ಅಳಿವಿನಂಚಿನಲ್ಲಿದೆಯೇ ಭತ್ತದ ವ್ಯವಸಾಯ?

Team Udayavani, Oct 31, 2019, 5:30 AM IST

ಮುಂಬರುವ ದಿನಗಳಲ್ಲಿ ಕರ್ನಾಟಕದಿಂದ ಶಾಶ್ವತವಾಗಿ ಮಾಯವಾಗಲಿರುವ ಸಂಪದ್ಭರಿತ ಆಹಾರ ಬೆಳೆಗಳ ಪಟ್ಟಿಯಲ್ಲಿ ಭತ್ತ ಮೊದಲ ಸ್ಥಾನದಲ್ಲಿದ್ದರೆ ಅಚ್ಚರಿಯಿಲ್ಲ. ಕರಾವಳಿಯಲ್ಲಿ ಅದರ ಬೆಳೆಗೆ ಸೂಕ್ತವಾದ ಹೊಲ, ನೀರಾವರಿ ಅನುಕೂಲಗಳಿದ್ದರೂ ಭತ್ತದ ಬೆಳೆಗಾರ ಅದನ್ನೇ ನಂಬಿಕೊಂಡರೆ ಅವನ ಬದುಕು ದುರ್ಭರವಾಗುವುದರಲ್ಲಿ ಸಂದೇಹವಿಲ್ಲ. ಭತ್ತ ಬೆಳೆಯುವ ಬದಲು ಹೊಲದಲ್ಲಿ ಮಣ್ಣು ತುಂಬಿಸಿ ಮನೆಯ ಅಡಿಸ್ಥಳವನ್ನಾಗಿ ಬದಲಾಯಿಸಿ ಮಾರಿದರೆ ನೂರು ಪಾಲು ಲಾಭ ಗಳಿಸಬಹುದು ಎಂಬ ಕಾರಣಕ್ಕೆ ರಸ್ತೆ ಸನಿಹದ ಹೊಲಗಳೆಲ್ಲವೂ ತಾರಸಿ ಮನೆಗಳಾಗಿ ಬದಲಾದವು. ವಿಚಿತ್ರವೆಂದರೆ ಕೆಲವೆಡೆ ಹೊಲದ ಮೇಲೆದ್ದ ತಾರಸಿ ಮನೆಗಳ ಚಾವಣಿಯಲ್ಲಿ ಕೆಲವರು ಭತ್ತ ಬೆಳೆಯುವ ಮೂಲಕ ಮತ್ತೆ ಅದನ್ನು ಹೊಲಗಳಾಗಿ ಬದಲಾಯಿಸಿದ ದೃಶ್ಯಗಳೂ ಕಾಣಸಿಗುತ್ತವೆ. ಭತ್ತದ ಕಣಜಗಳಾಗಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಲಕ್ಷಾಂತರ ಎಕರೆ ಹೊಲಗಳೂ ಇಂದು ಅಡಕೆ ತೋಟಗಳಾಗಿವೆ ಅಥವಾ ಯಾವುದೇ ಕೃಷಿಯಲ್ಲದೆ ಕಳೆ ಗಿಡಗಳನ್ನು ಹೊತ್ತು ನಿಂತಿವೆ.

ಒಂದು ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ವಾರ್ಷಿಕ ವರಮಾನದ ಮಿತಿಯನ್ನು ಪರಿಗಣಿಸಿ ಅಗತ್ಯವಿದ್ದರೂ ಇಲ್ಲದಿದ್ದರೂ ತಿಂಗಳಿಗೆ ಮೂವತ್ತು ಕಿಲೋ ಅಕ್ಕಿಯನ್ನು ಉದಾರವಾಗಿ ಹಂಚುವ ಸರಕಾರ ಪ್ರತಿಯೊಂದು ಅಕ್ಕಿ ಕಾಳಿನ ಮೇಲೂ ಶ್ರಮಜೀವಿ ರೈತನ ಬೆವರಿನ ಹನಿಗಳು ಅಂಟಿಕೊಂಡಿರುವುದನ್ನು ಗಮನಿಸಬೇಕಿತ್ತು. ಆದರೆ ಮತ ಕೋಠಿಯ ಲೆಕ್ಕ ಹಾಕಿದಾಗ ಬೆಳೆಯುವವರ ಮತಕ್ಕಿಂತ ಉಣ್ಣುವವರ ಮತದ ತೂಕವೇ ದೊಡ್ಡದೆಂದು ಪರಿಗಣಿಸಿದ ಫ‌ಲವಾಗಿ ಪಡಿತರ ಚೀಟಿಗೆ ಮುಗಿ ಬೀಳುವವರ ಸಂಖ್ಯೆ ಬೆಳೆದಿದೆ, ಭತ್ತದ ಬೆಳೆಗಾರರ ಸಾಲು ಕ್ಷೀಣಿಸಿದೆ. ಕಿಲ್ಲೂರಿನ ದೇವರಾಯರು ಅಂಗೈಯಗಲದ ಹೊಲಗಳಲ್ಲಿ ನೂರಾರು ವಿಧದ ದೇಸೀ ಭತ್ತದ ತಳಿಗಳನ್ನು ಬೆಳೆದು ಉಳಿಸುತ್ತ ಬಂದರು. ಆದರೆ ಈ ತಳಿಗಳು ನಾಡಿನ ಹೋಗಲಿ, ಕನಿಷ್ಠ ಜಿಲ್ಲೆಯ ಒಬ್ಬೊಬ್ಬ ರೈತನ ಮೂಲಕ ಒಂದೊಂದು ತಳಿ ಆಸಕ್ತಿಯ ವ್ಯವಸಾಯವಾಗುತ್ತಿದ್ದರೆ ಹಿರಿಯರಾದ ದೇವರಾಯರ ಶ್ರಮಕ್ಕೆ ಸಾರ್ಥಕ್ಯ ಬರುತ್ತಿತ್ತು. ಆದರೆ ನಶಿಸಿ ಹೋಗುತ್ತಿರುವ ಭತ್ತದ ವ್ಯವಸಾಯದ ಬಗೆಗೆ ರೈತರು ಪಶ್ಚಾತ್ತಾಪ ಪಡಲಿಲ್ಲ. ಕಾರಣವೊಂದೇ ಅದರಲ್ಲಿ ಕೆಲಸ ಹೆಚ್ಚು, ಪ್ರತಿಫ‌ಲ ಕಡಿಮೆ. ದೇವರಾಯರೊಬ್ಬರೇ “ಹುಚ್ಚು ಸಾಹಸಿ’ ಎನಿಸಿಕೊಂಡರು. ಈ ತನಕ ನೆರೆಯ ಆಂಧ್ರದ ಕೃಷ್ಣಾನದಿಯ ಪ್ರವಾಹದ ಮೆಕ್ಕಲು ಮಣ್ಣು ಭತ್ತ ಬೆಳೆಯುವ ರೈತರಿಗೆ ವರದಾನ ವಾಗಿತ್ತು. ಕೇವಲ ಉಳುಮೆ ಮಾಡಿ ಬಿತ್ತಿದರೂ ಎಕರೆಗೆ ಐವತ್ತು ಕ್ವಿಂಟಾಲಿಗಿಂತ ಹೆಚ್ಚು ಭತ್ತ ಸಿಗುವ ಕಾರಣಕ್ಕೆ ರೈತರು ಅದರ ವ್ಯವಸಾಯ ಮಾಡುತ್ತ ಬಂದರು. ತಮಿಳ್ನಾಡು ಮತ್ತು ಕರ್ನಾಟಕದ ಗಿರಣಿಗಳಿಗೆ ಅಕ್ಕಿ ತಯಾರಿಕೆಗೆ ಇಲ್ಲಿಂದಲೇ ಭತ್ತ ಸಿಗುತ್ತಿತ್ತು. ಆದರೆ ಅಲ್ಲೂ ಯುವಕರು ಬೇಸಾಯವನ್ನು ಕಡೆಗಣಿಸಿ ಪಟ್ಟಣದತ್ತ ಮುಖ ಮಾಡಿದ್ದಾರೆ. ಪಾಮ್‌ತೈಲ ತಯಾರಿಸುವ ಕಂಪೆನಿಗಳು ರೈತರಿಗೆ ಬಲೆ ಬೀಸಿ ಇದರ ಉತ್ಪನ್ನ ಭತ್ತಕ್ಕಿಂತ ಅಧಿಕ ಲಾಭ ಕೊಡುತ್ತದೆಂದು ಹೇಳಿ ಹೊಲಗಳಲ್ಲಿ ಪಾಮ್‌ ಕೃಷಿ ಮಾಡಿಸುತ್ತಿದ್ದಾರೆ. ಹೀಗಾಗಿ ಅನೇಕ ಗಿರಣಿಗಳು ಮಧ್ಯ ಪ್ರದೇಶದಿಂದ ಭತ್ತ ತರಬೇಕಾಗಿದೆ. ಅಕ್ಕಿಯ ಬೆಲೆ ದುಬಾರಿ ಯಾಗಲು ಭತ್ತದ ಅಭಾವವೇ ಮೂಲ ಕಾರಣವಾಗಲಿದೆ.

ಜನರು ಇನ್ನೂ ಅಕ್ಕಿಯ ಪರ್ಯಾಯ ಆಹಾರ ಧಾನ್ಯಗಳ ಬಳಕೆಯ ಕುರಿತು ಯೋಚಿಸಿದಂತೆ ಇಲ್ಲ. ಕೊಳ್ಳಲಾಗದಷ್ಟು ಅಕ್ಕಿ ದುಬಾರಿಯಾಗುವ ದಿನಗಳು ಬಂದಾಗ ನಮ್ಮ ಆಯ್ಕೆ ಏನು ಎಂದು ಯೋಚಿಸಿದಂತಿಲ್ಲ. ಇತ್ತೀಚೆಗೆ ಸತತವಾಗಿ ಮಳೆಯ ತೀವ್ರ ಕ್ಷಾಮ ಕಂಡು ಬರುತ್ತಿದೆ. ಯಾವುದೇ ಜಲಾಶಯಗಳೂ ಭರ್ತಿಯಾಗುತ್ತಿಲ್ಲ. ಅಲ್ಲಿ ನೀರಿನ ಪ್ರಮಾಣ ಕಡಮೆಯಾಗುತ್ತಿದ್ದಂತೆ ಕೃಷಿ ಇಲಾಖೆಗಳು ಭತ್ತ ಬೆಳೆಯುವವರ ಕಾಯಕವನ್ನು ಹತ್ತಿಕುವ ಕೆಲಸ ಮಾಡುತ್ತವೆ. ಜಲಾಶಯದ ನೀರಿನ ಪ್ರಮುಖ ಪಾಲನ್ನು ಕುಡಿಯುವ ನೀರು ಪೂರೈಕೆಯ ಉದ್ದೇಶದಲ್ಲಿ ಕಾದಿರಿಸಲಾಗುತ್ತದೆ. ಜಲ ಸಂಗ್ರಹಣಾ ತಾಣಗಳ ಪ್ರದೇಶಗಳಲ್ಲಿ ಭತ್ತದ ವ್ಯವಸಾಯ ಮಾಡದಂತೆ ಅಲಿಖೀತ ನಿರ್ಬಂಧ ಜಾರಿಯಾಗುತ್ತದೆ. ಭತ್ತದ ಬೆಳೆಗೆ ನೂರು ದಿನಗಳ ಕಾಲ ನೀರು ಬೇಕಾಗುವುದೂ ಈ ಅಡ್ಡಿಗೆ ಒಂದು ಕಾರಣ. ಆದರೆ ಐವತ್ತು ಪ್ರತಿಶತ ನೀರನ್ನು ಮಾತ್ರ ಬಳಸಿ ಬೆಳೆಯುವ ತಳಿಗಳನ್ನು ಕೃಷಿ ವಿಜ್ಞಾನಿಗಳು ಈಗಾಗಲೇ ಶೋಧಿಸಿದ್ದಾರೆ. ಪ್ಲಾಸ್ಟಿಕ್‌ ಟ್ರೇಗಳು, ಹಾಳೆಗಳ ಮೇಲೆ ಮಣ್ಣು ಹರಡಿ ಭತ್ತದ ಸಸಿಗಳನ್ನು ತಯಾರಿಸುವ ಸುಲಭ ಪದ್ಧತಿಗಳೂ ಶೋಧವಾಗಿವೆ. ಸಾಧ್ಯವಿರುವಷ್ಟು ಮಟ್ಟಿಗೆ ಕರಾವಳಿ ಮತ್ತು ಮಲೆನಾಡಿನಲ್ಲಿ ಭತ್ತದ ಕೃಷಿಯ ಪುನರುತ್ಥಾನಕ್ಕೆ ಮುಖ್ಯವಾಗಿ ಸರಕಾರ ಬೆಳೆಗಾರರನ್ನು ಉತ್ತೇಜಿಸದಿದ್ದರೆ ಭವಿಷ್ಯದ ದಿನಗಳಲ್ಲಿ ಅಕ್ಕಿ ವಿದೇಶದಿಂದ ಬರಬೇಕಾದ ದುಃಸ್ಥಿತಿ ಪ್ರಾಪ್ತವಾಗಬಹುದು. ಭತ್ತ ಬೆಳೆಯಲು ಯೋಗ್ಯವಾದ ಭೂಮಿಯನ್ನು ಗುರುತಿಸುವ ಕಾರ್ಯ ನಡೆಯಬೇಕು. ಈಗ ಮತ ಬ್ಯಾಂಕಿನ ದೃಷ್ಟಿಯಿರಿಸಿ ಕೊಂಡು ಉಣ್ಣುವವನಿಗೆ ನೀಡುವ ಉಚಿತ ಅಕ್ಕಿಗೆ ನೀಡುವಷ್ಟೇ ಸಹಾಯಧನವನ್ನು ರೈತ ಬೆಳೆಯುವ ಅಕ್ಕಿಗೂ ಕೊಡಬೇಕು. ಭತ್ತ ಮಾರುವ ಹೊತ್ತಿಗೆ ಎಲ್ಲ ಖರ್ಚು ಕಳೆದು ಒಂದು ಕಿಲೋ ಭತ್ತಕ್ಕೆ ಬೀಳುವ ಬಂಡವಾಳದ ಮೊತ್ತವನ್ನು ಅನುಭವಿಗಳು ಗುರುತಿಸಿದ ಪ್ರಕಾರವೇ ರೈತನಿಗೆ ಲಾಭದಾಯಕ ಬೆಲೆಯ ರೂಪದಲ್ಲಿ ಸಿಗುವಂತಾಗಬೇಕು. ಭತ್ತದ ನಾಟಿ ಮತ್ತು ಕೊಯ್ಲಿನ ಕೆಲಸಕ್ಕೆ ಕೊಡಬೇಕಾದ ಕೂಲಿಯ ಮೊತ್ತ ಕರಾವಳಿಯ ರೈತನಿಗೆ ದಿಗಿಲು ಹುಟ್ಟಿಸುವಂತಿದೆ. ಭತ್ತದ ಕೆಲಸಕ್ಕೆ ಕೂಲಿಗಳು ಬರದಿರುವುದು ಕೂಡ ಈ ವ್ಯವಸಾಯದ ಅವನತಿಗೆ ಮೂಲ ಕಾರಣವಾಗಿದೆ. ಆದ್ದರಿಂದ ಸರಕಾರ ಈಗಾಗಲೇ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಿ ರುವ ಕೃಷಿ ಉಪಕರಣಗಳು, ಯಂತ್ರಗಳ ಸೌಲಭ್ಯವನ್ನು ಗ್ರಾಮ ಮಟ್ಟದಲ್ಲೂ ವಿಸ್ತರಿಸಬೇಕು. ಪೂರ್ಣ ಉಚಿತವಾಗಿ ಉಳುಮೆ, ನಾಟಿ ಮತ್ತು ಕೊಯ್ಲಿನ ಯಂತ್ರಗಳನ್ನು ಒದಗಿಸಬೇಕು.

ಭತ್ತದ ಬೆಳೆಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ವೈಯಕ್ತಿಕ ವಾಗಿ ಉಚಿತ ಬೆಳೆ ವಿಮೆಯ ಸೌಲಭ್ಯ ಸಿಗಬೇಕು. ಯಾವುದೇ ಕಾರಣದಿಂದ ಬೆಳೆ ಹಾಳಾದರೂ ರೈತನಿಗೆ ಅದರಿಂದ ಬರುವ ಆದಾಯ ಸಿಗಲು ವಿಮಾ ಸೌಲಭ್ಯ ಬದ್ಧವಾಗಿರಬೇಕು. ನಿರೀಕ್ಷೆ ಗಿಂತ ಹೆಚ್ಚ ಫ‌ಸಲು ಬೆಳೆದ ರೈತನಿಗೆ ನಗದು ಬಹುಮಾನ ಕೊಡಬೇಕು. ಅಂಗಳದಲ್ಲಿ ಭತ್ತ ಬೆಳೆಯುವವರಿಗಾಗಿಯೂ ಪ್ರೋತ್ಸಾಹಕ ಯೋಜನೆಗಳು ಬರಬೇಕು. ಉಚಿತವಾಗಿ ಕೊಟ್ಟು ಜನರನ್ನು ಸೋಮಾರಿಗಳಾಗಿ ಮಾಡುವುದಕ್ಕಿಂತ ಶ್ರಮಜೀವಿ ಗಳಿಗೆ ನೀಡುವ ಆರ್ಥಿಕ ಕೊಡುಗೆಗಳು ಆದಾಯ ಹೆಚ್ಚಿಸಲು ಸಹಕಾರಿಯಾಗಬಹುದು. ಇನ್ನು ಭತ್ತದ ಹೊಟ್ಟು ಬಹುತೇಕ ರೈತರಲ್ಲಿ ಸದ್ಬಳಕೆಯಾಗದೆ ಬೂದಿಯಾಗಿ ಹೋಗುತ್ತ ಇತ್ತು. ಇದೊಂದು ವಾಣಿಜ್ಯ ಸಂಪತ್ತೆಂದು ಅರಿತುಕೊಂಡು ಅದರಿಂದ ಆರ್ಥಿಕ ಲಾಭ ಹೊಂದುವ ವಿಧಾನಗಳಿದ್ದರೂ ಬೆಳೆಗಾರರಿಗೆ ಅದನ್ನು ತಿಳಿಸುವ ಕಾರ್ಯಗಳು ನಡೆಯಲಿಲ್ಲ. ಕಟ್ಟಿಗೆಯ ಬದಲು ಒಲೆ ಉರಿಸಲು ಇದನ್ನು ಉಪಯೋಗಿಸಿ ಕಟ್ಟಿಗೆ ಮತ್ತು ಅನಿಲವನ್ನು ಗಮನಾರ್ಹವಾಗಿ ಉಳಿಸಬಹುದು. ಭತ್ತದ ಹೊಟ್ಟಿನಿಂದ ಇಟ್ಟಿಗೆಗಳನ್ನು ಸುಡುವ ವಿಧಾನ ಅನೇಕರಿಗೆ ಗೊತ್ತಿದೆ. ಅದರಿಂದ ಗಿರಣಿಗಳಲ್ಲಿ ವಿದ್ಯುತ್‌ ಉತ್ಪಾದಿಸುವ ಗ್ಯಾಸಿಫೈಯರ್‌ ವಿಧಾನಗಳು ರೂಢಿಗೆ ಬಂದಿವೆ. ಹೊಟ್ಟನ್ನು ಕೃಷಿಗೆ ಬಳಸು ವುದರಿಂದ ರಸಗೊಬ್ಬರಗಳ ಬಳಕೆಯಲ್ಲಿಯೂ ಮಿತಿ ಸಾಧಿಸಬಹು ದೆಂಬುದು ಎಲ್ಲರಿಗೂ ತಿಳಿದಿದೆ. ವರ್ಷವಿಡೀ ಒಂದು ಬ್ರೆಡ್‌ ತಯಾರಿಕೆಯ ಬೇಕರಿಯಲ್ಲಿ ಬ್ರೆಡ್‌ ಬೇಯಿಸಲು ಭತ್ತದ ಹೊಟ್ಟು ಬಳಸಿದರೆ ವರ್ಷದ ಕೊನೆಗೆ ಒಂದು ಬೃಹತ್‌ ಮರವನ್ನು ಉಳಿಸಿದ ಪುಣ್ಯ ಬರುತ್ತದೆ ಎಂದಿವೆ ಪರಿಣತರ ಲೆಕ್ಕಾಚಾರಗಳು.

ಎಲ್ಲವೂ ಹೌದು. ಆದರೆ ಬೆಕ್ಕಿನ ಕೊರಳಿಗೆ ಯಾರು ಗಂಟೆ ಕಟ್ಟಬೇಕು? ನಾವು ಭತ್ತ ಬೆಳೆಯುವುದಿಲ್ಲ, ಅದರಿಂದ ಲಾಭ ಇಲ್ಲ ಎಂದು ಮನಗಂಡು ದೂರ ಸರಿದಿರುವ ಬೇಸಾಯ ಗಾರನನ್ನು ಮತ್ತೆ ಆ ಕಡೆಗೆ ಮನವೊಲಿಸುವ ಕೆಲಸ ಮಾಡಬೇಕಾಗಿರುವುದು ಸರಕಾರ. ಯಾಕೆಂದರೆ ಅವನ ಬೆವರಿನ ಬೆಲೆ ತಿಳಿಯದೆ ಬೆಳೆಯನ್ನು ಕಡಮೆ ದರದಲ್ಲಿ ಲೆವಿಯ ರೂಪದಲ್ಲಿ ಖರೀದಿಸಿ ಉಚಿತವಾಗಿ ಹಂಚುವ ಮೂಲಕ ಅಕ್ಕಿಯ ಮಹತ್ವವನ್ನೇ ಜನ ತಿಳಿಯದಂತೆ ಮಾಡಿರುವ ಸರಕಾರವೇ ಭತ್ತದ ವ್ಯವಸಾಯದ ಪುನರುತ್ಥಾನದ ಮೂಲಕ ಮತ್ತೆ ಮೂಡಣ ಬಾನಿನಲ್ಲಿ ಮುಂಗಾರಿನ ಅಲೆ ಕಾಣಿಸುವಾಗ ಹಚ್ಚ ಹಸುರಿನ ಸೀರೆಯುಟ್ಟು ಭತ್ತದ ಪೈರು ಶೋಭಾಯಮಾನ ಗೊಂಡು ನಿಸರ್ಗದ ಸೊಬಗಿನ ಸಿಂಗಾರವನ್ನು ತೋರಲು ಅಣಿಗೊಳಿಸಬೇಕಾಗಿದೆ.

– ಪ. ರಾಮಕೃಷ್ಣ ಶಾಸ್ತ್ರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ