ಚುನಾವಣೆಯಿಂದ ಕಾಂಗ್ರೆಸ್‌ ಕಲಿಯಬೇಕಾದ ಪಾಠ 

Team Udayavani, May 27, 2019, 6:10 AM IST

ರಾಹುಲ್‌ ಗಾಂಧಿ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಹೊಂದಲು ಪ್ರತಿ ಬೂತ್‌ನಲ್ಲೂ ಕನಿಷ್ಠ ಹತ್ತು ಜನ ಶಕ್ತಿ ಕಾರ್ಯಕರ್ತರ ಪಡೆ ರಚಿಸಬೇಕೆಂಬ ಮಹತ್ವದ ಯೋಜನೆಯಲ್ಲಿಯೂ ಕಾಂಗ್ರೆಸ್‌ಗೆ ಕ್ಯಾನ್ಸರ್‌ನಂತೆ ಕಾಡುತ್ತಿರುವ ಕುಟುಂಬ ರಾಜಕಾರಣವೇ ಪ್ರಾಬಲ್ಯ ಮೆರೆದಿರುವುದನ್ನು ರಾಹುಲ್‌ ಗಾಂಧಿ ಗಮನಿಸಲೇ ಇಲ್ಲವೋ ಅಥವಾ ಗಮನಿಸಿಯೂ ವಂಶಾಡಳಿತವನ್ನು ಪೋಷಿಸಲು ಮೌನ ವಹಿಸಿದರೋ ಗೊತ್ತಿಲ್ಲ.

ಲೋಕಸಭೆ ಚುನಾವಣೆ ಫ‌ಲಿತಾಂಶ ಪ್ರಸ್ತುತ ರಾಷ್ಟ್ರ ರಾಜಕಾರಣದಲ್ಲಿ ಹಲವಾರು ಆಯಾಮದಲ್ಲಿ ವಿಶ್ಲೇಷಣೆಗೆ ಕಾರಣವಾಗಿದೆ. ಅತಿ ಸರಳವಾಗಿ ಹೇಳಬೇಕೆಂದರೆ ಬಿಜೆಪಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಭೂತಪೂರ್ವ ಸಾಧನೆ ಮಾಡಲು ಮೋದಿ ಅಲೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲವರಿಗೆ ಇವಿಎಂಗಳ ಮೇಲೆ ಅನುಮಾನವೂ ಮುಂದುವರೆದಿದೆ.

ಮೋದಿ ಅಲೆಗೆ ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೈನ್ಯ ನಡೆಸಿದ ಬಾಲಾಕೋಟ್‌ ಏರ್‌ಸ್ಟ್ರೈಕ್‌ ಕಾರಣ ಎನ್ನಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ಚುನಾವಣೆಯಲ್ಲಿ ತಮ್ಮ ಐದು ವರ್ಷದ ಸಾಧನೆಗಳ ಬದಲು ರಾಷ್ಟ್ರೀಯ ಭದ್ರತೆ, ದೇಶದ ಏಕತೆ, ಬಲಿಷ್ಠ ನಾಯಕತ್ವದ ಬಗ್ಗೆಯೇ ಹೆಚ್ಚು ಪ್ರಸ್ತಾಪ ಮಾಡುವ ಮೂಲಕ ದೇಶದ ಜನರನ್ನು ಭಾವನಾತ್ಮಕ ವಿಷಯಗಳ ಮೂಲಕವೇ ಹೆಚ್ಚು ಸೆಳೆಯುವ ಪ್ರಯತ್ನ ಮಾಡಿದರು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಆದರೆ, ಇದಕ್ಕೆ ಪೂರಕವಾಗಿ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸುವ ಕೆಲಸವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವ್ಯವಸ್ಥಿತವಾಗಿ ಮಾಡಿರುವುದು ಅಷ್ಟೇ ಸತ್ಯ. ನಮ್ಮದು ಬಲಿಷ್ಠ ರಾಷ್ಟ್ರ, ವಿಶ್ವದ ಯಾವುದೇ ಶಕ್ತಿಯನ್ನೂ ನಾವು ಸಮರ್ಥವಾಗಿ ಎದುರಿಸುತ್ತೇವೆ ಎಂದು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಭಾಷಣಗಳ ಮೂಲಕ ಬಿಂಬಿಸುವ ಪ್ರಯತ್ನ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಅದನ್ನು ನೇರವಾಗಿ ತಮ್ಮ ಪಕ್ಷದ ಕಾರ್ಯಕರ್ತರಿಗೂ ತಲುಪಿಸಿ ಅವರ ಮೂಲಕ ಮತದಾರನ ಮನಸಿಗೂ ತಾಕುವಂತೆ ಮಾಡಿದರು. ಕಾರ್ಯಕರ್ತರಿಗೆ ಸಂದೇಶ ರವಾನಿಸುವ ಕೆಲಸವನ್ನು ಅಮಿತ್‌ ಶಾ ಮಾಡಿದರು.ಅಷ್ಟೇ ಮಾಡಿ ಕೈ ಕಟ್ಟಿ ಕೂಡಲಿಲ್ಲ.

ಅವಕಾಶ ಸಿಕ್ಕಾಗಲೆಲ್ಲ ಸ್ವತಃ ಪ್ರಧಾನಿ ನರೇಂದ್ರ ಮೋದಿ ಬೂತ್‌ ಮಟ್ಟದ ಕಾರ್ಯಕರ್ತರೊಂದಿಗೆ ನೇರ ಸಂವಾದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅವರಲ್ಲಿ ಪಕ್ಷ ಹಾಗೂ ದೇಶದ ಬಗ್ಗೆ ಅಭಿಮಾನ ಮೂಡುವಂತೆ ಮಾಡಿದ್ದಲ್ಲದೇ ಯಾರ ಮುಲಾಜಿಗೂ ಕಾಯದೇ ತನ್ನ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಪಕ್ಷದ ಬೇರುಗಳನ್ನು ವಿಸ್ತರಿಸುವ ಹಾಗೂ ಗಟ್ಟಿಗೊಳಿಸುವ ಯತ್ನ ನಡೆಸಿದರು.

ಪ್ರತಿ ಬೂತ್‌ನಲ್ಲಿಯೂ ಮತದಾರರ ಪಟ್ಟಿಯ ಪುಟಕ್ಕೊಬ್ಬ ಪ್ರಮುಖರನ್ನು ನೇಮಿಸಿ, ಅವರ ಮೂಲಕ ಕೇಂದ್ರ ಸರ್ಕಾರದ ಸಾಧನೆ ಹಾಗೂ ದೇಶಕ್ಕೆ ಬಿಜೆಪಿ ಮತ್ತು ಮೋದಿಯ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಯಿತು. ಅದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳನ್ನು ಅಷ್ಟೇ ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿಯ ಯಶಸ್ವಿಯಾಯಿತು. ಇದು ಮತ್ತೂಮ್ಮೆ ಮೋದಿ ಎನ್ನುವ ಬಿಜೆಪಿಯ ಕೂಗಿಗೆ ದೇಶದ ಜನರೂ ಧ್ವನಿಗೂಡಿಸುವಂತಾಯಿತು.

ಇದಕ್ಕೆ ಪ್ರತಿಯಾಗಿ 130 ವರ್ಷ ಇತಿಹಾಸವಿರುವ ಕಾಂಗ್ರೆಸ್‌ ತಳ ಮಟ್ಟದಲ್ಲಿ ಪಕ್ಷವನ್ನು ಗಂಭೀರವಾಗಿ ಕಟ್ಟುವ ಬದಲಿಗೆ ಕೇಂದ್ರ ಸರ್ಕಾರ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡುವುದರಲ್ಲಿಯೇ ಸಮಯ ಕಳೆಯಿತು ಎನಿಸುತ್ತದೆ.

ರಾಹುಲ್‌ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಕಾಲಿಗೆ ಚಕ್ರ ಕಟ್ಟಿಕೊಂಡು ದೇಶ ಸುತ್ತಿದರು. ನಾಯಕರಿಗಿಂತ ಕಾರ್ಯಕರ್ತರು ಮುಖ್ಯ ಎಂದು ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಇಟ್ಟುಕೊಳ್ಳಲು ಶಕ್ತಿ ಯೋಜನೆ ಜಾರಿಗೆ ತಂದರು. ಶಕ್ತಿ ಯೋಜನೆಯಲ್ಲಿ ರಾಷ್ಟ್ರದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ನೇಮಿಸಿ ಕರ್ನಾಟಕ ನಂಬರ್‌ ಒನ್‌ ಸ್ಥಾನದಲ್ಲಿ ಕಾಣಿಸಿತು. ಆದರೆ, ರಾಹುಲ್‌ ಗಾಂಧಿ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಹೊಂದಲು ಪ್ರತಿ ಬೂತ್‌ನಲ್ಲೂ ಕನಿಷ್ಠ ಹತ್ತು ಜನ ಶಕ್ತಿ ಕಾರ್ಯಕರ್ತರ ಪಡೆ ರಚಿಸಬೇಕೆಂಬ ಮಹತ್ವದ ಯೋಜನೆಯಲ್ಲಿಯೂ ಕಾಂಗ್ರೆಸ್‌ಗೆ ಕ್ಯಾನ್ಸರ್‌ನಂತೆ ಕಾಡುತ್ತಿರುವ ಕುಟುಂಬ ರಾಜಕಾರಣವೇ ಪ್ರಾಬಲ್ಯ ಮೆರೆದಿರುವುದು ಕಾರ್ಯಕರ್ತರಿಗೆ ರೆಡಿಮೇಡ್‌ ಸಂದೇಶ ಕಳುಹಿಸುವ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಗಮನಿಸಲೇ ಇಲ್ಲವೋ ಅಥವಾ ಗಮನಿಸಿಯೂ ವಂಶಾಡಳಿತವನ್ನು ಪೋಷಿಸಲು ಮೌನ ವಹಿಸಿದರೋ ಗೊತ್ತಿಲ್ಲ.

2019ರ ಲೋಕಸಭೆ ಚುನಾವಣೆಯ ಫ‌ಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪ್ರಮುಖವಾಗಿ ದೇಶದ ಜನತೆ ಮೂರು ಅಂಶಗಳ ಬಗ್ಗೆ ತಮ್ಮ ಮತಗಳ ಮೂಲಕ ತಿರಸ್ಕಾರದ ಸಂದೇಶ ರವಾನಿಸಿದ್ದಾರೆ ಎಂಬ ಅಂಶ ಗೋಚರಿಸುತ್ತದೆ.

ಕುಟುಂಬ ರಾಜಕಾರಣ, ಜಾತಿವಾದ ಹಾಗೂ ಓಲೈಕೆ ರಾಜಕಾರಣವನ್ನು ಮತದಾರರು ಗಂಭೀರವಾಗಿ ಪರಿಗಣಿಸಿದ ಅದರ ವಿರುದ್ಧದ ತಮ್ಮ ಅಸಮಾಧಾನವನ್ನು ಆ ವ್ಯವಸ್ಥೆಯ ವಿರೋಧಿ ಮತಗಳಾಗಿ ಚಲಾಯಿಸಿದ್ದಾರೆ ಎಂದೆನಿಸುತ್ತದೆ. ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಎನ್ನುವುದು ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು ಬೂತ್‌ ಮಟ್ಟದ ಕಾರ್ಯಕರ್ತರ ನೇಮಕದವರೆಗೂ ಹಾಸುಹೊಕ್ಕಾಗಿದ್ದು, ಮತದಾರನನ್ನು ತಲುಪಿ ಕಾಂಗ್ರೆಸ್‌ ಸಾಧನೆ ಹಾಗೂ ಬಿಜೆಪಿ ವೈಫ‌ಲ್ಯವನ್ನು ಮುಟ್ಟಿಸುವ ಕೆಲಸ ಮಾಡಲು ನಿಜವಾದ ಕಾರ್ಯಕರ್ತರು ಬೂತ್‌ಮಟ್ಟದಲ್ಲಿ ಇಲ್ಲದಂತಾಯಿತು.

ಕುಟುಂಬ ರಾಜಕಾರಣವನ್ನು ಮತದಾರ ಸಂಪೂರ್ಣ ತಳ್ಳಿ ಹಾಕದಿದ್ದರೂ, ಅದು ಅತಿಯಾದರೆ, ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಸೋಲಿನಲ್ಲಿ ಎದ್ದು ಕಾಣಿಸುತ್ತದೆ.

ಜಾತಿ ರಾಜಕಾರಣದ ವಿಷಯದಲ್ಲಿಯೂ ಮತದಾರ ಮುಖ ತಿರುವಿ ನಿಂತಿದ್ದಾರೆ ಎನಿಸುತ್ತಿದೆ. ವಿಶೇಷವಾಗಿ ದೇಶದ ಶೇಕಡಾ 35ರಷ್ಟಿರುವ ಯುವ ಸಮುದಾಯ ಜಾತಿ ಮತ್ತು ಈಗಿರುವ ಮೀಸಲಾತಿ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹೊಂದಿದೆ ಎಂಬ ಸೂಕ್ಷ್ಮವನ್ನೂ ಕಾಂಗ್ರೆಸ್‌ ಪಕ್ಷ ಗಂಭೀರವಾಗಿ ಪರಾಮರ್ಶೆ ಮಾಡಿಕೊಳ್ಳಬೇಕಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ಮೋದಿ ಉದ್ಯೋಗ ಸೃಷ್ಟಿ ಮಾಡಿಲ್ಲ ಎಂಬ ಕಾಂಗ್ರೆಸ್‌ನ ಗಂಭೀರ ಆರೋಪವನ್ನೂ ಯುವ ಸಮುದಾಯ ಪರಿಗಣನೆಗೆ ತೆಗೆದುಕೊಂಡಂತೆ ಕಾಣುತ್ತಿಲ್ಲ. ಪದವಿ ಪಡೆದರೂ ಪಕೋಡಾ ಮಾರಿ ಬದುಕಿ, ಇನ್ನೊಬ್ಬರ ಬಳಿ ಉದ್ಯೋಗಕ್ಕೆ ಕೈ ಚಾಚುವ ಬದಲು ನೀನೇ ಉದ್ಯಮಿಯಾಗು ಎನ್ನುವ ಮಾತು ಯುವ ಸಮುದಾಯಕ್ಕೆ ಹೆಚ್ಚು ಆಪ್ತವಾಗಿದೆ ಎನಿಸುತ್ತದೆ. ಅಲ್ಲದೇ ರ್‍ಯಾಂಕ್‌ ಗಳಿಸಿದರೂ, ಜಾತಿ, ಮೀಸಲಾತಿ ಕಾರಣದಿಂದ ಉದ್ಯೋಗ ವಂಚಿತರಾಗುತ್ತಿದ್ದೇವೆ ಎಂಬ ಭಾವನೆ ಮೇಲ್ವರ್ಗದ ಯುವಕರಲ್ಲಿ ಮೂಡಿದಂತಿದೆ. ಏಕೆಂದರೆ ಸ್ವಾತಂತ್ರÂ ಬಂದು ಏಳು ದಶಕ ಕಳೆದರೂ ಈಗಿರುವ ಮೀಸಲಾತಿ ವ್ಯವಸ್ಥೆಯಿಂದ ದಲಿತರು ಹಾಗೂ ತುಳಿತಕ್ಕೊಳಗಾದ ಹಿಂದುಳಿದ ವರ್ಗಗಳನ್ನು ಸಾಮಾಜಿಕವಾಗಿ ಮೇಲೆತ್ತಲು ಸಾಧ್ಯವಾಗಿಲ್ಲವೆಂದರೆ, ಈ ವ್ಯವಸ್ಥೆಯಲ್ಲಿ ಏನೋ ಲೋಪವಿದೆ ಎಂಬ ಭಾವನೆ ಇದ್ದಂತಿದೆ. ಬಿಜೆಪಿಯವರ ಮೀಸಲಾತಿ ಹಾಗೂ ಸಂವಿಧಾನ ಬದಲಾಯಿಸುತ್ತೇವೆ ಎಂಬ ಹೇಳಿಕೆಗಳು ಯುವ ಸಮುದಾಯ ಆ ಪಕ್ಷದ ಹೆಚ್ಚು ಆಕರ್ಷಿತರಾಗಲು ಕಾರಣವೂ ಇರಬಹುದು. ಮೀಸಲಾತಿ ವ್ಯವಸ್ಥೆಯನ್ನು ತಕ್ಷಣವೇ ತೆಗೆದು ಹಾಕುವುದು ಪರಿಹಾರವಲ್ಲವಾದರೂ, ಹಾಲಿ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿ ಮೀಸಲಾತಿಯಲ್ಲಿಯೇ ಅನ್ಯಾಯಕ್ಕೊಳಗಾಗುತ್ತಿರುವವರಿಗೆ ಅನುಕೂಲ ಕಲ್ಪಿಸುವ ಕಡೆಗಾದರೂ ಗಮನ ಹರಿಸುವ ಪ್ರಯತ್ನವಾಗಬೇಕೆನಿಸುತ್ತದೆ.

ಇನ್ನು ಓಲೈಕೆ ರಾಜಕಾರಣವೂ ಕಾಂಗ್ರೆಸ್‌ಗೆ ಮುಳುವಾದಂತೆ ಕಾಣಿಸುತ್ತದೆ. ಆರಂಭದಿಂದಲೂ ಕಾಂಗ್ರೆಸ್‌ ದಲಿತರು, ಹಿಂದುಳಿದವರು ಹಾಗೂ ಅಲ್ಪ ಸಂಖ್ಯಾತರು ತನ್ನ ಮತ ಬ್ಯಾಂಕ್‌ ಎಂದು ಅವರನ್ನೇ ಓಲೈಸಿಕೊಂಡು ಬರುತ್ತಿರುವ ಮನಸ್ಥಿತಿಯ ಬಗ್ಗೆ ಎಲ್ಲದರಲ್ಲೂ ನಿರ್ಣಾಯಕ ಪಾತ್ರ ವಹಿಸುವ ಮೇಲ್ವರ್ಗದವರ ಅಸಹನೆಗೆ ಕಾರಣವಾದಂತಿದೆ. ಅಲ್ಲದೇ ಓಲೈಕೆಗೆ ಬಲಿಯಾಗುತ್ತಿರುವ ದಲಿತ ಹಾಗೂ ಅಲ್ಪ ಸಂಖ್ಯಾತ ಸಮುದಾಯಗಳೂ ನಿರೀಕ್ಷಿತ ಮಟ್ಟದಲ್ಲಿ ಸಾಮಾಜಿಕ ಹಾಗೂ ರಾಜಕೀಯವಾಗಿ ಪ್ರಾತಿನಿಧ್ಯ ಪಡೆಯದಿರುವುದು ಕಾಂಗ್ರೆಸ್‌ನ ನಡವಳಿಕೆಯ ಬಗ್ಗೆ ಅವರೂ ಭ್ರಮನಿರಸನಗೊಂಡಂತೆ ಕಾಣುತ್ತಿದೆ.

ಕಾಂಗ್ರೆಸ್‌ ಪಕ್ಷ ಗಂಭೀರವಾಗಿ ಆಲೋಚಿಸಬೇಕಾದ ಇನ್ನೊಂದು ಸಂಗತಿಯೆಂದರೆ, ಅಧಿಕಾರಕ್ಕಾಗಿ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು. ಇದು ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ಇರುವ ರಾಷ್ಟ್ರೀಯ ಪಕ್ಷದ ಮಾನ್ಯತೆಯನ್ನೇ ಕಳೆದುಕೊಳ್ಳುವ ಹಂತಕ್ಕೆ ತೆಗೆದುಕೊಂಡು ಹೋದರೂ ಆಶ್ಚರ್ಯವಿಲ್ಲ. ಈ ಚುನಾವಣೆಯಲ್ಲಿ 6 ರಾಜ್ಯಗಳಲ್ಲಿ ಶೂನ್ಯ ಸಾಧನೆ, ಹದಿನೇಳು ರಾಜ್ಯಗಳಲ್ಲಿ ಒಂದಂಕಿ ಪಡೆದಿರುವುದು ಮೈತ್ರಿಯ ಫ‌ಲವೇ ಎನಿಸುತ್ತಿದೆ. ಇತಿಹಾಸದಲ್ಲಿ ಕಾಂಗ್ರೆಸ್‌ ಮಾಡಿರುವ ತಪ್ಪುಗಳಿಂದ ಉತ್ತರ ಪ್ರದೇಶ, ಬಿಹಾರ್‌, ಪಶ್ಚಿಮಬಂಗಾಳ, ಓಡಿಶಾದಂತಹ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಗೊಂಡು ಕಾಂಗ್ರೆಸ್‌ಗೆ ಅಸ್ತಿತ್ವ ಇಲ್ಲದಂತೆ ಮಾಡಿವೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿಯೂ ಅದೇ ಪರಿಸ್ಥಿತಿ ಮುಂದುವರೆದಿದ್ದು, ಮುಂದಿನ ಸರದಿ ಮಹಾರಾಷ್ಟ್ರ ಹಾಗೂ ಕರ್ನಾಟಕವನ್ನೂ ಆಕ್ರಮಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಹಾಗೂ ಅಂಬೇಡ್ಕರ್‌ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಅವರ ವಂಚಿತ್‌ ಬಹುಜನ್‌ ಆಗಡಿ ಕಾಂಗ್ರೆಸ್‌ನ ಮತ ಬ್ಯಾಂಕ್‌ನ್ನು ಛಿದ್ರಗೊಳಿಸಿವೆ.

ಈಗ ಕರ್ನಾಟಕದಲ್ಲಿ ಜೆಡಿಎಸ್‌ನೊಂದಿಗೆ ಮಾಡಿಕೊಂಡಿರುವ ಮೈತ್ರಿಯಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಅಧಿಕಾರಕ್ಕೆ ಬರುವ ಅವಕಾಶವನ್ನೇ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಮೈತ್ರಿ ರಾಜಕಾರಣದ ಮನಸ್ಥಿತಿಯಿಂದ ಹೊರ ಬಂದು ತಳ ಮಟ್ಟದಲ್ಲಿ ಕುಟುಂಬ ಹಾಗೂ ಜಾತಿ ರಾಜಕಾರಣಕ್ಕೆ ಮಣೆ ಹಾಕದೆ ಪ್ರಾಮಾಣಿಕ ಕಾರ್ಯಕರ್ತರ ಪಡೆ ಕಟ್ಟುವ ಕೆಲಸ ಮಾಡಬೇಕಿದೆ. ವಿಧಿಯಿಲ್ಲದೇ ಎಐಸಿಸಿ ಅಧ್ಯಕ್ಷರಾಗಿ ಮುಂದುವರೆದಿರುವ ರಾಹುಲ್‌ ಗಾಂಧಿ ಈ ಕಡೆಗೆ ಗಂಭೀರವಾಗಿ ಗಮನ ಹರಿಸುವುದು ಇಂದಿನ ಅಗತ್ಯವಾಗಿದೆ.

ಶೂನ್ಯದಿಂದ ಪಕ್ಷ ಕಟ್ಟುವುದಕ್ಕೆ ಆಂಧ್ರಪ್ರದೇಶದ ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ಜಗನ್ಮೋಹನ್‌ ರೆಡ್ಡಿ, ರಾಹುಲ್‌ಗೆ ಸ್ಫೂರ್ತಿಯಾಗಲಿ.

– ಶಂಕರ ಪಾಗೋಜಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರ್ಷಗಳ ಹಿಂದೆ, ಅಂದರೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತುಸು ಉತ್ತಮವಾಗಿದ್ದ ವೇಳೆಯಲ್ಲಿ ಭಾರತೀಯ ಕ್ರಿಕೆಟ್ ತಂಡ ಪಾಕಿಸ್ತಾನದ ಪ್ರವಾಸ ಕೈಗೊಂಡಿತ್ತು....

  • ಮಳೆಗಾಲ ಬಂತೆಂದರೆ ಮೀನುಗಾರರ ಬದುಕಿನಲ್ಲಿ ಎಲ್ಲಿಲ್ಲದ ಆತಂಕದ ಅಲೆಗಳು ಏಳುತ್ತದೆ. ಯಾವಾಗ, ಎಷ್ಟು ಹೊತ್ತಿನಲ್ಲಿ ರಾತ್ರಿಯೋ ಹಗಲೋ ಕಣ್ಣಲ್ಲಿ ಎಣ್ಣೆ ಬಿಟ್ಟು...

  • ಉತ್ತರ ಕರ್ನಾಟಕ ಸಮಗ್ರ ನೀರಾವರಿ ಅಭಿವೃದ್ಧಿ ಸಮಿತಿಯ ಸದಸ್ಯರಾದ ನಮಗೆ ಕೇಂದ್ರ ಜಲಶಕ್ತಿ ಮಂತ್ರಿ ಗಜೇಂದ್ರಸಿಂಗ್‌ ಶೇಖಾವತ್‌ ಅವರನ್ನು ಲೋಕಸಭೆಯ ಅವರ ಕಚೇರಿಯಲ್ಲಿ...

  • ನಮ್ಮೂರಿನಲ್ಲಿ ಮಳೆಗಾಲದಲ್ಲಿ ಮಳೆ ಎಡೆಬಿಡದೆ ಸುರಿಯುವುದು ಕಳೆದ ವರ್ಷವೋ ಈ ವರ್ಷವೋ ಪ್ರಾರಂಭಗೊಂಡ ಪ್ರಕ್ರಿಯೆಯಲ್ಲ. ದಶಕಗಳಿಗಿಂತ ಹಿಂದಿನ ಮಳೆಗಾಲವನ್ನು...

  • ಗ್ರಾಮೀಣ ಪ್ರದೇಶದ ಅಂಚೆ ಕಚೇರಿಗಳಲ್ಲಿ ನಡೆಯುವ ಉಳಿತಾಯ ಖಾತೆ ಮತ್ತು ಜೀವವಿಮಾ ಖಾತೆಗಳ ಹಣದ ವ್ಯವಹಾರದಿಂದ ಸಿಗುವ ಲಾಭವಲ್ಲದೆ ಹೋಗಿದ್ದರೆ ನಗರಗಳಲ್ಲಿರುವ...

ಹೊಸ ಸೇರ್ಪಡೆ