ಸುದ್ದಿ ಪ್ರವಾಹದಲ್ಲಿ ಮಾಧ್ಯಮ ದೋಣಿ

Team Udayavani, Sep 6, 2018, 6:00 AM IST

ಮುದ್ರಣ ಮಾಧ್ಯಮದಲ್ಲಿಯೂ ಹಾಗೇ… ನಿಜವಾಗಿಯೂ ಅವರು ಸುದ್ದಿಗಳನ್ನು ಜನರಿಗೆ ಸಮಯಕ್ಕೆ ತಲುಪಿಸಲು ಹಲವೊಮ್ಮೆ ಇಡೀ ರಾತ್ರಿಗಳನ್ನು ಕಚೇರಿಯಲ್ಲಿಯೇ ಕಳೆದಿರಬೇಕು. ನಿದ್ದೆ ಇಲ್ಲದೆ ಕೆಲಸ ಮಾಡಿರಬೇಕು, ತಿಂಗಳುಗಟ್ಟಲೆ. ಇವೆಲ್ಲಾ ಸುಲಭದ ಕೆಲಸವಲ್ಲ. ಪ್ರಿಂಟ್‌ ಮಾಧ್ಯಮವಾಗಲೀ, ಇಲೆಕ್ಟ್ರಾನಿಕ್‌ ಮಾಧ್ಯಮವಾಗಲೀ ಕಣ್ಣಲ್ಲಿ ಎಣ್ಣೆ ಹಾಕಿ ಕೆಲಸ ಮಾಡಬೇಕಾಗುತ್ತದೆ.

ಸಾಧಾರಣವಾಗಿ ಮಳೆಗಾಲವೆಂದರೆ ಸಾರ್ವಜನಿಕ ಜೀವನವೂ ತಣ್ಣಗಿರುತ್ತದೆ. ಸುದ್ದಿಯ, ಮಾಧ್ಯಮದ ದೃಷ್ಟಿಯಿಂದ ಬಹುಶಃ ಲೀನ್‌ ದಿನಗಳು ಅವು. ಆದರೆ ಈ ವರ್ಷದ ಅಗಸ್ಟ್‌  ತಿಂಗಳು ಹಾಗಿರಲಿಲ್ಲ. ಕೇರಳದಲ್ಲಿ, ಕೊಡಗಿನಲ್ಲಿ ಮಹಾಪೂರ ಉಕ್ಕಿ ಹರಿದ ಹಾಗೆ, ಹಲವು ರೀತಿಯ, ರಾಷ್ಟ್ರೀಯ ಮಟ್ಟದ ಸುದ್ದಿಗಳು ಎಲ್ಲೆ ಮೀರಿ ಹರಿದು ಬಂದು ಸುದ್ದಿಯ ಜಲಪಾತವನ್ನೇ ಸೃಷ್ಟಿಸಿದವು.

ಮೊದಲು ಬಂದಿದ್ದು ಪಾರ್ಲಿಮೆಂಟಿನಲ್ಲಿ ರಾಹುಲ್‌ ಗಾಂಧಿಯವರ ಬಿರುಗಾಳಿಯಂತಹ ಭಾಷಣ, ಭಾಷಣದ ನಂತರದ ದೃಶ್ಯಾವಳಿಗಳು ಹಾಗೂ ಅದಕ್ಕೆ ಪ್ರಧಾನಿಯವರ ವರ್ಣ ರಂಜಿತ ಉತ್ತರ. ಪಾರ್ಲಿಮೆಂಟ್‌ ಅಧಿವೇಶನ ಈ ರೀತಿ ಸುದ್ದಿ ಸೃಷ್ಟಿಸಿದ್ದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿ. ನಂತರ ಅಗಸ್ಟ್‌  15. ಪ್ರಧಾನಿಯವರ ಪ್ರಚಂಡ ಭಾಷಣ. ಅಕ್ಕ ಪಕ್ಕದಲ್ಲಿಯೇ ಬಂದಿದ್ದು ಪಾಕಿಸ್ಥಾನದ ಚುನಾವಣೆ ಮತ್ತು ರೆಹಾಮ್‌ ಖಾನ್‌ ಎಂಬ ಇಮ್ರಾನ್‌ರ ವಿಚ್ಛೇದಿತ ಪತ್ನಿ ಎಬ್ಬಿಸಿದ ಒಳ ಜಗತ್ತಿನ ಸುದ್ದಿಯ ಪ್ರವಾಹ. ಮತ್ತೆ ಬಂದಿದ್ದು ಕರುಣಾನಿಧಿ ಅಸ್ತಂಗತರಾಗಿದ್ದು. ತಮಿಳುನಾಡಿನ ಶೋಕ, ಕುಟುಂಬದೊಳಗಿನ ಕಲಹ ಹೊರಬಂದಿದ್ದು ಇತ್ಯಾದಿ. ಕರುಣಾನಿಧಿ ಹಲವು ಕಾರಣಗಳಿಂದ ತುಂಬಾ ಸುದ್ದಿ ಮಾಡಿ ಹೋದರು. ವೈಯಕ್ತಿಕ ಜೀವನವನ್ನು ಮೆಟ್ಟಿನಿಂತ ಹಾಗೂ ರಾಜಕಾರಣದಲ್ಲಿ ಸುಮಾರು ಎಪ್ಪತ್ತು ವರ್ಷ ಸಕ್ರಿಯರಾಗಿದ್ದ ಮಹಾ ನಾಯಕನಾಗಿ. 

ಆಮೇಲೆ ಕೇರಳದ ಮೇಲೆ ದೇವರು ಮುನಿಸಿಕೊಂಡಿದ್ದು. ದೇವರೇ! ಎಂತಹ ದುಸ್ಥಿತಿ! ನಂತರ ಕೊಡಗಿನಲ್ಲಿ ಬಂದ ಮಹಾಮಳೆ ಮುಕ್ಕಾಲು ಭಾಗ ಕೊಡಗನ್ನೇ ಕೊಚ್ಚಿಕೊಂಡು ಹೋಯಿತು. ಜೊತೆಗೆ ಬಂದಿದ್ದು ಡ್ಯಾಮ್‌ಗಳು ತುಂಬುತ್ತಿರುವ, ತುಂಬಿ ನಿಂತ ಸಂತೋಷದ ಸುದ್ದಿ. ಅದರ ಹಿಂದೆಯೇ ಬಂದಿದ್ದು ಮಹಾರಥಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಿಧನದ ದುಃಖದ ಸುದ್ದಿ. ಎಲ್ಲ ಸುದ್ದಿಗಳೂ ಅತಿ ಮಹತ್ವದ ಸುದ್ದಿಗಳು. ಸಮಾಜವನ್ನೆ ತಲ್ಲಣಿಸಿದ ಸುದ್ದಿಗಳು. ವಿವರಗಳನ್ನು ಬೇಡುವ ಸುದ್ದಿಗಳು. ಈ ಎಲ್ಲ ಸುದ್ದಿ ಗದ್ದಲದಲ್ಲಿ ವರದಿ ಮಾಡಿ ಮಾಡಿ ಕೆಲವು ಮಾಧ್ಯಮದ ಮಿತ್ರರಿಗೆ ಧ್ವನಿ ಬಿದ್ದು ಹೋಗಿತ್ತು. ನಿಜವಾಗಿಯೂ ಅವರು ಜಲಪಾತದಂತೆ, ಮಹಾಪೂರದಂತೆ ಬಂದ ಇಂತಹ ಸುದ್ದಿಗಳ ಹರಿವನ್ನು ಹೇಗೆ ನಿಭಾಯಿಸಿದರೋ ಅವರಿಗೇ ಗೊತ್ತು. 

ಪ್ರಿಂಟ್‌ ಮಾಧ್ಯಮದಲ್ಲಿಯೂ ಹಾಗೆ. ನಿಜವಾಗಿಯೂ ಅವರು ಸುದ್ದಿಗಳನ್ನು ಜನರಿಗೆ ಸಮಯಕ್ಕೆ ತಲುಪಿಸಲು ಹಲವೊಮ್ಮೆ ಇಡೀ ರಾತ್ರಿಗಳನ್ನು ಕಚೇರಿಯಲ್ಲಿಯೇ ಕಳೆದಿರಬೇಕು. ನಿದ್ದೆ ಇಲ್ಲದೆ ಕೆಲಸ ಮಾಡಿರಬೇಕು. ತಿಂಗಳುಗಟ್ಟಲೆ. ಇವೆಲ್ಲಾ ಸುಲಭದ ಕೆಲಸವಲ್ಲ. ಪ್ರಿಂಟ್‌ ಮಾಧ್ಯಮವಾಗಲೀ, ಇಲೆಕ್ಟ್ರಾನಿಕ್‌ ಮಾಧ್ಯಮವಾಗಲೀ ಕಣ್ಣಲ್ಲಿ ಎಣ್ಣೆ ಹಾಕಿ ಕೆಲಸ ಮಾಡ ಬೇಕಾಗುತ್ತದೆ. ಏಕೆಂದರೆ ಒಂದು ವರದಿ ತಪ್ಪಾಗಿ ಹೋದರೆ ಇಡೀ ಮಾಧ್ಯಮಕ್ಕೆ ಕೆಟ್ಟ ಹೆಸರು ಬರುತ್ತದೆ. ಮೇಲಿಂದ ನೂರಾರು ಕಿರಿಪಿರಿಗಳನ್ನು ಅನುಭವಿಸಬೇಕಾಗುತ್ತದೆ. ಅವರು ಪಡುವ, ಪಟ್ಟ ಕಷ್ಟ ಬಹುಶಃ ಅವರಿಗೇ ಗೊತ್ತು.

ಆದರೆ ನಮ್ಮ ಮಾಧ್ಯಮಗಳು ನಿಜಕ್ಕೂ ಪರಿಸ್ಥಿತಿಯನ್ನು ಎದ್ದು ನಿಂತು ಎದುರಿಸಿದವು. ಒಂದು ರೀತಿಯಲ್ಲಿ ಬಹುಶಃ ಅವು ಯುದ್ಧದೋಪಾದಿಯಲ್ಲಿ ಕಾರ್ಯ ನಿರ್ವಹಿಸಿವೆ. ಮಾಧ್ಯಮ ಕ್ಕೊಂದು ಅಭಿನಂದನೆ. ಏಕೆಂದರೆ ಪ್ರಜಾಪ್ರಭುತ್ವ ನಡೆಯುವುದು ಮಾಧ್ಯಮಗಳು ತರುವ ಮಾಹಿತಿಯಿಂದ. 
ಮೇಲಿನ ಮಾತು ಬಂದಿದ್ದು ಸಾಂದರ್ಭಿಕವಾಗಿ ಮಾತ್ರ. ನನಗೆ ಹೇಳಬೇಕಾಗಿದ್ದು ಇಲೆಕ್ಟ್ರಾನಿಕ್‌ ಹಾಗೂ ಪ್ರಿಂಟ್‌ ಮಾಧ್ಯಮ ಗಳ ವರದಿಗಳು ಹೇಗೆ ಭಿನ್ನತೆಯಿಂದ ಕೂಡಿದ್ದವು ಮತ್ತು ನಿಜವಾಗಿಯೂ ಹೇಗೆ ಅವು ಭಿನ್ನವಾದವು ಎನ್ನುವುದ‌ು. ಕಳೆದ ಇಡೀ ತಿಂಗಳು ಇಲೆಕ್ಟ್ರಾನಿಕ್‌ ಹಾಗೂ ಪ್ರಿಂಟ್‌ ಮಾಧ್ಯಮ ಎರಡನ್ನೂ ಕಣ್ಣಿಟ್ಟು ನೋಡಿದ್ದೇನೆ. ವಿಮಶಾìತ್ಮಕವಾಗಿ ಗ್ರಹಿಸಲು ಪ್ರಯತ್ನಿಸಿದ್ದೇನೆ. ಸ್ಥೂಲವಾಗಿ ಮೊದಲೇ ಹೇಳಿ ಕೊಳ್ಳಬೇಕಾದ ವಿಷಯ­­‑­ ವೆಂದರೆ ಹೆಚ್ಚು ಕಡಿಮೆ ಈ ಎರಡು ಮಾಧ್ಯಮಗಳ ನಡುವೆ ದೊಡ್ಡ ಅಘೋಷಿತ ಸ್ಪರ್ಧೆಯೇ ನಡೆದು ಹೋಯಿತು. ಎರಡೂ ಶಕ್ತಿಯುತವಾಗಿಯೇ ಕೆಲಸ ಮಾಡಿದವು. ವಿಷಯಗಳನ್ನು ಅವುಗಳ ಸವಿಸ್ತಾರತೆಯೊಂದಿಗೆ, ಇತಿಹಾಸದೊಂದಿಗೆ, ವಿವಿಧ ದೃಷ್ಟಿಕೋನಗಳೊಂದಿಗೆ ಹೊರ ತಂದವು. ಸಂಶಯವೇ ಇಲ್ಲ.

ಗಮನಿಸಿದ ವಿಷಯವೆಂದರೆ ಈ ಸ್ಪರ್ಧೆಎರಡೂ ಮಾಧ್ಯಮಗಳ ಶಕ್ತಿ ಹಾಗೂ ವೀಕ್‌ನೆಸ್‌ಗಳನ್ನು ಸ್ಪಷ್ಟವಾಗಿ ಪ್ರಕಟಿಸಿದ್ದು. ಮೊದಲು ಇಲೆಕ್ಟ್ರಾನಿಕ್‌ ಮಾಧ್ಯಮದ ಕುರಿತು ಹೇಳಿಕೊಳ್ಳುತ್ತೇನೆ. ಅದರ ಶಕ್ತಿ ಅದಕ್ಕಿರುವ ವಿಶುವಲ್‌ ಅಪೀಲ್‌. ಅದು ದೃಶ್ಯಾವಳಿಗಳ ಮೂಲಕ ಕಥೆ ಹೇಳುತ್ತದೆ. ದಟ್ಟವಾಗಿ ಕಣ್ಣುಗಳ ಮುಂದೆಯೇ. ಪ್ರತಿ ಮನೆಯಲ್ಲಿಯೂ ಘಟನೆಯ ಚಿತ್ರಗಳ ಅನಾವರಣ ನಡೆ ಯುತ್ತದೆ. ಹೀಗೆ ಕಳೆದ ತಿಂಗಳು ಘಟಿಸಿದ ಚಿತ್ರಾವಳಿ ಗಳೆಲ್ಲವನ್ನೂ ಅದು ಕಣ್ಣುಗಳ ಮುಂದೆ ಬಿಡಿಸಿಟ್ಟಿತು. ಜತೆ ಯಲ್ಲಿಯೇ ವೀಕ್ಷಕ ವಿವರಣೆಗಳು ಮತ್ತು ಸಂವಾದಗಳು. ಹೀಗೆ ದೃಶ್ಯ ಮಾಧ್ಯಮ ಸಾಧಾರಣ ಜನತೆಗೆ, ಅಂದರೆ ಆಮ್‌ ಆದ್ಮಿಗೆ ಥ್ರಿಲ್‌ ಆಗುವಂತಹ ರೀತಿಯಲ್ಲಿ ಸುದ್ದಿಗಳನ್ನು ಬಿತ್ತರಿಸಿತು. ಮನೆ ಮನೆಗಳಲ್ಲಿಯೂ ಹೆಚ್ಚು ಕಡಿಮೆ ಕರೆಂಟ್‌ ಇರುವಷ್ಟು ಹೊತ್ತೂ ಜನ ಈ ದೃಶ್ಯಾವಳಿಗಳನ್ನು ನೋಡಿದರು. ವಿವಿಧ ರೀತಿಯ ಸುದ್ದಿಗಳ ದೃಶ್ಯಗಳನ್ನು ಕಣ್‌ ತುಂಬಿಕೊಂಡರು ಈ ಹಿನ್ನೆಲೆಯಲ್ಲಿ ಹೇಳಬೇಕಾದ ಮಾತೆಂದರೆ ನಿಜವಾಗಿಯೂ ಇಲೆಕ್ಟ್ರಾನಿಕ್‌ ಮಾಧ್ಯಮ ಸಾಧಾರಣ ವ್ಯಕ್ತಿಯ, ಅಂದರೆ, ಓದು ಬರಹ ಕೂಡ ಬರದಿದ್ದಂತಹ ವ್ಯಕ್ತಿಯನ್ನೂ ಮುಟ್ಟುವಂತಹ ಶಕ್ತಿಯುತ ಮಾಧ್ಯಮ. ಬಹುಶಃ ಟಿ.ವಿ.ಯಲ್ಲಿ ವಾರ್ತೆಯೊಂದು ಪ್ರಸಾರ ವಾದರೆ ಕ್ಷಣಾರ್ಧದಲ್ಲಿಯೇ ಅದರ ಪರಿಣಾಮ ಆಗಿ ಹೋಗುತ್ತದೆ. ಅದರ ಶಕ್ತಿಯೇ ಬೇರೆ. ಆದರೆ ಅದೇ ಸಂದರ್ಭದಲ್ಲಿ ಇಲೆಕ್ಟ್ರಾನಿಕ್‌ ಮಾಧ್ಯಮದ ಸೂಕ್ಷ್ಮ ವೀಕ್‌ನೆಸ್‌ಗಳನ್ನೂ ಗಮನಿಸಬೇಕು. 

ಏಕೆಂದರೆ ಇಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ದೃಶ್ಯಗಳ ಆರ್ಭಟದ ನಡುವೆ ಮಾತು ತನ್ನ ಪ್ರಖರತೆ ಕಳೆದುಕೊಳ್ಳುತ್ತದೆ. ಅಲ್ಲಿ ಏನು ಹೇಳಲಾಯಿತು ಎನ್ನುವುದಕ್ಕಿಂತಲೂ ಏನು ಕಂಡಿತು ಎನ್ನುವುದೇ ಮಹತ್ವವಾಗಿ ಹೋಗುತ್ತದೆ. ಹೀಗಾಗಿ ಬಹುಶಃ ಅಲ್ಲಿ ಎಲ್ಲ ಸುದ್ದಿಯೂ ಒಂದು ರೀತಿಯ ಮನರಂಜನೆ ಆಗಿಯೇ ಹೋಗುತ್ತದೆ. ಸುದ್ದಿಯ, ಕಿವಿಯ ಮೌಲ್ಯ ಕಡಿಮೆಯಾಗಿ ಹೋಗುತ್ತದೆ ಎಂದೇ ಅನಿಸಿಕೆ. ಇನ್ನೂ ಒಂದು ವಿಷಯವೆಂದರೆ ಅಲ್ಲಿ ಎಲ್ಲವೂ ಕ್ಷಣಿಕ. ಎಲ್ಲ ವಿಷಯಗಳೂ ಟೆಲಿವಿಜನ್‌ನ ಅನಂತತೆಯಲ್ಲಿ ಕರಗಿ ಹೋಗುವ ವಿಷಯಗಳು. ಬಹುಶಃ ಕೊನೆಯಲ್ಲಿ ಗಂಭೀರ ಸುದ್ದಿಗಳು ಕೂಡ ಎದೆತಟ್ಟುವುದೇ ಇಲ್ಲ ಎಂದೇ ಅನಿಸಿಕೆ. ಇಲೆಕ್ಟ್ರಾನಿಕ್‌ ಮಾಧ್ಯಮವೆಂದರೆ ಹಸಿವು ತಣಿಸಲು ಬೇಗ ಬೇಗ ಅನ್ನ ಸಾಂಬಾರು ಮಾಡಿ ಬಡಿಸಿದ ಹಾಗೆ. ಕೆಲವೊಮ್ಮೆ ಅನ್ನ ಪೂರ್ತಿ ಬೆಂದು ತಣಿಯುವ ಮೊದಲೇ ಪಾತ್ರೆಯಿಂದ ತೆಗೆಯಬೇಕಾಗುತ್ತದೆ. ಅದು ಅನಿವಾರ್ಯ ಕೂಡ. ಏಕೆಂದರೆ ಇವರು ಬಡಿಸದಿದ್ದರೆ ಬೇರೆಯವರು ಬಡಿಸಿ ಬಿಡುತ್ತಾರೆ. ಸುದ್ದಿಗಳು ಹಳಸಿಹೋಗುತ್ತವೆ. ಈ ರೀತಿಯಲ್ಲಿ ಸುದ್ದಿಗಳನ್ನು ತರಬೇಕಾಗುವುದರಿಂದ ಇಲೆಕ್ಟ್ರಾನಿಕ್‌ ಮಾಧ್ಯಮಕ್ಕೆ ಸಾಕಷ್ಟು ಸಿದ್ಧತೆ ಮಾಡಿ ರಿಸರ್ಚ್‌ ಮಾಡಿ ಸುದ್ದಿ ಹೇಳಲು ಸಮಯ ಇರುವುದೇ ಇಲ್ಲ ಎಂದೇ ಅನಿಸಿಕೆ. ಅದು ಈ ಮಾಧ್ಯಮದ ತಪ್ಪೇನೂ ಅಲ್ಲ, ಅನಿವಾರ್ಯತೆ. ಡಿಸ್ಕವರಿಯಂತಹ ಚಾನಲ್‌ಗ‌ಳನ್ನು ಬಿಟ್ಟು ಬಹುಶಃ ಉಳಿದೆಲ್ಲ ಚಾನೆಲ್‌ಗ‌ಳ ಅಸ್ತಿತ್ವ ಇರುವುದು ಹೀಗೆ. ಅವು ಇಲೆಕ್ಟ್ರಾನಿಕ್‌ ಕಣಗಳಷ್ಟೆ ವೇಗವಾಗಿ ಓಡುತ್ತಿರಲೇಬೇಕು. ಆದ್ದರಿಂದ ಬಹುಶಃ ಸ್ಥೂಲವಾಗಿ ಹೇಳ ಬೇಕೆಂದರೆ ಟಿ.ವಿ ಮಾಧ್ಯಮ ಮುಖ್ಯವಾಗಿ ನೋಡುವವರ ಮಾಧ್ಯಮ, ಅಂದರೆ ಸುದ್ದಿಗಳನ್ನೂ ಬಹುಶಃ ಒಂದು ರೀತಿಯಲ್ಲಿ ಆನಂದಿಸುವವರ ಅಥವಾ ಕೇವಲ ಅದರ ಮುಖ ಬೆಲೆಗೆ ತೆಗೆದುಕೊಳ್ಳುವವರ ಮಾಧ್ಯಮ. ಬಹುಶಃ ಇಲೆಕ್ಟ್ರಾನಿಕ್‌ ಮಾಧ್ಯಮ ಬರುವುದೆಲ್ಲವನ್ನೂ ಅದ್ಭುತವಾಗಿ ಅಥವಾ ಗಮ್ಮತ್ತಿನ ವಿಷಯವಾಗಿ ಸ್ವೀಕರಿಸುವಂತಹ ಸಮೂಹದ ಮಾಧ್ಯಮ. ಅದರ ಹರವು ಖಂಡಿತವಾಗಿಯೂ ತುಂಬ ವಿಸ್ತಾರದ್ದು. ಆದರೆ ಅದು ಬಹುಶಃ ಹೆಚ್ಚಿನ ವಿಷಯಗಳನ್ನು, ಮುಂದೆ ಕಾಣುವ ವಿಷಯಗಳ ಹಿಂದಿನದ್ದನ್ನು ಬಯಸುವವರನ್ನು ತೃಪ್ತಿಗೊಳಿಸುವಂತಹ ರೀತಿಯ ಮಾಧ್ಯಮವೇನೂ ಅಲ್ಲ ಎಂದು ಅನಿಸುತ್ತದೆ. ಈ ಮಾತುಗಳನ್ನು ಹೇಳುತ್ತಿರುವುದು ಇಲೆಕ್ಟ್ರಾನಿಕ್‌ ಮಾಧ್ಯಮವನ್ನು ಹಗುರವಾಗಿಸಲೇನೂ ಅಲ್ಲ. ಬದಲಿಗೆ ಅದರ ಪ್ರತ್ಯೇಕತೆಯನ್ನು, ಅಸ್ತಿತ್ವವನ್ನು ಗುರುತಿಸಲು.

ಅಂತಹ ಕೊರತೆಯನ್ನು ನೀಗಿದ್ದು ಪ್ರಿಂಟ್‌ ಮಾಧ್ಯಮ. ಉದಾಹರಣೆಗೆ ಕರುಣಾನಿಧಿಯವರ ನಿಧನದ ನಂತರ, ವಾಜಪೇಯಿ ಯವರ ನಿಧನದ ನಂತರ ಪತ್ರಿಕೆಗಳು ಎಂತಹ ಸಂಚಿಕೆಗಳನ್ನು ನಿರೂಪಿಸಿದವೆಂದರೆ ಆ ಸಂಚಿಕೆಗಳು ಶಾಶ್ವತವಾಗಿ ಸಂಗ್ರಹಾರ್ಹವಾಗಿಬಿಟ್ಟವು. ಅವು ಇಡೀ ಸುದ್ದಿಗಳ ಮೂಲಕ್ಕೆ ಹೋಗಿ ಸವಿಸ್ತಾರವಾಗಿ, ಐತಿಹಾಸಿಕ ಹಾಗೂ ವಿವಿಧ ಸಮಕಾಲಿನ ದೃಷ್ಟಿಗಳಿಂದ ವಿಷಯಗಳನ್ನು ಹೊರದಂತವು. ಆ ಸಂಚಿಕೆಗಳಲ್ಲಿ ಹಲವನ್ನು ನಾನು ಸಂಗ್ರಹಿಸಿಟ್ಟಿದ್ದೇನೆ. ಪುಸ್ತಕಗಳ ಹಾಗೆ. ಹೆಚ್ಚು  ತಿಳಿದುಕೊಳ್ಳುವ ಆಸಕ್ತಿ ಹೊಂದಿದವರಿಗೆ ಏನು ಬೇಕಿತ್ತೋ ಅದನ್ನು ಪತ್ರಿಕೆಗಳು ಒದಗಿಸಿದವು.

ಒಟ್ಟಾರೆಯಾಗಿ, ಹೀಗೆ ಎರಡು ರೀತಿಯ ಮಾಧ್ಯಮಗಳು ಎರಡು ರೀತಿಯ ಸಾಮಾಜಿಕ ಸ್ಪೇಸ್‌ ಅನ್ನು ಹಿಡಿದು ಕುಂತಿವೆ. ಯಾವುದೇ ಮಾಧ್ಯಮ ಮೇಲು, ಕಡಿಮೆ ಅಲ್ಲ. ಇವುಗಳನ್ನು ಬಳಸಿ ಸುದ್ದಿ ಪಡೆಯುವವರನ್ನು ಕೂಡ ಮೇಲು ಅಥವಾ ಕೀಳು ಇತ್ಯಾದಿ ಹೇಳುವುದು ಬರಹದ ಉದ್ದೇಶ ಅಲ್ಲ. 
ವಿಷಯ ಇಷ್ಟೇ. ಈ ಎರಡೂ ಮಾಧ್ಯಮಗಳಿಗೆ ಸಾರ್ವಜನಿಕ ಪ್ರಜ್ಞೆಯಲ್ಲಿ ಬೇರೆ ಬೇರೆ ಸ್ಥಾನಗಳಿವೆ. ಅದನ್ನು ನಾವು ಅರ್ಥಮಾಡಿಕೊಂಡರೆ ಸಾರ್ವತ್ರಿಕ ಸಂವಹನಕ್ಕೆ ಬೇರೆ ಬೇರೆ ಆಯಾಮಗಳನ್ನು ನೀಡಬಹುದೋ ಏನೋ!

ಡಾ. ಆರ್‌.ಜಿ. ಹೆಗಡೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ