ಸೆಕ್ಯುಲರ್ ಪದದ ನಿಜ ಅರ್ಥವೇನು?

Team Udayavani, Jan 5, 2018, 7:54 AM IST

ತುರ್ತು ಪರಿಸ್ಥಿತಿಯ ಅನಂತರ ಆಡಳಿತಕ್ಕೆ ಬಂದ ಜನತಾ ಸರಕಾರ 42ನೇ ತಿದ್ದುಪಡಿಯ ದುಷ್ಪರಿಣಾಮಗಳ ಅಧ್ಯಯನ ನಡೆಸಲು ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು. ಆ ಸಮಿತಿ ಅನೇಕ ಶಿಫಾರಸುಗಳ ಜತೆಗೆ ಈ ಸೋಶಿಯಲಿಸ್ಟ್‌ ಹಾಗೂ ಸೆಕ್ಯುಲರ್‌ ಪದಗಳು ನಿರರ್ಥಕ ಹಾಗೂ ಅಪ್ರಸ್ತುತ, ಅವುಗಳನ್ನು ತೆಗೆದು ಹಾಕಬಹುದು ಎಂದು ಶಿಫಾರಸು ಮಾಡಿತ್ತು. ಏಕೆಂದರೆ ಈ ಶಬ್ದಗಳು ಕೊಡಮಾಡಬಹುದಾದ ಅವಕಾಶಗಳು ಮೂಲ ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಒಳಗೊಂಡಿದೆ. 

ಭಾರತದ ಪಾಲಿಗೆ ಸೆಕ್ಯುಲರ್‌ ಎನ್ನುವುದು ಬಹಳ ಕ್ಲಿಷ್ಟಕರವಾದುದು. ಇದು ಏಕೆ ಕ್ಲಿಷ್ಟಕರ ಎಂದರೆ ಅದು ಭಾರತ ಮೂಲದ ಪದ ಅಲ್ಲ. ಭಾರತಕ್ಕೆ ಆಕಸ್ಮಾತ್‌ ಆಮದಾದದ್ದು. ಇಲ್ಲಿಯ ವಿದ್ಯಮಾನಕ್ಕೆ ಹೊಂದಿಕೆ ಮಾಡುವ ಆತುರದಲ್ಲಿ ಕಪೋಲಕಲ್ಪಿತ ವ್ಯಾಖ್ಯಾನಗಳೂ ಹಾಗೂ ವಿಧವಿಧದ ಪರಿಕಲ್ಪನೆಗಳು ಇದರ ಸುತ್ತ ಹುಟ್ಟಿಕೊಂಡಿವೆ. ಭಾರತೀಯ ಸಂವಿಧಾನದಲ್ಲಿ ಉಲ್ಲೇಖೀಸಲ್ಪಟ್ಟ ಈ ಶಬ್ದ ಈಗ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಕೇಂದ್ರ ಸಚಿವರಾದ ಅನಂತ್‌ ಕುಮಾರ್‌ ಹೆಗಡೆಯವರು ಸಂವಿಧಾನ ಬದಲಾಯಿಸುವುದರ ಮೂಲಕ ಸೆಕ್ಯುಲರ್‌ ಪದದ ಅಸ್ತಿತ್ವವನ್ನೇ ತೆಗೆದು ಹಾಕಲಾಗುವುದೆಂಬ ಅರ್ಥದಲ್ಲಿ ಆಡಿದ ಮಾತು ಬಿರುಸಿನ ಚರ್ಚೆಗೆ ಪ್ರೇರಣೆ ನೀಡಿದಂತಿದೆ. ಕೆಲವು ರಾಜಕೀಯ ಪಕ್ಷಗಳು ಹೆಗಡೆಯವರು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಹಾಗೂ ಅದಕ್ಕಾಗಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸುತ್ತಿದ್ದಾವೆ. ಹಾಗಾಗಿ ಸಂವಿಧಾನದಲ್ಲಿ ಅದರ ಅಸ್ತಿತ್ವವೇನೆಂಬುದರ ಚಿಂತನೆ ಪ್ರಸ್ತುತ.

ಈ ಶಬ್ದದ ಹುಟ್ಟು ಹಾಗೂ ಇತಿಹಾಸ 1976ನೇ ಇಸವಿಯಿಂದ ಆರಂಭವಾಗುತ್ತದೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್‌ ಸರಕಾರ ತಂದ 42ನೇ ಸಂವಿಧಾನ ತಿದ್ದುಪಡಿಯಲ್ಲಿ ಸಂವಿಧಾನದ ಪ್ರಸ್ತಾವನೆಗೆ ಎರಡು ಶಬ್ದಗಳನ್ನು ಸೇರಿಸಲಾಯಿತು. ಅವುಗಳು ಕ್ರಮವಾಗಿ ಸೋಶಿಯಲಿಸ್ಟ್‌ ಮತ್ತು ಸೆಕ್ಯುಲರ್‌. ಭಾರತೀಯ ಭಾಷೆಗಳಲ್ಲಿ ಇವುಗಳನ್ನು ಸಮಾಜವಾದಿ ಹಾಗೂ ಜಾತ್ಯತೀತವೆಂದು ವ್ಯಾಖ್ಯಾನಿಸಿಕೊಳ್ಳಲಾಯಿತು. ಸೆಕ್ಯುಲರ್‌ ಎಂದರೆ ಜಾತ್ಯತೀತ  ಎಂಬ ತರ್ಜುಮೆಗೆ ನಿರ್ದಿಷ್ಟ ಆಧಾರವನ್ನು ನೀಡಿ ಪ್ರತಿಪಾದಿಸಿರುವುದು ಕಂಡುಬರುವುದಿಲ್ಲ. 

ವಿಪರ್ಯಾಸವೆಂದರೆ ಇದೇ ಕಾಂಗ್ರೆಸ್‌ ಸರಕಾರ ಸಮಾಜವಾದಿ ನೀತಿಗೆ ತಿಲಾಂಜಲಿ ಇಟ್ಟು 1991ರಲ್ಲಿ ಉದಾರೀಕರಣ ತತ್ವಕ್ಕೆ ಚಾಲನೆ ನೀಡಿತು ಎನ್ನುವುದು ಬೇರೆ ಮಾತು. ಇರಲಿ, ಇದರಿಂದ ದೇಶಕ್ಕೆ ಒಳಿತೇ ಆಯಿತು.ಆದರೆ ಈ ಸೆಕ್ಯುಲರ್‌ ಅಥವಾ ಜಾತ್ಯತೀತ  ಎಂಬ ಪದವನ್ನು ಮಾತ್ರ ಕೆಲವು ರಾಜಕೀಯ ಪಕ್ಷಗಳು ಜತನದಿಂದ ಕಾಪಾಡಿಕೊಂಡು ಇದು ಅಲ್ಪಸಂಖ್ಯಾತರ ಹಿತರಕ್ಷಣೆಗೆ ಇರುವ ಶಬ್ದ ಎಂಬ ಹಾಗೆ ಸಂದರ್ಭ ಸಿಕ್ಕಿದಾಗಲೆಲ್ಲ ಬಿಂಬಿಸುತ್ತಾ ಇವೆ. ಹೀಗಾಗಿ ಅದರ ನಿಜ ಅರ್ಥವೇನು ಹಾಗೂ ಅದು ಸೇರ್ಪಡೆಗೊಂಡ ಬಳಿಕ ಆದ ಬದಲಾವಣೆ ಏನೆಂದು ತಿಳಿಯುವ ಕುತೂಹಲ ಉಂಟಾಗದಿರದು.

ತುರ್ತು ಪರಿಸ್ಥಿತಿಯ ಅನಂತರ ಆಡಳಿತಕ್ಕೆ ಬಂದ ಜನತಾ ಸರಕಾರ ತುರ್ತು ಪರಿಸ್ಥಿಯ ಕಾಲದಲ್ಲಿ ನಡೆದ ಅಹಿತಕರ ಘಟನೆಗಳ ಕುರಿತು ಹಾಗೂ ಮುಖ್ಯವಾಗಿ 42ನೇ ತಿದ್ದುಪಡಿಯ ದುಷ್ಪರಿಣಾಮಗಳ ಅಧ್ಯಯನ ನಡೆಸಲು ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು. ಆ ಸಮಿತಿ ಅನೇಕ ಶಿಫಾರಸುಗಳ ಜತೆಗೆ ಈ ಸೋಶಿಯಲಿಸ್ಟ್‌ ಹಾಗೂ ಸೆಕ್ಯುಲರ್‌ ಪದಗಳು ನಿರರ್ಥಕ ಹಾಗೂ ಅಪ್ರಸ್ತುತ, ಅವುಗಳನ್ನು ತೆಗೆದುಹಾಕಬಹುದು ಎಂದು ಶಿಫಾರಸು ಮಾಡಿತ್ತು. ಏಕೆಂದರೆ ಈ ಶಬ್ದಗಳು ಕೊಡಮಾಡಬಹುದಾದ ಅವಕಾಶಗಳು ಮೂಲ ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಒಳಗೊಂಡಿದೆ. 

ಭಾರತೀಯ ಸಂವಿಧಾನದ ಮೂಲ ತತ್ವವೇ ಸಮಾನತೆ ಹಾಗೂ ಸಮಾನ ಅವಕಾಶ. ಪರಿಚ್ಛೇದ 14ರಲ್ಲಿ ಸಮಾನತೆ, ಆರ್ಟಿಕಲ್‌ 15 ಮತ್ತು 16ರಲ್ಲಿ ಧರ್ಮದ ನೆಲೆಯಲ್ಲಿ ತಾರತಮ್ಯ ಎಸಗದಂತೆ ರಕ್ಷಣೆ, ಆರ್ಟಿಕಲ್‌ 25 ರಿಂದ 28ರ ವರೆಗೆ ನಂಬಿಕೆ ಹಾಗೂ ಧಾರ್ಮಿಕ ವ್ರತಾಚರಣೆಗಳ ಹಕ್ಕು ಭದ್ರಪಡಿಸಲಾಗಿದೆ ಮತ್ತು ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಕ್ಕು ಕಲಂ 29 ಮತ್ತು 30ರಲ್ಲಿ ರಕ್ಷಿಸಲ್ಪಟ್ಟಿದೆ. 42ನೇ ತಿದ್ದುಪಡಿಗೆ ಮುನ್ನವೇ ಈ ಅಂಶಗಳಿದ್ದು ಪ್ರಸ್ತಾವನೆಗೆ ಹೊಸತಾಗಿ ಸೇರ್ಪಡೆಗೊಂಡ ಪದಗಳು ಯಾವ ಹೆಚ್ಚಿನದನ್ನು ಕೊಡದೆ ಕೇವಲ ತಮಗೆ ಸರಿ ಕಂಡಂತೆ ವ್ಯಾಖ್ಯಾನ ಮಾಡಲು ಅವಕಾಶ ಕಲ್ಪಿಸುತ್ತದೆ ಎನ್ನುವುದು ಸಮಿತಿಯ ಶಿಫಾರಸಿನ ಸಾರಾಂಶ.

ಸಮಿತಿಯ ಶಿಫಾರಸನ್ನು ಸರಕಾರ ಒಪ್ಪಿಕೊಂಡಿತಾದರೂ ಆ ಶಬ್ದಗಳನ್ನು ತೊಡೆದು ಹಾಕುವ ಪ್ರಕ್ರಿಯೆ ಆರಂಭಿಸಿರಲಿಲ್ಲ. ಅಷ್ಟರಲ್ಲೇ ಜನತಾ ಸರಕಾರ ಪತನಗೊಂಡು ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. ಅನಂತರ ಈ ಶಬ್ದಗಳನ್ನು ಕಳೆಯುವ ಅಥವಾ ಉಳಿಸಿಕೊಳ್ಳಬೇಕೆಂಬ ಪ್ರತಿಪಾದನೆಯ ಗೋಜಿಗೆ ಮುಂದಿನ ಯಾವ ಸರಕಾರಗಳು ಹೋಗಿಲ್ಲ. ಹಾಗೆ ಈ ಪದಗಳು ಸಂವಿಧಾನದಲ್ಲಿ ನೆಲೆಗೊಂಡವು ಮತ್ತು ಅವರವರ ಮೂಗಿನ ನೇರಕ್ಕೆ ಸೀಮಿತವಾದ ವ್ಯಾಖ್ಯಾನಗಳು ಮುಂದುವರಿದವು. ಆದರೆ ಸರ್ವೋಚ್ಚ ನ್ಯಾಯಾಲಯ ಬೊಮ್ಮಾಯಿ v/s ಸಂಸ್ಕೃತ ಕಲಿಕಾ ಪ್ರಕರಣದಲ್ಲಿ ಈ ಕುರಿತಾದ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸುವ ಪ್ರಯತ್ನ ನಡೆಸಿದೆ. ಆದರೆ ಸೆಕ್ಯುಲರ್‌ ಪದದ ಸೇರ್ಪಡೆಯಿಂದ ಮೂಡಿದ ತಪ್ಪು ಪರಿಕಲ್ಪನೆ ಹಾಗೆ ಮುಂದುವರಿಯಿತು. ಆ ಶಬ್ದಗಳ ಸೇರ್ಪಡೆ ಒಂದು ರಾಜಕೀಯ ಪಕ್ಷದ ಪ್ರಣಾಳಿಕೆಯಂತೆ ಕಂಡು ಬರುತ್ತದೆ ಹಾಗೂ ಅಂಥ ಅನವಶ್ಯಕ ಪದಗಳು ಉಚಿತವಲ್ಲವೆಂದು ಹೇಳಿದ ಸಮಿತಿಯ ಶಿಫಾರಸನ್ನು ಯಾವ ಸರಕಾರವೂ ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ. 

ಇದು ಪಶ್ಚಿಮದಲ್ಲಿ ಉದಯಿಸಿದ, ಚರ್ಚ್‌ನಿಂದ ಪ್ರಜಾ ಆಡಳಿತವನ್ನು ಬೇರ್ಪಡಿಸುವ ಉದ್ದೇಶದಿಂದ ದೀರ್ಘ‌ಕಾಲ ನಡೆದ ಚಳವಳಿಯ ಕಾಲದಲ್ಲಿ ಹುಟ್ಟಿಕೊಂಡ ಶಬ್ದ. ನಿರೀಶ್ವರವಾದಿಯಾದ ಈ ಶಬ್ದದ ಜನಕ ಹೋಲಿಯಾಕ್‌ ಹೇಳುವಂತೆ ಧರ್ಮಕ್ಕೆ ಹೊರತಾದ ಒಂದು ಲೌಕಿಕ ಸಮಾಜವನ್ನು ಸೃಷ್ಟಿಸುವುದು ಇದರ ಹಿಂದಿನ ಉದ್ದೇಶ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಡಳಿತವು ಅಥವಾ ಆಧುನಿಕ ಭಾಷೆಯಲ್ಲಿ ಹೇಳುವುದಾದರೆ ಸರಕಾರ ಧರ್ಮ ನಿರಪೇಕ್ಷವಾಗಿರತಕ್ಕದ್ದು. ಇದು ಚಳವಳಿಯ ತಿರುಳು ಅಥವಾ ಮೂಲ ಉದ್ದೇಶ. ಸೆಕ್ಯುಲರ್‌ ಎನ್ನುವುದು ಈ ಚಳವಳಿಯ ಫ‌ಲರೂಪ. ಭಾರತಕ್ಕೆ ಇದರ ಅಗತ್ಯವಿದೆಯೇ? ಖಂಡಿತ ಇಲ್ಲ. ಏಕೆಂದರೆ ಭಾರತೀಯ ಸಂವಿಧಾನದ ಮೂಲ ರಚನೆಯಲ್ಲಿಯೇ ಸರಕಾರ ಧರ್ಮ ನಿರಪೇಕ್ಷ ಎಂಬ ಹಾಗೆ ಕಡೆದು ನಿಂತಿದೆ. ಭಾರತದ ಪೂರ್ವ ಇತಿಹಾಸದಲ್ಲಿಯೂ ಧಾರ್ಮಿಕ ಕೇಂದ್ರಗಳು ಪ್ರಜಾಡಳಿತ ನಡೆಸಿದ ಉದಾಹರಣೆ ಇಲ್ಲ. ರಾಜ ಮಹಾರಾಜರು ಧರ್ಮ ಪರಿಪಾಲನೆ ಮಾಡುತ್ತಿದ್ದರು. ಈಗ ಬಹು ಧರ್ಮಿಯರಿರುವ ರಾಷ್ಟ್ರದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಶಕ್ತವಾದ ಸಂವಿಧಾನವಿದೆ.ಅದನ್ನು ರಚಿಸಿದ ನಿರ್ಮಾತೃಗಳಿಗೆ ನಾವು ಸದಾ ಋಣಿಗಳು. ಈಗ ಹೇಳಿ ಭಾರತೀಯ ಸಂದರ್ಭದಲ್ಲಿ ಈ ಸೆಕ್ಯುಲರ್‌ ಪದದ ಔಚಿತ್ಯ ಏನೆಂದು? 

ವಸ್ತುಸ್ಥಿತಿ ಹೀಗಿರುವಾಗ ಕೆಲವು ರಾಜಕೀಯ ಪಕ್ಷಗಳು ಜಾತ್ಯತೀತ ಎಂಬ ಪದವನ್ನು ಸದಾ ಪಠಿಸುತ್ತಿರುವುದು ತಾರತಮ್ಯದ ಆಡಳಿತಕ್ಕೆ ಎಡೆಮಾಡಿ ಕೊಡುತ್ತದೆ. ಸಂವಿಧಾನದಲ್ಲಿ ಸೆಕ್ಯುಲರ್‌ ಪದ ಈಗ ಇದೆಯಾದರೂ ಅದರ ಸೇರ್ಪಡೆಗೆ ಮುನ್ನ ಇದ್ದ ಯಾವ ಸಾಮಾಜಿಕ ಹಾಗೂ ರಾಜಕೀಯ ಸ್ಥಿತಿ ಬದಲಾಗಲಿಲ್ಲ, ಬದಲಾಗಲು ಅವಕಾಶವೂ ಇಲ್ಲ. ಆದರೆ ಅದರ ಪುನರುಚ್ಚಾರ ಮತ್ತು ಅದನ್ನು ಉಚ್ಚರಿಸುವ ಸನ್ನಿವೇಶ, ಸಂದರ್ಭಗಳು ಗೊಂದಲಕ್ಕೆ ಹೇತುವಾಗುವ ಸಾಧ್ಯತೆಯುಂಟು. ಹಾಗಾಗಿ ರಾಜಕೀಯ ವ್ಯಕ್ತಿಗಳಾಗಲಿ, ಸಾಹಿತಿ, ಬುದ್ಧಿಜೀವಿಗಳಾಗಲಿ ಸೆಕ್ಯುಲರ್‌ ಪದವನ್ನು ಬೇಕಾಬಿಟ್ಟಿ ಬಳಸದಿರುವುದೇ ಉತ್ತಮ. ಅದರ ಪಾಡಿಗೆ ಅದು ಇರಲಿ. 

ಇನ್ನು ಸಂವಿಧಾನ ಬದಲಾಯಿಸುವುದು ಅಥವಾ ವಾಡಿಕೆ ಭಾಷೆಯಲ್ಲಿ ಹೇಳುವ ತಿದ್ದುಪಡಿಗೆ ಸಂವಿಧಾನದಲ್ಲಿಯೇ ಅವಕಾಶ ಕಲ್ಪಿಸಲಾಗಿದೆ. ಆರ್ಟಿಕಲ್‌ 368ರಲ್ಲಿ ತಿದ್ದುಪಡಿ ಅಂದರೆ, ತೊಡೆದು ಹಾಕುವ, ಭಾಗಶಃ ಮಾರ್ಪಾಡುಗೊಳಿಸುವ ಹಾಗೂ ಹೊಸದಾಗಿ ಸೇರ್ಪಡೆಗೊಳಿಸುವ ಅಧಿಕಾರ ಸಂಸತ್ತಿಗೆ ದತ್ತವಾಗಿದೆ. ಈ ಎಪ್ಪತ್ತು ವರ್ಷದಲ್ಲಿ ಹೆಚ್ಚು ಕಡಿಮೆ ಅದರ ಇಮ್ಮಡಿ ಪ್ರಮಾಣದ ಸಂವಿಧಾನ ತಿದ್ದುಪಡಿಗಳಾಗಿವೆ. ಭಾರತದಲ್ಲಿ ಇದು ಸರ್ವೆ ಸಾಮಾನ್ಯ. ಇದಕ್ಕೆ ಆಡಳಿತ ನಡೆಸುವ ರಾಜಕೀಯ ಪಕ್ಷದ ಬಹುಮತ ಹಾಗೂ ಸಾರ್ವಜನಿಕ ಹಿತಾಸಕ್ತಿ ಮುಖ್ಯ.

ಖೇದದ ವಿಚಾರವೆಂದರೆ ಆಡಳಿತ ನಡೆಸುವ ರಾಜಕೀಯ ಪಕ್ಷಗಳ ಕಾರ್ಯವೈಖರಿ ಅಮಾಯಕ ಮತದಾರರನ್ನು ಮರುಳುಗೊಳಿಸಿ ಅಧಿಕಾರಕ್ಕೆ ಬರುವ ಹಾಗೂ ಅಧಿಕಾರದಲ್ಲಿ ಮುಂದುವರಿಯುವ ಪ್ರಯತ್ನ ಮಾತ್ರ. ಸಂವಿಧಾನದ ಮೂಲಾಶಯಕ್ಕೆ ಬದ್ಧವಾಗಿ ಆಡಳಿತ ನಡೆಸುವ ಸೇವಾಕಾಂಕ್ಷಿ ರಾಜಕಾರಣಿಗಳು ಇಲ್ಲವೇ ಇಲ್ಲವೆಂದರೂ ತಪ್ಪಲ್ಲ. ಧರ್ಮ ನಿರಪೇಕ್ಷ ಸರಕಾರದ ಪ್ರತಿನಿಧಿಗಳು ಧರ್ಮದ ಕುರಿತು ಸಭೆ ನಡೆಸುತ್ತಾರೆ. ಪರಿಸ್ಥಿತಿ ಅಲ್ಲಿಗೆ ಬಂದು ನಿಂತಿದೆ. ಸಾರ್ವಜನಿಕರು ಈ ಮರ್ಮವನ್ನು ಅರಿತು ವ್ಯವಹರಿಸಬೇಕಾದ ಕಾಲ ಸನ್ನಿಹಿತವಾಗಿದೆ. ಇಲ್ಲವಾದರೆ ಪ್ರಜಾಸತ್ತೆ ಹೆಸರಿಗೆ ಮಾತ್ರ ಇರುತ್ತದೆ. ಹಾಗಾಗದಂತೆ ತಡೆಯಲು ನಾಗರಿಕ ಸಂಘಟನೆಗಳು, ಸಾರ್ವಜನಿಕ ಸೇವಾ ಸಂಸ್ಥೆಗಳು ಸಮೂಹ ಅರಿವು ಆಂದೋಲನದಲ್ಲಿ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ. 

ಈಗ ನಮ್ಮ ದೇಶದ ಸಾಮಾನ್ಯ ಪೌರನಿಗೆ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಗೆ ನಾವು ಸಂಕಲ್ಪಿಸಿ ಅರ್ಪಿಸಿಕೊಂಡ ಸಂವಿಧಾನದ ಅರಿವು ಅತಿ ಅಗತ್ಯ. ಆ ಮಾಹಿತಿ ಪ್ರಸರಣದ ಕಾರ್ಯ ಕೈಗೊಳ್ಳುವ ಕೆಲಸ ಸೇವಾಸಂಸ್ಥೆಗಳ ಮೂಲಕ ಆಗಲಿ.

ಬೇಳೂರು ರಾಘವ ಶೆಟ್ಟಿ    

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ