ಜವಾಬ್ದಾರಿಯುತ ಕಲಿಕೆಗೆ ಪರೀಕ್ಷೆ ಪೂರಕ

Team Udayavani, Oct 18, 2019, 5:15 AM IST

ಹಾಲು ಕಂಡರೆ ಹೆದರುವ ತೆನಾಲಿ ರಾಮನ ಬೆಕ್ಕಿನಂತೆ, ಪರೀಕ್ಷೆ ಕಂಡರೆ ಹೆದರುವ ಸರಕಾರಿ ಶಾಲೆಗಳ ಮಕ್ಕಳು ಇಂತಹ ಯಾವ ಪರೀಕ್ಷೆಯನ್ನೂ ಎದುರಿಸದೆ ನಿರುದ್ಯೋಗಿಗಳಾಗಿ ಉಳಿಯಬೇಕೇ? ಸರಕಾರಿ ಶಾಲೆಗಳೆಂ ದರೆ ಈಗಾಗಲೇ ಮೂಗುಮುರಿಯುವ ಜನ ಸರಕಾರಿ ಶಾಲೆಗಳು ಹಾಗೂ ಅಲ್ಲಿನ ವಿದ್ಯಾರ್ಥಿಗಳನ್ನು ಅಸಹ್ಯದಿಂದ ನೋಡುವಂತಾಗಬೇಕೇ?

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಸುರೇಶ್‌ ಕುಮಾರ್‌ ಈ ಬಾರಿ ಏಳನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಚಿಂತಿಸಿರುವುದು ಸ್ವಾಗತಾರ್ಹ. ಇದನ್ನು ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರೆಲ್ಲರೂ ಖಂಡಿತಾ ಸ್ವಾಗತಿಸುತ್ತಾರೆ. ಯಾಕೆಂದರೆ ಶೈಕ್ಷಣಿಕ ಪ್ರಯೋಗಶಾಲೆಯಲ್ಲಿ ಬಲಿಪಶುಗಳಾಗುತ್ತಿರುವವರು ಹೈಸ್ಕೂಲ್‌ ಶಿಕ್ಷಕರು.

ಹತ್ತನೇ ತರಗತಿಯಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀûಾ ಮಂಡಳಿ ನಡೆಸುವ ಪಬ್ಲಿಕ್‌ ಪರೀಕ್ಷೆ ಇದೆ. ಆ ಪರೀಕ್ಷೆಗಾಗಿ ಮಕ್ಕಳನ್ನು ಸಿದ್ಧಗೊಳಿಸಬೇಕು. ವರ್ಷವಿಡೀ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ವಿವಿಧ ಕಸರತ್ತುಗಳನ್ನು ನಡೆಸಿ, ಪರೀಕ್ಷೆಗೆ ಮೊದಲಿನ ಒಂದೆರಡು ತಿಂಗಳು ಮತ್ತಷ್ಟು ತೀವ್ರತರ ಸಿದ್ಧತೆಗಳನ್ನು ನಡೆಸಿ ಹಾಗೂ ಹೀಗೂ ಅನುತ್ತೀರ್ಣತೆಯ ಹಂತದಲ್ಲಿರುವವರನ್ನು ಉತ್ತೀರ್ಣತೆಯ ಕನಿಷ್ಠ ಅಂಕಗಳನ್ನು ಪಡೆಯಲು ಶಕ್ತರಾಗಿಸುತ್ತೇವೆ.

ಪಾಸಾಗಲು ಬೇಕಾಗುವಷ್ಟನ್ನು ಅಥೆìçಸಿಕೊಳ್ಳದೇ, ಗಿಳಿಪಾಠ ಮಾಡಿ ಆ ಮಕ್ಕಳು ಗಳಿಸುವ ಉತ್ತೀರ್ಣತೆಗೆ ಬೆಲೆಯೇನು ಎಂಬುದಕ್ಕೆ ಖಂಡಿತಾ ಶಿಕ್ಷಕರಲ್ಲಿ ಉತ್ತರವಿಲ್ಲ. ಇದು ವ್ಯವಸ್ಥೆಯ ಅನಿವಾರ್ಯತೆ ಎಂದಷ್ಟೇ ಹೇಳಬಹುದು.

ಫ‌ಲಿತಾಂಶ ತೊಂಬತ್ತು ಶೇಕಡಾಕ್ಕಿಂತ ಮೇಲಿರಬೇಕು, ನೂರಕ್ಕೆ ನೂರು ಫ‌ಲಿತಾಂಶ ಪಡೆಯಬೇಕು ಎಂಬ ಕನಸಿಟ್ಟು ಪ್ರಯತ್ನಿಸಿದರೂ ನಿರೀಕ್ಷೆಗೆ ತಕ್ಕ ಫ‌ಲಿತಾಂಶ ಬಂದಿರುವುದಿಲ್ಲ. ವಿಷಯವಾರು ಶೇ. 80-ಶೇ.90 ಫ‌ಲಿತಾಂಶ ಇದ್ದರೂ ಶಿಕ್ಷಕರಿಗೆ ಶಿಕ್ಷಣ ಆಯುಕ್ತರ ಕಚೇರಿಯಿಂದ ಪತ್ರವೊಂದು ಬರುತ್ತದೆ.

ನಿಮ್ಮ ಪಾಠ ವಿಷಯದಲ್ಲಿ ವಿದ್ಯಾರ್ಥಿಗಳ ಫ‌ಲಿತಾಂಶ ವಿಶ್ಲೇಷಣೆ ಮಾಡಿದಾಗ ಹತ್ತರಲ್ಲಿ ಇಷ್ಟು ಅಂಕ ಗಳಿಸಿದ್ದೀರಿ. ನಿಮ್ಮ ಸಾಧನೆ “ಸಾಧಾರಣ’. ವರ್ಷವಿಡೀ ಫ‌ಲಿತಾಂಶದ ಹಿಂದೆ ಬಿದ್ದು ಒಂದು ರೀತಿಯಲ್ಲಿ ಹೋರಾಟದಿಂದ ಕಲಿಸುವ ನಮಗೆ ಈ ಪತ್ರ ಕಂಡಾಗ ಆಗುವ ನಿರಾಸೆ ಅಷ್ಟಿಷ್ಟಲ್ಲ. ಇಡೀ ವರ್ಷದ ಪ್ರಾಮಾಣಿಕ ಪ್ರಯತ್ನಕ್ಕೆ ಸಿಗುವ ಸಾಧಾರಣ ಎಂಬ ಪ್ರಮಾಣಪತ್ರ ಪ್ರಶ್ನಾರ್ಥಕ ಚಿಹ್ನೆಯಾಗಿ ಗೋಚರಿಸುತ್ತದೆ.

ವಿದ್ಯಾರ್ಥಿಗಳು ಕೂಡಾ ಶಿಕ್ಷಣ ವ್ಯವಸ್ಥೆಯ ಬಲಿಪಶುಗಳಾಗಿದ್ದಾರೆ. ದೋಷಪೂರಿತ ಪದ್ಧತಿಯ ಬಲಿಪಶುಗಳಾದ ನೂರಾರು ಮುಗ್ಧ ಮಕ್ಕಳ ಮುಖ ಕಣ್ಣಮುಂದೆ ಸುಳಿಯುತ್ತದೆ. ಕಲಿಕೆಯಲ್ಲಿ ಹಿಂದುಳಿದವ, ಅನುತ್ತೀರ್ಣ ಎಂಬ ಪದಗಳ ಭೀಕರತೆಯ ಮುಂದೆ ಕಂಗಾಲಾದ ಆ ಮಕ್ಕಳು ಮನ ಕಲಕುತ್ತಾರೆ.

ಪ್ರಾಮಾಣಿಕ ಪ್ರಯತ್ನಗಳ ಹೊರತಾಗಿಯೂ ಅನುತ್ತೀರ್ಣರಾಗುವಾಗ ಶಿಕ್ಷಕರಿಗೆ ದುಃಖವಾಗುತ್ತದೆ. ಈಗಿನ ಪರೀûಾ ರಹಿತ ಪದ್ಧತಿಯ ಬಲಿಪಶುಗಳಾದ ಮಕ್ಕಳ ಬಗ್ಗೆ, ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಕತ್ತಲು ಕವಿದ ಬಗ್ಗೆ ದುಃಖೀಸುವ ಹೆತ್ತವರ ಬಗ್ಗೆ ಮರುಕ ಹುಟ್ಟುತ್ತದೆ. ಆದರೆ ಏನೂ ಮಾಡಲಾಗದ, ಯಾರನ್ನೂ ದೂರಲಾಗದ ಸ್ಥಿತಿ ನಮ್ಮ ಕೈಗಳನ್ನು ಕಟ್ಟಿಹಾಕುತ್ತದೆ.

ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಕುಸಿತಕ್ಕೆ ಪರೀûಾ ರಹಿತ ಪದ್ಧತಿಯೇ ಕಾರಣ. ನಿರಂತರ ಮೌಲ್ಯಮಾಪನ (ಸಿಸಿಇ) ಎಂಬ ಪದ್ಧತಿ ಪರೀಕ್ಷೆಗಳ ಬದಲಿ ವ್ಯವಸ್ಥೆಯಾಗಿ ಇದೆ. ಆದರೆ ಈ ರೂಪಣಾತ್ಮಕ ಮೌಲ್ಯಮಾಪನ, ಸಂಕಲನಾತ್ಮಕ ಮೌಲ್ಯ ಮಾಪನಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ, ಶಿಕ್ಷಕರು ಯಾವ ರೀತಿ ಅದನ್ನು ನಿರ್ವಹಿಸುತ್ತಿ¨ªಾರೆ ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ. ಈ ಪದ್ಧತಿಯಲ್ಲಿ ಮಗುವಿನ ಪಠ್ಯ ಹಾಗೂ ಸಹಪಠ್ಯ/ ಸೃಜನಾತ್ಮಕ ಸಾಮರ್ಥ್ಯಗಳ ಮೌಲ್ಯಮಾಪನ ಆಗುತ್ತದೆ ಎನ್ನುತ್ತಾರೆ. ಆದರೆ ಹಾಗೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಕಲಿಕಾ ಸಾಮರ್ಥ್ಯ ಪರಿಶೀಲನೆಗೆ ಸಿಸಿಇ ಸ್ವಯಂ ಪರ್ಯಾಪ್ತ ಅಂತ ಅನಿಸುತ್ತಿಲ್ಲ. ಲಿಖೀತ (ಸಣ್ಣ ತರಗತಿಗಳಲ್ಲಿ ಮೌಖೀಕ) ಪರೀಕ್ಷೆಗಳಿ¨ªಾಗ ಮಕ್ಕಳಿಗೂ ಹೆತ್ತವರಿಗೂ ಕಲಿಕೆಯ ಕುರಿತಾದ ಜವಾಬ್ದಾರಿ ಮೂಡುತ್ತದೆ. ಉದ್ದೇಶಪೂರ್ವಕವಾಗಿ ಕಲಿಯುತ್ತಾರೆ. ಸಿಸಿಇ ಪದ್ಧತಿಯಲ್ಲಿ ಉದ್ದೇಶ ರಹಿತ ಕಲಿಕೆ ಆಗುತ್ತಿದೆ ಅಥವಾ ಉದ್ದೇಶ ಇಲ್ಲದ ಕಾರಣ, ಕಲಿಯಲೇಬೇಕಾದ ಅನಿವಾರ್ಯತೆ ಇಲ್ಲದ ಕಾರಣ ಉದ್ದೇಶಿತ ಗುಣಮಟ್ಟದ ಕಲಿಕೆ ಆಗುತ್ತಿಲ್ಲ. ಕಲಿತರೂ ಕಲಿಯದಿದ್ದರೂ ನಾನು ಪಾಸು, ಮತ್ಯಾಕೆ ಕಷ್ಟಪಟ್ಟು, ಇಷ್ಟಪಟ್ಟು, ಪರಿಶ್ರಮಪಟ್ಟು ಕಲಿಯಬೇಕು? ಆಟ ಆಡಿದರಾಯಿತು ಎಂಬ ಮನೋಭಾವ ಮಕ್ಕಳಲ್ಲಿ ಮೂಡುತ್ತದೆ.

ನೂರಾರು ದಾಖಲೆ ನಿರ್ವಹಣೆಯ ಮಧ್ಯೆ ಹುದುಗಿಹೋಗುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕಲಿಕೆಯನ್ನು ಖಚಿತಪಡಿಸಿಕೊಳ್ಳುವ ಬೇರೆ ಸೂಕ್ತ ವಿಧಾನವಾಗಲೀ ಸಮಯವಾಗಲೀ ಇಲ್ಲ. ಗುಂಪಿನಲ್ಲಿ ಗೋವಿಂದ ಎಂಬಂತೆ ಎಲ್ಲರಿಗೂ ಒಟ್ಟಾಗಿ ಕಲಿಸುತ್ತಾರೆ. ಮುಂದಿನ ತರಗತಿಗೆ ಕಳಿಸುತ್ತಾರೆ. ಯಾವ ಮಗು ಯಾವ ಕಲಿಕಾ ಮಟ್ಟ ಹೊಂದಿದೆ ಎಂಬ ಅರಿವು ದೊರೆತಾಗಷ್ಟೇ ಶಿಕ್ಷಕರಿಗೆ ಆ ಮಗುವಿಗೆ ನಿರ್ದಿಷ್ಟ ಸಾಮರ್ಥ್ಯ ಮೂಡಿಸಲು ಸಾಧ್ಯ. ಇದಕ್ಕೆ ಪರೀûಾ ಮಾದರಿಯ ಮೌಲ್ಯಮಾಪನ ಬೇಕೇ ಬೇಕು. ಶಿಕ್ಷಣ ಎಂಬ ಮೂಲಭೂತ ಹಕ್ಕನ್ನು ಅದರ ಪೂರ್ಣ ಪ್ರಮಾಣದಲ್ಲಿ ಅನುಭವಿಸಲು ಪರೀûಾ ರಹಿತ ವ್ಯವಸ್ಥೆ ಕಾರಣವಾಗುತ್ತದೆ. ಅಂದರೆ ಮಗು ಪರೀಕ್ಷೆ ಎಂಬ ಭಯವಿಲ್ಲದಿರುವುದರಿಂದ ಕಲಿಯದೆ ಉಳಿಯುತ್ತದೆ. ಕೊನೆಗೆ ನಿರ್ದಿಷ್ಟ ಸಾಮರ್ಥ್ಯಗಳನ್ನು ಗಳಿಸಲಾರದೇ ಬುದ್ಧಿಮಟ್ಟ ಇದ್ದರೂ ಕಲಿಕೆಯಲ್ಲಿ ಹಿಂದುಳಿಯುತ್ತದೆ. ಪರೀಕ್ಷೆಯನ್ನು ಶಿಕ್ಷೆ ಎಂದು ಪರಿಗಣಿಸುವುದೇ ಶಿಕ್ಷಣದ ಕುರಿತಾಗಿ ಮಗುವಿಗೆ ನೀಡುತ್ತಿರುವ ದೊಡ್ಡ ಶಿಕ್ಷೆ. ಪುಟ್ಟ ಮಗುವನ್ನು ಅತ್ಯಂತ ಪ್ರೀತಿಸುವ ಹೆತ್ತವರು ಅದರ ಬುದ್ಧಿ ತಿದ್ದಲಿಕ್ಕಾಗಿ ಗದರಿಸುವುದಿಲ್ಲವೇ? ಅದರಿಂದ ಮಗು ಸರಿ ತಪ್ಪುಗಳ ಕುರಿತಾದ ವಿವೇಚನೆ ಬೆಳೆಸಿಕೊಳ್ಳುತ್ತದೆ. ಪರೀಕ್ಷೆಯೂ ಅಂತಹ ಒಂದು ವ್ಯವಸ್ಥೆ ಅಷ್ಟೇ. ಅದರಿಂದ ಕಲಿಕೆ ವ್ಯವಸ್ಥಿತ ಹಾಗೂ ಜವಾಬ್ದಾರಿಯುತವಾಗುತ್ತದೆ.

ಪರೀಕ್ಷೆಗಳೇ ಬೇಡ, ಅದರಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬ ನಿಲುವುಗಳನ್ನು ಪ್ರದರ್ಶಿಸುವವರಲ್ಲಿ ಒಂದು ಪ್ರಶ್ನೆ. ಸರಕಾರಿ ಶಾಲೆಗಳಿಗೆ ಮಾತ್ರವೇ ಈ ಸಮಸ್ಯೆ ಉಂಟಾಗುವುದೇ? ಖಾಸಗಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ನಿಯಮಿತವಾಗಿ ಪರೀಕ್ಷೆಗಳು ನಡೆಯುತ್ತವೆ. ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಅವರು ಐಎಎಸ್‌, ಕೆಎಎಸ್‌ ಅಧಿಕಾರಿಗಳಾಗುತ್ತಾರೆ, ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ವಿವಿಧ ಪ್ರವೇಶ ಪರೀಕ್ಷೆಗಳನ್ನು ಬರೆದು ಉನ್ನತ ಶಿಕ್ಷಣಕ್ಕೆ ಸೀಟು ಪಡೆದುಕೊಳ್ಳುತ್ತಾರೆ. ಹಾಲು ಕಂಡರೆ ಹೆದರುವ ತೆನಾಲಿ ರಾಮನ ಬೆಕ್ಕಿನಂತೆ, ಪರೀಕ್ಷೆ ಕಂಡರೆ ಹೆದರುವ ಸರಕಾರಿ ಶಾಲೆಗಳ ಮಕ್ಕಳು ಇಂತಹ ಯಾವ ಪರೀಕ್ಷೆಯನ್ನೂ ಎದುರಿಸದೆ ನಿರುದ್ಯೋಗಿಗಳಾಗಿ ಉಳಿಯಬೇಕೇ? ಸರಕಾರಿ ಶಾಲೆಗಳೆಂದರೆ ಈಗಾಗಲೇ ಮೂಗುಮುರಿಯುವ ಜನ ಸರಕಾರಿ ಶಾಲೆಗಳು ಹಾಗೂ ಅಲ್ಲಿನ ವಿದ್ಯಾರ್ಥಿಗಳನ್ನು ಅಸಹ್ಯದಿಂದ ನೋಡುವಂತಾಗಬೇಕೇ? ಸಮಾನತೆಯ ಹಕ್ಕು, ಸಮಾನ ಅವಕಾಶದ ಹಕ್ಕು ಸರಕಾರಿ ಶಾಲಾ ಮಕ್ಕಳಿಗೂ ಇಲ್ಲವೇ? ಸಾಮಾಜಿಕ ನ್ಯಾಯದಿಂದ ಅವರನ್ನು ವಂಚಿತರನ್ನಾಗಿ ಮಾಡುವುದೇಕೆ? ಎಳ್ಳಷ್ಟೂ ವ್ಯತ್ಯಾಸವಿಲ್ಲದ ಏಕರೂಪದ ವ್ಯವಸ್ಥೆ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಜಾರಿಗೆ ಬರುವುದಿದ್ದರೆ ಮಾತ್ರ ಪರೀûಾ ಸಹಿತವೋ ರಹಿತವೋ- ಯಾವುದೇ ಪದ್ಧತಿ ಜಾರಿಗೆ ಬರಲಿ. ಸರಕಾರಿ ಶಾಲೆಗಳಿಗೊಂದು ನ್ಯಾಯ, ಖಾಸಗಿ ಶಾಲೆಗಳಿಗೊಂದು ನ್ಯಾಯ ಎಂಬಂತಾಗದಿರಲಿ. ಸರಕಾರಿ ಶಾಲೆಗಳು, ಶಿಕ್ಷಕರು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳು ಪ್ರಯೋಗದ ವಸ್ತುಗಳಾಗದಿರಲಿ.

ಪರೀಕ್ಷೆಗಳನ್ನು ಶಿಕ್ಷೆ ಎಂದು ಪರಿಗಣಿಸದೇ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಅಗತ್ಯದ ಪ್ರಕ್ರಿಯೆ ಎಂದು ಭಾವಿಸಬೇಕು. ಉದ್ದೇಶ ರಹಿತ ಕಲಿಕೆಯಲ್ಲ, ಉದಾಸೀನದ ಕಲಿಕೆಯಲ್ಲ. ಉದ್ದೇಶ ಸಹಿತ, ಆಸಕ್ತಿದಾಯಕ, ಜವಾಬ್ದಾರಿಯುತ ಕಲಿಕೆ ಆಗಬೇಕು.ಅದಕ್ಕೆ ಪರೀûಾ ಪದ್ಧತಿ ಬೇಕೇ ಬೇಕು. ಗುರುಕುಲ ಪದ್ಧತಿಯಲ್ಲೂ ಪರೀಕ್ಷೆಗಳಿದ್ದವು. ಅಳತೆಯ ಮಾಪನವೊಂದು ಇಲ್ಲದಿದ್ದರೆ ಅಳೆಯುವುದಾದರೂ ಹೇಗೆ? ಸಿಸಿಇ ಪದ್ಧತಿಯ ಪ್ರಸ್ತುತ ಮೌಲ್ಯಮಾಪನ ಕ್ರಮ ಸರಿಯಾದ ಮಾಪನವಲ್ಲ. ಸರಕಾರಿ ಹಾಗೂ ಖಾಸಗಿ ಶಾಲೆಗಳ ಕಲಿಕಾ ಪದ್ಧತಿ ಹಾಗೂ ವಿದ್ಯಾರ್ಥಿಗಳ ಕಲಿಕಾ ಮಟ್ಟದ ಮಧ್ಯೆ ಕಂದಕ ಸೃಷ್ಟಿಸಿ ಸರಕಾರಿ ಶಾಲೆಗಳನ್ನು ಹಾಗೂ ಅಲ್ಲಿ ಕಲಿತ ಮಕ್ಕಳನ್ನು ಧ್ರುವೀಕರಿಸಿ, ದ್ವಿತೀಯ ದರ್ಜೆಯ ಪ್ರಜೆಗಳಾಗಿಸುವ ವ್ಯವಸ್ಥೆ ಬಾರದಿರಲಿ. ಖಾಸಗಿ ಹಾಗೂ ಸರಕಾರಿ ಶಿಕ್ಷಣ ಪದ್ಧತಿಗಳಲ್ಲಿ ಏಕರೂಪತೆ ಬರಲಿ.

ಪರೀಕ್ಷೆಗಳೂ ಇರಲಿ. ಆ ಮೂಲಕ ಜವಾಬ್ದಾರಿಯಿಂದ ಕಲಿಯುವ, ಕಲಿಸುವ ಪ್ರಕ್ರಿಯೆ ಮುಂದುವರಿಯಲಿ.

– ಜೆಸ್ಸಿ ಪಿ.ವಿ ಪುತ್ತೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ