ಉಗ್ರ ದಾಳಿ ಮುನ್ನೆಲೆಗೆ ತಂದ ಸವಾಲುಗಳು

Team Udayavani, Feb 23, 2019, 12:30 AM IST

ಜವಾನರು ಹುತಾತ್ಮರಾದರೆಂದು ಕೆಲವು ಅವಿವೇಕಿಗಳು ಪಟಾಕಿ ಸಿಡಿಸಿ, ಪಾಕ್‌ ಪರ ಘೋಷಣೆ ಕೂಗಿ ಸಂಭ್ರಮಿಸಿದರೆ, ಮತ್ತೆ ಕೆಲವು ವಿಚಾರವಂತರು ಸೈನಿಕ ವಿರೋಧಿ ಮಾನಸಿಕತೆಯ ಪ್ರಚೋದನಾತ್ಮಕ ಚಿಂತನೆ ಹರಿಬಿಟ್ಟರು. ಖ್ಯಾತ ವಕೀಲರೋರ್ವರು ಸೇನೆಯಿಂದಾದ ಅನ್ಯಾಯ, ಅತ್ಯಾಚಾರಕ್ಕೆ ಪ್ರತೀಕಾರವಾಗಿ ಈ ಘಟನೆ ನಡೆಯಿತು ಎಂಬ ವಾದ ಮಾಡಿದರೆ, ಟಿವಿ ಶೋಗಳಲ್ಲಿ ರಂಜಿಸಿ ಜನಮನ ಗೆದ್ದು, ಅಧಿಕಾರದ ಅಮಲಿನಲ್ಲಿರುವ ಮಾಜಿ ಕ್ರಿಕೆಟಿಗ ಉಗ್ರವಾದಕ್ಕೆ ದೇಶ-ಧರ್ಮವಿಲ್ಲ, ಪಾಕಿಸ್ತಾನವನ್ನು ದೂರಬೇಡಿ ಎಂದು ವಿನಂತಿ ಮಾಡಿಕೊಂಡರು. 

ಜಮ್ಮು – ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರವಾದಿಯೋರ್ವ ನಡೆಸಿದ ಭೀಕರ ದಾಳಿಯಲ್ಲಿ ನಲವತ್ತಕ್ಕಿಂತ ಹೆಚ್ಚು  ಯೋಧರು ಹುತಾತ್ಮರಾದ ಆಘಾತಕಾರಿ ಘಟನೆಗೆ ಸಂಪೂರ್ಣ ದೇಶವೇ ಕಂಬನಿ ಮಿಡಿಯಿತು. ದೇಶದೆಲ್ಲೆಡೆ ಜನಸಾಮಾನ್ಯರು ಅಗಲಿದ ಯೋಧರಿಗೆ ಸಭೆ-ಮೊಂಬತ್ತಿ ಮಾರ್ಚ್‌ ನಡೆಸಿ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಿದರು. ಉಗ್ರವಾದಿಗಳ ವಿರುದ್ಧ ಮತ್ತು ಉಗ್ರವಾದಕ್ಕೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಆಕೋಶ ವ್ಯಕ್ತಪಡಿಸಿ ತಕ್ಕ ಪಾಠ ಕಲಿಸುವಂತೆ ಸರಕಾರವನ್ನು ಒತ್ತಾಯಿಸಿದರು. 

ಆದರೆ ಈ ಎಲ್ಲದರ ನಡುವೆಯೂ ಕೆಲವು ಅಪಸ್ವರ ಕಾಣಿಸಿಯೇ ಬಿಟ್ಟವು. ಜವಾನರು ಹುತಾತ್ಮರಾದರೆಂದು ಕೆಲವು ಅವಿವೇಕಿಗಳು ಪಟಾಕಿ ಸಿಡಿಸಿ, ಪಾಕಿಸ್ತಾನದ ಪರ ಘೋಷಣೆ ಕೂಗಿ ಸಂಭ್ರಮಿಸಿದರೆ, ಮತ್ತೆ ಕೆಲವು ವಿಚಾರವಂತರು ಸೈನಿಕ ವಿರೋಧಿ ಮಾನಸಿಕತೆಯ ಪ್ರಚೋದನಾತ್ಮಕ ಚಿಂತನೆ ಹರಿಯಬಿಟ್ಟರು. ಖ್ಯಾತ ವಕೀಲರೋರ್ವರು ಸೇನೆಯಿಂದಾದ ಅನ್ಯಾಯ, ಅತ್ಯಾಚಾರಕ್ಕೆ ಪ್ರತೀಕಾರವಾಗಿ ಈ ಘಟನೆ ನಡೆಯಿತು ಎಂಬ ವಾದ ಮಂಡನೆ ಶುರು ಮಾಡಿದರೆ, ಟಿವಿ ಶೋಗಳಲ್ಲಿ ರಂಜಿಸಿ ಜನಮನ ಗೆದ್ದು, ಅಧಿಕಾರದ ಅಮಲಿನಲ್ಲಿರುವ ಮಾಜಿ ಕ್ರಿಕೆಟಗ ಉಗ್ರವಾದಕ್ಕೆ ದೇಶ-ಧರ್ಮವಿಲ್ಲ, ಪಾಕಿಸ್ತಾನವನ್ನು ದೂರಬೇಡಿ ಎಂದು ವಿನಂತಿ ಮಾಡಿಕೊಂಡರು. ರಾಜಕೀಯ ಪ್ರವೇಶಕ್ಕಾಗಿ ವೇದಿಕೆ ಸಿದ್ಧಪಡಿಸುತ್ತಿವ ದಕ್ಷಿಣ ಭಾರತದ ಓರ್ವ ಮೇರು ನಟ ಹಿಂದೆ ಮುಂದೆ ಯೋಚಿಸದೇ, ಕಾಶ್ಮೀರದ ಕುರಿತಾದ ಭಾರತದ ಏಳು ದಶಕಗಳ ನಿಲುವಿನ ಅರಿವಿಲ್ಲದವರಂತೆ ಭಾರತ ಸರಕಾರ ಜಮ್ಮು ಕಾಶ್ಮೀರದಲ್ಲಿ ಜನಮತ ಸರ್ವೇಕ್ಷಣೆ ನಡೆಸಲು ಏಕೆ ಹಿಂಜರಿಯುತ್ತಿದೆ ಎಂದು ಪ್ರಶ್ನಿಸಿದರು.

ಇತಿಮಿತಿಯಿಲ್ಲದ ಸ್ವಾತಂತ್ಯ
ಹೊರಗಿನ ಶತ್ರುಗಳಿಗಿಂತ ಒಳಗಿನ ಹಿತ ಶತ್ರುಗಳೇ ಅಧಿಕ ಅಪಾಯಕಾರಿ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ. ವಿವಿಧತೆಯಲ್ಲಿ ಏಕತೆಯ ಪ್ರತೀಕವಾಗಿ ವಿಶ್ವದಾದ್ಯಂತ ಮನ್ನಣೆ ಗಳಿಸಿರುವ ಭಾರತ ಒಂದು ರಾಷ್ಟ್ರವಾಗಿ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕಾದರೆ ಆಂತರಿಕ ಶತ್ರುಗಳನ್ನು ಮಟ್ಟ ಹಾಕಲೇಬೇಕು. ದೇಶದ ಏಕತೆಗಾಗಿ ನಮ್ಮ ಸೈನಿಕರು ಸೇನೆಗೆ ಸೇರುವ ದಿನದಂದು ತಮ್ಮೆಲ್ಲಾ ಸ್ವಾತಂತ್ರ್ಯಕ್ಕೆ ಪ್ರತಿಜ್ಞಾ ವಿಧಿಯ ಪರೇಡ್‌ ಮೈದಾನದಲ್ಲಿ ಎಳ್ಳು ನೀರು ಬಿಡಬೇಕಾಗುತ್ತದಾದರೆ, ದೇಶ ಹಿತ, ನೆಲದ ಸ್ಥಾಪಿತ ನೀತಿ-ನಿಯಮಗಳಿಗೆ ವಿರುದ್ಧವಾಗಿ, ಮನಸೋ ಇಚ್ಛೆ ಮಾತನಾಡುವ ನಾಗರಿಕರ ಅಪರಿಮಿತ ಸ್ವಾತಂತ್ರ್ಯಕ್ಕೆ ಒಂದಷ್ಟು ಮಿತಿ ಹೇರಲು ಸಾಧ್ಯವಿಲ್ಲವೇ? ರಾಷ್ಟ್ರಹಿತದ ವಿಶಾಲ ಉದ್ದೇಶಕ್ಕಾಗಿ ಶಿಸ್ತಿನ ಕಟ್ಟುಪಾಡಿಗೊಳಗಾಗಿ ಆದೇಶವನ್ನು ಧಿಕ್ಕರಿಸಲಾಗದ, ವೈಯ್ಯಕ್ತಿಕ ಸುಖ, ಲಾಭಕ್ಕಾಗಿ ದನಿ ಏರಿಸಲಾಗದ, ಅನ್ಯಾಯಕ್ಕೊಳಗಾದರೂ ಪ್ರತಿಭಟಿಸುವ ಸ್ವಾತಂತ್ರ್ಯವಿಲ್ಲದ, ತನ್ನಿಚ್ಛೆಯಂತೆ ಸೇನೆಯ ಬ್ಯಾರಕನ್ನೂ ಬಿಟ್ಟು ಹೊರಬರಲಾರದ ಸ್ಥಿತಿಯಲ್ಲಿ ಸೈನಿಕರು ಇರಬೇಕಾಗುತ್ತದೆ. ಸೈನ್ಯ ಸೇವೆಯಲ್ಲಿರುವ ವ್ಯಕ್ತಿಯ ಎಲ್ಲಾ ಮೂಲಭೂತ ಸ್ವಾತಂತ್ರ್ಯ ಕವಾಟಿನೊಳಗಡೆ ಬಂದ್‌ ಆಗಿರುವಾಗ ರಾಷ್ಟ್ರ ಹಿತದ ವಿರುದ್ಧ ಮಾತನಾಡುವ ನಾಗರಿಕರ ವಾಕ್‌ ಸ್ವಾತಂತ್ರ್ಯಕ್ಕೇಕೆ ಒಂದಷ್ಟು ಇತಿಮಿತಿಗಳನ್ನು ಹೇರಬಾರದು? ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಬರುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬಹುದಾದರೆ, ವಿಶೇಷ ಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರ ಮೇಲೆ ಕಲ್ಲು ತೂರಾಟದ ಮೂಲಕ ಅಡ್ಡಿಪಡಿಸುವ, ಬೆದರಿಸುವ ಪೊಗರು ತೋರುವವರ ವಿರುದ್ಧ ಕನಿಕರ ಏಕೆ?

ತಪಾಸಣೆಗೂ ಅಡ್ಡಿ
ಪುಲ್ವಾಮಾದಲ್ಲಿ 350 ಕೆಜಿ ಯಷ್ಟು ಭಾರೀ ಪ್ರಮಾಣದ ಸ್ಫೋಟಕ ಹೇಗೆ ಬಂತು ಎಂದು ಪಾಕಿಸ್ತಾನ ಸವಾಲೆಸೆಯುತ್ತಿದೆ ಮತ್ತು ಅದೇ ಆಧಾರದಲ್ಲಿ ತನ್ನ ಕೈವಾಡವಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದೆ. ವಾಸ್ತವ ಸ್ಥಿತಿಯ ಅರಿವಿಲ್ಲದ ಕೆಲವು ಬುದ್ಧಿಜೀವಿಗಳು ನಮ್ಮದೇ ನೆಲದಲ್ಲಿ, ನಮ್ಮವನೇ ಆದ ಸ್ಥಳೀಯ ಯುವಕ, ಇಲ್ಲಿಯದೇ ವಾಹನ ಬಳಸಿ ದಾಳಿ ನಡೆಸಿರುವುದಕ್ಕೆ ಸೇನೆಯ ವೈಫ‌ಲ್ಯವೇ ಕಾರಣ ಎನ್ನುವ ವಿಶ್ಲೇಷಣೆ ಮಾಡುತ್ತಿದ್ದಾರೆ. ನಿಸ್ಸಂಶಯವಾಗಿಯೂ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಡಿ. ಎಸ್‌. ಹುಡ್ಡಾರವರು ಎಂದಂತೆ ಪರಿಸ್ಥಿತಿ ಸುಧಾರಿಸುತ್ತಿದೆ ಎನ್ನುವ ನಮ್ಮ ಧೋರಣೆಯೇ ಪುಲ್ವಾಮಾ ದುರಂತಕ್ಕೆ ಕಾರಣ. ಕಾಶ್ಮೀರ ಕಣಿವೆಯಲ್ಲಿ ಮೂರು ದಶಕಗಳಿಂದ ನಡೆಯುತ್ತಿರುವ ಉಗ್ರವಾದ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಉಗ್ರವಾದಿಗಳ ಬಲಗುಂದಿದಂತೆ ಭಾಸವಾದಾಗಲೆಲ್ಲಾ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸರಕಾರ, ಮಾನವ ಹಕ್ಕು ವಕಾಲತ್ತು ನಡೆಸುವ ಸಂಘಟನೆಗಳು ಸೇನೆಯ ಹಿಂತೆಗೆತ, ಚೆಕ್‌ಪೋಸ್ಟ್‌ಗಳ ಎತ್ತಂಗಡಿಗಾಗಿ ಅಭಿಯಾನ ಶುರು ಮಾಡುತ್ತವೆ. ಪರಿಸ್ಥಿತಿ ಕೊಂಚ ತಿಳಿಯಾದೊಡನೆ ತಪಾಸಣೆಯ ಹೆಸರಿನಲ್ಲಿ ನಾಗರಿಕರಿಗೆ ತೊಂದರೆ ಕೊಡಲಾಗುತ್ತಿದೆ ಎನ್ನುವ ಆರೋಪದೊಂದಿಗೆ ಸೇನೆಯ ಸಾಮಾನ್ಯ ತಪಾಸಣಾ ಕಾರ್ಯಕ್ಕೆ (routine checking) ಅಡ್ಡಿ ಮಾಡಲಾಗುತ್ತದೆ. ಪ್ರತಿ ದಿನ ಬೆಳಿಗ್ಗೆ ಸೇನೆಯ ವಾಹನಗಳ ಕಾಫಿಲದ(convoy) ಸಂಚಾರಕ್ಕೆ ಅನುವು ಮಾಡಿಕೊಡುವ ಮೊದಲ ROP ಯ (Road Opening Party)ಮೂಲಕ ರಸ್ತೆಯನ್ನು ತಪಾಸಣೆ ಮಾಡುವ ಕ್ರಮ ಕಾಶ್ಮೀರದಲ್ಲಿ ಇಂದಿಗೂ ಇರುವುದರಿಂದ ಮತ್ತು ಚೆಕ್‌ಪೋಸ್ಟ್‌ ತಪಾಸಣೆಗೆ ಕಡಿವಾಣ ಬಿದ್ದಿದ್ದರಿಂದ ರಸ್ತೆಗಳಲ್ಲಿ ಸ್ಫೋಟಕ ಹುದುಗಿಸಿ ಸ್ಫೋಟಿಸುವುದಕ್ಕಿಂತ ಕಾರ್‌ ಬಾಂಬ್‌ ಸ್ಫೋಟವನ್ನು ಉಗ್ರವಾದಿಗಳು ಆಯ್ಕೆ ಮಾಡಿಕೊಂಡರು ಎನ್ನುವುದು ಸ್ಪಷ್ಟ.

ರಾಷ್ಟ್ರವಿರೋಧಿಗಳ ವಿರುದ್ಧ ಕಠಿಣ ಕ್ರಮ ಅಗತ್ಯ 
ಪಾಕಿಸ್ತಾನದ ಕುಮ್ಮಕ್ಕಿನಿಂದ ಕಾಶ್ಮೀರದಲ್ಲಿ ಪ್ರತ್ಯೇಕತೆಯ ಬೆಳೆ ಬೆಳೆಯಲಾಗುತ್ತಿದೆಯಾದರೂ, ಒಂದು ರಾಷ್ಟ್ರವಾಗಿ ನಾವು ಅದನ್ನು ಸಮರ್ಥವಾಗಿ ಮತ್ತು ನಿಷ್ಠುರವಾಗಿ ಎದುರಿಸುವಲ್ಲಿ ಎಡವುತ್ತಿದ್ದೇವೆ ಎನ್ನುವುದು ಸ್ಪಷ್ಟ. ಎಲ್ಲಿಯವರೆಗೆ ದೇಶ ವಿರೋಧಿ ಘೋಷಣೆ ಕೂಗುವವರ ಕೂದಲೂ ಮುಟ್ಟಲಾಗದೇ ನಮ್ಮ ಕಾನೂನು ಅಸಹಾಯವಾಗಿ ಬಿಡುತ್ತದೆಯೋ, ಸ್ವಾತಂತ್ರ್ಯದ ಹೆಸರಲ್ಲಿ ರಾಷ್ಟ್ರ ಅಹಿತದ ಬೋಧನೆಗಳು ನಡೆಸುವವರು ನಿರಮ್ಮಳವಾಗಿ ಇರಲು ಸಾಧ್ಯವೋ, ಎಲ್ಲಿಯವರೆಗೆ ವಿಪತ್ತಿನಲ್ಲಿ ತನ್ನ ಬೆನ್ನ ಮೇಲೆ ಹೊತ್ತು ಬದುಕಿಸಿದ ಸೇನೆಯ ಜವಾನರ ಮೇಲೆ ಅದೇ ಜನರು ಕಲ್ಲು ತೂರುವುದನ್ನೂ ಸಹಿಸಿಕೊಳ್ಳಲಾಗುತ್ತದೋ ಅಲ್ಲಿಯವರೆಗೆ ಶತ್ರು ರಾಷ್ಟ್ರವೊಂದು ತನ್ನ ನೆಲದಲ್ಲಿ ನಮ್ಮ ದೇಶದ ವಿರುದ್ಧ ನಡೆಯುತ್ತಿರುವ ಕುಟಿಲ ತಂತ್ರಗಳಿಗೆ ಕಡಿವಾಣ ಹಾಕಬೇಕೆಂದು ನಾವು ಅಪೇಕ್ಷಿಸುವುದು ಅತಿ ಆಶಾವಾದವೇ ಸರಿ. ಮೊದಲು ನಿಮ್ಮ ಮನೆಯನ್ನು ಸರಿಪಡಿಸಿಕೊಳ್ಳಿ ಎನ್ನುವ ಪಾಕಿಸ್ತಾನದ ಉದ್ದಟತನವನ್ನು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು? ವಿಶ್ವದ ಯಾವುದೇ ರಾಷ್ಟ್ರದ ಸೈನಿಕರು ತನ್ನದೇ ನೆಲದಲ್ಲಿ ಇಷ್ಟೊಂದು ಕಟ್ಟುಪಾಡುಗಳ ನಡುವೆ ಯಾತನಾಮಯ ಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅಸಹಾಯಕ ಸ್ಥಿತಿ ಇರಲಾರದು. ರಾಷ್ಟ್ರವನ್ನು ಒಳಗಿಂದೊಳಗೆ ಗೆದ್ದಲಿನಂತೆ ತಿಂದು ಬಲಹೀನಗೊಳಿಸುತ್ತಿರುವ ವ್ಯಕ್ತಿ ಎಷ್ಟೇ ಪ್ರಭಾವಶಾಲಿಯಾಗಿರಲಿ ಆತನನ್ನು ಶಿಕ್ಷಿಸುವಂತಹ ಕಠಿಣ ಕಾನೂನು ಜಾರಿಯಾಗದಿದ್ದರೆ ದೇಶದ ಏಕತೆಗೆ ಆಪತ್ತು ಖಚಿತ.

ಕಾಶ್ಮೀರದಿಂದ ಸಾವಿರಾರು ಕಿ.ಮೀ. ದೂರವಿರುವ, ಅಲ್ಲಿಯ ವಾಸ್ತವಿಕ ಸ್ಥಿತಿಯ ಕುರಿತಾಗಲೀ ಅಥವಾ ಸಮಸ್ಯೆಯ ಆಳ-ಅಗಲದ ಅರಿವಿಲ್ಲದೇ ಮಾತನಾಡುವ ರಾಜಕಾರಣಿಗಳ, ಬುದ್ಧಿಜೀವಿಗಳ ನಡೆ-ನುಡಿ ಆಕ್ಷೇಪಾರ್ಹ. ನಮ್ಮ ಗಡಿಗಳು ಸುರಕ್ಷಿತವಾಗಿರುವುದರಿಂದ ಹಾಗೂ ದೇಶದಲ್ಲಿ ಸುಸ್ಥಿರ ಸಂವಿಧಾನ ಬದ್ಧ ಸರಕಾರ ಇರುವ ಕಾರಣದಿಂದಾಗಿ ಇಂದು ದೇಶ ಪ್ರಗತಿ ಪಥದಲ್ಲಿದೆ ಎನ್ನುವುದನ್ನು ಮರೆಯಬಾರದು. ನೆನಪಿರಲಿ, ಕಾಶ್ಮೀರವನ್ನು ತಟ್ಟೆಯಲ್ಲಿಟ್ಟು ಪಾಕಿಸ್ತಾನಕ್ಕೆ ನೀಡಿದರೂ ಅದರ ತಂಟೆಕೋರತನ ನಿಲ್ಲದು. 

ದೇಶದ ಯಾವುದೋ ಒಂದು ಭಾಗದಲ್ಲಿ ಧರ್ಮ, ಭಾಷೆಯ ಆಧಾರದ ಮೇಲೆ ಜನ ಪ್ರತ್ಯೇಕತೆ ಬಯಸಿದ್ದನ್ನು ಒಪ್ಪಿಕೊಂಡರೆ ದೇಶದ ಏಕತೆ ಉಳಿಯದು. ಇಂದು ಪ್ರತ್ಯೇಕ ರಾಜ್ಯಗಳಿಗಾಗಿ ಕೂಗು ಏಳುತ್ತಿರುವಂತೆ ಪ್ರತ್ಯೇಕ ದೇಶಕ್ಕಾಗಿ ದೇಶದಾದ್ಯಂತ ಹತ್ತಾರು ಕೂಗೇಳಬಹುದು. ಸ್ವಾತಂತ್ರೊéàತ್ತರದ ಈ ಏಳು ದಶಕಗಳ ಶಾಂತಿ ಮತ್ತು ಸ್ವಾತಂತ್ರ್ಯದ ಬದುಕಿನ ಸುಖ ಭೋಗದಲ್ಲಿರುವ ಹೊಸಪೀಳಿಗೆಗೆ ಅಶಾಂತ, ಗಲಭೆಕೋರ, ಅರಾಜಕತೆಯ ಬದುಕಿನ ಬಗೆಗೇನು ಗೊತ್ತು? ಪ್ರತ್ಯೇಕತೆಯನ್ನು, ದೇಶ ವಿರೋಧಿಗಳನ್ನು ಸಹಿಸಿಕೊಂಡರೆ ನಮ್ಮ ನಾಳೆ ಭಯಾನಕ ವಾಗಬಹುದು. ಪಂಜಾಬಿನಲ್ಲಿ ಭಯೋತ್ಪಾದನೆಯ ಹುಟ್ಟಡಗಿಸಲು ಸಾಧ್ಯವಾಯಿತಾದರೆ ಜಮ್ಮು – ಕಾಶ್ಮೀರದಲ್ಲಿ ಏಕೆ ಸಾಧ್ಯವಿಲ್ಲ?   

ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ನಮಗೆ ಮುಳುವಾಗಿರುವುದು. ದೇಶದ ಜನರ ನೆಮ್ಮದಿಯ ಬದುಕಿಗಾಗಿ ಬಲಿದಾನ ನೀಡುತ್ತಿರುವ ಸೈನಿಕರ ದಾರಿಗೆ ಅಡ್ಡ ಬರುವ ಉಪದ್ರವಿಗಳನ್ನು ನಿರ್ದಾಕ್ಷಿಣ್ಯವಾಗಿ ದಾರಿಯಿಂದ ಸರಿಸುವ ಕಠೊರ ಕ್ರಮದಿಂದ ನಮ್ಮ ನಾಳೆ ಸುಭದ್ರವಾಗಬಹುದೇ ವಿನಹ ಸೈನಿಕರ ಕೈ ಕಟ್ಟಿ ಹೋರಾಡಲು ಅಟ್ಟಿದರೆ ಸೈನಿಕರ ಆತ್ಮವಿಶ್ವಾಸದ ಸೆಲೆಯೇ ಬತ್ತಿ ಹೋಗಬಹುದು. ಸೇನೆಗೆ ಸೇರುವವರ ಸಂಖ್ಯೆ ಇನ್ನಷ್ಟು ಕ್ಷೀಣಿಸಬಹುದು. ಅಸ್ತ್ರ ಶಸ್ತ್ರಗಳಿಂದಾಗಲೀ ಅಥವಾ ಲೇಖನಿಯಿಂದಾಗಲೀ ದೇಶದ ಸಾರ್ವಭೌಮತೆಗೆ ಸವಾಲೆಸೆ ಯುವವರ ವಿರುದ್ಧ ಕಠೊರ ಕಾನೂನು ಜಾರಿಗೊಳಿಸಲು ಇದು ನಿರ್ಣಾಯಕ ಕಾಲ. ಉರಿ, ಪುಲ್ವಾಮಾದ ದುರಂತಗಳು ರಾಷ್ಟ್ರ ವಿರೋಧಿಗಳ ಕುರಿತಾದ ನಮ್ಮ ಸೌಮ್ಯ ನೀತಿಯ ಔಚಿತ್ಯದ ಕುರಿತಾದ ಸವಾಲನ್ನು ಮುನ್ನೆಲೆಗೆ ತಂದಿವೆ.

ಬೈಂದೂರು ಚಂದ್ರಶೇಖರ ನಾವಡ 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ