ಈ ಮೈತ್ರಿಯ ಫ‌ಲಾನುಭವಿ ಯಾರು?

Team Udayavani, Feb 20, 2019, 12:30 AM IST

“ಶಿವಸೇನೆ-ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತವೋ ಇಲ್ಲವೋ?’ 
ಕೆಲವು ತಿಂಗಳಿಂದ ಈ ಪ್ರಶ್ನೆ ಮಹಾರಾಷ್ಟ್ರದ ರಾಜಕೀಯವನ್ನು ಹಿಡಿದಿಟ್ಟಿತ್ತು. ಭಾರತೀಯ ಜನತಾ ಪಾರ್ಟಿ ಮತ್ತು ಶಿವಸೇನೆಯ ನಡುವಿನ ಸಂಬಂಧ ಎಷ್ಟು ಜಟಿಲವಾಗಿದೆಯೆಂದರೆ, ಈ “ರಿಲೇಷನ್‌ಶಿಪ್‌ ಸ್ಟೇಟಸ್‌’ನ ಕಗ್ಗಂಟನ್ನು ಬಿಚ್ಚಿಡಲು ಬಹುಶಃ ಫೇಸ್‌ಬುಕ್‌ಗೂ ಸಾಧ್ಯವಿಲ್ಲವೇನೋ! 

ಒಂದೆಡೆ ಶಿವಸೇನೆಯ ಸಚಿವರು ಎನ್‌ಡಿಎ ಸರ್ಕಾರದ ಭಾಗವಾಗಿದ್ದಾರೆ. ಆದರೆ ಇನ್ನೊಂದೆಡೆ ರಾಜ್ಯಸಭೆಯಲ್ಲಿ ಇದೇ ಶಿವಸೇನೆ ಯಾವಾಗಲೂ ಕೇಂದ್ರದ ಪರವಾಗಿ ನಿಲ್ಲುವುದಿಲ್ಲ. ಪ್ರತಿಬಾರಿಯೂ ರಾಜ್ಯಸಭಾ ವೋಟ್‌ಗೂ ಮುಂಚೆ ಶಿವಸೇನೆ ಬಹಳ ಚೌಕಾಶಿ ನಡೆಸುತ್ತದೆ. ಈ ಪಕ್ಷದ ಸ್ವಯಂಘೋಷಿತ ಚಾಣಕ್ಯ ಸಂಜಯ್‌ ರಾವತ್‌ರಿಗೆ ದಿನಕ್ಕೆ ಒಂದು ಬಾರಿಯಾದರೂ ಮೋದಿ ಮತ್ತವರ ಪಕ್ಷದ ಬಗ್ಗೆ ನಾಲಿಗೆ ಹರಿಬಿಡದಿದ್ದರೆ ಸಮಾಧಾನವಾಗುವುದಿಲ್ಲ. ರಾಜಕೀಯದಲ್ಲಿ ವ್ಯಕ್ತಿಯೊಬ್ಬ ತನ್ನ ನಿಲುವು ಬದಲಿಸುತ್ತಲೇ ಇರುತ್ತಾನೆ. ಆದರೆ ಮೋದಿ ಸರ್ಕಾರವನ್ನು ಟೀಕಿಸುವ ವಿಷಯದಲ್ಲಿ ರಾವತ್‌ ಪಾಲಿಸುತ್ತಾ ಬಂದಿರುವ ಸ್ಥಿರತೆ ನಿಜಕ್ಕೂ ರಾಜಕೀಯದಲ್ಲಿ ಹೊಟ್ಟೆಕಿಚ್ಚಿನ ವಿಷಯವೇ ಸರಿ! 

ಇತ್ತ ದೇವೇಂದ್ರ ಫ‌ಡ್ನವಿಸ್‌ ನೇತೃತ್ವದ ಮಹಾರಾಷ್ಟ್ರ ಸರ್ಕಾರದಲ್ಲೂ ಶಿವಸೇನೆಯ ಸಚಿವರಿದ್ದಾರೆ. ಆದರೆ ಸರ್ಕಾರದ ಯೋಜನೆಗಳ ಉದ್ಘಾಟನಾ ಸಮಾರಂಭಗಳಿದ್ದಾಗ ಈ ಸಚಿವರು ಹಾಜರಾಗುವುದಿಲ್ಲ. ಇವರು ಫೋಟೋ ತೆಗೆಸಿಕೊಳ್ಳುವುದೇನಿದ್ದರೂ ಠಾಕ್ರೆ ಕುಟುಂಬದ ಜೊತೆಗೇ. ಅಲ್ಲದೇ ತಮ್ಮ ಇಲಾಖೆಯ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ವೇಳೆಯೂ ಈ ಸಚಿವರು ಫ‌ಡ್ನವಿಸ್‌ ಅವರಿಗೆ ಕ್ರೆಡಿಟ್‌ ಕೊಡುವುದಿಲ್ಲ. ಇನ್ನು ದೇಶದ ವಾಣಿಜ್ಯ ರಾಜಧಾನಿ ಮುಂಬೈಯನ್ನು ನಿಭಾಯಿಸುವ ಬೃಹತ್‌ ಮುಂಬೈ ಮುನಿಸಿಪಲ್‌ ಕಾರ್ಪೊರೇಷನ್‌(ಬಿಎಂಸಿ)ನಲ್ಲೂ ಬಿಜೆಪಿಯು ಶಿವಸೇನೆಯನ್ನು ಬೆಂಬಲಿಸುತ್ತದೆ. ಆದರೆ, ಶಿವಸೇನೆ ಬಿಎಂಸಿಯ ಆಡಳಿತ ಸಮಿತಿಗಳಲ್ಲಿ ಬಿಜೆಪಿಗೆ ಜಾಗ ಕೊಟ್ಟಿಲ್ಲ! 

ಮೇ, 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಕೈ ಕೈ ಹಿಡಿದುಕೊಂಡು ಅಖಾಡಕ್ಕಿಳಿದವು, ಆದರೆ ಅದೇ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದವು. ಅಷ್ಟೇ ಅಲ್ಲ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಾಗಲಿ ಅಥವಾ ಇನ್ನಿತರೆ ಸ್ಪರ್ಧೆಗಳಲ್ಲಾಗಲಿ ಇವೆರಡೂ ಒಮ್ಮೆ ಜೊತೆಯಾಗಿ, ಒಮ್ಮೆ ಪ್ರತ್ಯೇಕವಾಗಿ, ಒಮ್ಮೆ ಎದುರಾಳಿಗಳಾಗಿ ಸ್ಪರ್ಧಿಸಿವೆ. ಎದುರಾಳಿಯಾಗಿ ಸ್ಪರ್ಧಿಸಿದ ನಂತರ ಮೈತ್ರಿ ಮಾಡಿಕೊಂಡೂ ಒಂದಾಗಿವೆ!  ಸರಳವಾಗಿ ಹೇಳಬೇಕೆಂದರೆ- ಬಿಜೆಪಿ ಶಿವಸೇನೆ ಸಂಬಂಧ ನಿಜಕ್ಕೂ ಜಟಿಲವಾದದ್ದು.

ಬಿಜೆಪಿಯ ಪಾತ್ರ ಬದಲಿಸಿದ 2014
2014ರ ಲೋಕಸಭಾ ಚುನಾವಣೆಯಲ್ಲಷ್ಟೇ ಅಲ್ಲ, ವಿಧಾನಸಭಾ ಚುನಾವಣೆಗಳಲ್ಲೂ ಬಿಜೆಪಿ ಅತ್ಯುತ್ತಮ ಪ್ರದರ್ಶನ ನೀಡಿತು. ಆ ಚುನಾವಣೆಯಲ್ಲಿ ಬಿಜೆಪಿಯಷ್ಟೇ ಅಲ್ಲದೆ ಕಾಂಗ್ರೆಸ್‌, ಶಿವಸೇನೆ ಮತ್ತು ಎನ್‌ಸಿಪಿ ಕೂಡ “ಉತ್ತಮ’ ಸ್ಥಾನಗಳನ್ನು ಗೆದ್ದಿದ್ದವು. ಆ ಚುನಾವಣೆ  ಪ್ರತಿಯೊಂದು ಪಕ್ಷದ ವೈಯಕ್ತಿಕ ಸಾಮರ್ಥ್ಯಕ್ಕೆ ಕನ್ನಡಿಯಾಯಿತಾದರೂ, 2014ರಿಂದೀಚೆಗೆ ಪರಿಸ್ಥಿತಿ ಪೂರ್ಣವಾಗಿ ಬದಲಾಗಿದೆ. 

ಮೊದಲನೆಯದಾಗಿ, ಈಗ ಮಹಾರಾಷ್ಟ್ರದಲ್ಲಿ ಬಿಜೆಪಿಯ ಸ್ಥಿತಿ ಉತ್ತಮವಾಗಿದ್ದು, ಬೇರುಮಟ್ಟದಲ್ಲೂ ಅದು ಸದೃಢವಾಗಿದೆ. 2014ಕ್ಕೂ ಮುನ್ನ ಶಿವಸೇನೆಯೇ ಹಿರಿಯಣ್ಣನ ಪಾತ್ರ ವಹಿಸುತ್ತಿತ್ತು. ಅಲ್ಲದೇ ಆಗೆಲ್ಲ ಬಿಜೆಪಿ ಕಡಿಮೆ ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿತ್ತು. ಕಣ್ಣು ಕುಕ್ಕುವ ರೀತಿಯಲ್ಲಿ ಬಿಜೆಪಿಯ ಕ್ಯಾಡರ್‌ಗಳೂ ಆಗ ಇರಲಿಲ್ಲ. ಆದರೆ ದೇವೇಂದ್ರ ಫ‌ಡ್ನವಿಸ್‌ ಅವರ ಅಡಿಯಲ್ಲಿ ಪಕ್ಷ ಬದಲಾಗಿದೆ. ಆದಾಗ್ಯೂ ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲು ಬಿಜೆಪಿಗೆ ಸಾಧ್ಯವಾಗದೇ ಹೋದರೂ, ಕಡೇಪಕ್ಷ ಮಹಾರಾಷ್ಟ್ರದ ನಗರಗಳು ಮತ್ತು ಪಟ್ಟಣಗಳಲ್ಲಂತೂ ಅದು ಕಣ್ಣೆತ್ತಿ ನೋಡುವಂಥ ಶಕ್ತಿಯಾಗಿ ಬದಲಾಗಿರುವುದು ಸತ್ಯ.  

ಕಾಂಗ್ರೆಸ್‌-ಎನ್‌ಸಿಪಿಯ ಸ್ಥಿತಿ ಹೇಗಿದೆ?
ಎರಡನೆಯದಾಗಿ, ಕಾಂಗ್ರೆಸ್‌ ಮತ್ತು ಎನ್‌ಸಿಪಿಯ ಬಳಿ ಈಗ ಜನರ ಗಮನ ಸೆಳೆಯುವಂಥ ವಿಷಯಗಳೇ ಇಲ್ಲ. ಅವುಗಳ ಜಾತಿ ಆಧರಿತ ತಂತ್ರಗಳು ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿಲ್ಲ. ಮಹಾರಾಷ್ಟ್ರದ ಜಾತಿ ಸಂಬಂಧಿ ಸಮಸ್ಯೆಗಳನ್ನು, ಬೇಡಿಕೆಗಳನ್ನು, ಸವಾಲುಗಳನ್ನು ದೇವೇಂದ್ರ ಫ‌ಡ್ನವಿಸ್‌ ಸಕ್ಷಮವಾಗಿ ಎದುರಿಸುತ್ತಿದ್ದಾರೆ. ಇನ್ನು ಜಾತಿ ಹಿಂಸಾಚಾರಗಳನ್ನೂ ತ್ವರಿತವಾಗಿ ನಿಗ್ರಹಿಸಿ ಅವುಗಳು ತಾರಕಕ್ಕೇರದಂತೆ ನೋಡಿಕೊಳ್ಳುವಲ್ಲಂತೂ ಅವರು ಸಫ‌ಲರಾಗಿದ್ದಾರೆ. 

ಮೂರನೆಯದಾಗಿ, ಇಂದು ಕಾಂಗ್ರೆಸ್‌ನ ಅನೇಕ ನಾಯಕರು ಲೋಕಸಭಾ ಚುನಾವಣೆಗಳನ್ನು ಎದುರಿಸಲು ಹೆದರುತ್ತಿದ್ದಾರೆ. ಮುಂಬೈಯಲ್ಲಿ ಕಾಂಗ್ರೆಸ್‌ ಒಡೆದ ಮನೆಯಾಗಿದೆ. ಅದು ನಿರಂತರವಾಗಿ ನೆಗೆಟಿವ್‌ ಪಬ್ಲಿಸಿಟಿ ಪಡೆಯುತ್ತಿದೆ. ಪ್ರಿಯಾ ದತ್‌ ಅವರು  2019ರ ಚುನಾವಣೆಯಿಂದ ಹಿಂದೆ ಸರಿದಿದ್ದು, ಈಗ ಮಿಲಿಂದ್‌ ದೇವಾ ಕೂಡ ಇದೇ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಒಂದೊಮ್ಮೆ ಕೊಂಕಣ ಭಾಗದ ಬಲಿಷ್ಠ ಚಹರೆಯಾಗಿದ್ದ ನಾರಾಯಣ ರಾಣೆಯವರೂ ಕಾಂಗ್ರೆಸ್‌ನ ಕೈಬಿಟ್ಟು ಬಿಜೆಪಿಯನ್ನು ಸೇರಿಕೊಂಡಿದ್ದಾರೆ. 

ನಾಲ್ಕನೆಯದಾಗಿ, ಎನ್‌ಸಿಪಿಯ ವಿಚಾರ. ಎನ್‌ಸಿಪಿಗೆ ತನ್ನದೇ ಆದ ಸಮಸ್ಯೆಗಳಿವೆ. ಈ ಪಕ್ಷದ ಪ್ರಮುಖ ಒಬಿಸಿ ನಾಯಕ ಛಗನ್‌ ಭುಜ್‌ಬಲ್‌ ಭ್ರಷ್ಟಾಚಾರದ ಪ್ರಕರಣದಲ್ಲಿ ಕಳಂಕ ಹೊತ್ತಿದ್ದು, ಈಗಾಗಲೇ ಬಹಳಷ್ಟು ಸಮಯವನ್ನು ಜೈಲಿನಲ್ಲಿ ಕಳೆದುಬಂದಿದ್ದಾರೆ. ಇನ್ನು ಪಶ್ಚಿಮ ಮಹಾರಾಷ್ಟ್ರದಲ್ಲಿ ಎನ್‌ಸಿಪಿಯ ಪ್ರಮುಖ ಚಹರೆಯಾಗಿದ್ದ ಆರ್‌.ಆರ್‌. ಪಾಟೀಲ್‌ ನಿಧನರಾಗಿದ್ದಾರೆ. ನವಿ ಮುಂಬೈಯಿಯ ಮೇಲೆ ಹಿಡಿತ ಹೊಂದಿದ್ದ ಗಣೇಶ್‌ ನಾಯಕ್‌ರರೂ ಈಗ ವರ್ಚಸ್ಸು ಕಳೆದುಕೊಂಡಿದ್ದಾರೆ. ಅಲ್ಲದೆ, ಈಗ ಆ ಪಕ್ಷ ಮುಂಬೈಯಿಂದ ಜಾಗ ಖಾಲಿ ಮಾಡಿದ್ದು, ಈ ನಗರಿಯಿಂದ ಎನ್‌ಸಿಪಿಯ ಒಬ್ಬೇ ಒಬ್ಬ ಶಾಸಕ ಅಥವಾ ಸಂಸದರು ಇಲ್ಲ. 

ಐದನೆಯದಾಗಿ, ಪುರಸಭಾ ಚುನಾವಣೆಗಳಲ್ಲಿ ಬಿಜೆಪಿ ಅತ್ಯದ್ಭುತ ಯಶಸ್ಸು ಗಳಿಸಿದೆ. ಇಂದು ಬಿಜೆಪಿ ರಾಜ್ಯಾದ್ಯಂತ ಅನೇಕ ಕಾರ್ಪೋರೇಶನ್‌ಗಳನ್ನು ನಿಂತ್ರಿಸುತ್ತಿದೆ. 2014ಕ್ಕೂ ಮುಂಚೆ ಈ ಸ್ಥಿತಿ ಇರಲೇ ಇಲ್ಲ. ಆಗ ವಿಧರ್ಬಾ ದಾಟಿ ಬೇರೆಡೆ ಬಿಜೆಪಿಗೆ ಹೆಚ್ಚಿನ ಅಸ್ತಿತ್ವವಿರಲಿಲ್ಲ. 2014ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ನಂತರ ಅನೇಕ ಸ್ಥಳೀಯ ನಾಯಕರು ಬಿಜೆಪಿಯತ್ತ ಆಕರ್ಷಿತರಾದರು. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ, ಕಾಂಗ್ರೆಸ್‌- ಎನ್‌ಸಿಪಿ ಅಥವಾ ಶಿವಸೇನೆಯ ಪ್ರಾಬಲ್ಯವೇ ಇರುತ್ತಿದ್ದ ಮರಾಠಾವಾಡ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿ ಚುನಾವಣೆಗಳನ್ನು ಗೆದ್ದಿತು. ಮೊದಲೆಲ್ಲ, ಈ ಭಾಗಗಳಲ್ಲಿ ಬಿಜೆಪಿ ಬಹಳ ದುರ್ಬಲವಾಗಿತ್ತು. ಈಗ ಮರಾಠಾವಾಡ ಮತ್ತು ಪಶ್ಚಿಮ ಮಹಾರಾಷ್ಟ್ರದ ಕೃಷಿ ಮತ್ತು ಶೈಕ್ಷಣಿಕ ಕೋಆಪರೇಟಿವ್‌ ಕುಳಗಳು ಬಿಜೆಪಿಯ ಪರವಿದ್ದಾರೆ.  

ಕೊನೆಯದಾಗಿ, ಬಿಜೆಪಿಯು ಏಕನಾಥ್‌ ಖಾಡ್ಸೆಯಂಥ ತನ್ನ ಹಿರಿಯ ನಾಯಕರು ಬಂಡಾಯವೇಳದಂತೆ ನೋಡಿಕೊಳ್ಳುವಲ್ಲಿ ಮುನ್ನೆಚ್ಚರಿಕೆ ವಹಿಸಿ ತನ್ನ ಮನೆಯನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.  ಈ ಎಲ್ಲಾ ಸಂಗತಿಗಳೂ ಶಿವಸೇನೆಗೆ ಇಷ್ಟವಾಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಎನ್‌ಡಿಎದ ಹಿರಿಯಣ್ಣನಂತೆ ವರ್ತಿಸುತ್ತಾ ಬಂದಿದ್ದ ಅದಕ್ಕೆ, ಬಿಜೆಪಿ ತನ್ನ ಸ್ಥಾನವನ್ನು ಕಸಿದುಕೊಂಡಿರುವುದು ಕಸಿವಿಸಿ ಉಂಟುಮಾಡುತ್ತಿದೆ. ಕೊಂಕಣ, ಮುಂಬೈ, ಥಾಣೆ, ನವಿ ಮುಂಬೈ ಆಚೆಗೂ ತನ್ನ ನಿಲುಕನ್ನು ವಿಸ್ತರಿಸಿಕೊಳ್ಳಲು ಶಿವಸೇನೆ ಗಮನಾರ್ಹ ಪ್ರಯತ್ನಗಳನ್ನೇನೂ ಮಾಡುತ್ತಿಲ್ಲ. ಅಷ್ಟೇ ಅಲ್ಲ,  ತನ್ನ ಪ್ರಮುಖ ನೆಲೆ ಎಂದು ಕರೆಸಿಕೊಳ್ಳುವ ಗ್ರೇಟರ್‌ ಮುಂಬೈನಲ್ಲೂ ಕೂಡ ಬಿಜೆಪಿಯಿಂದ ಸವಾಲು ಎದುರಿಸುತ್ತಿದೆ ಶಿವಸೇನೆ. ಪಕ್ಷವೀಗ ಹೊಸ ನಾಯಕರನ್ನು ಸೆಳದುಕೊಳ್ಳುತ್ತಿಲ್ಲ. ಆದಿತ್ಯ ಠಾಕ್ರೆ ಮೇಲೆ ಬಹಳ ವಿಶ್ವಾಸ ಇಟ್ಟಕೊಳ್ಳಲಾಗಿತ್ತಾದರೂ, ತಮ್ಮ ತಂದೆ ಉದ್ಧವ್‌ ಠಾಕ್ರೆಯಂಥ ವರ್ಚಸ್ಸು ಅವ‌ರಲ್ಲಿ ಕಾಣಿಸುತ್ತಿಲ್ಲ. 

ಈಗ ಲೋಕಸಭೆ ಮತ್ತು ತದನಂತರದ ದಿನಗಳಲ್ಲಿ ಪ್ರಸ್ತುತವಾಗಿ ಉಳಿಯಲು ಶಿವಸೇನೆಗೆ ಬಿಜೆಪಿ ಬೇಕೇಬೇಕು. ಒಂದು ವೇಳೆ ಲೋಕಸಭಾ ಚುನಾವಣೆಗಳಲ್ಲಿ ಅದೇನಾದರೂ ಸ್ವತಂತ್ರವಾಗಿ ಸ್ಪರ್ಧಿಸಿತೆಂದರೆ, ಅದು ಕೆಲವೇ ಕೆಲವು ಸ್ಥಾನಗಳನ್ನು ಪಡೆಯಬಹುದು(3 ಅಥವಾ 4 ಸ್ಥಾನಗಳಷ್ಟೇ). 2014ರ ಲೋಕಸಭೆಯ ಚುನಾವಣೋತ್ತರ ಫ‌ಲಿತಾಂಶಗಳ ಕುರಿತ ಒಂದು ವಿಶ್ಲೇಷಣೆ ಈ ವಿಷಯದಲ್ಲಿ ಗಮನಾರ್ಹ ಬೆಳಕು ಚೆಲ್ಲುತ್ತದೆ‌. ಒಂದು ವೇಳೆ ಅಂದು ಬಿಜೆಪಿಯೇನಾದರೂ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಮೈತ್ರಿಯೆದುರು ಸ್ವತಂತ್ರವಾಗಿ ಸ್ಪರ್ಧಿಸಿದ್ದರೂ ಅದರ ಸ್ಥಾನಗಳಲ್ಲಿ ಏರುಪೇರಾಗುತ್ತಿರಲ್ಲವಂತೆ. ಆದರೆ ಶಿವಸೇನೆಯೇನಾದರೂ ಈ ಮೈತ್ರಿಯ ವಿರುದ್ಧ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ಅದು ಒಂದಂಕಿ ಸ್ಥಾನಗಳಿಗೆ ಸೀಮಿತವಾಗುತ್ತಿತ್ತು ಎನ್ನುತ್ತದೆ ಈ ವಿಶ್ಲೇಷಣಾ ವರದಿ. ಈ ಕಾರಣಕ್ಕಾಗಿಯೇ ಶಿವಸೇನಾ ಸಂಸದರು “2019ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಿ’ ಎಂದು ಉದ್ಧವ್‌ ಠಾಕ್ರೆಯವರ ಮೇಲೆ ಒತ್ತಡ ಹಾಕುತ್ತಾ ಬಂದರು. ಒಂದು ವೇಳೆ ಈ ಮೈತ್ರಿ ಆಗದೇ ಹೋಗಿದ್ದರೆ, ಶಿವಸೇನೆಯ 4-5 ನಾಯಕರು ಬಿಜೆಪಿಯ ಟಿಕೆಟ್‌ ಮೇಲೆ ಸ್ಪರ್ಧಿಸುವ ಸಾಧ್ಯತೆ ಇತ್ತು. 

ಶಿವಸೇನೆಗೆ ಬೇರೆ ದಾರಿ ಎಲ್ಲಿದೆ?
ಇಲ್ಲಿ ಒಂದು ಅಂಶ ಸ್ಪಷ್ಟ. ಬಿಜೆಪಿ-ಶಿವಸೇನೆ ಮೈತ್ರಿಯ ಅತಿದೊಡ್ಡ ಫ‌ಲನಾಭವಿಯಾಗಲಿರುವುದು ಶಿವಸೇನೆಯೇ. ಈ ಮೈತ್ರಿ ನಡೆಯದೇ ಹೋಗಿದ್ದರೆ ಎನ್‌ಸಿಪಿ-ಕಾಂಗ್ರೆಸ್‌ ಜೋಡಿಗೆ ಲಾಭವಾಗುತ್ತಿತ್ತು! ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡರೆ ತಮಗೆ ಹೆಚ್ಚು ಲಾಭವಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕತ್ವಕ್ಕೆ ತಿಳಿದಿದೆಯಾದರೂ, 2019ರ ಚುನಾವಣೆಯಲ್ಲಿ ತನ್ನ ಎದುರಾಳಿಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದಾಗಿ ಅದು ಈ ಮೈತ್ರಿಗೆ ಆಸಕ್ತಿ ತೋರಿದೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟವನ್ನು, ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟವನ್ನು ಮತ್ತು ಮಧ್ಯರಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಪುನರುಜ್ಜೀವ ಪಡೆದಿರುವ ಕಾಂಗ್ರೆಸ್‌ ಅನ್ನು ಎದುರಿಸುವಲ್ಲಿ ಬಹಳ ಶಕ್ತಿ-ಸಂಪನ್ಮೂಲಗಳು ವ್ಯಯವಾಗುತ್ತದೆ ಎನ್ನುವುದು ಬಿಜೆಪಿಗೆ ತಿಳಿದಿದೆ. ಹೀಗಾಗಿ, ಮಹಾರಾಷ್ಟ್ರದಲ್ಲಿ ಶಿವಸೇನೆಯ ಜೊತೆ ಕೈಜೋಡಿಸಿದರೆ ಎದುರಾಳಿಗಳ ಸಂಖ್ಯೆಯೂ ತಗ್ಗುತ್ತದೆ, ಅಲ್ಲದೇ ಆ ರಾಜ್ಯದಲ್ಲಿನ ಯುಪಿಎ ಸಂಖ್ಯೆಯನ್ನೂ ನಿಂತ್ರಣದಲ್ಲಿಟ್ಟಂತಾಗುತ್ತದೆ ಎಂಬ ಲೆಕ್ಕಾಚಾರ ಮೋದಿ ಸರ್ಕಾರದ್ದು. 

ಆದರೆ ವಿಧಾನಸಭೆಯ ವಿಷಯಕ್ಕೆ ಬಂದರೆ, ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈಗಲೂ ಬಹುಮತದಲ್ಲುಳಿಯಲು ಬಿಜೆಪಿಗೆ ಶಿವಸೇನೆ ಬೇಕೇ ಬೇಕು. ಮಹಾರಾಷ್ಟ್ರದಲ್ಲಿ ಈಗ ಅದರ ಬೆಂಬಲಿಗರ ಪಡೆ ವಿಸ್ತರಿಸಿದೆಯಾದರೂ, ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು ಸದ್ಯಕ್ಕಂತೂ ಆಗುವುದಿಲ್ಲ. ಶಿವಸೇನೆಯನ್ನು ಜೊತೆಯಾಗಿಟ್ಟುಕೊಂಡರೆ ಎರಡನೆಯ ಅವಧಿ ಖಾತ್ರಿಯಾಗುತ್ತದೆ ಎಂಬ ಲೆಕ್ಕಾಚಾರ ಫ‌ಡ್ನವಿಸ್‌ ಅವರದ್ದು. 

ಸದ್ಯಕ್ಕಂತೂ “ಜೊತೆಯಾಗಿದ್ದರೆ’ ಈ ಎರಡೂ ಪಕ್ಷಗಳಿಗೆ ತಮ್ಮದೇ ರೀತಿಯಲ್ಲಿ ಲಾಭವಿದೆ. ಆದರೆ ಬಿಜೆಪಿಗೆ ಸದ್ಯಕ್ಕೆ ಆಗುವ ಲಾಭವು ಶಿವಸೇನೆಗೆ ದೀರ್ಘಾವಧಿಯಲ್ಲಿ ಲುಕ್ಸಾನು ಉಂಟುಮಾಡುತ್ತದೆ. ಶಿವಸೇನೆಯ ಮುಂದೆ “ಎರಡು ರೀತಿಯಲ್ಲಿ’ ಲುಕ್ಸಾನು ಅನುಭವಿಸುವ ಮಾರ್ಗಗಳಿದ್ದವು. ಮೊದಲನೆಯದ್ದು, ಪ್ರತ್ಯೇಕವಾಗಿ ಚುನಾವಣೆ ಎದುರಿಸಿ “ಈಗ’ ಸೋಲುವುದು ಅಥವಾ ಬಿಜೆಪಿಯೊಂದಿಗೆ ಕೈ ಜೋಡಿಸಿ “ಮುಂದೆ’ ಸೋಲುವುದು(ದುರ್ಬಲವಾಗುವುದು)! 

 ನಿಜಕ್ಕೂ ಶಿವಸೇನೆಗೆ ಬೇರೆ ದಾರಿಯೇ ಇಲ್ಲ. “ತೊಗೋ, ಇಲ್ಲ ಬಿಡು’ ಎನ್ನುವ ಆಯ್ಕೆಗಳಷ್ಟೇ ಅದರ ಮುಂದಿದೆ. ಹೀಗಾಗಿ, ಮೋದಿ ಸರ್ಕಾರದ ವಿರುದ್ಧದ ಅದರ ನಿರಂತರ ಕಸಿವಿಸಿಗಳನ್ನು, ಸಿಟ್ಟುಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ.  ಇನ್ನೊಂದೆಡೆ ಬಿಜೆಪಿಯ ವಿಷಯಕ್ಕೆ ಬಂದರೆ, ಶಿವಸೇನೆಯ ಜೊತೆ ಮೈತ್ರಿ ಮಾಡಿಕೊಳ್ಳದೇ ಇದ್ದರೂ ಸದ್ಯಕ್ಕೆ ಲೋಕಸಭಾ ಚುನಾವಣೆಯಲ್ಲಿ ಅದಕ್ಕೆ ಹಾನಿಯೇನೂ ಆಗುವುದಿಲ್ಲ. ಆದರೆ, ಶಿವಸೇನೆಯನ್ನು ಜೊತೆಯಾಗಿಟ್ಟುಕೊಂಡರೆ, ಲೋಕಸಭಾ ಚುನಾವಣೆಯಲ್ಲಿ ಮತ್ತು ಇದೇ ವರ್ಷದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ “ಹೆಚ್ಚುವರಿ ಆಯ್ಕೆ’ ಅದಕ್ಕಿರುತ್ತದೆ.   

ದೇಶದ ವಾಣಿಜ್ಯ ರಾಜಧಾನಿ ಎಂದು ಕರೆಸಿಕೊಳ್ಳುವ ಮುಂಬೈಗೆ “ಲೆಕ್ಕಾಚಾರದ ಆಟ’ ಹೊಸದೇನೂ ಇಲ್ಲ. ಈಗ ಈ ಆಟದ ರಾಜಕೀಯ ಅವತರಣಿಕೆ ಅಲ್ಲಿ ನಡೆಯುತ್ತಿದೆ. ಫ‌ಲಿತಾಂಶ ಆದಷ್ಟು ಬೇಗನೇ ಹೊರಬರಲಿದೆ…

(ಮೂಲ: ಸ್ವರಾಜ್ಯ)

ನಿಮಿಷ್‌ ಜೋಶಿ, ಆಶೀಶ್‌ ಚಂದೋರ್ಕರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ