ಜಮ್ಮು-ಕಾಶ್ಮೀರಕ್ಕೆ ಸಾಕು ಪ್ರತ್ಯೇಕ ಸ್ಥಾನಮಾನ

ಆರ್ಟಿಕಲ್ 370ರ ರದ್ದತಿ ಸರಕಾರ ಮರೆಯದಿರಲಿ

Team Udayavani, Jun 12, 2019, 5:50 AM IST

ಭಾರತದ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ಏಕೆ? ಕಾರಣಾಂತರದಿಂದ ಅಂಥ ಅವಕಾಶ ಲಭಿಸಿದೆಯಾದರೂ ಅದನ್ನು ಮುಂದುವರಿಸುವ ಅಗತ್ಯವೇನು? ಯಾವುದೇ ವ್ಯಕ್ತಿ ಯಾ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದು ಸಮಾನತೆಯ ತತ್ವಕ್ಕೆ ವಿರೋಧವಾದುದು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ 350ಕ್ಕೂ ಅಧಿಕ ಸಂಖ್ಯೆಯ ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಜಯ ಸಾಧಿಸಿದೆ. ಬಿಜೆಪಿಯೊಂದೇ 303 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ 2014ರ ತನ್ನ ನಿರ್ವಹಣೆಯನ್ನು ಉತ್ತಮಪಡಿಸಿಕೊಂಡಿದೆ. ಈ ಸಾಧನೆಯನ್ನು ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿಯವರ ಕಾಂಗ್ರೆಸ್‌ ಯುಗಕ್ಕೆ ಸರಿಸಮನಾದ ಜಯವೆಂಬಂತೆ ಮಾಧ್ಯಮಗಳು ಬಿಂಬಿಸಿವೆ. ನರೇಂದ್ರ ಮೋದಿಯವರ ಸಮರ್ಥ ನಾಯಕತ್ವವೇ ಸತತ ಎರಡನೇ ಬಾರಿಗೆ ಈ ಜಯವನ್ನು ತಂದುಕೊಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಅರ್ಥಾತ್‌ ಮೋದಿಯವರ ನಾಯಕತ್ವವನ್ನು ಹಾಗೂ ಅವರು ಮುನ್ನಡೆ ಸುತ್ತಿರುವ ಭಾರತೀಯ ಜನತಾ ಪಾರ್ಟಿಯ ತತ್ವಗಳನ್ನು ಬಹುತೇಕ ಮಂದಿ ಒಪ್ಪಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಏಕೆಂದರೆ ಮೋದಿಯವರು ಐದು ವರ್ಷದಲ್ಲಿ ತಂದ ಅನೇಕ ಕ್ರಾಂತಿಕಾರಿ ಸುಧಾರಣೆಗಳನ್ನು ಒಪ್ಪಿಕೊಂಡು ನಾಯಕತ್ವ ಹಾಗೂ ಪಕ್ಷದ ಬಗ್ಗೆ ಭರವಸೆಯನ್ನಿಟ್ಟಿದ್ದಾರೆ ಎನ್ನುವುದು ಈ ಚುನಾವಣಾ ಫ‌ಲಿತಾಂಶದಿಂದ ವ್ಯಕ್ತವಾಗುತ್ತದೆ. ಇದರಿಂದ ಪಕ್ಷದ ಹೊಣೆ ಗಾರಿಕೆಯು ಹೆಚ್ಚಾಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಹಾಗೆ ಬೆಂಬಲಿಸಿದವರ ನಿರೀಕ್ಷೆಗೆ ತಕ್ಕಂತೆ ಆಶ್ವಾಸನೆಗಳನ್ನು ಈಡೇರಿಸುವ ದೃಢ ಸಂಕಲ್ಪ ಮಾಡಬೇಕಾದ ಅನಿವಾರ್ಯತೆ ಪಕ್ಷಕ್ಕೆ ಪ್ರಾಪ್ತವಾಗಿದೆ.

ಚುನಾವಣಾ ಪೂರ್ವದಲ್ಲಿ ಭಾರತೀಯ ಜನತಾ ಪಾರ್ಟಿ ಆರ್ಟಿಕಲ್ 370ರ ರದ್ದತಿಯ ಬಗ್ಗೆ ತಕ್ಕ ಕ್ರಮಕೈಗೊಳ್ಳುವ ಭರವಸೆ ನೀಡಿದೆ. ಈ ಭರವಸೆಯನ್ನು ರಾಷ್ಟ್ರೀಯ ಮನೋಭಾವವುಳ್ಳ ಅನೇಕ ಬುದ್ಧಿಜೀವಿಗಳು ಸ್ವಾಗತಿಸಿದ್ದಾರೆ. ಭಾರತೀಯ ಸಂವಿಧಾನ ಸೂಚಿಸುವ ಭಾರತದ ಗಡಿಯೊಳಗಿನ ಒಂದು ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ಏಕೆ? ಕಾರಣಾಂತರದಿಂದ ಅಂಥ ಅವಕಾಶ ಲಭಿಸಿತಾದರೂ ಅದನ್ನು ದೀರ್ಘ‌ಕಾಲ ಮುಂದುವರಿಸುವ ಅಗತ್ಯವೇನು? ಯಾವುದೇ ವ್ಯಕ್ತಿ ಯಾ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದು ಸಮಾನತೆಯ ತತ್ವಕ್ಕೆ ವಿರೋಧವಾದುದು. ಸಮಾನತೆಯನ್ನು ಪ್ರತಿಪಾದಿಸುವ ನಮ್ಮ ಸಂವಿಧಾನದ ಮೂಲಾಶಯದಂತೆ ಅವಕಾಶಗಳನ್ನು ಆದ್ಯತೆಯ ನೆಲೆಯಲ್ಲಿ ನೀಡಿ ಅಭಿವೃದ್ಧಿಪಡಿಸುವುದು ಹಾಗೂ ಸಮಸ್ಯೆಗಳನ್ನು ಪರಿಹರಿಸಬೇಕಲ್ಲದೆ ಪ್ರತ್ಯೇಕ ಸ್ಥಾನಮಾನ ನೀಡಿ ಅಲ್ಲಿಯ ಪ್ರಜೆಗಳು ತಮಗೆ ಇಷ್ಟ ಬಂದ ಹಾಗೆ ಕಾನೂನು ರೂಪಿಸಿಕೊಂಡು ಆಡಳಿತ ನಡೆಸುವ ಅವಕಾಶ ಒದಗಿಸುವುದು ಅಖಂಡತೆಗೆ ಧಕ್ಕೆ ತರಬಲ್ಲದು ಎಂಬ ಅಭಿಪ್ರಾಯವುಳ್ಳ ಬುದ್ಧಿಜೀವಿಗಳ ಪಾಲಿಗೆ ರದ್ದತಿಯ ಭರವಸೆ ತೃಪ್ತಿ ತಂದಿದೆ ಹಾಗೂ ನಿರೀಕ್ಷೆಯನ್ನು ಹೆಚ್ಚಿಸಿದೆ.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಇದ್ದ ನೂರಾರು ಚಿಕ್ಕ ಪುಟ್ಟ ತುಂಡರಸರ ಅರಸೊತ್ತಿಗೆಗಳನ್ನು ಭಾರತದೊಡನೆ ವಿಲೀನಗೊಳಿಸುವ ಪ್ರಕ್ರಿಯೆಯ ಮುಂದಾಳತ್ವವನ್ನು ವಲ್ಲಭಭಾಯ್‌ ಪಟೇಲರು ವಹಿಸಿಕೊಂಡು ಸುಮಾರು 350ಕ್ಕೂ ಮಿಕ್ಕಿದ ಅರಸೊತ್ತಿಗೆಗಳನ್ನು ಭಾರತ ಸರಕಾರದೊಡನೆ ವಿಲೀನಗೊಳಿಸಿರುವುದು ಸರಿಯಷ್ಟೇ. ವಿಲೀನಗೊಂಡ ರಾಜರು ಭಾರತ ಸರಕಾರದೊಡನೆ ಮಾಡಿಕೊಂಡ ಮುಚ್ಚಳಿಕೆಯಂತೆ ಆಗ ಜಮ್ಮು ಮತ್ತು ಕಾಶ್ಮೀರವನ್ನು ಆಳುತ್ತಿದ್ದ ದೊರೆ ಹರಿಸಿಂಗ್‌ ಜಮ್ಮು ಮತ್ತು ಕಾಶ್ಮೀರದ ವಿಲೀನ ಪ್ರಕ್ರಿಯೆಯ ನೇತೃತ್ವ ವಹಿಸಿಕೊಂಡ ನೆಹರೂರವರ ಸಮಕ್ಷಮ ಬರೆದುಕೊಟ್ಟಿದ್ದಾರೆ ಹಾಗೂ ಉಳಿದ ರಾಜರುಗಳು ಬರೆದುಕೊಟ್ಟ ಮುಚ್ಚಳಿಕೆಯಂತೆ ಯಥಾವತ್ತಾಗಿತ್ತು. ಆದಾಗ್ಯೂ ಅನಂತರ ಭಾರತ ಸರಕಾರದ ಪರವಾಗಿ ವ್ಯವಹರಿಸಿದ ಚುನಾಯಿತ ಪ್ರತಿನಿಧಿಗಳ ಮಾತುಕತೆ ಭಾರತೀಯ ಸಂವಿಧಾನದಲ್ಲಿ ಆರ್ಟಿಕಲ್ 370ರ ಸೇರ್ಪಡೆಗೆ ಕಾರಣವಾಗಿಬಹುದಾದರೂ ಇಷ್ಟು ದೀರ್ಘ‌ಕಾಲ ಮುಂದುವರಿಸುವ ಅಗತ್ಯವಿಲ್ಲ. ಹೆಚ್ಚೆಂದರೆ ಹತ್ತು ವರ್ಷದಲ್ಲಿ ಇತ್ಯರ್ಥಪಡಿಸಬೇಕಾಗಿತ್ತು. ಈ ವಿಳಂಬ ಈಗ ಅಲ್ಲಿಯ ಜನ ಇದು ನಮ್ಮ ಹಕ್ಕು ಎಂಬ ಹಾಗೆ ಪ್ರತಿಪಾದಿಸಲು ಎಡೆ ಮಾಡಿಕೊಟ್ಟಿದೆ.

ಜಮ್ಮು ಮತ್ತು ಕಾಶ್ಮೀರ ಭಾರತದ ಗಡಿಯೊಳಗಿದ್ದರೂ ಅಲ್ಲಿಯ ಆಡಳಿತಕ್ಕೆ ಪ್ರತ್ಯೇಕ ಕಾನೂನು ರೂಪಿಸಿಕೊಳ್ಳಲು ಅವಕಾಶ ಈ ಆರ್ಟಿಕಲ್ 370 ನೀಡುತ್ತದೆ. ಇದರಿಂದ ಅಲ್ಲಿನ ಜನಕ್ಕೆ ಒಂದು ಪ್ರತ್ಯೇಕತಾಭಾವ ಬೆಳೆಸಿಕೊಳ್ಳಲು ಸಹಕಾರಿಯಾಯಿತು. ಮುಸ್ಲಿಂ ಪ್ರಾಬಲ್ಯವುಳ್ಳ ಈ ಪ್ರದೇಶದಲ್ಲಿ ಈ ಪ್ರತ್ಯೇಕತಾಭಾವ ಇತರ ಒಂದು ಸಮಾಜದ ಮೇಲೆ ಅಪಾಯಕಾರಿಯಾಗಿ ಪರಿಣಮಿಸಿತು. ಹಿಂದುಗಳು ಮುಖ್ಯವಾಗಿ ಕಾಶ್ಮೀರಿ ಪಂಡಿತರು ಜೀವ ಭಯದಲ್ಲಿ ಊರು ಮನೆ ಬಿಟ್ಟು ಓಡಿ ಹೋಗಲಾರಂಭಿಸಿದರು. ‘ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ’ ಎಂದು ನಾವು ಆಸೇತು ಹಿಮಾಚಲ ಪರಿಯಂತೆ ಭಜನೆ ಮಾಡುತ್ತೇವೆ. ಅಂಥ ಕಾಶ್ಮೀರದಲ್ಲಿ ಈಗ ಹಿಂದುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗೆ ಹೇಳಿದರೆ ಕೇಸರೀಕರಣವಾದೀತು. ಹಾಗಲ್ಲ, ಚಿಂತಿಸಬೇಕಾದುದು ಹೀಗೆ. ದೇಶ ವಿಭಜನೆಯ ಕಾಲಕ್ಕೆ ಯಾರ್ಯಾರು ಎಲ್ಲಿ ವಾಸವಿದ್ದರೋ ಅಲ್ಲಿಯೇ ಅವರಿಗೆ ಬದುಕುವ ಹಕ್ಕು ಇದೆಯಷ್ಟೇ? ಆ ಬದುಕುವಿಕೆಗೆ ಅಲ್ಲಿನ ಸರಕಾರ ರಕ್ಷಣೆ ನೀಡಬೇಕಾದುದು ಕರ್ತವ್ಯವಲ್ಲವೇ? ಭಾರತದ ಇತರ ಎಲ್ಲ ಭಾಗದಲ್ಲಿಯೂ ಭಾರತ ಸರಕಾರ ರಕ್ಷಣೆ ನೀಡುತ್ತದಲ್ಲವೇ? ಆದರೆ ಅಂಥ ರಕ್ಷಣೆ ಕಾಶ್ಮೀರದ ಅಲ್ಪಸಂಖ್ಯಾತ ಹಿಂದುಗಳಿಗೆ ಸಿಗಲಿಲ್ಲವೆಂಬ ಅಂಶವನ್ನು ಇಲ್ಲಿ ಬೊಟ್ಟು ಮಾಡಿ ತೋರಿಸಬೇಕಾಗಿದೆ. ಭಾರತ ಸರಕಾರ ಮೂಕಪ್ರೇಕ್ಷಕನಂತೆ ಓಡಿ ಹೋಗುತ್ತಿರುವ ಕಾಶ್ಮೀರಿ ಪಂಡಿತರನ್ನು ಕಂಡು ಮೌನ ವಹಿಸಿತು. ಇದಕ್ಕೆ ನೆಪ ಆರ್ಟಿಕಲ್ 370.

ಇದು ಸಾಲದೆಂಬಂತೆ ಕಾಶ್ಮೀರಿ ನೆಲವನ್ನು ಉಗ್ರರ ನೆಲೆಯಾಗಿ ಪರಿವರ್ತಿತವಾಗುವಂತೆ ಮಾಡಲು ಪಾಕಿಸ್ತಾನಕ್ಕೆ ಅಲ್ಲಿನ ಸರಕಾರ ಸಹಾಯ ಮಾಡುತ್ತಿದೆ. ಉಗ್ರರ ವಿಧ್ವಂಸಕಾರಿ ಚುಟುವಟಿಕೆಗಳ ಬಗ್ಗೆ ದೇಶ ವಿದೇಶದ ಬುದ್ಧಿಜೀವಿಗಳು ಖೇದ ವ್ಯಕ್ತಪಡಿಸುತ್ತಿದ್ದಾರೆ. ಇದು ವಿಶ್ವವೇ ತಿಳಿದ ವಿಷಯ. ನಮ್ಮ ಪ್ರಧಾನಿಯವರು ಉಗ್ರರ ವಿರುದ್ಧದ ಹೋರಾಟಕ್ಕೆ ಬೆಂಬಲ ಪಡೆಯಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಿದ್ದಾರೆ. ಗುಪ್ತವಾಗಿ ಉಗ್ರರನ್ನು ಸಲಹುವ ಪಾಕಿಸ್ತಾನಕ್ಕೆ ಅಮೆರಿಕ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕುಖ್ಯಾತ ಉಗ್ರ ಮಸೂದ್‌ ಅಜರ್‌ನನ್ನು ಉಗ್ರರ ಪಟ್ಟಿಗೆ ಸೇರಿಸಲು ಒಂದಲ್ಲ ಒಂದು ನೆಪವನ್ನು ಒಡ್ಡಿ ಹಿಂದೇಟು ಹಾಕುತ್ತಿದ್ದ ಚೈನಾ ಕೂಡಾ ಈಗ ಒಪ್ಪಿದೆ ಎಂದರೆ ಅದು ನರೇಂದ್ರ ಮೋದಿಯವರ ಅಂತರಾಷ್ಟ್ರೀಯ ವ್ಯವಹಾರ ತಜ್ಞತೆ ಎಂದೇ ಶ್ಲಾಘಿಸಬೇಕಾಗಿದೆ. ಒಟ್ಟಿನಲ್ಲಿ ಉಗ್ರರ ವಿರುದ್ಧದ ಹೋರಾಟಕ್ಕೆ ಈಗ ವ್ಯಾಪಕ ಬೆಂಬಲ ಸಿಕ್ಕಿದೆ.

ವಸ್ತುಸ್ಥಿತಿ ಹೀಗಿರುವಾಗ ಆರ್ಟಿಕಲ್ 370ರ ಬಲದಲ್ಲಿ ಪ್ರತ್ಯೇಕ ಆಡಳಿತ ನಡೆಸುತ್ತ ಉಗ್ರರನ್ನು ಪೋಷಿಸುವ ಜಮ್ಮು – ಕಾಶ್ಮೀರದ ಈಗಿನ ಆಡಳಿತ ಪದ್ಧತಿಯನ್ನು ಪ್ರಸ್ತಾಪಿತ ಕಲಂನ್ನು ರದ್ದು ಪಡಿಸುವುದರ ಮೂಲಕ ಕೊನೆಗಾಣಿಸಲೇ ಬೇಕಾಗಿದೆ. ಭಾರತೀಯ ಸಂವಿಧಾನದ ಪರಿಚ್ಛೇದ 368ರಲ್ಲಿ ಸಂವಿಧಾನದ ಯಾವುದೇ ಕಲಂನ್ನು ಸಂಪೂರ್ಣ ಅಥವಾ ಭಾಗಶಃ ತೊಡೆದು ಹಾಕುವ ಯಾ ಸೇರ್ಪಡೆಗೊಳಿಸುವ ಅಧಿಕಾರ ಸಂಸತ್ತಿಗೆ ದತ್ತವಾಗಿದೆ. ಆದರೆ ಅದಕ್ಕೆ ಪ್ರತ್ಯೇಕ ವಿಧಿ ವಿಧಾನಗಳಿವೆ. ಇಂಥ ಸಂವಿಧಾನಿಕ ಪ್ರಸ್ತಾಪಗಳ ಅನುಮೋದನೆಗಳು ಉಭಯ ಸದನಗಳಲ್ಲಿ ಮೂರನೇ ಎರಡು ಬಹುಮತದಲ್ಲಿ ಮಂಜೂರು ಆಗಬೇಕಾಗುತ್ತದೆ. ಈಗ ಹಿಂದಿನೆಲ್ಲ ಸಂದರ್ಭಗಳಿಗಿಂತಲೂ ಅನೂಕೂಲವಾದ ವಾತಾವರಣ ಈಗಿನ ಬಿಜೆಪಿ ನೇತೃತ್ವದ ಸರಕಾರಕ್ಕಿದೆ ಎಂದರೆ ಅವಸರದ ಹೇಳಿಕೆ ಆಯಾಗಬಹುದು. 542 ಸ್ಥಾನಗಳಿರುವ ಲೋಕಸಭಾ ಸದನದಲ್ಲಿ ಮೂರನೇ ಎರಡು ಬಹುಮತವೆಂದರೆ 361. ಇತ್ತ ಬಿಜೆಪಿ ನೇತೃತ್ವದ ಎನ್‌ಡಿಎಗೆ 2019ರ ಚುನಾವಣೆಯಲ್ಲಿ 356 ಸ್ಥಾನಗಳು ಲಭಿಸಿವೆ. ಲೋಕಸಭೆಯಲ್ಲಿ ಪ್ರಸ್ತಾಪ ಸಲಿಸಾಗಿ ಮಂಜೂರಾಗುವುದರಲ್ಲಿ ಯಾವ ಸಂದೇಹವಿಲ್ಲ. ಆದರೆ ರಾಜ್ಯಸಭೆಯಲ್ಲಿ ಬಿಜೆಪಿಗೆ ಬೇಕಾದ ಬಹುಮತ ಇಲ್ಲವೆ.

ಈಗಾಗಲೇ ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್‌ ಮತ್ತು ರಾಷ್ಟ್ರೀಯ ಪೌರತ್ವ ನೀತಿಗೆ ಸಂಬಂಧಿಸಿದ ಮಸೂದೆಗಳು ಅನುಮೋದನೆಗೊಳ್ಳದೆ ನನೆಗುದಿಗೆ ಬಿದ್ದಿವೆ. ಆರ್ಟಿಕಲ್ 370ರ ರದ್ದತಿಯ ಪ್ರಸ್ತಾಪವನ್ನು ಹೀಗಾಗಲು ಬಿಡಬಾರದು. ಪ್ರಸ್ತಾಪದ ಪ್ರಾಮುಖ್ಯತೆಯನ್ನು ಮನಗಾಣುವಂತೆ ವಿರೋಧ ಪಕ್ಷದವರನ್ನು ಒತ್ತಾಯಿಸಬೇಕಾದ ಅಗತ್ಯವಿದೆ. ಇಲ್ಲಿ ಸಾರ್ವಜನಿಕರು ರದ್ದತಿಯ ಪರವಾಗಿ ಧ್ವನಿ ಎತ್ತಿ ಎಲ್ಲ ಪಕ್ಷದ ಚುನಾಯಿತ ಪ್ರತಿನಿಧಿಗಳನ್ನು ಜಾಗೃತಗೊಳಿಸಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ನಮ್ಮದು ಒಕ್ಕೂಟ ಸ್ವರೂಪದ ಪ್ರಜಾಸತ್ತೆ. ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಆಡಳಿತ ನಡೆಸುತ್ತಿವೆ. ಒಕ್ಕೂಟ ಪದ್ಧತಿಯಲ್ಲಿಯೂ ರಾಜ್ಯಗಳು ರಾಷ್ಟ್ರದ ಹಿತಕ್ಕೆ ಧಕ್ಕೆಯಾಗದಂತೆ ಆಡಳಿತ ನಡೆಸಬೇಕಾದ ಜವಾಬ್ದಾರಿ ಇದೆ. ದೇಶದ ಹಿತದೃಷ್ಟಿಯಿಂದ ಈ ಪ್ರಾದೇಶಿಕ ಪಕ್ಷಗಳು ಲೋಕಸಭೆಯಲ್ಲಿ ತಾವು ಹೊಂದಿದ ಸ್ಥಾನ ಬಲದ ವರ್ಚಸ್ಸನ್ನು ಆರ್ಟಿಕಲ್ 370ರ ರದ್ದತಿಯ ಪ್ರಸ್ತಾಪಕ್ಕೆ ಬೀರುವ ಸಂಕಲ್ಪ ಮಾಡಬೇಕಾಗಿದೆ. ಈ ಬಗ್ಗೆ ಪ್ರಸಕ್ತ ಎನ್‌ಡಿಎ ಸರಕಾರ ಪ್ರಸ್ತಾಪ ಅನುಮೋದನೆಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ತಾನು ನೀಡಿದ ಭರವಸೆಯನ್ನು ಕಾರ್ಯರೂಪಕ್ಕೆ ತರಲಿ.

• ಬೇಳೂರು ರಾಘವ ಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ