ಕನ್ನಡ ಉಳಿಯಬೇಕಾದದ್ದು ಎಲ್ಲಿ?

Team Udayavani, Oct 30, 2019, 4:09 AM IST

ಭಾರತವು ಹಲವು ರಾಜ್ಯಗಳ ಒಕ್ಕೂಟವಾಗಿದ್ದು ಅಲ್ಲಲ್ಲಿಯ ಆಡಳಿತ ಆಯಾ ರಾಜ್ಯದ ಭಾಷೆಯಲ್ಲಿ ನಡೆಯುತ್ತದೆ. ಒಕ್ಕೂಟ ಹಂತದಲ್ಲಿ ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕೆಂಬ ಪ್ರಸ್ತಾಪ ಹಿಂದಿನಿಂದಲೂ ಇದೆ. ವಿವಿಧತೆಯಲ್ಲಿ ಏಕತೆ ಇರುವ ರಾಷ್ಟ್ರ ನಮ್ಮದಾಗಿದ್ದು ಹಲವಾರು ಧರ್ಮ, ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಆಹಾರ ಪದ್ಧತಿ, ಪೋಷಾಕು ಇಲ್ಲಿವೆ. ಬಹುಶಃ ವಿಶ್ವದ ಯಾವ ರಾಷ್ಟ್ರದಲ್ಲಿಯೂ ಈ ಬಗೆಯ ವೈವಿಧ್ಯತೆ ಇರಲಿಕ್ಕಿಲ್ಲ. ಒಂದು ನಿರ್ದಿಷ್ಟ ಭಾಷೆಯನ್ನು ಭಾರತದ ರಾಷ್ಟ್ರಭಾಷೆಯನ್ನಾಗಿ ಮಾಡದಿರುವುದಕ್ಕೆ ಇದು ಕಾರಣವಾಗಿರಬಹುದು.

ಸಂವಿಧಾನದ ಅನುಚ್ಛೇದ 346ರ ಪ್ರಕಾರ ದೇವನಾಗರಿ ಲಿಪಿಯ ಹಿಂದಿಯನ್ನು ಕೇಂದ್ರ ಸರಕಾರದ ಆಡಳಿತಾತ್ಮಕ ಅಥವಾ ಅಧಿಕೃತ ಭಾಷೆ ಎಂದು ಪರಿಗಣಿಸಲಾಗಿದೆ. 344(1) ಮತ್ತು 351 ಅನುಚ್ಛೇದಗಳ ಪ್ರಕಾರ ಹಿಂದಿಯನ್ನೂ ಒಳಗೊಂಡು 22 ಭಾಷೆಗಳನ್ನು ರಾಷ್ಟ್ರೀಯ ಭಾಷೆಗಳಾಗಿ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಲಾಗಿದೆ. ಇಂಗ್ಲಿಷ್‌ ಎಂಟನೇ ಪರಿಚ್ಛೇದದಲ್ಲಿ ಇಲ್ಲದಿದ್ದರೂ ಅದು ಭಾರತದಲ್ಲಿ ಸಂಪರ್ಕ ಭಾಷೆಯಾಗಿದೆ. ಬ್ರಿಟಿಷ‌ರು ಭಾರತವನ್ನು ಬಿಟ್ಟು ಹೋದರೂ ತಮ್ಮ ಭಾಷೆಯನ್ನು ಭಾರತದಲ್ಲಿ ಹಸನಾಗಿ ಬಿತ್ತಿ ಹೋದರು. ಬಹಳಷ್ಟು ಕಷ್ಟಪಟ್ಟು ಸ್ವಾತಂತ್ರ್ಯ ಪಡೆದ ನಾವು ಬ್ರಿಟಿಷರ ಭಾಷೆಯನ್ನು ಸಂಪರ್ಕ ಭಾಷೆಯಾಗಿ ಉಳಿಸಿಕೊಂಡಿರುವುದು ಅಷ್ಟೊಂದು ಸಮಂಜಸ ಎನಿಸುವುದಿಲ್ಲ.

ಆದರೆ ಉಪಯೋಗಿಸದೆ ನಿರ್ವಾಹ ಇಲ್ಲ. ಕಾರಣ ಜಗತ್ತಿನ ಹೆಚ್ಚಿನೆಡೆ ಸಂಪರ್ಕ ಭಾಷೆಯಾಗಿ ಇಂಗ್ಲಿಷ್‌ ಮೇಲ್ಗೆ„ ಸಾಧಿಸಿದೆ. ಭಾರತ ದೊಳಗಡೆಯೂ ಎಲ್ಲೆಡೆ ಸಂವಹನ ಸಾಧಿಸಬಲ್ಲ ಯಾವುದೇ ಭಾರತೀಯ ಭಾಷೆ ಇಲ್ಲ. ಆ ಮಟ್ಟಿಗೆ ಹಿಂದಿ ಅಧಿಕ ಜನರಾಡುವ ಭಾಷೆ ಎನ್ನಬಹುದು. ಆದರೆ ಈ ಸಂಖ್ಯೆ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂ ತಲೂ ಕಡಿಮೆ. ಸುಮಾರು ಶೇ.45 ಭಾರತೀಯರು ಹಿಂದಿ ಭಾಷಿಕರಿ ದ್ದರೆ ಉಳಿದ ಶೇ. 55 ಜನ ಅವರವರ ರಾಜ್ಯದ ಭಾಷೆಗಳನ್ನು ಮತ್ತು ನೂರಾರು ಸ್ಥಳೀಯ ಭಾಷೆಗಳನ್ನು ಉಪಯೋಗಿಸುತ್ತಾರೆ. ವಿಶ್ವದ ಇತರ ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಸಂದರ್ಭ ಗಳಲ್ಲಿ ಸಮಂಜಸವಾಗಿಯೇ ನಮ್ಮದೊಂದು ರಾಷ್ಟ್ರಭಾಷೆ ಇರ ಬೇಕೆಂಬ ಅಭಿಲಾಷೆ ಹಲವರಲ್ಲಿ ಇರಬಹುದಾದರೂ ಭಾರತದಲ್ಲಿ ಅನೇಕ ಭಾಷೆ ಗಳ ಸಾವಿರಾರು ವರ್ಷಗಳ ಇತಿಹಾಸದ ಎದುರು ಯಾವುದೇ ಒಂದು ಭಾಷೆಯನ್ನು ಒಪ್ಪಿಕೊಳ್ಳಲು ಬಹುಜನರ ವಿರೋಧ ಇದ್ದೇ ಇದೆ.

ಹಿಂದಿ ಕೇಂದ್ರ ಸರಕಾರದ ಆಡಳಿತಾತ್ಮಕ ಅಥವಾ ಅಧಿಕೃತ ಭಾಷೆ ಎಂದು ಪರಿಗಣಿತವಾಗಿದ್ದರೂ ಕೆಲವು ರಾಜ್ಯಗಳು ಹಿಂದಿಯನ್ನು ವಿರೋಧಿಸುತ್ತವೆ. ಇವರಲ್ಲಿ ತಮಿಳುನಾಡು ಮುಂಚೂಣಿಯಲ್ಲಿದೆ. ತಮಿಳರು ಕಟ್ಟಾ ಭಾಷಾಭಿಮಾನಿಗಳು. ತಮಿಳುನಾಡಲ್ಲಿ ಪ್ರವಾಸ ಮಾಡುವಾಗ ಸುಶಿಕ್ಷಿತ‌ರಲ್ಲೂ ಇಂಗ್ಲಿಷ್‌ನಲ್ಲಿ ಕೇಳಿದರೆ ತಮಿಳಿನಲ್ಲಿ ಉತ್ತರಿಸುವ ಜನರನ್ನು, ಹೆದ್ದಾರಿಗಳಲ್ಲಿ ಹತ್ತಾರು ಕಿಲೋಮೀಟರ್‌ಗಳಷ್ಟು ಕ್ರಮಿಸಿದರೂ ನಾಮಫ‌ಲಕಗಳಲ್ಲಿ ಅನ್ಯಭಾಷೆ ಗೋಚರಿಸದೆ ತಮಿಳು ಮಾತ್ರ ರಾರಾಜಿಸುತ್ತಿದೆ. ಏನಿದ್ದರೂ ಅಲ್ಲಿ ತಮಿಳಿಗೇ ಪ್ರಾಧಾನ್ಯ.

ಭಾರತ ಸ್ವತಂತ್ರವಾಗುವ ಮೊದಲಿನಿಂದಲೇ ದೇಶದ ಹೆಚ್ಚಿನೆಡೆ ಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಅನುಸರಿಸಿಕೊಂಡು ಬರಲಾಗಿದೆ. ಹೆಚ್ಚಾಗಿ, ಈ ಭಾಷೆಗಳಲ್ಲಿ ಒಂದು ಸ್ಥಳೀಯ, ಇನ್ನೊಂದು ರಾಷ್ಟ್ರದೊಳಗಿನ ಮತ್ತೂಂದು ಅಂತಾರಾಷ್ಟ್ರೀಯ ಭಾಷೆ. ಆದರೆ ಈಗೀಗ ವಿದ್ಯಾರ್ಥಿಗಳಿಗೆ ಹೊರೆಯಾಗುವ ಕಾರಣ ನೀಡಿ ಎರಡೇ ಭಾಷೆಗಳಿಗೆ ಒತ್ತು ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಹೀಗೆ ಮಾಡಿದಲ್ಲಿ ಈ ಎರಡೂ ಭಾಷೆಗಳು ವಿದೇಶಿ (ಇಂಗ್ಲಿಷ್‌ನೊಂದಿಗೆ ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್‌ ಇತ್ಯಾದಿ) ಭಾಷೆಗಳಾಗುವ ಅಪಾಯವೂ ಇದೆ.

ಜನಗಣತಿ ಸಂದರ್ಭ ಇಂಗ್ಲಿಷ್‌ ಭಾಷೆಯನ್ನು ಮಾತೃಭಾಷೆ ಎನ್ನುವವರ ಸಂಖ್ಯೆ ಹೆಚ್ಚಳವಾಗುತ್ತಾ ಇದೆ. ಕನಿಷ್ಟ ಒಂದು ಶತಮಾನಕ್ಕೂ ಆಧಿಕ ಕಾಲದಿಂದ ಕರ್ನಾಟಕದಲ್ಲಿ ಪ್ರಾಥಮಿಕ / ಪ್ರೌಢ ಶಿಕ್ಷಣದಲ್ಲಿ ಕನ್ನಡಕ್ಕೆ ಪ್ರಾಧಾನ್ಯವಿತ್ತು. ಈಚಿನ ವರ್ಷಗಳಲ್ಲಿ ಆಂಗ್ಲ ಮಾಧ್ಯಮ ಈ ಪ್ರಾಧಾನ್ಯತೆಯನ್ನು ಕಬಳಿಸಿದೆ.

ಕರ್ನಾಟಕದಲ್ಲಿ ರಾಜ್ಯಭಾಷೆಯಾದ ಕನ್ನಡ ಕಡ್ಡಾಯ ಶಿಕ್ಷಣ ಮಾಧ್ಯಮವಾಗಬೇಕೆಂದು ಯಾರೆಷ್ಟು ಕೂಗಾಡಿದರೂ ಅದಕ್ಕೆ ಬೆಲೆ ಬಂದಿಲ್ಲ. ರಾಜ್ಯ ಸರಕಾರವೂ ಇಂಗ್ಲಿಷ್‌ ಭಾಷೆಗೆ ಮತ್ತು ಅಂಗ್ಲ ಮಾಧ್ಯ ಮಕ್ಕೆ ಮಣೆ ಹಾಕಿದೆ. ಇನ್ನೊಂದು ದುರಂತ ನೋಡಿ, ಕನ್ನಡಿಗರು ದೇಶದ ಯಾವುದೇ ರಾಜ್ಯಕ್ಕೆ ತೆರಳಿ ಅಲ್ಲಿ ಕನ್ನಡ ಭಾಷೆಯಲ್ಲಿ ವ್ಯವಹರಿಸಲು ಸಾಧ್ಯವಿದೆಯೇ? ಆದರೆ ಕರ್ನಾಟಕದಲ್ಲಿ? ಕನ್ನಡಿಗರು ಉದಾರಿಗಳು. ಇಲ್ಲಿಗೆ ಬಂದು ವರ್ಷಾನುಗಟ್ಟಲೆಯಿಂದ ನೆಲೆ ನಿಂತವರಿಗೂ ಕನ್ನಡ ಕಲಿಸದೆ ಬಂದವರ ಭಾಷೆಯಲ್ಲೇ ನಾವು ವ್ಯವಹರಿಸುತ್ತೇವೆ. ಬೆಂಗಳೂರಾಗಲಿ, ಮಂಗಳೂರಾಗಲಿ, ಹುಬ್ಬಳ್ಳಿ ಯಾಗಲಿ ಅಥವಾ ಬೇರೆ ಪ್ರದೇಶವಾಗಲಿ ಹೊರರಾಜ್ಯಗಳಿಂದ ಬಂದವರು ಇಲ್ಲಿ ಸಲೀಸಾಗಿ ಅವರವರ ಭಾಷೆಗಳಲ್ಲೆ ವ್ಯವಹರಿಸಿ ಜೀವಿಸಬಲ್ಲರು. ಅಂತಹವರ ಅನುಕೂಲಕ್ಕಾಗಿ ಕನ್ನಡಿಗರೂ ಬಂದಿರುವ ಜನರ ಭಾಷೆಗಳಲ್ಲೇ ನಾಮಫ‌ಲಕ ಹಾಕಿ ಸಹಕರಿಸುತ್ತಾರೆ. ಉದಾಹರಣೆಗೆ ಮಂಗಳೂರಿನಲ್ಲಿ ಮಲಯಾಳಂ, ಬೆಂಗಳೂರಿನಲ್ಲಿ ತಮಿಳು ಭಾಷೆಯಲ್ಲಿರುವ ನಾಮಫ‌ಲಕಗಳು ಅನೇಕ ಕಡೆ ರಾರಾಜಿ ಸುತ್ತಿವೆ. ಮಂಗಳೂರು ರೈಲ್ವೇ ನಿಲ್ದಾಣವಂತೂ ಮಲಯಾಳಿಮಯ ಎಂಬುದು ಸರ್ವವೇದ್ಯ. ಆದರೆ ಕೇರಳ, ತಮಿಳುನಾಡು, ಆಂಧ್ರ ,  ತೆಲಂಗಾಣ ಅಥವಾ ಮಹಾರಾಷ್ಟ್ರಗಳಲ್ಲಿ ಎಷ್ಟು ಕಡೆ ಕನ್ನಡ ನಾಮಫ‌ಲಕಗಳಿವೆ? ಎಷ್ಟು ಕಡೆ ಕನ್ನಡದಲ್ಲಿ ವ್ಯವಹರಿಸಬಹುದು?

ಇನ್ನೊಂದು ವಿಷಯ ಗಮನಿಸೋಣ, ಈಗೀಗ ರಾಜ್ಯದ ಅನೇಕ ಕಡೆ ಮೇಸ್ತ್ರಿ, ಕಾರ್ಪೆಂಟರ್‌ (ಬಡಗಿ), ವಾಹನ ಚಾಲನೆ ಇತ್ಯಾದಿ ಕೆಲಸಗಳಲ್ಲಿ ಉತ್ತರ ಭಾರತ ಅಥವಾ ಪೂರ್ವ ಭಾರತದವರೇ ತುಂಬಿದ್ದಾರೆ. ಈ ಜನರಲ್ಲಿ ಬಂಗಾಳಿಗರೂ ಬೇಕಾದಷ್ಟು ಸಂಖ್ಯೆಯಲ್ಲಿದ್ದಾರೆ. ಅಂತಹ ಉದ್ಯೋಗಿಗಳಲ್ಲಿ ಕೆಲವರು ಕರ್ನಾಟಕದಲ್ಲಿ ನೆಲೆನಿಂತು ದಶಕಗಳೇ ಕಳೆದಿವೆ. ಈಗಲೂ ಅವರಿಂದ ಹಿಂದೀ ಮೆ ಬೋಲಿಯೆ ಅಥವಾ ಕನ್ನಡ್‌ ಮಾಲುಮ್‌ ನಹೀಂ ಅಥವಾ ಕನ್ನಡ್‌ ನಹೀಂ ಆತಾ ಅಂತಲೋ ಕೇಳಿ ಬರುತ್ತದೆ. ಅಂತಹವರು ಕನ್ನಡ ಶಬ್ದಗಳನ್ನು ಆಲಿಸುವಂತೆ ಮಾಡಲು ಕರ್ನಾಟಕದ ಜನರಿಗೂ ಒಂದು ರೀತಿಯ ಸಂಕೋಚ. ಆ ಕಾರಣಕ್ಕೆ ಹರಕು-ಮುರುಕು ಹಿಂದಿಯಲ್ಲಿ ಮಾತನಾಡಿ ನಮ್ಮ ಹಿಂದಿ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ.

ಕೆಲ ಸಮಯದ ಹಿಂದೆ ಬೆಂಗಳೂರಿನಲ್ಲಿ ಅಲ್ಲೇ ವಾಸಿಸುವ ಅಚ್ಚ ಕನ್ನಡಿಗರೊಬ್ಬರೊಂದಿಗೆ ಓಲಾ ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ಸಂದರ್ಭ ಒದಗಿತ್ತು. ಚಾಲಕನಲ್ಲಿ ಕನ್ನಡದಲ್ಲಿ ಮಾತಾಡುತ್ತಿದ್ದಂತೆ ಆತ ಹಿಂದೀ ಮೆ ಬೋಲಿಯೆ ಎಂದ. ಸಹಪ್ರಯಾಣಿಕನೊಡನೆ ತಮಾಷೆಗೆಂಬಂತೆ ಕೇಳಿದೆ ಇಂತಹವರು ಕನ್ನಡ ಕಲಿಯುವುದು ಯಾವಾಗ? ನನ್ನನ್ನು ತಪ್ಪು ತಿಳಿದುಕೊಂಡ ಸಹಪ್ರಯಾಣಿಕರು ಇಂತಹವರಿಗೆ ಕನ್ನಡ ಕಲಿಸುವುದು ನನ್ನ ಕೆಲಸವಲ್ಲ ಎಂದರು. ಕನ್ನಡಿಗರು ಹೀಗೆಂದರೆ ರಾಜ್ಯಭಾಷೆಗೆ ಮಹತ್ವ ಬರುವುದಾದರೂ ಹೇಗೆ? ಇತ್ತೀಚೆಗೆ ವಿಜಯಪುರಕ್ಕೆ ಹೋಗಿದ್ದೆ. ಸರಕಾರಿ ಬಸ್ಸು ಅಪರಾಹ್ನ ಹುಬ್ಬಳ್ಳಿ ಬಿಟ್ಟಂತೆ ಹೆಚ್ಚಿನ ಪ್ರಯಾಣಿಕರು ಅವರವರೊಳಗೆ ಮತ್ತು ಮೊಬೈಲ್‌ನಲ್ಲಿ ಗಟ್ಟಿಯಾಗಿ ಮಾತಾಡುವವರೇ. ಹಿಂದಿ, ಉರ್ದು, ಮರಾಠಿ ಇತ್ಯಾದಿ ಭಾಷೆಗಳ ನಡುವೆ ಅಪರೂಪಕ್ಕೆಂಬಂತೆ ಕನ್ನಡ ಕಿವಿ ಮೇಲೆ ಬೀಳುತ್ತಿತ್ತು. ಮಾತಾಡುವವರು ಮತ್ತು ಅವರಿಂದ ಮಾತಾಡಿಸಲ್ಪಡುವವರು ಸ್ಥಳೀಯರೇ ಎಂಬುದು ಅವರ ಮಾತು / ಶಬ್ದಗಳಿಂದ ತಿಳಿದುಬರುತ್ತಿತ್ತು. ವಿಜಯಪುರ ನಗರದಲ್ಲಿ ಆಟೋರಿಕ್ಷಾದಲ್ಲಿ ಸಂಚರಿಸುವಾಗ ಚಾಲಕನೊಡನೆ ಕನ್ನಡದಲ್ಲಿ ಮಾತಾಡಲು ಯತ್ನಿಸಿದೆ. ಕನ್ನಡ ಬರುವುದಿಲ್ಲ ಎಂದ ತರುಣ ಚಾಲಕ. ಎಷ್ಟು ವರ್ಷಗಳಿಂದ ವಿಜಯಪುರದಲ್ಲಿದ್ದಿ ಎಂದು ಕೇಳಿದೆ. ಐದು ವರ್ಷಗಳಿಂದ ಎಂದ. ನೋಡಿ ಕನ್ನಡದ ಪರಿಸ್ಥಿತಿ ಐದಲ್ಲ ಐವತ್ತು ವರ್ಷಗಳಾದರೂ ಸಾರ್ವಜನಿಕರ ಸೇವೆಯಲ್ಲಿದ್ದರೂ ಕನ್ನಡ ಕಲಿಯದೆ ಇಲ್ಲಿ ಜೀವಿಸಬಹುದು. ಅದೇ ಫ್ರಾನ್ಸ್‌ನಲ್ಲಿ ಎಲ್ಲಿಗೆ ಹೋದರೂ ಅವರದ್ದೇ ಭಾಷೆ. ಇಂಗ್ಲಿಷ್‌ನಲ್ಲಿ ಕೇಳಿದರೆ ಡೋಂಟ್‌ಕೇರ್‌. ಉತ್ತರಿಸಿದರೂ ಫ್ರೆಂಚಲ್ಲೇ. ಅಲ್ಪಕಾಲದಲ್ಲೇ ಕೆಲವೊಂದು ಫ್ರೆಂಚ್‌ ಶಬ್ದ / ವಾಕ್ಯಗಳನ್ನಾದರೂ ಕಲಿಯುವ ಅನಿವಾರ್ಯತೆ ಅಲ್ಲಿದೆ. ಜಪಾನ್‌ನಲ್ಲಿಯೂ ಇದೇ ಪರಿಸ್ಥಿತಿ ಇದೆ.

ಆದರೆ ಕರ್ನಾಟಕದಲ್ಲಿ? ಕನ್ನಡ ರಾಜ್ಯ ಉದಯವಾಗಿ ಆರು ದಶಕಗಳೇ ಸಂದಿವೆ. ಆ ಕಾಲದಲ್ಲಿ ಹಾಗೆ ಒಗ್ಗೂಡಲ್ಪಟ್ಟ ಪ್ರದೇಶಗಳಲ್ಲಿ ಕೆಲವೊಂದು ಜನರ ಸಂವಹನ ಭಾಷೆ ಕನ್ನಡ ಅಲ್ಲದಿರಬಹುದು. ಆದರೆ ಆ ಬಳಿಕವೂ ಕನ್ನಡ ಕಲಿಯಬಾರದೆ? ಕನ್ನಡ ಮಾತಾಡಬಾರದೆ? ಯಾವುದೇ ಕಾರಣಗಳಿಗಾಗಿ ಕರ್ನಾಟಕಕ್ಕೆ ಬರುವವರಿಗೆ / ಇಲ್ಲಿಯೇ ನೆಲೆಸುವವರಿಗೆ ಕನ್ನಡ ಕಲಿಯಲು ಅವಕಾಶವೇ ನೀಡದೆ ಅವರವರ ಭಾಷೆಯಲ್ಲೇ ಸಂವಹನ ನಡೆಸುವ ನಾವು ಕನ್ನಡಿಗರು ಯಾಕಿಷ್ಟು ಉದಾರಿಗಳು ಅಥವಾ ಧಾರಾಳಿಗರು? ಇಂತಹ ಉದಾರಿ ಕನ್ನಡಿಗರ ನಡುವೆ ಹಲವಾರು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದರೂ ಕನ್ನಡ ಕಲಿಯಬೇಕಾದ ಅನಿವಾರ್ಯತೆ ಇಲ್ಲದಿರುವ ಜನರಿರುವಾಗ ಕನ್ನಡಕ್ಕೆ ಮಹತ್ವ ಎಲ್ಲಿಂದ ಬರಬೇಕು? ಕನ್ನಡ ಉಳಿದು ಬೆಳೆಯುವುದಾದರೂ ಹೇಗೆ?

-ಎಚ್‌. ಆರ್‌. ಆಳ್ವ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ