ಆರ್ಥಿಕ ಹಿಂಜರಿತದಿಂದ ಕಾಪಾಡು ಅಧಿನಾಯಕ

Team Udayavani, Aug 23, 2019, 5:42 AM IST

ಜಾಗತಿಕ ಆರ್ಥಿಕ ಹಿಂಜರಿತದ ಹೊರತಾಗಿಯೂ 2019-20ರಲ್ಲಿ ಶೇ. 6.9 ಪ್ರಗತಿ ದಾಖಲಿಸಬಹುದೆಂಬ ನಿರೀಕ್ಷೆ ಹುಸಿಯಾಗಲು ಬಿಡಬಾರದು

ಜೆಟ್ ಏರ್‌ವೇಸ್‌ ನೆಲಕಚ್ಚಿರುವುದು, ಏರ್‌ ಇಂಡಿಯಾ 7,600 ರೂ. ಕೋಟಿ ನಷ್ಟ ಅನುಭವಿಸಿರುವುದು, ಬಿಎಸ್‌ಎನ್‌ಎಲ್ನ 54,000 ನೌಕರರ ಉದ್ಯೋಗಕ್ಕೆ ಅಪಾಯ ಎದುರಾಗಿರುವುದು, ಎಚ್ಎಎಲ್ನಲ್ಲಿ ಸಂಬಳ ನೀಡಲು ಸಮಸ್ಯೆಯಾಗಿರುವುದು, ಅಂಚೆ ಇಲಾಖೆ 15,000 ಕೋಟಿ ನಷ್ಟದಲ್ಲಿರುವುದು, 30 ನಗರಗಳಲ್ಲಿ 12.76 ಲಕ್ಷ ಮನೆಗಳು ಮಾರಾಟವಾಗದೆ ಉಳಿದಿರುವುದು, ಏರ್‌ಸೆಲ್ ದುರ್ಗತಿ, ಒಎನ್‌ಜಿಸಿ ನಷ್ಟಕ್ಕೆ ತಿರುಗಿರುವುದು, 36 ದೊಡ್ಡ ಸಾಲಗಾರರು ದೇಶ ಬಿಟ್ಟಿರುವುದು ಇವೆಲ್ಲ ಆರ್ಥಿಕತೆಯ ಕರಾಳ ಚಿತ್ರಣವನ್ನು ಮುಂದಿಡುತ್ತವೆ.

ಯಾವುದೇ ಒಂದು ರಾಷ್ಟ್ರದ ಹಣಕಾಸು ಕ್ಷೇತ್ರವು ಆ ರಾಷ್ಟ್ರದ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳ ಕೇಂದ್ರ ಬಿಂದು. ಎಲ್ಲಾ ದೇಶದ ಸರಕಾರಗಳ ಪ್ರಮುಖ ಆದ್ಯತೆಯ ವಿಚಾರವೆಂದರೆ ಸದೃಢ ಆರ್ಥಿಕತೆಯನ್ನು ಕಾಪಾಡಿಕೊಳ್ಳುವುದು.

ಇದೀಗ ಅಮೆರಿಕ ಮತ್ತು ಚೀನ ದೇಶಗಳ ವಾಣಿಜ್ಯ ಸಮರ, ಜಪಾನ್‌ ಮತ್ತು ದಕ್ಷಿಣ ಕೊರಿಯಾಗಳ ವಾಣಿಜ್ಯ ಸಂಘರ್ಷ ಮತ್ತು ಬ್ರಿಟನ್‌ ಐರೋಪ್ಯ ದೇಶಗಳ ಒಕ್ಕೂಟದಿಂದ ಹೊರಬರಲು ಯತ್ನಿಸುತ್ತಿರುವ ಪರೋಕ್ಷ ವಾಣಿಜ್ಯ ಸಮರ, ಏತನ್ಮಧ್ಯೆ ಭಾರತದಲ್ಲಿ ಪ್ರಸಕ್ತ ಸನ್ನಿವೇಶದ ಆರ್ಥಿಕ ಕುಸಿತ ಇವೆಲ್ಲವೂ ಗಂಭೀರ ಚಿಂತನೆಗೆ ಕಾರಣವಾಗಿವೆ. ಎಲ್ಲಾ ದೇಶಗಳು ಅವುಗಳ ಆರ್ಥಿಕತೆಯನ್ನು ಸುಭದ್ರವಾಗಿಸಲು ಪರದಾಡುತ್ತಿವೆ.

ಅಮೆರಿಕ ಮತ್ತು ಚೀನ ನಡುವೆ ನಡೆಯುತ್ತಿರುವ ವಾಣಿಜ್ಯ ಸಮರವು ಜಾಗತಿಕ ನೆಲೆಯಲ್ಲಿ ನಕಾರಾತ್ಮಕ ಪ್ರಭಾವವನ್ನು ಬೀರುವ ಸಾಧ್ಯತೆ ಗೋಚರವಾಗುತ್ತಿದೆ. ಅಂತಾರಾಷ್ಟ್ರೀಯ ಅರ್ಥಶಾಸ್ತ್ರಜ್ಞರ ಪ್ರಕಾರ ಅಮೆರಿಕದ ಆರ್ಥಿಕತೆಯು ಇನ್ನೆರಡು ವರ್ಷಗಳೊಳಗಾಗಿ ಹಿಂಜರಿಕೆ ಕಾಣಲಿದೆ. ಈಗಾಗಲೇ ಷೇರು ಪೇಟೆ ಸೂಚ್ಯಂಕ ಕುಸಿದಿದೆ. ಈ ನಿಟ್ಟಿನಲ್ಲಿ ಸಂಪನ್ಮೂಲ ನಿರ್ವಾಹಕರು ಜಾಗತಿಕ ಮಟ್ಟದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಗಳಲ್ಲಿ ಅಲ್ಲೋಲಕಲ್ಲೋಲಗಳ ಸೃಷ್ಟಿಯಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕ ಮತ್ತು ಚೀನವನ್ನು ಅವಲಂಬಿಸಿ ಹಲವಾರು ದೇಶಗಳು ವಿವಿಧ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿವೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರು ಕಳೆದೊಂದು ವರ್ಷದಿಂದೀಚೆಗೆ ಚೀನಾ ಉತ್ಪನ್ನಗಳ ಆಮದಿನ ಮೇಲೆ 6,300 ಕೋಟಿ ಡಾಲರ್‌ (ರೂ. 44 ಲಕ್ಷ ಕೋಟಿ) ತೆರಿಗೆ ಸಂಗ್ರಹಿಸಿದ್ದಾರೆ. ಚೀನಾದ ಎಲ್ಲಾ ಉತ್ಪನ್ನಗಳ ಮೇಲೆ ಅಮೆರಿಕ ಶೇ. 25 ಸುಂಕ ವಿಧಿಸಿದರೆ ಚೀನ ಕೂಡಾ ಮುಯ್ಯಿ ತೀರಿಸಿದುದರಿಂದ ಈ ದೇಶಗಳ ಜತೆಗೆ ಜಗತ್ತಿನಾದ್ಯಂತ ವ್ಯಾಪಾರ, ವಹಿವಾಟಿನಲ್ಲಿ ಕೈ ಜೋಡಿಸಿದ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮವಾಗುತ್ತಿದೆ . ಅಮೆರಿಕಕ್ಕೆ ವಿಶ್ವದ ಎಲ್ಲಾ ದೇಶಕ್ಕಿಂತ ಹೆಚ್ಚಿನ ಆಮದು ಚೀನಾ ದೇಶದಿಂದ ಆಗುತ್ತಿತ್ತು. ಅಮೆರಿಕ ಕೂಡಾ ಚೀನಕ್ಕೆ ಹಲವಾರು ಪ್ರಮುಖ ಸರಕುಗಳನ್ನು ರಫ್ತು ಮಾಡುತ್ತದೆ. ಈ ಮಧ್ಯೆ ಚೀನ ತನ್ನ ರಫ್ತುದಾರರಿಗೆ ಅನುಕೂಲ ಆಗಲು ಕರೆನ್ಸಿ ಅಪಮೌಲ್ಯಗೊಳಿಸಿದೆ. ಚೀನದ ಈ ನೀತಿಯನ್ನು ಅಮೆರಿಕ ‘ಅಸಮ್ಮತ ಆರ್ಥಿಕ ನಡೆ’ ಎಂದು ಬಣ್ಣಿಸಿದೆ.

ಏಷ್ಯಾದ ಪ್ರಬಲ ಆರ್ಥಿಕತೆಗಳಾದ ಜಪಾನ್‌ ಮತ್ತು ದಕ್ಷಿಣ ಕೊರಿಯಾ ನಡುವೆಯೂ ವಾಣಿಜ್ಯ ಸಮರ ಪ್ರಾರಂಭವಾಗಿದೆ. ದಕ್ಷಿಣ ಕೊರಿಯಾದ ಕೈಗಾರಿಕೆಗಳಿಗೆ ಬೇಕಾಗುವ ಸಂಕೀರ್ಣ ತಂತ್ರಜ್ಞಾನದ ರಫ್ತಿಗೆ ಜಪಾನ್‌ ಕಳೆದ ಒಂದು ವರ್ಷದಿಂದ ನಿರ್ಬಂಧ ವಿಧಿಸಿದೆ. ಸಂಕೀರ್ಣ ಮತ್ತು ಸೂಕ್ಷ್ಮವಾದ ಚಿಪ್‌ ಉತ್ಪಾದನೆಗೆ ಬೇಕಾಗುವ ವಸ್ತುಗಳ ಪರಸ್ಪರ ವಿನಿಮಯವನ್ನು ಕೊರಿಯಾ ಮತ್ತು ಜಪಾನ್‌ ದೇಶಗಳು ನಡೆಸುತ್ತಿದ್ದವು. ಜಾಗತಿಕವಾಗಿಯೂ ಇದು ಪರಿಣಾಮ ಬೀರಲಿದೆ. ಬ್ರಿಟನ್‌ ಐರೋಪ್ಯ ರಾಷ್ಟ್ರಗಳ ಒಕ್ಕೂಟದಿಂದ ಹೊರಬರಲು ಯತ್ನಿಸುತ್ತಿದೆ. ಬ್ರಿಟನ್‌ ತನ್ನ ವ್ಯಾಪಾರ ವಹಿವಾಟುಗಳಿಗೆ ಒಕ್ಕೂಟಗಳ ಸಂಬಂಧದಿಂದ ಮುಕ್ತಾಯ ಹಾಡಿದರೂ ಹಾಡಬಹುದು. ಈ ಎಲ್ಲಾ ಜಾಗತಿಕ ನಡಾವಳಿಗಳಿಂದ ಆರ್ಥಿಕ ಹಿಂಜರಿಕೆ ಒಂದು ದಶಕದ ಅನಂತರ ಮರುಕಳಿಸುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ.

ದೇಶದಲ್ಲಿ ಇದೀಗ ಆರ್ಥಿಕ ಕುಸಿತವು ಗಂಭೀರ ಕಳವಳಕ್ಕೆ ಕಾರಣವಾಗಿದೆ. ಕೇಂದ್ರ ಸರಕಾರ ಕೂಡಲೇ ನಿರುದ್ಯೋಗ, ಬೆಲೆ ಏರಿಕೆ, ಕೃಷಿ ರಂಗದ ಬಿಕ್ಕಟ್ಟು, ಖಾಸಗಿ ಬಂಡವಾಳದ ಕುಸಿತ, ವಿದ್ಯುತ್‌ ಮತ್ತು ಬ್ಯಾಂಕೇತರ ಹಣಕಾಸು ವಲಯಗಳಲ್ಲಿನ (ಎನ್‌ಬಿಎಫ್ಸಿ) ಸುಧಾರಣೆ ಮತ್ತು ಜನರ ವ್ಯಯದಲ್ಲಾಗಿರುವ ಮಂದಗತಿಗೆ ಪರಿಹಾರ ಹುಡುಕಬೇಕಾಗಿದೆ. ತೆರಿಗೆ ಕಡಿತ ಮತ್ತಿತರ ರಿಯಾಯಿತಿ ಜಾರಿಗೊಳಿಸುವ ಮೂಲಕ ಜನರ ಕೈಯಲ್ಲಿ ಹೆಚ್ಚು ಹಣ ಓಡಾಡುವಂತೆ ಮಾಡುವುದು ಆರ್ಥಿಕ ಹಿಂಜರಿತವನ್ನು ಎದುರಿಸುವ ಒಂದು ವಿಧಾನ.

ಮೂಲ ಸೌಕರ್ಯಗಳು ಧಾರಳವಾಗಿ ಸೃಷ್ಟಿಯಾಗಿ ಈ ಮೂಲಕ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿ ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳ ವಹಿವಾಟು ಹಿಗ್ಗಿದರೆ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುತ್ತದೆ. ಒಂದು ಕಾಲದಲ್ಲಿ ಗಾರ್ಮೆಂಟ್ಸ್‌ ರಫ್ತಿನಲ್ಲಿ ನಾವು ಅಗ್ರಸ್ಥಾನದಲ್ಲಿದ್ದೆವು. ಈಗ ಬಾಂಗ್ಲಾದೇಶ ಮತ್ತು ವಿಯಟ್ನಾಂಗಿಂತಲೂ ಹಿಂದೆ ಬಿದ್ದಿದ್ದೇವೆ. ಸೇವಾ ವಲಯ ಕುಗ್ಗಿದೆ.

ಬಜೆಟ್‌ನಲ್ಲಿ ಆರ್ಥಿಕ ಚೇತರಿಕೆಗೆ ಪೂರಕವಾಗುವ ಕ್ರಮಗಳು ಢಾಳಾಗಿ ಕಾಣಿಸಿಲ್ಲ. ಇದೀಗ ಉದ್ಯಮಿಗಳು, ವಾಣಿಜ್ಯಪತಿಗಳು ಮತ್ತು ಬ್ಯಾಂಕಿಂಗ್‌ ವಲಯದ ಪ್ರಮುಖರ ಸಲಹೆ ಪಡೆಯುವ ಸಕಾಲಿಕ ಕ್ರಮಕ್ಕೆ ಸರಕಾರ ಮುಂದಾಗಿರುವುದು ಉತ್ತಮ ನಡೆ.

ಸದ್ಯ ಯಾವುದೇ ವ್ಯಾಪಾರ, ಉದ್ದಿಮೆಯತ್ತ ಕಣ್ಣು ಹಾಯಿಸಿದರೂ ಆತಂಕ ನೆಲೆಯಾಗಿರುವುದು ಕಂಡು ಬರುತ್ತದೆ. ಈ ಮಧ್ಯೆ ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ ಇತ್ಯಾದಿ ನೈಸರ್ಗಿಕ ವಿಕೋಪಗಳು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡಿವೆ.

ರಿಸರ್ವ್‌ ಬ್ಯಾಂಕ್‌ ಮತ್ತೂಮ್ಮೆ ರಿಪೋ ಬಡ್ಡಿದರವನ್ನು ಶೇ. 0.35 ರಷ್ಟು ಕಡಿತಗೊಳಿಸಿದೆ. ಫೆಬ್ರವರಿಯಿಂದ ನಾಲ್ಕು ಬಾರಿ ಕಡಿತಗೊಳಿಸಿ 9 ವರ್ಷಗಳ ಹಿಂದಿನ ಶೇ. 5.40ಕ್ಕೆ ತಂದುನಿಲ್ಲಿಸಿದೆ. ಆದರೂ ಆರ್ಥಿಕ ಹಿಂಜರಿತದ ತೀವ್ರತೆ ಹೆಚ್ಚುತ್ತಿದೆ. ರಿಪೋ ಕಡಿತ ಆರ್ಥಿಕ ಹಿಂಜರಿತಕ್ಕೆ ಪರಿಹಾರವಾಗಲಿಲ್ಲ. ಹಿಂದಿನ ಆರು ತಿಂಗಳ ಅವಧಿಯಲ್ಲಿ ಶೇ. 0.75 ರಷ್ಟು ಕಡಿಮೆ ಮಾಡಿದರೂ ವಾಣಿಜ್ಯ ಬ್ಯಾಂಕ್‌ಗಳು ಗ್ರಾಹಕರಿಗೆ ಕೇವಲ ಶೇ. 0.29ರಷ್ಟು ಕಡಿಮೆ ಮಾಡಿವೆ. ಆರ್‌ಬಿಐ ನೀತಿಯಂತೆ ಬ್ಯಾಂಕ್‌ಗಳು ಶಿಸ್ತನ್ನು ಕಾಪಾಡಬೇಕು. ಗ್ರಾಹಕರ ಹಿತರಕ್ಷಣೆಗೆ ನಿಲ್ಲಬೇಕು. ಖಾಸಗಿ ಹೂಡಿಕೆಯ ಇಳಿಕೆ, ಉತ್ಪಾದನಾ ರಂಗದ ಹಿನ್ನಡೆ, ನಿರ್ಮಾಣ ವಲಯದ ಮಂದಗತಿ, ಕುಸಿಯುತ್ತಿರುವ ರಫ್ತು, ಕೃಷಿ ಕ್ಷೇತ್ರದ ಸಂಕಷ್ಟ 2019-20 ಸಾಲಿನಲ್ಲಿ ಆರ್ಥಿಕ ಬೆಳವಣಿಗೆ ದರ ಶೇ. 7 ಕ್ಕಿಂತ ಕಡಿಮೆಯಾಗುವ ಸಾಧ್ಯತೆಯನ್ನು ತೋರಿಸಿವೆ.

ವಿದೇಶಿ ಹೂಡಿಕೆದಾರರು ಬಂಡವಾಳ ವಾಪಾಸ್‌ ಪಡೆಯುತ್ತಿರುವುದು ಆತಂಕದ ವಿಷಯ. ಭಾರತದಲ್ಲಿ ಅಟೋಮೊಬೈಲ್, ರಿಯಲ್ ಎಸ್ಟೇಟ್, ಬ್ಯಾಂಕಿಂಗ್‌ ವಲಯದ ಕುಸಿತವು ಆರ್ಥಿಕ ಹಿಂಜರಿತದ ಮುಖ್ಯ ಲಕ್ಷಣಗಳು. ಇದೀಗ ಷೇರು ಪೇಟೆ ಸೂಚ್ಯಂಕವೂ ಕುಸಿಯತೊಡಗಿದೆ. ಅಟೋಮೊಬೈಲ್ ವಲಯದಲ್ಲಿ ಮುಂದಿನ ಮೂರು ತಿಂಗಳಲ್ಲಿ 5 ಲಕ್ಷ ಉದ್ಯೋಗ ನಷ್ಟವಾಗುವ ಭೀತಿಯಿದೆ.

ಹಲವಾರು ಬೃಹತ್‌ ಉದ್ದಿಮೆಗಳ ಬಿಕ್ಕಟ್ಟಿನ ಹಿಂದಿನ ಕಾರಣಗಳನ್ನು ವಿಶ್ಲೇಷಿಸಿ ಪ್ರಾಮಾಣಿಕತೆಯಿಂದ ಪುನಃಶ್ಚೇತನಗೊಳಿಸಬೇಕು. ಜೆಟ್ ಏರ್‌ವೇಸ್‌ ನೆಲಕಚ್ಚಿರುವುದು, ಏರ್‌ ಇಂಡಿಯಾ 7,600 ರೂ. ಕೋಟಿ ನಷ್ಟ ಅನುಭವಿಸಿರುವುದು, ಬಿಎಸ್‌ಎನ್‌ಎಲ್ನಲ್ಲಿ 54,000 ನೌಕರರ ಉದ್ಯೋಗಕ್ಕೆ ಅಪಾಯ ಎದುರಾಗಿರುವುದು, ಎಚ್ಎಎಲ್ನಲ್ಲಿ ಸಂಬಳ ನೀಡಲು ಸಮಸ್ಯೆಯಾಗಿರುವುದು, ಅಂಚೆ ಇಲಾಖೆ 15,000 ಕೋಟಿ ನಷ್ಟದಲ್ಲಿರುವುದು, 30 ನಗರಗಳಲ್ಲಿ 12.76 ಲಕ್ಷ ಮನೆಗಳು ಮಾರಾಟವಾಗದೆ ಉಳಿದಿರುವುದು, ಏರ್‌ಸೆಲ್ ದುರ್ಗತಿ, ಒಎನ್‌ಜಿಸಿ ನಷ್ಟಕ್ಕೆ ತಿರುಗಿರುವುದು, 36 ದೊಡ್ಡ ಸಾಲಗಾರರು ದೇಶ ಬಿಟ್ಟಿರುವುದು ಇವೆಲ್ಲ ಆರ್ಥಿಕತೆಯ ಕರಾಳ ಚಿತ್ರಣವನ್ನು ನಮ್ಮ ಮುಂದಿಡುತ್ತವೆ.

ಪಿಎನ್‌ಬಿ ನಷ್ಟ, ಎಲ್ಲಾ ಬ್ಯಾಂಕ್‌ಗಳು ಎನ್‌ಪಿಎಯಿಂದ ಅನುಭವಿಸುತ್ತಿರುವ ಸಮಸ್ಯೆ, ರೈಲ್ವೆಯ ಆರ್ಥಿಕತೆ ಹಳಿ ತಪ್ಪಿರುವುದು, ಮಾರುತಿ ಉದ್ಯೋಗ್‌ನಲ್ಲಿ ಉತ್ಪಾದನೆ ಸ್ಥಗಿತವಾಗಿರುವುದು ಇವೆಲ್ಲ ತುರ್ತಾಗಿ ಗಮನ ಹರಿಸಬೇಕಾದ ಸಮಸ್ಯೆಗಳು. ವಿಡಿಯೋ ಕಾನ್‌ ವಂಚನೆ, ಕಾಫಿಡೇ ಸಿದ್ಧಾರ್ಥ್ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವುದು, ಕಾರ್ಪೊರೇಟ್ ಕಂಪೆನಿಗಳು ದಿವಾಳಿಯಾಗುತ್ತಿರುವುದು ಸರಕಾರ ಕಣ್ಣು ತೆರೆಸಬೇಕಾಗಿದೆ. ಯಾವುದೇ ಉದ್ಯಮ ನಷ್ಟ ಅನುಭವಿಸಿದರೂ ಬ್ಯಾಂಕುಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನಷ್ಟಕ್ಕೀಡಾಗುತ್ತವೆ. ಹೀಗೆ ಹಲವಾರು ಎಡರುತೊಡರುಗಳಿದ್ದರೂ ನಮ್ಮಲ್ಲಿನ್ನೂ ಆಶಾ ಕಿರಣಗಳಿವೆ.

ಜಾಗತಿಕ ಆರ್ಥಿಕ ಹಿಂಜರಿತದ ಹೊರತಾಗಿಯೂ 2019-20ರಲ್ಲಿ ಶೇ. 6.9 ಪ್ರಗತಿ ದಾಖಲಿಸಬಹುದೆಂಬ ನಿರೀಕ್ಷೆ ಹುಸಿಯಾಗಲು ಬಿಡಬಾರದು. ನಮ್ಮ ದಾಖಲೆಯ 430 ಶತಕೋಟಿ ಡಾಲರ್‌ಗೂ ಮಿಕ್ಕಿದ ವಿದೇಶಿ ವಿನಿಮಯ ಸಂಗ್ರಹ, ಸೇವಾ ವಲಯದಲ್ಲಿನ ಗಣನೀಯವಾದ ರಫ್ತು, ಕೇಂದ್ರದಲ್ಲಿರುವ ರಾಜಕೀಯ ಸ್ಥಿರತೆ ಮತ್ತು ಪ್ರತಿತಿಂಗಳು ಸಂಗ್ರಹವಾಗುತ್ತಿರುವ ಒಂದು ಲಕ್ಷ ಕೋಟಿಯಷ್ಟು ಜಿ.ಎಸ್‌.ಟಿ, ಸಾರ್ವಜನಿಕ ಬ್ಯಾಂಕ್‌ಗಳ ಅಲ್ಪ ಚೇತರಿಕೆ, ಹಣದುಬ್ಬರದ ನಿಯಂತ್ರಣದಲ್ಲಿರುವುದು, ವಿದೇಶೀ ನೇರ ಬಂಡವಾಳ ಒಳ ಹರಿವು 2018-19ರಲ್ಲಿ 64.37 ಶತಕೋಟಿ ಡಾಲರ್‌ಗೆ ಏರಿಕೆಯಾಗಿರುವುದು ಆರ್ಥಿಕ ಚೇತರಿಕೆಯ ದಿಶೆಯಲ್ಲಿ ಕಾಣಿಸುತ್ತಿರುವ ಆಶಾಕಿರಣಗಳು.

ಯಾವ ಅಡೆತಡೆಗಳಿದ್ದರೂ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವದ ಅಧಿನಾಯಕ ನರೇಂದ್ರ ಮೋದಿಯವರ ಮೇಲೆ ಪ್ರಜೆಗಳಿಗೆ ಅಪಾರ ವಿಶ್ವಾಸವಿದೆ. ಎಲ್ಲ ಸಂಕಷ್ಟಗಳಿಂದ ಪಾರು ಮಾಡುವ ಶಕ್ತಿವಂತ ಅವರು ಎಂದು ಜನರು ಭಾವಿಸಿದ್ದಾರೆ. ಈ ನಂಬಿಕೆ ಹುಸಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಈಗ ಸರಕಾರವನ್ನು ನಡೆಸುವವರ ಮೇಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ