ಪೊಲೀಸ್‌ ಇಲಾಖೆಗೆ ಆಗಬೇಕು ಕಾಯಕಲ್ಪ

Team Udayavani, Aug 22, 2019, 5:47 AM IST

ಪೊಲೀಸ್‌ ಇಲಾಖೆಯಲ್ಲಿ ಸಿಬ್ಬಂದಿಗಿರುವ ಮಾನಸಿಕ ಕಿರಿಕಿರಿ, ಒತ್ತಡಗಳು, ಕರ್ತವ್ಯದ ಸಂದರ್ಭದಲ್ಲಿ ಅವರುಗಳು ಎದುರಿಸುತ್ತಿರುವ ಸಮಸ್ಯೆಗಳು ಇತರ ಎಲ್ಲಾ ಇಲಾಖೆಗಳಿಗಿಂತ ಜಾಸ್ತಿ. ಆದರೂ ಅಪವಾದ ಮತ್ತು ಟೀಕೆಗಳಲ್ಲಿ ಪೊಲೀಸ್‌ ಇಲಾಖೆಗೆ ಅಗ್ರಸ್ಥಾನ. ಸಹಜವಾಗಿ ಯಾರಲ್ಲಾದರೂ ಅತ್ಯಂತ ಭ್ರಷ್ಟ ಇಲಾಖೆ ಯಾವುದು ಎಂದು ಕೇಳಿದರೆ ಪೊಲೀಸ್‌ ಇಲಾಖೆ ಎಂದು ತಟ್ಟನೆ ಹೇಳುತ್ತಾರೆ. ಈ ರೀತಿ ಹೇಳಿದವರಲ್ಲಿ, ಪೊಲೀಸರು ನಿನ್ನಲ್ಲಿ ಲಂಚ ಕೇಳಿದ್ದಾರಾ ಎಂದು ಕೇಳಿದರೆ, ನನ್ನಲ್ಲಿ ಕೇಳಿಲ್ಲ, ನಾನು ಕೊಟ್ಟಿಲ್ಲ ಎನ್ನುತ್ತಾರೆ. ಹಾಗಂತ ಆಪಾದನೆಗಳೆಲ್ಲವೂ ಸುಳ್ಳು, ಪೊಲೀಸ್‌ ಇಲಾಖೆಯಲ್ಲಿ ಇರುವವರೆಲ್ಲರೂ ಪ್ರಾಮಾಣಿಕರು ಎನ್ನುತ್ತಿಲ್ಲ. ಇತರ ಇಲಾಖೆಯಲ್ಲಿ ಇರುವಷ್ಟೇ ಅಪ್ರಾಮಾಣಿಕರು ಈ ಇಲಾಖೆಯಲ್ಲಿಯೂ ಇದ್ದಿರಬಹುದು. ಪೊಲೀಸ್‌ ಬಗ್ಗೆ ಕೆಟ್ಟದಾಗಿ ಆಡಿಕೊಳ್ಳುವವರು ಎಂದೂ ಪೊಲೀಸರ ವೈಯಕ್ತಿಕ ಬದುಕಿನ ಬಗ್ಗೆ ತಿಳಿವ ಪ್ರಯತ್ನ ಮಾಡಿದ್ದಿಲ್ಲ.

ಪೊಲೀಸರಿಗೆ ಸರಕಾರ ಘೋಷಣೆ ಮಾಡಿದ ಯಾವುದೇ ಸಾರ್ವತ್ರಿಕ ರಜೆಗಳು ಅನ್ವಯಿಸುವುದಿಲ್ಲ. ಪ್ರತಿಯೊಬ್ಬ ಪೊಲೀಸ್‌ ಸಿಬ್ಬಂದಿಗೂ ವಾರಕ್ಕೆ ಒಂದು ರಜೆಯಂತೆ ತಿಂಗಳಿಗೆ 4 ರಜೆ ನೀಡಬೇಕು ಎಂದು ನಿಯಮದಲ್ಲಿ ಇದೆಯೇ ಹೊರತು ವಾಸ್ತವದಲ್ಲಿ ಇಲ್ಲ. ನವರಾತ್ರಿಗೆ, ದೀಪಾವಳಿಗೆ, ಗಣೇಶ ಚತುರ್ಥಿಗೆ ಸಾಲು ಸಾಲು ರಜೆಗಳಿಂದಾಗಿ ಇತರ ಇಲಾಖೆಯವರು ರಜಾ ಮೂಡ್‌ನ‌ಲ್ಲಿದ್ದರೆ ಪೊಲೀಸರು ಮಾತ್ರ ಆ ಸಂದರ್ಭದಲ್ಲೆಲ್ಲ ಬಂದೋಬಸ್ತ್ ಕರ್ತವ್ಯದಲ್ಲಿರುತ್ತಾರೆ.

ಒಂದು ಠಾಣಾ ವ್ಯಾಪ್ತಿಯಲ್ಲಿರುವ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್‌ ಸಿಬ್ಬಂದಿಯನ್ನು ನಿಯುಕ್ತಿ ಮಾಡಬೇಕು ಎನ್ನುವುದು ಕಾನೂನು ಮಾತ್ರವಾಗಿದೆ. ಪ್ರತಿ ಠಾಣೆಯಲ್ಲೂ ಸಿಬ್ಬಂದಿ ಕೊರತೆ ಇದೆ. ಎಲ್ಲೋ ಗಲಭೆೆ, ದೊಂಬಿ ನಡೆದಾಗ ಪದೇ ಪದೇ ಬಂದೋಬಸ್ತ್ಗಾಗಿ ಮೇಲಧಿಕಾರಿಗಳ ಆದೇಶಕ್ಕೆ ಚಕಾರವೆತ್ತದೆ ಅವರು ಹೇಳಿದಲ್ಲಿಗೆ ಹೋಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಅಲ್ಲಿನ ಮೂಲಭೂತ ಸೌಕರ್ಯದ ವ್ಯವಸ್ಥೆಯ ಬಗ್ಗೆ ಯಾವ ಅಧಿಕಾರಿಗಳೂ ಗಮನ ಹರಿಸುವುದಿಲ್ಲ. ತಂಗಲು ಯಾವುದೋ ಶಾಲಾ ಕೊಠಡಿಗಳು ಅಥವಾ ಕಲ್ಯಾಣ ಮಂಟಪಗಳು, ನಿತ್ಯದ ಕರ್ಮಗಳಿಗೆ ಅಲ್ಲಿ ಅವರು ಪಡುವ ಯಾತನೆ, ಊಟೋಪಚಾರದ ಅವ್ಯವಸ್ಥೆ ಇವೆಲ್ಲವು ಅತ್ಯಂತ ಶೋಚನೀಯ. ಆಗ ಸ್ವಠಾಣೆಯಲ್ಲಿ ಇರುವ ಇತರ ಸಿಬ್ಬಂದಿ ಹಗಲು, ರಾತ್ರಿ ಎನ್ನದೆ ವಾರಾನುಗಟ್ಟಲೆ ಅವಿಶ್ರಾಂತವಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಇಷ್ಟಾಗಿ ನಿಗದಿತ ಸಮಯಕ್ಕಿಂತ ಹೆಚ್ಚಿಗೆ ಅವಧಿಯ ಕೆಲಸ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಹೆಚ್ಚುವರಿ ವೇತನ ಇಲ್ಲ. ಇವರು ಕೆಲಸ ಮಾಡುವ ಅವಧಿಗೂ, ಪಡೆಯುವ ಸಂಬಳಕ್ಕೂ ಹೋಲಿಸಿದರೆ ಇವರ ವೇತನ ಅತ್ಯಂತ ಕಡಿಮೆ.

ರಾಷ್ಟ್ರಪತಿಯ ಆಗಮನದಿಂದ ಹಿಡಿದು ಗ್ರಾಮದ ಸಣ್ಣ ಪುಟ್ಟ ಜಾತ್ರೆಗಳಿಗೂ ಪೊಲೀಸರು ತೆರಳಬೇಕು. ಮನೆಯಲ್ಲಿ ಏನೋ ಸಮಾರಂಭ ಇದೆ ಎಂದು ಮುಂಚಿತವಾಗಿ ರಜೆ ಮಂಜೂರು ಮಾಡಿಕೊಂಡರೂ ತುರ್ತು ಕಾರಣದ ನಿಮಿತ್ತ ಅವರ ರಜೆ ರದ್ದಾಗುತ್ತದೆ. ಹಾಗಾಗಿ ಪೊಲೀಸರು ರಜೆಗೆ ರಜೆ ನೀಡುವವರು ಎಂದು ಹೇಳಬಹುದು.

ಹಿಂದೆ ಜನಸಂಖ್ಯೆ ಕಡಿಮೆ ಇತ್ತು, ಅಪರಾಧ ಪ್ರಕರಣಗಳು ಕಡಿಮೆ ಇದ್ದವು. ಈಗ ಇವೆರಡೂ ಗಣನೀಯವಾಗಿ ಹೆಚ್ಚಾಗಿದೆ. ಆದರೆ ಅದಕ್ಕೆ ಪೂರಕವಾಗಿ ಇಲಾಖೆಯಲ್ಲಿ ನೇಮಕಾತಿ ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದಾಗಿ ಇದ್ದವರೇ ಹೊರಲಾರದಷ್ಟು ಹೊರೆ ಹೊರುತ್ತಿದ್ದಾರೆ.

ನಗರ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರ ಪೊಲೀಸ್‌ ಸಿಬ್ಬಂದಿಯ ಕಾರ್ಯದ ಬಗ್ಗೆ ಒಮ್ಮೆ ಗಮನ ಹರಿಸಬೇಕು. ಬಿಸಿಲು, ಮಳೆ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಧೂಳು ಇವೆಲ್ಲದರ ಮಧ್ಯೆ ವಾಹನ ಸವಾರರ ಅಶಿಸ್ತಿನಿಂದಾಗಿ ರಸ್ತೆಯಲ್ಲಾಗುವ ಗೊಂದಲ, ಟ್ರಾಫಿಕ್‌ ಜಾಮ್‌ಗಳು, ಇವೆಲ್ಲವನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ಸಹಿಸಿಕೊಂಡು ಕರ್ತವ್ಯ ನಿರ್ವಹಿಸುವವರ, ಕರ್ತವ್ಯ ನಿಷ್ಠೆಯ ಬಗ್ಗೆ ಏನೆನ್ನಬೇಕು?

ಇನ್ನು. ಪ್ರಕರಣದ ತನಿಖೆ ವಿಚಾರದಲ್ಲಿ ಸ್ವಾತಂತ್ರ್ಯವಿದ್ದರೂ ಕೆಲವೊಮ್ಮೆ ರಾಜಕಾರಣಿಗಳ ಮೂಗು ತೂರಿಸುವಿಕೆಯಿಂದ, ಸಂತ್ರಸ್ತರು ನ್ಯಾಯದಿಂದ ವಂಚಿತರಾಗುತ್ತಾರೆ. ಇದರ ಅಪವಾದವು ಇಲಾಖಾ ಅಧಿಕಾರಿಗಳಿಗೆ ಮೀಸಲು. ಪೊಲೀಸ್‌ ಇಲಾಖೆಯ ಮೇಲೆ ಅಸಮಾಧಾನಗೊಂಡವರು ಅಕಸ್ಮಾತ್‌ ಪೊಲೀಸರ ವಿರುದ್ಧ ಪ್ರತಿಭಟನೆ ಯನ್ನು ಹಮ್ಮಿಕೊಂಡರೆ ಅದಕ್ಕೂ ಪೊಲೀಸರೆ ರಕ್ಷಣೆಯನ್ನು ನೀಡಬೇಕಾದ ಅಸಹಾಯಕತೆ. ಇಷ್ಟೆಲ್ಲ ವೇದನೆಯನ್ನು ಅವರು ಅನುಭವಿಸುತ್ತಿದ್ದರೂ ಬಹುತೇಕ ಸಂದರ್ಭದಲ್ಲಿ ಪೊಲೀಸರು ಭ್ರಷ್ಟರು ಎಂಬ ಹಣೆಪಟ್ಟಿಯೊಂದಿಗೆ ಸಾರ್ವಜನಿಕರ ಟೀಕೆಗೆ ಗುರಿಯಾಗುತ್ತಾರೆ.

ಆದಾಯ ತೆರಿಗೆ ಅಥವಾ ಸರಕಾರಕ್ಕೆ ನ್ಯಾಯಯುತವಾಗಿ ಸಂದಾಯ ಮಾಡಬೇಕಾದ ತೆರಿಗೆಯನ್ನು ಪಾವತಿಸದೆ ಸರಕಾರವನ್ನು ವಂಚಿಸುವವನು ಭ್ರಷ್ಟನೇ ಆಗಿರುತ್ತಾನೆ. ಹಾಗಿರುವಾಗ ಕೇವಲ ಪೊಲೀಸ್‌ ಇಲಾಖೆಯವರು ಮಾತ್ರ ಭ್ರಷ್ಟರು ಎಂಬ ಅಭಿಪ್ರಾಯದಿಂದ ಪೊಲೀಸರನ್ನು ತಾತ್ಸಾರದಿಂದ ಕಾಣುವುದು ಸರಿಯಲ್ಲ, ಸಬ್‌ ಇನ್ಸ್‌ಪೆಕ್ಟರ್‌ಗಿಂತ ಕೆಳಸ್ತರದ ಸಿಬ್ಬಂದಿಗಳು ಅನುಭವಿಸುತ್ತಿರುವ ತೊಂದರೆಗಳಿಗೆ, ಒತ್ತಡಗಳಿಗೆ ಅವರ ಹಿರಿಯ ಅಧಿಕಾರಿಗಳು ಕಾರಣರಲ್ಲ. ಎಲ್ಲ ಹಿರಿಯ ಅಧಿಕಾರಿಗಳೇನೂ ಸುಖದ ಸುಪ್ಪತಿಗೆಯಲ್ಲಿ ಕುಳಿತು ಸೇವೆ ಸಲ್ಲಿಸುತ್ತಿಲ್ಲ. ಅವರಿಗೂ ಕೂಡ ಬಹಳಷ್ಟು ಸಮಸ್ಯೆಗಳು ಇವೆ. ಒತ್ತಡದಿಂದ ಕೆಲಸ ಮಾಡಬೇಕಾದ ಅನಿವಾರ್ಯತೆಗಳು ಇವೆ. ಆದರೆ ಇಲಾಖೆಯಲ್ಲಿನ ನ್ಯೂನತೆಗಳನ್ನು, ಸಿಬ್ಬಂದಿ ವರ್ಗದ ಕುಂದು ಕೊರತೆಗಳನ್ನು ಸರಕಾರದ ಗಮನಕ್ಕೆ ತಂದು ಪರಿಹರಿಸಬೇಕಾದ ಗುರುತರವಾದ ಜವಾಬ್ದಾರಿ ಮೇಲಧಿಕಾರಿಗಿದೆ.

ಎಲ್ಲಾ ಇಲಾಖೆಯಲ್ಲಿಯೂ ಸಿಬ್ಬಂದಿಯ ಸಂಘ ಅಥವಾ ಒಕ್ಕೂಟ ಇರುತ್ತದೆ ಆದರೆ ಪೊಲೀಸ್‌ ಇಲಾಖೆಯಲ್ಲಿ ಈ ವ್ಯವಸ್ಥೆಗೆ ಸರಕಾರ ಇನ್ನೂ ಅವಕಾಶ ಮಾಡಿಕೊಟ್ಟಿಲ್ಲ. ಪೊಲೀಸರ ಕಷ್ಟಕಾರ್ಪಣ್ಯಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಲು, ಪೊಲೀಸರಿಗೂ ಒಂದು ಒಕ್ಕೂಟದ ಅವಶ್ಯಕತೆ ಇದೆ ಅದನ್ನು ರಚಿಸುವಲ್ಲಿ ಸರಕಾರವು ಸಹಕಾರ ನೀಡುವಂತೆ ಮೇಲಧಿಕಾರಿಗಳು ಸಹಕರಿಸಬೇಕು.

ಪೊಲೀಸರ ಬಗ್ಗೆ ಭಯವಿದೆ, ಗೌರವ ಇಲ್ಲ. ಪೊಲೀಸ್‌ ಇಲಾಖೆಯನ್ನು ಗೌರವಿಸಲು ಬೇಕಾದ ಪೂರಕವಾದ ವಾತಾವರಣ ನಿರ್ಮಾಣವಾಗಬೇಕಿದೆ. ಹೀಗಾದಾಗ, ಪೊಲೀಸರು ಸರಿ ಇಲ್ಲ ಎಂಬ ತಿಳಿವಳಿಕೆ ತಪ್ಪು ಎಂಬ ಅರಿವು ಎಲ್ಲರಿಗೂ ಆಗುತ್ತದೆ.

ನಿವೃತ್ತ ಡಿಜಿಪಿ ರಾಘವೇಂದ್ರ ಔರಾದ್‌ಕಾರ್‌ ಅವರು ಪೊಲೀಸರ ಸಮಸ್ಯೆಗಳನ್ನು ಗುರುತಿಸಿ, ಕರ್ತವ್ಯದ ಸಂದರ್ಭದಲ್ಲಿ ಒತ್ತಡವಾಗ ದಂತೆ ಸಹಕಾರಿಯಾಗುವ ಅಂಶಗಳ ಬಗ್ಗೆ ಮತ್ತು ಅವರ ಸೌಲಭ್ಯಗಳನ್ನು ಹೆಚ್ಚಿಸುವುದು ಇತ್ಯಾದಿ ಅಂಶವನ್ನೊಳಗೊಂಡ ವಿಸ್ಕೃತ ವರದಿ ಯೊಂದನ್ನು ಸರಕಾರಕ್ಕೆ ಸಲ್ಲಿಸಿರುತ್ತಾರೆ ಆದರೆ ಇದುವರೆಗೂ ಅದು ಜಾರಿಗೊಂಡಂತಿಲ್ಲ.

ಸಮಾಜದಲ್ಲಿ ನಡೆಯುತ್ತಿರುವ ಮೋಸ, ಅನ್ಯಾಯ, ಕೊಲೆ, ಸುಲಿಗೆ, ಅತ್ಯಾಚಾರ, ಸುಳ್ಳು, ನಂಬಿಕೆ ದ್ರೋಹ ಇತ್ಯಾದಿಗಳನ್ನು ನೋಡುವಾಗ ಅಕಸ್ಮಾತ್‌ ಪೊಲೀಸ್‌ ಎಂಬ ಇಲಾಖೆ ಇರದೆ ಹೋಗಿದ್ದರೆ ಇನ್ನೂ ಏನೇನಾಗುತ್ತಿತ್ತೋ ಎಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

-ಕಿಶೋರ್‌ ಕುಮಾರ್‌ ಕುಂದಾಪುರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ