ಮತ್ತೆ ಗಟ್ಟಿಯಾದ ತುಳುವರ ಅಧಿಕೃತ ಭಾಷೆ ಮಾನ್ಯತೆ ಬೇಡಿಕೆ

Team Udayavani, Sep 12, 2019, 5:36 AM IST

ಸಾಂದರ್ಭಿಕ ಚಿತ್ರ

ಎಲ್ಲ ರೀತಿಯಿಂದಲೂ ತುಳುವಿಗಿಂತ ದುರ್ಬಲವಾಗಿರುವ ಭಾಷೆಗಳಿಗೆ ಸಂವಿಧಾನದ ಮಾನ್ಯತೆ ನೀಡಲಾಗಿದೆ ಎಂಬ ಆರೋಪ ತುಳುಪರ ಹೋರಾಟಗಾರರಿಂದ ಕೇಳಿಬರುತ್ತಿದೆ. 1 ಲಕ್ಷಕ್ಕಿಂತಲೂ ಕಡಿಮೆ ಮಂದಿ ಮಾತನಾಡುವ ಭಾಷೆಗಳಿಗೆ ಮಾನ್ಯತೆ ನೀಡಿರುವಾಗ 50 ಲಕ್ಷ ಮಂದಿ ಮಾತನಾಡುವ ಭಾಷೆಗೆ ಯಾಕೆ ಮಾನ್ಯತೆ ನೀಡಲಾಗದು ಎಂಬ ಪ್ರಶ್ನೆಗೆ ಬಹುಶಃ ಸ್ಪಷ್ಟ ಉತ್ತರ ಸಿಗದು. ತುಳುವರು ರಾಜಕೀಯವಾಗಿ ಒಂದು ಶಕ್ತಿಯಾಗದೆ ಹಲವು ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವುದು ಕೂಡ ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ವಿಫ‌ಲವಾಗಲು ಒಂದು ಕಾರಣಇರಬಹುದು ಎಂದು ಹೇಳಲಾಗುತ್ತಿದೆ.

ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವ ಮೂಲಕ ತುಳುವಿಗೆ ಅಧಿಕೃತ ಭಾಷೆಯ ಮಾನ್ಯತೆ ನೀಡಬೇಕು ಎಂಬ ಆಗ್ರಹ ದೀರ್ಘ‌ ಕಾಲದ ಹಿಂದಿನದ್ದಾಗಿದ್ದು, ಈಗ ಮತ್ತಷ್ಟು ಪರಿಣಾಮಕಾರಿಯಾಗಿ ಹೋರಾಟ ಮುಂದುವರಿಸಲು ತುಳುವರು ಮತ್ತು ತುಳುಪರ ಸಂಘಟನೆಗಳು ನಿರ್ಧರಿಸಿವೆ. ಅಂದಾಜು 50 ಲಕ್ಷ ಮಂದಿ ಮಾತನಾಡುವ ಭಾಷೆ ಎಂದು ಪರಿಗಣಿತವಾಗಿರುವ ತುಳುವಿನ ಹಿನ್ನೆಲೆಯಲ್ಲಿ ಗಮನಿಸುವಾಗ ಅದಕ್ಕೆ ಸರಕಾರದ ಆಶ್ರಯ ಸಿಗಬೇಕಾದ ಅಗತ್ಯವಿದೆ. ಇಲ್ಲಿ ಪ್ರಮುಖವಾಗಿ ತಡೆಯಾಗಿರುವ ಕೆಲವು ಗೊಂದಲಗಳು ಮತ್ತು ಅಸ್ಪಷ್ಟತೆಗಳನ್ನು ಮುಚ್ಚಿಡಲು ಸಾಧ್ಯವಿಲ್ಲ.

ಪ್ರಸ್ತುತ ತುಳು ಎರಡು ರಾಜ್ಯದಲ್ಲಿ ಹರಡಿರುವ ಪ್ರಾದೇಶಿಕ ಭಾಷೆ. ಕೇರಳ ಮತ್ತು ಕರ್ನಾಟಕದಲ್ಲಿ ಸರಕಾರದಿಂದಲೇ ತುಳು ಅಕಾಡೆಮಿಗಳಿವೆ. ಆ ಮೂಲಕ ಈ ಎರಡು ರಾಜ್ಯ ಸರಕಾರಗಳು ತುಳುವಿಗೆ ಪ್ರೋತ್ಸಾಹ ನೀಡುತ್ತಿವೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೆಲವು ತುಳು ಸಂಬಂಧಿ ಕೋರ್ಸ್‌ಗಳಿವೆ ಮತ್ತು ಕರ್ನಾಟಕದ ಶಾಲೆಗಳಲ್ಲೂ ತುಳು ಕಲಿಯಲು ಅವಕಾಶವಿದೆ. ಕೇರಳ ಮತ್ತು ಕರ್ನಾಟಕ ಹೊರತುಪಡಿಸಿದ ರಾಜ್ಯಗಳ ಕೆಲವು ಪ್ರಮುಖ ವಿವಿಗಳಲ್ಲೂ ತುಳು ಅಧ್ಯಯನ ಕೇಂದ್ರಗಳಿವೆ. ಆಂಧ್ರಪ್ರದೇಶದ ಕುಪ್ಪಂನ ದ್ರಾವೀಡಿಯನ್‌ ವಿವಿ, ದಿಲ್ಲಿಯ ಜವಾಹರಲಾಲ್ ನೆಹರೂ ವಿವಿ ಮುಂತಾದೆಡೆ ತುಳು ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳಿವೆ. ಇವೆಲ್ಲವೂ ತುಳು ತನ್ನ ಪ್ರಾದೇಶಿಕತೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂಬುದಕ್ಕೆ ಸಾಕ್ಷಿ. ಅಮೆರಿಕ, ಯೂರೋಪ್‌ ಮುಂತಾದ ದೇಶಗಳಲ್ಲೂ ನಮ್ಮ ತುಳು ಸುದ್ದಿ ಮಾಡಿದ್ದು, ಭಾರತದ ಪ್ರಮುಖ ಪ್ರಾದೇಶಿಕ ಭಾಷೆಯ ಸಾಲಲ್ಲಿ ಅಲ್ಲಿನವರು ತುಳುವಿಗೂ ಆದ್ಯತೆಯ ಸ್ಥಾನ ನೀಡಿರುವುದು ತಿಳಿದು ಬರುತ್ತದೆ.

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಈಗ ದೇಶದ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಒಂದಾಗಿದೆ. ತುಳು ಭಾಷೆ ಮತ್ತು ಸಂಸ್ಕೃತಿಗಾಗಿ ದುಡಿಯುವ ಸಂಘಟನೆಗಳು ದೇಶದ ವಿವಿಧ ರಾಜ್ಯಗಳಲ್ಲೂ ಇವೆ. ಕೊಲ್ಲಿ ರಾಷ್ಟ್ರಗಳು ಸೇರಿದಂತೆ ಕೆಲವು ವಿದೇಶಗಳಲ್ಲೂ ತುಳು ಸಂಘಟನೆಗಳು ಸಕ್ರಿಯವಾಗಿವೆ. ತುಳುವಿನಲ್ಲಿ ಮಹಾಭಾರತ, ದೇವಿಮಹಾತ್ಮೆ ಮುಂತಾದ ಮಹಾಗ್ರಂಥಗಳು ಶತಮಾನಗಳ ಹಿಂದೆಯೇ ಪ್ರಕಟವಾಗಿವೆ. ತುಳು ಶಾಸನಗಳು, ಬಾರ್ಕೂರು ಸಂಸ್ಥಾನದ ಶ್ರೀಮಂತಿಕೆ, ಅಳಿಯಕಟ್ಟು ಎಂಬ ವಿಶೇಷತೆ ತುಳುವಿನ ಶ್ರೀಮಂತಿಕೆ ಮತ್ತು ಹಿರಿಮೆಗೆ ಸಾಕ್ಷಿ.

ಪ್ರಸ್ತುತ ದೇಶದಲ್ಲಿ ಸುಮಾರು 22 ಭಾಷೆಗಳಿಗೆ ಮಾತ್ರವೇ ಸಂವಿಧಾನದ ಮಾನ್ಯತೆ ಸಿಕ್ಕಿ ಅಧಿಕೃತ ಭಾಷೆ ಎಂದು ಗುರುತಿಸಿಕೊಂಡಿವೆ. ಪ್ರಾದೇಶಿಕತೆ ಮತ್ತು ವೈವಿಧ್ಯತೆಯಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ನಮ್ಮ ದೇಶದಲ್ಲಿ ಅಧಿಕೃತ ಭಾಷೆಗಳ ಸಂಖ್ಯೆ ನಾವು ಹೊಂದಿರುವ ರಾಜ್ಯಗಳಷ್ಟೂ ಇಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಸ್ವಾತಂತ್ರ್ಯದ ಸಂದರ್ಭದಲ್ಲಿ 8ನೇ ಪರಿಚ್ಛೇದದಲ್ಲಿ ಸೇರಿದ್ದ ಭಾಷೆಗಳ ಸಂಖ್ಯೆ ಕೇವಲ 14 ಮಾತ್ರವಿತ್ತು. ಬಳಿಕ ಕೆಲವು ತಿದ್ದುಪಡಿಗಳ ಮೂಲಕ 8 ಭಾಷೆಗಳನ್ನು ಸೇರಿಸಲಾಗಿದೆ. ಈಗ ಮತ್ತೂ ಸುಮಾರು 44 ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಬೇಕು ಎಂಬ ಬೇಡಿಕೆ ಕೇಂದ್ರ ಗೃಹ ಇಲಾಖೆಯ ಮುಂದಿದೆ. ಇವುಗಳಲ್ಲಿ ತುಳು, ಕೊಡವ ಸಹಿತ 16 ಭಾಷೆಗಳ ಪರವಾಗಿ ಸರಕಾರವೂ ಗಂಭೀರ ಪ್ರಯತ್ನ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಮಾನದಂಡದಲ್ಲಿ ಗೊಂದಲ
ಹಾಗೆ ನೋಡಿದರೆ ಸಂವಿಧಾನದಲ್ಲಿ ಅಧಿಕೃತ ಭಾಷೆಯ ಸ್ಥಾನಮಾನ ಪಡೆಯಲು ಇರುವಂಥ ಮಾನದಂಡ ಏನು ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಸಿಗದೆ ಗೊಂದಲಕಾರಿಯಾಗಿಯೇ ಸಾಗುತ್ತದೆ. ಈಗಿನ ರಾಜಕೀಯ, ವ್ಯಾವಹಾರಿಕ ಮತ್ತು ಭೌಗೋಳಿಕತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ನೋಡಿದರೆ ಒಂದು ಮಾನದಂಡ ನಿಗದಿ ಮಾಡುವುದು ಕೂಡ ಸವಾಲಿನ ಕೆಲಸವೇ. ಈ ಹಿಂದೆಲ್ಲ ತುಳುವಿಗೆ ಸ್ವಂತ ಲಿಪಿ ಇಲ್ಲ, ಮಹಾಗ್ರಂಥಗಳಿಲ್ಲ ಎಂಬ ಕೊರತೆಯನ್ನು ತೋರಿಸಲಾಗುತ್ತಿತ್ತು. ಅವೆಲ್ಲವೂ ಕೇವಲ ಮಿಥ್ಯೆ ಎಂಬುದನ್ನು ಸಾಕ್ಷ್ಯಾಧಾರ ಸಹಿತ ತಿಳಿಸಿದ ಬಳಿಕ ಅವುಗಳನ್ನು ಬಿಟ್ಟು ಬೇರೆಯೇ ಕಾರಣ ಮುಂದಿಡಲಾಗುತ್ತಿದೆ. ಶತಮಾನಗಳ ಹಿಂದೆಯೇ ತುಳುಭಾಷೆಯಲ್ಲಿ ಶಾಸನಗಳಿರುವುದನ್ನು ಇತಿಹಾಸಕಾರರು ಒಪ್ಪಿಕೊಂಡಿರುವುದು, ಕೆಲವು ಮಠಗಳ ಸ್ವಾಮೀಜಿಗಳು ತುಳು ಭಾಷೆಯಲ್ಲಿ ಸಹಿ ಮಾಡೋದು ಮುಂತಾದವು ತುಳುವಿಗೆ ಹಿರಿಮೆಯನ್ನು ತೋರಿಸುತ್ತದೆ ಮತ್ತು ತುಳು ಲಿಪಿಯ ಅಸ್ತಿತ್ವವನ್ನು ನಮ್ಮ ಮುಂದಿಡುತ್ತದೆ.

ಈ ನಡುವೆ ಸಂವಿಧಾನದ ಮಾನ್ಯತೆ ಪಡೆಯಲು ಭಾಷೆಗಳಿಗೆ ಇರಬೇಕಾದ ಅರ್ಹತೆಯ ಮಾನದಂಡ ನಿಗದಿ ಮಾಡಲು 1996ರಲ್ಲಿ ಪಹ್ವಾ ಸಮಿತಿ ಮತ್ತು 2003ರಲ್ಲಿ ಸೀತಾಕಾಂತ್‌ ಮಹಾಪಾತ್ರ ಅವರ ನೇತೃತ್ವದ ಸಮಿತಿಗಳನ್ನು ರಚಿಸಲಾಗಿತ್ತು. ಆದರೆ ಮಾನದಂಡದ ಬಗ್ಗೆ ಒಂದು ತಾರ್ಕಿಕ ನಿರ್ಧಾರಕ್ಕೆ ಬರಲು ಅವುಗಳಿಗೆ ಸಾಧ್ಯವಾಗಿಲ್ಲ. ಹಾಗಾದರೆ ಈಗ ರಾಜಕೀಯ ಬಲಾಡ್ಯತೆ ಅಥವಾ ರಾಜಕೀಯ ಲಾಭವೇ ಪ್ರಮುಖ ಮಾನದಂಡವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.

ಎಲ್ಲ ರೀತಿಯಿಂದಲೂ ತುಳುವಿಗಿಂತ ದುರ್ಬಲ ಭಾಷೆಗಳಿಗೆ ಸಂವಿಧಾನದ ಮಾನ್ಯತೆ ನೀಡಲಾಗಿದೆ ಎಂಬ ಆರೋಪ ತುಳುಪರ ಹೋರಾಟಗಾರರಿಂದ ಅಂಕಿಅಂಶ ಸಹಿತ ಕೇಳಿ ಬರುತ್ತಿದೆ. 1 ಲಕ್ಷಕ್ಕಿಂತಲೂ ಕಡಿಮೆ ಮಂದಿ ಮಾತನಾಡುವ ಭಾಷೆಗಳಿಗೆ ಮಾನ್ಯತೆ ನೀಡಿರುವಾಗ 50 ಲಕ್ಷ ಮಂದಿ ಮಾತನಾಡುವ ಭಾಷೆಗೆ ಯಾಕೆ ಮಾನ್ಯತೆ ನೀಡಲಾಗದು ಎಂಬ ಪ್ರಶ್ನೆಗೆ ಬಹುಶಃ ಸ್ಪಷ್ಟ ಉತ್ತರ ಸಿಗದು. ತುಳುವರು ರಾಜಕೀಯವಾಗಿ ಒಂದು ಶಕ್ತಿಯಾಗದೆ ಹಲವು ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವುದು ಕೂಡ ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ವಿಫ‌ಲವಾಗಲು ಒಂದು ಪ್ರಮುಖ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ.

ಕಾಸರಗೋಡಿನ ಸಂಸದರು ಈ ಹಿಂದೆಯೇ ತುಳುವಿನ ಬಗ್ಗೆ ಸಂಸತ್ತಿನಲ್ಲಿ ಗಟ್ಟಿ ದನಿ ಎಬ್ಬಿಸಿದ್ದರು. ಅವರಿಗೆ ಹೋಲಿಸಿದರೆ ತುಳುನಾಡಿನ ಜನಪ್ರತಿನಿಧಿಗಳ ಪ್ರಯತ್ನ ಏನೇನೂ ಸಾಲದು. ಪ್ರಸ್ತುತ ತುಳು ಸಿನಿಮಾ ರಂಗವೂ ಸಮೃದ್ಧವಾಗಿ ಬೆಳೆಯುತ್ತಿದೆ. ಇಲ್ಲಿನ ಯಕ್ಷಗಾನ, ದೈವಾರಾಧನೆ, ನಾಗಾರಾಧನೆ ಬಗ್ಗೆಯೂ ದೇಶದ ಜನರಲ್ಲಿ ಕುತೂಹಲವಿದೆ. ಒಂದು ಕಾಲದಲ್ಲಿ ಪ್ರತ್ಯೇಕ ತುಳು ರಾಜ್ಯ ಹೊಂದಿ ಬಾರ್ಕೂರನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದು, ಆ ಬಳಿಕ ನಿಧಾನವಾಗಿ ಕರಗುತ್ತಾ ಬಂದು ಈಗ ಕರ್ನಾಟಕ ಮತ್ತು ಕೇರಳದೊಂದಿಗೆ ಗುರುತಿಸಿಕೊಂಡಿರುವ ತುಳು ಪ್ರದೇಶದ ಬಗ್ಗೆ ಕೇಂದ್ರ ಗೃಹ ಇಲಾಖೆ ಕಾಳಜಿ ವಹಿಸಬೇಕು ಎಂಬ ಆಗ್ರಹ ಬಲವಾಗುತ್ತಾ ಇದೆ. ಇಲ್ಲದೆ ಹೋದರೆ ಸದ್ಯ ದುರ್ಬಲವಾಗಿರುವ ಪ್ರತ್ಯೇಕ ತುಳು ರಾಜ್ಯದ ಬೇಡಿಕೆ ಮತ್ತೆ ಪ್ರಬಲವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಟ್ವಿಟರ್‌ನಲ್ಲಿ ತುಳು ಅಭಿಯಾನ

ಟ್ವಿಟಿ ಜನ ಮನ
ಟ್ವಿಟರ್‌ನಲ್ಲಿ ತುಳು ಅಭಿಯಾನ
@ ನವರಸ ನಾಯಕ ಜಗ್ಗೇಶ್‌
ತುಳುವೆರೆ ಉಸಾರ್‌ ಉಲ್ಲಾರ! ಬೊಕ್ಕ ತುಳು ಭಾಷೆದ ವಿಷಯೊಡು ಯಾನ್ಲಾ ನಿಕ್ಲೆನೊಟ್ಟುಗು ಬರ್ಪೆ! ಹೌದು ತುಳು ಭಾಷೆ ಭಾರತದ ಸನಾತನ ಭಾಷೆ! ಕನ್ನಡದ ಸಹೋದರ ಭಾಷೆ ಉಳಿಯಲು ತುಳು ಭಾಷೆಯ ಎಲ್ಲಾ ಪಕ್ಷದ ನಾಯಕರು, ಚಿಂತಕರು, ಸಾಹಿತಿಗಳು, ಮಾಧ್ಯಮದಲ್ಲಿರುವವರು, ನಟನಟಿಯ ರು ಪ್ರಾಮಾಣಿಕವಾಗಿ ಯತ್ನಿಸಬೇಕು! ಭಾಷೆ ಉಳಿದರೆ ಸನಾತನ ಭಾವನೆ ಉಳಿಯುತ್ತದೆ!

@ ಅಣ್ಣಾಮಲೈ
ಹೆಚ್ಚು ವಿಕಸನಗೊಂಡ ದ್ರಾವಿಡ ಭಾಷೆಗಳಲ್ಲಿ ತುಳು ಕೂಡ ಒಂದು. ಇದಕ್ಕೆ ತನ್ನದೇ ಆದ ಇತಿಹಾಸ ಮತ್ತು ಸಂಪ್ರದಾಯವಿದೆ. ಆ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದನ್ನು ಮತ್ತು ಸಿರಿ, ಕೋಟಿ ಮತ್ತು ಚೆನ್ನಯದಂಥ ಮಹಾ ಕಾವ್ಯಗಳ ಶ್ರೀಮಂತಿಕೆಗೆ ಸಾಕ್ಷಿಯಾಗಿದ್ದನ್ನು ನನ್ನ ಪುಣ್ಯವೆಂದು ಭಾವಿಸುತ್ತೇನೆ.

@ ರಕ್ಷಿತ್‌ ಶೆಟ್ಟಿ
ನಮ್ಮ ಭಾಷೆ, ಸಂಪ್ರದಾಯ, ಸಂಸ್ಕೃತಿಗಾಗಿ ನಡೆಯುತ್ತಿರುವ ಅಭಿಯಾನದಲ್ಲಿ ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ. ಆದಾಗ್ಯೂ ಕೇವಲ ಸಾಮಾಜಿಕ ಜಾಲತಾಣದ ಮೂಲಕವಷ್ಟೇ ಈ ಕೆಲಸ ಆಗದು ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ತುಳು ಸಮುದಾಯದ ಎಲ್ಲರೂ ಜೊತೆಗೂಡಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತ ನಾಡಬೇಕಿದೆ.

@ ಪ್ರಮೋದ್‌ ಮಧ್ವರಾಜ್‌
ಪಕ್ಷಾತೀತವಾಗಿ ಕರಾವಳಿ ಭಾಗದ ರಾಜಕೀಯ ಮುಖಂಡರು ಭಾಷೆಗಾಗಿ ಒಂದಾಗಬೇಕಿದೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಭಾಷೆಯ ಶ್ರೀಮಂತಿಕೆಯನ್ನು ತೋರಿಸಬೇಕಿದೆ.

 ಪುತ್ತಿಗೆ ಪದ್ಮನಾಭ ರೈ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ