ಬಂಡಾಯ-ಪಕ್ಷಾಂತರ ಪರ್ವದ್ದೇ ಪಾರುಪತ್ಯ

Team Udayavani, Apr 27, 2018, 6:00 AM IST

ಒಂದು ಪಕ್ಷದಲ್ಲಿ ಸ್ಪರ್ಧಿಸಲು ಟಿಕೆಟ್‌ ಸಿಗಲಿಲ್ಲವೆಂದು ಪಕ್ಷ ಸಿದ್ಧಾಂತ ಬದಿಗೊತ್ತಿ ಇನ್ನೊಂದು ಪಕ್ಷದ ಕದ ತಟ್ಟಿ ಒಳಹೊಕ್ಕು ಅಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವುದು ಸಮಯ ಸಾಧಕತನ. ಸ್ವಾತಂತ್ರ್ಯ ವೇನೋ ಇದೆ. ಆದರೆ ಇದು ಅಕ್ಷಮ್ಯ. ಚುನಾವಣೆ ಬಂದಾಗಲೆಲ್ಲಾ ಪಕ್ಷ ಬದಲಿಸುವವರಿಂದ ಯಾವ ನಿಷ್ಠೆಯನ್ನು ನಿರೀಕ್ಷಿಸಲು ಸಾಧ್ಯ? ಈ ಬಾರಿ ಮೂರೂ ಪಕ್ಷಗಳು ಪಕ್ಷಾಂತರ ಪರ್ವಕ್ಕೆ ಸಾಕ್ಷಿಯಾಗಿವೆ. ಪಕ್ಷಾಂತರಗೊಂಡು ಬಂದವರಿಗೆ ಟಿಕೆಟ್‌ ನೀಡಿವೆ. 

ಟಿಕೆಟ್‌ ವಂಚಿತ ಬಿಜೆಪಿ ಶಾಸಕ ಬೇಳೂರು ಗೋಪಾಲಕೃಷ್ಣ ಬಂಡಾಯ, ಮಂಡ್ಯದಲ್ಲಿ ಹಿರಿಯ ನಾಯಕ ಅಂಬರೀಷ್‌ ಮುನಿಸು, ನಟ ಶಶಿಕುಮಾರ್‌ ಕಾಂಗ್ರೆಸ್ಸಿನಿಂದ ಜೆಡಿಎಸ್‌ಗೆ ಪಕ್ಷಾಂತರ, ಪ್ರಕಾಶ ಖಂಡ್ರೆ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆ. ಹೌದು, ರಾಜ್ಯದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ಬಾರಿ ಟಿಕೆಟ್‌ ವಂಚಿತರು, ಬಂಡಾಯ, ಪಕ್ಷಾಂತರ ಪರ್ವದ್ದೇ ಸುದ್ದಿ.

ಪಕ್ಷಾಂತರ ಪರ್ವ
ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನಾಂಕ ನಿಗದಿಯಾದಂದಿನಿಂದ ಎಲ್ಲ ರಾಜಕೀಯ ಪಕ್ಷಗಳದ್ದೂ ಇದೇ ಕಥೆ. ಟಿಕೆಟ್‌ ಸಿಗಲಿಲ್ಲವೆಂಬ ಕಾರಣಕ್ಕೆ ಪಕ್ಷಾಂತರ. ಜೆಡಿಎಸ್‌ನಿಂದ ಒಂದಷ್ಟು ಮಂದಿ ಕಾಂಗ್ರೆಸ್ಸಿಗೆ ಸೇರಿದರು. ಕಾಂಗ್ರೆಸ್ಸಿನ ಹಳೇ ಹುಲಿ ಬಿಜೆಪಿಗೆ ಹಾರಿತು. ಬಿಜೆಪಿಯಿಂದಲೂ ಒಂದಷ್ಟು ಆಕಾಂಕ್ಷಿಗಳು ಕಾಂಗ್ರೆಸ್‌ ಮತ್ತು ಜೆಡಿಎಸ್‌ನತ್ತ ವಲಸೆ ಹೋದರು. ಈ ನಡುವೆ ಕೆಲವರು ರಾಜಕೀಯ ಸಾಕಪ್ಪೋ ಸಾಕು ಎಂದು ವಿಶ್ರಾಂತಿಗೆ ತೆರಳಿದರು.  ಟಿಕೆಟಿಗಾಗಿ ಹಾತೊರೆಯುವುದು, ಟಿಕೆಟ್‌ ವಂಚಿತರಾದಾಗ ಕಣ್ಣೀರು ಹಾಕುವುದು, ಪಕ್ಷ ವರಿಷ್ಠರ ವಿರುದ್ಧ ಬಂಡಾಯವೇಳು ವುದು, ಪಕ್ಷಾಂತರ ಮಾಡುವುದು ಇವೆಲ್ಲ ಇಂದು ಟಿಕೆಟ್‌ ಹಂಚಿಕೆ ಪ್ರಕ್ರಿಯೆಯ ಭಾಗವೇ ಆಗಿ ಹೋದಂತಿದೆ. ಕಾಂಗ್ರೆಸ್‌ ಕಾರ್ಯ ಕರ್ತೆಯೊಬ್ಬರು ಇದೇ ಕಾರಣಕ್ಕಾಗಿ, ಅಂದರೆ ಟಿಕೆಟ್‌ ಕೈತಪ್ಪಿದ್ದಕ್ಕಾಗಿ ಹತಾಶರಾಗಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆಯೂ ವರದಿಯಾಗಿದೆ.

ಟಿಕೆಟ್‌ ಹಂಚಿಕೆ ಸಮಸ್ಯೆ
ಎಲ್ಲರಿಗೂ ಟಿಕೆಟ್‌ ಪಡೆದು ಸ್ಪರ್ಧಿಸುವಾಸೆ. ಗೆದ್ದು ಎಮ್ಮೆಲ್ಲೆಯೋ ಎಂಪಿಯೋ ಆಗುವ ತವಕ. ಆಕಾಂಕ್ಷಿಗಳ ಪಟ್ಟಿ ಬೆಳೆ ದಂತೆಲ್ಲಾ ಟಿಕೆಟ್‌ ಹಂಚಿಕೆ ವರಿಷ್ಠರಿಗೊಂದು ತಲೆನೋವು. ಹಾಗಾಗಿಯೇ ಈ ಬಾರಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಾಕಷ್ಟು ಸಮಯ ಹಿಡಿಯಿತು. ಕಾಂಗ್ರೆಸ್‌ ಒಂದೇ ಹಂತದ ಪಟ್ಟಿ ಬಿಡುಗಡೆ ಮಾಡಿರುವುದಾಗಿ ಹೇಳಿಕೊಂಡರೂ ಅತೃಪ್ತರ ಒಳಗುದಿ ಇನ್ನೂ ಕೊತಕೊತ ಎನ್ನುತ್ತಿದೆ. ಬಿಜೆಪಿಗೋ ಮೂರು ಹಂತದ ಪಟ್ಟಿ ಬಿಡುಗಡೆ ಮಾಡಿಯೂ ಪೂರ್ಣವಾದಂತಿಲ್ಲ. ಟಿಕೆಟ್‌ ವಂಚಿತರು ಬಂಡಾಯವೇಳುತ್ತಾರೆ, ಹೊರನಡೆಯುತ್ತಾರೆ. ಇದೇ ವೇಳೆ ಇನ್ನೊಂದು ಪಕ್ಷದವರೂ ಗಾಳ ಹಾಕುತ್ತಿರುತ್ತಾರೆ. ಈ ಪಕ್ಷದಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗಿದೆ ಎನ್ನುತ್ತಾ ಈ ಪಕ್ಷದಿಂದ ಆ ಪಕ್ಷಕ್ಕೆ ಹಾರುತ್ತಾರೆ. ಜೆಡಿಎಸ್‌ ಈ ಬಾರಿ ಇತರ ಪಕ್ಷಗಳ ಬಂಡಾಯಗಾರರಿಗೆ ಆಸರೆದಾಣ ವೆನಿಸಿದಂತಿದೆ. ಟಿಕೆಟ್‌ ಸಿಗದೆ ಹೋದಾಗ ಇನ್ನೊಂದು ಪಕ್ಷಕ್ಕೆ ಹಾರುವಾಗ ಯಾವ ಸಿದ್ಧಾಂತವೂ ಇಂಥವರ ಮುಂದಿರುವುದಿಲ್ಲ. ಅವರ ಲಕ್ಷವೇನಿದ್ದರೂ ಟಿಕೆಟ್‌ ಪಡೆಯುವುದು. 

ಸಿದ್ಧಾಂತ ಅಂತ ಅಂಟಿಕೊಂಡು ಕೂತರೆ ಮುಂದೆ ಬರುವುದು ಅಷ್ಟರಲ್ಲೇ ಇದೆ ಅನ್ನುವುದು ಅವರಿಗೆ ಗೊತ್ತು. ಹಾಗಾಗಿ ಬಟ್ಟೆ ಬದಲಾಯಿಸಿದಂತೆ ಪಕ್ಷ ಬದಲಾಯಿಸುತ್ತಾರೆ. ಅಂಥವವರಿಗೆ ಇದು ಪರ್ವಕಾಲ. ಪಕ್ಷಾಂತರ ಪಿಡುಗಿಗೆ ಪಕ್ಷಭೇದವಿಲ್ಲ
ಪಕ್ಷದಿಂದ ಟಿಕೆಟ್‌ ಸಿಗದೆ ಹೋದಾಗ ಹತಾಶರಾಗುತ್ತಾರೆ, ಬಂಡಾಯವೇಳುತ್ತಾರೆ. ಬೇರೆ ಪಕ್ಷದ ಕದತಟ್ಟುತ್ತಾರೆ. ತೆರೆದರೆ ಒಳಹೊಕ್ಕು ಆಸೆ ಪೂರೈಸಿಕೊಳ್ಳುತ್ತಾರೆ. ಪಕ್ಷಾಂತರಕ್ಕೆ ಪಕ್ಷಭೇದವಿಲ್ಲ. ನಮ್ಮಲ್ಲಿ ಎಮ್ಮೆಲ್ಲೆ, ಎಂಪಿ ಸ್ಥಾನಗಳಿಗೆ ಎಷ್ಟೊಂದು ಆಕರ್ಷಣೆ ಯಿದೆಯೆಂದರೆ ಮೊನ್ನೆ ಮೊನ್ನೆ ಬಂದ ಸಾಮಾನ್ಯ ಕಾರ್ಯ ಕರ್ತನಿಗೂ ಇಂದಲ್ಲ ನಾಳೆ ಎಮ್ಮೆಲ್ಲೆಯಾಗುವ ಕನಸು. ಒಮ್ಮೆ ಮೀಸೆ ತೂರಿಸಲು ಅವಕಾಶ ಸಿಕ್ಕರೆ ಸಾಕು, ಮತ್ತೆ ತಿರುಗಿ ನೋಡು ವುದಿಲ್ಲ. ರಾಜ್ಯ ದಿವಾಳಿಯಾದರೂ ಅವರಂತೂ ಚುನಾ ವಣೆ ಯಿಂದ ಚುನಾವಣೆಗೆ ಗಟ್ಟಿಗೊಳ್ಳುತ್ತಾ ಹೋಗುತ್ತಾರೆ. 

ಲಕ್ಷ್ಮೀ ಕಟಾಕ್ಷ ಒಲಿದು ಬರುವಂತಿದ್ದರೆ ಯಾರಿಗೆ ತಾನೇ ಟಿಕೆಟ್‌ ಬೇಡ? ಹಾಗಾಗಿಯೇ ಟಿಕೆಟಿಗಾಗಿ ಅಷ್ಟೊಂದು ಜಿದ್ದಾಜಿದ್ದಿ. ಹಿಂದೆಲ್ಲ ಮತದಾರರ ಮನವೊಲಿಸಲು ಆಮಿಷವೊಡ್ಡುವುದಿತ್ತು. ಓಟಿಗಾಗಿ ನೋಟು. ಆದರೆ ಈಗ ಟಿಕೆಟು ಹಂಚುವ ಹಂತದಲ್ಲೇ ಅವೆಲ್ಲಾ ಮಾಮೂಲಿ. ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದರೂ ಝಣಝಣ ಕಾಂಚಣ ಕುಣಿದಿದೆ. ಬಾಡೂಟ ನಡೆದಿದೆ! ನೀತಿಸಂಹಿತೆ ಇಂಥವರ ಪಾಲಿಗೆ ಬರೀ ಬೆದರುಬೊಂಬೆ! 

ವಿದ್ಯಾರ್ಹತೆ ಬೇಕಿಲ್ಲ ವಯೋಮಿತಿಯೂ ಇದ್ದಂತಿಲ್ಲ
ನಮ್ಮ ಚುನಾವಣಾ ವ್ಯವಸ್ಥೆಯ ದೊಡ್ಡ ದುರಂತವೆಂದರೆ ಇಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವ ವಿದ್ಯಾರ್ಹತೆಯೂ ಬೇಕಿಲ್ಲ. ಯಾವ ವಯೋಮಿತಿಯೂ ಇಲ್ಲ. ಪದವೀಧರ ಕ್ಷೇತ್ರ ವಿರಲಿ, ಶಿಕ್ಷಕರ ಕ್ಷೇತ್ರವಿರಲಿ ಪದವೀಧರರೂ ಬೇಕಿಲ್ಲ, ಶಿಕ್ಷಕರೂ ಬೇಕಿಲ್ಲ. ಯಾವ ಅವಿದ್ಯಾವಂತನಾದರೂ ಸರಿ, ಹೈಕಮಾಂಡ್‌ ಕೃಪಾಕಟಾಕ್ಷವಿದ್ದರೆ ಟಿಕೆಟ್‌ ಪಡೆಯಬಹುದು. ಗೆದ್ದು ಎಂಎಲ್‌ಸಿ ಆಗಬಹುದು. 
ವಿದ್ಯಾವಂತರೆನಿಸಿಕೊಂಡವರು ಮತದಾನ ಮಾಡಿ ಅಂಥವರನ್ನೂ ಆರಿಸಿ ಕಳುಹಿಸುತ್ತಾರೆ. ಅವರ ಮುಂದೆ ಕೈಕಟ್ಟಿ ನಿಲ್ಲುತ್ತಾರೆ. ಎಂಥಾ ದುರ್ವಿಧಿ. ಇನ್ನು ವಯೋಮಿತಿ ಇಲ್ಲವೆಂದ ಮೇಲೆ ಕೇಳಬೇಕೆ? 90 ದಾಟಿದವರೂ ನಾಮಪತ್ರ ಸಲ್ಲಿಸ ಬಹುದು. ಅದೃಷ್ಟ ಚೆನ್ನಾಗಿದ್ದರೆ, ಬೆಂಬಲಿಗರು ಅಪಾರವಿದ್ದರೆ ಎಮ್ಮೆಲ್ಲೆಯೇನು? ಸೀಎಮ್ಮೂ ಆದುದಕ್ಕೆ ಉದಾಹರಣೆಗಳಿವೆ. ಸಂವಿಧಾನ ಅಂಥವರಿಗೂ ಸ್ಪರ್ಧಿಸುವ ಹಕ್ಕು ಕೊಟ್ಟಿದೆ. ನಮಗೆ ಮತದಾನದ ಹಕ್ಕು ಕೊಟ್ಟಿದೆ.

ಈ ಬಾರಿ ಟಿಕೆಟ್‌ ಹಂಚಿಕೆ ಅಕ್ಷರಶಃ ಕಗ್ಗಂಟಾಗಿದ್ದಕ್ಕೆ ಪುತ್ರಾ ಭ್ಯುದಯದ ಹೊಣೆಯೂ ಕಾರಣವೆನ್ನಬಹುದು. ಇನ್ನೊಂದು ಪ್ರಶ್ನಾರ್ಹ ಸಂಗತಿಯೆಂದರೆ ಒಬ್ಬ ವ್ಯಕ್ತಿ ಏಕಕಾಲದಲ್ಲಿ ಎರಡು ಕಡೆ ಸ್ಪರ್ಧಿಸುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಬಾಗಲಕೊಟೆಯ ಬಾದಾಮಿ ವಿಧಾನಸಭಾ ಕ್ಷೇತ್ರದಿಂದಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದೀಗ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಡೆ ಸ್ಪರ್ಧಿಸುವುದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದೂ ಅದನ್ನು ಬೆಂಬಲಿಸುವ ಮೂಲಕ ಕೇಂದ್ರ ಚುನಾವಣಾ ಆಯೋಗ ತನ್ನ ಜನಪರ ನಿಲುವನ್ನು ಪ್ರದರ್ಶಿಸಿದ್ದು ವ್ಯರ್ಥವಾದರೂ ಅಚ್ಚರಿಯಿಲ್ಲ.

ಸಮಯಸಾಧಕತನ ಸರಿಯಲ್ಲ
ಒಂದು ಪಕ್ಷದಲ್ಲಿ ಸ್ಪರ್ಧಿಸಲು ಟಿಕೆಟ್‌ ಸಿಗಲಿಲ್ಲವೆಂದು ಪಕ್ಷ ಸಿದ್ಧಾಂತ ಬದಿಗೊತ್ತಿ ಇನ್ನೊಂದು ಪಕ್ಷದ ಕದ ತಟ್ಟಿ ಒಳಹೊಕ್ಕು ಅಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವುದು ಸಮಯಸಾಧಕತನ. ಸ್ವಾತಂತ್ರ್ಯ ವೇನೋ ಇದೆ. ಆದರೆ ಇದು ಅಕ್ಷಮ್ಯ. ಚುನಾವಣೆ ಬಂದಾಗಲೆಲ್ಲಾ ಪಕ್ಷ ಬದಲಿಸುವವರಿಂದ ಯಾವ ನಿಷ್ಠೆಯನ್ನು ನಿರೀಕ್ಷಿಸಲು ಸಾಧ್ಯ? ಈ ಬಾರಿ ಮೂರೂ ಪಕ್ಷಗಳು ಪಕ್ಷಾಂತರ 
ಪರ್ವಕ್ಕೆ ಸಾಕ್ಷಿಯಾಗಿವೆ. ಪಕ್ಷಾಂತರಗೊಂಡು ಬಂದವರಿಗೆ ಟಿಕೆಟ್‌ ನೀಡಿವೆ. ಮತದಾರ ಪ್ರಭು ವ್ಯಕ್ತಿ ನೋಡಿ ಮತ ಹಾಕುತ್ತಾನೋ ಪಕ್ಷ ನೋಡಿ ಮತಹಾಕುತ್ತಾನೋ ಹೇಳಲಾಗದು. ಹಾಗಾಗಿ ಈ ಬಾರಿಯ ಚುನಾವಣಾ ಫ‌ಲಿತಾಂಶ ಹೀಗೆಯೇ ಎನ್ನುವಂತಿಲ್ಲ. ಫ‌ಲಿತಾಂಶದ ಮೇಲೆ ಪಕ್ಷಾಂತರ ಪರ್ವದ ಪ್ರಭಾವವನ್ನು ಅಲ್ಲಗಳೆಯುವಂತಿಲ್ಲ. 

ದಿಟ್ಟ ಹೆಜ್ಜೆಯಿಡಬೇಕಿದೆ
ಮೇಲೆ ಹೇಳಿದ್ದೆಲ್ಲವೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಂಟಿರುವ ಕಳಂಕವೆನ್ನದೆ ವಿಧಿಯಿಲ್ಲ. ಎರಡೆರಡು ಕಡೆಗಳಲ್ಲಿ ಸ್ಪರ್ಧಿಸುವುದು ಸೂಕ್ತವಲ್ಲ. ಪಕ್ಷಾಂತರ ಮಾಡುವುದು ಸರಿಯಲ್ಲ. ಅದರಿಂದ ಆರಿಸಿ ಕಳಿಸಿದ ಮತದಾರರಿಗೆ ಮೋಸ ಮಾಡಿದಂತೆ. ಹೀಗಾದಾಗ ಮತದಾರ ಪ್ರಭುಗಳು ಮತದಾನದಲ್ಲಿ ಅನಾಸ್ಥೆ ತೋರುತ್ತಾರೆ. ಇವೆಲ್ಲಾ ಎಲ್ಲ ಪಕ್ಷದವರಿಗೂ ಗೊತ್ತು. ಆದರೆ ಎಲ್ಲ ಪಕ್ಷದವರಿಗೂ ಅಂತಹ ಅಡ್ಡ ಹಾದಿಗಳೂ ಕೆಲವೊಮ್ಮೆ ಅನಿವಾರ್ಯವೆನಿಸಿರುವಾಗ ಅವುಗಳ ವಿರುದ್ಧ ಕಾನೂನು ಮಾಡುವುದಾದರೂ ಹೇಗೆ? ಆದರೆ ಈ ಎಲ್ಲ ಆಗುಹೋಗುಗಳೂ ಜನಹಿತದ ಮೇಲೆ ಪ್ರಭಾವ ಬೀರದಿರುವುದಿಲ್ಲ. ಜನಹಿತಕ್ಕೆ ಧಕ್ಕೆಯಾದಾಗ ಪ್ರಶ್ನಿಸಲೇ ಬೇಕಾಗು ತ್ತದೆ. ಸ್ವೀಪ್‌ ಕಾರ್ಯಕ್ರಮದಡಿ ಮತದಾನ ಮಾಡುವುದು ಪವಿತ್ರ ಕಾರ್ಯವೆಂದು ಸಾರಿದರಷ್ಟೇ ಸಾಲದು. ಪ್ರಜಾಪ್ರಭುತ್ವ ವ್ಯವಸ್ಥೆ ಗಂಟಿರುವ ಕಳಂಕವನ್ನು ತೊಡೆದು ಹಾಕಿ ಒಟ್ಟಾರೆ ವ್ಯವಸ್ಥೆಯ ಪಾವಿತ್ರವನ್ನು ಎತ್ತಿಹಿಡಿಯಬೇಕಿದೆ. ರಾಜಕೀಯ ಒತ್ತಾಸೆಗೆ ಮಣಿಯದೆ ಜನಹಿತ ದೃಷ್ಟಿಯಿಂದ ಇನ್ನಷ್ಟು ದಿಟ್ಟ ಹೆಜ್ಜೆಯಿ ಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವೂ ಅದ‌ನ್ನು ಬೆಂಬಲಿ ಸಬೇಕಿದೆ. ಆದರೆ ಇದು ಸಾಧ್ಯವಾಗುವುದೆ?

ರಾಂ ಎಲ್ಲಂಗಳ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ