ಚಿಲ್ಲರೆ ಕ್ಷೇತ್ರವ ಚಿಲ್ಲರೆಯಂತೆ ನೋಡದಿರಿ

Team Udayavani, Jan 10, 2020, 6:15 AM IST

ಜಾಗತೀಕರಣದ ಈ ಯುಗದಲ್ಲಿ ರಾಷ್ಟ್ರಗಳು ತಮ್ಮ ದೇಶೀಯ ಮಾರುಕಟ್ಟೆಯನ್ನು ಜಾಗತಿಕ ಮಾರುಕಟ್ಟೆಗೆ ತೆರೆದುಕೊಳ್ಳುವುದು ಸಾಮಾನ್ಯ ವಿಷಯ ಮತ್ತು ಅನಿವಾರ್ಯ ಕೂಡ. ದೇಶದ ಚಿಲ್ಲರೆ ಕ್ಷೇತ್ರವೂ ಹೊರತಲ್ಲ. ಚಿಲ್ಲರೆ ಕ್ಷೇತ್ರ ಎಂದರೆ ಸಣ್ಣ ಪ್ರಮಾಣದಲ್ಲಿ ವಸ್ತುಗಳನ್ನು ಕೊಳ್ಳುವ ಮಾರುಕಟ್ಟೆ. ನಮಗೆ ದಿನನಿತ್ಯಕ್ಕೆ ಬೇಕಾಗುವ ಅವಶ್ಯಕ ವಸ್ತುಗಳನ್ನು ಸಣ್ಣ ಪ್ರಮಾಣದಲ್ಲಿ ಕಿರಾಣಿ ಅಂಗಡಿ ಅಥವಾ ಗೂಡಂಗಡಿಯಿಂದ ಕೊಂಡುಕೊಳ್ಳುವುದು. ಈ ವ್ಯವಹಾರವೇ ಚಿಲ್ಲರೆ ವ್ಯವಹಾರ. ಈ ಕ್ಷೇತ್ರವೇ ಚಿಲ್ಲರೆ ಕ್ಷೇತ್ರ.ಈ ಕ್ಷೇತ್ರದಲ್ಲಿ ಕಿರಾಣಿ ಅಂಗಡಿಗಳದ್ದೇ ಕಾರುಬಾರು. ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಸ್ಥರದ್ದೇ ಸಿಂಹಪಾಲು.

ಚಿಲ್ಲರೆ ಕ್ಷೇತ್ರದಲ್ಲಿನ ಉದಾರೀಕರಣಾ ನೀತಿಯ ಕಾರಣದಿಂದಾಗಿ ದೊಡ್ಡ ದೊಡ್ಡ ಮಾಲ್‌ಗ‌ಳು, ಸೂಪರ್‌ ಬಜಾರ್‌ಗಳು ನಮ್ಮ ದೇಶದಲ್ಲಿ ಬೆಳೆದು ಬಂದಿವೆ. ಬಳಕೆದಾರರ ಕೊಳ್ಳುವ ಮನೋಭಾವವೂ ಸಹ ಬದಲಾಗುತ್ತಿದೆ. ಈಗಿನ ಬಳಕೆದಾರರದ್ದು ಕೊಳ್ಳುಬಾಕ ಸಂಸ್ಕೃತಿ. ಅಂಗಡಿಯಲ್ಲಿದ್ದದ್ದನ್ನೆಲ್ಲ ಕೊಳ್ಳುವುದು. ಅದರ ಉಪಯೋಗದ ಬಗ್ಗೆ ಆಲೋಚಿಸುವುದಿಲ್ಲ. ನಮ್ಮ ದೇಶದ ಜನಸಂಖ್ಯೆಯಲ್ಲಿ ಹೆಚ್ಚಿನವರು ಯುವಜನರು. ಈ ವರ್ಗವು ತಮಗೆ ಬೇಕಾದ ಎಲ್ಲಾ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ/ ಆನ್‌ಲೈನ್‌ನಲ್ಲಿ ಕೊಳ್ಳಬಯಸುವವ ರಾಗಿರುತ್ತಾರೆ. ವಾರಾಂತ್ಯದಲ್ಲಿ ಮಾಲ್‌ಗ‌ಳಿಗೆ ಭೇಟಿ ನೀಡುವುದು ಒಂದು ಅಭ್ಯಾಸವಾಗಿ ಬಿಟ್ಟಿದೆ. ಮಾಲ್‌ ಸಂಸ್ಕೃತಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಸುಮಾರು ಒಂದು ದಶಕದ ಮೊದಲು ಈ ಕ್ಷೇತ್ರಕ್ಕೆ ಬಹುರಾಷ್ಟ್ರೀಯ ಕಂಪೆನಿಗಳು ಲಗ್ಗೆ ಇಡುವಾಗ ಸಣ್ಣ ವ್ಯಾಪಾರಿಗಳಲ್ಲಿ ಒಂದು ರೀತಿಯ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ದೊಡ್ಡ ದೊಡ್ಡ ಮಾಲ್‌ಗ‌ಳು, ಸೂಪರ್‌ ಬಜಾರ್‌ಗಳು ದೇಶದಲ್ಲಿ ಬೆಳೆದು ಬಂದ್ರೆ ಚಿಲ್ಲರೆ ವ್ಯಾಪಾರಸ್ಥರ ಸ್ಥಿತಿ ಏನಾಗಬಹುದು? ಚಿಲ್ಲರೆ ಕ್ಷೇತ್ರಕ್ಕೆ ಭವಿಷ್ಯವೇ ಇಲ್ಲ. ಗೂಡಂಗಡಿಗಳು, ಸಣ್ಣ ವ್ಯಾಪಾರಿಗಳು, ರಸ್ತೆ ಬದಿ ವ್ಯಾಪಾರ ಮಾಡುವವರೆಲ್ಲಾ ದಿಕ್ಕಾಪಾಲಾಗಬಹುದೆಂಬ ಆತಂಕವಿತ್ತು. ಆದರೆ ಈ ಆತಂಕ ಸುಳ್ಳಾಗಿದೆ. ಮಾಲ್‌ಗ‌ಳು ಬಂದಿರಬಹುದು. ಆನ್‌ಲೈನ್‌ ವ್ಯಾಪಾರ ಜೋರಾಗಿ ನಡೆಯುತ್ತಿರಬ ಹು ದು. ಅದೇ ರೀತಿ ಸಣ್ಣ ವ್ಯಾಪಾರಿಗಳೂ ವ್ಯಾಪಾರದಲ್ಲಿ ಹಿಂದೆ ಬಿದ್ದಿಲ್ಲ. ನಮ್ಮ ಆತಂಕವಂತೂ ದೂರವಾಗಿದೆ. ಸುಮಾರು 12 ಮಿಲಿಯನ್‌ ಚಿಲ್ಲರೆ ಅಂಗಡಿಗಳು ದೇಶದ ಉದ್ದಗಲಗಳಲ್ಲಿ ಹರಡಿಕೊಂಡಿವೆ. ವಾರದ ಸಂತೆ ಗ್ರಾಹಕರಿಗೆ ಅತ್ಯಂತ ಪ್ರಿಯವಾದ ಶಾಪಿಂಗ್‌ ಸೆಂಟರ್‌, ಇವತ್ತಿಗೂ ಅತ್ಯಂತ ಆಕರ್ಷಣೀಯ ಕೇಂದ್ರ. ಈ ಚಿಲ್ಲರೆ ವ್ಯಾಪಾರ ಸೂಪರ್‌ ಮಾರ್ಕೆಟ್‌ಗಳ ಹೊರತಾಗಿಯೂ ತಮ್ಮ ಆಕರ್ಷಣೆಯನ್ನು ಕಳೆದು ಕೊಳ್ಳದಿರುವುದು ವಿಶೇಷ ಸಂಗತಿ.

ಚಿಲ್ಲರೆ ಕ್ಷೇತ್ರವು ಏಕೆ ಇನ್ನೂ ನಿತ್ಯ ಹರಿದ್ವರ್ಣ ಕ್ಷೇತ್ರವಾಗಿ ಉಳಿದಿದೆ? ಕಾರಣಗಳು ಹಲವಾರು. ದಿನಬಳಕೆ ವಸ್ತುಗಳು ಸಣ್ಣ ಪ್ರಮಾಣದಲ್ಲಿ ಬೇಕೆಂದ ಕೂಡಲೇ ನಮಗೆ ನೆನಪಾಗುವುದು ನಮ್ಮ ಮನೆಗೆ ಹತ್ತಿರವಿರುವ ಅಂಗಡಿ. ಈ ಚಿಲ್ಲರೆ ಅಂಗಡಿಗಳು ಸ್ಥಳೀಯ ಜನರಿಗೆ/ ಬಳಕೆದಾರರಿಗೆ ಬೇಕಾಗುವ ನಿತ್ಯ ಉಪಯೋಗಿ ವಸ್ತುಗಳನ್ನು ತಲುಪಿಸುವವರು. ಸ್ಥಳೀಯ ಬಳಕೆದಾರರ ಬೇಕುಬೇಡಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿರುವವರು. ಅದೇ ರೀತಿ ಬಳಕೆದಾರರಿಗೂ ಈ ಚಿಲ್ಲರೆ ಅಂಗಡಿಗಳ ಮೇಲೆ ಎಲ್ಲಿಲ್ಲದ ಭರವಸೆ. ಜೊತೆಗೆ ಅಗತ್ಯವಿರುವ ವಸ್ತುಗಳನ್ನು ನಮ್ಮ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡುವವರು. ಇನ್ನು ಕೆಲವರು ಆನ್‌ ಲೈನ್‌ನಲ್ಲಿ ಬೆಲೆ ತಿಳಿದುಕೊಂಡು ಚಿಲ್ಲರೆ ಅಂಗಡಿಯಲ್ಲಿ ಮತ್ತೆ ವಿಚಾರಿಸಿ ಕಡಿಮೆ ಬೆಲೆಗೆ ವಸ್ತುಗಳನ್ನು ಪಡೆಯುವವರು. ಈ ವ್ಯವಹಾರದಲ್ಲಿ ಬಳಕೆದಾರನ ಮತ್ತು ಮಾರಾಟಗಾರನ ಮಧ್ಯೆ ನೇರ ಸಂಬಂಧವಿದೆ. ಜೊತೆಗೆ ಸಾಲದ ವ್ಯವಸ್ಥೆಯನ್ನು ಬಳಕೆದಾರರಿಗೆ ನೀಡುವವರು. ಮಾಸಾಂತ್ಯದಲ್ಲಿ ಹಣಕೊಟ್ಟರೆ ಆಯಿತು. ಇನ್ನು ಕೆಲವು ಕಿರಾಣಿ ಅಂಗಡಿಯವರು ವಾಟ್ಸಪ್‌ನಲ್ಲಿ ಬಳಕೆದಾರರಿಗೆ ಬೇಕಾಗುವ ವಸ್ತುಗಳ ವಿವರವನ್ನು ಪಡೆದುಕೊಂಡು, ಆ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವವರಿದ್ದಾರೆ. ಕ್ಯಾಶ್‌ ಬದಲು ಹಣವನ್ನು ತಮ್ಮ ಬ್ಯಾಂಕು ಖಾತೆಗೆ ಕಳುಹಿಸಿ ಎನ್ನುವ ಮಟ್ಟಿಗೆ ಸೇವೆಯನ್ನು ನೀಡುವವರಿದ್ದಾರೆ. ನಾವಂತೂ ಈ ಚಿಲ್ಲರೆ ಅಂಗಡಿಗಳನ್ನು ಎಷ್ಟು ಅವಲಂಬಿಸಿದ್ದೇವೆಂದರೆ ಈ ಚಿಲ್ಲರೆ ಕ್ಷೇತ್ರವೆಂಬುದು ಅನುಕೂಲಕರ ಅಂಗಡಿ ಎಂದರೂ ತಪ್ಪಿಲ್ಲ. ದೊಡ್ಡ ಮಟ್ಟದ ವ್ಯಾಪಾರ ಮಾಡಲಿಕ್ಕೆ ರಿಯಲ್‌ ಎಸ್ಟೇಟ್‌ಗೆ ತಗಲುವ ವೆಚ್ಚ ತಡೆಗೋಡೆಯಾಗಿ ಪರಿಣಮಿಸಿವೆ. ವ್ಯಾಪಾರಕ್ಕೆ ಬೇಕಾಗುವ ಸುಸಜ್ಜಿತ ಕೋಣೆ/ಕಟ್ಟಡ ಪಡೆಯುವುದು ಕಷ್ಟ. ಬಾಡಿಗೆ ಹೆಚ್ಚು. ದೊಡ್ಡ ಮಟ್ಟದ ಹೂಡಿಕೆ ಅಗತ್ಯ. ಈ ಎಲ್ಲಾ ವೆಚ್ಚದ ಪರಿಣಾಮ ಉದ್ಯಮ ನಿರ್ವಹಣೆ ಕಷ್ಟವಾಗುತ್ತದೆ. ವಸ್ತುಗಳ ಬೆಲೆ ಹೆಚ್ಚುತ್ತದೆ. ಲಾಭಾಂಶ ಇಳಿಯುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ ಚಿಲ್ಲರೆ ಅಂಗಡಿ. ದೊಡ್ಡ ಮಟ್ಟದ ವಸ್ತುಗಳ ಸಂಗ್ರಹ ಅಗತ್ಯವಿಲ್ಲ. ರಿಯಲ್‌ ಎಸ್ಟೇಟ್‌ಗೆ ಹಣ ಹೂಡುವ ಅವಶ್ಯಕತೆ ಇಲ್ಲ. ಈ ವ್ಯವಹಾರ ಪ್ರಾರಂಭಿಸುವುದು ಬಹಳ ಸುಲಭ. ಬಳಕೆದಾರನ ಅಭಿರುಚಿ ವ್ಯಕ್ತಿಯಿಂದ ವ್ಯಕ್ತಿಗೆ, ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಾ ಹೋಗುತ್ತದೆ. ಬಳಕೆದಾರನ ಸಾಮಾಜಿಕ – ಸಾಂಸ್ಕೃತಿಕ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಮಾಲ್‌ ಸಂಸ್ಕೃತಿಗೆ ಸಾಧ್ಯವಿಲ್ಲ. ಅನೇಕ ಬಾರಿ ನಾವು ಯಾವ ವಸ್ತುಗಳನ್ನು ಕೊಳ್ಳಬೇಕೆಂದು ಕಿರಾಣಿ ಅಂಗಡಿಯವನ ಸಲಹೆಯ ಮೇಲೆ ಅವಲಂಬಿಸಿದೆ. ಇದೇ ಕಿರಾಣಿ/ಗೂಡಂಗಡಿಗಳ ಯಶಸ್ಸಿನ ಗುಟ್ಟು ಎಂದರೆ ತಪ್ಪಾಗಲಾರದು.

ನಿರ್ಲಕ್ಷ್ಯ ಸಲ್ಲದು
ಚಿಲ್ಲರೆ ಅಂಗಡಿಗಳು ಚಿಲ್ಲರೆ ಮಾರುಕಟ್ಟೆಯ ಬೆನ್ನೆಲುಬು. ಈ ಅಂಗಡಿಗಳ ಅವ ಸಾನ ಸಾಧ್ಯತೆ ಇಲ್ಲವೇ ಇಲ್ಲ. ಈ ಕ್ಷೇತ್ರವನ್ನು ನಿರ್ಲಕ್ಷಿಸುವಂತಿಲ್ಲ. ನೋಟು ಅಮಾನ್ಯತೆಯ ತರುವಾಯ ಪಾಯಿಂಟ್‌ ಆಫ್ ಸೇಲ್‌ ಮೆಶಿನ್‌ ಮೂಲಕ ಡಿಜಿಟಲ್‌ ವ್ಯವಹಾರಕ್ಕೆ ತೊಡಗಿಸಿಕೊಂಡು ಈ ಕ್ಷೇತ್ರ ಈಗ ಆನ್‌ಲೈನ್‌ ಮೂಲಕವೂ ವ್ಯವಹಾರ ನಡೆಸುವಷ್ಟರ ಮಟ್ಟಿಗೆ ಬೆಳೆದಿದೆ. ಫಿಂಚ್‌ ಕಂಪೆನಿಗಳಾದ ಪೇಟಿಎಂ, ಪೇಫೋನ್‌, ಗೂಗಲ್‌ ಪೇ ಕಂಪೆನಿಗಳ ನಡುವೆ ಚಿಲ್ಲರೆ ಅಂಗಡಿ ಮತ್ತು ಬಳಕೆದಾರನ ಮಧ್ಯೆ ಪಾವತಿ ಸೇತುವೆಯಾಗಿ ನಿರ್ವಹಿಸಲು ಪೈಪೋಟಿ ನಡೆಯುತ್ತಿವೆ. ಇದರಲ್ಲಿ ಅರ್ಧ ಕಿರಾಣಿ ಅಂಗಡಿಗಳು ವಿತ್ತೀಯ ಸೇರ್ಪಡೆಯ ವೇಗವನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಡಿಜಿಟಲ್‌ ಕ್ರಾಂತಿ ಕಿರಾಣಿ ಅಂಗಡಿಗಳಿಂದ ಸಾಧ್ಯ. ರಿಲಯನ್ಸ್‌, ಮೆಟ್ರೊ, ಅಮೆಜಾನ್‌ ಕಂಪೆನಿಗಳು ಸಹ ಕಿರಾಣಿ ಸ್ಟೋರ್‌ಗಳನ್ನು ಬಳಕೆದಾರರ ದಿನನಿತ್ಯಕ್ಕೆ ಬೇಕಾದ ಸರಕುಗಳನ್ನು ಪೂರೈಸಲು ಅವಲಂಬಿಸಿವೆ. ಈ ಕಿರಾಣಿ ಅಂಗಡಿಗಳು ಹೊಸ ಹೊಸ ಆವಿಷ್ಕಾರದೊಂದಿಗೆ ಸ್ಥಳೀಯ ಜನರಿಗೆ ಅನುಕೂಲಕರ ಸೇವೆಯನ್ನು ನೀಡುತ್ತಾ ಮಾರುಕಟ್ಟೆಯಲ್ಲಿ ಬಳಕೆದಾರನ ಕಣ್ಣುಗಳಿಗೆ ಇನ್ನೂ ಆಕರ್ಷಣೆಯ ಕೇಂದ್ರವಾಗಿರುವುದು ನಿಜಕ್ಕೂ ಪ್ರಶಂಸನೀಯ ಸಂಗತಿ.

ಉದಾರೀಕರಣದ ಆರ್ಥಿಕ ನೀತಿಯ ಅಳವಡಿಕೆ ಅನಂತರ ಈ ಕ್ಷೇತ್ರದ ಬೆಳವಣಿಗೆ ನಿಜಕ್ಕೂ ಸಂಭ್ರಮಿಸುವಂತಹುದು. ಬಹುರಾಷ್ಟ್ರೀಯ ಕಂಪೆನಿಗಳು/ಮಾಲ್‌ಗ‌ಳು ಈ ಕ್ಷೇತ್ರವನ್ನು ಬಳಕೆದಾರರ ಮನೆ ಬಾಗಿಲಿಗೆ ಕೊಂಡೊಯ್ಯುತ್ತೇವೆಂಬ ವಾದವೂ ಹುಸಿಯಾಗಿದೆ. ಸೂಪರ್‌ ಮಾರ್ಕೆಟ್‌, ಮಾಲ್‌ಗ‌ಳು ಬರಲಿ, ಆನ್‌ಲೈನ್‌ ವ್ಯಾಪಾರ ಬೆಳೆಯಲಿ ಆದರೆ ಕಿರಾಣಿ ಅಂಗಡಿಗಳು/ಗೂಡಂಗಡಿಗಳು ಇರಲಿ.

-ಡಾ| ರಾಘವೇಂದ್ರ ರಾವ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ