ವಿಜೃಂಭಿಸುತ್ತಿರುವ ಕ್ರೌರ್ಯಕ್ಕೆ ಕಡಿವಾಣ ಹಾಕುವುದು ಹೇಗೆ?

Team Udayavani, Dec 7, 2019, 6:15 AM IST

“”ಮನುಷ್ಯಜೀವಿ ಮೂಲತಃ ಕ್ರೂರಿ ಮತ್ತು ದುಷ್ಟ. ಹ್ಯೂಮನ್‌ ನೇಚರ್‌ನ ಪ್ರಧಾನ ಗುಣ ಈವಿಲ್‌. ಅಂದರೆ ಕೆಟ್ಟದ್ದು.” ಹೀಗೆ ತನ್ನ ಪ್ರಸಿದ್ಧ ಪುಸ್ತಕ ಲೇವಿಯಾದನ್‌ ದಲ್ಲಿ ಹೇಳಿ ಹೋದ ಖ್ಯಾತ ರಾಜಕೀಯ ತಣ್ತೀಶಾಸ್ತ್ರಜ್ಞ ಹಾಬ್ಸ್ನ ಮಾತು ಇತ್ತೀಚಿನ ಸಾಮಾಜಿಕ ಘಟನೆಗಳನ್ನು ಗಮನಿಸಿದರೆ ನಿಜಕ್ಕೂ ಸರಿ ಎಂದೇ ಅನಿಸುತ್ತದೆ. (ತನ್ನೊಳಗಿರುವ ಈ ಕ್ರೌರ್ಯದ ಅರಿವಿದ್ದೇ ಅದಕ್ಕೆಲ್ಲ ಬೇಲಿ ಹಾಕುವ ಸಲುವಾಗಿಯೇ ಮಾನವಜೀವಿ ಸಮಾಜ, ರಾಷ್ಟ್ರ, ಧರ್ಮ ಮತ್ತಿತರ ಪರಿಕಲ್ಪನೆಗಳನ್ನು ರೂಪಿಸಿಕೊಂಡಿದ್ದು ಎಂದೂ ಆತ ಹೇಳಿದ) ಉದಾಹರಣೆಗೆ ಹೈದ್ರಾಬಾದ್‌ನಲ್ಲಿ ನಡೆದ ಅಮಾನುಷ ಘಟನೆಯನ್ನು ನೋಡಿ! ಆಕೆಯನ್ನು ತೀವ್ರ ಹಿಂಸೆಯ ಬಲಾತ್ಕಾರಕ್ಕೆ ಗುರಿ ಮಾಡಿ, ಕತ್ತು ಹಿಸುಕಿ ಸಾಯಿಸಿ, ಆಮೇಲೆ ಶವವನ್ನು ಸೀಮೆ ಎಣ್ಣೆ ಹಾಕಿ ಸುಟ್ಟು ಹಾಕಬಲ್ಲ ರೀತಿಯ ಕ್ರೌರ್ಯ ಮಾನವ ಪ್ರಾಣಿಯೊಂದನ್ನು ಬಿಟ್ಟು ಬಹುಶಃ ಬೇರಾವ ಪ್ರಾಣಿಯೊಳಗೂ ಇರಲಿಕ್ಕಿಲ್ಲ. ಪ್ರಾಣಿಗಳು ಕಾಮಕ್ಕೆ ಸಂಬಂಧಿಸಿ ಈ ರೀತಿ ಗುಂಪು ಹಲ್ಲೆ ಮತ್ತು ಹಿಂಸೆ ನಡೆಸುವುದಿಲ್ಲ. ಅಲ್ಲದೇ ತಿನ್ನುವುದಕ್ಕಾಗಿ ಕೊಲ್ಲು ವುದನ್ನು ಬಿಟ್ಟರೆ ವಿಕೃತವಾದ ಹಿಂಸೆಯಲ್ಲಿ ಅವು ತೊಡಗುವುದಿಲ್ಲ. ಹಾಬ್ಸ್ ಹೇಳಿದ ಮೇಲಿನ ಮಾತುಗಳನ್ನು ಚರಿತ್ರೆಯ ಸಾವಿರಾರು ಇತರ ದಾರುಣ ಘಟನೆಗಳೂ ಸಮರ್ಥಿಸುತ್ತವೆ. ನಿರ್ಭಯಾ ಘಟನೆಯನ್ನು ನೆನಪಿಸಿಕೊಳ್ಳಿ. ಅಲ್ಲಿ ಆಕೆಯ ಜನನಾಂಗವನ್ನು ಕಬ್ಬಿಣದ ರಾಡ್‌ನಿಂದ ಘಾಸಿಗೊಳಿಸಿದ್ದರಿಂದ‌ ಕರುಳ ಮಾಲೆಯೇ ಛಿದ್ರವಾಗಿತ್ತು. ಮಹಿಳೆಯರ ಮೇಲಿನ ಇಂತಹ ವಿಪರೀತ ದೌರ್ಜನ್ಯದ ಕಥೆಗಳಂತೂ ಸಾವಿರ ಸಾವಿರ ಸಂಖ್ಯೆಯಲ್ಲಿ ಇತಿಹಾಸದ ಕತ್ತಲ ಕೋಣೆಗಳಲ್ಲಿ ಅಡಗಿ ಕುಳಿತಿವೆ.

ನಮಗೆ ಗೊತ್ತಿದೆ. ಜಗತ್ತಿನಲ್ಲಿ ನಡೆದುಹೋದ ಪ್ರತಿಯೊಂದು ಯುದ್ಧದ ನಂತರವೂ ಗೆದ್ದ ಸೈನ್ಯಗಳು ಸೋತ ದೇಶಗಳ ಜನರ ಮೇಲೆ, ಮುಖ್ಯ ವಾಗಿ ಮಹಿಳೆಯರ ಮೇಲೆ ಹೇಳಲಾರದ ಹಿಂಸೆಯನ್ನು ಹೇರಿವೆ. ಭಾರತ ಪಾಕಿಸ್ಥಾನ ವಿಭಜನೆಯ ಸಂದರ್ಭದಲ್ಲಿ ನಡೆದ ಕರಾಳ ಕಥೆಗಳು ನಮಗೆ ಗೊತ್ತಿವೆ. ಎರಡೂ ದೇಶಗಳ ಕಡೆಯ ಸಹಸ್ರಗಟ್ಟಲೇ ಸ್ತ್ರೀಯರನ್ನು, ಹಣ್ಣು ಮುದುಕಿಯರಿಂದ ಹಿಡಿದು ಚಿಕ್ಕ ಬಾಲಕಿಯರವರೆಗೂ, ನಗ್ನವಾಗಿ ಸಾರ್ವಜನಿಕವಾಗಿ ರಸ್ತೆಗಳಲ್ಲಿ ಪರೇಡ್‌ ಮಾಡಲಾಗಿತ್ತು. ಹಾಗೆಂದು ಮಾನವ ಹಿಂಸೆಯ ಕಥೆಗಳು ಮಹಿಳೆಯರ ಜಗತ್ತಿಗಷ್ಟೇ ಸೀಮಿತವಾಗಿ ಏನೂ ಇಲ್ಲ. ಹಿಟ್ಲರ್‌ ತನ್ನ ಸುತ್ತ ಹರಡಿದ ಅಪರಿಮಿತ ಕ್ರೌರ್ಯ ಈ ರೀತಿಯ ಹಿಂಸೆಯ ಮನಶಾಸ್ತ್ರವನ್ನು ಹೇಳುತ್ತದೆ.

“ಹಿಂಸೆ, ಅಪರಿಮಿತ ಹಿಂಸೆ, ಬಹುಶಃ ಮಾನವ ನೇಚರ್‌ನ ಮೂಲ ಗುಣ’ ಎನ್ನುವುದನ್ನು ವಿವರಿಸಲು ಇನ್ನೂ ಒಂದು ಘಟನೆ ಹೇಳಿಕೊಳುತ್ತೇನೆ. ಅಮೆರಿಕ ಇರಾಕ್‌ ಯುದ್ಧ ಮುಗಿದ ಬಳಿಕ ಸೆರೆ ಸಿಕ್ಕ ಇರಾಕಿ ಸೈನಿಕರನ್ನು (ಗಂಡು/ಹೆಣ್ಣು) ಅಮೆರಿಕದ ಗ್ವಾಂಟಾನಾಮೋ ಬೇನಲ್ಲಿ ಯುದ್ಧ ಖೈದಿಗಳನ್ನಾಗಿ ಇರಿಸಲಾಗಿತ್ತು. ಅವರನ್ನು ಕಾಯಲು ಅಮೆರಿಕದ ಯುವ ಸೈನಿಕರನ್ನು(ಗಂಡು/ಹೆಣ್ಣು) ಇರಿಸಲಾಗಿತ್ತು. ಈ ಅಮೆರಿಕನ್‌ ಸೈನಿಕರು ಇರಾಕಿ(ಗಂಡು/ಹೆಣ್ಣು) ಸೈನಿಕರ ಮೇಲೆ ಎಂತಹ ವಾಕರಿಕೆ ಬರಿಸುವ, ಎದೆಯನ್ನೇ ಅಲುಗಾಡಿಸವ ಕ್ರೌರ್ಯ ನಡೆಸಿದ್ದರು ಎಂದರೆ ಅದು ಮಾತುಗಳಲ್ಲಿ ಹೇಳಲಾರದ್ದು. ಅವರನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿಸಿ ವಿಕೃತ ರೀತಿಯ ಸೆಕ್ಸ್‌ ಪ್ರದರ್ಶ ನಗಳಲ್ಲಿ ಬಹಿರಂಗವಾಗಿ ತೊಡಗಿಸಲಾಗಿತ್ತು. ಕರಾಳ ವಿವರ, ಇಷ್ಟೇ ಸಾಕು. ಸೈನಿಕರ ಈ ರೀತಿಯ ವಿಕೃತ ಮಾನಸಿಕತೆಯ ವಿವರಗಳು ಹೊರ ಬರುತ್ತಿದ್ದಂತೆ ಜಗತ್ತು ಬೆಚ್ಚಿ ಬಿದ್ದಿತ್ತು. ಅತ್ಯಂತ ನಾಗರಿಕವಾದ ಸಮಾಜವೆಂದು ತನ್ನನ್ನು ತಾನು ಬಣ್ಣಿಸಿಕೊಳ್ಳುತ್ತಿದ್ದ ಅಮೆರಿಕ ಜಗತ್ತಿನೆದುರು ತೀವ್ರ ಮುಖಭಂಗಕ್ಕೀಡಾಯಿತು. ಅಪಮಾನ ಅನುಭವಿಸಿತು. ಘಟನೆಗಳನ್ನು ಗಂಭೀರವಾಗಿ ತೆಗೆದುಕೊಂಡ ಅಮೆರಿಕ ತನ್ನ ಈ ಸೈನಿಕರು ಹುಚ್ಚಾಗಿ ಹೋಗಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಲು ಅವರ ಮೈಂಡ್‌ ಮ್ಯಾಪಿಂಗ್‌ ಮಾಡಿಸಿತು. ಕುತೂಹಲವೆಂದರೆ ಸೈನಿಕರ ಮೇಲೆ ನಡೆಸಲಾದ ಮನೋವೈಜ್ಞಾನಿಕ ಪರೀಕ್ಷೆಯ ವಿವರಗಳು ಹೊರ ಬರುತ್ತಿದ್ದಂತೆ ಜಗತ್ತು ಮತ್ತೂಮ್ಮೆ ಬೆಚ್ಚಿ ಬಿತ್ತು. ಏಕೆಂದರೆ ಆ ಸೈನಿಕರು ಮತಿಭ್ರಮಣೆಗೊಂಡವರಾಗಿಲ್ಲ. ಅವ‌ರೆಲ್ಲರೂ ಮಾನಸಿಕವಾಗಿ ನಾರ್ಮಲ್‌ ಆದ ವ್ಯಕ್ತಿಗಳೇ ಆಗಿದ್ದರು ಎಂದು ಪರೀಕ್ಷೆಗಳು ಹೇಳಿದ್ದವು. ಜಗತ್ತು ಎರಡನೆಯ ಬಾರಿ ಬೆಚ್ಚಿ ಬಿದ್ದಿದ್ದು ಏಕೆಂದರೆ ಈ ಟೆಸ್ಟ್‌ಗಳು ಹೇಳುವ ಹಾಗೆ ಬಹುಶಃ ಹೀಗೆ ನಾರ್ಮಲ್‌ ಆಗಿರುವ ವ್ಯಕ್ತಿಗಳು ಕೂಡ ಅಷ್ಟೇ ಅಬ್‌ನಾರ್ಮಲ್‌ ಆಗಿರುವ ಸಾಧ್ಯತೆ ಇರುತ್ತದೆ. ಏಕೆಂದರೆ ಕ್ರೌರ್ಯ ಮನುಷ್ಯನ ಮೂಲಗುಣ. ಇಂತಹ ಗುಣದಲ್ಲಿ ಸಹಜತೆ ಅಸಹಜತೆ ಎಲ್ಲವೂ ಒಂದೇ ಆಗಿರಬಹುದು. ಖ್ಯಾತ ಬ್ರಿಟಿಷ್‌ ಕಾದಂಬರಿಕಾರ ಜೋಸೆಫ್ ಕಾನ್ರಾಡ್‌ ಹೇಳುವ ಮಾತು ಕೂಡ ಇದೇ. ಆತನ ಪ್ರಸಿದ್ಧ ಕಾದಂಬರಿಗಳು ಮನುಷ್ಯ ನೊಳಗಿನ ಇಂತಹ ಈವಿಲ್‌ನ ಹುಡುಕಾಟದಲ್ಲಿ ನಿರಂತರ ತೊಡಗಿ ಕೊಂಡವುಗಳು. ಷೇಕ್ಸಪಿಯರ್‌ನ ಕೃತಿಗಳಲ್ಲಿ ಕೂಡ ಇಯಾಗೋ ಅಂತಹ ದುಷ್ಟ ಮಾನಸಿಕತೆಗಳ ದಟ್ಟ ಚಿತ್ರಣ ಸಿಗುತ್ತದೆ.

ಕುತೂಹಲದ ವಿಷಯವೆಂದರೆ ಮಾನವನ ಒಳ ಮನಸ್ಸಿನ ಅಂದಾಜು ನಾಗರಿಕತೆಗಳಿಗೆ ಮೊದಲೇ ಇತ್ತು. ಅಂದರೆ ಅವಕ್ಕೆ ಮನುಷ್ಯನ ದುಷ್ಟತನ ತಿಳಿದಿತ್ತು. ಬಹುಶಃ ಅದಕ್ಕಾಗಿಯೇ ಅವು ಮನುಷ್ಯನ ಕ್ರೌರ್ಯವನ್ನು ನಿಯಂತ್ರಿಸಲು, ಅಡಗಿಸಲು, ಕಟ್ಟಿ ಹಾಕಲು ದಾರಿಗಳನ್ನು ಹುಡುಕಿದ್ದವು. ನಾಗರಿಕತೆಗಳು ಕಂಡುಕೊಂಡಂತೆ ಮನುಷ್ಯನ ಕ್ರೌರ್ಯದ ನಿಯಂತ್ರಣಕ್ಕೆ ಎರಡು ದಾರಿಗಳಿವೆ. ಒಂದನೆಯದು ಮಾನವಜೀವಿಯ ಮನಸ್ಸಿನ ಔನ್ಯತ್ಯೀ ಕರಣ. (Sublimation). ಅಂದರೆ ಮನುಷ್ಯನ ಮನಸ್ಸನ್ನು ಸಂಸ್ಕಾರದ ಮೂಲಕ ತಿದ್ದಿತೀಡಿ ಕೆಲವು ಮಟ್ಟಿಗೆ ಹತೋಟಿ ಯಲ್ಲಿಡುವುದು. ಈ ಉದ್ದೇಶಕ್ಕಾಗಿಯೇ ನಾಗರಿಕತೆಗಳು ದೇವರು, ಧರ್ಮ, ನೀತಿ, ಅನೀತಿ, ಸ್ವರ್ಗ, ನರಕ ಇಂತಹ ಪರಿಕಲ್ಪನೆಗಳನ್ನು ಹುಟ್ಟು ಹಾಕಿದ್ದವು. ಸಂಸ್ಕಾರಗಳನ್ನು ಮುಂದಿಟ್ಟು ಮಾನವ ಕಾಯಾ, ವಾಚಾ ಮನಸಾ ಕೆಟ್ಟ ಕಾರ್ಯಗಳನ್ನು ಕೈಗೊಳ್ಳಬಾರದೆಂಬ ಎಚ್ಚರ ಮೂಡಿಸಲು ಪ್ರಯತ್ನಿಸಿದ್ದವು. ಸಾವಿನ ನಂತರದ ನರಕದ ಪರಿಕಲ್ಪನೆಗಳ ಹುಟ್ಟಿಸಿ ಭಯ ಸೃಷ್ಟಿಸಿದ್ದವು. ಧರ್ಮಗಳು ಮನುಷ್ಯನ ಮನಸ್ಸಿನ ಮೇಲೆ ಹೇರಿದ ಕಡಿವಾಣಗಳು ಕ್ರಮೇಣ ಅತಿರೇಕಕ್ಕೆ ಹೋದವು. ಆದರೂ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಧರ್ಮಗಳು ಮನುಷ್ಯನ ಬುದ್ಧಿಯ ಉನ್ನತೀಕರಣದ ಪ್ರಯತ್ನದಲ್ಲಿ ನಿರಂತರ ತೊಡಗಿಕೊಂಡಿದ್ದವು.

ಅಷ್ಟೇ ಅಲ್ಲದೇ ಮುಂದೆ ಹೋಗಿ ಸಮಾಜಗಳು ಸರಿಯಾಗಿಯೇ ಗ್ರಹಿಸಿದ್ದೆಂದರೆ ಹಿಂಸೆ ಹೆಚ್ಚು ಹೆಚ್ಚಾಗಿ ಕಾಮದೊಂದಿಗೆ ತಳಕು ಹಾಕಿಕೊಂಡಿರುತ್ತದೆ. ಹೀಗಾಗಿಯೇ ಕಾಮವನ್ನು ಪವಿತ್ರವಾಗಿಸಿದ, ಧಾರ್ಮಿ ಕವಾಗಿಸಿದ ವಿವಾಹದ ಪರಿಕಲ್ಪನೆ ಹುಟ್ಟಿಕೊಂಡಿದ್ದು. ಗಮನಿಸ ಬೇಕಾದದ್ದೆಂದರೆ ಇಂದಿಗೂ ಹೆಚ್ಚು ಹೆಚ್ಚಾಗಿ ಅಪರಾಧಗಳು ಸಂಭವಿಸುವುದು ಕಾಮದ, ಹೆಣ್ಣಿನ ವಿಷಯದಲ್ಲಿ. ಈ ವಿಷಯಗಳನ್ನು ಅರಿತಿದ್ದ ಸಮಾಜಗಳು ರೇಪ್‌ ಅನ್ನು ಒಳಗೊಂಡ ಮಾನವ ಕ್ರೌರ್ಯದ ಹತೋಟಿಗೆ ನಿರಂತರ ಶ್ರಮಿಸಿದವು. ಸಮಾಜಗಳು ಕಟ್ಟುನಿಟ್ಟಾದ ಧಾರ್ಮಿಕ ಚೌಕಟ್ಟುಗಳನ್ನು ಹೊಂದಿದ್ದ ಕಾರಣ ಬಹುಶಃ, ಇದು.

ಮಾನವ ಕ್ರೌರ್ಯವನ್ನು ನಿಯಂತ್ರಿಸಲು ಹಿಂದಿನ ಸಮಾಜಗಳು ಕಂಡುಕೊಂಡ ಎರಡನೆಯ ಪರಿಹಾರ ಕ್ರೌರ್ಯಕ್ಕೆ ಪ್ರತಿಕ್ರಿಯೆಯಾಗಿ ಅದೇ ರೀತಿಯ ಕ್ರೌರ್ಯದ ಬಳಕೆ. ಪ್ರಸಿದ್ಧ ಬೆಬಿಲೋನಿಯನ್‌ ದೊರೆ ಹಮ್ಮುರಾಬಿ ಜಾರಿಗೆ ತಂದಿದ್ದ ಶಿಕ್ಷೆಯ ವಿಧಾನಗಳು ನಮಗೆ ಗೊತ್ತು. ಅದು ಇತಿಹಾಸದಲ್ಲಿ “ಕೋಡ್‌ ಹಮ್ಮುರಾಬಿ’ ಎಂದೇ ಪ್ರಸಿದ್ಧವಾಗಿದೆ. ಈ ಶಿಕ್ಷಾ ವಿಧಾನದ ಪ್ರಕಾರ ಮುಯ್ಯಿಗೆ ಮುಯ್ಯಿ ರೀತಿಯಲ್ಲಿ ನ್ಯಾಯದಾನ ನೀಡಲಾಗುತಿತ್ತು. ಅಂದರೆ ಕಣ್ಣಿಗೆ ಕಣ್ಣು, ಕೈಗೆ ಕೈ, ಕಾಲಿಗೆ ಕಾಲು ಹೀಗೆ ಕತ್ತರಿಸುವುದರ ಮೂಲಕ ಅಪರಾಧಿಗೆ ಶಿಕ್ಷೆ ನೀಡಲಾಗುತ್ತಿತ್ತು. ಒಟ್ಟಾರೆಯಾಗಿ ಹೀಗೆ ಶೀಘ್ರವಾಗಿ, ಘನಘೋರವಾದ ಶಿಕ್ಷೆ ವಿಧಿಸಲಾಗುತ್ತಿತ್ತು. ಹೆಚ್ಚು ಕಡಿಮೆ ಅಪರಾಧಿಗಳನ್ನು ಅದೇ ದಿನ ಸಾರ್ವಜನಿಕವಾಗಿ, ಬೀದಿ ಬಾಗಿಲಿನಲ್ಲಿ ನೇಣುಗಂಬಕ್ಕೆ ನೇತು ಹಾಕಲಾಗುತ್ತಿತ್ತು. ಅಂದರೆ ಹೀಗೆ ಕ್ರೌರ್ಯವನ್ನು ಬಲವಾದ ಪ್ರತಿಕ್ರೌರ್ಯದ ಮೂಲಕ ಹಿಮ್ಮೆಟ್ಟಿಸಲಾಗುತ್ತಿತ್ತು. ಮಾನವಗುಣವನ್ನು ಹೆದರಿಸಿ, ಬೆದರಿಸಿ ಹತೋಟಿಯಲ್ಲಿಡಲಾಗುತ್ತಿತ್ತು.

ಸುತ್ತಮುತ್ತಲೂ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಕ್ರೌರ್ಯ ಇಂದು ಹಲವು ಮುಖಗಳಲ್ಲಿ ವಿಜೃಂಭಿಸುತ್ತಿರುವಂತಿದೆ. ಬಹುಶಃ ಇಂತಹ ವರ್ತಮಾನಕ್ಕೆ ಕಾರಣಗಳೂ ಸ್ಪಷ್ಟವಿವೆ. ಮನುಷ್ಯ ಸ್ವಭಾವದ ಔನ್ಯತ್ಯೀಕರಣದ ಗುರಿಯನ್ನು ಇಂದಿನ ಸಮಾಜ ಕಳೆದು ಕೊಂಡು ಕುಳಿತಂತೆ ಅನಿಸುತ್ತದೆ. ಮೂಲದಲ್ಲಿ ಸಮಾಜದ ಪರಿಕಲ್ಪ ನೆಯೇ ಸಡಿಲಾಗಿ ಹೋಗಿದೆ. ಧಾರ್ಮಿಕ, ಸಾಮಾಜಿಕ ಪರಿಕಲ್ಪನೆಗಳು, ಕಟ್ಟಳೆಗಳು, ನೀತಿಪಾಠಗಳು ಸಂಪೂರ್ಣವಾಗಿ ಬಿದ್ದುಹೋಗಿವೆ. ಸಾಮಾಜಿಕ ಸಾಮರಸ್ಯ ಹಾಗೂ ಹೊಂದಾಣಿಕೆಯ ಜೀವನಕ್ಕಿಂತಲೂ ವೈಯಕ್ತಿಕ ಸ್ವೇಚ್ಛೆಯೇ ಪ್ರಮುಖ ಮೌಲ್ಯವಾದಂತಿದೆ. ಸಹಜವಾಗಿ ನೈತಿಕ ಪರಿಕಲ್ಪನೆಗಳು ಮುರಿದು ಬಿದ್ದಿವೆ. ಕಾಮವಂತೂ ಮಾರಾಟದ ವಸ್ತುವಾಗಿ ಹೋಗಿದೆ. ಮಾರುಕಟ್ಟೆಗಳು ಕಾಮಕ್ಕೆ ಸಂಬಂಧಿಸಿದ ಉತ್ಪನ್ನ ಗಳ ಅಂಗಡಿಗಳಿಂದ ತುಂಬಿ ಹೋಗಿವೆ. ಹೀಗೆ ಸಮಾಜವೇ ಅಗೌಣ ವಾಗಿ ವಿಕೃತ ವೈಯಕ್ತಿಕತೆಯೇ ವ್ಯಕ್ತಿಗಳ ನಡವಳಿಕೆಗಳನ್ನು ನಿರೂಪಿಸುತ್ತಿರುವುದು ಬಹುಶಃ ಹೆಚ್ಚುತ್ತಿರುವ ಹಿಂಸೆಗೆ ಕಾರಣವಾಗಿರಬಹುದು.

ಇನ್ನು ಕಾನೂನು ಮತ್ತು ಸುವ್ಯವಸ್ಥೆ ಅಥವಾ ಕ್ರೌರ್ಯದ ಹತೋಟಿಯ ವಿಷಯದಲ್ಲಿ ಹೆಚ್ಚು ಹೇಳುವುದು ಬೇಡ. ಎಲ್ಲರಿಗೂ ತಿಳಿದಿರುವಂತೆ ನಮ್ಮ ಕಾನೂನು ಸುವ್ಯವಸ್ಥೆ ಮತ್ತು ನ್ಯಾಯದಾನದ ವ್ಯವಸ್ಥೆಗಳು ವರ್ಷಗಳಿಂದ ಸುಧಾರಣೆಗಾಗಿ ಕಾದು ಕುಳಿತಿವೆ. ಕೇಸುಗಳು ವರ್ಷಗಟ್ಟಲೆ ನಡೆಯುತ್ತವೆ. ಹಲವೊಮ್ಮೆ ಕೊನೆಗೂ ನ್ಯಾಯ ಸಿಗುವುದೇ ಇಲ್ಲ. ಅಪರಾಧಿಗೆ ಒಮ್ಮೆ ಬೇಲ್‌ ಸಿಕ್ಕಿ ಹೋಯಿತೆಂದರೆ ಅಲ್ಲಿಗೆ ಎಲ್ಲವೂ ಮುಗಿದು ಹೋಗುತ್ತದೆ. ಇದು ಅಪರಾಧಿಗಳಿಗೆ ಚೆನ್ನಾಗಿ ತಿಳಿದುಹೋಗಿದೆ. ಹಾಗಾಗಿ ಹಿಂಸೆಯನ್ನು ಹೆದರಿಸಿ ಬೆದರಿಸಿ ಹತೋಟಿಯಲ್ಲಿಡುವ ಸಾಧ್ಯತೆಗಳು ಸಮಕಾಲೀನವಾಗಿ ಕಡಿಮೆಯಾಗಿ ಹೋಗಿವೆ. ಹೀಗಾಗಿ, ಹಿಂಸೆಯನ್ನು ಎದುರಿಸಲು ವಾಸ್ತವಿಕ ಕ್ರಮಗಳನ್ನು ಸಮಾಜಗಳು ಮತ್ತು ಸರಕಾರಗಳು ಗಂಭೀರವಾಗಿ ಯೋಚಿಸಬೇಕಾಗುತ್ತದೆ.

– ಡಾ| ಆರ್‌.ಜಿ. ಹೆಗಡೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮಂಗಳೂರು: ಇದುವರೆಗೆ ಕಪ್ಪು ಬಿಳುಪಿನಲ್ಲಿದ್ದು, ಮುಖ ಗುರುತು ಸಿಗುವುದು ಕಷ್ಟ ಎಂಬಂತಿದ್ದ ಮತದಾರರ ಗುರುತಿನ ಚೀಟಿ ಈಗ ಬಾರ್‌ಕೋಡ್‌, ಕಲರ್‌ ಫೋಟೋ ಸಹಿತ ಬಹು ವರ್ಣಗಳಲ್ಲಿ...

  • ಅಂಡಮಾನಿನ ಎಲ್ಲ ಗೂಬೆಗಳೂ ಕ್ಯಾಮೆರಾಗಳಲ್ಲಿ ಬಂಧಿಯಾದವು; ಒಂದನ್ನು ಬಿಟ್ಟು. ಒಳಬಾರದೆ ಹೊರವುಳಿದ ಗೂಬೆಯೆಂದರೆ, ಅಂಡಮಾನ್‌ ಬಾರ್ನ್ ಔಲ್‌. ಅಂದರೆ, ಅಂಡಮಾನ್‌...

  • ಲಂಕೆಯಲ್ಲಿ ಯುದ್ಧವೆಲ್ಲ ಮುಗಿದು, ಮರಳುವಾಗ ವಿಮಾನದ ಮೇಲಿಂದ ರಾಮನು ತನ್ನೊಲವಿನ ಮಡದಿ ಸೀತೆಗೆ ರಾಮೇಶ್ವರಂನ ದ್ವೀಪವನ್ನು ತೋರಿಸಿ- "ನೋಡಿಲ್ಲಿ, ಈ ದ್ವೀಪದಲ್ಲೇ...

  • ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಈಗಾಗಲೇ ಶುರುವಾಗಿದ್ದು, 26ಕ್ಕೆ ಕೊನೆಗೊಳ್ಳಲಿದೆ. ಜಗತ್ತಿಗೆ ಶಾಂತಿ ಬೋಧಿಸಿದ ಈ ಮಠದಲ್ಲಿ ಭೋಜನವೂ...

  • ರಂಗದ ಮೇಲೆ ಮಿಂಚಿನ ಬಳ್ಳಿಯೊಂದು ಝಳಪಿಸಿದಂತೆ ಅದಮ್ಯ ಚೈತನ್ಯದಿಂದ ಲೀಲಾಜಾಲವಾಗಿ ನರ್ತಿಸಿದವಳು ಭರತನಾಟ್ಯ ಕಲಾವಿದೆ ಹರ್ಷಿತಾ ಜಗದೀಶ್‌. ಅದು ಅವಳ ಮೊದಲ ರಂಗಾರ್ಪಣೆ...