ಸುಳ್ಳಿನ ಪ್ರವಾಹದಲ್ಲಿ ಸತ್ಯ ಬಸವಳಿಯದಿರಲಿ

Team Udayavani, Nov 6, 2017, 10:29 AM IST

ಹಿಂದೆ ದೇಶ ಆಳಿದವರು ಮಾಡಿದ್ದೆಲ್ಲವೂ ಅನಾಹುತಕಾರಿಯಾದುದೇ, ಅವರ ವೈಯಕ್ತಿಕ ಬದುಕು ಕೂಡ ಸರಿ ಇರಲಿಲ್ಲ. ಅಲ್ಲೂ ಅನೈತಿಕತೆಯೇ ಹಾಸಿ ಹೊದ್ದುಕೊಂಡಿತ್ತು ಅಂತೆಲ್ಲ ಬಿಂಬಿಸುವ ಸಲುವಾಗಿ ಸೃಷ್ಟಿಯಾದ ಪೋಸ್ಟುಗಳು ಮತ್ತು ಅವೆಲ್ಲ ವಾಸ್ತವವೆಂದು ಭಾವಿಸಿ ಇತರರಿಗೂ ಶೇರ್‌ ಮಾಡುವವರ ಎದುರು ವಾಸ್ತವಾಂಶಗಳೆಂಬ ಅರಿವಿನ ಮೋಂಬತ್ತಿ ಹಿಡಿದು ನಿಲ್ಲುವವರು ನಮಗೀಗ ಬೇಕಾಗಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪವಾದಂತೆ ರಾಜಕೀಯ ಪಕ್ಷಗಳಲ್ಲಿನ ಚಟುವಟಿಕೆಗಳೂ ಗರಿಗೆದರುತ್ತಿವೆ. ಚುನಾವಣಾ ತಾಲೀಮಿನ ಭಾಗವಾಗಿ ಆಯಾ ಪಕ್ಷಗಳ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರಿಗೆ ನೀಡುತ್ತಿರುವ “ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆಗೆ ಆದ್ಯತೆ ನೀಡಿ’ ಎಂಬ ಸೂಚನೆ ನಮ್ಮನ್ನು ಈಗಾಗಲೇ ಆವರಿಸಿರುವ ಸುಳ್ಳನ್ನು ಉತ್ಪಾದಿಸುವ ಜಾಲ ಮತ್ತಷ್ಟು ಹಬ್ಬಲು ಕಾರಣವಾಗಲಿದೆಯೇ ಎಂಬ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.

ನಿರ್ದಿಷ್ಟ ರಾಜಕೀಯ ಪಕ್ಷವೊಂದರ ಪರ ಪ್ರಚಾರ ಕೈಗೊಳ್ಳುವ ಒಳ ಉದ್ದೇಶ ಹೊಂದಿರುವ ಪೋಸ್ಟುಗಳು ಸಾಮಾಜಿಕ ಜಾಲತಾಣಗಳಲ್ಲಿ ದಿನನಿತ್ಯ ಸೃಷ್ಟಿಯಾಗುತ್ತಲೇ ಇವೆ. ರಾಜಕೀಯ ಪಕ್ಷವೊಂದರ ಡಿಜಿಟಲ್‌ ಕಾಲಾಳುಗಳಾಗಿ ಕಾರ್ಯನಿರ್ವಹಿಸುವ ವಿಚಾರವನ್ನು ಬಹಿರಂಗವಾಗಿ ತೋರ್ಪಡಿಸಿಕೊಳ್ಳದೆ, ತಾವು ಯಾವುದೇ ಪೂರ್ವಗ್ರಹಕ್ಕೆ ಒಳಗಾಗದೆ ಈ ಅಭಿಪ್ರಾಯ ಮಂಡಿಸುತ್ತಿದ್ದೇವೆ ಎನ್ನುತ್ತಲೇ ಅತಿರಂಜಿತ ಸುಳ್ಳುಗಳಿಗೆ ಸತ್ಯದ ಮುಸುಕು ತೊಡಿಸುವ ಕೆಲಸ ಕೆಲವರಿಂದ ಎಗ್ಗಿಲ್ಲದೆ ನಡೆಯುತ್ತಲೇ ಇದೆ.

ಸುಳ್ಳುಗಳನ್ನು ಉತ್ಪಾದಿಸುವ ಕಾರ್ಖಾನೆಯಂತಿರುವ, ಅದೇ ಕಾರಣಕ್ಕೆ ಕುಖ್ಯಾತವೂ ಆಗಿರುವ ವೆಬ್‌ಸೈಟ್‌ವೊಂದು ಇದೀಗ ಕನ್ನಡದಲ್ಲೂ ಕಾರ್ಯನಿರ್ವಹಿಸುತ್ತಿದೆ. ಅದರ ಪೂರ್ವಾಪರ ತಿಳಿಯದ ಅನೇಕ ಮಂದಿ ಅದರಲ್ಲಿ ಪ್ರಕಟವಾಗುವುದೆಲ್ಲವೂ ಸತ್ಯವೆಂದೇ ಭಾವಿಸಿ ಇತರರಿಗೂ ಹಂಚುತ್ತಿದ್ದಾರೆ. ಸತ್ಯದ ಮುಖವಾಡ ತೊಟ್ಟು ಬರುವ ಸುಳ್ಳುಗಳ ಕುರಿತು ವಿವೇಚಿಸುವ ಗೋಜಿಗೆ ಹೋಗದೆ, ಸುಳ್ಳನ್ನು ಶೇರ್‌ ಮಾಡುವ ಮೂಲಕವೇ ತಾವು ಸಮಾಜವನ್ನು ಎಚ್ಚರಿಸುತ್ತಿದ್ದೇವೆ ಎಂದು ಭ್ರಮಿಸುವ ಮನಸ್ಥಿತಿಯೊಂದು ಅದಾಗಲೇ ನಮ್ಮ ನಡುವೆ ಬೇರೂರಿದೆ. ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಹರಿದಾಡುವುದೆಲ್ಲ ವಾಸ್ತವವೇ ಎಂದು ನಂಬಿರುವ ಮತ್ತು ಆ ಪೋಸ್ಟುಗಳನ್ನೇ ಆಧಾರವಾಗಿಟ್ಟುಕೊಂಡು ತಾವು ಆರಾಧಿಸುವ ರಾಜಕೀಯ ನಾಯಕರ ಪರವಾಗಿ ವಕಾಲತ್ತಿಗಿಳಿಯುವ ಸಮೂಹವೊಂದು ನಮ್ಮ ಸಾರ್ವಜನಿಕ ಸಂವಾದವನ್ನೇ ನಿರ್ದೇಶಿಸುತ್ತಿರುವಂತೆ ಭಾಸವಾಗುತ್ತಿದೆ. ಜನಮನ್ನಣೆ ಗಳಿಸಿರುವ ವ್ಯಕ್ತಿಯೊಬ್ಬ ತನಗನಿಸುವುದನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗದಂತಹ ವಾತಾವರಣ ರೂಪುಗೊಳ್ಳುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಆಕ್ರಮಿಸಿಕೊಂಡಿರುವ ರಾಜಕೀಯ ಪಕ್ಷಗಳ ಬಾಲಬಡುಕರ ಕೊಡುಗೆ ಹೆಚ್ಚಿದೆ. ಭಿನ್ನ ನಿಲುವು ಹೊಂದುವುದು, ತಾವು ಆರಾಧಿಸುವ ನಾಯಕನ ವಿರುದ್ಧ ಸೊಲ್ಲೆತ್ತುವುದೇ ಮಹಾಅಪರಾಧವೆಂದು ಭಾವಿಸುವ ಇವರು, ಅಂತಹವರ ದನಿ ಅಡಗಿಸಲು ಅನುಸರಿಸುವ ಕಾರ್ಯತಂತ್ರಗಳು ಕೂಡ ಹೇಸಿಗೆ ಹುಟ್ಟಿಸುವಂತಿವೆ.   

ಕೆಲ ತಿಂಗಳುಗಳ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆಂದು ಬಿಂಬಿಸಲ್ಪಟ್ಟ ಮಾತುಗಳು ಮತ್ತದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಸೇರಿದಂತೆ ಇತ್ತೀಚೆಗಿನ ಕೆಲ ಬೆಳವಣಿಗೆಗಳನ್ನು ಗಮನಿಸಿದರೆ, ಈಗಾಗಲೇ ಉತ್ಪಾದಿಸಲ್ಪಟ್ಟಿರುವ ಸುಳ್ಳುಗಳಿಗೆ ಎದುರಾಗಿ ವಾಸ್ತವಾಂಶಗಳನ್ನು ನಿಲ್ಲಿಸುವ ಬದಲಿಗೆ, ಸುಳ್ಳಿಗೆ ಪ್ರತಿಯಾಗಿ ಮತ್ತಷ್ಟು ಹಸಿ ಸುಳ್ಳುಗಳನ್ನು ಸೃಷ್ಟಿಸಿ ಹರಡುವುದರಲ್ಲಿಯೇ ತಮ್ಮ ಗೆಲುವಿದೆ ಎಂದು ರಾಜಕೀಯ ಪಕ್ಷಗಳ ಡಿಜಿಟಲ್‌ ಕಾಲಾಳುಗಳು ಭಾವಿಸಿರುವುದು ವೇದ್ಯವಾಗುತ್ತದೆ. ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ಸುಳ್ಳಿನ ಪ್ರವಾಹದಲ್ಲಿ ನಮ್ಮೆಲ್ಲರನ್ನೂ ಮುಳುಗಿಸಲು ಹೊರಟವರ ಬೆನ್ನಿಗೆ ನಿಂತಿದ್ದ ರಾಜಕೀಯ ಪಕ್ಷ ಮತ್ತದರ ನಾಯಕರು, ಇದೀಗ ತಾವೇ ಹೆಣೆದ ಮಿಥ್ಯದ ಹುರುಳಿನಲ್ಲಿ ಸಿಲುಕಿ ಪೇಚಾಡುವಂತಾಗಿದೆ.

ರಾಜಕೀಯ ಲಾಭಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕಾದಾಟಕ್ಕಿಳಿಯುವ ವಿವಿಧ ಪಕ್ಷಗಳ ಕಾರ್ಯಕರ್ತರು, ತಮ್ಮವರ ಸಾಧನೆ ಬಿಂಬಿಸುವ ಮತ್ತು ವಿರೋಧಿಗಳ ವೈಫಲ್ಯಗಳನ್ನು ಬಣ್ಣಿಸುವ ಸಲುವಾಗಿ ಸೃಷ್ಟಿಸುವ ಪೋಸ್ಟುಗಳು ವಾಸ್ತವಕ್ಕೆ ಬೆನ್ನು ತೋರಿದಂತೆಲ್ಲ ನಾವು ಬಳಸುವ ಸಾಮಾಜಿಕ ಮಾಧ್ಯಮಗಳು ಮತ್ತು ಅಲ್ಲಿನ ಅಭಿವ್ಯಕ್ತಿ ವೇದಿಕೆ ಮತ್ತಷ್ಟು ವಿಶ್ವಾಸಾರ್ಹತೆ ಕಳೆದುಕೊಳ್ಳುವುದಲ್ಲದೇ, ಸುದ್ದಿ ಅಥವಾ ಮಾಹಿತಿಯೊಂದರ ಸತ್ಯಾಸತ್ಯತೆಯನ್ನು ಅರಿಯುವುದು ಹೇಗೆ ಎಂಬ ಗೋಜಲಿನಲ್ಲಿ ನಾವೆಲ್ಲರೂ ಸಿಲುಕುವ ಸಾಧ್ಯತೆಯೂ ಹೆಚ್ಚುವುದಲ್ಲವೇ?

ಸಾಮಾಜಿಕ ಮಾಧ್ಯಮದ ಮೂಲಕ ಬಿತ್ತಲ್ಪಡುವ ಅಸತ್ಯದ ಬೀಜಗಳು, ಅನಂತರ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಹುಲುಸಾಗಿ ಬೆಳೆದು ಸುಳ್ಳೇ ಸತ್ಯವಾಗಿ ಬಹುತೇಕರನ್ನು ತಲುಪಿ, ಕಡೆಗೆ ಅದರ ಅಸಲಿಯತ್ತು ಬಯಲಾದರೂ ಸತ್ಯ ಹೆಚ್ಚು ಜನರನ್ನು ತಲುಪದೆ ಹೋಗುವುದು ಪುನರಾವರ್ತನೆಯಾಗುತ್ತಲೆ ಇದೆ. ಸುಳ್ಳು ಹಬ್ಬಿದಷ್ಟು ವೇಗದಲ್ಲಿ ಚಲಿಸಲಾಗದೆ ವಾಸ್ತವ ಚಡಪಡಿಸುತ್ತಿದೆ. ಸುಳ್ಳಿನ ಸಾಮ್ರಾಜ್ಯದ ಅಧಿಪತಿಗಳಾಗಿ ಮೆರೆಯುತ್ತಿರುವವರನ್ನು ಮಣಿಸಲು ಮತ್ತದೇ ಮಿಥ್ಯದ ಅಸ್ತ್ರ ಬಳಸುವ ಬದಲಿಗೆ, ವಾಸ್ತವದ ಕಂದೀಲು ಹಿಡಿದು ಸೆಣೆಸುವ ಸಂಯಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪರವಾಗಿ ಕಾದಾಡಲು ಡಿಜಿಟಲ್‌ ಕಾಲಾಳುಗಳನ್ನು ನೇಮಿಸಲು ಇನ್ನಿಲ್ಲದ ಮುತುವರ್ಜಿ ತೋರುತ್ತಿರುವವರಿಂದ ನಿರೀಕ್ಷಿಸಲು ಸಾಧ್ಯವೇ?

ಹಿಂದೆ ದೇಶ ಆಳಿದವರು ಮಾಡಿದ್ದೆಲ್ಲವೂ ಅನಾಹುತ ಕಾರಿಯಾದುದೇ, ಅವರ ವೈಯಕ್ತಿಕ ಬದುಕು ಕೂಡ ಸರಿ ಇರಲಿಲ್ಲ. ಅಲ್ಲೂ ಅನೈತಿಕತೆಯೇ ಹಾಸಿ ಹೊದ್ದುಕೊಂಡಿತ್ತು ಅಂತೆಲ್ಲ ಬಿಂಬಿಸುವ ಸಲುವಾಗಿ ಸೃಷ್ಟಿಯಾದ ಪೋಸ್ಟುಗಳು ಮತ್ತು ಅವೆಲ್ಲ ವಾಸ್ತವವೆಂದು ಭಾವಿಸಿ ಇತರರಿಗೂ ಶೇರ್‌ ಮಾಡುವವರ ಎದುರು ವಾಸ್ತವಾಂಶಗಳೆಂಬ ಅರಿವಿನ ಮೋಂಬತ್ತಿ ಹಿಡಿದು ನಿಲ್ಲುವವರು ನಮಗೀಗ ಬೇಕಾಗಿದ್ದಾರೆ. ಈಗಾಗಲೇ ಇಂತಹ ಕೆಲ ಪ್ರಯತ್ನಗಳು ಆರಂಭವಾಗಿವೆಯಾದರೂ, ಸುಳ್ಳಿನ ಪ್ರವಾಹದೆದುರು ಈಜಲು ಮತ್ತಷ್ಟು ಕಸುವು ಬೇಕಾಗಿದೆ.

ಸುಳ್ಳು ಸುದ್ದಿಗಳನ್ನು ಉತ್ಪಾದಿಸುವುದರೊಂದಿಗೆ ಅಲಕ್ಷಿಸಲಷ್ಟೇ ಅರ್ಹವಾದಂತಹ ಕ್ಷುಲ್ಲಕ ವಿಚಾರಗಳನ್ನೇ ಮುನ್ನೆಲೆಗೆ ತಂದು, ಆ ಮೂಲಕವೇ ಒಂದು ರಾಜಕೀಯ ಪಕ್ಷ ಅಥವಾ ವ್ಯಕ್ತಿಯನ್ನು ಹೀಗಳೆಯಲು ಮುಂದಾಗುವುದು ಕೂಡ ಸಮಾಜದ ಮೇಲೆ ಬೀರಬಹುದಾದ ಅಡ್ಡಪರಿಣಾಮ ಕಳವಳಕಾರಿಯಾದುದೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ನಟಿ ಪ್ರಿಯಾಂಕ ಛೋಪ್ರಾ ಕುಳಿತಿದ್ದ ರೀತಿ ಮತ್ತು ತೊಟ್ಟ ದಿರಿಸು ಸೂಕ್ತವೇ?, ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಗೆ ವಿದ್ಯೆ ಕಲಿಸಿದ ಗುರು ನಿಂತಿದ್ದರೂ ಮೇಲೆದ್ದು ಗೌರವ ಸೂಚಿಸದೆ ಹೋದದ್ದು ಸರಿಯೇ?, ಆದಿಚುಂಚನಗಿರಿ ಮಠದ ಸ್ವಾಮೀಜಿ ಭೇಟಿಯಾದ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕಾಲು ಮೇಲೆ ಕಾಲು ಹಾಕಿ ಕುಳಿತದ್ದು ತಪ್ಪಲ್ಲವೇ? ಎಂಬ ಕುರಿತು ನಡೆದ ಚರ್ಚೆ, ಅವುಗಳಿಗೆ ಸಿಕ್ಕ ಪ್ರಾಮುಖ್ಯತೆಯನ್ನು ಗಮನಿಸಿದರೆ ಸಾಕು, ರಾಜಕೀಯ ಲಾಭ-ನಷ್ಟದ ಹಿನ್ನೆಲೆಯಲ್ಲಿ ಪ್ರವರ್ಧಮಾನಕ್ಕೆ ಬರುವ ಆದ್ಯತೆಗಳು ಎಂತಹವೆಂಬುದರ ಮನವರಿಕೆಯಾಗುತ್ತದೆ.

ತಾವು ಮಾಡಿರುವ ಘನಕಾರ್ಯಗಳ ಕುರಿತು ಜನರಿಗೆ ಮಾಹಿತಿ ಒದಗಿಸಲು ರಾಜಕಾರಣಿಗಳು ಯಾವ ಮಾಧ್ಯಮವನ್ನಾದರೂ ಬಳಸಿಕೊಳ್ಳಲಿ. ಆದರೆ, ವಿರೋಧಿಗಳನ್ನು ಹಣಿಯುವ ಮತ್ತು ಸ್ವವಿಜೃಂಭಣೆಯಲ್ಲಿ ಮುಳುಗೇಳುವ ಸಲುವಾಗಿ ಸತ್ಯದ ರೂಪದಲ್ಲಿ ಸುಳ್ಳುಗಳನ್ನು ಉತ್ಪಾದಿಸುವ ಡಿಜಿಟಲ್‌ ಬಾಲಬಡುಕರ ಪಡೆ ರೂಪಿಸುವುದಕ್ಕೆ ಬದಲಾಗಿ ವಾಸ್ತವಾಂಶಗಳೊಂದಿಗೆ ಎದುರಾಳಿಗಳನ್ನು ಮುಖಾಮುಖೀಯಾಗಲಿ.

ಸುಳ್ಳುಗಳು ಮತ್ತು ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಕಟ್ಟಲ್ಪಡುವ ಜನಪ್ರಿಯತೆಯ ಮಹಾಗೋಡೆ ಅದೆಷ್ಟೇ ಎತ್ತರಕ್ಕೇರಿದರೂ ಅದರ ಆಯುಸ್ಸು ಅತ್ಯಲ್ಪವೆನ್ನುವ ಅರಿವು ತಮ್ಮ ಪಕ್ಷದ ಐಟಿ ಸೆಲ್‌ಗ‌ಳನ್ನು ಬಲಪಡಿಸಲು ಮುತುವರ್ಜಿ ತೋರಿಸುತ್ತಿರುವ ಮತ್ತು ತಮ್ಮ ಹಿನ್ನಡೆಗೆ ಡಿಜಿಟಲ್‌ ಮಾಧ್ಯಮ ಬಳಕೆಯಲ್ಲಿ ತಾವು ಹಿಂದುಳಿದಿರುವುದೂ ಮುಖ್ಯ ಕಾರಣವೆಂಬ ಜಾnನೋದಯದೊಂದಿಗೆ ಪುಟಿದೇಳುತ್ತಿರುವವರಲ್ಲಾದರೂ ಬೇರೂರಲಿ. ಈಗಾಗಲೇ ಬಲಿಷ್ಠ ಡಿಜಿಟಲ್‌ ಪಡೆ ಕಟ್ಟಿ, ತೊಟ್ಟ ಮುಖವಾಡಗಳನ್ನು ಮತ್ತಷ್ಟು ವರ್ಣರಂಜಿತಗೊಳಿಸಿಕೊಂಡವರು, ಇದೀಗ ಆ ಬಣ್ಣ ಮಾಸಿ ಹೋಗದಂತೆ ಕಾಪಿಡಲು ಹೆಣಗುತ್ತಿರುವುದು ಕಣ್ಣೆದುರೇ ಇದೆ.

ವಿವೇಚಿಸುವ ಸಂಯಮವನ್ನೇ ಕಳೆದುಕೊಂಡವರಂತೆ ವರ್ತಿಸುವ ಬೆಂಬಲಿಗರ ಪಡೆ ರೂಪಿಸುವ ಮುಖೇನ ಸಾರ್ವಜನಿಕ ಸಂವಾದವನ್ನು ಇನ್ನಿಲ್ಲದಂತೆ ಹದಗೆಡಿಸಿದ ಪಕ್ಷವೊಂದರ ಕಾರ್ಯವೈಖರಿ ಉಳಿದವರಿಗೂ ಮಾದರಿಯಾಗದಿರಲಿ. ಭಿನ್ನ ನಿಲುವುಗಳನ್ನು ಗೌರವಿಸುವ ಮತ್ತು ಭಿನ್ನ ದನಿಗಳನ್ನು ಆಲಿಸುವ ಸಂಯಮವನ್ನು ಬಿತ್ತುವ ಕಾರ್ಯಸೂಚಿಯ ಪರವಾಗಿ ದುಡಿಯುವ ಪಡೆ ಕಟ್ಟುವವರು ಯಾರು?

ಎಚ್‌.ಕೆ. ಶರತ್‌

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ