ಆಕಾಶದಿಂದ ಪಾತಾಳಕ್ಕೆ ಕುಸಿದ ವಂಶ ರಾಜಕಾರಣ

ಲೋಕಸಭೆ ಚುನಾವಣೆ ಕಲಿಸಿದೆ ಹಲವು ಪಾಠ

Team Udayavani, Jun 2, 2019, 10:03 AM IST

ಭಾರತದಂಥ ಸಂಕೀರ್ಣ ರಾಜಕೀಯ ವ್ಯವಸ್ಥೆಯುಳ್ಳ ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಸೋಲು ಅಥವಾ ಗೆಲುವಿಗೆ ನಾನಾ ರೀತಿಯ ಕಾರಣಗಳನ್ನು ವ್ಯಾಖ್ಯಾನಿಸಬಹುದು. ಆದರೆ ಈ ಪೈಕಿ ಒಂದು ಘಟನೆ ಅಥವಾ ಒಂದು ಸನ್ನಿವೇಶ ಉಳಿದವುಗಳಿಗಿಂತ ಹೆಚ್ಚು ಮುಖ್ಯವಾಗುತ್ತದೆ.  ರಾಹುಲ್‌ ಗಾಂಧಿಯ ವಿಚಾರಕ್ಕೆ ಬರುವುದಾದರೆ ಸಂಸತ್ತಿನಲ್ಲಿ ಕಣ್ಣು ಮಿಟುಕಿಸಿದ ಆ ಸನ್ನಿವೇಶ ಈ ಮನುಷ್ಯನ ಎಲ್ಲ ಬಂಡವಾಳವನ್ನು ಬಯಲುಗೊಳಿಸಿತು.

ಕಳೆದ ವರ್ಷ ಸಂಸತ್ತಿನಲ್ಲಿ ಮಾಡಿದ ವಿಕರಾಳ ಭಾಷಣದ ಅನಿರೀಕ್ಷಿತ ಅಂತ್ಯವಾಗಿತ್ತು ಈ ಸನ್ನಿವೇಶ. ವಿದೇಶಿ ಸಲಹೆಗಾರರ ಸಲಹೆ ಮತ್ತು ರಾಜಕೀಯವಾಗಿ ಅನಕ್ಷರಸ್ಥರಾಗಿರುವ ಆದರೆ ಸಾಮಾಜಕ ಮಾಧ್ಯಮಗಳಲ್ಲಿ ದೊಡ್ಡ ಗಂಟಲಲ್ಲಿ ಕೂಗಾಡುವ ದಿಲ್ಲಿಯ ಲುಟೆನ್ಸ್‌ನ ಬುದ್ಧಿಜೀವಿಗಳ ಮಾತು ಕೇಳಿಕೊಂಡು ರಾಹುಲ್‌ ಗಾಂಧಿ ರಫೇಲ್‌ಗೆ ಸಂಬಂಧಿಸಿದಂತೆ ಒಂದು ತುಂಡು ಸಾಕ್ಷಿ ಅಥವಾ ಸತ್ಯಾಂಶ ಇಲ್ಲದೆ ಮೋದಿ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ನಿಂದನಾತ್ಮಕವಾಗಿ ಮಾತನಾಡಿದರು. ಅನಂತರ ತಾನು ರಾಗ ದ್ವೇಷಗಳನ್ನೆಲ್ಲ ಮೀರಿದ ನಾಯಕ ಎಂಬುದನ್ನು ತೋರಿಸಿಕೊಡಲು ಪ್ರಧಾನಿಯತ್ತ ಹೋಗಿ ಅವರನ್ನು ಅಪ್ಪಿಕೊಂಡರು. ಆದರೆ ಬಳಿಕ ತನ್ನ ಆಸನಕ್ಕೆ ಬಂದ ರಾಹುಲ್‌ ಗಾಂಧಿ ಇದೊಂದು ಅಗ್ಗದ ಗಿಮಿಕ್‌ ಆಗಿತ್ತು ಎಂಬುದನ್ನು ಸಾಬೀತು ಪಡಿಸಿದರು. ಗ್ಯಾಲರಿಯಲ್ಲಿ ಕುಳಿತಿದ್ದ ತನ್ನ “ಚಿಯರ್‌ ಲೀಡರ್’ಗಳನ್ನು ನೋಡಿ ಹೇಗಿತ್ತು ನನ್ನ ನಾಟಕ ಎಂಬ ರೀತಿಯಲ್ಲಿ ಕಣ್ಣು ಮಿಟುಕಿಸಿದ್ದನ್ನು ಕ್ಯಾಮರಗಳು ಸೆರೆ ಹಿಡಿದು ಬಿತ್ತರಿಸಿದವು. ಈ ಅಪ್ರಬುದ್ಧ, ಬಾಲಿಶ ಮತ್ತು ಠಕ್ಕುತನದ ವರ್ತನೆ ಪ್ರಧಾನಿಯಂಥ ಹುದ್ದೆಗೆ ಈ ಮನುಷ್ಯ ಲಾಯಕ್ಕಲ್ಲ ಎಂಬ ಭಾವನೆಯನ್ನು ದೃಢಪಡಿಸಿತು. ಎನ್‌ಡಿಎ ಕೂಟದ ಪ್ರಮುಖ ನಾಯಕಿಯಾದ ಹರ್‌ಸಿಮ್ರತ್‌ ಕೌರ್‌ “ಈವತ್ತು ಏನು ಕುಡ್ಕೊಂದು ಬಂದಿದ್ದೀರಿ’? ಎಂದು ಇದಕ್ಕೆ ಸರಿಯಾಗಿಯೇ ತಿರುಗೇಟು ನೀಡಿದರು.
ಫ‌ಲಿತಾಂಶ ಪ್ರಕಟವಾದ ಮೇ 23ರಂದು ರಾಹುಲ್‌ ಗಾಂಧಿ ಕಣ್ಣು ಮಿಟುಕಿಸಿದ್ದನ್ನು ಯಾರೂ ನೋಡಿಲ್ಲ. ಕೆಲವೊಂದು ವಿಚಾರಗಳು ಅತ್ಯಂತ ಸ್ಪಷ್ಟವಾಗಿವೆ.ಯಾವ ಕಾಂಗ್ರೆಸ್‌ ಅಭ್ಯರ್ಥಿಗೂ ಒಂದೇ ಒಂದು ಸ್ಥಾನವನ್ನು ಗೆಲ್ಲಿಸಿಕೊಡಲು ರಾಹುಲ್‌ ಗಾಂಧಿಯಿಂದ ಸಾಧ್ಯವಾಗಿಲ್ಲ, ಬದಲಾಗಿ ಪಕ್ಷದ ತಲೆಮಾರುಗಳ ನಾಯಕರ ಹೀನಾಯ ಸೋಲಿಗೆ ಕಾರಣರಾದರು.ಈ ಪೈಕಿ ಕುಟುಂಬದ ಭದ್ರಕೋಟೆಯಾದ ಗುಣಾದಲ್ಲೇ ಸೋತಿರುವ ಜ್ಯೋತಿರಾದಿತ್ಯ ಸಿಂಧಿಯಾ ಕೂಡಾ ಒಬ್ಬರು. ಬಂಗಾಳಕೊಲ್ಲಿಯಲ್ಲಿ ಗಂಗೋತ್ರಿ ಮತ್ತು ಸಾಗರ್‌ಮಾತಾ ನಡುವೆ ಕಾಂಗ್ರೆಸ್‌ಗೆ ಸಿಕ್ಕಿದ್ದು 10ಕ್ಕೂ ಕಡಿಮೆ ಸ್ಥಾನ. ಮಹಾರಾಷ್ಟ್ರ ಮತ್ತು ಒಡಿಶಾದ ನಡುವೆಯೂ ಕಾಂಗ್ರೆಸ್‌ ಗಳಿಕೆ 10ಕ್ಕೂ ಕಡಿಮೆ. ಇದರ ಅರ್ಥ ಏನೆಂದರೆ ಆರು ತಿಂಗಳ ಹಿಂದೆಯಷ್ಟೇ ಅಧಿಕಾರಕ್ಕೆ ಬಂದಿರುವ ಮೂರು ರಾಜ್ಯಗಳ ಕಾಂಗ್ರೆಸ್‌ ಸರಕಾರದ ವಿಶ್ವಾಸಾರ್ಹತೆಯನ್ನೇ ರಾಹುಲ್‌ ಗಾಂಧಿ ನಾಶ ಮಾಡಿದ್ದಾರೆ. ಇಷ್ಟು ಸಾಲದು ಎಂಬಂತೆ ರಾಹುಲ್‌ ಗಾಂಧಿಯ ಅನಾಹುತಕಾರಿ ನಾಯಕತ್ವ ಕರ್ನಾಟಕ ಸರಕಾರದ ಮೈತ್ರಿಯನ್ನು ಧ್ವಂಸಗೊಳಿಸಿದೆ. ಕಾಂಗ್ರೆಸ್‌ನಿಂದ ಗೆದ್ದು ಬಂದಿರುವ ಸಂಸದರಲ್ಲಿ ಹೆಚ್ಚಿನವರು ಕೇರಳ, ಪಂಜಾಬ್‌ ಮತ್ತು ತಮಿಳುನಾಡಿನವರು. ಪಂಜಾಬಿನಲ್ಲಿ ಗೆಲುವು ದಕ್ಕಿದ್ದು ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರಿಂದಾಗಿ.
ತಮಿಳುನಾಡಿನಲ್ಲಿ ಡಿಎಂಕೆಯ ಹೆಗಲೇರಿ ಕಾಂಗ್ರೆಸ್‌ ಗೆದ್ದಿದೆ. ಕೇರಳದಲ್ಲಿ ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಮಾರ್ಕಿಸ್ಟ್‌ ಸರಕಾರದ ವಿರುದ್ಧ ಜನರಿಗಿದ್ದ ಆಕ್ರೋಶದ ಲಾಭ ಕಾಂಗ್ರೆಸ್‌ಗಾಯಿತು. ಶಬರಿಮಲೆ ವಿರುದ್ಧ ಪ್ರತಿಭಟನೆ ಮಾಡಿದ್ದು ಬಿಜೆಪಿಯಾದರೂ ತಾನು ಬಿತ್ತಿದ ಬೀಜದ ಫ‌ಲವನ್ನು ಕೊಯ್ಯುವ ಭಾಗ್ಯ ಮಾತ್ರ ಅದಕ್ಕಿಲ್ಲದಾಯಿತು. ಕಾಂಗ್ರೆಸ್‌ನ ಸಲಹಾಕಾರರ ಒಲೆಯಲ್ಲಿ ಸೋಲಿಗೆ ನೆಪಗಳು ಸಿದ್ಧವಾಗುತ್ತಿವೆ. ಈ ಪೈಕಿ ಒಂದು ಧ್ರುವೀಕರಣ. ಸದ್ಯಕ್ಕೆ ಹೆಚ್ಚಿನ ಕ್ಷೇತ್ರಗಳ ನಿಖರವಾದ ಮಾಹಿತಿ ನನ್ನ ಬಳಿಯಿಲ್ಲ. ಸದ್ಯಕ್ಕೆ ಬಿಹಾರದ ಕಟಿಹಾರ್‌ ಮತ್ತು ಪಶ್ಚಿಮ ಬಂಗಾಳದ ಉತ್ತರ ಮಾಲ್ಡಾ, ದಕ್ಷಿಣ ಮಾಲ್ಡಾ, ಜಂಗೀಪುರ ಮತ್ತು ಬದ್ವಾನ್‌ ಕ್ಷೇತ್ರಗಳನ್ನು ತೆಗೆದುಕೊಳ್ಳುವ. ಈ ಎಲ್ಲ ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯವಿದೆ. ಶೇ. 75 ಮುಸ್ಲಿಂ ಮತದಾರರೇ ಇರುವ ಜಂಗೀಪುರದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿಯವರ ಪುತ್ರ ಅವಿಜಿತ್‌ ಮುಖರ್ಜಿಯೂ ಸೇರಿದಂತೆ ಎಲ್ಲ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸೋತಿದ್ದಾರೆ. ಜಂಗೀಪುರದಲ್ಲಿ ತೃಣಮೂಲ ಕಾಂಗ್ರೆಸ್‌ ಗೆದ್ದಿದ್ದರೂ ದ್ವಿತೀಯ ಸ್ಥಾನಿಯಾಗಿರುವುದು ಬಿಜೆಪಿಯ ಮಹಫ‌ುಜ ಖತೂನ್‌. ಖತೂನ್‌ಗೆ ಮುಸ್ಲಿಮರು ಓಟು ಹಾಕಿಲ್ಲ ಎಂದು ಗಂಭೀರವಾಗಿ ವಾದಿಸುವ ಯಾರಾದರೂ ಇದ್ದಾರೆಯೇ? ಬದ್ವಾನ್‌ನಲ್ಲಿ ಗೆದ್ದಿರುವುದು ಬಿಜೆಪಿಯ “ಅಪರಿಚಿತ’ ಅಭ್ಯರ್ಥಿ ಎಸ್‌.ಎಸ್‌.ಅಹ್ಲುವಾಲಿಯ. ಅವರನ್ನು ಡಾರ್ಜಿಲಿಂಗ್‌ನಿಂದ ಈ ಕ್ಷೇತ್ರಕ್ಕೆ ವರ್ಗಾಯಿಸಲಾಗಿತ್ತು. ಕಮ್ಯುನಿಷ್ಟರ ಅಭೇದ್ಯ ಕೋಟೆಯಾಗಿದ್ದ ಬದ್ವಾನ್‌ ಸ್ಟಾಲಿನ್‌ಗಾರ್ಡ್‌ ಎಂದು ಒಂದು ಕಾಲದಲ್ಲಿ ಅರಿಯಲ್ಪಡುತ್ತಿತ್ತು. ಅನಂತರ ತೃಣಮೂಲ ಕಾಂಗ್ರೆಸ್‌ ಈ ಸೀಟನ್ನು ವಶಪಡಿಸಿಕೊಂಡ ಬಳಿಕ ಅದು ಮಮತಾ ಬ್ಯಾನರ್ಜಿಯ ಭದ್ರ ಕೋಟೆಯಾಯಿತು. ಅಹ್ಲುವಾಲಿಯ ಇಲ್ಲಿಂದ ನಾಮಪತ್ರ ಸಲ್ಲಿಸಿದಾಗ ಎದುರಾಳಿಗಳು ಅವರನ್ನು ಬಹಳ ಹಗುರವಾಗಿ ಪರಿಗಣಿಸಿದ್ದರು. ಅನಂತರ ಸಂಭವಿಸಿದ್ದೆಲ್ಲ ಪವಾಡ.

ಮಾಲ್ಡಾದ ಎರಡು ಕ್ಷೇತ್ರಗಳು ಈ ಸಲ ಕಾಂಗ್ರೆಸ್‌ನ ಭದ್ರ ನೆಲೆಗಳಾಗಿದ್ದವು. ಇದಕ್ಕೆ ಕಾರಣ ಘನಿ ಖಾನ್‌ ಚೌಧರಿಯ ಪರಿವಾರಕ್ಕೆ ಇಲ್ಲಿರುವ ಹಿಡಿತ. ಎರಡೂ ಕ್ಷೇತ್ರಗಳಲ್ಲಿ ಗೆದ್ದದ್ದು ಮಾತ್ರ ಬಿಜೆಪಿ. ಕಟಿಹಾರ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದದ್ದು ತಾರಿಕ್‌ ಅನ್ವರ್‌. 2014ರಲ್ಲಿ ಎನ್‌ಸಿಪಿ ಟಿಕೇಟ್‌ನಲ್ಲಿ ಸ್ಪರ್ಧಿಸಿ ಮೋದಿ ಅಲೆಯ ವಿರುದ್ಧ ಈಜಿ ಗೆದ್ದಿದ್ದ ಅನ್ವರ್‌ ಕಳೆದ ವರ್ಷ ಇನ್ನಷ್ಟು ಅಭ್ಯುದಯ ಬಯಸಿ ಕಾಂಗ್ರೆಸ್‌ ಸೇರಿದರು. ಆದರೆ ಇದು ಅವರ ಕೆಟ್ಟ ನಿರ್ಧಾರವಾಯಿತು.ಈ ಸಲ ಅವರು ಸೋತು ಹೋಗಿದ್ದಾರೆ.

ಮೋದಿಯ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಮಾಡಿದ ಲಗಾಮಿಲ್ಲದ ಆರೊಪಗಳಿಗೆ ರಾಹುಲ್‌ ಗಾಂಧಿ ಭಾರೀ ಬೆಲೆಯನ್ನೇ ತೆತ್ತಿದ್ದಾರೆ. ಈ ಆರೋಪಗಳನ್ನು ಒಪ್ಪಿಕೊಳ್ಳಲು ಮತದಾರ ತಯಾರಿರಲಿಲ್ಲ. ವಿಪರ್ಯಾಸವೆಂದರೆ “ಫ್ಯಾಮಿಲಿ ಆಲ್ಬಂ’ನಲ್ಲಿ ಬೋಪೋರ್ ದಲ್ಲಾಳಿ ಕ್ವಟ್ರೋಚ್ಚಿಯಂಥವರನ್ನೇ ಹೊಂದಿರುವ ಪಕ್ಷದ ವಂಶಪಾರಂಪರ್ಯ ನಾಯಕ ಈ ಮಿಥ್ಯಾರೋಪಗಳನ್ನು ಮಾಡಿದ್ದು. ವೈಭವೀಕರಣ ಚುನಾವಣಾ ರಾಜಕೀಯದ ಒಂದು ಅಂಗ. ಎಲ್ಲರೂ ಬಲೂನ್‌ಗೆ ಎಷ್ಟು ಸಾಧ್ಯವೂ ಅಷ್ಟು ಗಾಳಿ ಊದುವವರೇ. ಆದರೆ ಸುಳ್ಳನ್ನೇ ಊದಿದರೆ ಕೊನೆಗೆ ಆ ಬಲೂನ್‌ ನಿಮ್ಮ ಬಾಯಲ್ಲೇ ಒಡೆಯುತ್ತದೆ. ರಫೇಲ್‌ ಇದೇ ರೀತಿ “ಗುರು ಗ್ರಹದ ಚಲನೆ’ಯ ರೀತಿ ತಿರುಗು ಬಾಣವಾಯಿತು.

ಚುನಾವಣೆಯಲ್ಲಿ ಆಕರ್ಷಣೆ ಮತ್ತು ವಿಕರ್ಷಣೆಯ ಸಿದ್ಧಾಂತ ಮುಖ್ಯವಾಗುತ್ತದೆ. ಆಡಳಿತ ವಿರೋಧಿ ಅಲೆ ಮತದಾರರನ್ನು ಸರಕಾರದಿಂದ ವಿಕರ್ಷಿತವಾಗುವಂತೆ ಮಾಡುತ್ತದೆ. ಈ ಸಂದರ್ಭದಲ್ಲಿ ಪರ್ಯಾಯ ಹೆಚ್ಚು ಆಕರ್ಷಣೀಯವಾಗಿದ್ದರೆ ಮತಗಳು ಸಾಮೂಹಿಕವಾಗಿ ಪಥ ಬದಲಾಯಿಸುತ್ತವೆ. 2014ರಲ್ಲಿ ಮೋದಿಗಾದದ್ದು ಈ ವಿಕರ್ಷಣೆಯ ಲಾಭ. ಈ ಆಧಾರದಲ್ಲಿ ಹೇಳುವುದಾದರೆ ಈ ಸಿದ್ಧಾಂತ 2019ರಲ್ಲಿ ಉಲ್ಟಾ ಆಯಿತು. ಅಧಿಕಾರದಲ್ಲಿದ್ದ ಮೋದಿಯೇ ಮತಗಳನ್ನು ಆಕರ್ಷಿಸಿದರು ಮತ್ತು ಮತದಾರರು ರಾಹುಲ್‌ ಗಾಂಧಿಯನ್ನು ದೂರ ತಳ್ಳಿದರು. ಕಾಂಗ್ರೆಸ್‌ ಸ್ಥಿತಿ ಗಾಳಿಯಲ್ಲಿ ಆವಿಯಾಗಿ ಹೋದ ಕರ್ಪೂರದಂತಾಯಿತು.

ಕಮ್ಯುನಿಷ್ಟರು ತಮ್ಮದೇ ಅಹಂಕಾರದ ಬಲಿಪಶುಗಳಾದರು. ನಾಯಕರು ಬಂಗಾಳದ ಕಾರ್ಮಿಕರು ಅಥವಾ ಕೇರಳದ ರೈತರ ಮಾತುಗಳನ್ನು ಆಲಿಸದೆ ದಿಲ್ಲಿಯ ದಂತದ ಗೋಪುರದಲ್ಲಿ ಕುಳಿತು ನಿರ್ಧಾರಗಳನ್ನು ತೆಗೆದುಕೊಂಡರೆ ಏನಾಗುತ್ತದೆ ಎನ್ನುವುದಕ್ಕೆ ಕಮ್ಯುನಿಷ್ಟರೇ ಅತ್ಯುತ್ತಮ ಉದಾಹರಣೆ. 2019ರ ಸಂಸತ್ತಿನಲ್ಲಿ ಸಿಪಿಐ(ಎಂ)ನ ಬರೀ ಒಬ್ಬ ಸಂಸದ ಇರುತ್ತಾನೆ ಎಂದು ಯಾರಾದರೂ ಊಹಿಸಲು ಸಾಧ್ಯವಿತ್ತೇ?

ಮೋದಿಯ ಗೆಲುವು ಹಲವು ರೀತಿಯಲ್ಲಿ ಗೋಚರವಾಗುತ್ತಿತ್ತು. ನಾನು ಕೆಲವು ವಿಚಾರಗಳನ್ನಷ್ಟೇ ಹೇಳುತ್ತೇನೆ. ಕಾಂಗ್ರೆಸ್‌ ಅಧಿಕಾರದಲ್ಲಿರುವ ಬೆಂಗಳೂರು ನಗರದಲ್ಲಿ ರಾಹುಲ್‌ ಗಾಂಧಿಯ ರೋಡ್‌ ಶೋನಲ್ಲಿ “ಮೋದಿ ಮೋದಿ ಮೋದಿ’ ಎಂಬ ಘೋಶ ಕೇಳಿ ಬಂದಿತ್ತು. ಆದರೆ ಮೋದಿಯ ಯಾವುದೇ ರ್ಯಾಲಿಗೆ “ರಾಹುಲ್‌’ ಎಂದು ಜಯಕಾರ ಕೂಗಿದ ಕಾರಣ ಅಡ್ಡಿಯಾದ ಒಂದೇ ಒಂದು ಉದಾಹರಣೆಯಿಲ್ಲ. ರಾಹುಲ್‌ ಗಾಂಧಿ ನಕರಾತ್ಮಕ ಪ್ರಭಾವ ಬೀರುತ್ತಿದ್ದಾರೆ ಎಂದು ಸ್ಪಷ್ಟವಾಗುತ್ತಿದ್ದಂತೆಯೇ ಕೆಲವು “ಹತಾಶ ವ್ಯೂಹ ರಚನೆಕಾರರು ಪ್ರಿಯಾಂಕ ಗಾಂಧಿಯನ್ನು ಪ್ರಚಾರಕ್ಕೆ ಎಳೆದು ತಂದರು.ಮೋದಿಗೆ ಪ್ರಿಯಾಂಕ ಪರ್ಯಾಯವಾಗಲಿಲ್ಲ, ಬದಲಿಗೆ ಅಳಿವಿನಂಚಿನಲ್ಲಿರುವ ಕೆಲವು ಕಾಂಗ್ರೆಸ್‌ ನಿಷ್ಠರ ಪಾಲಿಗೆ ರಾಹುಲ್‌ಗೆ ಪರ್ಯಾಯವಾದ ನಾಯಕಿಯಾದರಷೆ.

ಎಪ್ರಿಲ್‌ನಲ್ಲಿ ಹಿಂದುಸ್ಥಾನ್‌ ಟೈಮ್ಸ್‌ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಚಿತ್ರವೇ ಮಹಾರಾಷ್ಟ್ರದ “ಮೂಡ್‌’ ಏನಿದೆ ಎನ್ನುವುದನ್ನು ತಿಳಿಸಿತ್ತು. ವನ್ಯಮೃಗಧಾಮ, ಹಿಲ್‌ಸ್ಟೇಷನ್‌, ನರ್ಮದಾ ನದಿ ಇತ್ಯಾದಿ ಪ್ರಕೃತಿ ಸಂಪತ್ತನ್ನು ಹೊಂದಿರುವ “ಹಿಂದುಳಿದ’ ನಂದೂರ್‌ಬಾರ್‌ ಜಿಲ್ಲೆಯಲ್ಲಿ ಎ.22ರಂದು ಪ್ರತೀಕ್‌ ಚೋರ್ಗೆ ಪ್ರೇಕ್ಷಕರ ಸಂದಣಿಯಲ್ಲಿದ್ದ ಎಂಟು ವರ್ಷದ ಪ್ರಿಯಾಂಶು ಮಚ್ಚಾಲೆ ಎಂಬ ಬಾಲಕನ ಫೊಟೋ ಸೆರೆ ಹಿಡಿದರು. ಬಿಳಿ ಗಡ್ಡ, ಸ್ಥಳೀಯ ಪಗಡಿ ಧರಿಸಿ ಮೋದಿಯ ವೇಷ ಹಾಕಿದ್ದ ಈ ಬಾಲಕ ಬಲಗೈಯನ್ನು ಜೈಕಾರ ಹಾಕುವ ಭಂಗಿಯಲ್ಲಿ ಎತ್ತಿ ಹಿಡಿದಿದ್ದ. ಅವನ ಸುತ್ತ ಹಲವು ಹಳ್ಳಿಯ ಹೆಂಗಸರಿದ್ದರು. ಅವರ ಮುಖದಲ್ಲಿದ್ದ ನಸುನಗುವಿನಲ್ಲಿ ಒಂದು ನಿರ್ಧಾರವಿದ್ದಂತೆ ಕಾಣಿಸುತ್ತಿತ್ತು. ಅವರು “ವಿ’ ಸಂಕೇತ ತೋರಿಸುತ್ತಿದ್ದರು. ಓರ್ವ ತಾಯಿ ತನ್ನ ಸಂಗಡಿಗರ ಜತೆಗೆ ಮೋದಿಗೆ ಬೆಂಬಲ ಸೂಚಿಸಿದ ಈ ದೃಶ್ಯ ಬಹಳ ಹೃದಯಂಗಮವಾಗಿತ್ತು. ಪತ್ರಿಕೆ ಈ ಚಿತ್ರ ನೀಡಿದ ಸಂದೇಶವನ್ನು ಸರಿಯಾಗಿಯೇ ಗ್ರಹಿಸಿತು. ರಾಹುಲ್‌ ಗಾಂಧಿಯಂತೆ ವೇಷ ಹಾಕಿದ ಯಾರೊಬ್ಬರನ್ನೂ ನಾನು ಕಂಡಿಲ್ಲ.

ಕಾಂಗ್ರೆಸ್‌ ನಾಯಕ ಸುಶೀಲ್‌ಕುಮಾರ್‌ ಶಿಂಧೆ ತನ್ನ ಅವ್ಯವಸ್ಥಿತ ಪ್ರಚಾರಕ್ಕೆ ಒಂದಷ್ಟು ಶಕ್ತಿ ತುಂಬಲು ನಿರ್ಧರಿಸಿದಾಗ ರಾಹುಲ್‌ ಗಾಂಧಿ ಅಥವಾ ಪ್ರಿಯಾಂಕ ಗಾಂಧಿಯನ್ನು ಸಂಪರ್ಕಿಸಲಿಲ್ಲ. ಅವರು ಸಂಪರ್ಕಿಸಿದ್ದು ರಾಜ್‌ ಠಾಕ್ರೆಯನ್ನು. ತಾರೆಯಂತೆ ಮಿಂಚಿದ ಕುಟುಂಬ ಈಗ ಮಣ್ಣುಮುಕ್ಕಿದೆ ಎನ್ನುವುದನ್ನು ಕೆಲವು ಕಾಂಗ್ರೆಸ್‌ ನಾಯಕರು ಅರ್ಥ ಮಾಡಿಕೊಂಡಿದ್ದರು.

ವಂಶ ಪಾರಂಪರ್ಯ ರಾಜಕಾರಣ ಹಿನ್ನೆಲೆಗೆ ಸರಿದಿರುವುದು ಈ ಚುನಾವಣೆಯಿಂದಾಗಿರುವ ಇನ್ನೊಂದು ಲಾಭ. ಯಾರಧ್ದೋ ರಕ್ತಹೀರಿ ಬೆಳೆಯುವ ಜಿಗಣೆಯಂಥ ವಂಶ ರಾಜಕೀಯವನ್ನು ಸೋಲಿಸಿದ ಕೀರ್ತಿ ಮೋದಿಗೆ ಸಲ್ಲಬೇಕು. ಬಿಜೆಪಿಯಲ್ಲಿ ಅವರು ಉಳಿದವರಿಗೆ ಉಪದೇಶಿಸಿದ್ದನು ಕಾರ್ಯರೂಪಕ್ಕೆ ತಂದು ತೋರಿಸಿದರು. ಮೋದಿಯ ರಾಜಕಾರಣದಲ್ಲಿ ವಂಶದ ಬಲುವಳಿಗಳಿಗೆ ಜಾಗವಿಲ್ಲ. ಈ ಸಂದೇಶ ಮತದಾರನಿಗೆ ತಲುಪಿತ್ತು. ಮೇ 23ರ ಮಧ್ಯಾಹ್ನಕ್ಕಾಗುವಾಗ ಅದರ ಪರಿಣಾಮವೂ ಗೋಚರವಾಯಿತು. ಅಶೋಕ್‌ ಗೆಹಲೋಟ್ ಪುತ್ರ ಸೋತಾಯಿತು, ರಾಜೀವ್‌ ಗಾಂಧಿಯ ಪುತ್ರನಿಗೂ ಸೋಲಾಯಿತು, ಮಾಧವರಾವ್‌ ಸಿಂಧಿಯಾ ಪುತ್ರ ಸೋತರು, ತರುಣ್‌ ಗೊಗೋಯ್‌ ಪುತ್ರನೂ ಸೋತರು.ಅಜಿತ್‌ ಪವಾರ್‌, ಮುರಳಿ ದೇವ್ರಾ ಪುತ್ರರು ಸೋತು ಹೋದರು. ಎಚ್‌.ಡಿ. ಕುಮಾರ ಸ್ವಾಮಿಯ ಪುತ್ರ ಮತ್ತು ತಂದೆ ಇಬ್ಬರೂ ಸೋತಿದ್ದಾರೆ.

ಮೋದಿ ನಾಯಕತ್ವದಲ್ಲಿ ಬಿಜೆಪಿಯ ಮತ ಗಳಿಕೆ ಶೇ.10 ಹೆಚ್ಚಾಗಿರುವುದಕ್ಕೆ ದಿಲ್ಲಿಯ ಮಹಾನ್‌ ಬುದ್ಧಿಜೀವಿಗಳು ಆಶ್ಚರ್ಯ ಚಕಿತರಾಗಿರುವುದೇಕೆ?2014ರಲ್ಲಿ ಮೋದಿಯ ಮೇಲೆ ಅಗಾಧವಾದ ನಿರೀಕ್ಷೆಯಿತ್ತು, 2019ರಲ್ಲಿ ಅಗಾಧವಾದ ನಂಬಿಕೆಯಿದೆ. ಬಡವರು ಮೂರ್ಖರಲ್ಲ. ಗುಡಿಸಲಿನಲ್ಲಿ ವಾಸವಾಗಿರುವ ತಮ್ಮನ್ನು ಯಾರೋ ಮಂತ್ರದಂಡ ತಂದು ಬಂಗಲೆಗೆ ಕರೆದೊಯ್ಯುತ್ತಾನೆ ಎಂಬ ಭ್ರಮೆಗಳು ಅವರಲ್ಲಿಲ್ಲ. ಎರಡು ಚಪಾತಿ ತಿನ್ನುವ ಅವರಿಗೆ ನಾಲ್ಕು ಚಪಾತಿ ಬೇಕೆಂದು ಕೇಳುವ ಹಕ್ಕು ಇದೆ ಹಾಗೂ ಅವರು ಅದಕ್ಕಿಂತಲೂ ಹೆಚ್ಚು ಪಡಕೊಂಡಿದ್ದಾರೆ.

ಮೌನವಾಗಿದ್ದರೆ ಕಾಂಗ್ರೆಸ್‌ ಅಧ್ಯಕ್ಷನಿಗೆ ಹೆಚ್ಚು ಲಾಭವಾಗುವ ಸಾಧ್ಯತೆಯಿತ್ತು. ಹಿಂದಿಯಲ್ಲಿ ಭಾಷಣ ಮಾಡುತ್ತಾ ಇಂಗ್ಲೀಷ್‌ನಲ್ಲಿ ನಾನು ಮೋದಿಯನ್ನು ಲವ್‌ ಮಾಡುತ್ತೇನೆ ಎನ್ನುವ ಅವರ ಮಾತಿನ ತಲೆಬುಡ ಅಮಾಯಕ ಮತದಾರನಿಗೆ ಅರ್ಥವಾಗಲಿಲ್ಲ. ಲವ್‌ಗೆ ಹಿಂದಿಯಲ್ಲಿ ಶಬ್ದವಿದೆ ಎಂಬುದು ಅವರಿಗೆ ಗೊತ್ತಿದೆಯೋ ಇಲ್ಲವೋ ಜನರಿಗಂತೂ ಗೊತ್ತಿದೆ. ಪ್ರೀತಿಸುತ್ತೇನೆ ಎನ್ನುವ ವ್ಯಕ್ತಿಯನ್ನೇ ಇಷ್ಟು ಕಟುವಾಗಿ ನಿಂದಿಸುವುದು ಏಕೆ ಎಂಬ ಗೊಂದಲ ಜನರಿಗೆ ಉಂಟಾಗಿದ್ದರೆ ಆಶ್ಚರ್ಯವಿಲ್ಲ.

ಚುನಾವಣೆಗೂ ಮೊದಲೇ ಕಾಂಗ್ರೆಸ್‌ ಅಧಃಪತನ ಶುರುವಾಗಿತ್ತು. ರಾಹುಲ್‌ ಗಾಂಧಿ ಅದನ್ನು ಇನ್ನಷ್ಟು ತೀವ್ರಗೊಳಿಸಿದರು. ಮಮತಾ ಬ್ಯಾನರ್ಜಿ ಎಲ್ಲ ಪ್ರಚಾರಗಳಿಂದ ಕಾಂಗ್ರೆಸ್‌ನ್ನು ಕೈಬಿಟ್ಟದ್ದು ಏಕೆಂದು ನಾವು ಕೇಳ ಬೇಕಾಗಿತ್ತು. ಒಂದು ಕಾಲದಲ್ಲಿ ಕಾಂಗ್ರೆಸ್‌ಗೆ ಮೌಲ್ಯವಿತ್ತು. ಹೀಗಾಗಿ ತನ್ನ ಪಕ್ಷದ ಜತೆಗೆ ಕಾಂಗ್ರೆಸ್‌ ಅನ್ನು ಸೇರಿಸಿಕೊಂಡರು. ಈಗ ಕಾಂಗ್ರೆಸ್‌ ಇದ್ದರೆ ಲಾಭಕ್ಕಿಂತ ನಷ್ಟವೇ ಹೆಚ್ಚು.

ಮೈತ್ರಿ ರಾಜಕಾರಣದಲ್ಲಿ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಮಾಯಾವತಿ ಮತ್ತು ಅಖೀಲೇಶ್‌ ಯಾದವ್‌ ಕೂಡಾ ಕಾಂಗ್ರೆಸ್‌ನ್ನು ತಿರಸ್ಕಸಿದರು. ಅವರು ನಿರ್ಧಾರ ಸರಿಯಾಗಿತ್ತು ಎನ್ನುವುದು ಫ‌ಲಿತಾಂಶದಿಂದ ಸ್ಪಷ್ಟವಾಗುತ್ತದೆ. ಬಿಹಾರದಲ್ಲಿ ಲಾಲೂ ಪ್ರಸಾದ್‌ ಯಾದವ್‌ ಔದಾರ್ಯ ತೋರಿಸಿದರೂ ಅದರಿಂದ ಅವರಿಗೆ ಯಾವ ಲಾಭವೂ ಆಗಲಿಲ್ಲ. ಅಮೇಠಿಯಿಂದ ವಯನಾಡಿಗೆ ರಾಹುಲ್‌ ಪಲಾಯನವೇ ಎಲ್ಲವನ್ನೂ ಹೇಳುತ್ತದೆ.
(ಮುಂದುವರಿಯುವುದು)

ಎಂ.ಜೆ. ಅಕ್ಬರ್

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ