ಕಡಲು ಕೊರೆಯುವುದು ಮೀನುಗಾರರ ಬದುಕನ್ನು

Team Udayavani, Aug 20, 2019, 5:13 AM IST

ಮಳೆಗಾಲ ಬಂತೆಂದರೆ ಮೀನುಗಾರರ ಬದುಕಿನಲ್ಲಿ ಎಲ್ಲಿಲ್ಲದ ಆತಂಕದ ಅಲೆಗಳು ಏಳುತ್ತದೆ. ಯಾವಾಗ, ಎಷ್ಟು ಹೊತ್ತಿನಲ್ಲಿ ರಾತ್ರಿಯೋ ಹಗಲೋ ಕಣ್ಣಲ್ಲಿ ಎಣ್ಣೆ ಬಿಟ್ಟು ಕಾಯುವ ಪರಿಸ್ಥಿತಿ. ಆಕಾಶದೆತ್ತರದ ಅಪ್ಪಳಿಸುವ ಅಲೆಗಳು ಯಾವಾಗ ಮನೆಮಠ, ಚಪ್ಪರ, ದೋಣಿ, ಇಂಜಿನ್‌, ಮೀನುಗಾರಿಕೆ ಪರಿಕರಗಳನ್ನು ಕಬಳಿಸಿ ಕೊಂಡೊಯುತ್ತದೋ, ಮೀನುಗಾರರ ಸಂಸಾರವನ್ನು ಬೀದಿ ಪಾಲು ಮಾಡುತ್ತದೋ ಎಂಬ ಆತಂಕ ಮನೆ ಮಾಡುತ್ತದೆ.ಕಡಲು ಸಮುದ್ರ ದಂಡೆಯನ್ನು ಮಾತ್ರ ಕೊರೆಯುದಲ್ಲ, ದಡದಲ್ಲಿ ವಾಸವಾಗಿರುವ ಬಡ ಮೀನುಗಾರರ ಬದುಕನ್ನು ಪ್ರತಿ ವರ್ಷ ಕೊರೆಯುತ್ತಿರುತ್ತದೆ. ವರ್ಷದಿಂದ ವರ್ಷಕ್ಕೆ ಕಡಲ್ಕೊರೆತದ ತೀವ್ರತೆ ಹೆಚ್ಚಾಗುತ್ತಾ ಹೋಗುತ್ತಿದೆ. ಕರಾವಳಿಯುದ್ದಕ್ಕೂ ಇರುವವರಿಗೆ ಪ್ರತಿ ಮಳೆಗಾಲದಲ್ಲಿ ಮರುಕಳಿಸುತ್ತಿರುವ ಖಾಯಂ ಸಂಕಟವಿದು.

ಈ ಸಲವಂತೂ ಕಡಲ್ಕೊರೆತದಿಂದ ತುಂಬಾ ಕಷ್ಟನಷ್ಟ ಸಂಭವಿಸಿದೆ.ಸುರಕ್ಷಿತ ಎಂದು ಅರಿಯಲ್ಪಡುತ್ತಿದ್ದ ಸ್ಥಳಗಳೂ ಕಡಲ್ಕೊರೆತಕ್ಕೆ ಬಲಿಯಾಗಿವೆ. ಮಂಗಳೂರಿನಲ್ಲಿ ಚಿತ್ರಾಪುರ ದೇವಸ್ಥಾನದ ಬಳಿ ಇನ್ನಿತರ ಕಡೆಗಳಲ್ಲಿ ಹೊಸದಾಗಿ ಸಮುದ್ರ ಕೊರೆತ ಪ್ರಾರಂಭವಾಗಿದೆ. ಒಂದು ಕಡೆ ಬ್ರೇಕ್‌ವಾಟರ್‌ ಹಾಕಿದರೆ ಮತ್ತೂಂದು ಕಡೆ ಕೊರೆತ ಉಂಟಾಗುತ್ತದೆ. ಕೆಲವು ಕಡೆ ವಿಶಾಲವಾಗಿ ಹೊಗೆ ಬಿದ್ದು ಜಾಗ ಬೇಕಾದಷ್ಟು ಇರುತ್ತದೆ. ಉಳ್ಳಾಲದಲ್ಲಂತೂ ವರ್ಷಂಪ್ರತಿ ಇದು ಸಂಭವಿಸುತ್ತಲೇ ಇರುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಹಿಂದೆ 70ರ ದಶಕದಲ್ಲಿ ರಂಪೋಣಿ ಮೀನುಗಾರಿಕೆ ಚಾಲ್ತಿಯಲ್ಲಿದ್ದ ಕಾಲದಲ್ಲಿ ಕಡಲ್ಕೊರೆತ ಭೀತಿ ಇರಲಿಲ್ಲ. ಆಗ ಸಮುದ್ರದ ತುಂಬಾ ದೂರದ ತನಕ ಇತ್ತು, ಮಾತ್ರವಲ್ಲದೆ ರಂಪೋಣಿಯ ಬಲೆಯನ್ನು ಎಳೆಯಲು ಯಥೇಷ್ಟವಾದ ಸ್ಥಳವೂ ಆ ರಂಪೋಣಿಯ ಪಡವು (ದೊಡ್ಡ ಹಲಗೆಯಿಂದ ಮಾಡಿದ ದೋಣಿ)ಬಿಡಲು, ಮಳೆಗಾಲದಲ್ಲಿ ಅದರ ಸುರಕ್ಷಿತೆಗಾಗಿ ಚಪ್ಪರ ನಿರ್ಮಿಸಲು ಮೀನು ಒಣಗಲು , ಧಾರಾಳವಾಗಿ ಸಿಕ್ಕಿದ ಮೀನನ್ನು ಅಲ್ಲಿಯೇ ಗುಂಡಿ ತೋಡಿ ಎಣ್ಣೆ ತೆಗೆಯಲು ಕೊಳೆಯಲು ಹಾಕಲು ತುಂಬಾ ಜಾಗ ಇತ್ತು. ಆಡುಂಬೂರು ಮತ್ತು ಚುಲ್ಲಿ ಎಂಬ ಸಸ್ಯಗಳು ದಡದಲ್ಲಿ ಹುಲುಸಾಗಿ ಬೆಳೆಯುತ್ತಿದ್ದವು. ಇವುಗಳ ಬಿಳಲು ಮತ್ತು ಬೇರು ಗಟ್ಟಿಯಾಗಿ ದಡವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದರಿಂದ ಸಮುದ್ರ ಕೊರೆತ ಆಗುತ್ತಿರಲಿಲ್ಲ. ಈಗ ಆ ಸಸ್ಯ ಪ್ರಭೇದಗಳು ನಾಶದ ಅಂಚಿನಲ್ಲಿದೆ. ಹೀಗಾಗಿ ಸಮುದ್ರವು ದಂಡೆಯ ಜಾಗವನ್ನು ನುಂಗುತ್ತಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಕರಾವಳಿಯ ಚಿತ್ರಣವೇ ಬದಲಾಗಬಹುದು. ಮೀನುಗಾರರಂತೂ ದಿಕ್ಕು ದೆಸೆಯಿಲ್ಲದೆ ಪಲಾಯನ ಮಾಡುವ ದುಃಸ್ಥಿತಿ ಉಂಟಾಗಬಹುದು. ಇದಕ್ಕೂ ಮೊದಲೇ ಸರಕಾರವು ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು.

ಈ ಹಿಂದೆ ಕೆಲವು ಕಡೆ ಅವೈಜ್ಞಾನಿಕ ರೀತಿಯಲ್ಲಿ ಕಲ್ಲುಗಳನ್ನು ಹಾಕಿದ ಕಾರಣ ಅದು ಅಲೆಗಳ ರಭಸಕ್ಕೆ ಸಮುದ್ರ ಪಾಲಾಗಿವೆ. ಮಂತ್ರಿಗಳು , ಶಾಸಕರು, ಅಧಿಕಾರಿಗಳು ಕಡಲ್ಕೊರೆತ ತಡೆಯುವ ನಿಟ್ಟಿನಲ್ಲಿ ಅಧ್ಯನಕ್ಕಾಗಿ ಕೈಗೊಂಡ ವಿದೇಶ ಪ್ರವಾಸಗಳೆಷ್ಟೋ. ಆದರೆ ಅದರಿಂದ ಯಾರಿಗೆಲ್ಲ ಪ್ರಯೋಜನ ಆಗಿದೆ ಎನ್ನುವುದು ಗೊತ್ತಿಲ್ಲ. ಆದರೆ ಕಡಲ್ಕೊರೆತ ಮಾತ್ರ ನಿಂತಿಲ್ಲ, ಬದಲಾಗಿ ಹಿಂದಿರುವುದಕ್ಕಿಂತಲೂ ಹೆಚ್ಚಾಗಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಉಳ್ಳಾಲದಿಂದ ಕಾರವಾರದ ವರೆಗಿನ 300 ಕಿ.ಮೀ. ಕಡಲ ತೀರಕ್ಕೆ ನಬಾರ್ಡ್‌ ಯೋಜನೆಯಡಿ 900 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಮೊದಲ ಹಂತದಲ್ಲಿ 28 ಕೋ. ರೂಪಾಯಿಯ ಟೆಂಡರ್‌ ಕರೆಯಲಾಗಿತ್ತು. ಕೆಲವು ಸಮಸ್ಯೆಗಳಿಂದ ಅದು ಪ್ರಾರಂಭವಾಗಿಲ್ಲ. ಈಗ ಮತ್ತೆ ಯಡಿಯೂರಪ್ಪನವರ ಸರಕಾರ ಬಂದಿದೆ ಈ ಯೋಜನೆಯನ್ನು ಮರಳಿ ಪ್ರಾರಂಭ ಮಾಡುವ ಭರವಸೆಯನ್ನು ಸರಕಾರ ನೀಡಿದೆ. ಹೀಗಾಗಿ ಮೀನುಗಾರರ ಬದುಕಿನಲ್ಲೊಂದು ಆಶಾಕಿರಣ ಮೂಡಿದೆ.

ಕೇವಲ ಕಲ್ಲುಗಳನ್ನು ದಡದಲ್ಲಿ ತಂದು ಸುರಿದರೆ ಕಡಲ್ಕೊರೆತ ನಿಲ್ಲುವುದಿಲ್ಲ. 5-10 ಅಡಿ ಅಗೆದು, ಕಲ್ಲಿನಲ್ಲಿ ಬೆಡ್‌ ನಿರ್ಮಿಸಿ ಅದರ ಮೇಲೆ ಕಲ್ಲುಗಳನ್ನು ನಿಲ್ಲಿಸುತ್ತ ಹೋದರೆ ಅದೊಂದು ಶಾಶ್ವತ ಪರಿಹಾರ. ಇತ್ತೀಚೆಗೆ ಆ ತರಹದ ತಡೆಗೋಡೆಗಳನ್ನು ನಿರ್ಮಿಸುತ್ತಿದ್ದಾರೆ. ಎಲ್ಲ ಕಡೆ ತಡೆಗೋಡೆ ನಿರ್ಮಿಸಿದರೂ ಕಷ್ಟ. ಮೀನುಗಾರರ ದೋಣಿಗಳನ್ನು ಸಮುದ್ರಕ್ಕೆ ಇಳಿಸಲು ತೊಂದರೆಯಾಗಬಹುದು. ಈ ಎಲ್ಲ ವಿಚಾರಗಳನ್ನು ಮನನ ಮಾಡಿ ಸರಕಾರವು ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು.

ಕಡಲ್ಕೊರೆತದ ಸ್ಥಳಗಳಿಗೆ ದಿನನಿತ್ಯ ಶಾಸಕರು, ಕಾರ್ಪೊರೇಟರ್‌ಗಳು, ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ಸರಕಾರಿ ಅಧಿಕಾರಿಗಳು ಭೇಟಿ ನೀಡುತ್ತಿರುತ್ತಾರೆ. ಈ ಬಡ ಮೀನುಗಾರರ ಮನೆ, ಮಠ, ದೋಣಿ ಇಡುವ, ಮೀನುಗಾರಿಕೆಯ ಸಾಮಾನು ಇಡುವ ಚಪ್ಪರ ಸಿ.ಆರ್‌.ಝಡ್‌ ವ್ಯಾಪ್ತಿಯ ಒಳಗಡೆ ಇರುವುದರಿಂದ, ಕಳೆದುಕೊಂಡ ಈ ಎಲ್ಲ ಸೊತ್ತುಗಳಿಗೆ ಪರಿಹಾರ ಸಿಗಲಾರದೆಂಬ ಅಳುಕು ಮೀನುಗಾರರದ್ದು. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿ| ಕಾಮರಾಜ ನಾಡಾರ್‌ ಅವರು ‘ಕಾನೂನು ಜನರಿಗಾಗಿ ಮಾಡಿದ್ದು , ಅದನ್ನು ಜನರ ಒಳಿತಿಗಾಗಿ ಅವರ ಸಂಕಷ್ಟಕ್ಕಾಗಿ ಯಾವ ರೀತಿಯಲ್ಲಿ ಬದಲಾವಣೆ ಮಾಡಬಹುದೆಂದು ಕಾಲಕಾಲಕ್ಕೆ ಪರಿಶೀನೆಯಾಗಬೇಕು’ ಎಂದು ಹೇಳುತ್ತಿದ್ದರು. ಸಿಆರ್‌ಝಡ್‌ಗೆ ಸಂಬಂಧಿಸಿದಂತೆ ನಾಡಾರ್‌ ಮಾತನ್ನು ಅನ್ವಯಿಸಬೇಕು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ