರಲ್ಲಿ ಅದು 24 ಶತಕೋಟಿ ಡಾಲರ್‌ಗೆ ಏರಿತು. ಲಾಭವೆಲ್ಲಾ ಆ ದೇಶಗಳಿಗೆ, ನಷ್ಟ ಪೂರಾ ಭಾರತಕ್ಕೆ.

ಆರ್‌ಸಿಇಪಿ ಒಪ್ಪಂದದ ಪ್ರಧಾನ ಅಂಶವೆಂದರೆ ಚೀನಾದ ಆಗಮನ. ಚೀನಾ-ಭಾರತ ನಡುವೆ ಮುಕ್ತ ವ್ಯಾಪಾರ ಒಪ್ಪಂದವೇನೂ ಇಲ್ಲ. ಆದರೂ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಚೀನಾ ಭಾರೀ ಪ್ರಮಾಣದಲ್ಲಿ ತನ್ನ ಸರಕುಗಳನ್ನು ಭಾರತದಲ್ಲಿ ಸುರಿಯುತ್ತಿದೆ. ಭಾರೀ ಯಂತ್ರೋಪಕರಣಗಳು ಸಂಪರ್ಕ ಉಪಕರಣಗಳು ವಿದ್ಯುನ್ಮಾನ ವಸ್ತುಗಳೇ ಅಲ್ಲದೇ ಚಾಕು, ಕತ್ತರಿ, ಆಟದ ಸಾಮಾನುಗಳವರೆಗೆ ಸಕಲ ವಸ್ತುಗಳಲ್ಲಿ ಚೈನಾದಿಂದ ಪ್ರವಾಹದ ರೂಪದಲ್ಲಿ ಬರುತ್ತಿದೆ. ಆದರೆ ಭಾರತದಿಂದ ಅದು ಆಮದು ಮಾಡಿಕೊಳ್ಳುವುದು ಬಹಳ ಕಡಿಮೆ. ಅದೂ ಎಮ್ಮೆ ಮಾಂಸ, ಹತ್ತಿ, ಕಬ್ಬಿಣದ ಅದಿರು ಮುಂತಾದ ಕಡಿಮೆ ಬೆಲೆಯ ವಸ್ತುಗಳು. ಇದರ ಪರಿಣಾಮ ಚೀನಾದೊಂದಿಗೆ ಭಾರತರ ವ್ಯಾಪಾರದ ಕೊರತೆ 2018-19ರಲ್ಲಿ 53 ಶತಕೋಟಿ ಡಾಲರ್‌. ಜಗತ್ತಿನ ಎಲ್ಲ ದೇಶಗಳೊಂದಿಗೆ ಭಾರತದ ವ್ಯಾಪಾರ ಕೊರತೆ ಎಷ್ಟಿದೆಯೋ ಅದರ ಶೇ.50 ಭಾಗ ಚೀನಾ ಒಂದರ ಜತೆಯೇ ಇದೆ.

ಚೀನಾ ಭಾರತದ ಪರಮ ಶತ್ರು ದೇಶ. ಪಾಕಿಸ್ತಾನದೊಂದಿಗೆ ಸೇರಿ ಭಾರತಕ್ಕೆ ನಿರಂತರ ಕಿರುಕುಳ ಕೊಡುತ್ತಿರುವುದು ಎಲ್ಲ ತಿಳಿದದ್ದೆ. ಭಾರತವನ್ನು ಆರ್ಥಿಕವಾಗಿ ದುರ್ಬಲಗೊಳಿಸುವುದು ಚೀನಾದ ಉದ್ದೇಶ. ಇಂದು ಅಗ್ಗದ ಚೀನಿ ವಸ್ತುಗಳ ಪ್ರವಾಹದಿಂದ ಭಾರತದ ದೊಡ್ಡ, ಸಣ್ಣ ಹಾಗೂ ಕುಟೀರ ಕೈಗಾರಿಕೆಗಳೆಲ್ಲವೂ ಮುಚ್ಚಿ ಹೋಗುತ್ತಿವೆ. ವ್ಯಾಪಾರ ಕೊರತೆ ಕಡಿಮೆ ಮಾಡುವ ಬಗ್ಗೆ ಭಾರತ ಸರಕಾರದ ಕೋರಿಕೆಗಳಿಗೆ ಚೀನಾದ ಉತ್ತರ ತಿರಸ್ಕಾರವೇ ಆಗಿದೆ. ಆರ್‌ಸಿಇಪಿ ಒಪ್ಪಂದದಲ್ಲಿ ನಾವು ಚೀನಾದ ಶೇ.80-90ರಷ್ಟು ಸರಕುಗಳನ್ನು ಸುಂಕವೇ ಇಲ್ಲದೆ ಆಮದು ಮಾಡಿಕೊಳ್ಳಬೇಕಾಗುತ್ತದೆ. ಸುಂಕ ಹಾಕಿಯೇ ಚೀನಾದ ಸ್ಪರ್ಧೆ ಎದುರಿಸಲಾರದೆ ತತ್ತರಿಸುತ್ತಿರುವಾಗ ಇನ್ನು ಸುಂಕವೆ ಇಲ್ಲದೇ ಆಮದು ಮಾಡಿಕೊಳ್ಳುವ ಒಪ್ಪಂದ ಹಗಲು ಕಂಡ ಬಾವಿಗೆ ಇರುಳು ಬಿದ್ದಂತೆ ಆಗುವುದಿಲ್ಲವೇ?

ಇನ್ನು ಕೃಷಿಕರು ಹಾಗೂ ಹೈನುಗಾರರ ಆತಂಕ ವಾಸ್ತವವಾದದ್ದು. ಆಸಿಯಾನ್‌ ದೇಶಗಳೊಂದಿಗೆ 2010ರಲ್ಲಿ ಮುಕ್ತ ವ್ಯಾಪಾರ ಆದ ನಂತರ ಆ ದೇಶಗಳಿಂದ ಅಡಿಕೆ, ತೆಂಗಿನಕಾಯಿ, ಕಾಳುಮೆಣಸು, ರಬ್ಬರ್‌, ಏಲಕ್ಕಿ ಮುಂತಾದ ತೋಟಗಾರಿಕೆ ಬೆಳೆಗಳು ಆಮದು ವಿಪರೀತ ಏರಿಕೆಯಾಗಿ ಬೆಲೆಗಳು ಬಿದ್ದು ಹೋಗುತ್ತಿವೆ.

ವರ್ಗೀಸ್‌ ಕುರಿಯನ್‌ರ ತಪಸ್ಸಿನಿಂದ ಹಾಗೂ ಅವರ ಸಹಸ್ರಾರು ಸಹೋದ್ಯೋಗಿಗಳ ಪರಿಶ್ರಮದಿಂದ ಭಾರತ ಒಂದು ಬೃಹತ್‌ ಹೈನುಗಾರಿಕೆ ಉದ್ಯಮವನ್ನು ಸಹಕಾರ ತತ್ವದ ಆಧಾರದಲ್ಲಿ ನಿರ್ಮಿಸಿಕೊಂಡಿದೆ. ನಮ್ಮಲ್ಲಿ ಹಾಲಿನ ಕೊರತೆ ಇಲ್ಲ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ದೇಶಗಳು ಆರ್‌ಸಿಇಪಿಯಲ್ಲಿ ಇರುವುದರಿಂದ ಒಪ್ಪಂದ ಏರ್ಪಟಲ್ಲಿ ಆ ದೇಶಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಬೇಕಾಗುತ್ತದೆ. ಆಗ ಹೈನುಗಾರಿಕೆ ಅಪಾಯಕ್ಕೆ ಈಡಾಗುವುದಿಲ್ಲವೇ? ಪರಿಸ್ಥಿತಿ ಭಾರತಕ್ಕೆ ಇಷ್ಟು ಪ್ರತಿಕೂಲ ವಾಗಿರುವಾಗ ಕೇವಲ ಒಣ ಅಹಂಕಾರಕ್ಕಾಗಿ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿ, ದೇಶವನ್ನು ಹಾಗೂ ದೇಶದ ಆರ್ಥಿಕತೆಯನ್ನು ಚೀನಾ ರಾಕ್ಷಸ ತೋಡಿರುವ ಗುಂಡಿಗೆ ಕೆಡವಬೇಕಾಗಿತ್ತೆ? ಆರ್‌ಸಿಇಪಿ ಕೇವಲ ಸರಕುಗಳ ವ್ಯಾಪಾರಕ್ಕೆ ಸಂಬಂಧಿಸಿದ್ದಲ್ಲ. ಅದು ಒಂದು ಸಮಗ್ರ ಒಪ್ಪಂದ. ಅದರಲ್ಲಿ ಹೂಡಿಗೆ ಬೌದ್ಧಿಕ ಆಸ್ತಿ ಹಕ್ಕುಗಳು, ವ್ಯಾಜ್ಯ ತೀರ್ಮಾನ ವ್ಯವಸ್ಥೆ ಎಲ್ಲವೂ ಇದೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳು ಸಾರ್ವಜನಿಕರಿಗೆ ಲಭ್ಯವಿಲ್ಲ. ಇದು ನಮ್ಮ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.

ಒಟ್ಟಾರೆಯಾಗಿ ಯಾರಿಗೂ ಬೇಡದ ಆರ್‌ಸಿಇಪಿ ಒಪ್ಪಂದವನ್ನು ತಿರಸ್ಕರಿಸುವುದ ಮೂಲಕ ಮೋದಿ ಜನ ಮೆಚ್ಚುವ ಕೆಲಸವನ್ನೇ ಮಾಡಿದ್ದಾರೆ.

ಕಲಿಯಬೇಕಾದ ಪಾಠಗಳು
1 ಭಾರತಕ್ಕೆ ಪ್ರತಿಕೂಲವಾಗಿರುವ ಆಸಿಯಾನ್‌ ಸೇರಿದಂತೆ ಎಲ್ಲ ಮುಕ್ತ ವ್ಯಾಪಾರ ಒಪ್ಪಂದ ಗಳನ್ನು ಪುನರ್‌ ವಿಮರ್ಶೆಗೆ ಒಳಪಡಿಸಬೇಕು.
2 ಚೀನಾದ ಸರಕುಗಳು ಆಸಿಯಾನ್‌ ದೇಶಗಳ ಮೂಲಕ ಸುಂಕತಪ್ಪಿಸಿ ಭಾರತಕ್ಕೆ ನುಗ್ಗುವ ಸಾಧ್ಯತೆಗಳಿವೆ. ಅದನ್ನು ತಡೆಗಟ್ಟುವ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು.
3 ಭಾರತದ ಕೃಷಿ, ಹೈನುಗಾರಿಕೆ ಹಾಗೂ ಉದ್ಯಮಗಳ ಸ್ಪರ್ಧಾ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು.
4 ಎಲ್ಲಕ್ಕಿಂತ ಮುಖ್ಯವಾಗಿ ನಾವೆಲ್ಲ ಸ್ವದೇಶಿ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಶತ್ರು ರಾಷ್ಟ್ರ ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು ಹಾಗೂ ಭಾರತೀಯ ಉತ್ಪನ್ನಗಳನ್ನು ಮಾತ್ರಕೊಳ್ಳುವ ಶಪಥ ಮಾಡಬೇಕು.
5 ಸ್ವಾವಲಂಬನೆ, ಸ್ವಾಭಿಮಾನ ಮತ್ತು ಸಾರ್ವ ಭೌಮತ್ವ. ಇವೆ ಭಾರತವನ್ನು ಮೇಲೆತ್ತುವ ತತ್ವಗಳು ಎಂಬುದನ್ನು ಮರೆಯಬಾರದು.

– ಬಿ.ಎಂ.ಕುಮಾರಸ್ವಾಮಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ಸಿಲಿಕಾನ್‌ ಸಿಟಿಯೆಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆಯಿಂದ ಸರಬರಾಜಾಗುವ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ ಎಂಬ...

  • ಉಡುಪಿ: ತುಳಸೀ ಎಲೆಗೆ ವಿದ್ಯುನ್ಮಾನ ಉಪಕರಣಗಳಲ್ಲಿರುವ ರೇಡಿಯೇಶನ್‌ (ವಿಕಿರಣಗಳು) ತಡೆಗಟ್ಟುವ ಶಕ್ತಿ ಇದೆ ಎಂದು ಯೋಗಗುರು ಬಾಬಾ ರಾಮದೇವ್‌ ಹೇಳಿದರು. ಶ್ರೀಕೃಷ್ಣ...

  • ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಇನ್ನಷ್ಟು ಸರಳೀ ಕೃತಗೊಳಿಸುವ ಮತ್ತು ಜಿಎಸ್‌ಟಿ ರಿಟರ್ನ್ಸ್ ಫೈಲಿಂಗ್‌ ಪ್ರಕ್ರಿಯೆಯನ್ನು ಬಳಕೆದಾರ...

  • ಮನುಷ್ಯ ಚಟುವಟಿಕೆಯಿಂದ ಇರಲು ಮೆದುಳಿನ ಆರೋಗ್ಯವೂ ಅತಿ ಮುಖ್ಯ. ಮೆದುಳಿನ ನರಮಂಡಲದಲ್ಲಿ ಏರುಪೇರಾಗಿ ಅದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವರಿಗೆ...

  • ಬೆಂಗಳೂರು: ಹದಿನೈದು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಂಡಾಯ ಶಮನಗೊಳಿಸಿ ನಿಟ್ಟುಸಿರು ಬಿಟ್ಟಿದ್ದ...