ಖಾಸಗಿ ರಂಗದತ್ತ ಸರ್ಕಾರದ ದೃಷ್ಟಿ: ವ್ಯವಸ್ಥೆಯ ಲೋಪಕ್ಕೆ ಸಾಕ್ಷಿ

Team Udayavani, Jun 25, 2019, 5:00 AM IST

ಕೇಂದ್ರ ಸರ್ಕಾರವು ತನ್ನ ಕೆಲವು ಪ್ರಮುಖ ಇಲಾಖೆಗಳ ಮುಖ್ಯ ಹುದ್ದೆಗಳಿಗೆ ಖಾಸಗಿ ರಂಗದ ಸಮರ್ಥ ಅಧಿಕಾರಿಗಳನ್ನು ಕರೆಸಿಕೊಳ್ಳಲು ನಿರ್ಧರಿಸುವ ಮೂಲಕ ಒಂದು ಮಹತ್ವದ ಸುಧಾರಣಾ ಕ್ರಮಕ್ಕೆ ಮುಂದಾಗಿದೆ. ಇದರ ಬಗ್ಗೆ ಟೀಕೆ ಕೇಳಿ ಬಂದಿದ್ದರೂ, ಉದ್ದೇಶ ಮತ್ತು ಪರಿಣಾಮದ ಬಗ್ಗೆ ಆಳವಾಗಿ ಚಿಂತಿಸಿದಾಗ ಇಂಥದ್ದೊಂದು ಹೆಜ್ಜೆ ದೇಶದ ಪ್ರಗತಿಗೆ ಅತ್ಯಗತ್ಯವಾಗಿದೆ ಎಂದನಿಸುತ್ತದೆ.

ಸರ್ಕಾರಿ ಉದ್ಯೋಗ ಎಂದರೆ ಅದು ಕಠಿನ ಪರಿಶ್ರಮಕ್ಕಿರುವಂಥದ್ದಲ್ಲ. ಒಂದು ಉದ್ಯೋಗ ಗಿಟ್ಟಿಸಿಕೊಂಡರೆ ಸಾಕು; ಜೀವನ ಭದ್ರವಾದಂತೆ ಎಂದು ಭಾವಿಸುವವರೇ ಹೆಚ್ಚು. ಆದರೆ ಉದ್ಯೋಗ ಪಡೆದುಕೊಂಡ ಬಳಿಕ ದೇಶ ಮತ್ತು ಸಮಾಜದ ಬಗ್ಗೆ ಆಸ್ಥೆ ವಹಿಸಿ ದುಡಿಯುವವರ ಸಂಖ್ಯೆ ಕಡಿಮೆ. ದುಡಿಸುವವರೂ ಆ ಸಾಲಿನಲ್ಲೇ ಇದ್ದಾರೆ. ದೇಶದ ಆಡಳಿತ ವ್ಯವಸ್ಥೆಯೂ ಇದಕ್ಕೆ ಪೂರಕವಾಗಿಯೇ ಇತ್ತು.

ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಏನೆಲ್ಲ ಲಾಬಿ ಮತ್ತು ಕಸರತ್ತು ಮಾಡಲಾಗುತ್ತದೆಯೋ, ಮುಂದೆ ಬಡ್ತಿ ಸಹಿತ ಎಲ್ಲ ಅನುಕೂಲಕ್ಕೂ ಅದೇ ದಾರಿಯನ್ನು ಬಳಸಲಾಗುತ್ತಿತ್ತು. ಇರುವ ಹಕ್ಕು ಮತ್ತು ಇತರ ಸೌಲಭ್ಯಗಳನ್ನು ಬಳಸಿಕೊಂಡು ಸ್ವಯಂ ಪ್ರಗತಿಗೆ ಬಯಸುವ ಸರಕಾರಿ ಉದ್ಯೋಗಿಗಳು ಅತಿಯಾದ ಕಾರಣದಿಂದಲೇ ಇಂದೂ ಜನರಿಗೆ ಕಿರಿಕಿರಿರಹಿತ ಸೇವೆ ಸಿಗದಿರಲು ಪ್ರಮುಖ ಕಾರಣವೆನ್ನಬಹುದು. ಚುರುಕುತನ ಎಂಬುದು ಖಾಸಗಿಗೆ ಮಾತ್ರ, ಅದು ಸರ್ಕಾರಿ ಇಲಾಖೆಗೆ ಹೇಳಿದ್ದಲ್ಲ ಎಂಬ ಹಳೆ ಮನೋಭಾವವೇ ದೇಶ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕಾಣದಿರಲು ಪ್ರಮುಖ ಕಾರಣ ಎಂದು ಹೇಳಬೇಕಾಗುತ್ತದೆ.

ಈಗ ಕೇಂದ್ರ ಸರ್ಕಾರವು ಒಂದು ಹೊಸ ಮತ್ತು ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿದ್ದು, ಅದರ ಮೂಲಕವಾಗಿ ಖಾಸಗಿ ರಂಗದ ಸಾಧಕರು ಮತ್ತು ಪ್ರತಿಭಾನ್ವಿತ ಸಿಬಂದಿಯನ್ನು ಸರ್ಕಾರಿ ಕೆಲಸಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಆರಂಭದಲ್ಲಿ ಇದೊಂದು ವಿಚಿತ್ರ ಕ್ರಮ ಮತ್ತು ಕಾನೂನು ಬಾಹಿರ ಎಂದೆಲ್ಲ ಹೇಳಲಾಗಿತ್ತಾದರೂ, ದೇಶದ ಪ್ರಗತಿಗೆ ಇದು ಅನಿವಾರ್ಯ ಎಂದು ಹೇಳುವವರ ಸಂಖ್ಯೆ ನಿಧಾನವಾಗಿ ಹೆಚ್ಚಾಗಲಾರಂಭಿಸಿದೆ.

ಈ ಕ್ರಮದ ಕುರಿತು ಚಿಂತಿಸುತ್ತಾ ಹೋದರೆ ನಮಗೆ ನಮ್ಮ ವ್ಯವಸ್ಥೆಯ ಕೆಲವು ಲೋಪಗಳು, ಅತಿಯಾದ ಉದಾರತೆ ಎದ್ದು ಕಾಣುತ್ತದೆ. ಜತೆಗೆ ಸರ್ಕಾರಿ ಇಲಾಖೆಯಲ್ಲಿ ಸದ್ಯ ಸೇವೆ ಸಲ್ಲಿಸುವವರ ಪೈಕಿ ಸರ್ಕಾರ ನಿರೀಕ್ಷಿಸುವಷ್ಟು ಪ್ರತಿಭೆಗಳು ಮತ್ತು ಸಮರ್ಥರ ಕೊರತೆ ಇದೆಯೇ? ಇದೆ ಎಂದಾದರೆ ಅಂಥ ಸ್ಥಿತಿ ಯಾಕೆ ನಿರ್ಮಾಣವಾಗಿದೆ? ಭಾರತದಂಥ ವಿಶಾಲ ಮತ್ತು ಪ್ರತಿಭೆಗಳಿರುವ ದೇಶದಲ್ಲಿ ಯಾಕೆ ಈ ಸ್ಥಿತಿಯಿದೆ? ಸರ್ಕಾರಿ ಇಲಾಖೆಯಲ್ಲಿಲ್ಲದ ಸಮರ್ಥರು ಖಾಸಗಿಯವರಿಗೆ ಹೇಗೆ ಸಿಕ್ಕಿದರು ಮುಂತಾದ ಪ್ರಶ್ನೆಗಳು ಮೂಡದೆ ಇರುವುದಿಲ್ಲ. ಅದನ್ನು ಮತ್ತಷ್ಟು ವಿಮರ್ಶಿಸುತ್ತಾ ಹೋದಾಗ ನಮ್ಮ ವ್ಯವಸ್ಥೆಯತ್ತಲೇ ಬೆರಳು ತಿರುಗಿ ನಿಲ್ಲುತ್ತದೆ.

ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ವಿಷಯದಲ್ಲಿ ಅತಿಯಾದ ಲಾಬಿ ಮತ್ತು ಮೀಸಲಾತಿ ಕಾರಣದಿಂದಾಗಿ ಒಂದು ವರ್ಗದ ಪ್ರತಿಭಾನ್ವಿತರು ಅದರಿಂದ ದೂರವೇ ಇರುತ್ತಾರೆ. ಆಯ್ಕೆಯಾಗುವ ಅರ್ಹತೆ ಇಲ್ಲದವರೇ ಲಾಬಿ ನಡೆಸುತ್ತಾರೆ ಎಂಬುದು ವಾಸ್ತವ. ಮತ್ತೂಂದೆಡೆ ಲಾಬಿಗೆ ಮಣಿಯುವ ವ್ಯವಸ್ಥೆ ಜೀವಂತವಿರುವುದು ಸರಕಾರಿ ಸಿಬಂದಿಯ ಕಾರ್ಯಕ್ಷಮತೆ ಕಡಿಮೆಯಾಗಲು ಪ್ರಮುಖ ಕಾರಣ ಎನ್ನಬೇಕಾಗುತ್ತದೆ.

ಪ್ರತಿಭೆಗಳಿಗೆ ಕೊರತೆಯಿಲ್ಲ: ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂಬುದಕ್ಕೆ ಖಾಸಗಿ ರಂಗ ಸಾಧಿಸಿರುವ ಪ್ರಗತಿ ಮತ್ತು ಅದರಲ್ಲಿರುವ ಪ್ರತಿಭಾನ್ವಿತ ಸಿಬಂದಿ ಉತ್ತಮ ಸಾಕ್ಷಿ. ಇಂಥವರನ್ನು ತನ್ನ ಸೇವೆಗೆ ಬಳಸಿಕೊಳ್ಳಲು ಸರ್ಕಾರಿ ವ್ಯವಸ್ಥೆ ವಿಫ‌ಲವಾಗಿದೆ ಎಂಬುದೇ ದೇಶದ ಒಟ್ಟು ಹಿನ್ನಡೆಗೆ ಕಾರಣ. ಅತಿಯಾದ ಮೀಸಲಾತಿಯಿಂದಾಗಿ ಮೇಲ್ವರ್ಗದ ಪ್ರತಿಭಾನ್ವಿತರಿಗೆ ಸರ್ಕಾರಿ ಉದ್ಯೋಗ ಎಂಬುದು ಗಗನಕುಸುಮವಾಗುತ್ತದೆ. ಅವರು ಸರ್ಕಾರಿ ಉದ್ಯೋಗದತ್ತ ದೃಷ್ಟಿ ಹರಿಸದೆ ಖಾಸಗಿಯತ್ತಲೇ ಗಮನ ಕೇಂದ್ರೀಕರಿಸುತ್ತಾರೆ. ಆದ್ದರಿಂದ ಈಗ ಖಾಸಗಿ ರಂಗದಲ್ಲಿ ಪ್ರತಿಭೆಯೇ ಉದ್ಯೋಗಕ್ಕೆ ಮಾನದಂಡವಾಗಿದೆ. ಜತೆಗೆ ಕಠಿನ ಪರಿಶ್ರಮವೂ ಅಗತ್ಯವಾಗಿದೆ.

ಖಾಸಗಿಗೂ ಮೀಸಲಾತಿ ಬೇಡಿಕೆ: ಕೆಲವು ವರ್ಷದ ಹಿಂದೆ ಖಾಸಗಿ ರಂಗಕ್ಕೂ ಮೀಸಲಾತಿಯನ್ನು ವಿಸ್ತರಿಸಬೇಕು ಎಂಬ ಆಗ್ರಹ ಬಲವಾಗಿ ಕೇಳಿ ಬಂದಿತ್ತು. ಮಿತಿಮೀರಿದ ಮೀಸಲಾತಿ ಕಾರಣದಿಂದ ಸರ್ಕಾರಿ ಆಡಳಿತ ವ್ಯವಸ್ಥೆ ದುರ್ಬಲವಾಗುತ್ತಿರುವ ಹೊತ್ತಿನಲ್ಲಿಯೇ ಖಾಸಗಿಯಲ್ಲೂ ಮೀಸಲಾತಿ ಬೇಕು ಎಂಬ ಆಗ್ರಹ ಕೇಳಿ ಬಂದಿರುವುದು ಆತಂಕಕಾರಿಯೇ ಆಗಿತ್ತು. ಆದರೆ ಖಾಸಗಿ ರಂಗದವರ ಸ್ಪಂದನೆ ಋಣಾತ್ಮಕವಾಗಿದ್ದ ಕಾರಣ ಸರ್ಕಾರಕ್ಕೆ ಇದನ್ನು ನಿರೀಕ್ಷಿತ ವೇಗದಲ್ಲಿ ಜಾರಿಗೆ ತರಲು ಸಾಧ್ಯವಾಗಲಿಲ್ಲ. ಸದ್ಯಕ್ಕೆ ಅಂಥ ಬೇಡಿಕೆಯ ದನಿ ಕ್ಷೀಣವಾಗಿದೆಯಾದರೂ ಮರೆಯಾಗಿದೆ ಎಂದು ಹೇಳುವಂತಿಲ್ಲ.

ದೇಶಕ್ಕೆ ಜಾತಿ ಆಧಾರಿತ ಮೀಸಲಾತಿಯು ಇನ್ನೂ ಬೇಕೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಅಂಗವೈಕಲ್ಯ, ಆರ್ಥಿಕ ಅಶಕ್ತತೆ ಮುಂತಾದ ಸಮರ್ಥನೀಯ ಕಾರಣಗಳಿಗೆ ಮೀಸಲಾತಿ ಮುಂದುವರಿಸಬಹುದಾದರೂ, ಅದು ಸೀಮಿತ ಹುದ್ದೆಗಳಿಗೆ ಮಾತ್ರ ಅನ್ವಯವಾಗುವಂತಿರಬೇಕು. ದೇಶದ ಭಾವೀ ಜನಾಂಗವನ್ನು ರೂಪಿಸುವ ಶಿಕ್ಷಣ ಇಲಾಖೆಯ ಬೋಧಕ ವರ್ಗ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂಥ ಹುದ್ದೆಗಳು, ಅತಿಯಾದ ಜವಾಬ್ದಾರಿ ಇರುವಂಥ ಹುದ್ದೆಗಳು ಮುಂತಾದವುಗಳಿಗೆ ಮೀಸಲಾತಿ ಮೂಲಕದ ನೇಮಕಾತಿ ಎಷ್ಟು ಅಗತ್ಯ ಎಂಬ ಪ್ರಶ್ನೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಪ್ರತಿಭೆಯೇ ಮಾನದಂಡವಾಗಲಿ: ಮೀಸಲಾತಿಯನ್ನು ನೇಮಕಾತಿಗೆ ಮಾತ್ರ ಸೀಮಿತಗೊಳಿಸಬೇಕೇ ಹೊರತು ಮುಂದಿನ ಬಡ್ತಿ ಪ್ರಕ್ರಿಯೆಯಲ್ಲಿ ಮೀಸಲಾತಿ, ಹಿರಿತನ ಮುಂತಾದವುಗಳಿಗೆ ಆದ್ಯತೆ ಬೇಕು ಎಂದು ಅನಿಸುತ್ತಿಲ್ಲ. ಬಡ್ತಿಗೆ ಹಿರಿತನಕ್ಕಿಂತ ಸಾಧನೆ ಹಾಗೂ ಪ್ರತಿಭೆ ಮುಖ್ಯವಾಗಬೇಕು. ಪ್ರಮುಖ ಹುದ್ದೆಗಳನ್ನು ಬಡ್ತಿ ಮೂಲಕವೇ ಭರ್ತಿ ಮಾಡುವ ವ್ಯವಸ್ಥೆಯೂ ತಪ್ಪಬೇಕು. ಅವುಗಳಿಗೆ ಸೂಕ್ತ ಪರೀಕ್ಷೆ ನಡೆಸಿಯೇ ನೇಮಕಾತಿ ಮಾಡುವುದು ಒಳಿತು. ಅಂಥ ಪರೀಕ್ಷೆ ಬರೆಯಲು ಹೊಸಬರೊಂದಿಗೆ ಹಾಲಿ ಉದ್ಯೋಗಿಗಳಿಗೂ ಅವಕಾಶ ನೀಡಬಹುದು. ಒಟ್ಟಿನಲ್ಲಿ ಆ ಹುದ್ದೆಗೆ ಸೂಕ್ತ ಸಮರ್ಥ ವ್ಯಕ್ತಿಯ ನೇಮಕವಾಗುವುದು ಉದ್ದೇಶವಾಗಿರಬೇಕು. ಹಿರಿತನದಿಂದಲೇ ಬಡ್ತಿ ಪಡೆಯುವ ಕಾರಣದಿಂದ ಕೆಲವು ಪ್ರತಿಭೆಗಳಿಗೆ ಜವಾಬ್ದಾರಿಯುತ ಹುದ್ದೆಗಳು ಕೈತಪ್ಪುವ ಸಾಧ್ಯತೆ ಇರುವುದು ಇಡೀ ವ್ಯವಸ್ಥೆಯ ಹಿತದೃಷ್ಟಿಯಿಂದ ನೋಡಿದರೆ ಬೇಸರದ ಸಂಗತಿಯೇ.

ಕೈಬಿಡುವ ಪದ್ಧತಿಯೂ ಅಗತ್ಯ: ಒಮ್ಮೆ ಉದ್ಯೋಗಕ್ಕೆ ಸೇರಿದರೆ ನಾವು ಸುರಕ್ಷಿತ ಎಂಬ ಭಾವನೆ ಸರ್ಕಾರಿ ನೌಕರರಲ್ಲಿದ್ದು, ಅದನ್ನು ಬದಲಾಯಿಸುವ ವ್ಯವಸ್ಥೆ ಅಗತ್ಯವಿದೆ. ಸಿಬಂದಿಗೆ ಕಾಲಕಾಲಕ್ಕೆ ಅಗತ್ಯ ತರಬೇತಿ ನೀಡುವುದು, ಅವರ ಕ್ಷಮತೆಯನ್ನು ಪರಿಶೀಲಿಸುವುದು ಮುಂತಾದುದು ಈಗಿನ ತುರ್ತು ಅಗತ್ಯ. ನಿರೀಕ್ಷಿತ ರೀತಿಯಲ್ಲಿ ಸಾಧನೆ ಮಾಡದಿದ್ದರೆ ಅಥವಾ ತೃಪ್ತಿಕರವಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸದಿದ್ದರೆ ಉದ್ಯೋಗದಿಂದ ಕೈಬಿಡುವ ಪದ್ಧತಿಯನ್ನೂ ಜಾರಿಗೆ ತರುವ ಅಗತ್ಯ ಇದೆ ಎಂದನಿಸುತ್ತದೆ. ಅಂಥ ಭೀತಿಯಿದ್ದರೆ ಇಡೀ ವ್ಯವಸ್ಥೆಯ ರೂಪವೇ ಬದಲಾಗುವ ಎಲ್ಲ ಸಾಧ್ಯತೆಯೂ ಇದೆ. ಸರ್ಕಾರಿ ಇಲಾಖೆ ಜಡ್ಡುಗಟ್ಟಲು ಇಂಥ ಭೀತಿಯಿಲ್ಲದಿರುವುದು ಒಂದು ಪ್ರಮುಖ ಕಾರಣ. ಜತೆಗೆ ಖಾಸಗಿ ವ್ಯವಸ್ಥೆ ಬಲಿಷ್ಠವಾಗಿರಲು ಇಂಥ ಭೀತಿ ಇರುವುದು ಕಾರಣ. ಇದು ಸರಕಾರಿ ಮತ್ತು ಖಾಸಗಿಯ ನಡುವಿನ ಒಂದು ಪ್ರಮುಖ ವ್ಯತ್ಯಾಸ.

ಬದಲಾಗಲಿ ನೇಮಕಾತಿ ವ್ಯವಸ್ಥೆ: ಸದ್ಯ ಜಾರಿಯಲ್ಲಿರುವ ನೇಮಕಾತಿ ವ್ಯವಸ್ಥೆಯಲ್ಲಿ ಲಿಖೀತ ಮತ್ತು ಮೌಖೀಕ ಪರೀಕ್ಷೆ ಎಂಬುದು ಒಂದು ಆರಂಭಿಕ ಹೆಜ್ಜೆ ಮಾತ್ರ. ಇಲ್ಲಿ ಗರಿಷ್ಠ ಸಾಧನೆ ಮಾಡಿದ್ದರೂ ನೇಮಕಾತಿ ಖಚಿತವೇನಲ್ಲ. ನೇಮಕಾತಿ ಅಧಿಕಾರಿಗಳಿಗೆ ದೊಡ್ಡ ಮೊತ್ತದ ಲಂಚ ನೀಡದಿದ್ದರೆ ಉದ್ಯೋಗ ಕನಸಿನ ಮಾತೇ ಆಗುತ್ತದೆ. ಎಷ್ಟು ನಿಯಂತ್ರಿಸಿದ್ದೇವೆ ಎಂದು ಸರ್ಕಾರ ಹೇಳಿಕೊಂಡರೂ ಇಂಥ ಲಂಚದ ಕಥೆ ಇನ್ನೂ ಬಲಿಷ್ಠವಾಗಿಯೇ ಇದೆ. ಇದರಿಂದಾಗಿ ಎಷ್ಟೋ ಪ್ರತಿಭೆಗಳು ಸರ್ಕಾರಿ ಉದ್ಯೋಗದ ಬಗ್ಗೆ ಆಸೆ ಹೊಂದಿದ್ದರೂ, ಅಲ್ಲಿನ ನೇಮಕಾತಿ ವ್ಯವಸ್ಥೆಯಿಂದ ಜುಗುಪ್ಸೆಪಟ್ಟು ಖಾಸಗಿಯತ್ತ ಮುಖ ಮಾಡುತ್ತಾರೆ. ಆದ್ದರಿಂದ ನೇಮಕಾತಿ ವ್ಯವಸ್ಥೆಯು ಬದಲಾಗಿ, ಪ್ರತಿಭೆಯನ್ನೇ ಮಾನದಂಡ ಮಾಡಿಕೊಳ್ಳುವ ಮತ್ತು ಸಮರ್ಥರನ್ನೇ ಆಯ್ಕೆ ಮಾಡುವಂಥ ದಿನ ಹತ್ತಿರ ಬರಬೇಕಾಗಿದೆ.

ಏನೇ ಆದರೂ ಕೇಂದ್ರ ಸರ್ಕಾರ ಮಾಡುತ್ತಿರುವ ಇಂಥ ಕೆಲವು ಕ್ರಾಂತಿಕಾರಿ ಬದಲಾವಣೆ ಮತ್ತು ಇಡುತ್ತಿರುವ ಹೆಜ್ಜೆಗಳು ನಾವು ನಮ್ಮ ವ್ಯವಸ್ಥೆಯ ಬಗ್ಗೆಯೇ ಪ್ರಶ್ನಿಸುವಂತೆ ಮಾಡಿದೆ. ಪ್ರತಿಭಾವಂತರಿಗೆ ದೇಶದಲ್ಲಿ ಅಚ್ಚೇದಿನ್‌ ಬರುತ್ತದೋ ಎಂಬ ಒಂದು ನಿರೀಕ್ಷೆ ಮೂಡಲು ಕೇಂದ್ರದ ಈ ಚಿಂತನೆ ಕಾರಣವಾಗಿದೆ.

ಪುತ್ತಿಗೆ ಪದ್ಮನಾಭ ರೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ