ಖಾಲಿ ಹುದ್ದೆ ಭರ್ತಿ ಮಾಡಿದರೆ ನಿರುದ್ಯೋಗ ಬಗೆ ಹರಿಯದೆ?

Team Udayavani, Jul 23, 2019, 5:00 AM IST

ಸಾಂದರ್ಭಿಕ ಚಿತ್ರ

ನ್ಯಾಯಾಂಗ ವ್ಯವಸ್ಥೆ ಮಾತ್ರವಲ್ಲ ಎಲ್ಲ ಇಲಾಖೆಗಳಲ್ಲೂ ಇದೇ ಅವಸ್ಥೆ ಇದೆ. ಶಿಕ್ಷಣ, ಆರೋಗ್ಯ, ಕಂದಾಯ, ಸಾರಿಗೆ ಇತ್ಯಾದಿ. ಪ್ರತಿ ವರ್ಷ ಸಾವಿರಗಟ್ಟಲೆ ಶಿಕ್ಷಕರ ನೇಮಕ ಮಾಡುತ್ತೇನೆಂದು ಸರಕಾರ ಪ್ರಕಟನೆ ಹೊರಡಿಸುತ್ತದೆ. ಆದರೆ ಇನ್ನೂ ಏಕೋಪಾಧ್ಯಾಯ ಪ್ರಾಥಮಿಕ ಶಾಲೆಗಳು ಅನೇಕ ಇವೆ. ಅನೇಕ ಸರಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ.

ಪತ್ರಿಕೆಗಳಲ್ಲಿ ಇತ್ತೀಚೆಗೆ ಪ್ರಕಟವಾದ ಸುದ್ದಿಯೊಂದು ಅಚ್ಚರಿ ಮೂಡಿಸುವಂಥದ್ದು. ರಾಜ್ಯದ ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ 20,000ಕ್ಕೂ ಹೆಚ್ಚಿನ ಶಿಕ್ಷಕ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸರಕಾರ ನಿರ್ಧರಿಸಿದ ಸುದ್ದಿ ಅದು. ಸಾವಿರಾರು ಅರ್ಹ ಅಭ್ಯರ್ಥಿಗಳು ಉದ್ಯೋಗವಿಲ್ಲದೆ ಪರಿತಪಿಸುತ್ತಿರುವ ಈ ಕಾಲದಲ್ಲಿ ಅವರಲ್ಲಿ ಕೆಲವರನ್ನು ಅತಿಥಿಗಳಾಗಿ ನೇಮಿಸಿಕೊಳ್ಳುವುದರ ಹಿಂದಿನ ಮರ್ಮವೇನೆಂದು ಅರ್ಥವಾಗುವುದಿಲ್ಲ. ಪರಿಸ್ಥಿತಿ ಹೀಗಿರುತ್ತಾ ಶಿಕ್ಷಣದ ಗುಣಮಟ್ಟದ ಉನ್ನತೀಕರಣ ಎನ್ನುವುದು ಕನಸಿನ ಮಾತು.

ಕೆಲವು ತಿಂಗಳ ಹಿಂದೆ ಪ್ರಕಟವಾದ ಇನ್ನೊಂದು ಸುದ್ದಿ ಅನೇಕರ ಗಮನ ಸೆಳೆದಿರಬಹುದು. ದೇಶಾದ್ಯಂತ ನ್ಯಾಯಾಧೀಶರುಗಳ ಸಾವಿರಾರು ಹುದ್ದೆಗಳು ಖಾಲಿ ಇದ್ದಾವಂತೆ. ಈ ಸುದ್ದಿಗೂ ಅತ್ಯಾಚಾರ-ಅನಾಚಾರಗಳ ಸುದ್ದಿಗೂ ಸಂಬಂಧ ಇದೆ.ನಮ್ಮ ದೇಶದಲ್ಲಿ ನಿರ್ಭಯಾ ಪ್ರಕರಣ ನಡೆದು ಕೆಲವು ವರ್ಷಗಳಾದರೂ ಅಂಥ ಅಪರಾಧಗಳನ್ನು ತಡೆಯಲು ನಾವಿನ್ನೂ ಶಕ್ತರಾಗಿಲ್ಲ. ಯಾವುದೇ ಕಾನೂನು ನಿರೀಕ್ಷಿತ ಫ‌ಲ ಕೊಟ್ಟಿಲ್ಲ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಕಡಿಮೆಯಾಗಿಲ್ಲ. ಇತ್ತೀಚೆಗಂತೂ ಭಯೋತ್ಪಾದಕರಿಗಿಂತಲೂ ಅತ್ಯಾಚಾರಿಗಳ ಭಯವೇ ಹೆಚ್ಚಾಗಿದೆ ಎಂದೆನಿಸುತ್ತಿದೆ.

ನಮ್ಮ ನ್ಯಾಯಾಲಯಗಳಲ್ಲಿ ಕಲಾಪಗಳ ವಿಳಂಬ ಗತಿಯೇ ನಮ್ಮ ಕಾನೂನು ವ್ಯವಸ್ಥೆ ಹದಗೆಡಲು ಕಾರಣ. ನ್ಯಾಯಾಲಯಗಳಲ್ಲಿ ಇತ್ಯರ್ಥವಾಗಲು ಬಾಕಿ ಇರುವ ಪ್ರಕರಣಗಳ ಸಂಖ್ಯೆ ಬೆಚ್ಚಿಬೀಳಿಸುವಂಥದ್ದು. ನೂರು ಜನ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾ ಇಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುವ ಧೋರಣೆಯನ್ನು ನಾವು ಒಪ್ಪಿಕೊಳ್ಳಲೇಬೇಕು. ನಿರಪರಾಧಿ ಶಿಕ್ಷಿಸಲ್ಪಟ್ಟನೆಂದಾದರೆ ನ್ಯಾಯಾಂಗ ವ್ಯವಸ್ಥೆ ಸರಿಯಿಲ್ಲವೆಂದಾಗುತ್ತದೆ. ಆದರೆ ವಿಳಂಬಿತ ನ್ಯಾಯ ಎನ್ನುವುದು ನ್ಯಾಯ ನಿರಾಕರಣೆಗೆ ಸಮ ಅಂತಲೂ ಇದೆಯಲ್ಲ?

ಪಠ್ಯಪುಸ್ತಕಗಳಲ್ಲಿ ಮಿತಿಮೀರಿದ ಜನಸಂಖ್ಯೆ ಹಾಗೂ ಹೆಚ್ಚಿದ ತಂತ್ರಜ್ಞಾನ ಬಳಕೆ ನಿರುದ್ಯೋಗಕ್ಕೆ ಕಾರಣಗಳು ಎಂದು ಓದುತ್ತೇವೆ. ಆದರೆ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕರ್ತವ್ಯ ನಿರ್ವಹಿಸುವ ತಂತ್ರಜ್ಞಾನ ಇನ್ನೂ ಬಳಕೆಗೆ ಬಂದಿಲ್ಲ. ನಿಕಟ ಭವಿಷ್ಯದಲ್ಲಿ ಬರುವ ಸಾಧ್ಯತೆಯೂ ಇಲ್ಲ. ತಥಾಕಥಿತ ಕೃತಕ ಬುದ್ಧಿಮತ್ತೆ ಅಷ್ಟು ಮುಂದುವರಿಯದಿರುವುದು ನಮ್ಮ ಪೀಳಿಗೆಯ ಅದೃಷ್ಟವೇ ಸರಿ.

ಯಾವುದೇ ಸಮಸ್ಯೆಯ ಆಳ ಅಗಲ ತಿಳಿಯದೇ ಪರಿಹಾರ ಸಾಧ್ಯವಿಲ್ಲ. ನಮ್ಮ ದೇಶದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ನ್ಯಾಯದಾನ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವುದೂ ಒಂದು ಕಾರಣವೆಂಬುದನ್ನು ಅಲ್ಲಗಳೆಯಲಾಗದು.

ಈ ವಿಳಂಬಕ್ಕೆ ನ್ಯಾಯಾಧೀಶರುಗಳ ಕೊರತೆಯೂ ಕಾರಣವಾಗಬಲ್ಲುದೆಂದು ಅರ್ಥೈಸಿಕೊಳ್ಳಲಾರದಷ್ಟು ಹೆಡ್ಡರೇ ನಮ್ಮನ್ನು ಆಳುವವರು? ಅಲ್ಲವೇ ಅಲ್ಲ. ಹಾಗಿದ್ದರೆ ಏಕೆ ನೇಮಕಾತಿ ಮಾಡುತ್ತಿಲ್ಲ?

ಯಾವುದೇ ಸರಕಾರಿ ಅಥವಾ ಖಾಸಗಿ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕಾದರೆ ಸಮರ್ಥ ಸಿಬ್ಬಂದಿ ಇರಬೇಕು. ನಿವೃತ್ತ ಸಿಬ್ಬಂದಿ ಜಾಗಕ್ಕೆ ಹೊಸಬರ ನೇಮಕಾತಿ ಆಗಬೇಕು. ಸೇವೆಯಲ್ಲಿರುವವರಿಗೆ ಸೂಕ್ತ ಸಮಯದಲ್ಲಿ ಬಡ್ತಿ ದೊರೆಯಬೇಕು. ಕಾಲಕಾಲಕ್ಕೆ ವರ್ಗಾವಣೆಗಳೂ ನಡೆಯಬೇಕು. ಇವೆಲ್ಲ ಸಿಬ್ಬಂದಿಯ ಸೌಖ್ಯಕ್ಕೆ ಮಾತ್ರವಲ್ಲ ಇಲಾಖೆಯ ದಕ್ಷತೆಗೆ ತೀರಾ ಅಗತ್ಯ. ಸಿಬ್ಬಂದಿಯ ಕೊರತೆ ಇರುವಾಗ ದಕ್ಷತೆಯನ್ನು ನಿರೀಕ್ಷಿಸುವುದು ಸಮಂಜಸವಲ್ಲ.

ನ್ಯಾಯಾಂಗ ವ್ಯವಸ್ಥೆ ಮಾತ್ರವಲ್ಲ ಎಲ್ಲ ಇಲಾಖೆಗಳಲ್ಲೂ ಇದೇ ಅವಸ್ಥೆ ಇದೆ. ಶಿಕ್ಷಣ, ಆರೋಗ್ಯ, ಕಂದಾಯ, ಸಾರಿಗೆ ಇತ್ಯಾದಿ. ಪ್ರತಿ ವರ್ಷ ಸಾವಿರಗಟ್ಟಲೆ ಶಿಕ್ಷಕರ ನೇಮಕ ಮಾಡುತ್ತೇನೆಂದು ಸರಕಾರ ಪ್ರಕಟನೆ ಹೊರಡಿಸುತ್ತದೆ. ಆದರೆ ಇನ್ನೂ ಏಕೋಪಾಧ್ಯಾಯ ಪ್ರಾಥಮಿಕ ಶಾಲೆಗಳು ಅನೇಕ ಇವೆ. ಅನೇಕ ಸರಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಪರಿಣಾಮವಾಗಿ ಎಸೆಸ್ಸೆಲ್ಸಿ ಪರೀಕ್ಷೆ ಫ‌ಲಿತಾಂಶ ಆಘಾತಕಾರಿಯಾಗಿರುತ್ತದೆ. ಅಂಥಲ್ಲಿ ದುಡಿಯುತ್ತಿರುವ ಶಿಕ್ಷಕರು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾರೆ,ಅವಮಾನದ ರೂಪದಲ್ಲಿ.

ಆರೋಗ್ಯ ಇಲಾಖೆಯ ಆರೋಗ್ಯವೂ ಚೆನ್ನಾಗಿಲ್ಲ. ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಓರ್ವ ವೈದ್ಯರ ನೇಮಕವಾಗುತ್ತದೆ. ಕೇಂದ್ರಕ್ಕೊಬ್ಬರಂತೆ ನೇಮಕ ಮಾಡಲು ನುರಿತ ವೈದ್ಯರ ಕೊರತೆ ಕಾರಣವೇ? ವೈದ್ಯರು ಮಾತ್ರವಲ್ಲ, ಸಹಾಯಕ ಸಿಬ್ಬಂದಿಯ ಕೊರತೆಯೂ ಕಣ್ಣಿಗೆ ರಾಚುವಂತಿದೆ. ಇವೆಲ್ಲ ಇಲ್ಲಗಳ ನಡುವೆಯೇ ಅನೇಕ ಸರಕಾರಿ ಆಸ್ಪತ್ರೆಗಳು ಜನಾನುರಾಗ ಗಳಿಸಿಕೊಂಡಿರುವುದೂ ಸತ್ಯವೇ. ಆದರೆ ಅಂಥಲ್ಲಿ ದುಡಿಯುತ್ತಿರುವ ಸಿಬ್ಬಂದಿಯ ಪಾಡು ಮಾತ್ರ ದೇವರಿಗೇ ಪ್ರೀತಿ. ಸರಕಾರಿ ಕೆಲಸವನ್ನು ದೇವರ ಕೆಲಸ ಎಂದೇ ಭಾವಿಸಿ ದುಡಿಯುವವರಿರುವುದರಿಂದಲೇ ಮೇಲೆ ಹೇಳಿದ ಜನಾನುರಾಗ ಲಭ್ಯವಾಗಿದೆ ಎಂದು ಅರ್ಥೈಸಿಕೊಳ್ಳಬೇಕು.

ರಸ್ತೆ ಸಾರಿಗೆ ಇಲಾಖೆಯ ಕತೆಯನ್ನು ಬಿಟ್ಟರೆ ಅಪಚಾರವಾದೀತು. ಸಿಬ್ಬಂದಿ ಕೊರತೆಯಿಂದಾಗಿ ಬಸ್ಸುಗಳ ಓಡಾಟವನ್ನೇ ಕಡಿತಗೊಳಿಸುವುದು ಅನಿವಾರ್ಯವಾಗುತ್ತದೆ. ಸಿಬ್ಬಂದಿಗೆ ಅಗತ್ಯವಿರುವಾಗಲೂ ರಜೆ ದೊರೆಯದಿರುವ ಪರಿಸ್ಥಿತಿಯಿದೆ. ಒಂದು ಬಸ್ಸಿಗೆ ಒಬ್ಬನೇ ಸಿಬ್ಬಂದಿಯನ್ನು ನೇಮಿಸುವ ಪ್ರಯೋಗವೂ ನಡೆದಿದೆ. ಏನು ಮಾಡಿದರೂ ನಮ್ಮ ರಾಜ್ಯದಲ್ಲಿ ಸರಕಾರಿ ಸಾರಿಗೆ ವ್ಯವಸ್ಥೆ ಪೂರ್ಣ ವಿಶ್ವಾಸಾರ್ಹತೆ ಗಳಿಸುವಲ್ಲಿ ಸೋತಿದೆ.

ಹೀಗೆ ವಿವಿಧ ಇಲಾಖೆಗಳಲ್ಲಿ ಖಾಲಿಯಾಗಿ ಉಳಿದಿರುವ ಹುದ್ದೆಗಳನ್ನೇಕೆ ಭರ್ತಿ ಮಾಡುತ್ತಿಲ್ಲ? ಯೋಗ್ಯ ಅಭ್ಯರ್ಥಿಗಳ ಕೊರತೆಯೇ? ಹುದ್ದೆಗಳನ್ನು ತುಂಬದೇ ಉಳಿತಾಯ ಮಾಡುವ ಉದ್ದೇಶವೇ? ಅಥವಾ ಏನು ಮಾಡಿದರೂ ಪ್ರಜೆಗಳು ಪ್ರಶ್ನಿಸುವುದಿಲ್ಲವೆಂದೇ? ಕೂಲಿಗಾಗಿ ಕಾಳು, ಉದ್ಯೋಗ ಖಾತರಿಯಂಥ ಯೋಜನೆಗಳು ನಿರುದ್ಯೋಗ ಸಮಸ್ಯೆ ಪರಿಹರಿಸುವಲ್ಲಿ ಪರ್ಯಾಪ್ತವೇ? ವಿದ್ಯಾವಂತ ನಿರುದ್ಯೋಗಿಗಳು ಇಂಥ ಯೋಜನೆಗಳ ಫ‌ಲಾನುಭವಿಗಳಾಗಬೇಕೇ? ಕೋಟಿಗಟ್ಟಲೆ ಯುವಕ ಯುವತಿಯರು ಉದ್ಯೋಗಕ್ಕೆ ಆಕಾಂಕ್ಷಿಗಳಾಗಿರುವಾಗ ನಿವೃತ್ತಿ ವಯಸ್ಸನ್ನು ಏರಿಸುವುದರ ಮರ್ಮವೇನು? ಇತ್ತೀಚೆಗೆ ರೇಲ್ವೆ ಇಲಾಖೆಯಲ್ಲಿ ಡಿ ದರ್ಜೆಯ ಹು¨ªೆಗಳಿಗೆ ಅರ್ಜಿ ಆಹ್ವಾನಿಸಿದಾಗ ಅರ್ಜಿ ಸಲ್ಲಿಸಿದವರಲ್ಲಿ ಹೆಚ್ಚಿನವರು ಪದವೀಧರರು, ಎಂಜಿನಿಯರಿಂಗ್‌ ಪದವೀಧರರೂ ಇದ್ದರು ಎಂಬ ಸುದ್ದಿ ನಿರುದ್ಯೋಗ ಸಮಸ್ಯೆಯ ಆಳ ಅಗಲವನ್ನು ನಿಚ್ಚಳವಾಗಿಸಿದೆ.

ನಿರುದ್ಯೋಗ ಸಮಸ್ಯೆಗೆ ಸರಕಾರಗಳು ಇತ್ತೀಚೆಗೆ ಮತ್ತೂಂದು ಪರಿಹಾರ ಹುಡುಕಿಕೊಂಡಿವೆ. ಖಾಯಂ ನೇಮಕಾತಿ ಮಾಡುವುದರ ಬದಲಿಗೆ ತೀರಾ ತಾತ್ಕಾಲಿಕ ನೇಮಕಾತಿ. ಆ ರೀತಿಯಲ್ಲಿ ತುಂಬಿಕೊಳ್ಳಲ್ಪಟ್ಟವರಿಗೆ ಅತಿಥಿ ಎಂಬ ಗೌರವಪೂರ್ಣ ನಾಮಧೇಯ. ಅವರಿಗೆ ವಿತರಿಸುವ ಸಂಭಾವನೆಯನ್ನು ಗೌರವಧನ ಎಂದು ಕರೆಯುವುದು. ಉದಾಹರಣೆಗೆ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು. ಅವರಿಗೆ ಕೆಲವೇ ತಿಂಗಳುಗಳ ಕಾರ್ಯಭಾರ, ಅದಕ್ಕನುಗುಣವಾದ ಗೌರವಧನ. ತಮ್ಮನ್ನು ಖಾಯಂಗೊಳಿಸುವಂತೆ ಅವರು ಹಕ್ಕೊತ್ತಾಯ ಮಾಡಲು ಅವಕಾಶವೇ ಇಲ್ಲದಂತೆ ಅವರ ಸೇವಾನಿಯಮಗಳಿರುವಂತೆ ನೋಡಿಕೊಳ್ಳುವುದು. ಸರಕಾರಕ್ಕೆ ಅನುಕೂಲವಾದಾಗ, ಅಂದರೆ ಮೂರು ತಿಂಗಳು ಆರು ತಿಂಗಳಿಗೊಮ್ಮೆ ಗೌರವಧನವನ್ನು ಬಿಡುಗಡೆ ಮಾಡುವುದು. ಇನ್ನು ಭದ್ರತಾ ಸಿಬ್ಬಂದಿಗಳನ್ನು ನೇಮಿಸಲು ಏಜನ್ಸಿಗಳಿರುವಂತೆ ಶಿಕ್ಷಕರ ನೇಮಕಾತಿಗೂ ಏಜನ್ಸಿಗಳು ಹುಟ್ಟಿಕೊಳ್ಳುವುದೊಂದು ಬಾಕಿ.

ಸರಕಾರ ಪ್ರಜೆಗಳಿಗೆ ಉದ್ಯೋಗ ಕೊಡಬೇಕು ಎನ್ನುವುದು ಕಲ್ಯಾಣ ರಾಜ್ಯದ ನೀತಿಯೇ ಹೊರತು ಎಲ್ಲ ರಾಜ್ಯ ವ್ಯವಸ್ಥೆಗಳಿಗೂ ಕಡ್ಡಾಯವಲ್ಲ. ಆದರೆ ನಮ್ಮ ದೇಶದಲ್ಲಿ ಅದೂ ಸರಕಾರದ ಕರ್ತವ್ಯಗಳಲ್ಲೊಂದು ಎಂಬುದಾಗಿ ನಾವು ಭಾವಿಸುತ್ತೇವೆ. ಆದರೆ ಒಂದಂತೂ ನಿಜ, ವಿವಿಧ ಇಲಾಖೆಗಳಲ್ಲಿ ಹುದ್ದೆಗಳನ್ನು ಖಾಲಿಯಾಗಿಯೇ ಉಳಿಸಿಕೊಂಡು ದೇಶದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಪ್ರಕಟಿಸುವುದು, ಮಾತ್ರವಲ್ಲ ಉದ್ಯೋಗ ಸೃಷ್ಟಿಯ ಮಾತನ್ನಾಡುವುದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರವೆಂದೇ ಭಾಸವಾಗುತ್ತದೆ.

ಸಂಪಿಗೆ ರಾಜಗೋಪಾಲ ಜೋಶಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ