ಇರಾನ್‌-ಅಮೆರಿಕ ಜಗಳ,ಭಾರತದ ಎದುರೂ ಉರುಳಿದ ದಾಳ 

Team Udayavani, Aug 10, 2018, 6:00 AM IST

ಭಾರತ ಸೌದಿ ಮೊದಲಾದ ಅನ್ಯ ದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಕೊಳ್ಳುವ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ದಿಢೀರನೆ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಅಭಾವ ಎದುರಾದಾಗ ಬೆಲೆ ಏರಿಕೆಯಾಗುತ್ತದೆ. ಚುನಾವಣಾ ವರ್ಷದಲ್ಲಿ ನಮ್ಮ ದೇಶಕ್ಕೆ ಇದು ಮತ್ತೂಂದು ಹೊಸ ತಲೆನೋವಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳೂ ಕಾಣುತ್ತಿವೆ. 

ಇರಾನ್‌ ದೇಶದಲ್ಲಿ ಚಲಾವಣೆಯಲ್ಲಿರುವ ರಿಯಾಲ್‌ ನಾಣ್ಯ ಅಮೆರಿಕದ ಡಾಲರ್‌ ಎದುರು ಹಿಂದೆಂದೂ ಕಾಣದ ಕುಸಿತ ಕಂಡಿದೆ. 1 ಅಮೆರಿಕನ್‌ ಡಾಲರ್‌ ಈಗ ಬರೋಬ್ಬರಿ 1 ಲಕ್ಷ ಇರಾನಿ ರಿಯಾಲ್‌ಗೆ ಸಮನಾಗಿದೆ. ಇದರಿಂದ ಇರಾನ್‌ನಾದ್ಯಂತ ತಲ್ಲಣ ಪ್ರಾರಂಭವಾಗಿದೆ. ಇದರ ಕಾರಣಗಳೇನು ಹಾಗೂ ಇದರಿಂದ ಭಾರತದ ಮೇಲೆ ಬೀರಬಹುದಾದ ಪರಿಣಾಮಗಳೇನು?

ಇರಾನ್‌ ಇನ್ನು ಮುಂದೆ ಡಾಲರ್‌ ನೋಟುಗಳನ್ನು ಖರೀದಿಸುವ ಹಾಗಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ 
ಟ್ರಂಪ್‌ ಫ‌ರ್ಮಾನು ಹೊರಡಿಸಿದ್ದಾರೆ. ಇರಾನ್‌ ಸರ್ಕಾರ 1 ಡಾಲರ್‌ನ ಮೌಲ್ಯ 44000 ರಿಯಾಲ್‌ ಎಂದು ತೀರ್ಮಾನಿಸಿದ್ದರೂ ಮುಂದಿನ ದಿನಗಳಲ್ಲಿ ಡಾಲರ್‌ ನೋಟುಗಳ ಸರಬ ರಾಜಿನಲ್ಲಿ ಕೊರತೆ ಉಂಟಾಗುತ್ತದೆಂದು ತಿಳಿದು ಇರಾನಿನ ಜನ ಈಗಲೇ ಅನಧಿಕೃತವಾಗಿ 1 ಲಕ್ಷ ರಿಯಾಲ್‌ ಕೊಟ್ಟು 1 ಡಾಲರ್‌ ಕೊಂಡುಕೊಳ್ಳುತ್ತಿ¨ªಾರೆ. 

ಇದೆಲ್ಲವೂ ಇರಾನ್‌ ಮೇಲೆ ಅಮೆರಿಕ ಹೇರಿರುವ ಆರ್ಥಿಕ ನಿರ್ಬಂಧಗಳ ಪರಿಣಾಮ. ಮೊದಲ ಹೆಜ್ಜೆಯೆನ್ನುವಂತೆ ಕೇವಲ ಡಾಲರ್‌ ನೋಟುಗಳ ಸರಬರಾಜಿನ ಮೇಲೆ ಕಡಿವಾಣ ಹಾಕಿದ್ದಾರೆ. ಬಹಳಷ್ಟು ಇರಾನಿಯರು ತಮ್ಮ ದೇಶ ಅಮೆರಿಕ ಎದುರು ನಿಲ್ಲಲು ಸಶಕ್ತವಲ್ಲ ಎಂದು ತಿಳಿದಿದ್ದು ಡಾಲರ್‌ ನೋಟುಗಳನ್ನು ಈಗಲೇ ಶೇಖರಿಸಿಕೊಳ್ಳುತ್ತಿದ್ದಾರೆ. ಆದರೆ ಇರಾನಿನಲ್ಲಿನ ಆರ್ಥಿಕ ಸಂಕಷ್ಟ ಈಗಿನದ್ದಲ್ಲ. 2015ರಲ್ಲಿ ಅಮೆರಿಕ ಸೇರಿದಂತೆ 6 ದೇಶಗಳ ಜೊತೆ ಇರಾನ್‌ ಅಣು ಒಪ್ಪಂದ ಮಾಡಿಕೊಂಡಿತ್ತು.
 
ಈ ಒಡಂಬಡಿಕೆಯಂತೆ ಇರಾನ್‌ ತಾನು ಮುಂದೆ ಅಣು ಸಂಶೋಧನೆ ಹಾಗೂ ಅಣ್ವಸ್ತ್ರ ತಯಾರಿಕೆಯಲ್ಲಿ ತೊಡಗುವು
ದಿಲ್ಲ ಎಂದು ಒಪ್ಪಿಕೊಂಡಿತ್ತು. ಇದಕ್ಕೆ ಸ್ಪಂದಿಸುವಂತೆ 6 ದೇಶಗಳು ಇರಾನ್‌ ಜೊತೆ ಆರ್ಥಿಕ ವಹಿವಾಟುಗಳನ್ನು ನಡೆಸುವುದಾಗಿ ಮಾತು ಕೊಟ್ಟಿದ್ದವು. ಹೀಗಾಗಿ ಇರಾನ್‌ ತನ್ನಲ್ಲಿದ್ದ ಕಚ್ಚಾ ತೈಲವನ್ನು ಪ್ರಪಂಚದಾದ್ಯಂತ ರಫ್ತು ಮಾಡಲು ಪ್ರಾರಂಭಿಸಿತು. ದೇಶದ ಆರ್ಥಿಕ ಸ್ಥಿತಿಯೂ ಸುಧಾರಿಸಿತು. ಆದರೆ, ಇದರ ಬೆನ್ನಲ್ಲೇ ಉದ್ಯೋಗ ಸೃಷ್ಟಿಯಾಗಲಿಲ್ಲ. ಇರಾನಿಯರ ಆಸೆಗಳೆಲ್ಲವೂ ಹುಸಿಯಾದವು. ಸಾಲದ್ದಕ್ಕೆ ರಿಯಾಲ್‌ ಮೌಲ್ಯ ಕುಸಿಯುತ್ತಲೇ ಇತ್ತು. ಹೀಗಾಗಿ ಎಲ್ಲ ವಸ್ತುಗಳ ದರ ಹೆಚ್ಚುತ್ತಲೇ ಹೋಯಿತು. ಭ್ರಷ್ಟಾಚಾರ ವ್ಯೂಹ ಬೇರೆ. ಇದೆಲ್ಲದರಿಂದ ಮೊದಲೇ ಆರ್ಥಿಕ ಹೊಡೆತ ಅನುಭವಿಸುತ್ತಿದ್ದ ಇರಾನಿಯರಿಗೆ ಟ್ರಂಪ್‌ ನಿರ್ಧಾರ ಗಾಯದ ಮೇಲೆ ಬರೆ ಎಳೆದ ಹಾಗಾಗಿದೆ. 

ಇಷ್ಟೆಲ್ಲಾ ಕಷ್ಟಗಳ ನಡುವಲ್ಲಿ ಇರಾನಿಯರು ಸರ್ವಾಧಿಕಾರಿ ಧೋರಣೆಯ ಸರ್ಕಾರದ ವಿರುದ್ಧ 2017ರ ಡಿಸೆಂಬರ್‌ನಲ್ಲಿ ಹಾಗೂ 2018ರ ಜೂಲೈನಲ್ಲೂ ಪ್ರತಿಭಟನೆಗಳನ್ನು ನಡೆಸಿದರು. ವಿಶೇಷವೆಂದರೆ ಆರ್ಥಿಕ ನೀತಿಗಳ ವಿರುದ್ಧದ ಪ್ರತಿಭಟನೆಗಳು ಬರಬರುತ್ತಾ ರಾಜಕೀಯ ಹಾಗು ಧಾರ್ಮಿಕ ಪ್ರತಿಭಟನೆಗಳಾಗಿ ಪರಿವರ್ತನೆಗೊಂಡವು. ಮಹಿಳೆಯರು ತಾವು ಸದಾಕಾಲ ಧರಿಸುತ್ತಿದ್ದ ಬುರ್ಖಾ ನಿಕಾಬ್‌ಗಳನ್ನು ಸಾರ್ವಜನಿಕವಾಗಿ ಕಳಚಿ ಧಾರ್ಮಿಕ ಹೇರಿಕೆಗಳ ವಿರುದ್ಧದ ತಮ್ಮ ಅಸಂತೋಷವನ್ನು ವ್ಯಕ್ತಪಡಿಸಿದರು. ಅಲ್ಲಿನ ಸರ್ಕಾರ ಇದೆಲ್ಲವನ್ನೂ ಕಂಡು ಅಚ್ಚರಿಗೊಂಡದ್ದಂತೂ ನಿಜ.

ಮುಂಬರುವ ದಿನಗಳಲ್ಲಿ ಇರಾನ್‌ ವಿರುದ್ಧ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲು ಅಮೆರಿಕ ಸಿದ್ಧತೆ ನಡೆಸುತ್ತಿದೆ. ನವೆಂಬರ್‌ 4 ರಿಂದಾಚೆಗೆ ಯಾವುದೇ ದೇಶ ಇರಾನ್‌ ನಿಂದ ಕಚ್ಚಾ ತೈಲ ಕೊಂಡಲ್ಲಿ ಅವರ ಮೇಲೂ ಇದೇ ರೀತಿಯ ನಿರ್ಬಂಧಗಳನ್ನು ಹಾಕುತ್ತೇವೆ ಎಂದು ಅಮೆರಿಕ ಬೆದರಿಸಿದೆ. ಇಂದಿನ ಪರಿಸ್ಥಿತಿಯಲ್ಲಿ ಭಾರತ ಹಾಗೂ ಚೀನಾ ಇರಾನ್‌ನಿಂದ ಅತಿ ಹೆಚ್ಚು ಕಚ್ಚಾ ತೈಲ ಕೊಳ್ಳುವ ದೇಶಗಳಾಗಿವೆ. ಮೇಲ್ನೋಟಕ್ಕೆ ಭಾರತ ನಾವು ವಿಶ್ವ ಸಂಸ್ಥೆ ವಿಧಿಸಿದ ಆರ್ಥಿಕ ನಿರ್ಬಂಧಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತೇವೆಂದು ಹೇಳುತ್ತಿದ್ದರೂ, ಭಾರತದ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ದೇಶದಲ್ಲಿರುವ ತೈಲ ಕಂಪೆನಿಗಳಿಗೆ ತೈಲದ ಸರಬರಾಜಿನ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಈಗಾಗಲೇ ಹೇಳಿ¨ªಾರೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. 

ಇದರಿಂದಾಗಿ, ಅತಿ ಶೀಘ್ರದಲ್ಲಿ ಭಾರತ ಸೌದಿ ಮೊದಲಾದ ಅನ್ಯ ದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಕೊಳ್ಳುವ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ದಿಢೀರನೆ ಮಾರುಕಟ್ಟೆಯಲ್ಲಿ ಅಷ್ಟು ಪ್ರಮಾಣದ ಕಚ್ಚಾ ತೈಲ ಸಿಗದಿದ್ದಾಗ ಸ್ವಾಭಾವಿಕವಾಗಿ ಅದರ ಬೆಲೆ ಏರುವ ಸಾಧ್ಯತೆಗಳೇ ಹೆಚ್ಚು. ಚುನಾವಣಾ ವರ್ಷದಲ್ಲಿ ನಮ್ಮ ದೇಶಕ್ಕೆ ಇದು ಮತ್ತೂಂದು ಹೊಸ ತಲೆನೋವಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳೂ ಕಾಣುತ್ತಿವೆ. 

ಮೂರನೇ ಹೆಜ್ಜೆಯೆನ್ನುವಂತೆ ಅಮೆರಿಕ ಇರಾನಿನ ಬಂದರು ಹಾಗೂ ಹಡಗುಗಳ ಮೇಲೆ ನಿರ್ಬಂಧಗಳನ್ನು ಹಾಕುವುದಾಗಿ ತಿಳಿಸಿದೆ. ಇದು ಭಾರತಕ್ಕೆ ಮತ್ತೂಂದು ಕಷ್ಟವಾಗಲಿದೆ. ಇರಾನಿನಲ್ಲಿ ಚಾಬಹಾರ್‌ ಎನ್ನುವ ಬಂದರನ್ನು ಇರಾನ್‌ ಸಹಯೋಗದಲ್ಲಿ ಭಾರತ ನಿರ್ವಹಿಸುತ್ತಿದೆ. ಇದೇ ಬಂದರಿನ ಮೂಲಕ ಪಕ್ಕದಲ್ಲಿರುವ ಅಫ‌ಘಾನಿಸ್ತಾನದ ಜೊತೆ ವ್ಯಾಪಾರ ವಹಿವಾಟು ನಡೆಸುತ್ತಿದೆ. ಈಗ ಧಿಡೀರನೆ ಅದನ್ನೂ ನಿಲ್ಲಿಸಬೇಕೆಂದರೆ ಭಾರತ ಅಫ್ಘಾನಿಸ್ತಾನಿನ ವ್ಯಾಪಾರದ ಮೇಲೂ ಭಾರೀ ಪರಿಣಾಮ ಉಂಟಾಗಬಹುದು.  ಮೇಲಾಗಿ ಇರಾನಿನ ಮೇಲೆ ಎಂತಹುದೇ ವಿಪರೀತ ಪರಿಸ್ಥಿತಿ ಬಂದೊದಗಿದರೂ ಅದರ ಪರಿಣಾಮ ಇರಾನ್‌ನ ಮೇಲಷ್ಟೇ ಅಲ್ಲದೆ ಇಡೀ ಮಧ್ಯಪ್ರಾಚ್ಯ ದೇಶಗಳ ಮೇಲೂ ಬೀಳಬಹುದಾಗಿದೆ. 

ಏಕೆಂದರೆ ಸಿರಿಯಾ, ಯೆಮೆನ್‌ ಮುಂತಾದ ದೇಶಗಳಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧಗಳಲ್ಲಿ, ರಾಜಕೀಯದಲ್ಲಿ ಇರಾನ್‌ನ ಕೈವಾಡವೂ ಇದೆ. ತನ್ನ ಮೇಲೆ ಅಮೆರಿಕ ನಿರ್ಬಂಧ ಹೇರಿದ್ದಕ್ಕೆ, ಇರಾನ್‌ ಅಮೆರಿಕಕ್ಕೆ ಇನ್ನಷ್ಟು ತೊಂದರೆಯೊಡ್ಡಲು ಸಿರಿಯಾ, ಯೆಮೆನ್‌ಗಳಲ್ಲೋ ಅಥವಾ ಬೇರೆ ಇನ್ಯಾವುದೋ ದೇಶದಲ್ಲಿ ಕೂಡ ಹೀಗೆಯೇ ಆಂತರಿಕ ಗಲಭೆಗಳನ್ನು ಹುಟ್ಟು ಹಾಕಬಹುದು. ಆಗ ಅಲ್ಲಿ ನೆಲೆಸಿರುವ ಭಾರತೀಯರಿಗೆ ಭದ್ರತೆಯ ಕೊರತೆ, ಉದ್ಯೋಗ ಕೊರತೆ ಉಂಟಾಗಿ ಎಲ್ಲರೂ ಸ್ವಂತ ನೆಲವನ್ನರಸಿ ಹಿಂತಿರುಗಬಹುದು. ಭಾರತ ಈ ಕಗ್ಗಂಟಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇದರಿಂದಾಗಿ ನಮ್ಮ ಸರ್ಕಾರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಒಂದು ವೇಳೆ ಇರಾನಿನಲ್ಲಿ ಆಡಳಿ ತವೇ ಬದಲಾಗಿ ಹೊಸದೊಂದು ತಂಡ ಅಧಿಕಾರ ವಹಿಸಿಕೊಂಡರೆ, ಭಾರತ ನವ ಆಡಳಿತದ ಜೊತೆ ಸುಸ್ಥಿರ ವಹಿವಾಟು ನಡೆಸುವುದಕ್ಕೆ, ಅಂದರೆ, ಸಂಬಂಧ ವೃದ್ಧಿಗೆ ಸಿದ್ಧವಾಗಿರಬೇಕು. ಇದೆಲ್ಲ ಕಾಲ್ಪನಿಕ ಕಥೆ ಎಂದು ತಳ್ಳಿಹಾಕುವ ಹಾಗಿಲ್ಲ. ಇದೆಲ್ಲದರ ನಡುವೆ ಇರಾನಿನಲ್ಲಿ ಸಾಮಾಜಿಕ ಕ್ರಾಂತಿ ನಡೆಯುವ ಎಲ್ಲ ಸಾಧ್ಯತೆಗಳೂ ಕಾಣಸಿಗುತ್ತಿವೆ. ಅಲ್ಲಿನ ಮಹಿಳೆಯರು ಬುರ್ಖಾ ತ್ಯಜಿಸಲು ಸಿದ್ಧವಾಗುತ್ತಿ¨ªಾರೆ, ಜನ ಸಾಮಾನ್ಯರು ಶಿಯಾ ಮುಸಲ್ಮಾನರ ಅಯತೊಲ್ಲಾಹ್‌ ಎನಿಸಿಕೊಂಡಿದ್ದ, ಇರಾನ್‌ನಲ್ಲಿ ಕಟ್ಟುನಿಟ್ಟಿನ ಧಾರ್ಮಿಕ ಕಟ್ಟಳೆಗಳನ್ನು ಹೇರಿ 3 ದಶಕದ ಹಿಂದೆಯೇ ಕಣ್ಮರೆಯಾದ ಖೊಮೇನಿ ವಿರುದ್ಧ ಈಗ ಬಹಿರಂಗವಾಗಿಯೇ ಘೋಷಣೆಗಳನ್ನು ಕೂಗುತ್ತಿ¨ªಾರೆ. 

ಅಂದರೆ, ಅಲ್ಲಿನ ಜನರಿಗೆ ಕೇವಲ ಆರ್ಥಿಕ ಸ್ವಾವಲಂಬನೆಯಷ್ಟೇ ಅಲ್ಲದೆ, ಅಭಿವ್ಯಕ್ತಿ ಸ್ವಾತಂತ್ರವೂ ಬೇಕು ಎನ್ನುವ ಹಂಬಲ ಹೆಚ್ಚಾಗುತ್ತಿದ್ದು, ಆಗಾಗ ಪ್ರತಿಭಟನೆಗಳ ಮೂಲಕ ಇದನ್ನು ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ಈ ಪ್ರತಿಭಟನೆಗಳು ದೊಡ್ಡ ಪ್ರಮಾಣದ ಧಾರ್ಮಿಕ ಕ್ರಾಂತಿಯಾಗಿ ಅಲ್ಲಿನ ಜನರ ವೇಷ ಭೂಷಣಗಳ ಮೇಲೆ ಪರಿಣಾಮ ಬೀರಿದರೆ , ಭಾರತದಲ್ಲಿರುವ ಶಿಯಾ ಜನಾಂಗದವರ ಮೇಲೆ ಯಾವ ರೀತಿಯಾಗಿ ಇದು ಪರೋಕ್ಷ ಸಾಂಸ್ಕೃತಿಕ ಪರಿಣಾಮ ಬೀರಬಹುದು ಎನ್ನುವುದನ್ನೂ ಕಾದು ನೋಡಬೇಕಿದೆ. 

– ಕಿಶೋರ್‌ ನಾರಾಯಣ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ