ಶೋ ಮತ್ತು ರಿಯಾಲಿಟಿ

Team Udayavani, Aug 3, 2019, 5:56 AM IST

ಅಚ್ಚರಿಯ ಸಂಗತಿಯೆಂದರೆ ಈ ಸ್ಪರ್ಧೆ ಸುಮಾರು 250 ಕಂತುಗಳನ್ನು ಸಮೀಪಿಸುತ್ತಲೆ ಫ್ಲವರ್‌ ಟಿವಿಯ ಅಧಿಕಾರಿಗಳು ಸೂಕ್ತ ಪ್ರಾಯೋಜಕರನ್ನು ಕಂಡುಕೊಂಡು ಸ್ಪಾರ್ಧಾನಿರತ 22 ಮಂದಿಗೂ ಸ್ನಾತಕೋತ್ತರ ಪದವಿಯ ವರೆಗೂ ವಿದ್ಯಾಭ್ಯಾಸ ಮುಂದುವರಿಸಲು ತಲಾ 22 ಲಕ್ಷ ರೂಪಾಯಿಗಳ ವಿದ್ಯಾರ್ಥಿವೇತನ ಯೋಜನೆಯನ್ನು ಜಾರಿಮಾಡಿರುವುದು.

ರಿಯಾಲಿಟಿ ಶೋಗಳಿಂದ ಮಕ್ಕಳನ್ನು ಶೋಭಾವಲಯಕ್ಕೆ ತಂದು ಆ ಮೂಲಕ ತಮ್ಮ ಜನಪ್ರಿಯತೆಯನ್ನು ಹಬ್ಬಿಸುವುದು ಟಿವಿ ಎಂಬ ಮಾಧ್ಯಮ ಹುಟ್ಟಿದಂದಿನಿಂದ ತೋರಿಬರುವ ಗತಿವಿಧಿ. ಹಾಡು, ನೃತ್ಯಾಭಿನಯ, ಶೈಕ್ಷಣಿಕತೆ ಇತ್ಯಾದಿ ರಂಗಗಳ ಬಾಲ ಪ್ರತಿಭೆಗಳನ್ನು ಸ್ಪರ್ಧೆಗೆ ಹಚ್ಚಿ ಸಭಾಂಗಣದಲ್ಲೂ ಎಲ್ಲೆಡೆಯ ಟಿವಿಗಳ ಮುಂದೂ ಪ್ರೇಕ್ಷಕರನ್ನು ಆಕರ್ಷಿಸುವ ರಿಯಾಲಿಟಿ ಶೋಗಳು ಇತರ ಪ್ರಯೋಜನಗಳನ್ನು ಎಷ್ಟು ಕೊಟ್ಟರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಬಲುದೊಡ್ಡ ತೊಡಕಾಗುತ್ತಿರುವುದು ಹೆತ್ತವರ ಆತಂಕವೂ ಹೌದು. ಆದರೆ ಕೇರಳದ ‘ಫ್ಲವರ್‌ ಟಿವಿ’ ಈ ನಿಟ್ಟಿನಲ್ಲಿ ಹೇಳಿಕೊಳ್ಳುವಂತೆ ವಿಶ್ವದಲ್ಲೇ ಹೊಸದೊಂದು ಉಪಕ್ರಮದಿಂದ ವಿಶ್ವದ ಗಮನ ಸೆಳೆದಿದೆ.

ಆರರಿಂದ ಹದಿನಾಲ್ಕು ವರ್ಷಗಳ ನಡುವಣ ಬಾಲಪ್ರತಿಭೆಗಳಲ್ಲಿ 22 ಮಂದಿಯನ್ನು ಆಯ್ದುಕೊಂಡು ಸಿನೆಮಾ ಸಂಗೀತದಲ್ಲಿ ಸ್ಪರ್ಧೆ ಏರ್ಪಡಿಸಿದಾಗ ಮಕ್ಕಳಿಗೂ, ತಮಗೂ ವಿಶ್ವದ ಆದ್ಯಂತ ಪ್ರಚಾರ ಪ್ರಸಿದ್ಧಿ ದೊರೆಯುತ್ತಿರುವುದಾಗಿ ಹೆತ್ತವರಿಗೆ ರೋಮಾಂಚವಿರುವುದಾದರೂ ಅವರು ಮಕ್ಕಳ ಶೈಕ್ಷಣಿಕ ವರ್ಷ ನಷ್ಟವಾಗುವುದಕ್ಕೆ ಒಡಲುರಿ ಕಟ್ಟಿಕೊಂಡೆ ಇರುತ್ತಿದ್ದರು. ಅಲ್ಲದೆ ಇಬ್ಬರಿಗೆ ಮಾತ್ರ ದಕ್ಕುವ ಬಹುಮಾನ (ಪ್ರಥಮ 50 ಲಕ್ಷ ರೂ., ಬೆಲೆಯ ಫ್ಲ್ಯಾಟ್ ಮತ್ತು ದ್ವಿತೀಯ: 15ಲಕ್ಷ ರೂ. ನಗದು). ಇದಕ್ಕಾಗಿ ಇಪ್ಪತ್ತು ಮಕ್ಕಳ ದುಡಿಮೆ ಮತ್ತು ಶೈಕ್ಷಣಿಕ ನಷ್ಟದ ರಿಸ್ಕಿನ ತೂಗುಗತ್ತಿಯ ಕೆಳಗೇ ಅವರಿರುವುದು.

ಸಾಮಾನ್ಯವಾಗಿ ಒಂದು ವರ್ಷದವರೆಗೆ ಸಾಗುವ ರಿಯಾಲಿಟಿ ಶೋದಲ್ಲಿ ಮೂರು ತಿಂಗಳಾಗುವಾಗ ಅರ್ಧಾಂಶ ಸ್ಪರ್ಧಿಗಳು ಕಣ್ಣೀರಿನಿಂದ ವೇದಿಕೆ ತೋಯಿಸಿ ಹೊರಬೀಳುವುದು, ಉಳಿದವರಲ್ಲಿ ಕೆಲವರು ಇನ್ನೊಂದು ಎಲಿಮಿನೇಷನ್‌ ಸುತ್ತಿನಲ್ಲಿ ಬಿಕ್ಕಳಿಸಿ ಹೊರಬೀಳುವುದು, ಐದು ಮಂದಿಯಷ್ಟು ಫೈನಲಿನಲ್ಲಿ ಹೋರಾಡಿ ಅಂತಿಮವಾಗಿ ಇಬ್ಬರಿಗೆ ಬಹುಮಾನವನ್ನು ಗೆಲ್ಲಲು ಬಿಡುವುದು ಪದ್ಧತಿ.

ಈಗಾಗಲೇ ಸಿಲೆಕ್ಷನ್‌ ರೌಂಡ್‌ ಸಹಿತ 275 ಕಂತುಗಳಲ್ಲಿ ತಲಾ ಮೂವರು ಸ್ಪರ್ಧಿಗಳಿಂದ ಗಾಯನ ಆಲಿಸಿದ ಫ್ಲವರ್‌ ಟಿವಿಯ ಟಾಪ್‌ ಸಿಂಗರ್‌ ಶೋ ನಡೆಸುತ್ತಿರುವ ತೀರ್ಪುಗಾರರಾಗಿರುವ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಎಂ. ಜಿ. ಶ್ರೀಕುಮಾರ್‌, ಎಂ. ಜಯಚಂದ್ರನ್‌, ಗಾಯಕಿಯರಾದ ಸಿತಾರ, ಅನುರಾಧಾ, ವಿಧು ಪ್ರತಾಪ್‌ ಅವರ ನಿರ್ವಹಣ ರೀತಿ ಮಾತ್ರ ಎಲ್ಲೂ ರಿಯಾಲಿಟಿ ಶೋಗಳಲ್ಲಿ ಇದುವರೆಗೆ ಕಂಡಂಥದಲ್ಲ. ಸ್ಪರ್ಧಾಳುಗಳಾಗಿ ಬೆಂಗಳೂರಿನ ಮೂವರು ಮಕ್ಕಳು, ಹೈದರಾಬಾದಿನ ಒಬ್ಬಳ ಸಹಿತ 22 ಮಂದಿಯೂ ಎಲಿಮಿನೇಶನ್‌ ಅರಿಯದೆ ಸ್ಪರ್ಧೆಯಲ್ಲಿ ಸುಮಾರು ಹತ್ತು ತಿಂಗಳನ್ನು ಕಳೆದಿದ್ದಾರೆ. ಮೊದಲಿಗೆ ಅವರಲ್ಲಿದ್ದ ಹಾಡುಗಾರಿಕೆಯ ಮಟ್ಟದ ಏರುತಗ್ಗು ಇಂದು ಅಚ್ಚರಿಯ ಬಗೆಯಾಗಿ ತಗ್ಗಿ, ಯಾರೂ ಪ್ರಶಸ್ತಿಯನ್ನು ಎತ್ತಬಲ್ಲರು ಎಂಬಲ್ಲಿ ವರೆಗೆ ಬೆಳೆದುಬಿಟ್ಟಿದ್ದಾರೆ.

ಇದರಲ್ಲಿ ತೀರ್ಪುಗಾರರು ಮಕ್ಕಳ ಒಂದಿಗೆ ಮಕ್ಕಳಾಗಿ ಬೆರೆಯುವುದಲ್ಲದೆ, ತರಬೇತುದಾರರೂ, ನಿರ್ದೇಶಕರೂ, ಪೋಷಕರೂ ಆಗಿ ಸಂಗೀತ ಮಾತ್ರವಲ್ಲ, ಸಾಂಸ್ಕೃತಿಕ ಅರಿವನ್ನೂ ನೀಡುತ್ತಿ ರುವುದು ಅಚ್ಚರಿಯ ಸಂಗತಿ. ಧಾರಾಳ ರಿಯಾಯಿತಿಯಿಂದಲೆ ಇವರ ಮೌಲ್ಯಮಾಪನ. ಸಮಕಾಲೀನ ಶಿಕ್ಷಣ ಪದ್ಧತಿಗೆ ಇದು ಪರ್ಯಾಯ ರೀತಿ ಕೂಡ.

ಅಚ್ಚರಿಯ ಇನ್ನೊಂದು ಮಾತು ಸ್ಪರ್ಧೆ ಸುಮಾರು 250 ಕಂತುಗಳನ್ನು ಸಮೀಪಿಸುತ್ತಲೆ ಫ್ಲವರ್‌ ಟಿವಿಯ ಅಧಿಕಾರಿಗಳು ಸೂಕ್ತ ಪ್ರಾಯೋಜಕರನ್ನು ಕಂಡುಕೊಂಡು ಸ್ಪಾರ್ಧಾನಿರತ 22 ಮಂದಿಗೂ ಸ್ನಾತಕೋತ್ತರ ಪದವಿವರೆಗೆ ವಿದ್ಯಾಭ್ಯಾಸ ಮುಂದುವರಿಸಲು ತಲಾ 22 ಲಕ್ಷ ರೂ.ಗಳ ವಿದ್ಯಾರ್ಥಿವೇತನ ಯೋಜನೆಯನ್ನು ಜಾರಿಮಾಡಿರುವುದು. ಇನ್ನು ಯಾರು ಪ್ರಶಸ್ತಿ ಎತ್ತಿದರೂ ಸ್ಪರ್ಧಾನಿರತ ಮಕ್ಕಳಿಗೆ ಮತ್ತು ಅವರ ಹೆತ್ತವರಿಗೆ ಏನೊಂದು ಆತಂಕವೂ ಇಲ್ಲದ ಸಂತಸವಷ್ಟೆ ಇದ್ದೀತು. ಇದು ವಿಶ್ವದಲ್ಲೆ ಇಂಥ ಪ್ರಥಮ ಉಪಕ್ರಮವೆಂದು ಹೇಳಲಾಗುತ್ತಿದೆ. ಸ್ಪರ್ಧಾನಿರತ ಮಕ್ಕಳಲ್ಲಿ ಹಲವರಿಗೆ ಸಂಗೀತದಲ್ಲಿ ಪ್ರಾವೀಣ್ಯದ ಜತೆಗೆ ಡಾಕ್ಟರ್‌, ಐಎಎಸ್‌ ಇಂಥ ಸ್ಥಾನಗಳ ಹಾರೈಕೆಯೂ ಇದೆ.

ಈ ರಿಯಾಲಿಟಿ ಶೋನಿಂದ ಇನ್ನೂ ಅನೇಕ ಅಂಶಗಳು ಗಮನಕ್ಕೆ ಬಂದಿವೆ. ಇನ್ನೂ ಒಂದನೇ ತರಗತಿಗೆ ಶಾಲೆ ಸೇರಿರುವ, ಸಹಜವಾಗಿಯೆ ಮಾತೃಭಾಷೆಯಲ್ಲಿ ಓದು-ಬರಹ ಅರಿಯದ ಮಕ್ಕಳು ಸಿನೆಮಾ ಗಾಯನದ ಅತ್ಯಂತ ಸೂಕ್ಷ್ಮ ಪಲುಕುಗಳನ್ನು, ಸ್ವರಸಂಗತಿಗಳನ್ನು ಸಾಹಿತ್ಯದ ಭಾವನೆಯ ಅಭಿವ್ಯಕ್ತಿ ಸಹಿತ ಹಾಡಿ ಒಪ್ಪಿಸುತ್ತಿರುವುದು ಹೇಗೆ? ಸಂಗೀತ ಹಾಡಲು ಆರು ವರ್ಷಗಳ ಕಾಲವಾದರೂ ಸತತ ಅಭ್ಯಾಸವಾಗಬೇಕು ಎನ್ನುತ್ತಾರೆ. ಈ ಮಗು ಸಂಗೀತ ಕಲಿತದ್ದು ಯಾವಾಗ ಎಂದು ಚಿತ್ರನಟ, ಸಂಸದ ಇನ್ನಸೆಂಟ್ ಕೇಳಿರುವುದು ಸ್ಪರ್ಧೆಯಲ್ಲಿರುವ ಹೆಚ್ಚಿನ ಮಕ್ಕಳಿಗು ಅನ್ವಯವಾಗುವಂಥದೆ.

ತೀರ್ಪುಗಾರರೆನ್ನುವಂತೆ ಈ ಕಂದಮ್ಮಗಳು ಹಾಡುವುದು ನೂರಕ್ಕೆ ನೂರು ಸಮರ್ಪಕವೆ ಆಗಿದೆ. ಇದರಲ್ಲಿ ಇನ್ನೊಂದು ಒಳನೋಟ ಲಭ್ಯ. ಕಳೆದ ಕಾಲದಲ್ಲಿ ಕೃಷಿ ಕೂಲಿಕಾರರು ಸ್ವರಾಭ್ಯಾಸ ಇಲ್ಲದೆಯೂ ಯಕ್ಷಗಾನದ ಭಾಗವತರಾಗಿ ಹೇಗೆ ಪ್ರಸಂಗದ ನಮೂದಿತ ರಾಗ-ತಾಳಗಳಲ್ಲಿ ತಪ್ಪಿಲ್ಲದೆ ಹಾಡಬಲ್ಲವರಾಗಿದ್ದರು ಎಂಬುದಕ್ಕೂ ಇಲ್ಲಿ ಉತ್ತರವಿದೆ. ಅಂದರೆ ಪ್ರತಿಭೆಗಿಂತ ದೊಡ್ಡದಿಲ್ಲ. ಅದಿರುವವರನ್ನು ತಡೆಯದೆ ಆದರಿಸಿದರೆ ಮಾತ್ರ ಇಂಥ ಸೂಕ್ಷ್ಮ ಕ್ಷೇತ್ರಗಳ ವಿಕಸನವನ್ನು ಅಬಾಧಿತವಾಗಿ ಒಯ್ಯಬರುತ್ತದೆ. ಬಲಿಯದ್ದನ್ನು ಗುದ್ದಿ ಹಣ್ಣುಮಾಡುವುದರಿಂದ ನಿಜಸ್ವಾದ ಸಿಗದಷ್ಟೆ?

• ರಾಘವ ನಂಬಿಯಾರ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ