ಸರ್ಕಾರಿ ಕಚೇರಿಗಳಲ್ಲಿ ಸೌಜನ್ಯದ ನಡವಳಿಕೆ ಇನ್ನೂ ಮರೀಚಿಕೆ

Team Udayavani, Jul 2, 2019, 5:00 AM IST

ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವ ಸಲುವಾಗಿ ತೋರಿದ ಸೌಜನ್ಯದ ನೂರರಲ್ಲಿ ಒಂದು ಭಾಗವೂ ಮತ್ತೆ ಸೇವೆಯಲ್ಲಿ ಉಳಿದಿರುವುದಿಲ್ಲ. ಜನರು ಯಾಕಾಗಿ ಬರುತ್ತಾರೆಯೋ ಎಂಬ ಭಾವನೆ ತೋರುವ ಸಿಬ್ಬಂದಿಯೂ ಇದ್ದಾರೆ. ಸಣ್ಣ ಹಳ್ಳಿಯಲ್ಲಿಯೇ ಆಗಲಿ ಸರ್ಕಾರಿ ಅಧಿಕಾರಿಗಳು ಬ್ರಿಟೀಷರ ಪಳೆಯುಳಿಕೆಗಳಾಗಿಯೋ, ರಾಜ-ಮಹಾರಾಜರುಗಳ ಪಳೆಯುಳಿಕೆಗಳಾಗಿ ಗೋಚರಿಸುತ್ತಿದ್ದಾರೆ.

ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಜನರನ್ನು ನಿಲ್ಲಿಸಿ ಮಾತನಾಡುವಂತಿಲ್ಲ. ಅವರನ್ನು ಕುಳ್ಳಿರಿಸಿ ಅಹವಾಲುಗಳನ್ನು ಆಲಿಸಬೇಕು ಎನ್ನುವ ನಿರ್ದೇಶನವನ್ನು ಮೈಸೂರಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಆರ್‌. ವಿ. ದೇಶಪಾಂಡೆ ಜೂ.20ರಂದು ನೀಡಿರುವ ಬಗ್ಗೆ ವರದಿಯಾಗಿದೆ. ಇದೇ ಸಂದರ್ಭದಲ್ಲಿ ಸಾಕಷ್ಟು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಕುಳಿತುಕೊಂಡಿದ್ದು, ಜನರು ಅವರ ಎದುರು ನಿಂತುಕೊಂಡು ಅಹವಾಲು ಸಲ್ಲಿಸುವುದನ್ನು ಖುದ್ದಾಗಿ ಕಂಡಿರುವ ತಮ್ಮ ಅನುಭವವನ್ನು ಅವರು ಹೇಳಿಕೊಂಡಿದ್ದಾರೆ. ಸಚಿವರ ಜನಪರ ಕಾಳಜಿಗಾಗಿ ಅವರನ್ನು ಶ್ಲಾಘಿಸಲೇಬೇಕು.

ಭಾರತ ಬ್ರಿಟಿಷರಿಂದ, ರಾಜ ಮಹಾರಾಜರುಗಳಿಂದ ಮುಕ್ತಿ ಪಡೆದು ಏಳು ದಶಕಗಳೇ ಸಂದಿವೆ. ಆದರೂ ಆ ಕಾಲದ ಸಂಸ್ಕೃತಿ, ರೀತಿರಿವಾಜುಗಳು ನಮ್ಮಲ್ಲಿ ಇನ್ನೂ ಜೀವಂತವಾಗಿರುವುದರಿಂದಲೇ ಸರ್ಕಾರಿ ಕಚೇರಿಗಳಲ್ಲಿ ಈಗಲೂ ಜನರನ್ನು ಕಾಯಿಸಲಾಗುತ್ತದೆ, ಅವರನ್ನು ನಿಲ್ಲಿಸಿ ಮಾತನಾಡಲಾಗುತ್ತದೆ. ಸರಕಾರದ ಕೆಲಸ ದೇವರ ಕೆಲಸ. ಹೀಗೆ ಅಲ್ಲಲ್ಲಿ ಹೇಳುವುದನ್ನು, ವಿಧಾನ ಸೌಧದಂತಹ ಮಹಾಕಟ್ಟಡದಲ್ಲಲ್ಲದೆ, ಪ್ರಾಥಮಿಕ ಶಾಲೆಯೊಂದರ ಸಣ್ಣದೊಂದು ಕಟ್ಟಡದಲ್ಲಿ ಬರೆದಿರುವುದನ್ನೂ ಕಾಣಬಹುದಾಗಿದೆ.

ಆದರೆ ವಸ್ತುಸ್ಥಿತಿ ಏನು? ರಾಜಧಾನಿಯಲ್ಲಾಗಲಿ ಅಥವಾ ಮೂಲೆಯ ಒಂದು ಸಣ್ಣ ಹಳ್ಳಿಯಲ್ಲಾಗಲಿ ಇಂದೂ ಸಚಿವರು, ಅಧಿಕಾರಿಗಳು, ನೌಕರರು ಬ್ರಿಟಿಷರ ಪಳೆಯುಳಿಕೆಗಳಾಗಿಯೋ, ರಾಜ ಮಹಾರಾಜರುಗಳ ಪ್ರತಿನಿಧಿಗಳಾಗಿಯೋ ಗೋಚರಿಸುತ್ತಿದ್ದಾರೆ. ನಿಜಾರ್ಥದಲ್ಲಿ ಅಂತಹ‌ವರು ಜನರಿಗಾಗಿರುವ, ಜನರ ಸೇವಕರು. ಆದರೆ ಅಂತಹ ಅನೇಕರಲ್ಲಿ ತಾವು ಜನರ ದುಡ್ಡಿನಿಂದ ಅನ್ನ ಉಣ್ಣುವವರು ಎಂಬ ಭಾವನೆಯ ಲವಲೇಶವೂ ಇರುವುದಿಲ್ಲ. ಸಾಧ್ಯವಿದ್ದರೂ ತುರ್ತಾಗಿ ಜನರ ಕೆಲಸ ಮಾಡಿಕೊಡಲು ಅವರು ಮನಸ್ಸು ಮಾಡುವುದಿಲ್ಲ . ತಾವು ಮಾಡುವ ಕೆಲಸಕ್ಕಿಂತಲೂ ಮಿಗಿಲಾಗಿ ಜನರ ದುಡ್ಡಿನಿಂದ ಸಂಬಳ ಪಡೆಯುತ್ತಿದ್ದರೂ ಜನರ ಕೆಲಸ ಮಾಡಿ ಕೊಡಲು ಮತ್ತೂ ಲಂಚಕ್ಕೆ ಕೈ ಒಡ್ಡುವವರು ಇಲ್ಲದಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಒಂದು ಕಾಲದಲ್ಲಿದ್ದ ನಾಳೆ ಬನ್ನಿ ಎನ್ನುವ ಉಕ್ತಿ ಸಕಾಲದಂತಹ ನಿಗದಿತ ದಿನಗಳುಳ್ಳ ನಿಯಮಗಳಿಂದಾಗಿ ಇಂದು ತುಂಬಾ ಕಡಿಮೆಯಾಗಿದೆ. ವಿದ್ಯಾಭ್ಯಾಸದ ಕಾರಣ ಜನರೂ ಧೈರ್ಯವಂತರಾಗಿದ್ದು ಅಧಿಕಾರಿಗಳನ್ನು ಪ್ರಶ್ನಿಸಲು ಹೆದರುವುದಿಲ್ಲ. ಆದರೆ ಸಚಿವ ದೇಶಪಾಂಡೆಯವರು ಉದ್ಗರಿಸಿರುವ ಸೌಜನ್ಯ ನಡವಳಿಕೆಯ ಸಂಸ್ಕೃತಿ ಮಾತ್ರ ಇನ್ನೂ ಅನೇಕ ಸರ್ಕಾರಿ ಕಚೇರಿಗಳನ್ನು ಹೊಕ್ಕಿಲ್ಲ ಎಂದೇ ಹೇಳಬಹುದು.

ಸರ್ಕಾರಿ ಕೆಲಸ ಗಿಟ್ಟಿಸುವ ಸಲುವಾಗಿ ತೋರಿದ ಸೌಜನ್ಯದ ನೂರರಲ್ಲಿ ಒಂದು ಭಾಗವೂ ಮತ್ತೆ ಸೇವೆಯಲ್ಲಿ ಉಳಿದಿರುವುದಿಲ್ಲ. ಕೆಲಸ ಮಾಡಿಸಲು ಬಂದಿರುವ ಜನ ಏಕಾಗಿಯಾದರೂ ತಮ್ಮಲ್ಲಿ ಬರುತ್ತಾರಾ ಎನ್ನುವ ತಾತ್ಸಾರ ಭಾವ ತೋರುವ ಸರ್ಕಾರಿ ಸಿಬ್ಬಂದಿಯೂ ಇದ್ದಾರೆ. ಹೀಗಿರುವಾಗ ಸರ್ಕಾರಿ ಕಚೇರಿಗಳಿಗೆ ಬರುವ ಜನರನ್ನು ಕುಳಿತುಕೊಳ್ಳುವಂತೆ ಹೇಳಿ ಅವರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸ್ಪಂದಿಸುವ ಮಾತೆಲ್ಲಿ ಬಂತು.

ಒಂದೆರಡು ಉದಾಹರಣೆಗಳನ್ನು ಗಮನಿಸುವ:ಹಲವು ಬಾರಿ ತಿದ್ದುಪಡಿಗೆ ಅರ್ಜಿ ನೀಡಿದಾಗಲೂ ಚುನಾವಣಾ ಗುರುತು ಪತ್ರದಲ್ಲಿ (ಎಪಿಕ್‌ ಕಾರ್ಡ್‌) ತಪ್ಪುಗಳು ಮರುಕಳಿಸುತ್ತಿದ್ದವು. ಆ ಪ್ರಯುಕ್ತ ಅನೇಕ ಬಾರಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿನ ಚುನಾವಣಾ ಕಾರ್ಯಾಲಯಕ್ಕೆ ತೆರಳಿದ್ದೆ. ವಿದ್ಯಾಭ್ಯಾಸ, ಬಹಳಷ್ಟು ವರ್ಷಗಳ ನನ್ನ ಸಾಮಾಜಿಕ ಕಾರ್ಯ ಚಟುವಟಿಕೆಗಳು, ವಿವಿಧ ಕಾರ್ಯಾಲಯಗಳಲ್ಲಿ ವ್ಯವಹರಿಸಿರುವ ಅನುಭವಗಳಿಂದಾಗಿ ಸರ್ಕಾರಿ / ಸ್ಥಳೀಯ ಸಂಸ್ಥೆಗಳ ಕಾರ್ಯಾಲಯಗಳು ಜನರಿಗಾಗಿ ಇರವಂತಹವುಗಳು ಎನ್ನುವ ಭಾವನೆ ನನ್ನಲ್ಲಿ ಬಲವಾಗಿ ಬೇರೂರಿದೆ. ಹಾಗಾಗಿ ಕಚೇರಿ ಪ್ರವೇಶಿಸಿದೊಡನೆ ಅಧಿಕಾರಿ / ಸಿಬ್ಬಂದಿಯನ್ನು ವಂದಿಸಿ ಅವರ ಎದುರಿಗಿರುವ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ನನ್ನ ಅಭ್ಯಾಸ ( ಸಚಿವ ದೇಶಪಾಂಡೆಯವರು ಗಮನಿಸಿರುವಂತೆ ಎಷ್ಟು ಹೊತ್ತು ನಿಂತುಕೊಂಡಿದ್ದರೂ ಕುಳಿತುಕೊಳ್ಳಿ ಎನ್ನುವ ವಿನಯ ನಮ್ಮ ಸರ್ಕಾರಿ ಕಚೇರಿಗಳಲ್ಲಿ ಇಲ್ಲದನ್ನು ನಾನು ಬಹಳಷ್ಟು ಹಿಂದೆಯೇ ಗಮನಿಸಿದ್ದೇನೆ). ಅದೊಂದು ಬಾರಿ ಕಚೇರಿ ಪ್ರವೇಶಿಸಿದಾಗ ಸಿಬ್ಬಂದಿಗಳು ನನ್ನನ್ನು ನೋಡಿಯೂ ನೋಡದಂತೆ ತಮ್ಮ ಕೆಲಸದಲ್ಲಿ ತಲ್ಲೀನರಾದ‌ಂತೆ ಇದ್ದರು. ಒಬ್ಬರು ಸಿಬ್ಬಂದಿಯ ಮೇಜಿನ ಎದುರುಗಡೆ ಸ್ವಲ್ಪ ದೂರದಲ್ಲಿ ಹಿರಿಪ್ರಾಯದ ನರೆತ ಕೂದಲಿನ ಮಹಿಳೆಯೊಬ್ಬರು ವಿನೀತರಾಗಿ ನಿಂತುಕೊಂಡಿದ್ದರು. ಕಚೇರಿ ಒಳಹೋದ ನಾನು ಇನ್ನೊಬ್ಬರು ಸಿಬ್ಬಂದಿಯ ಎದುರಿನ ಕುರ್ಚಿ ಎಳೆದು ಆಸೀನನಾದೆ. ಆ ಸಿಬ್ಬಂದಿಗೆ ನನ್ನನ್ನು ತಪ್ಪಿಸಲು ಸಾಧ್ಯವಾಗದೆ ನನ್ನ ಅಹವಾಲು ಕೇಳಬೇಕಾಯಿತು. ಅದೇ ಹೊತ್ತು ಆ ಮಹಿಳೆಗೆ ಎದುರಿದ್ದ ಸಿಬ್ಬಂದಿಯಲ್ಲಿ ತಾನು ಬಂದಂತಹ ಅಗತ್ಯ ಹೇಳಿಕೊಳ್ಳಲು ಅವಕಾಶ ದೊರೆಯಿತು. ನಮ್ಮ ಕಾರ್ಯ ಮುಗಿದ ಬಳಿಕ ಆ ಮಹಿಳೆ ಮತ್ತು ನಾನು ಜೊತೆಯಲ್ಲೇ ಹೊರತೆರಳಿದೆವು. ಕಾರ್ಯಾಲಯದಿಂದ ಹೊರಕಾಲಿಟ್ಟ ಕೂಡಲೇ ಆ ಮಹಿಳೆ ಹೇಳಿದ ಮಾತು ಇಂದೂ ನನ್ನ ನೆನಪಿನಾಳದಲ್ಲಿದೆ. ಅವರು ಹೇಳಿದ್ದು ‘ನಾನು ಮಂಗಳೂರಿನ ಕಾಲೇಜೊಂದರ ನಿವೃತ್ತ ಪ್ರಾಂಶುಪಾಲೆ. ನೀವು ಬಂದಾಗ ನಾನು ಕಚೇರಿ ಹೊಕ್ಕು ಕಡಿಮೆ ಎಂದರೂ ಐದು ನಿಮಿಷ ದಾಟಿತ್ತು. ನೋಡಿ ನಮ್ಮ ಸಾರ್ವಜನಿಕ ಕಚೇರಿಗಳ ಅವಸ್ಥೆ. ನನ್ನ ಸ್ಥಾನಮಾನ ಅವರಿಗೆ ಗೊತ್ತಾಗಲಿರಲಿಕ್ಕಿಲ್ಲ. ಅದು ಬಿಡಿ. ನನ್ನ ನರೆತ ಕೂದಲಿಗಾದರೂ ಅವರು ಗಮನ ನೀಡಬೇಡವೆ? ಶಹಬ್ಟಾಸ್‌ ನಿಮಗೆ, ನೀವು ಬಂದಿರಿ. ಕುರ್ಚಿ ಎಳೆದು ಕುಳಿತುಕೊಂಡಿರಿ. ನಿಮ್ಮ ಕಾರ್ಯ ಮೆಚ್ಚಿದೆ’. ಈ ಘಟನೆ ಸರ್ಕಾರಿ ಕಾರ್ಯಾಲಯಗಳಿಗೊಂದು ಕನ್ನಡಿ ಹಿಡಿಯುವುದಿಲ್ಲವೇ?

ಕೆಲ ವರ್ಷಗಳ ಹಿಂದಿನ ಇನ್ನೊಂದು ಘಟನೆ: ಅದು ಆಗಸ್ಟ್‌ ಕೊನೆ. ಮಳೆ ಪೂರ್ತಿಯಾಗಿ ನಿಂತಿರಲಿಲ್ಲ. ಆಗಾಗ ಮಳೆ ಬಂದು ನೀರು ನಿಲ್ಲುತ್ತಿತ್ತು. ನಾನು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಕುಟುಂಬದೊಂದಿಗೆ ಮಂಗಳೂರಿನಿಂದ ಬಜಪೆಗೆ ತೆರಳುತ್ತಿದ್ದೆ. ಕುಂಜತ್ತಬೈಲ್ ತಿರುವು ದಾಟಿದಾಗ ಸಿಗುವ ಸಣ್ಣ ಮೈದಾನ ಬಳಿ ರಸ್ತೆ ಬದಿ ವಾಹನ ತಪಾಸಣೆ ನಡೆಯುತ್ತಿತ್ತು. ಇನ್ಸ್‌ ಪೆಕ್ಟರ್‌ ಜೀಪಿನ ಬಾನೆಟ್ ಎದುರಗಡೆ ನಿಂತಿದ್ದರು. ಕಾನ್‌ಸ್ಟೇಬಲ್ ನಮ್ಮ ಕಾರನ್ನು ನಿಲ್ಲಿಸಿ ರೆಕಾರ್ಡ್ಸ್‌ನೊಂದಿಗೆ ಇನ್ಸ್‌ಪೆಕ್ಟರ್‌ರಲ್ಲಿ ತೆರಳಲು ಸೂಚಿಸಿದರು. ನಾನು ವಿಧೇಯನಾದೆ. ನನ್ನಲ್ಲಿ ಆಗಿನ್ನೂ ಡಿಎಲ್, ಆರ್‌ಸಿ ಪುಸ್ತಕವೇ ಇತ್ತು (ಕಾರ್ಡ್‌ ಸಿಕ್ಕಿರಲಿಲ್ಲ). ಇನ್ಸ್‌ ಪೆಕ್ಟರ್‌ ಆರ್‌ಸಿ ಪುಟಗಳನ್ನು ಮಗುಚಿ (ತಿರುವಿ ಹಾಕುವ) ಹೊತ್ತು ನೀರಿರುವ ನೆಲಕ್ಕೆ ಬೀಳಿಸಿದ. ಅದೂ ಒಂದಲ್ಲ. ಎರಡು ಬಾರಿ. ನನಗೆ ರೇಗಿತು. ನಾನು ಹೇಳಿದೆ ಏನ್ಸಾಮಿ, ಯುರೋಪ್‌ನಲ್ಲಿ ಕಣ್ಣಾರೆ ನೋಡಿದ್ದೇನೆ, ತಪಾಸಣೆ ನೆಪದಲ್ಲಿ (ಬಹಳಷ್ಟು ಕಡಿಮೆ ಸಂದರ್ಭಗಳಲ್ಲಿ) ವಾಹನಗಳನ್ನು ನಿಲ್ಲಿಸಿದಾಗ ಅಧಿಕಾರಿಗಳೇ ವಾಹನದ ಬಳಿ ಬಂದು ವಂದಿಸಿ, ತಪಾಸಣೆ ನಡೆಸುತ್ತಾರೆ (ಇದು ಫ್ರಾನ್ಸ್‌ನಲ್ಲಿ ಕಂಡದ್ದು). ನಾನು ತೆರಿಗೆ ಕಟ್ಟುವ ಪ್ರಜೆಯಾಗಿದ್ದೂ ನಿಮ್ಮ ಬಳಿ ಬರಬೇಕು. ನಾನು ಹಲವಾರು ವರ್ಷಗಳಿಂದ ಜತನದಿಂದ ಕಾಪಾಡಿದ ನನ್ನ ರೆಕಾರ್ಡನ್ನು ನೀರಿಗೆ ಬೀಳಿಸಿದಿರಲ್ಲ. ಇದು ಸರಿಯಾ? ಆ ಇನ್ಸ್‌ಪೆಕ್ಟರ್‌ ಹೇಳಿದ್ದೇನು ಗೊತ್ತಾ? ‘ಇದು ಇಂಡಿಯಾ ಸ್ವಾಮಿ’. ಅಂದರೆ ಇಂಡಿಯಾದಲ್ಲಿ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳೇ ದೊಡ್ಡವರು, ಅವರು ಮಾಡಿದೆಲ್ಲವೂ ನಡೆಯುತ್ತದೆ. ಪುಣ್ಯಕ್ಕೆ, ಈಗ ಇಂಡಿಯಾ (ಭಾರತ)ದಲ್ಲಿಯೂ ಅತ್ಯಾಧುನಿಕ ಉಪಕರಣಗಳ ಕಾರಣ ವಾಹನಗಳನ್ನು ತಡೆದು ತಪಾಸಣೆ ಮಾಡುವ ವಿಧಾನದಲ್ಲಿ ಬದಲಾವಣೆಯಾಗುತ್ತಾ ಇದೆ.

ಪ್ರಜೆಗಳು ಸರ್ಕಾರಿ / ಸ್ಥಳೀಯ ಸಂಸ್ಥೆಗಳ ತೆರಿಗೆ, ಶುಲ್ಕ ನಿಗದಿತ ಅವಧಿಯಲ್ಲಿ ಕಟ್ಟಬೇಕೆಂಬ ಕಾನೂನಿದೆ. ಆದರೆ ಅವುಗಳನ್ನು ಜನರಿಗೆ ಕಷ್ಟವಾಗದಂತೆ ಸ್ವೀಕರಿಸುವ ವ್ಯವಸ್ಥೆ ಇದೆಯೇ? ಬಹುತೇಕ ಸಂದರ್ಭಗಳಲ್ಲಿ ಇಲ್ಲ ಎಂದೇ ಹೇಳಬಹುದು. ಜನರು ಅವುಗಳನ್ನು ಪಾವತಿಸಲು ಕಚೇರಿಗಳಿಗೆ ಅಲೆದಾಡಬೇಕು. ಅಲ್ಲಿ ಉದ್ದುದ್ದ ಸರತಿ ಸಾಲಲ್ಲಿ ನಿಲ್ಲಬೇಕು. ಅರ್ಜಿ ಬರೆಯಬೇಕೆಂದರೆ ಮೇಜಿನ ವ್ಯವಸ್ಥೆ ಇಲ್ಲ . ಕುಳಿತುಕೊಂಡು ಬರೆಯುವ ಎಂದರೆ ಕುರ್ಚಿಗಳ ವ್ಯವಸ್ಥೆಯೂ ಇರುವುದಿಲ್ಲ. ಮಂಗಳೂರು ಮನಪಾದ ಉದ್ದಿಮೆ ಪರವಾನಿಗೆಯನ್ನೇ ತೆಗೆದುಕೊಳ್ಳೋಣ – ಶುಲ್ಕ ಕಟ್ಟುತ್ತೇವೆ ಎಂದರೂ ಸ್ಥಳ ಪರೀಕ್ಷೆಯಾಗದೆ ಅದನ್ನು ಸ್ವೀಕರಿಸಲಾಗುತ್ತಿಲ್ಲವಂತೆ. ಅಷ್ಟೊಂದು ಹಣ ಪಡೆಯುವಾಗ ಅದನ್ನು ಸ್ವೀಕರಿಸಲು ಬೇಕಾದ ವ್ಯವಸ್ಥೆ ಮಾಡಬೇಡವೇ? ಇಂದು ಹೆಚ್ಚಿನ ಲೇವಾದೇವಿ, ಪಾವತಿಗಳು ಆನ್‌ಲೈನ್‌ ಆಗಿ (ಇ-ಪಾವತಿಗಳು) ನಡೆಯುತ್ತಿರುವಾಗ ಆಸ್ತಿ ತೆರಿಗೆ, ಉದ್ದಿಮೆ ಪರವಾನಿಗೆಯಂತಹ ವಿಚಾರಗಳಲ್ಲಿ ನೂತನ ವಿಧಾನಗಳನ್ನು ಅಳವಡಿಸದೆ ಪಾವತಿದಾರರನ್ನು ಸತಾಯಿಸಲಾಗುತ್ತದೆ.

ಆ ಮಟ್ಟಿಗೆ ಕೇಂದ್ರ ಸರ್ಕಾರಿ ಹೆಚ್ಚಿನ ಕಚೇರಿಗಳಲ್ಲಿ ಉತ್ತಮ ಸೌಜನ್ಯದಂತಹ ವಿಚಾರಗಳು ಬಹಳಷ್ಟು ವರ್ಷಗಳಿಂದ ಪ್ರಚಲಿತದಲ್ಲಿರುವುದನ್ನು ಕಂಡಿದ್ದೇನೆ. ಅಲ್ಲಿ ಬಹುತೇಕ ಪಾವತಿಗಳನ್ನು ಆನ್‌ಲೈನ್‌ ಆಗಿ ಸ್ವೀಕರಿಸವಂತಹ ವ್ಯವಸ್ಥೆಗಳಿವೆ. ಉದಾಹರಣೆಗೆ ಅನೇಕ ವರ್ಷಗಳಿಂದ ಜಾರಿಗೆ ತರಲು ಮೀನಾಮೇಷ ಎಣಿಸಿ ಕೊನೆಗೂ 2017 ಜುಲೈ 1ರಂದು ಜಾರಿಗೊಳಿಸಲಾದ ಜಿಎಸ್‌ಟಿ. ಇದರಲ್ಲಿ ಸಂಯೋಜನೆಗೊಂಡಿರುವ ತೆರಿಗೆಗಳ ವಿಷಯದಲ್ಲಿದ್ದ ಹಿಂದಿನ ಕಾರ್ಯವಿಧಾನಗಳಿಗೂ ಈಗಿನದ್ದಕ್ಕೂ ಅಜಗಜಾಂತರವಿದೆ. ಸಣ್ಣ ವ್ಯಾಪಾರ-ವ್ಯವಹಾರ ಮಾಡಿಕೊಂಡಿರುವ ಕಂಪ್ಯೂಟರ್‌ ತಿಳಿದಿರುವ ಸಾಮಾನ್ಯ ಪ್ರಜೆ ಕೂಡಾ ತನ್ನ ವ್ಯವಹಾರ ಸ್ಥಳದಿಂದಲೇ ಇದರ ಆವಶ್ಯಕತೆಗಳನ್ನು ಪೂರೈಸಬಹುದಾಗಿದೆ.

ಸರ್ಕಾರಿ/ ಸ್ಥಳೀಯ ಸಂಸ್ಥೆಗಳು ಇರುವುದು ಜನರಿಗಾಗಿ ಎಂದು ಮೇಲಿಂದ ಹಿಡಿದು ಕೆಳಗಿನವರೆಗೆ ಅಲ್ಲಿಯ ಸರ್ವರೂ ಪ್ರಥಮತ ತಿಳಿದುಕೊಳ್ಳಬೇಕಾದ ವಿಚಾರ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಾವು ಜನರ ಸೇವಕ ಎಂದು ಅನೇಕ ಸಂದರ್ಭಗಳಲ್ಲಿ ಉದ್ಗರಿಸುತ್ತಾರೆ. ಮಂತ್ರಿ-ಮಾಗಧರು, ಜನಪ್ರತಿನಿಧಿಗಳು ಮತ್ತು ಕಟ್ಟಕಡೆಯ ಸರಕಾರಿ ಉದ್ಯೋಗಿ ಕೂಡಾ ಜನರ ಸೇವಕ ಎಂಬ ವಿಚಾರ ಗಮನದಲ್ಲಿಟ್ಟುಕೊಂಡರೆ ಸೌಜನ್ಯ ನಡವಳಿಕೆಯ ವಿಚಾರ ತಾನೇ ತಾನಾಗಿ ಜಾರಿಗೊಳ್ಳುವುದರಲ್ಲಿ ಸಂಶಯವಿಲ್ಲ. ಹೊಸ ಹೊಸ ವಿಧಾನಗಳನ್ನು ಆಡಳಿತದಲ್ಲಿ ಅಳವಡಿಸಿಕೊಂಡಾಗ ಜನರ ಒಳಿತನ್ನು ಸಾಧಿಸುವಂತಾಗುವುದು.

ಎಚ್‌. ಆರ್‌. ಆಳ್ವ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ