ಬ್ಯಾಂಕ್‌ ವಿಲೀನದಿಂದ ಸಮಸ್ಯೆಗಳೇ ಹೆಚ್ಚು

ವಿಲೀನ ನಿರ್ಧಾರವು ಪರಿಪಕ್ವ ತೀರ್ಮಾನವೆಂದೆನ್ನಿಸುವುದೇ ಇಲ್ಲ. ಯೂನಿಯನ್‌ಗಳ ವಿರೋಧಕ್ಕೆ ಅರ್ಥವಿದೆ.

Team Udayavani, Nov 20, 2019, 5:30 AM IST

ಎಲ್ಲೋ ಇದ್ದ ಬ್ಯಾಂಕ್‌ ಇನ್ನೆಲ್ಲೋ ಇರುವ ಬ್ಯಾಂಕ್‌ ಜೊತೆ ವಿಲೀನಗೊಂಡಾಗ ಉದ್ಯೋಗಿಗಳಿಗೆ ವರ್ಗಾವಣೆ ಭಯವಂತೂ ಇದ್ದದ್ದೇ. ಅಲ್ಲದೆ ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ನಲ್ಲಿ ಔದ್ಯೋಗಿಕ ಶೈಲಿಯ ಭಿನ್ನತೆ (ವರ್ಕ್‌ ಕಲ್ಚರ್‌) ನೌಕರರಿಗೆ ನುಂಗಲಾರದ ತುತ್ತಾಗುವುದಂತೂ ಖಂಡಿತ. ಅದಕ್ಕಿಂತಲೂ ಮಿಗಿಲಾಗಿ ವಿಲೀನಗೊಂಡ ಬ್ಯಾಂಕ್‌ಗಳಲ್ಲಿ ಅದರ ನೌಕರರನ್ನು ಎರಡನೇ ದರ್ಜೆಯವರಂತೆ ನಡೆಸಿಕೊಳ್ಳುವ ಸಂಭವವೇ ಹೆಚ್ಚು. ಇವೆಲ್ಲ ಒಟ್ಟು ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರಬಲ್ಲವು.

ಇದೀಗ ಬ್ಯಾಂಕ್‌ ವಿಲೀನಗಳ ಬಗ್ಗೆ ಚರ್ಚೆ ಜೋರಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಒಂದಕ್ಕೊಂದು ವಿಲೀನಗೊಳಿಸಿ ಕೇವಲ ಆರು ಬ್ಯಾಂಕ್‌ಗಳನ್ನಷ್ಟೇ ಉಳಿಸುವ ಕೇಂದ್ರ ಸರಕಾರದ ಮಹತ್ತರ ಯೋಜನೆಗೆ ಬ್ಯಾಂಕ್‌ ಯೂನಿಯನ್‌ಗಳು ಹಾಗೂ ಜನರಿಂದ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಬ್ಯಾಂಕ್‌ಗಳ ತೊಟ್ಟಿಲು ಎಂದೇ ಖ್ಯಾತಿ ಪಡೆದಿರುವ ಕರಾವಳಿಯ ಮತ್ತೆರಡು (ಕಳೆದ ಬಾರಿ ವಿಜಯ ಬ್ಯಾಂಕ್‌) ಬ್ಯಾಂಕ್‌ಗಳು ಈ ವಿಲೀನ ಪ್ರಕ್ರಿಯೆ ಯಿಂದ ತಮ್ಮ ಐಡೆಂಟಿಟಿ ಕಳೆದುಕೊಳ್ಳಲಿರುವುದರಿಂದ ಉಡುಪಿ ಪೇಜಾವರ ಶ್ರೀಗಳು ಕೂಡ ಧ್ವನಿ ಎತ್ತಿರುವುದು ಇಲ್ಲಿ ಗಮನಾರ್ಹ.

ವಿಲೀನದಿಂದ ಆಗುವುದಾದರೂ ಏನು?
“”ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಬ್ಯಾಂಕಿಂಗ್‌ ಕ್ಷೇತ್ರದ ವಿಸ್ತರಣೆಗಾಗಿ ಹಾಗೂ ಖಾಸಗಿ ರಂಗದ ಬ್ಯಾಂಕ್‌ಗಳ ಜೊತೆಗೆ ಪ್ರಬಲ ಪೈಪೋಟಿ ನೀಡುವ ಸಲುವಾಗಿ ಬ್ಯಾಂಕ್‌ಗಳನ್ನು ಒಂದಕ್ಕೊಂದು ವಿಲೀನಗೊಳಿಸಿ ದೊಡ್ಡ ಬ್ಯಾಂಕ್‌ಗಳಾಗಿ ಪರಿವರ್ತಿಸಲಾಗುವುದು, ಸುಸ್ತಿ ಸಾಲದ ಪ್ರಮಾಣವನ್ನು ಕಡಿಮೆ ಮಾಡಲಾಗುವುದು” ಎಂದು ಕೇಂದ್ರ ಸರಕಾರ ವಿಲೀನದ ಬಗ್ಗೆ ಧನಾತ್ಮಕ ಮಾತನಾಡುತ್ತಿದೆ. ಆದರೆ ಈ ವಿವರಣೆಯನ್ನು ಬ್ಯಾಂಕ್‌ ಯೂನಿಯನ್‌ಗಳು ಸುತಾರಾಂ ಒಪ್ಪುತ್ತಿಲ್ಲ. ವಿಲೀನದಿಂದ ಸಾರ್ವಜನಿಕರಿಗೆ ಹಾಗೂ ಬ್ಯಾಂಕ್‌ ಸಿಬ್ಬಂದಿಗೆ ಭಾರೀ ತೊಂದರೆ ಯಾಗಲಿದೆ, ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲೆಯೇ ಪರಿಣಾಮಬೀರಲಿದೆ ಎಂದು ಯೂನಿಯನ್‌ಗಳು ಪ್ರತಿವಾದ ಮಾಡುತ್ತಾ ಸರಕಾರದ ವಿರುದ್ಧ ಪ್ರತಿಭಟಿಸು ತ್ತಿವೆ. ಇದರ ಜೊತೆಗೆ ಕರಾವಳಿಯಲ್ಲಿ ಅರಳಿದ ಎರಡು ಪ್ರತಿಷ್ಠಿತ ಬ್ಯಾಂಕ್‌ಗಳು (ಕಾರ್ಪೊರೇಷನ್‌ ಹಾಗೂ ಸಿಂಡಿಕೇಟ್‌) ಕೂಡ ಈ ವಿಲೀನ ಪ್ರಕ್ರಿಯೆಯಿಂದಾಗಿ ನಾಮಾವಶೇಷಗೊಳ್ಳಲಿರು ವುದು ಅದು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ಜನರ ಭಾವನೆಗಳಿಗೆ ಘಾಸಿ ಮಾಡಿ ದಂತೆ ಎಂದೂ ಯೂನಿಯನ್‌ಗಳು ಪ್ರತಿಪಾದಿಸುತ್ತಿವೆ. ಬ್ಯಾಂಕ್‌ಗಳ ಹುಟ್ಟು ಅದರ ಆಶಯ ಹಾಗೂ ಅವುಗಳು ಜನ ಸಾಮಾನ್ಯ ರಲ್ಲಿ ಇರಿಸಿರುವ ನಂಟುಗಳನ್ನು ಗಮನಿಸಿದರೆ ನಿಜಕ್ಕೂ ಯೂನಿಯನ್‌ಗಳ ವಾದ ಹೆಚ್ಚು ಕಡಿಮೆ ಸರಿಯೆನ್ನಿಸುತ್ತಿದೆ.

ಅವಿಭಜಿತ ದಕ್ಷಿಣ ಕನ್ನಡ ಬ್ಯಾಂಕ್‌ಗಳ ತೊಟ್ಟಿಲು. ಇಲ್ಲಿ ಕೆನರಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಕಾರ್ಪೊರೇಷನ್‌ ಬ್ಯಾಂಕ್‌, ವಿಜಯ ಬ್ಯಾಂಕ್‌ಗಳು ಜನ್ಮತಾಳಿವೆ. ಖಾಸಗಿ ಬ್ಯಾಂಕ್‌ ಆಗಿಯೇ ಉಳಿದಿರುವ ಕರ್ನಾಟಕ ಬ್ಯಾಂಕ್‌ ಕೂಡ ಇದೇ ಜಿಲ್ಲೆಯ ಕೊಡುಗೆ. ಇವತ್ತು ಕೇಂದ್ರ ಸರಕಾರದ ವಿಲೀನ ಪ್ರಕ್ರಿಯೆಯು ಕೇವಲ ಕೆನರಾ ಬ್ಯಾಂಕೊಂದನ್ನು ಬಿಟ್ಟು ಮತ್ತೆಲ್ಲಾ ಬ್ಯಾಂಕ್‌ಗಳಿಗೆ ಅಳಿವಿನ ದಾರಿ ತೋರಿಸಿರುವುದು ನಿಜ! ಇದು ಬ್ಯಾಂಕ್‌ಗಳ ತೊಟ್ಟಿಲು ಎಂದು ಹೆಮ್ಮೆಯಿಂದ ಗುರುತಿಸಲ್ಪಟ್ಟಿದ್ದ ಜಿಲ್ಲೆಗೆ ಆದ ದೊಡ್ಡ ನಷ್ಟ. ಇಲ್ಲಿ ಬ್ಯಾಂಕ್‌ಗಳು ರಚನೆಯಾದದ್ದೇ ಜನಸಾಮಾನ್ಯನೂ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಮುಖಮಾಡಲಿ ಎಂಬ ಸದುದ್ದೇಶದಿಂದ. ಅಂದರೆ, ಜನರಲ್ಲಿ ಉಳಿತಾಯ ಮನೋವೃತ್ತಿ ಬೆಳೆಯಲಿ ಎಂಬ ಆಶಯದಿಂದ ಸ್ಥಾಪನೆಯಾದ ಬ್ಯಾಂಕ್‌ಗಳು ಇವು. ಕಾರ್ಪೊರೇಶನ್‌ ಬ್ಯಾಂಕ್‌ನ ಪ್ರವರ್ತಕ ಹಾಜಿ ಅಬ್ದುಲ್ಲಾರಂತೂ ಜನರ ಭಾವನೆಗಳಿಗೆ ಸ್ಪಂದಿಸುತ್ತಿದ್ದ ಓರ್ವ ಅಪರೂಪದ ವ್ಯಕ್ತಿಯಾಗಿದ್ದರು. ಬಡವರ ಬಗೆಗೆ ಮಿಡಿಯುತ್ತಿದ್ದ ಅವರ ಮನಸು ನಿಜಕ್ಕೂ ಅತ್ಯದ್ಭುತವಾಗಿತ್ತು. ಉಡುಪಿಯಲ್ಲಿ ಬರಗಾಲ ಬಂದಾಗ, ದಿನದ ಊಟಕ್ಕೂ ತತ್ವಾರ ಬಂದಾಗಿನ ಸಂದರ್ಭದಲ್ಲಿ ಅಬ್ದುಲ್ಲಾರವರು ಮಲೇಷಿಯಾದಿಂದ ಹಡಗಿನ ಮೂಲಕದ ಅಕ್ಕಿ ತರಿಸಿ ಉಡುಪಿಯ ಜನರಿಗೆ ಹಂಚಿದ್ದರಂತೆ! ಉಡುಪಿ ಪರ್ಯಾಯದ ಸಂಭ್ರಮಕ್ಕೆ ಬರಗಾಲದ ಛಾಯೆ ಅವರಿಸಬಾರದು ಎಂದುಕೊಂಡು ಇದೇ ಅಬ್ದುಲ್ಲಾರವರು ಅಗತ್ಯ ಸಾಮಗ್ರಿಗಳನ್ನು ಉಡುಪಿಯ ಶ್ರೀಕೃಷ್ಣ ಮಠಕ್ಕೂ ಒಪ್ಪಿಸಿ ಆ ಮೂಲಕ ಧಾರ್ಮಿಕ ಸೌಹಾರ್ದತೆ ಮೆರೆದಿದ್ದರೆಂಬುದು ಇತಿಹಾಸ. ದೇಶದುದ್ದಗಲಕ್ಕೂ ಅವರ ಹೆಸರನ್ನು, ಅವರ ಕೊಡುಗೆಗಳನ್ನು ಉಳಿಸಬೇಕು, ಮೆರೆಸಬೇಕು. ಇನ್ನು, ಮಣಿಪಾಲದ ಪರಿವರ್ತನಾ ಕಾರ ಎಂದೇ ಬಿರುದಾಂಕಿತ ಪದ್ಮಶ್ರೀ ಟಿ.ಎಂ.ಎ ಪೈರದ್ದೂ ಇಂತಹದೇ ವ್ಯಕ್ತಿತ್ವ. ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಮೆಡಿಕಲ್‌ ಕಾಲೇಜುಗಳ ಮೂಲಕವೂ ಜನಸೇವೆ ಮಾಡಿ ರುವ ಟಿ.ಎಂ.ಎ. ಪೈ ಅವರು ಉಪೇಂದ್ರ ಪೈ ಹಾಗೂ ವಾಮನ ಶ್ರೀವಿ ನಾ ಸ ಕುಡ್ವರ ಜೊತೆ ಸೇರಿಕೊಂಡು ಸಿಂಡಿಕೇಟ್‌ ಬ್ಯಾಂಕ್‌ ಪ್ರಾರಂಭಿ ಸಿದ್ದು ಕೂಡ ಜನಸೇವೆಯ ಸಲುವಾಗಿಯೇ. ಜನ ಸಾಮಾನ್ಯರಿಗಾಗಿ ಪಿಗ್ಮಿ ಎಂಬ ಉಳಿತಾಯ ಯೋಜನೆಯನ್ನು ಸಾಕಾರ ಗೊಳಿಸಿ ಜನರಲ್ಲಿ ಸಣ್ಣ ಉಳಿತಾಯದ ಪರಿಕಲ್ಪನೆಯನ್ನು ಮೂಡಿಸಿದ್ದೇ ಸಿಂಡಿಕೇಟ್‌ ಬ್ಯಾಂಕ್‌ ಎಂಬುದು ಗಮನಾರ್ಹ. ಆದ್ದರಿಂದ ಉಡುಪಿಯಲ್ಲಿ ಅರಳಿದ ಈ ಬ್ಯಾಂಕ್‌ಗಳನ್ನು, ಅದರ ಚರಿತ್ರೆಯನ್ನು ಹೇಳ ಹೆಸರಿಲ್ಲದಂತೆ ಮಾಡುವುದು ತುಸು ಕಷ್ಟವೇ ಸರಿ.

ಅಷ್ಟಕ್ಕೂ ಬ್ಯಾಂಕ್‌ಗಳು ವಿಲೀನಗೊಂಡರೆ ಅದೇನು ಲಾಭವಿದೆ? ಈ ಪ್ರಶ್ನೆಗೆ ಖಂಡಿತಾ ಸಮಪರ್ಕವಾದ ಉತ್ತರಗಳು ಈವರೆಗೂ ದೊರಕಿಲ್ಲ! ವಿಲೀನದಿಂದ ಬ್ಯಾಂಕ್‌ಗಳ ಬಂಡವಾಳ ಹೆಚ್ಚಾಗಲಿದೆ, ಸಾಲ ನೀಡುವ ಶಕ್ತಿ ಹೆಚ್ಚಾಗಲಿದೆ, ಖಾಸಗಿ ಬ್ಯಾಂಕ್‌ಗಳ ಜೊತೆಗೆ ನಮ್ಮ ಸರಕಾರಿ ಬ್ಯಾಂಕ್‌ಗಳಿಗೂ ಪೈಪೋಟಿ ನಡೆಸಲಿಕ್ಕೆ ಸಾಧ್ಯವಾಗುತ್ತದೆ ಎಂಬಿತ್ಯಾದಿ ಉತ್ತರಗಳನ್ನು ಕೇಂದ್ರ ಸರಕಾರ ನೀಡುತ್ತಿದೆ ಯಾದರೂ, ಬ್ಯಾಂಕ್‌ ಯೂನಿಯನ್‌ಗಳು ಹೇಳುತ್ತಿರುವುದೇ ಬೇರೆ. ಅವುಗಳ ಪ್ರಕಾರ ಬ್ಯಾಂಕ್‌ ಮರ್ಜರ್‌ ಎಂಬುದು ಬ್ಯಾಂಕ್‌ ಖಾಸಗೀಕರಣದ ಪಕ್ರಿಯೆಯ ಮೊದಲ ಹಂತ! ಅಂದರೆ ಸರಕಾರಿ ಬ್ಯಾಂಕ್‌ಗಳನ್ನು ದೊಡ್ಡ ಬ್ಯಾಂಕ್‌ಗಳಾಗಿ ಗಾತ್ರದಲ್ಲಿ ಹಿಗ್ಗಿಸಿ, ಸಾಲ ಮೇಳ, ಸಾಲ ಮನ್ನಾದಂತಹ ಕಾರ್ಯಕ್ರಮಗಳನ್ನು ಜಾಸ್ತಿ ಮಾಡಿ ಕೊಂಡು, ಸುಸ್ತಿ ಸಾಲದ ಪ್ರಮಾಣವನ್ನು ಹೆಚ್ಚಿಸಿ ಕೊನೆಗೆ ಬ್ಯಾಂಕ್‌ಗಳು ನಷ್ಟದಲ್ಲಿವೆ ಎಂದು ಎತ್ತಿಹಿಡಿದು ಕಾರ್ಪೊರೇಟ್‌ಗಳಿಗೆ ಮಾರುವ ವ್ಯವಸ್ಥಿತ ಸಂಚು ಇದರ ಹಿಂದೆ ಇದೆ ಎಂಬುದು ಯೂನಿಯನ್‌ಗಳ ವಾದ. ಒಂದರ್ಥದಲ್ಲಿ ಯೂನಿಯನ್‌ಗಳ ವಾದದಲ್ಲಿ ಹುರುಳಿದೆ ಅನ್ನಿಸುತ್ತಿದೆ. ಎಸ್‌ಬಿಐನ ಜೊತೆಗೆ ಕಳೆದ ವರ್ಷ ಬ್ಯಾಂಕ್‌ ಆಫ್ ಮೈಸೂರ್‌, ಪಟಿಯಾಲ, ಟ್ರಾವಂಕೋರ್‌ ಮುಂತಾದ ಸಹವರ್ತಿ ಬ್ಯಾಂಕ್‌ಗಳು ವಿಲೀನಗೊಂಡಿದ್ದವು, ಹಾಗೇನೆ ಬ್ಯಾಂಕ್‌ ಆಫ್ ಬರೋಡಾದ ಜೊತೆ ವಿಜಯ ಬ್ಯಾಂಕ್‌, ದೇನಾ ಬ್ಯಾಂಕ್‌ಗಳು ಸೇರಿಕೊಂಡವು. ಆದರೆ ಸರಕಾರ ಡಂಗುರ ಸಾರಿದಂತೆ ಅಲ್ಲಿ ಏನೂ ಲಾಭವಾಗಿಲ್ಲ! ನಿಜ ಹೇಳಬೇಕೆಂದರೆ ಬ್ಯಾಂಕ್‌ ವಿಲೀನಗಳಿಂದ ಗ್ರಾಹಕರಿಗೆ ಹಾಗೂ ಬ್ಯಾಂಕ್‌ ಉದ್ಯೋಗಿಗಳಿಗೆ ದೊಡ್ಡ ತೊಂದರೆಯಾಗಿದೆ ಎಂಬುದೇ ಕಾಣುವ ಸತ್ಯ. ಎಸ್‌ಬಿಐನ ಜೊತೆಗೆ ಅದರ ಸಹವರ್ತಿ ಬ್ಯಾಂಕ್‌ಗಳು ವಿಲೀನಗೊಂಡ ಬಳಿಕ ಅವುಗಳಿಗೆ ಸೇರಿದ ಸರಿಸುಮಾರು ಸಾವಿರಕ್ಕೂ ಅಧಿಕ ಶಾಖೆಗಳು ಬಾಗಿಲನ್ನು ಹಾಕಿವೆಯಂತೆ! ಹಾಗಾದರೆ ಅಷ್ಟೊಂದು ಶಾಖೆಗಳ ಖಾತೆದಾರರು, ಉದ್ಯೋಗಿಗಳು ಏನಾದರು? ವಿಲೀನ ಪ್ರಕ್ರಿಯೆ ಸಂಪೂರ್ಣಗೊಂಡ ಬಳಿಕ ಹತ್ತಿರಹತ್ತಿರವಿರುವ ಬ್ಯಾಂಕ್‌ಗಳು ಮುಚ್ಚುವುದು ಸಹಜ. ಅಂದರೆ ಎರಡು ಮೂರು ಶಾಖೆಗಳಿಂದ ದೊರೆಯುತ್ತಿದ್ದ ಸಾರ್ವಜನಿಕ ಸೇವೆ ಅಲ್ಲಿಗೆ ಒಂದೇ ಶಾಖೆಗೆ ಸೀಮಿತವಾಯಿತು ಎಂದರ್ಥ. ಯೋಚನೆ ಮಾಡಿ, ಮೂರು ನಾಲ್ಕು ಬ್ಯಾಂಕ್‌ಗಳು ಇರುವ ಸಂದರ್ಭದಲ್ಲೇ ಬ್ಯಾಂಕ್‌ಗಳು ಜನರಿಂದ ಗಿಜಿಗುಡುತ್ತಿರುತ್ತವೆ. ಇನ್ನೇನಾದರೂ ಅವುಗಳನ್ನು ಒಂದಕ್ಕೆ ಇಳಿಸಿಬಿಟ್ಟರೆ ಪರಿಣಾಮ ವೇನಾದೀತು!? ಇನ್ನು ಐಎಫ್ಎಸ್‌ಸಿ ಬದಲಾವಣೆ, ಖಾತೆ ಸಂಖ್ಯೆಗಳ ಬದಲಾವಣೆ, ಎಟಿಎಂ ಕಾರ್ಡ್‌ಗಳ ಬದಲಾವಣೆ, ಇಂಟರ್ನೆಟ್‌ ಬ್ಯಾಂಕ್‌ನಲ್ಲಾಗುವ ತೊಂದರೆ, ಮೊಬೈಲ್‌ ಬ್ಯಾಂಕ್‌ನ ಸಂಕಷ್ಟ ಹೀಗೆ ಹತ್ತು ಹಲವು ತೊಂದರೆಗಳನ್ನೂ ಗ್ರಾಹಕ ಎದುರಿಸಬೇಕಾಗಿದೆ. ಇವೆಲ್ಲವುಗಳಿಗೆ ಉತ್ತರ ಎಲ್ಲಿ?

ವರ್ಗಾವಣೆಯ ಭಯ
ಇನ್ನು ವಿಲೀನದಿಂದ ಬ್ಯಾಂಕ್‌ ಉದ್ಯೋಗಿಗಳು ಎದುರಿಸ ಬೇಕಾಗಿರುವ ಸಮಸ್ಯೆಗಳು ಸಾಕಷ್ಟಿರಲಿವೆ ಎಂಬುದು ನಿಶ್ಚಿತ. ಎಲ್ಲೋ ಇದ್ದ ಬ್ಯಾಂಕ್‌ ಇನ್ನೆಲ್ಲೋ ಇರುವ ಬ್ಯಾಂಕ್‌ ಜೊತೆ ವಿಲೀನಗೊಂಡಾಗ ವರ್ಗಾವಣೆ ಭಯವಂತೂ ಇದ್ದದ್ದೇ. ಅಷ್ಟೇ ಅಲ್ಲದೆ ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ನಲ್ಲಿ ಔದ್ಯೋಗಿಕ ಶೈಲಿಯ ಭಿನ್ನತೆ (ವರ್ಕ್‌ ಕಲ್ಚರ್‌) ಆಡಳಿತಾತ್ಮಕ ವಿಭಿನ್ನತೆ, ಭಿನ್ನ ವಿಭಿನ್ನ ಸೇವೆಗಳು, ಹೊಸ ತಂತ್ರಜ್ಞಾನಗಳು ಇವೆಲ್ಲವುಗಳು ವಿಲೀನಗೊಳ್ಳುವ ಬ್ಯಾಂಕ್‌ನೌಕರರಿಗೆ ನುಂಗಲಾರದ ತುತ್ತಾಗುವುದಂತೂ ಖಂಡಿತ. ಹತ್ತಿಪ್ಪತ್ತು ವರ್ಷಗಳಿಂದ ದುಡಿಯುತ್ತಿದ್ದ ಓರ್ವ ದಕ್ಷ ಅಧಿಕಾರಿಯೂ ವಿಲೀನದ ಬಳಿಕ ತಾನು ಸೇರುವ ಬ್ಯಾಂಕಿನ ತಂತ್ರಜ್ಞಾನವನ್ನು ಹೊಸದಾಗಿ ಕಲಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಅದಕ್ಕಿಂತಲೂ ಮಿಗಿಲಾಗಿ ವಿಲೀನಗೊಂಡ ಬ್ಯಾಂಕ್‌ಗಳು ವಿಲೀನಗೊಳ್ಳಲಿರುವ ಬ್ಯಾಂಕ್‌ಗಳನ್ನು, ಅದರ ನೌಕರರನ್ನು ಎರಡನೇ ದರ್ಜೆಯವರಂತೆ ನಡೆಸಿಕೊಳ್ಳುವ ಸಂಭವವೇ ಹೆಚ್ಚು. ಇದು ಒಬ್ಬ ದಕ್ಷ ಅಧಿಕಾರಿಗೆ, ನೌಕರನಿಗೆ ಮಾನಸಿಕ ವೇದನೆ ನೀಡುವುದಂತೂ ಖಚಿತ. ಇವೆಲ್ಲವುಗಳು ಒಟ್ಟು ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರಬಲ್ಲವು, ಬ್ಯಾಂಕಿಂಗ್‌ನ ಕಾರ್ಯ ದಕ್ಷತೆಯನ್ನು ಕಸಿದುಕೊಳ್ಳಬಲ್ಲವು. ಹೀಗಿರುವಾಗ ಅದೇಕೆ ಕೇಂದ್ರ ಸರಕಾರ ವಿಲೀನ ಪ್ರಕ್ರಿಯೆಗೆ ಆಸಕ್ತಿ ವಹಿಸಿದೆ ಎಂಬುದೇ ಗೊತ್ತಾಗುತ್ತಿಲ್ಲ.

ಒಟ್ಟಿನಲ್ಲಿ ಕೇಂದ್ರ ಸರಕಾರದ ಬ್ಯಾಂಕ್‌ಗಳ ವಿಲೀನ ನಿರ್ಧಾರವು ಪರಿಪಕ್ವ ತೀರ್ಮಾನವೆಂದೆನ್ನಿಸುವುದೇ ಇಲ್ಲ. ಇದರಿಂದ ಜಾಗತಿಕವಾಗಿ, ರಾಷ್ಟ್ರೀಯವಾಗಿ ಒಂದಷ್ಟು ಪ್ರಯೋಜನ ಇದ್ದರೂ ಇರಬಹುದು. ಆದರೆ ಒಟ್ಟಾಗಿ ಗಮನಿಸಿದಾಗ ಇದರಿಂದ ಕಂಡು ಬರುವುದು ಬರೀ ದೋಷಗಳೇ. ಆದ್ದರಿಂದಲೇ ಜನ ಇಂದು ಬ್ಯಾಂಕ್‌ ವಿಲೀನದ ನಿರ್ಧಾರವನ್ನು ವಿರೋಧಿಸುತ್ತಿರುವುದು.

ಪ್ರಸಾದ್‌ ಕುಮಾರ್‌ ಮಾರ್ನಬೈಲ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮಲೇಬೆನ್ನೂರು: ಪಟ್ಟಣದ ಬಸವೇಶ್ವರ ದೇವರ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಸಡಗರ, ಸಂಭ್ರಮದಿಂದ ನೆರವೇರಿತು. ಶ್ರೀ ಬೀರಲಿಂಗೇಶ್ವರಸ್ವಾಮಿ,...

  • ನರಗುಂದ: ಮಹದಾಯಿ ಯೋಜನೆಗೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿರುವುದನ್ನು ಸ್ವಾಗತಿಸಿ ಮಹದಾಯಿ ಹೋರಾಟಗಾರರು ಶುಕ್ರವಾರ ಪಾದಯಾತ್ರೆ ಕೈಗೊಂಡು ವಿಜಯೋತ್ಸವ...

  • ಬೆಳಗಾವಿ: ಸರ್ಕಾರಿ ನೌಕರಿ ಎಲ್ಲರಿಗೂ ಸಿಗುವುದಿಲ್ಲ. ಹೀಗಾಗಿ ಖಾಸಗಿ ನೌಕರಿಗಾಗಿ ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ...

  • ಯಾದಗಿರಿ: ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಮಹಾ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ...

  • ಚಿಕ್ಕೋಡಿ: ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಿತರಕ್ಷಣಾ ಹಾಗೂ ಸಂರಕ್ಷಣಾ ಸಭೆ ಅಧ್ಯಕ್ಷತೆ ವಹಿಸಬೇಕಿದ್ದ ಚಿಕ್ಕೋಡಿ...