ಹೊಸ ವರ್ಷಾಚರಣೆಯಲ್ಲ, ಪುಂಡರ ದಿನೋತ್ಸವ!

Team Udayavani, Jan 4, 2020, 6:42 AM IST

ತೀರಾ ಇತ್ತೀಚಿನ ವರ್ಷಗಳವರೆಗೆ ಹೊಸ ವರ್ಷ ಆಚರಣೆ ಎಂದರೆ ಹಿಂದಿನ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಅದರದಿಂದ ಸ್ವಾಗತಿಸುವುದು, ಹಿಂದಿನ ವರ್ಷದ ಕಹಿಯನ್ನು ಮರೆತು, ಸಿಹಿಯನ್ನು ನೆನೆಯುತ್ತಾ, ಮುಂದಿನ ವರ್ಷ ಸದಾ ಸಿಹಿಯಾಗಿರಲಿ, ಸಂತಸದಾಯಕವಾಗಿರಲಿ ಎಂದು ಆಶಿಸುವುದು ಅಗಿತ್ತು. ಈ ನಿಟ್ಟಿನಲ್ಲಿ ಕೆಲವು ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದವು. ಕೆಲವರು ಪೂಜೆ ಮಾಡುತ್ತಿದ್ದರು, ಇನ್ನೂ ಕೆಲವರು ಪ್ರಾರ್ಥನೆ ಮಾಡುತ್ತಿದ್ದರು. ಕೆಲವರು ಲಘು ಮನರಂಜನೆ ಮತ್ತು ಆರ್ಭಟ ಇಲ್ಲದ ಸಂಗೀತ ಕಾರ್ಯ ಕ್ರಮಗಳನ್ನು ಏರ್ಪಡಿಸುತ್ತಿದ್ದರು, ಸಿಹಿಯನ್ನು ಹಂಚುತ್ತಿದ್ದರು.

ಈಗ ಇವೆಲ್ಲಾ ಇತಿಹಾಸದ ಗರ್ಭ ಸೇರಿವೆ. ಇವುಗಳನ್ನು ಕೇಳಿ ತಿಳಿದುಕೊಳ್ಳುವುದು ಅಲ್ಬಂ, ವಿಡಿಯೋ, ಲೈಬ್ರರಿಗಳಿಂದ ಮಾತ್ರ. ಹೊಸ ವರ್ಷಾಚರಣೆ ಹಿಂದಿನ ಲಯವನ್ನು ಕಳೆದುಕೊಂಡಿದೆ. ಇಂದು ಹೊಸ ವರ್ಷಾಚರಣೆ ಎಂದರೆ ಕಂಠಪೂರ್ತಿ ಮದ್ಯ ಕುಡಿಯುವುದು, ಬಾರ್‌, ಪಬ್‌, ಕ್ಲಬ್‌ಗಳು,  ರೆಸಾರ್ಟ್‌, ಐಷಾರಾಮಿ ಹೊಟೇಲುಗಳಲ್ಲಿ ಮೆರೆಯುವುದು, ಹಾದಿ-ಬೀದಿಯಲ್ಲಿ ಗುಂಪು ಕಟ್ಟಿಕೊಂಡು ಕುಣಿಯುವುದು, ಕೂಗು-ಕೇಕೆ ಹಾಕುವುದು, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಕಂಡಲ್ಲಿ ಕಸ ಒಗೆಯುವುದು, ರಸ್ತೆಗಳಿರುವುದು ತಮಗೊಬ್ಬರಿಗೆ ಎನ್ನುವಂತೆ ವಿಮಾನ ವೇಗದಲ್ಲಿ ದ್ವಿಚಕ್ರ ಮತ್ತು ಕಾರುಗಳನ್ನು ಓಡಿಸುವುದು, ಮ್ಯೂಸಿಕ್‌ ಸಿಸ್ಟಂಗಳನ್ನು ಗರಿಷ್ಟ ವಾಲ್ಯೂಮ್‌ನಲ್ಲಿ ಕೇಳಿಸುವುದು ಮತ್ತು ಬೆಳಗಿನ ತನಕ ಪಾರ್ಟಿ ಮತ್ತು ಪಾನಗೋಷ್ಠಿ ನಡೆಸುವುದು…ಇವು ಈಗಿನ ಹೊಸ ವರ್ಷಾಚರಣೆಯ ಕೆಲವು ಝಲಕ್‌.

ಕೇವಲ ನಗರಗಳು ಮತ್ತು ದೊಡ್ಡ ಪಟ್ಟಣಗಳಿಗೆ ಸೀಮಿತವಾಗಿದ್ದ, ಇಂಥ ಆಚರಣೆ ದೇಶದ ಮೂಲೆ ಮೂಲೆಗೂ ವ್ಯಾಪಿಸಿದೆ. ಮದ್ಯ ಸೇವಿಸಿ ಮಜಾ ಉಡಾಯಿಸಿದರಷ್ಟೇ ಹೊಸ ವರ್ಷಾಚರಣೆ ಎನ್ನುವ ಅಲಿಖೀತ ನಿಯಮಾವಳಿ ಸ್ವಲ್ಪವೂ ವಿಚಾರ ಭಿನ್ನತೆ (dissent) ಇಲ್ಲದೇ ಜಾರಿಯಲ್ಲಿದೆ. ಈ ವರ್ಷ ಒಂದೇ ದಿನ ರಾಜ್ಯದಲ್ಲಿ ಸುಮಾರು 100 ಕೋಟಿ ಮೌಲ್ಯದ ಮದ್ಯವು ಗಟಗಟನೆ ಗಂಟಲಿನಲ್ಲಿ ಇಳಿದಿದೆಯಂತೆ. ಈ ಹಣ ಯಾವುದಾದರೂ ರಚನಾತ್ಮಕ ಕೆಲಸಗಳಿಗೆ ಖರ್ಚಾಗಬಾರದಿತ್ತೇ ಎಂದು ಪ್ರಜ್ಞಾವಂತರು ಯೋಚಿಸುತ್ತಾರೆ. ಇದನ್ನು ಸ್ವಯಂ ಪ್ರೇರಣೆಯಿಂದ ನಿಯಂತ್ರಿಸಬಹುದಾದರೂ, ಅದು ಆ ಸ್ಟೇಜನ್ನು ಮೀರಿದೆ. ಸರಕಾರದ ಬೊಕ್ಕಸಕ್ಕೆ 24% ಆದಾಯ ನೀಡುವ ಇದರ ನಿಯಂತ್ರಣಕ್ಕೆ ಯಾವ ಸರಕಾರವೂ ಕೈ ಹಾಕುವುದಿಲ್ಲ. ವರ್ಷಾಚರಣೆ ಕುಡಿತದ ಅಮಲು, ತನ್ಮೂಲಕ ಆದ ಅವಘಡ, ಮತ್ತು ಕಿತ್ತಾಟದಲ್ಲಿ ಈ ವರ್ಷ ರಾಜ್ಯದಲ್ಲಿ 7 ಜನರು ಜೀವ ತೆತ್ತಿದ್ದಾರೆ. ಇದು ಒಂದು ರೀತಿಯಲ್ಲಿ ದಿನಾ ಸಾಯುವವರಿಗೆ ಅಳುವವರು ಯಾರು ಎನ್ನುವಂತೆ ಆಗಿದೆ. ವರ್ಷಕ್ಕೊಮ್ಮೆ ಮೇಲ್ಮೆಗೆ ಬಂದು ಅಷ್ಟೇ ತ್ವರಿತವಾಗಿ ಧರೆಗಿಳಿಯುವ ಸಮಸ್ಯೆಯಾಗಿದೆ.

ಬೆಂಗಳೂರಿನ ಸಮಸ್ಯೆ
ಐಟಿ ಕ್ರಾಂತಿಯ ನಂತರ, ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯ ದಿಶೆ ಬದಲಾಗಿದೆ. ವರ್ಷದಿಂದ ವರ್ಷಕ್ಕೆ ಹೊಸ ವರ್ಷಾಚರಣೆಯು ಕಿಡಿಗೇಡಿಗಳ, ಕುಡುಕರ ಮತ್ತು ಪುಂಡರ ದಿನೋತ್ಸವ ಆಗುತ್ತಿದೆ. ಬ್ರಿಗೇಡ್‌ ರೋಡ್‌, ಚರ್ಚ್‌ ಸ್ಟ್ರೀಟ್‌, ಕೋರಮಂಗಲ, ಎಮ್.ಜಿ. ರಸ್ತೆಗಳನ್ನು ಮೋಜು-ಮಸ್ತಿಯ ಕಾಶಿ ಎನ್ನುತ್ತಿದ್ದು, ಯುವಪೀಳಿಗೆ ಮತ್ತು ಪಡ್ಡೆ ಹುಡುಗರು ಆ ದಿನ ಅಲ್ಲಿಗೆ ಬಂದು ಮಜಾ ಉಡಾಯಿಸದಿದ್ದರೆ ತಮ್ಮ ಜೀವನ ನಿರರ್ಥಕ ಎನ್ನುವ ಭಾವನೆ ಇದೆ ಮತ್ತು ಹೊಸವರ್ಷದ ಆಚರಣೆ ಹಳಿ ತಪ್ಪಿದಂತೆ ಕೊಸರಾಡುತ್ತಾರೆ. ಅವರು ಜೀವನದಲ್ಲಿ ಏನನ್ನೋ ಕಳೆದುಕೊಂಡವರಂತೆ ಒದ್ದಾಡುತ್ತಾರೆ. ಕುಡುಕರು ಮತ್ತು ಡ್ರಗ್ಗಿಗಳು ಆ ದಿನದ ಡೋಸ್‌ ಸಿಗದಿದ್ದರೆ ಪರಿತಪಿಸುತ್ತಾರೆ.

ಲಭ್ಯ ಇರುವ ಸ್ಥಳದಲ್ಲಿ ಅದರ ಮೂರುಪಟ್ಟು ಜನರು, ಕಾಲಿಡಲಾರದಷ್ಟು ಜನಸಂದಣಿ. ಇಂಥ ಸ್ಥಳ ಮಹಿಳೆಯರಿಗೆ ಸರಿಯಾದುದಲ್ಲ ಎನ್ನುವ ಸತ್ಯ ಪ್ರತಿ ವರ್ಷ ನಿವೇದಿಸಲ್ಪಟ್ಟರೂ, ಮಹಿಳೆಯರು ಈ ಹುಚ್ಚು ಜಾತ್ರೆಗೆ ಬರುವುದು ಇನ್ನೊಂದು ವಿಶೇಷ. ಸ್ವಾತಂತ್ರ್ಯದ ಹೆಸರಿನಲ್ಲಿ ಅವರು ತಮ್ಮ ಹಕ್ಕನ್ನು ಜೋರಾಗಿ ಪ್ರತಿಪಾದಿಸುತ್ತಾರೆ. ಕೆಲವು ಪ್ರಗತಿಪರರು ಅವರಿಗೆ ಧ್ವನಿ ಗೂಡಿಸುತ್ತಾರೆ. ಅವರ ಹಕ್ಕನ್ನು ಮತ್ತು ಸ್ವಾತಂತ್ರ್ಯವನ್ನು ಮೊಟಕು ಗೊಳಿಸಬಾರದು ಎಂದು ಬೊಬ್ಬೆ ಹಾಕುತ್ತಾರೆ. ಏನಾದರೂ ಅಹಿತಕರ ಘಟನೆಯಾದರೆ ಪೊಲೀಸರನ್ನು ಏರು ಧ್ವನಿಯಲ್ಲಿ ದೂರುತ್ತಾರೆ. ಪೊಲೀಸರು ತಮ್ಮ ಕರ್ತವ್ಯ ಮಾಡುತ್ತಾರೆ. ಆದರೆ, ಅವರಿಗೂ ಇತಿಮಿತಿಗಳು ಇರುತ್ತವೆ ಎನ್ನುವ ವಾಸ್ತವವನ್ನು ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಹೊಸ ವರ್ಷಾಚರಣೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ವೈಯಕ್ತಿಕ ರಕ್ಷಣೆ ಕೊಡಲು ಸಾಧ್ಯವಿಲ್ಲ. ತಮ್ಮ ರಕ್ಷಣೆಯ ಜವಾಬ್ದಾರಿ ಮತ್ತು ಹೊಣೆ ಅವರ ಮೇಲೂ ಇರುತ್ತದೆ. ಈ ರಸ್ತೆಗಳಲ್ಲಿನ ಹೊಸ ವರ್ಷಾಚರಣೆಯ ಇನ್ನೊಂದು ಅಂಶವೆಂದರೆ, ಈ ನಾಡಿನ ನುಡಿ-ಸಂಸ್ಕೃತಿಯ ಗಂಧ ಗಾಳಿಯಿಲ್ಲದ ವಲಸಿಗರೇ ಹೆಚ್ಚು ಎನ್ನುವುದು. ಸ್ಥಳೀಯರು ಇದ್ದರೂ ಅವರ ಸಂಖ್ಯೆ ಗಮನಾರ್ಹವಾಗಿಲ್ಲ . ಇದಕ್ಕೂ ಹೆಚ್ಚು ಜನಸಂದಣಿ ಸೇರುವ ಶಿರಸಿ ಜಾತ್ರೆ, ಹುಬ್ಬಳ್ಳಿಯ ಸಿದ್ದಾರೂಢ ತೇರು, ಉಳವಿ ಜಾತ್ರೆ, ಸವದತ್ತಿ ಯಲ್ಲಮ್ಮ ಉತ್ಸವ, ಬೆಂಗಳೂರಿನ ಗ್ರಾಮದೇವತೆಗಳ ಹಬ್ಬಗಳು, ಬಸವನಗುಡಿ, ಮಲ್ಲೇಶ್ವರಂನ ಅಳಲೇಕಾಯಿ- ಕಳ್ಳೆಕಾಯಿ ಪರಿಷೆಗಳು ಒಂದೇ ಒಂದು ಅಹಿತಕಾರಿ ಘಟನೆಗಳಿಗೆ ಸಾಕ್ಷಿಯಾಗದೇ ನಡೆಯುವಾಗ, ಸುಶಿಕ್ಷಿತರೇ ಹೆಚ್ಚು ಸೇರುವ ಬ್ರಿಗೇಡ್‌-ಎಮ್‌ಜಿ, ರಸ್ತೆಯ ಹೊಸ ವರ್ಷಾಚರಣೆಯು ಪ್ರತಿ ವರ್ಷವೂ ಬ್ರೇಕಿಂಗ್‌ ನ್ಯೂಸ್‌ ಆಗುವುದು ತೀರಾ ಆಶ್ಚರ್ಯಕರ.

ಹೊಸ ವರ್ಷಾಚರಣೆ ಸಮಯದಲ್ಲಿ ನಡೆದ ಕುಕೃತ್ಯಗಳ ವಿವರಗಳು ಮಾರನೇ ದಿನ ಮಾಧ್ಯಮದಲ್ಲಿ ನೋಡುವಾಗ, ಈ ಭಾಗ್ಯಕ್ಕೆ ಅಲ್ಲಿಗೆ ಹೋಗಬೇಕಿತ್ತೇ ಎಂದು ಪ್ರಜ್ಞಾವಂತರು ವ್ಯಾಕುಲತೆ ವ್ಯಕ್ತಪಡಿಸುವಾಗ, ಹಲವರು ಪೊಲೀಸರನ್ನು, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಕಾನೂನು ವ್ಯವಸ್ಥೆಯನ್ನು ಮನಸ್ವೀ ಟೀಕಿಸುತ್ತಾರೆ. ಹೇಗೆ ನಿಭಾಯಿಸಬೇಕೆಂದು ಉಚಿತ ಸಲಹೆ ಕೊಡುತ್ತಾರೆ. ಅದರೆ, ಸಮಸ್ಯೆಯ ಮೂಲವನ್ನು ಅರಿಯುವ ಮತ್ತು ಹೋಗಲಾಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಯುವುದಿಲ್ಲ. ಮುಂದಿನ ವರ್ಷ ಪುನಹ ಇಂಥ ಘಟನೆಗಳು ನಡೆದಾಗಲೇ ಚಿಂತನೆ ಮತ್ತ ಕಡತಗಳು ಮೇಲ್ಮೆಗೆ ಬರುತ್ತವೆ.

ಈಗ ಸ್ಥಳ ಬದಲಾವಣೆ ಮಾತು
ಬ್ರಿಗೇಡ್‌ ಮತ್ತು ಎಮ್.ಜಿ. ರಸ್ತೆಯಲ್ಲಿ ಹೊಸ ವರ್ಷಾ ಚರಣೆಯನ್ನು ನಿಷೇಧಿಸಿ, ಅದನ್ನು ವಿಸ್ತಾರವಾದ ಅರಮನೆ ಮೈದಾನಕ್ಕೆ ಸ್ಥಳಾಂತರಿಸಬೇಕು ಎನ್ನುವ ಸಲಹೆಯನ್ನು ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಗಂಭೀರವಾಗಿ ಚಿಂತಿಸುತ್ತಿದೆಯಂತೆ. ರೇಸ್‌ ಕೋರ್ಸನ್ನು ನಗರದಿಂದ ಹೊರಗೆ ಹಾಕಬೇಕು ಎನ್ನುವ ಅರ್ಥಪೂರ್ಣ ಪ್ರಸ್ತಾವವೇ ನನೆಗುದಿಗೆ ಬಿದ್ದಿರುವಾಗ, ಯುವ ಜನರ ಮತ್ತು ಪಡ್ಡೆ ಹುಡುಗರ ವರ್ಷದ ಒಂದೇ ಒಂದು ದಿನದ ಆಸೆ ಆಕಾಂಕ್ಷೆಗೆ, ಮೋಜು-ಮಸ್ತಿ-ಮನರಂಜನೆಗೆ ತಡೆಯೊಡ್ಡ ಲಾದೀತೆ?
ಬದಲಾಗಬೇಕಿರುವುದು ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸುವವರ ಮನಸ್ಥಿತಿಯೇ ಹೊರತು ಸ್ಥಳವಲ್ಲ. ಪುಂಡರಿಗೆ ಸ್ಥಳ ಯಾವುದೇ ವ್ಯತ್ಯಾಸ ಮಾಡುವುದಿಲ್ಲ. ಅವರ ಕೃತ್ಯಗಳಿಗೆ ಇನ್ನೂ ದೊಡ್ಡ ಮೈದಾನ ಸಿಗುತ್ತದೆ. ಪುಂಡರ ದಿನೋತ್ಸವ ಎಂದಿನಂತೆ ಮುಂದುವರೆಯುತ್ತದೆ.

ರಮಾನಂದ ಶರ್ಮಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ