ಡಿಜಿಟಿಲೀಕರಣದ ದುರವಸ್ಥೆ

Team Udayavani, Aug 11, 2019, 5:05 AM IST

ಸಾಂದರ್ಭಿಕ ಚಿತ್ರ

ಗ್ರಾಮೀಣ ಪ್ರದೇಶದ ಅಂಚೆ ಕಚೇರಿಗಳಲ್ಲಿ ನಡೆಯುವ ಉಳಿತಾಯ ಖಾತೆ ಮತ್ತು ಜೀವವಿಮಾ ಖಾತೆಗಳ ಹಣದ ವ್ಯವಹಾರದಿಂದ ಸಿಗುವ ಲಾಭವಲ್ಲದೆ ಹೋಗಿದ್ದರೆ ನಗರಗಳಲ್ಲಿರುವ ಅಂಚೆ ಕಚೇರಿಗಳನ್ನು ಮುಚ್ಚಬೇಕಾಗುತ್ತಿತ್ತು. ಈಗ ಅಂಚೆ ಕಚೇರಿಗಳನ್ನು ಅವಲಂಬಿಸಿ ಧನಾದೇಶಗಳು (Money Order), ಪತ್ರಗಳು ಹೋಗುವ ಸಂಖ್ಯೆ ತೀರಾ ಕಡಿಮೆಯಾಗಿರುವುದರಿಂದ ಶತಮಾನದ ಇತಿಹಾಸವಿರುವ ಭಾರತೀಯ ಅಂಚೆ ಇಲಾಖೆ ತನ್ನ ಅಸ್ತಿತ್ವದ ಉಳಿವಿಗಾಗಿ ಉಪಾಯಗಳನ್ನು ಹುಡುಕಬೇಕಾದ ಅನಿವಾರ್ಯವೊದಗಿದೆ. ಇದರ ಫ‌ಲವಾಗಿ ಗ್ರಾಮಗಳಲ್ಲಿರುವ ಅಂಚೆ ಕಚೇರಿಗಳಿಗೆ ದರ್ಪಣ್‌ (ಆರ್‌ಐಸಿಟಿ) ಯಂತ್ರಗಳನ್ನು ಕಳೆದ ವರ್ಷ ಪೂರೈಸಲಾಗಿದೆ. ಆದರೆ ಈ ಯಂತ್ರಗಳಿಂದ ಜನರಿಗೆ ತೊಂದರೆ ಆಗಿದೆಯೇ ಹೊರತು ಅನುಕೂಲಗಳಾಗಿಲ್ಲ.

ಬ್ಯಾಂಕುಗಳಿಲ್ಲದ ಗ್ರಾಮೀಣ ಭಾಗದ ಜನರಿಗೆ ಸುಲಲಿತವಾಗಿ ಹಣದ ವ್ಯವಹಾರ ನಡೆಸಲು ದೇಶದ 1. 29 ಲಕ್ಷ ಅಂಚೆ ಕಚೇರಿಗಳಿಗೂ ಸೌರಶಕ್ತಿಯಿಂದ ನಡೆಯುವ ಡಿಜಿಟಲ್ ಯಂತ್ರಗಳನ್ನು ಒದಗಿಸಿ ಅದರ ಮೂಲಕ ವ್ಯವಹಾರ ನಡೆಸಲು ಅಂಚೆ ಪಾಲಕರಿಗೆ ತರಬೇತಿ ನೀಡಿರುವುದು ಇಲಾಖೆಯನ್ನು ಹೊಗಳಬೇಕಾದ ಪ್ರಯತ್ನ. ಆದರೆ ಈಗ ತೆಗಳಬೇಕಾದ ಪರಿಸ್ಥಿತಿ ಎಲ್ಲೆಡೆ ಇದ್ದರೂ ಇದರಿಂದ ಆಗುವ ಸಮಸ್ಯೆಯ ನಿವಾರಣೆಗೆ ಹಿರಿಯ ಅಧಿಕಾರಿಗಳು ತಲೆ ಹಾಕುತ್ತಿಲ್ಲ. ಯಂತ್ರ ಕೈ ಕೊಟ್ಟಿದ್ದರೆ ಅದನ್ನು ಸರಿಪಡಿಸುವ ಮಾರ್ಗೋಪಾಯಗಳು ಅವರಿಗೂ ಗೊತ್ತಿಲ್ಲ. ಮ್ಯಾನ್ಯುವಲ್ ಮೂಲಕ ವ್ಯವಹಾರ ನಡೆಸಿ ಎಂದು ಆಣತಿ ಕೊಟ್ಟುಬಿಡುತ್ತಾರೆ.

ಅಂಚೆ ಕಚೇರಿಯಲ್ಲಿ ಈಗ ಬಹುತೇಕ ಆರ್ಥಿಕ ವ್ಯವಹಾರಗಳು ಈ ಯಂತ್ರದ ಮೂಲಕವೇ ನಡೆಯಬೇಕು. ಅಂಚೆ ಚೀಲ ತೆರೆಯುವುದರಿಂದ ತೊಡಗಿ, ಉಳಿತಾಯ ಖಾತೆಗಳನ್ನು ಆರಂಭಿಸುವುದು, ಹಣ ಪಾವತಿಸುವುದು, ಗ್ರಾಮೀಣ ಅಂಚೆ ಜೀವವಿಮಾ ಪಾಲಿಸಿಯ ಕಂತುಗಳನ್ನು ತುಂಬುವುದು, ಧನಾದೇಶ ಕಳುಹಿಸುವುದು ಎಲ್ಲವನ್ನೂ ಯಂತ್ರ ಮುಖೇನವೇ ನಡೆಸಲಾಗುತ್ತದೆ. ನೀರು, ವಿದ್ಯುತ್‌, ದೂರವಾಣಿ ಬಿಲ್ಲುಗಳ ಪಾವತಿಗೂ ಇದರಲ್ಲಿಯೇ ಮುದ್ರಿತ ರಸೀದಿ ಸಿಗುತ್ತದೆ. ಎಲ್ಲವೂ ಚಂದ, ಸುಲಲಿತ, ಶೀಘ್ರ, ಅವ್ಯವಹಾರರಹಿತ, ಪಾರದರ್ಶಕ… ಆಹಾ, ಕೇಳಲು ಎಲ್ಲವೂ ಸೊಗಸಾಗಿರುತ್ತದೆ.

ಆದರೆ ಈ ಯಂತ್ರದ ಕೌಶಲವನ್ನು ಆನಂದಿಸಲು ಒಂದು ಸಲ ಅಂಚೆ ಕಚೇರಿಗೆ ಹೋಗಿ ನೋಡಿದರೆ ಕಂಗೆಡುತ್ತೇವೆ. ಒಂದು ಕಡ್ಡಿ ಹಿಡಿದುಕೊಂಡು ಯಂತ್ರವನ್ನು ಕುಟ್ಟುವುದರಲ್ಲಿ ತಲ್ಲೀನರಾದ ಅಂಚೆ ಪಾಲಕರು ಸಿಡಿಮಿಡಿಯಾಗುತ್ತಾರೆ. ಕಾರಣ, ಯಂತ್ರಕ್ಕೆ ಅಂತರ್ಜಾಲದ ಸಂಪರ್ಕ ಸಿಗುವುದಿಲ್ಲ, ‘ಸರ್ವರ್‌ ಎರರ್‌’ ಎಂಬ ಉತ್ತರ ಸಿಗುತ್ತದೆ. ಬಹು ದೂರದಿಂದ ರಿಕ್ಷಾ ಮಾಡಿಕೊಂಡು ವಯೋವೃದ್ಧರು ತಮ್ಮ ಉಳಿತಾಯ ಖಾತೆಗೆ ಪಾವತಿಯಾಗುವ ವೃದ್ಧಾಪ್ಯ ವೇತನ ಪಡೆಯಲು ಬಂದಿರುತ್ತಾರೆ. ವಿದ್ಯುತ್‌ ಬಿಲ್ ಪಾವತಿಗೆ ಅಂದೇ ಕಡೆಯ ದಿನವೆಂದು ಹಣ ತೆಗೆದುಕೊಂಡು ಬಂದವರಿದ್ದಾರೆ. ಉಳಿತಾಯ ಖಾತೆಯಲ್ಲಿರುವ ಹಣ ತೆಗೆದುಕೊಂಡು ಔಷಧಿ ತರಲು ಹೊರಟವರಿದ್ದಾರೆ. ಯಂತ್ರ ಕೈ ಕೊಟ್ಟರೆ ಅವರೆಲ್ಲರೂ ಬಂದ ದಾರಿಗೆ ಸುಂಕವಿಲ್ಲವೆಂದು ಮರಳಿ ಹೋಗಬೇಕು. ನಾಳೆ ಬಂದರೂ ಸರಿಯಾದೀತೆಂದು ಹೇಳುವ ಭರವಸೆ ಅಂಚೆ ಪಾಲಕರಿಗಂತೂ ಇಲ್ಲವೇ ಇಲ್ಲ.

ಇನ್ನು ಈ ಬಯೋಮೆಟ್ರಿಕ್‌ ಸಾಧನದ ಲಾಭಗಳ ಬಗೆಗೆ ಇಲಾಖೆ ಹೇಳಿಕೊಳ್ಳುವ ಪರಿ ನೋಡಿದರೆ ಅದ್ಭುತ, ಅತ್ಯದ್ಭುತ! ರೈಲು, ವಿಮಾನಗಳಿಗೆ ಟಿಕೇಟು ಕಾದಿರಿಸಬಹುದು, ಉಳಿತಾಯ ಖಾತೆಯಲ್ಲಿರುವ ಹಣವನ್ನು ತಮ್ಮ ಸ್ಥಾವರ ದೂರವಾಣಿಯ ಮೂಲಕ ಕುಳಿತಲ್ಲೇ ಬೇಕಾದೆಡೆಗೆ ಕಳುಹಿಸಬಹುದು. ಆದರೆ ತಿಂಗಳಿನ ಬಹುತೇಕ ದಿನಗಳಲ್ಲಿಯೂ ಸಮಸ್ಯೆಯ ಶಿಶುವಾಗಿ ಕೋಮಾ ಸ್ಥಿತಿಯಲ್ಲಿರುವ ಈ ಯಂತ್ರದ ದೌರ್ಬಲ್ಯಗಳ ಬಗೆಗೆ ಯಾರೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲವೆ? ಇದನ್ನು ನಂಬಿ ಜನ ಹೋದರೆ ಒಂದು ದಿನವಾದರೆ ಸರಿ, ಸದಾ ಇದೇ ದುಃಸ್ಥಿತಿಯೆಂದಾದರೆ ಜನರ ಸಹನೆಯ ಪರೀಕ್ಷೆ ಎಂಬ ಪದ ಬಳಸಿದರೆ ತಪ್ಪಾಗುತ್ತದೆಯೆ?

ಹೊಸ ಖಾತೆ ತೆರೆಯುವಾಗ ಆಧಾರ್‌ ಕಾರ್ಡ್‌ ಹಾಜರುಪಡಿಸಿ ಬೆರಳ ಗುರುತು ನೀಡಬೇಕಾಗುತ್ತದೆ. ಅಂಚೆಕಚೇರಿಯ ಯಂತ್ರಕ್ಕೆ ಹತ್ತು ಬೆರಳನ್ನು ಹತ್ತು ಸಲ ಒಡ್ಡಿದಾಗಲೂ ಗುರುತು ಸರಿಯಿಲ್ಲವೆಂದೇ ಹೇಳುತ್ತದೆ. ಹಲವು ಸಲ ಪ್ರಯತ್ನಿಸಿದ ಬಳಿಕ ಅದೃಷ್ಟ ಸರಿಯಿದ್ದರೆ ಅದೇ ಬೆರಳಿನ ಗುರುತು ಸರಿಯಿದೆಯೆಂದು ಒಪ್ಪಿಕೊಳ್ಳುತ್ತದೆ. ಪ್ರತಿಯೊಂದು ಅಂಚೆ ಕಚೇರಿಯ ವ್ಯವಹಾರವೂ ಲೆಕ್ಕಪತ್ರಗಳನ್ನು ಕೈಯಲ್ಲಿ ಬರೆದಿಡುವ ಸಮಯದಲ್ಲಿ ಜನರನ್ನು ಶೋಷಿಸುತ್ತಿರಲಿಲ್ಲ. ಆದರೆ ಶೀಘ್ರ, ತ್ವರಿತ, ಸುಲಲಿತ ಎಂದು ಇಲಾಖೆ ಹೇಳಿಕೊಳ್ಳುವ ಸಾಧನ ಬಂದ ಮೇಲೆ ಅಲ್ಲಿ ಆರ್ಥಿಕ ವ್ಯವಹಾರ ಮಾಡುವವರಿಗೆ ತೊಂದರೆಗಳಾಗುತ್ತಿವೆ.

ಚಂದ್ರಯಾನ ಸಲೀಸಾಗಿ ಕೈಗೊಳ್ಳುವಷ್ಟು ಭಾರತದ ವೈಜ್ಞಾನಿಕ ಕ್ರಾಂತಿ ಮುಂದುವರೆದಿದೆ. ಆದರೆ ಸರಕಾರಿ ಸ್ವಾಮ್ಯದ ದೂರವಾಣಿ ಗೋಪುರದ ಕೆಳಗೆ ನಿಂತರೂ ಕರೆ ಮಾಡಲು ಸಂಕೇತ ಸಿಗದಷ್ಟು ಅಲಕ್ಷ್ಯಕ್ಕೊಳಗಾಗಿದೆ. ಗಣಕೀಕೃತ ಅಂಚೆಕಚೇರಿ ಎಂದು ಹೇಳಿಕೊಳ್ಳುತ್ತಿರುವ ಇಲಾಖೆಯ ಅಧಿಕಾರಿಗಳಿಗೆ ಇದು ನಾಚಿಕೆಗೇಡಿನ ಪರಮಾವಧಿಯಾಗಿದೆ ಎಂಬ ಬಗೆಗೆ ಒಂದಿಷ್ಟಾದರೂ ಪರಿತಾಪವಿರುತ್ತಿದ್ದರೆ ಈ ಯಂತ್ರ ಖಂಡಿತ ಅವ್ಯವಸ್ಥೆಯ ಆಗರವಾಗುತ್ತಿರಲಿಲ್ಲ. ಶತಮಾನಗಳ ಇತಿಹಾಸವಿರುವ ಎಲ್ಲರ ಪ್ರೀತಿಯ, ಅದರಲ್ಲೂ ಗ್ರಾಮೀಣ ಜನರ ಹೃದಯ ಮಿಡಿತವೇ ಆಗಿರುವ ಅಂಚೆ ವ್ಯವಸ್ಥೆ ಹದಗೆಟ್ಟು ಹೋಗುವಲ್ಲಿ ಉನ್ನತ ಅಧಿಕಾರ ವರ್ಗ ಜನಹಿತದ ಬಗೆಗೆ ತಳೆದಿರುವ ಅಗೌರವ, ನಿರಾಸಕ್ತಿಗಳೇ ಮೂಲ ಕಾರಣವೆನಿಸುತ್ತದೆ. ಈ ಸ್ಥಿತಿ ಮುಂದುವರೆದರೆ ಗ್ರಾಮೀಣ ಜನತೆ ಅಂಚೆ ವ್ಯವಹಾರದಿಂದ ದೂರ ಸರಿಯಲು ಇಲಾಖೆಯೇ ರತ್ನಗಂಬಳಿ ಹಾಸಿದಂತಾಗುತ್ತದೆ.

ಪ. ರಾಮಕೃಷ್ಣ ಸಾಸ್ತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ