ಸಾಲು-ಸಾಲು ರಜೆ: ಯಾರು ಹೊಣೆ?

Team Udayavani, Oct 3, 2019, 4:50 AM IST

ಸರ್ಕಾರಿ ಅಥವಾ ಬ್ಯಾಂಕ್‌ ನೌಕರನಿಗೆ ವರ್ಷದಲ್ಲಿ 52 ಭಾನುವಾರಗಳು, 12 ಎರಡನೇ ಶನಿವಾರ (ಬ್ಯಾಂಕುಗಳಿಗೆ 4ನೇ ಶನಿವಾರ ಬೇರೆ ರಜೆ), ಸುಮಾರು 25 ಸರ್ಕಾರಿ ರಜೆಗಳು, 12 ಸಾಂದರ್ಭಿಕ ರಜೆಗಳು ಸೇರಿ 113 ರಜೆಗಳು ಇರುತ್ತವೆ. ಇದನ್ನು ಬಿಟ್ಟು 30 ಹಕ್ಕಿನ ರಜೆಗಳು (privilege leave) ಮತ್ತು 30 ಅನಾರೋಗ್ಯದ ರಜೆಗಳು (sick leave) ಬೇರೆ. ಮುಷ್ಕರಗಳು ಮತ್ತು ಬಂದ್‌ಗೆ ವರ್ಷದಲ್ಲಿ ಕನಿಷ್ಠ 3-4 ದಿನಗಳ ಬಲವಂತದ ರಜೆಗಳು. ಸೆಲೆಬ್ರಿಟಿಗಳ, ರಾಜಕೀಯ ಧುರೀಣರ ನಿಧನದ ನಿಮಿತ್ತ ಘೋಷಿಸುವ ಶೋಕದ ರಜೆಗಳು ವರ್ಷದಲ್ಲಿ ಕನಿಷ್ಠ 2-3 ಇರುತ್ತವೆ.

ಅಕ್ಟೋಬರ್‌ ತಿಂಗಳ‌ಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯಕ್ತ ಬ್ಯಾಂಕ್‌ ಮತ್ತು ಸರ್ಕಾರಿ ಕಚೇರಿಗಳಿಗೆ 11 ದಿನಗಳ ರಜೆ ಇರಲಿದೆ. ಅಕ್ಟೋಬರ್‌ 2ರಂದು ಮಹಾತ್ಮ ಗಾಂಧಿ ಜಯಂತಿ, 6 ಭಾನುವಾರ, 7 ಆಯುಧ ಪೂಜೆ, 8 ವಿಜಯದಶಮಿ, 12 ಎರಡನೇ ಶನಿವಾರ, 13 ಭಾನುವಾರ, 20 ಭಾನುವಾರ, 26 ನಾಲ್ಕನೇ ಶನಿವಾರ, 27 ನರಕ ಚತುರ್ದಶಿ, 28-29 ಬಲಿಪಾಡ್ಯಮಿ-ದೀಪಾವಳಿ ನಿಮಿತ್ತ ಬ್ಯಾಂಕುಗಳಿಗೆ ರಜೆಗಳಿವೆ. ಅಕ್ಟೋಬರ್‌ 6 ರಿಂದ 8ರವರೆಗೆ ಮೂರು ದಿನ ಹಾಗೂ 26ರಿಂದ 29ರವರೆಗೆ ಸತತ 4 ದಿನಗಳು ರಜೆ ಇರಲಿವೆ.

ಈ ಸಾಲು ರಜೆಗಳಿಗಾಗಿ ಪ್ರತಿಯೊಬ್ಬರೂ ಸರ್ಕಾರಿ ನೌಕರರನ್ನು, ಅದರಲ್ಲೂ ಮುಖ್ಯವಾಗಿ ಬ್ಯಾಂಕ್‌ ನೌಕರರನ್ನು ಗುರಿಮಾಡಿ ಟೀಕಿಸುತ್ತಾರೆ ಮತ್ತು ಅಕ್ರೋಶ ವ್ಯಕ್ತಪಡಿ ಸುತ್ತಾರೆ. ಈ ದಿನಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕೆಲಸವಾಗದಿದ್ದಾಗ ಮತ್ತು ತಮ್ಮ ಬ್ಯಾಂಕು ವ್ಯವಹಾರಗಳಿಗೆ ಅಡಚಣೆಯಾದಾಗ, ಈ ತರಾಟೆ ತಾರಕಕ್ಕೇರುತ್ತದೆ. ಇಂಥ ರಜೆಗಳಿಂದ ಜನಸಾಮಾನ್ಯರ ಸಹಜ ಬದುಕು ಅಸ್ತವ್ಯಸ್ತ (disturb) ಅಗುತ್ತದೆ ಮತ್ತು ಅರ್ಥಿಕ ಚಟುವಟಿಕೆಗಳು ನಿಂತು ಹೋಗುತ್ತವೆ. ಪಶ್ಚಿಮ ಬಂಗಾಳದಂಥ ರಾಜ್ಯದಲ್ಲಿ ದಸರಾ (ಪೂಜಾ) ಸಮಯದಲ್ಲಿ ಸುಮಾರು 10 ದಿನಗಳ ಕಾಲ ಹಬ್ಬೇತರ ಚಟುವಟಿ ಕೆಗಳು ಸ್ತಂಭನಗೊಂಡು ಒಂದು ರೀತಿಯ ಸ್ವ-ಇಚ್ಛೆಯ ಬಂದ್‌ ಇರುವಂತೆ ಭಾಸವಾ ಗುತ್ತದೆ. ತುರ್ತು ವೈದ್ಯಕೀಯ ಚಿಕಿತ್ಸೆಯೂ ಕಷ್ಟವಾಗುತ್ತದೆ. ದಿನ ಪತ್ರಿಕೆಗಳು ಕೂಡಾ 2-3 ದಿನ ಹೊರಬರು ವುದಿಲ್ಲ ಎಂದರೆ ಆಶ್ಚರ್ಯವಾಗದಿರದು.

ಜನಸಾಮಾನ್ಯರಿಗೆ ಈ ರಜೆಗಳ ಹಿಂದಿನ ಲೆಕ್ಕಾಚಾರದ ಬಗೆಗೆ ಮಾಹಿತಿ ಇರುವುದಿಲ್ಲ. ಅವರು ಹೆಚ್ಚು ಸಂಬಳ-ಸೌಲಭ್ಯ, ನೌಕರಸ್ನೇಹಿ ವರ್ಗಾವಣೆ, ಶೀಘ್ರ ಪದೋನ್ನತಿ, ಒಳ್ಳೆ ಕೆಲಸದ ವಾತಾವರಣ ಮತ್ತು ದಬ್ಟಾಳಿಕೆ ಇಲ್ಲದ (harassment) ಕಾರ್ಯ ವ್ಯವಸ್ಥೆ ಬಗೆಗೆ ಹೋರಾಡುತ್ತಾರೆ. ಅವರು ಎಂದೂ ಹೆಚ್ಚಿನ ರಜೆಗಾಗಿ ಹೋರಾಡುವುದಿಲ್ಲ ಮತ್ತು ಒತ್ತಾಯಿಸುವುದಿಲ್ಲ. ಅವರ ಬೇಡಿಕೆಗಳಲ್ಲಿ ಹೆಚ್ಚಿನ ರಜೆಯ ಪ್ರಸ್ತಾಪ ಕೂಡಾ ಇರುವುದಿಲ್ಲ. ಅವರು ಅನುಭವಿಸುತ್ತಿರುವ ರಜೆಗಳು ಕಾಲ ಘಟ್ಟದಲ್ಲಿ ಸರ್ಕಾರ ಗಳು ತಮ್ಮ ನೌಕರರಿಗೆ ಅವರು ಕೇಳದೇ, ಗೋಗರೆಯದೇ ನೀಡಿದ ಧಾರಾಳ ಕೊಡುಗೆಗಳು. ದೇವರು, ಧರ್ಮ, ಪರಂಪರೆ ಮತ್ತು ಸಂಪ್ರದಾಯ ಪ್ರಧಾನವಾಗಿರುವ ಈ ದೇಶದಲ್ಲಿ ಕೆಲವು ರಜೆಗಳು ಅನಿವಾರ್ಯ ಮತ್ತು ಅವುಗಳನ್ನು ರಜೆಯ ಮೂಲಕ ಅಚರಿಸಲೇ ಬೇಕಾಗುತ್ತದೆ.

ಅದರೆ, ಕೆಲವು ರಜೆಗಳ ಹಿಂದೆ ಅಪಾರ ಅನುಯಾಯಿಗಳನ್ನು ಹೊಂದಿರುವ, ಮತ ಬ್ಯಾಂಕ್‌ ಇರುವ, ಧಾರ್ಮಿಕ, ಸಾಮಾಜಿಕ, ರಾಜಕೀಯ ಮತ್ತು ಭಾಷಾ ಶಕ್ತಿಗಳು ಇರುತ್ತವೆ. ಮತ ಬ್ಯಾಂಕ್‌ ಕೇಂದ್ರಿತ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಮತ ಬ್ಯಾಂಕನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಿಕೊಳ್ಳಲು ಜನ ಸಾಮಾನ್ಯರಿಗೆ ಆಗುವ ಅಹಿತ ಮತ್ತು ಅನನುಕೂಲದ ಹೊರ ತಾಗಿಯೂ ಇಂಥ ಹೆಜ್ಜೆಗಳನ್ನು ಇಡುತ್ತಾರೆ. ವಿಪರ್ಯಾಸವೆಂದರೆ ಇವರೇ ವೇದಿಕೆ ಮೇಲೆ ಸಾಲು-ಸಾಲು ರಜೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ ಮತ್ತು ದೇಶದ ಅರ್ಥಿಕ ಪ್ರಗತಿ ಹೇಗೆ ಕುಂಠಿತವಾಗುತ್ತದೆ ಮತ್ತು productivity ಮೇಲೆ ಏನು ಪರಿಣಾಮವಾಗುತ್ತದೆ ಎನ್ನುವುದನ್ನು ಬಿಡಿ-ಬಿಡಿಸಿ ಹೇಳುತ್ತಾರೆ.

ರಜೆ ಸಂಸ್ಕೃತಿ ಈ ದೇಶಕ್ಕೆ ಇಂಗ್ಲೀಷರು ನೀಡಿ ಹೋದ ಕೊಡುಗೆ. ಅವರು ತಮ್ಮ ದೇಶದ ಧರ್ಮ ಮತ್ತು ಸಂಸ್ಕೃತಿಗೆ, ಜೀವನ ಶೈಲಿಗೆ ಅನುಗುಣವಾಗಿ ಅದನ್ನು ಈ ದೇಶದಲ್ಲಿ ಹುಟ್ಟುಹಾಕಿದರು. ಸ್ವಾತಂತ್ರ್ಯಾನಂತರ ಅದನ್ನು ನಮ್ಮ ಅವಶ್ಯಕತೆಗೆ ಮಾರ್ಪಡಿ ಸುವು ದನ್ನು ಬಿಟ್ಟು ರಜೆಗಳನ್ನು ಹೆಚ್ಚು ಮಾಡಲಾಯಿತು. ಬಹುರಾಷ್ಟ್ರೀಯ ಕಂಪನಿಗಳು ಮತ್ತು ಐಟಿ ಕಂಪನಿಗಳು ಈ ದೇಶದಲ್ಲಿ ತಳ ಊರಿದ ಮೇಲೆ, ಈ ರಜೆಗಳ ಸಾಲಿಗೆ, ಐದು ದಿನಗಳ ವಾರ ಮತ್ತು ವಾರಾಂತ್ಯ ಎನ್ನುವ ಹೊಸ ಪರಿಕಲ್ಪನೆ ನುಸುಳಿದ್ದು, ರಜಾನಿಟ್ಟಿನಲ್ಲಿ ಗೊಂದಲ ಹೆಚ್ಚಾಗಿದೆ. ಈಗಾಗಲೇ ಬ್ಯಾಂಕುಗಳಲ್ಲಿ ಮತ್ತು ವಿಮಾ ಕಂಪನಿಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ರಜಾ ಘೋಷಿಸಲಾಗಿದ್ದು, ಮುಂದಿನ ದಿನಗಳಲ್ಲಿ “ಐದು ದಿನಗಳ ವಾರ’ ವಾಗುವ ಸಾಧ್ಯತೆಗಳು ಕಾಣುತ್ತಿವೆ. ರಜೆಗಳು ಒಂದು ರೀತಿಯಲ್ಲಿ ಸಮೂಹ ಸನ್ನಿ ಇದ್ದಂತೆ. ಇದು ಕ್ರಮೇಣ ಎಲ್ಲಾ ಇಲಾಖೆ ಕ್ಷೇತ್ರಗಳಿಗೆ ಹಬ್ಬುತ್ತಿದೆ. ರಜಾ-ಮಜಾ ಎನ್ನುವ ಹೊಸ ಟ್ರೆಂಡ್ ತ್ವರಿತಗತಿಯಲ್ಲಿ ಅರಳುತ್ತಿದೆ.

ಒಂದು ಸರ್ಕಾರಿ ಅಥವಾ ಬ್ಯಾಂಕ್‌ ನೌಕರನಿಗೆ ವರ್ಷದಲ್ಲಿ 52 ಭಾನುವಾರಗಳು, 12 ಎರಡನೇ ಶನಿವಾರ (ಬ್ಯಾಂಕುಗಳಿಗೆ ನಾಲ್ಕನೇ ಶನಿವಾರ ಬೇರೆ ರಜೆ), ಸುಮಾರು 25 ಸರ್ಕಾರಿ ರಜೆಗಳು, 12 ಸಾಂದರ್ಭಿಕ ರಜೆಗಳು ಸೇರಿ 113 ರಜೆಗಳು ಇರುತ್ತವೆ. ಇದನ್ನು ಬಿಟ್ಟು 30 ಹಕ್ಕಿನ ರಜೆಗಳು (privilege leave) ಮತ್ತು 30 ಅನಾರೋಗ್ಯದ ರಜೆಗಳು (Sick Leave) ಬೇರೆ. ನ್ಯಾಯವನ್ನು ಕೇಳಲು ಮತ್ತು ಅನ್ಯಾಯವನ್ನು ಪ್ರತಿಭಟಿಸಲು ನಡೆಸುವ ಮುಷ್ಕರ ಗಳು ಮತ್ತು ಬಂದ್‌ಗೆ ವರ್ಷದಲ್ಲಿ ಕನಿಷ್ಠ 3-4 ದಿನಗಳು ಬಲವಂತದ ರಜೆಗಳು. ಸೆಲೆಬ್ರಿಟಿಗಳ, ರಾಜಕೀಯ ಧುರೀಣರ ನಿಧನದ ನಿಮಿತ್ತ ಘೋಷಿಸುವ ಶೋಕದ ರಜೆಗಳು ವರ್ಷದಲ್ಲಿ ಕನಿಷ್ಠ 2-3 ಇರುತ್ತವೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ನೌಕರ ವರ್ಗದ ಕೆಲಸದ ದಿನಗಳ ನಿಜಲೆಕ್ಕ ಕಾಣುತ್ತದೆ. ಈ ದೇಶ ನಿರೀಕ್ಷೆಯಷ್ಟು ಅಭಿವೃದ್ಧಿ ಹೊಂದದಿರಲು, ಪ್ರಗತಿ ಕಾಣದಿರಲು ಜನಸಂಖ್ಯೆ, ಅನಕ್ಷ ರತೆ ಸಂಗಡ ಅನಿಯಂತ್ರಿತ ರಜೆಗಳೂ ಕಾರಣ ಎನ್ನುವ ಪ್ರಖ್ಯಾತ ನ್ಯಾಯವಾದಿ ನಾನಿ ಪಾಲಿವಾಲಾ, ಛಗಲಾ ಮತ್ತು ಹಿರಿಯ ಉದ್ಯಮ ಪಿತಾಮಹ ಟಾಟಾರವರ ಅನಿಸಿಕೆಗಳಿಗೆ ಅರ್ಥವಿದೆ.

ನೌಕರರಿಗೆ ಸಾಲು ಸಾಲು ರಜೆಯ ಬಗೆಗೆ ಜನಸಾಮಾನ್ಯರು ಅಕ್ರೋಶ ವ್ಯಕ್ತ ಮಾಡುತ್ತಿರುವಂತೆ, ಸರ್ಕಾರ ರಜೆಗಳನ್ನು ಕಡಿತ ಗೊಳಿಸಲು ಚಿಂತಿಸಿದರೂ, ನಮ್ಮ ವ್ಯವಸ್ಥೆಯಲ್ಲಿ ಒಮ್ಮೆ ನೀಡಿದ ಸೌಲಭ್ಯವನ್ನು ಅಷ್ಟು ಸುಲಭವಾಗಿ ಹಿಂತೆಗೆದುಕೊಳ್ಳುವುದು ಸುಲಭವಲ್ಲ. ಇದ ನ್ನು ತಿಳಿದು, ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟು ಸಮಾಲೋಚನೆಯ ಹೆಸರಿನಲ್ಲಿ ಕಾಲನೂಕುತ್ತಿದೆ. ಹಬ್ಬಗಳು ಮತ್ತು ಜಯಂತಿಗಳು ಅತಿ ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯಗಳಾಗಿದ್ದು, ಅವುಗಳ ತಂಟೆಗೆ ಹೋದರೆ ಸಾಮಾಜಿಕ ಕ್ಷೊಭೆ ಮತ್ತು ಆಕ್ರೋಶ ಎದುರಿಸಬೇಕಾಗುವುದೆಂದು ಈ ನಿಟ್ಟಿನಲ್ಲಿ ಮುಂದುವರೆಯುತ್ತಿಲ್ಲ. ಒಂದು ರೈಲು ಸ್ಟೇಷನ್‌ನಲ್ಲಿ ಕೆಲಕಾಲ ನಿಲುಗಡೆ ನೀಡಿ ಅಥವಾ ಒಂದು ಮಾರ್ಗದಲ್ಲಿ ಒಂದು ರೈಲನ್ನು ಕೆಲಕಾಲ ಓಡಿಸಿ, ನಂತರ ಕೆಲ ದಿನಗಳಲ್ಲಿ ಅದನ್ನು ನಿಲ್ಲಿಸಬಹುದೇ? ಈ ರಜೆಗಳೂ ಹಾಗೆಯೇ? ಈ ರಜೆಗಳ ರದ್ದತಿ ಸಮಸ್ಯೆಯನ್ನು ಪರಿಹಾರ ಮಾಡುವ ಬದಲಿಗೆ ಇನ್ನೊಂದು ಸಮಸ್ಯೆಯನ್ನು ಹುಟ್ಟು ಹಾಕುವ ಸಂಭವವೇ ಹೆಚ್ಚು. ರಜೆ ಕಡಿತ ಮಾಡಿದರೆ ಎಲ್ಲಾ ರಜೆಗಳಿಗೆ ಕತ್ತರಿ ಹಿಡಿಯಬೇಕು, ಇಲ್ಲದಿದ್ದರೆ ಈ ಪ್ರಕ್ರಿಯೆಯಿಂದ ದೂರ ಇರಬೇಕು ಎನ್ನುವ ರಾಜಕೀಯ ಸಂದಿಗ್ಧತೆಯಲ್ಲಿ ಸರ್ಕಾರ ಇದೆ. ಅಂತೆಯೇ ಇದ್ದ ರಜೆಗಳನ್ನು ಉಳಿಸಿಕೊಂಡು, ಹೊಸ ರಜೆಗಳನ್ನು ಸೇರ್ಪಡೆ ಮಾಡದಿರುವ ಎಚ್ಚರಿಕೆಯ ಆಟವನ್ನು ಸರ್ಕಾರ ಅಡಬೇಕಾಗುತ್ತದೆ.

ಭಾರತವು ವಿವಿಧ ಭಾಷೆ, ಧರ್ಮ, ಜಾತಿಗಳಿಂದ ಕೂಡಿದ ವೈವಿಧ್ಯಮಯ ದೇಶವಾಗಿದ್ದು, ಅಮೆರಿಕ ಮತ್ತು ಇಂಗ್ಲೆಂಡ್‌ ದೇಶಗಳಲ್ಲಿ ಕೇವಲ 7-8 ಸಾರ್ವಜನಿಕ ರಜೆಗಳು ಎನ್ನುವ ಮಾನದಂಡವನ್ನು ಇಲ್ಲಿ ಅನ್ವಯಿಸುವುದು ಕಷ್ಟ ಸಾಧ್ಯ. ಯಾರನ್ನೂ ಬಿಡದೇ, ಎಲ್ಲರನ್ನೂ ಒಳಗೊಂಡು ಮುಂದೆ ಹೋಗುವಾಗ ಇಂಥ ಪರಿಸ್ಥಿತಿ ಅನಿವಾರ್ಯ ಎನ್ನುವ ರಾಜಕಾರಣಿ ಯೊಬ್ಬರ ಮಾತಿನಲ್ಲೂ ಅರ್ಥವಿದೆ.

ರಮಾನಂದ ಶರ್ಮಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ