ಶಿಕ್ಷಕರ ವರ್ಗಾವಣೆ ನೀತಿ, ಏಕೆ ಇಬ್ಬಗೆ?

Team Udayavani, Jul 20, 2019, 5:00 AM IST

ಜೀವನದಲ್ಲಿ ಒಂದು ಸರ್ಕಾರಿ ನೌಕರಿ ಗಳಿಸಿಕೊಂಡು, ಜೀವನ ರಕ್ಷಣೆ ಒದಗಿಸಿಕೊಂಡು, ಸಮಾಜದಲ್ಲಿ ಒಂದು ಗೌರವ ಪಡೆಯಬೇಕೆಂಬ ಛಲದಿಂದ ಕಷ್ಟ ಪಟ್ಟು ಪ್ರಯತ್ನಿಸುವವರು ಹಲವರು. ಸಂಪೂರ್ಣ ಸ್ಪರ್ಧಾತ್ಮಕವಾಗಿರುವ ಇಂದಿನ ಜಗತ್ತಿನಲ್ಲಿ ಹಗಲು-ರಾತ್ರಿಗಳೆನ್ನದೆ, ಊಟ-ನಿದ್ರೆಗಳನ್ನು ತ್ಯಜಿಸಿ, ತಪಸ್ಸಿನಂತೆ ಚೆನ್ನಾಗಿ ಓದಿ, ತಮ್ಮ ಪ್ರತಿಭೆಯನ್ನು ಒರೆ ಹಚ್ಚಿ, ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಅದೆಷ್ಟೋ ಜನ ಹಂಬಲಿಸುತ್ತಾರೆ. ಅಂಥವರಲ್ಲಿ ಕೊನೆಗೂ ಒಂದು ಸರ್ಕಾರಿ ನೌಕರಿ ಸಿಕ್ಕರೆ ಗೆದ್ದೇಬಿಟ್ಟೆವು ಎಂದು ಕುಣಿದು ಕುಪ್ಪಳಿಸುವವರಿಗೇನೂ ಕಡಿಮೆಯಿಲ್ಲ. ನೌಕರಿಗಳಲ್ಲೇ ಶಿಕ್ಷಕರ ನೌಕರಿ ಅತೀ ಗೌರವಯುತವಾದದ್ದು ಮತ್ತು ಶ್ರೇಷ್ಠವಾದದ್ದು ಎಂದು ಚಿಕ್ಕವನಾಗಿದ್ದಾಗಿನಿಂದಲೂ ಅನೇಕರ ಬಾಯಿಂದ ಕೇಳಿ, ಪ್ರಭಾವಿತನಾಗಿದ್ದ ನಾನೂ ಕೂಡಾ ಶಿಕ್ಷಕ ನೌಕರಿ ಪಡೆಯಲೇಬೇಕೆಂದು ಕನಸಿ, ಹಂಬಲಿಸಿ, ಇದ್ದಬದ್ದ ಪ್ರಯತ್ನವನ್ನೆಲ್ಲಾ ಹಾಕಿ ಕೊನೆಗೂ ಗಿಟ್ಟಿಸಿಕೊಂಡು, ಆಕಾಶಕ್ಕೆ ಮೂರೇ ಗೇಣು ಎಂಬಂತೆ ಕುಣಿದು ಕುಪ್ಪಳಿಸಿದೆ.

ಆದರೆ ಹುಟ್ಟಿ-ಬೆಳೆದ ಸ್ವಂತ ಊರಿನಿಂದ ಹೆಚ್ಚಾಕಮ್ಮಿ ನಾನೂರೈವತ್ತು ಕಿಲೋಮೀಟರ್‌ ದೂರದ ಸ್ಥಳಕ್ಕೆ ನೇಮಕವಾಗಿ, ಒಂಬತ್ತು ವರ್ಷಗಳಾದರೂ ಸ್ವಂತ ಊರಿಗಿರಲಿ, ಸ್ವಂತ ಜಿಲ್ಲೆಗೂ ವರ್ಗಾವಣೆ ಸಿಗದೆ, ಈಗಿರುವ ವರ್ಗಾವಣಾ ನಿಯಮವೇ ಮುಂದುವರಿದರೆ ಇನ್ನೂ ಹತ್ತರಿಂದ ಹದಿನೈದು ವರ್ಷ ವರ್ಗಾವಣೆಯ ಬಗ್ಗೆ ಕನಸೂ ಕಾಣುವಂತಿಲ್ಲ ಎಂದು ಗೊತ್ತಾದ ಮೇಲೆ ನಿಜಕ್ಕೂ ಹೌಹಾರಿದ್ದೇನೆ. ನಾನೊಬ್ಬನೇ ಅಲ್ಲ, ನನ್ನಂತಹ ಸಾವಿರಾರು ಶಿಕ್ಷಕರು ಇಂತಹದ್ದೇ ಬವಣೆಯಲ್ಲಿ ಬದುಕುತ್ತಿದ್ದಾರೆ.

ಶಿಕ್ಷಕರ ವರ್ಗಾವಣೆಯ ಅದೆಷ್ಟೋ ನಿಯಮಗಳು ಸಂಪೂರ್ಣ ಅವೈಜ್ಞಾನಿಕವೆನಿಸುತ್ತವೆ. ಒಬ್ಬ ಶಿಕ್ಷಕ ಸುಮಾರು ಹದಿನೈದು ವರ್ಷಗಳಿಂದ ತಾಲೂಕು ಕೇಂದ್ರದಿಂದ ತುಂಬಾ ದೂರವಿರುವ ಹಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಅವರ ಪತ್ನಿಯು ಗೃಹಿಣಿಯಾಗಿದ್ದರೆ ತೀವ್ರತರದ ಯಾವುದೇ ಕಾಯಿಲೆಯಿಲ್ಲದೆ, ಅಂಗವೈಕಲ್ಯವೂ ಇಲ್ಲದಿದ್ದರೆ, ಅವರನ್ನು ವರ್ಗಾವಣೆಯ ವಿವಿಧ ವಿಭಾಗಗಳಲ್ಲಿ ಕಟ್ಟಕಡೆಯ ವಿಭಾಗವಾಗಿ, ‘ಇತರೆ ಪುರುಷ ಶಿಕ್ಷಕ’ (ಅದರ್‌ ಕೇಸ್‌ ಮೆನ್‌) ಎಂದು ನಮೂದಿಸಲಾಗುತ್ತದೆ. ಅಂದರೆ ತೀವ್ರತರದ ಕಾಯಿಲೆ ಹೊಂದಿರುವವರು, ಅಂಗವೈಕಲ್ಯ ವಿರುವವರು, ಮಹಿಳಾ ನೌಕರರು, ಗಂಡ ಅಥವಾ ಹೆಂಡತಿ ಸರ್ಕಾರಿ ಅಥವಾ ಅನುದಾನಿತ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ಚುನಾಯಿತರಾದ ನೌಕರರು ಹೀಗೆ ಇವರೆಲ್ಲ ಮುಗಿದ ನಂತರ ವರ್ಗಾವಣೆಗೆ ಈ ಪುರುಷ ನೌಕರರು ಅರ್ಹರಾಗುತ್ತಾರೆ. ಶೇಕಡಾ ಐದು ಅಥವಾ ಆರರಷ್ಟು ಇರುವ ವರ್ಗಾವಣಾ ಮಿತಿಯಲ್ಲಿ ಮೇಲೆ ತಿಳಿಸಿದ ಪುರುಷ ಶಿಕ್ಷಕರಿಗೆ ಅವಕಾಶವೇ ಇಲ್ಲದಾಗುತ್ತದೆ. ಕನಿಷ್ಟ ಪಕ್ಷವೆಂದರೂ ಇಪ್ಪತ್ತು ವರ್ಷಕ್ಕಿಂತ ಹೆಚ್ಚು ವರ್ಷ ತಮ್ಮ ಸ್ವಂತ ಊರು, ಮನೆ ಎಲ್ಲ ಬಿಟ್ಟು ಇನ್ನೆಲ್ಲೋ ಬದುಕು ಸಾಗಿಸಬೇಕಾಗುತ್ತದೆ.

ತೀರಾ ಅವಶ್ಯಕತೆಯಿರುವ ತೀವ್ರ ಅನಾರೋಗ್ಯದವರಿಗೋ, ಅಂಗವೈಕಲ್ಯವಿರುವವರಿಗೋ ಮೀಸಲಾತಿ ಕೊಡುವುದರಲ್ಲಿ ಅರ್ಥವಿದೆ. ಆದರೆ ವಯಸ್ಸಾದ ತಂದೆ-ತಾಯಿಗೆ ಆಧಾರವಾಗಬೇಕಾದ ಒಬ್ಬನೇ ಮಗನಿರುವ ಪುರುಷ ಶಿಕ್ಷಕನಿಗೆ ವರ್ಗಾವಣೆಯ ಅವಕಾಶವೇ ಇಲ್ಲದಂತಾದರೆ, ತಂದೆ-ತಾಯಿಯ ಗತಿಯೇನು? ನಾನೂರು-ಐನೂರು ಕಿಲೋಮೀಟರ್‌ ದೂರವಿರುವವರು ಪ್ರತಿ ದಿನವೋ, ವಾರಕ್ಕೊಮ್ಮೆಯೋ ಹೋಗಿ ಬರಲಾದರೂ ಸಾಧ್ಯವಾಗುತ್ತದೆಯೇ? ಹೆಂಡತಿ ಗೃಹಿಣಿಯಾಗಿದ್ದರೆ, ಆ ಹೆಂಡತಿಯನ್ನು ಸ್ವಂತ ಊರಿನಲ್ಲೂ ಬಿಡಲಾಗದೆ, ತಾವಿರುವ ಬಳಿಯೂ ಕರೆದುಕೊಂಡು ಹೋಗಲಾಗದೆ(ತಂದೆ-ತಾಯಿಯನ್ನು ನೋಡಿಕೊಳ್ಳುವ ಅನಿವಾರ್ಯತೆ) ಪರಿತಪಿಸಬೇಕಾಗುತ್ತದೆ. ಹಾಗಾದರೆ ಆ ಶಿಕ್ಷಕರೂ ಮನುಷ್ಯರಲ್ಲವೇ? ಅವರಿಗೂ ಒಂದು ಕುಟುಂಬವಿಲ್ಲವೇ?

ಆದರೆ ನಿಜವಾದ ಸಮಸ್ಯೆಯಿರುವುದು ಇಲ್ಲಿ ಮಾತ್ರವಲ್ಲ, ಎರಡು ಸಾವಿರದ ಹದಿನೇಳನೇ ಇಸವಿಯಲ್ಲಿ (2017) ಬಂದ ಹೊಸ ನಿಯಮದಲ್ಲಿ. ಈ ನಿಯಮದಿಂದಾಗಿ ನೇರ ನೇಮಕಾತಿಯಾದ ಶಿಕ್ಷಕರಿಗೆ ಅದರಲ್ಲೂ ಯಾವುದೇ ಮೀಸಲಾತಿ, ವಿನಾಯಿತಿ ಸಿಗದ ಪುರುಷ ಶಿಕ್ಷಕರಿಗೆ ಬರಸಿಡಿಲಿನಂತೆ ಬಡಿದು, ವರ್ಗಾವಣೆಯಿಲ್ಲದೆ, ಆಯ್ಕೆಯಾದ ದೂರದ ಒಂದೇ ಶಾಲೆಯಲ್ಲಿ ತಮ್ಮ ವೃತ್ತಿ ಜೀವನ ಮುಗಿಸುವ ಪರಿಸ್ಥಿತಿ. ಅದಕ್ಕೆ ಕಾರಣ, ಈ ಮೊದಲು ಪ್ರಾಥಮಿಕ ಶಾಲೆಯಲ್ಲಿದ್ದ ಶಿಕ್ಷಕ ಪ್ರೌಢಶಾಲೆಗೆ ಬಡ್ತಿ ಹೊಂದಿದ್ದರೆ ಅಥವಾ ಪರೀಕ್ಷೆ ಬರೆದು ಪ್ರೌಢಶಾಲೆಗೆ ನೇಮಕವಾಗಿದ್ದರೆ ಅವನು ಪ್ರಾಥಮಿಕ ಶಾಲೆಗೆ ನೇಮಕವಾದ ದಿನವನ್ನು ವರ್ಗಾವಣೆಯ ಜೇಷ್ಠತೆಯನ್ನಾಗಿ ಪರಿಗಣಿಸು ತ್ತಿರುವುದು. ಉದಾಹರಣೆಗೆ ಈ ನಿಯಮದ ಪ್ರಕಾರ ಎರಡು ಸಾವಿರದ(2000) ಇಸವಿಯಲ್ಲಿ ಪ್ರಾಥಮಿಕ ಶಾಲೆಗೆ ನೇಮಕಗೊಂಡ ಶಿಕ್ಷಕ ಎರಡು ಸಾವಿರದ ಹದಿನೈದನೇ(2015) ಇಸವಿಯಲ್ಲಿ ಪ್ರೌಢಶಾಲೆಗೆ ಬಡ್ತಿ ಹೊಂದಿದರೆ, ಆ ಶಿಕ್ಷಕ ಎರಡು ಸಾವಿರದ ಒಂದನೇ ಇಸವಿಯಲ್ಲಿ ಪ್ರೌಢಶಾಲೆಗೆ ನೇರ ನೇಮಕವಾದ ಶಿಕ್ಷಕನಿಗಿಂತ ಹಿರಿಯನಾಗುತ್ತಾನೆ. ಆದರೆ ಆ ಬಡ್ತಿ ಹೊಂದಿದ ಶಿಕ್ಷಕ ಅಲ್ಲಿಯವರೆಗೆ ಅದೆಷ್ಟೇ ಬಾರಿ ಬೇರೆ ಬೇರೆ ಸ್ಥಳಗಳಿಗೆ ವರ್ಗಾವಣೆಯಾದರೂ ಅದು ಇಲ್ಲಿ ಪರಿಗಣನೆಗೆ ಬರುವುದಿಲ್ಲ. ಅದೇ ನೇರ ನೇಮಕವಾಗಿ, ನೇಮಕವಾದಾಗಿನಿಂದಲೂ ಒಂದೇ ಸ್ಥಳದಲ್ಲಿರುವ ಶಿಕ್ಷಕನಿಗಿಂತ ಪ್ರೌಢಶಾಲೆಗೆ ಎರಡು ಸಾವಿರದ ಹದಿನೈದನೇ ಇಸವಿಯಲ್ಲಿ ಬಂದ, ಬಡ್ತಿ ಹೊಂದಿರುವ ಶಿಕ್ಷಕನಿಗೆ ಹೆಚ್ಚು ಅಂಕ ದೊರೆಯುವುದು, ಅವನಿಗೇ ವರ್ಗಾವಣೆಯಲ್ಲಿ ಹಿರಿತನ ದೊರೆಯುವುದು ಅವೈಜ್ಞಾನಿಕವಲ್ಲವೇ?

ಪ್ರಸ್ತುತ ಶಾಲೆಯಲ್ಲಿ ಒಬ್ಬ ಶಿಕ್ಷಕ ಎಷ್ಟು ವರ್ಷ ಕಾರ್ಯ ನಿರ್ವಹಿಸಿದ್ದಾನೆ ಎಂಬುದರ ಆಧಾರದ ಮೇಲೆ ಅವನ ವರ್ಗಾವಣೆಯನ್ನು ನಿರ್ಧರಿಸಬೇಕಾಗಿರುವುದು ವೈಜ್ಞಾನಿ ಕವಲ್ಲವೇ? ಇನ್ನೂ ಸುಲಭವಾಗಿ ಹೇಳಬೇಕೆಂದರೆ 2010ನೇ ವರ್ಷದಲ್ಲಿ ಪ್ರೌಢಶಾಲಾ ಶಿಕ್ಷಕನಾಗಿ ಒಬ್ಬ ವ್ಯಕ್ತಿ ನೇಮಕವಾಗುತ್ತಾನೆ ಎಂದುಕೊಳ್ಳಿ. ಮತ್ತೂಬ್ಬ ಶಿಕ್ಷಕರು 1988ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದವರು 2013ರಲ್ಲಿ ಪ್ರೌಢಶಾಲೆಗೆ ಬಡ್ತಿ ಹೊಂದುತ್ತಾರೆ ಎಂದುಕೊಳ್ಳಿ.

ಈಗ ಹೊಸ ನಿಯಮದ ಪ್ರಕಾರ ಅವರು ಒಟ್ಟು ಅರವತ್ತೆರೆಡು(62) ಅಂಕಗಳನ್ನು ಹೊಂದಿ, ವರ್ಗಾವಣೆಯ ಜ್ಯೇಷ್ಠತೆಯಲ್ಲಿ ಮೊದಲಿನ ವ್ಯಕ್ತಿಗಿಂತ ತುಂಬಾ ಮುಂದಿರುತ್ತಾರೆ. ಅಂದರೆ ಎರಡನೇ ವ್ಯಕ್ತಿ ಸಾವಿರದ ಆಸುಪಾಸಿನ ರ್‍ಯಾಂಕಿನಲ್ಲಿದ್ದರೆ, 2010ನೇ ಇಸವಿಯಲ್ಲಿ ನೇಮಕವಾದ ವ್ಯಕ್ತಿ ಕೇವಲ ಹದಿನಾರು(16) ಅಂಕಗಳನ್ನು ಹೊಂದಿ ನಾಲ್ಕೂವರೆ ಸಾವಿರದ ಹತ್ತಿರದ ರ್‍ಯಾಂಕಿನಲ್ಲಿ ಇರುತ್ತಾನೆ. ವರ್ಗಾವಣೆಯಲ್ಲಿ ಮೊದಲ ವ್ಯಕ್ತಿ ಎರಡನೇ ವ್ಯಕ್ತಿಗಿಂತ ತೀರಾ ಕಿರಿಯನಾಗಿ ವರ್ಗಾವಣೆಯ ಕನಸನ್ನೇ ಕಾಣದಂತಾಗುತ್ತದೆ. ಎರಡನೇ ವ್ಯಕ್ತಿ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಬಾರಿ ಬೇರೆ ಬೇರೆ ಸ್ಥಳಗಳಿಗೆ ವರ್ಗಾವಣೆ ಹೊಂದಿ, ಈಗ ತನ್ನೂರಿನ ಹತ್ತಿರವೆ ಬೇರೆ ಬೇರೆ ಶಾಲೆಗಳಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ವರ್ಗಾವಣೆ ಹೊಂದುವ ಅರ್ಹತೆ ಹೊಂದುತ್ತಾನೆ.

ಆದರೆ ಒಂಬತ್ತು ವರ್ಷದಿಂದ ಒಂದೇ ಶಾಲೆಯಲ್ಲಿರುವ ವ್ಯಕ್ತಿಯು ಒಮ್ಮೆಯೂ ವರ್ಗಾವಣೆಯಾಗದೆ, ಇದೇ ವರ್ಗಾವಣೆ ನೀತಿಯಿದ್ದರೆ, ಇನ್ನೂ ಇಪ್ಪತ್ತು ವರ್ಷ ವರ್ಗಾವಣೆಯಿಲ್ಲದೆ, ವಯಸ್ಸಾದ, ಖಾಯಿಲೆಯ ತಂದೆ- ತಾಯಿಯ ಬಳಿಯಿರಲಾರದೆ, ಅವರ ನೋವು- ನರಳುವಿಕೆಗೆ ಕಾರಣನಾಗಿ, ಕೊರಗುತ್ತಾ, ವೃತ್ತಿಗೆ ನ್ಯಾಯವನ್ನೂ ಒದಗಿಸಲಾಗದೆ, ತೊಳಲಾಡುತ್ತಾ ಬದುಕಬೇಕಾಗುತ್ತದೆ.

2010 ಎಂದಲ್ಲ, ಅದಕ್ಕೂ ತುಂಬಾ ವರ್ಷ ಮೊದಲೇ ನೇಮಕವಾದ ಅನೇಕ ಶಿಕ್ಷಕರೂ ಒಮ್ಮೆಯೂ ವರ್ಗಾವಣೆಯ ಭಾಗ್ಯ ಸಿಗದೆ ಒದ್ದಾಡುತ್ತಿರುವುದು ಸಂಕಟ ತರಿಸುತ್ತಿದೆ. ಜೊತೆಗೆ ಈ ನಿಯಮದಿಂದ ಪ್ರತೀ ಬಾರಿಯೂ ಬಡ್ತಿ ಹೊಂದಿದವರೇ ಜ್ಯೇಷ್ಠತಾ ಪಟ್ಟಿಯಲ್ಲಿ ಹಿರಿಯರಾಗುತ್ತಾ, ನೇರ ನೇಮಕವಾದವರು ಅವರಿಗಿಂತ ಕಿರಿಯರಾಗಿಯೇ ಉಳಿಯುತ್ತಾರೆ. ಪ್ರತೀ ಬಾರಿಯೂ ಬಡ್ತಿ ಶಿಕ್ಷಕರಿಗೆ ಮಾತ್ರ ವರ್ಗಾವಣೆಯ ಶೇಕಡಾ ತೊಂಬತ್ತರಷ್ಟು ಭಾಗ ಅವಕಾಶ ದೊರೆತು, ನೇರ ನೇಮಕವಾದವರಿಗೆ ಅವಕಾಶವಿಲ್ಲದಂತಾಗುತ್ತದೆ. ಜೊತೆಗೆ ವರ್ಗಾವಣೆಯ ವಿಷಯದಲ್ಲಿ ಇಪ್ಪತ್ತು ಅಥವಾ ಇಪ್ಪತ್ತೈದು ವರ್ಷ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ ನೇರ ನೇಮಕಾತಿ ಹೊಂದಿದ ಶಿಕ್ಷಕರು ಒಂದೆರಡು ವರ್ಷಗಳ ಹಿಂದೆ ಬಡ್ತಿ ಹೊಂದಿರುವವರಿಗಿಂತ ಕಿರಿಯರಾಗುವುದೇ ದುರಂತ.

ಪ್ರಪಂಚದಲ್ಲಿ ತಪ್ಪು ಮಾಡದವರು ಯಾರೂ ಇರಲು ಸಾಧ್ಯವಿಲ್ಲ. ಕೆಲವೊಮ್ಮೆ ಗೊತ್ತಿಲ್ಲದೇ ತಪ್ಪಾಗುತ್ತದೆ. ಆದರೆ ಅದರಿಂದ ಇನ್ಯಾರಿಗೋ ಅನ್ಯಾಯವಾಗುವುದರೊಳಗೆ ಎಚ್ಚರವಾಗುವುದು ಮುಖ್ಯ. ಹಾಗಾಗಿ ಇಲಾಖೆಯು ಈ ವಿಷಯದಲ್ಲಿ ಇನ್ನೊಮ್ಮೆ ಯೋಚಿಸಿ, ಒಂದು ಶಾಲೆಯಲ್ಲಿ ಒಬ್ಬ ಎಷ್ಟು ವರ್ಷ ಸೇವೆ ಸಲ್ಲಿಸಿದ್ದಾನೆ ಎಂಬುದರ ಆಧಾರದ ಮೇಲೆ, ಅವನನ್ನು ವರ್ಗಾವಣೆಗೆ ಜ್ಯೇಷ್ಠತೆಯಲ್ಲಿ ಹಿರಿತನವನ್ನು ನೀಡಿದರೆ ಒಳ್ಳೆಯದಾಗುತ್ತದೆ. ಕೆಲವು ಅನಿವಾರ್ಯ ಪರಿಸ್ಥಿತಿಗಳಾದ ತೀವ್ರ ಅನಾರೋಗ್ಯ, ದೈಹಿಕ ಅಂಗವಿಕಲತೆಯನ್ನು ಹೊರತುಪಡಿಸಿ ಪ್ರಸ್ತುತ ಶಾಲೆಗೆ ಬಂದ ಆಧಾರದ ಮೇಲೆ ವರ್ಗಾವಣೆ ನೀಡಿದರೆ, ಯಾರಿಗೂ ಅನ್ಯಾಯವಾಗದೆ, ಸಮಾನವಾದ ವರ್ಗಾವಣೆ ದೊರೆಯಬಹುದು.

ಹಾಗೆಯೇ ಅನಾರೋಗ್ಯ, ಅಂಗವೈಕಲ್ಯ, ಪತಿ-ಪತ್ನಿ ಪ್ರಕರಣ, ಇತರೆ ಮಹಿಳಾ ಹಾಗೂ ಪುರುಷ ಶಿಕ್ಷಕರೆಂಬ ಎಲ್ಲಾ ವರ್ಗಕ್ಕೂ ಶೇಕಡಾ ಇಂತಿಷ್ಟು ವರ್ಗಾವಣೆ ಎಂಬ ಆದೇಶವಾದರೆ, ಅದೆಷ್ಟೋ ಶಿಕ್ಷಕರು ಒಂದಿಷ್ಟು ನೆಮ್ಮದಿಯಿಂದ ಬೋಧಿಸಬಹುದು. ಈ ಲೇಖನ ಬಡ್ತಿ ಶಿಕ್ಷಕರ ಮೇಲೋ ಅಥವಾ ಇಲಾಖೆಯ ಮೇಲೋ ಹೊರಿಸುತ್ತಿರುವ ಆಪಾದನೆಯಲ್ಲ. ಬದಲಾಗಿ ಎಲ್ಲರಿಗೂ ನ್ಯಾಯ ಒದಗಲಿ ಎಂಬ ಬೇಡಿಕೆ. ಹಾಗಾಗಿ ಇಲಾಖೆ ಹಾಗೂ ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಿದರೆ ಎಲ್ಲಾ ಶಿಕ್ಷಕರಿಗೂ ಒಳ್ಳೆಯದಾಗುತ್ತದೆ.

 ರಾಘವೇಂದ್ರ ಹೊರಬೈಲು, ಶಿಕ್ಷಕರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ