ಪುಸ್ತಕಗಳನ್ನಲ್ಲ, ಈಗ ಮನುಷ್ಯರನ್ನೇ ಓದಿ!


Team Udayavani, Nov 25, 2018, 6:00 AM IST

d-11.jpg

ವಿಶ್ವದ 60 ದೇಶಗಳಲ್ಲಿ ಈಗ ಮಾನವ ಗ್ರಂಥಾಲಯಗಳು ಆರಂಭವಾಗಿವೆ. ಹೈದರಾಬಾದ್‌, ಮುಂಬಯಿಗಳಲ್ಲೂ ಇವೆ. ಅಲ್ಲಿ “ಓದಲು’ ನಮಗೆ ಪುಸ್ತಕಗಳ ಬದಲು ಮನುಷ್ಯರೇ ಸಿಗುತ್ತಾರೆ. ತಮ್ಮನ್ನು ಸಂದರ್ಶಿಸುವವರನ್ನು ಕಥೆ ಹಾಗೂ ಸಂವಾದಗಳಿಂದಲೇ ತಲುಪುವ ಪ್ರಯತ್ನ ಮಾಡುತ್ತಾರೆ. ಹೇಳಲಿಕ್ಕೊಂದು ಆಸಕ್ತಿದಾಯಕ ಕಥೆಯುಳ್ಳವರು, ಕಷ್ಟ-ಕೋಟಲೆಗಳಲ್ಲಿ ಬೆಂದವರು, ಸಾಧನೆಯಿಂದಲೇ ಸ್ಫೂರ್ತಿಯಾದವರು ಹಾಗೂ ಓದುಗರ ಮೇಲೆ ಪರಿಣಾಮ ಬೀರಬಲ್ಲವರು ಇಲ್ಲಿ ಪುಸ್ತಕಗಳಾಗಬಹುದು.

ಆರಾಮವಾಗಿ ಕುಳಿತು, ಒಂದು ಕೈಯಲ್ಲಿ ಕಾಫಿ ಕಪ್‌ ಹಿಡಿದು, ಮತ್ತೂಂದು ಕೈಯಲ್ಲಿ ಪುಸ್ತಕ ಎತ್ತಿಕೊಂಡು ಓದುವ ಹೊತ್ತಲ್ಲಿ ಲಗಾಮು ಬಿಚ್ಚಿದ ಕುದುರೆಯಂತೆ ಕಲ್ಪನೆಯನ್ನು ಹರಿಬಿಟ್ಟರೆ ಅದರ ಸುಖವೇ ಬೇರೆ. ಭೂತ- ವರ್ತಮಾನಗಳನ್ನು, ಸಪ್ತಸಾಗರಗಳನ್ನು ಕ್ಷಣಮಾತ್ರದಲ್ಲಿ ದಾಟಿ ಕಥೆಯ ಲೋಕದೊಳಗೆ ನಾವು ವಿಹರಿಸುತ್ತೇವೆ. ಪುಟಗಳನ್ನು ತಿರುವುತ್ತ ಹೋದಂತೆ ಕುತೂಹಲ ಹೆಚ್ಚಿಸುವ ಕಥೆ, ಕಾದಂಬರಿಗಳಾದರೆ ಬಾಹ್ಯ ಪ್ರಪಂಚದ ಅರಿವೇ ಇಲ್ಲದವರಂತೆ ಹಸಿವು, ನಿದ್ದೆ ನೀರಡಿಕೆಗಳನ್ನೂ ಮರೆತು ಆ ಪುಸ್ತಕದ ಪಾತ್ರಗಳಲ್ಲಿ ಒಂದಾಗುತ್ತೇವೆ. ನಮ್ಮ ಮನದಲ್ಲಿ ಮೂಡುವ ಪ್ರಶ್ನೆಗಳಿಗೆ ನಾವೇ ಉತ್ತರ ಕಂಡುಕೊಳ್ಳಲು ಯತ್ನಿಸುತ್ತೇವೆ. ಅದು ಸಾಧ್ಯವಾಗದಿದ್ದರೆ ಬೇರೆ ಪುಸ್ತಕ ಅಥವಾ ಸಂಪನ್ಮೂಲ ವ್ಯಕ್ತಿಗಳ ಮೊರೆಹೋಗುತ್ತೇವೆ. ಆದರೆ, ಕೃತಿಯ ಪಾತ್ರಗಳೊಂದಿಗೇ ನೇರ ಸಂವಹನ ಸಾಧ್ಯವಾಗಿ ನಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!

ಕಲ್ಪನೆ ಅದ್ಭುತವಾಗಿದೆ ಅಲ್ಲವೇ?
ಗ್ರಂಥಾಲಯಗಳೇ ನಿಜವಾದ ಆಸ್ತಿ ಎಂದು ನಂಬಿದ್ದ ಕಾಲವೊಂದಿತ್ತು. ಅಮೆರಿಕದಂತಹ ದೇಶಗಳಲ್ಲಿ ಪುಸ್ತಕಗಳನ್ನು ಓದುವಂತೆ ಮಕ್ಕಳನ್ನು ಪ್ರೇರೇಪಿಸುತ್ತಾರೆ. ಅಲ್ಲಿ ಪ್ರತಿ ಮನೆಯಲ್ಲೂ ಒಂದು ಪುಟ್ಟ ಗ್ರಂಥಾಲಯವಿರುತ್ತದೆ. ಅಂಥ ಪರಿಣಾಮಕಾರಿ ಪ್ರಯತ್ನಗಳು ನಮ್ಮಲ್ಲಿ ಕಡಿಮೆ ಎಂದೇ ಹೇಳಬೇಕು. ಮೊಬೈಲ್‌, ಟೀವಿ ಹಾಗೂ ಕಂಪ್ಯೂಟರಿನಂತಹ ಸಾಧನಗಳು ಬಂದ ಮೇಲೆ ನಮ್ಮ ಆದ್ಯತೆಗಳು ಬದಲಾಗಿವೆ. ಪುಸ್ತಕದ ಅಂಗಡಿಗಳಿಗೆ ಜನ ಹೋಗುತ್ತಿಲ್ಲ. ದುಡ್ಡು ಕೊಟ್ಟು ಪುಸ್ತಕಗಳನ್ನು ಖರೀದಿಸುತ್ತಿಲ್ಲ. ಅವುಗಳನ್ನು ಕೈಯಲ್ಲಿ ಎತ್ತಿಕೊಂಡು ತಿರುವಿಯೂ ಹಾಕುವುದಿಲ್ಲ. ಕಾಲೇಜು ಹಾಗೂ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಸಾವಿರಾರು ಸಂಖ್ಯೆಯ ಪುಸ್ತಕಗಳು ರಾಶಿ ಬಿದ್ದಿದ್ದರೂ ಆ ಕಡೆಗೆ ತಲೆ ಹಾಕುವುದಿಲ್ಲ. ಸಾಹಿತ್ಯ ಸಮ್ಮೇಳನ ಹಾಗೂ ಪುಸ್ತಕ ಪ್ರದರ್ಶನಗಳಲ್ಲಿ ಕೃತಿಗಳ ಮಾರಾಟ ಪ್ರಮಾಣವೂ ಗಣನೀಯವಾಗಿ ಕುಸಿಯುತ್ತಿದೆ. ಮದುವೆ, ಮುಂಜಿಯಂಥ ಶುಭ ಸಮಾರಂಭಗಳಲ್ಲೂ ಗ್ರಂಥಗಳನ್ನು ಉಡುಗೊರೆ ನೀಡುವ ಸಂಸ್ಕೃತಿ ಮರೆಯಾಗುತ್ತಿದೆ. ರಾಶಿ ರಾಶಿ ಹೊತ್ತಗೆಗಳು ಪ್ರಕಟವಾಗುತ್ತಿದ್ದರೂ ಓದುವವರ ಸಂಖ್ಯೆ ಬೆರಳೆಣಿಕೆಗೆ ಇಳಿಯುತ್ತಿದೆ. ಭವಿಷ್ಯದಲ್ಲಿ ಮಕ್ಕಳು ಏನು ಓದುತ್ತಾರೋ ಎಂಬ ಚಿಂತೆ ಕಾಡುತ್ತಿದೆ.

ಹಾಗಾದರೆ ಮಕ್ಕಳು ಓದುತ್ತಿಲ್ಲವೇ? ಮೊಬೈಲ್‌ಗ‌ಳಲ್ಲಿ ಬರುವ ಸಂದೇಶ, ವೀಡಿಯೋ ಮತ್ತು ಚಿತ್ರಗಳನ್ನು ಓದುವುದರಲ್ಲಿ ಹಾಗೂ ನೋಡುವುದರಲ್ಲೇ ಅವರು ಸಂತೃಪ್ತರು. ಅದಕ್ಕೂ ಮಿಕ್ಕಿದ ಗಂಭೀರ ಓದು ಬೇಡವೇ? ನಮ್ಮ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ರೂಪಿಸಿಕೊಳ್ಳಲು ಪುಸ್ತಕಗಳ ಸಾಂಗತ್ಯ ಅಗತ್ಯವಿಲ್ಲವೇ? ಪುಸ್ತಕದ ಹುಳುಗಳಂತಿದ್ದವರು ಈಗೆಷ್ಟು ಜನರಿದ್ದಾರೆ? ತಾಸುಗಟ್ಟಲೆ ಕುಳಿತು ಓದುವ ತಾಳ್ಮೆ ಯಾರಿಗಿದೆ? ಎಂಬ ಪ್ರಶ್ನೆಗಳು ನಿಜಕ್ಕೂ ಭಯ ಹುಟ್ಟಿಸುತ್ತವೆ.

ಪುಸ್ತಕ ಓದುವುದನ್ನು ಜನರು ಕಡಿಮೆ ಮಾಡಿದಾಗ ಅವರ ಜ್ಞಾನದಾಹ ನೀಗಿಸಲು ಇ-ಬುಕ್ಸ್‌, ಆಡಿಯೋ ಬುಕ್ಸ್‌ ಇತ್ಯಾದಿ ಪ್ರಯೋಗಗಳು ನಡೆದು, ತಕ್ಕಮಟ್ಟಿಗೆ ಯಶಸ್ವಿಯೂ ಆದವು. ಹೆಡ್‌ಫೋನ್‌ ಕಿವಿಗೆ ಸಿಕ್ಕಿಸಿಕೊಂಡು ಮೊಬೈಲ್‌, ಟ್ಯಾಬ್‌ಗಳಲ್ಲೇ ಅವುಗಳನ್ನು ಓದುತ್ತ, ಕೇಳುತ್ತ ಜನ ಆನಂದಿಸಿದರು. ಪಾಠ-ಪ್ರವಚನಗಳನ್ನೂ ನುರಿತ ಪ್ರಾಧ್ಯಾಪಕರಿಂದ ಧ್ವನಿಮುದ್ರಿಸಿ, ವಿದ್ಯಾರ್ಥಿಗಳಿಗೆ ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ.

ಭಾವಾಭಿವ್ಯಕ್ತಿಗೆ ಅವಕಾಶ
ವಾಚನಾಭಿರುಚಿ ಕ್ಷೀಣಿಸುತ್ತಿರುವ ಈ ದಿನಗಳಲ್ಲಿ ಜನ ಪುಸ್ತಕಗಳನ್ನಂತೂ ಸರಿಯಾಗಿ ಓದುವುದಿಲ್ಲ, ಮನುಷ್ಯರನ್ನಾದರೂ ಓದುತ್ತಾರೋ? ಪುಸ್ತಕಗಳಲ್ಲಿ ಕಥೆಗಳನ್ನು ಓದುವ ಬದಲು ಮನುಷ್ಯರೇ ಹೇಳುವ ಕಥೆಗಳನ್ನು ಕೇಳುತ್ತಾರೋ? ಎಂಬ ಕುತೂಹಲದ ಜತೆಗೆ ಕಲ್ಪನೆಗೊಂದು ರೆಕ್ಕೆ ಮೂಡಿದೆ.

ಮನುಷ್ಯರನ್ನು ಓದುವುದೇ? ಎಂದು ಹುಬ್ಬೇರಿಸಬೇಡಿ. ಹೌದು! ನಾವೀಗ ವಿವಿಧ ಹಿನ್ನೆಲೆ ಹಾಗೂ ಅನುಭವಗಳ ನೆಲೆಯ ಮನುಷ್ಯರನ್ನೂ “ಓದ’ಬಹುದು. ಸಾಂಪ್ರದಾಯಿಕ ಗ್ರಂಥಾಲಯದಲ್ಲಿ ಮೌನವೇ ಪ್ರಧಾನವಾಗಿದ್ದರೆ, ಮನುಷ್ಯರನ್ನು ಓದುವ ಕಡೆಗಳಲ್ಲಿ ಮಾತು, ಹರಟೆ, ನಗು, ನಿಟ್ಟುಸಿರು, ಬೇಸರ, ಬಿಕ್ಕಳಿಕೆ, ಅಳು, ಆಕ್ರೋಶ – ಎಲ್ಲವುಗಳ ಅಭಿವ್ಯಕ್ತಿಯನ್ನು ಗಮನಿಸಬಹುದು. ಭಾವನೆಗಳನ್ನು ಪ್ರಾಮಾಣಿಕವಾಗಿ ಅಭಿವ್ಯಕ್ತಿಸಿದಾಗ ಹೃದಯ ಕೇಳಿಸಿಕೊಳ್ಳುತ್ತದೆ, ಮನಸ್ಸು ತೆರೆದುಕೊಳ್ಳುತ್ತದೆ. ಭಾವನೆಗಳಿಗೆ ಅಷ್ಟು ಶಕ್ತಿ ಇದೆ.

ಡೆನ್ಮಾರ್ಕ್‌ ಮೂಲದ ಪರಿಕಲ್ಪನೆ
ಡೆನ್ಮಾರ್ಕ್‌ ದೇಶದ ಕೊಪನ್‌ಹೇಗನ್‌ ನಗರದಲ್ಲಿ 18 ವರ್ಷಗಳ ಹಿಂದೆಯೇ ರೋನಿ ಅಬೆರ್ಗಲ್‌ ಎಂಬಾತ ಮನುಷ್ಯರನ್ನು ಓದುವ ಪರಿಕಲ್ಪನೆಗೆ ನಾಂದಿ ಹಾಡಿದ. ಗ್ರಂಥಾಲಯಗಳಿಗೆ ಹೋಗಿ ಕೃತಿಗಳಿಗಾಗಿ ತಡಕಾಡುವ ಬದಲು ಒಂದು ಸಮಾರಂಭಗಳಲ್ಲಿ ಜನರನ್ನು ಭೇಟಿಯಾಗಿ ಮಾತನಾಡುವುದು, ಒಂದರ್ಥದಲ್ಲಿ ಅವರನ್ನು ಓದುವುದು – ಈ ಪರಿಕಲ್ಪನೆಯ ಸಾರ. ಏಕತಾನತೆಯಿಂದ ಬಳಲಿದ್ದ ಜನರಿಗೆ ಸ್ಫೂರ್ತಿ ನೀಡುವ ಕಥೆಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ಸಹೋದರರು ಹಾಗೂ ಸಹೋದ್ಯೋಗಿಗಳ ಜತೆ ಸೇರಿ ಆತ ನಡೆಸಿದ ಎರಡು ದಿನಗಳ ಕಾರ್ಯಕ್ರಮ 50 ಕಥೆಗಳಿಗೆ ಸಾಕ್ಷಿಯಾಯಿತು. ಇದರ ಖ್ಯಾತಿ 70ಕ್ಕೂ ಹೆಚ್ಚು ದೇಶಗಳಿಗೆ ಹರಡಿತು. ಆಸ್ಟ್ರೇಲಿಯದಲ್ಲಿ ಈ ಬಗೆಯ ಒಂದು ಶಾಶ್ವತ ಗ್ರಂಥಾಲಯವೂ ಸ್ಥಾಪನೆಯಾಯಿತು.

30 ನಿಮಿಷಗಳ ಸಂವಾದ
ವಿಶ್ವದ 60 ದೇಶಗಳಲ್ಲಿ ಈಗ ಮಾನವ ಗ್ರಂಥಾಲಯಗಳು ಆರಂಭವಾಗಿವೆ. ಹೈದರಾಬಾದ್‌, ಮುಂಬಯಿಗಳಲ್ಲೂ ಇವೆ. ಅಲ್ಲಿ “ಓದಲು’ ನಮಗೆ ಪುಸ್ತಕಗಳ ಬದಲು ಮನುಷ್ಯರೇ ಸಿಗುತ್ತಾರೆ. ತಮ್ಮನ್ನು ಸಂದರ್ಶಿಸುವವರನ್ನು ಕಥೆ ಹಾಗೂ ಸಂವಾದಗಳಿಂದಲೇ ತಲುಪುವ ಪ್ರಯತ್ನ ಮಾಡುತ್ತಾರೆ. ಹೇಳಲಿಕ್ಕೊಂದು ಆಸಕ್ತಿದಾಯಕ ಕಥೆಯುಳ್ಳವರು, ಕಷ್ಟ-ಕೋಟಲೆಗಳಲ್ಲಿ ಬೆಂದವರು, ಸಾಧನೆಯಿಂದಲೇ ಸ್ಫೂರ್ತಿಯಾದವರು ಹಾಗೂ ಓದುಗರ ಮೇಲೆ ಪರಿಣಾಮ ಬೀರಬಲ್ಲವರು ಇಲ್ಲಿ ಪುಸ್ತಕಗಳಾಗಬಹುದು. ನೋಂದಾಯಿಸಿಕೊಂಡವರನ್ನು ಆಯೋಜಕರು ಸಂದರ್ಶಿಸಿ, ಆಯ್ಕೆ ಮಾಡುತ್ತಾರೆ. ಅವರ ಒಂದು ಕೆಟಲಾಗ್‌ ರಚಿಸುತ್ತಾರೆ. ಆಸಕ್ತಿಯಿರುವ ಓದುಗ ಹಾಗೂ ಪುಸ್ತಕ (ಆ ರೂಪದಲ್ಲಿರುವ ವ್ಯಕ್ತಿ) – ಇಬ್ಬರ ಮಧ್ಯೆಯೇ ಸಂವಾದ ನಡೆಯುತ್ತದೆ. ಒಬ್ಬರಿಗಿಂತ ಹೆಚ್ಚು ಓದುಗರು ಒಬ್ಬರೇ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡರೆ ಗುಂಪು ಚರ್ಚೆಯೂ ಸಾಧ್ಯವಿದೆ. ಸುಮಾರು 30 ನಿಮಿಷಗಳ ಅವಧಿ ಒಂದೆಡೆ ಕುಳಿತು ಜ್ಯೂಸ್‌ ಅಥವಾ ಉಪಾಹಾರ ಸೇವಿಸುತ್ತಲೋ ವಾಕ್‌ ಮಾಡುತ್ತಲೋ ಅವರ ಕಥೆ, ಅನುಭವಗಳಿಗೆ ಕಿವಿಯಾಗುವ ಅವಕಾಶವಿದೆ. ಕೆಲವು ಓದುಗರು ತಮ್ಮ “ಪುಸ್ತಕ’ವನ್ನು ಮತ್ತೆ ಓದಲು ಆಯ್ದುಕೊಳ್ಳುತ್ತಾರೆ. ಈ ಪರಿಕಲ್ಪನೆ ಜನಪ್ರಿಯವಾಗುತ್ತಿದೆ. ಒತ್ತಡದಿಂದ ಬಳಲುತ್ತಿರುವವರಿಗೆ, ನಕಾರಾತ್ಮಕ ಭಾವನೆಯಿಂದ ಕುಗ್ಗಿದವರಿಗೆ ಚಿಕಿತ್ಸೆಯಾಗಿಯೂ ಇದು ಬಳಕೆಯಾಗುತ್ತಿದೆ.

ಓದುವುದು ಭಾವನೆಗಳನ್ನು!
ಮುಂಬಯಿಯ ಫಿಟ್ನೆಸ್‌ ತರಬೇತುದಾರೆ ಜೋಸೆಫಿನ್‌ ಫೆರ್ನಾಂಡೀಸ್‌ 15 ವರ್ಷ ವೈವಾಹಿಕ ಬದುಕಿನಲ್ಲಿ ಇನ್ನಿಲ್ಲದಷ್ಟು ಹಿಂಸೆ ಅನುಭವಿಸಿ ಕೊನೆಗೆ ಅದರಿಂದ ಮುಕ್ತಿ ಪಡೆಯಲು ಬಯಸಿ, ದಿಟ್ಟ ನಿರ್ಧಾರ ಕೈಗೊಂಡು ಕುಟುಂಬದಿಂದ ಬಹಿಷ್ಕಾರಕ್ಕೆ ಒಳಗಾದರು. ಆದರೂ ಧೃತಿಗೆಡದೆ ಬದುಕು ಕಟ್ಟಿಕೊಂಡರು. ಅವರ ಕಥೆಯನ್ನು ಓದುಗರೊಬ್ಬರು ಮೂರು ತಾಸು ಕೇಳಿದರು. ಹಳೆಯದನ್ನೆಲ್ಲ ನೆನಪಿಸಿಕೊಂಡು ಹೇಳುವಾಗ ದುಃಖ ಉಮ್ಮಳಿಸಿತು. ಆದರೆ ಕಥೆ ಹೇಳಿದ ಮೇಲೆ ಆತ್ಮಶಕ್ತಿ ಪುಟಿದೆದ್ದಿತು. ಇಂತಹ ಸನ್ನಿವೇಶದಿಂದ ಪಾರಾಗಲು ಯತ್ನಿಸುತ್ತಿದ್ದ ಹಲವರು ತಮ್ಮನ್ನು ಓದಲು ಬಯಸಿದರು. ಇಲ್ಲಿ ನೀವು ಓದುವುದು ಶಬ್ದಗಳನ್ನಲ್ಲ, ಭಾವನೆಗಳನ್ನು. ಇದೇ ಅತಿ ದೊಡ್ಡ ವ್ಯತ್ಯಾಸ ಎಂದು ವಿವರಿಸಿದರು.

ನೇಪಾಳದ ಕಾಡಿನಲ್ಲಿ ದಿಕ್ಕು ತಪ್ಪಿ ಬದುಕಿ ಬರುತ್ತೇನೆಂಬ ಭರವಸೆಯೇ ಇಲ್ಲದೆ ಅಂಡಲೆದ ವ್ಯಕ್ತಿ, ಸಂಚಾರ ಪೊಲೀಸ್‌ ಆಗಿ ಕರ್ತವ್ಯ ನಿಭಾಯಿಸಿದ ಮಹಿಳೆ, ದಪ್ಪಗಿದ್ದರೂ ಜನಪ್ರಿಯ ಮಾಡೆಲ್‌ ಆದ ಯುವತಿ – ಓದಲು ಅದೆಷ್ಟು ಕಥೆಗಳು ಈಗ! ಮನುಷ್ಯರನ್ನು “ಓದಿದ’ ಬಳಿಕ ಹಲವರ ಬದುಕು, ಯೋಚನಾ ಕ್ರಮ ಬದಲಾಗಿದೆ. ಹಾಗೆಂದು ಓದುಗರೇ ಹೇಳುವಾಗ ಖುಷಿಯಾಗುತ್ತದೆ ಎಂದು ಮುಂಬಯಿಯ ಹ್ಯೂಮನ್‌ ಲೈಬ್ರರಿ ಪ್ರವರ್ತಕ ಅಂದಲಿಬ್‌ ಖುರೇಶಿ ಹೇಳುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. 

ಪರಿಧಿಯ ವಿಸ್ತಾರ
ಕೆಲವು ಮನುಷ್ಯರ ಕುರಿತು ನಮಗೆ ಪೂರ್ವಾಗ್ರಹಗಳಿರುತ್ತವೆ. ಅವರನ್ನು ಭೇಟಿಯಾಗಿ ಮನಸ್ಸು ಬಿಚ್ಚಿ ಮಾತನಾಡಿದ ಮೇಲೆ ಅವು ಬದಲಾಗುವ ಸಾಧ್ಯತೆ ಇರುತ್ತದೆ. ನಮ್ಮ ಜ್ಞಾನದ ಪರಿಧಿಯೂ ವಿಸ್ತರಿಸುವುದು. ಅಪರಿಚಿತರಾಗಿಯೇ ಉಳಿದವರು ಪರಮಾಪ್ತ ಸ್ನೇಹಿತರಾಗುತ್ತಾರೆ. ನಾವು ಓದಬೇಕಾದವರು ಯಾರು? ಅವರ ವ್ಯಕ್ತಿತ್ವ ಹೇಗಿರಬೇಕು? ಅವರ ಬದುಕಿನ ಕಥೆಯೇನು? ಅದರಿಂದ ನಮಗೇನು ಪ್ರಯೋಜನ? ಎಂತಹ ಸ್ಫೂರ್ತಿ? ಅಂಥ ಮನುಷ್ಯರನ್ನು ಹುಡುಕುವುದೆಲ್ಲಿ? ಎಂಬ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಕೆಲವು ಹ್ಯೂಮನ್‌ ಲೈಬ್ರರಿ ಕ್ಲಬ್‌ಗಳು ಹುಟ್ಟಿಕೊಂಡಿವೆ. ಓದುಗ ಹಾಗೂ “ಪುಸ್ತಕ’ದ ಭೇಟಿ ಹಾಗೂ ಸಂವಾದಕ್ಕೆ ಅವು ಅವಕಾಶ ಮಾಡಿಕೊಡುತ್ತಿವೆ.

ಭಾರತದಲ್ಲಿ ಮೊದಲ ಹ್ಯೂಮನ್‌ ಲೈಬ್ರರಿ ಇವೆಂಟ್‌ ನಡೆದಿದ್ದು ನವೆಂಬರ್‌ 2016ರಲ್ಲಿ, ಇಂದೋರ್‌ ಐಐಟಿ ಕ್ಯಾಂಪಸ್ಸಿನಲ್ಲಿ. ಆಮೇಲೆ ಹೈದರಾಬಾದ್‌ನಲ್ಲೂ ಇಂಥ ಕಾರ್ಯಕ್ರಮ ಏರ್ಪಾಡಾಯಿತು. ಹರ್ಷದ್‌ ದಿನಕರ್‌ ಫಾದ್‌ ಆಯೋಜಿಸಿದ್ದ ಈ ಕಾರ್ಯಕ್ರಮ ಸ್ತ್ರೀಪಾತ್ರಗಳನ್ನೇ ನಿರ್ವಹಿಸುತ್ತಿದ್ದ ಪುರುಷ ನೃತ್ಯಪಟು, ದೇಶಗಳಿಗೆ ಗಡಿಗಳೇ ಇರಬಾರದು ಎನ್ನುತ್ತಿದ್ದ ಒಬ್ಬ ಪ್ರವಾಸಿ, ಒಬ್ಬ ಸೈನಿಕ – ಹೀಗೆ ಜೀವನವನ್ನು ಬದಲಿಸುವ ಹತ್ತು ವ್ಯಕ್ತಿಗಳ ಅನುಭವಗಳನ್ನು ಒಟ್ಟುಗೂಡಿಸಿ, ಆಸಕ್ತರಿಗೆ ಹಂಚಿ, ಸ್ಫೂರ್ತಿ ನೀಡುವಲ್ಲಿ ಯಶಸ್ವಿಯಾಯಿತು.

ನಗೆಯ ಹೊನಲು, ಕಣ್ಣೀರ ಕೋಡಿ!
ಮುಂಬಯಿಯಲ್ಲಿ ಈಗ ಒಂದು ಹ್ಯೂಮನ್‌ ಲೈಬ್ರರಿ ಕ್ಲಬ್‌ ಇದೆ. ಪುಸ್ತಕದ ಅಂಗಡಿಗಳಲ್ಲಿ, ಗ್ರಂಥಾಲಯಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ಅದು ಆಗಾಗ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಒಂದಷ್ಟು ದಿನ ಮೊದಲೇ ಮಾನವ ಪುಸ್ತಕವಾಗಲು ಇಚ್ಛಿಸುವವರಿಂದ ಅರ್ಜಿ ಆಹ್ವಾನಿಸುತ್ತದೆ. ಮೇ 28ರಂದು ಮೊದಲ ಕಾರ್ಯಕ್ರಮ ನಡೆಯಿತು. ಪುಸ್ತಕಕ್ಕೆ ಜೀವ ಬಂದಾಗ ದ್ವಿಮುಖ ಸಂವಹನ ಸಾಧ್ಯವಾಗುತ್ತದೆ. ಭಾವನೆಗಳಿಗೆ ಧ್ವನಿಯಾಗುತ್ತದೆ. ನಗೆಯ ಹೊನಲಿನೊಂದಿಗೆ ಕಣ್ಣೀರ ಕೋಡಿಯೂ ಹರಿಯುತ್ತದೆ. ಮನ ಕಲಕುವ ಕಥೆಗಳಿಗೆ ಹೃದಯ ಮಿಡಿಯುತ್ತದೆ. ಕಷ್ಟಗಳ ಹಾದಿಯನ್ನು ಸವೆಸಿ ಮಾಡಿದ ಸಾಧನೆಯನ್ನು ಕಂಡು ಸ್ಫೂರ್ತಿಗೊಳ್ಳುತ್ತೇವೆ.

“ಆಫ್ ಡ್ರೀಮ್ಸ್‌ ಅಂಡ್‌ ಡಿಸೈರ್ಸ್‌’ ಹೆಸರಿನ ಮಾನವ ಪುಸ್ತಕ ರಿಚೇಲ್‌ ಲಿವಿಸ್‌ ಹೇಳುವಂತೆ, ಅಪರಿಚಿತರಿಗೆ ನಮ್ಮ ಕಥೆ ಹೇಳುವುದು ಸುಲಭ. ಅವರಿಗೆ ನಮ್ಮ ಕುರಿತು ಯಾವುದೇ ಪೂರ್ವಾಗ್ರಹಗಳು ಇರುವುದಿಲ್ಲ. ಜನರಿಗೆ ಸಾಕಷ್ಟು ಕುತೂಹಲ ವಿತ್ತು. ಹಲವು ಪ್ರಶ್ನೆಗಳನ್ನು ಕೇಳಿದರು. ತಮ್ಮ ಅನುಭವಗಳನ್ನೂ ಹೇಳಿಕೊಂಡರು. ನಮ್ಮ ನಡುವಿನ ಸಮಾನ ಅಂಶಗಳನ್ನು ಗುರುತಿಸಲು ಪ್ರಯತ್ನಿಸಿದರು. ಅಸಂಖ್ಯಾತ ಜನರ ಬದುಕು ಕುತೂಹಲಕರವಾಗಿರುತ್ತದೆ. ಹೆಚ್ಚು ಜನ ಸೇರಿದಂತೆ ಇದು ಇನ್ನಷ್ಟು ಆಕರ್ಷಕ ಪರಿಕಲ್ಪನೆಯೂ ಆದೀತು.

ಮನುಷ್ಯರನ್ನು ಓದುವ ಜತೆಗೆ ವಾಚನಾಭಿರುಚಿಯನ್ನು ಬೆಳೆಸಿಕೊಂಡರೆ ಇಂಥ ಪ್ರಯತ್ನಗಳು ಅರ್ಥಪೂರ್ಣ ಹಾಗೂ ಸಾರ್ಥಕ. 

ಅನಂತ ಹುದೆಂಗಜೆ 

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.