ಕಡ್ಡಾಯ ಮತದಾನದ ಸುತ್ತಮುತ್ತ

Team Udayavani, Apr 11, 2018, 5:09 PM IST

ಸದ್ಯಕ್ಕೆ ಇಡೀ ದೇಶವೇ ಮುಖ ಮಾಡಿ ನಿಂತಿರುವುದು ಕರ್ನಾಟಕದತ್ತ. ರಾಜ್ಯದ ಚುನಾವಣೆ ಅಷ್ಟರ ಮಟ್ಟಿಗೆ ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆಡಳಿತ ಪಕ್ಷ, ವಿಪಕ್ಷಗಳ ಬಿರುಸಿನ ಪ್ರಚಾರವೂ ನಡೆಯುತ್ತಿದೆ. ಮೇ 12ರಂದು ಚುನಾವಣೆ ದಿನಾಂಕ ನಿಗದಿಯೂ ಆಗಿದ್ದಾಗಿದೆ. ಇನ್ನೇನಿದ್ದರೂ ಚುನಾವಣೆ ಪ್ರಕ್ರಿಯೆಗಳು ಮಾತ್ರ ಬಾಕಿ ಉಳಿದಿವೆ. ಈ ಎಲ್ಲದರ ನಡುವೆ ಏನಾದರೂ ಮಾಡಿ ಜನರನ್ನು ಮತಗಟ್ಟೆಯತ್ತ ಕರೆತರಬೇಕೆಂದು ಚುನಾವಣಾ ಆಯೋಗ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಎಲ್ಲ ಅರ್ಹ ಮತದಾರರು ಮತದಾನ ಮಾಡಬೇಕೆಂಬ ಅಭಿಯಾನವೂ ನಡೆಯುತ್ತಿದೆ. ಇದಕ್ಕಾಗಿ ಸೆಲೆಬ್ರಿಟಿಗಳನ್ನು, ಪ್ರಸಿದ್ಧ ವ್ಯಕ್ತಿಗಳನ್ನು ಬ್ರಾಂಡ್‌ ಅಂಬಾಸಿಡರ್‌ ಆಗಿ ನೇಮಿಸಲಾಗುತ್ತದೆ. ಈ ಸಲ ರಾಜ್ಯಕ್ಕೆ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದಾರೆ. ಪ್ರಜಾತಂತ್ರದಲ್ಲಿ ಪ್ರಜೆಗಳ ಮತವೇ ಮುಖ್ಯ. ಜನರು ತಮ್ಮ ಹಕ್ಕಾಗಿರುವ ಈ ಅಮೂಲ್ಯ ಮತವನ್ನು ಚಲಾಯಿಸದೆ ವ್ಯರ್ಥ ಗೊಳಿಸುವುದನ್ನು ನೋಡುವಾಗ ಹುಟ್ಟಿದ್ದೇ ಕಡ್ಡಾಯ ಮತದಾನದ ವಾದ. “ಕಡ್ಡಾಯ ಮತದಾನ’ ಪರಿಕಲ್ಪನೆ ರಾಜ್ಯದ ಮಟ್ಟಿಗೆ  ಹೊಸತಾದರೂ ದೇಶದ ಮಟ್ಟಿಗೆ ಮಾತ್ರ ಬಹಳ ಹಳೆಯದ್ದೇ. ಈ ವಿಷಯದ ಬಗ್ಗೆ ಚರ್ಚೆಗಳು ಇಂದು ನಿನ್ನೆಯಿಂದ ಆರಂಭ ವಾಗಿದ್ದಲ್ಲ. ಬಹಳ ಹಿಂದಿನಿಂದಲೂ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಬಂದಿವೆ. ಈಗಲೂ ನಡೆಯುತ್ತಿವೆ.

ಏನಿದು ಕಡ್ಡಾಯ ಮತದಾನ?
18 ವರ್ಷಕ್ಕೂ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯೂ ಚುನಾವಣೆ ಸಂದರ್ಭ ತನ್ನ ಮತವನ್ನು ತಪ್ಪದೆ ಚಲಾಯಿಸಬೇಕು ಎನ್ನುವುದು ಕಡ್ಡಾಯ ಮತದಾನ ಪರಿಕಲ್ಪನೆಯ ಮುಖ್ಯ ಧ್ಯೇಯ. ಮತದಾನದ ಹಕ್ಕನ್ನು ಭಾರತದಲ್ಲಿ ಸಂವಿಧಾನವೇ ನೀಡಿದ್ದು, ಈ ಬಗ್ಗೆ ಪರಿಚ್ಛೇದ 326ರಲ್ಲಿ ಹೇಳಲಾಗಿದೆ. ಅಲ್ಲದೆ ರೆಪ್ರಸೆಂಟೇಶನ್‌ ಆಫ್‌ ಪೀಪಲ್ಸ್‌ ಆ್ಯಕ್ಟ್ 1951ನ ಸೆಕ್ಷನ್‌ 62 ಹೇಳುವಂತೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿರುವ ಪ್ರತಿಯೊಬ್ಬ ನಾಗರಿಕನಿಗೂ ಮತದಾನ ಮಾಡುವ ಹಕ್ಕಿದೆ. ಇಷ್ಟಿದ್ದರೂ ಮತದಾನದ ಪ್ರಮಾಣದಲ್ಲಿ ದೇಶ ಮಾತ್ರ ಹಿಂದುಳಿದಿರುವುದು ದುರ್ದೈವ.

ಪರಿಕಲ್ಪನೆ ಇಂದು ನಿನ್ನೆಯದಲ್ಲ
1951ರಲ್ಲಿ ಪೀಪಲ್‌ ರೆಪ್ರಸೆಂಟೇಶನ್‌ ಬಿಲ್‌ನ ಚರ್ಚೆ ಸಂದರ್ಭ ಕಡ್ಡಾಯ ಮತದಾನ ವಿಷಯದ ಪ್ರಸ್ತಾವವಾಗಿತ್ತು. ಆದರೆ ಪ್ರಾಯೋಗಿಕ ಆಡೆತಡೆಗಳ ಕಾರಣಕ್ಕಾಗಿ ಡಾ| ಬಿ. ಆರ್‌. ಅಂಬೇಡ್ಕರ್‌ ಅವರು ಇದನ್ನು ನಿರಾಕರಿಸಿದ್ದರು. ತದನಂತರ 1990ರಲ್ಲಿ ದಿನೇಶ್‌ ಗೋಸ್ವಾಮಿ ಕಮಿಟಿ ಇದೇ ವಿಷಯವನ್ನು ಪ್ರಸ್ತಾವ ಮಾಡಿತ್ತು. ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಡ್ಡಾಯ ಮತದಾನ ಜಾರಿಯಾಗಬೇಕೆಂದು ಈ ಕಮಿಟಿಯ ಸದಸ್ಯರೊಬ್ಬರು ಪ್ರಸ್ತಾವ ಮಾಡಿದ್ದರು. ಆಗಲೂ ಪ್ರಾಯೋಗಿಕ ಆಡೆತಡೆಯ ನೆಪದಿಂದ ಅದನ್ನು ತಿರಸ್ಕರಿಸಲಾಗಿತ್ತು.

2004ರ ಜುಲೈನಲ್ಲಿ ಕಂಪಲ್ಸರಿ ವೋಟಿಂಗ್‌ ಬಿಲ್‌- 2004 ಎಂಬ ಖಾಸಗಿ ಮಸೂದೆಯನ್ನು ಲೋಕಸಭಾ ಸದಸ್ಯರಾಗಿದ್ದ ಬಾಚಿ ಸಿಂಗ್‌ ರಾವತ್‌ ಪ್ರಸ್ತಾವಿಸಿದ್ದರು. ಮತದಾನಕ್ಕೆ ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯೂ ತಪ್ಪದೇ ಮತ ಚಲಾಯಿಸಬೇಕು ಎಂಬುದು ಈ ಬಿಲ್‌ನ ಉದ್ದೇಶವಾಗಿತ್ತು. ಅನಾರೋಗ್ಯ ಸೇರಿದಂತೆ ಇತರ ಕೆಲ ಕಾರಣಗಳಿಗೆ ಮಾತ್ರ ಬಿಲ್‌ ನಲ್ಲಿ ವಿನಾಯತಿ ನೀಡಲಾಗಿತ್ತು. ಮತದಾನ ಬೂತ್‌ಗಳ ಸ್ಥಿತಿಗತಿ ಹಾಗೂ ಅಂತರ, ಅಂಗವಿಕಲರು, ಮಹಿಳೆಯರು ಸೇರಿದಂತೆ ಕೆಲವೊಂದು ವರ್ಗದವರು ಮತದಾನದ ಸಂದರ್ಭ ಅನುಭವಿಸುವ ತೊಂದರೆಗಳ ಬಗ್ಗೆ ಬಿಲ್‌ನಲ್ಲಿ ಪ್ರಸ್ತಾವಿಸಲಾಗಿತ್ತು. ಆದರೆ ಬೆಂಬಲ ಸಿಗದ ಕಾರಣ ಈ ಮಸೂದೆ ಪಾಸಾಗಲಿಲ್ಲ. 2009ರಲ್ಲಿ ಕೂಡ ಈ ವಿಚಾರಕ್ಕೆ ಸಂಬಂಧಿಸಿ ಖಾಸಗಿ ಸದಸ್ಯ ಮಸೂದೆ ಮಂಡನೆಯಾಗಿತ್ತು. ಲೋಕಸಭಾ ಸದಸ್ಯ ಜೆ.ಪಿ. ಆಗರ್‌ ವಾಲ್‌ ಎಂಬುವವರು ಮಸೂದೆ ಮಂಡಿಸಿದ್ದರು. ಸೂಕ್ತ ಸ್ಥಳಗಳಲ್ಲಿ ಮತಗಟ್ಟೆಗಳ ನಿರ್ಮಾಣ, ಹಿರಿಯ ನಾಗರಿಕರಿಗೆ ವಿಶೇಷ ವ್ಯವಸ್ಥೆ ಮುಂತಾದ ವಿಚಾರಗಳನ್ನು ಈ ಮಸೂದೆಯಲ್ಲಿ ಪ್ರಸ್ತಾವಿ ಸಲಾಗಿತ್ತು.

ಹಲವು ದೇಶಗಳಲ್ಲಿ ಪ್ರಾಯೋಗಿಕ ಜಾರಿ
ಕಡ್ಡಾಯ ಮತದಾನವನ್ನು ಈಗಾಗಲೇ ಜಗತ್ತಿನ ಅನೇಕ ರಾಷ್ಟ್ರಗಳು ಪ್ರಾಯೋಗಿಕವಾಗಿ ಜಾರಿಗೆ ತಂದಿವೆ. ಉದಾಹರಣೆಗೆ ಆಸ್ಟ್ರೇಲಿಯಾದಲ್ಲಿ ಕಡ್ಡಾಯ ಮತದಾನವನ್ನು ದೇಶದ ಮಟ್ಟದಲ್ಲಿ ಜಾರಿಗೆ ತರಲಾಗಿದೆ. ಕೆಲವೊಂದು ವಿನಾಯತಿಯನ್ನು ಹೊರತುಪಡಿಸಿ ಮತದಾನ ಮಾಡದವರಿಗೆ ದಂಡವನ್ನು ವಿಧಿಸಲಾಗುತ್ತದೆ. ಈ ನಿಯಮವು ಆಸ್ಟ್ರೇಲಿಯಾದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಸಹಕಾರಿಯಾಗಿದ್ದು, 1924ರ ಅನಂತರ ಸಾಮಾನ್ಯವಾಗಿ ಶೇಕಡಾ 90 ಕ್ಕಿಂತ ಹೆಚ್ಚು ಮತದಾನ ನಡೆಯುತ್ತಿದೆ. ಬ್ರೆಜಿಲ್‌, ಅರ್ಜೆಂಟಿನಾ, ಬೊಲಿವಿಯಾ ಸೇರಿದಂತೆ ಹಲವು ರಾಷ್ಟ್ರಗಳು ಕಡ್ಡಾಯ ಮತದಾನಕ್ಕೆ ಕ್ರಮ ಕೈಗೊಂಡಿವೆ. ಯುಕೆ, ಯುಎಸ್‌ಎ, ಇಟಲಿ, ಜರ್ಮನಿ, ಫ್ರಾನ್ಸ್‌ಗಳಲ್ಲಿ ಸ್ವಯಂಪ್ರೇರಿತ ಮತದಾನ ಪರಿಕಲ್ಪನೆಯಿದ್ದು, ಕಳೆದ ಕೆಲವು ಚುನಾವಣೆಗಳಲ್ಲಿ ಇಟಲಿಯಲ್ಲಿ ಶೇಕಡ 80 ಮತದಾನವಾಗಿದ್ದರೂ ಯುಎಸ್‌ ಎಯಲ್ಲಿ ಮಾತ್ರ ಶೇಕಡ 50 ಮತದಾನವಾಗಿದೆ.

ಇದು ಭಾರತದ ಚುನಾವಣೆ ಕತೆ
ಶೈಕ್ಷಣಿಕ, ಆರೋಗ್ಯ, ಕೈಗಾರಿಕೆ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ನಮ್ಮ ದೇಶ ಮುಂದುವರಿದಿದ್ದರೂ ಶೇಕಡ ಮತದಾನದಲ್ಲಿ ಮಾತ್ರ ಇನ್ನು ನಾವು ಹಿಂದೆಯೇ ಇದ್ದೇವೆ. 2014ರ  ಲೋಕಸಭೆಯ ಚುನಾವಣೆಗೆ ಮೊದಲು ಸಂಸತ್ತಿಗೆ ನಡೆದ ಚುನಾವಣೆಗಳಲ್ಲಿ ನಡೆದಿದ್ದ ಗರಿಷ್ಠ ಮತದಾನದ ಪ್ರಮಾಣವೇ ಶೇಕಡ 64.01. ಅದೂ ಈ ಗರಿಷ್ಠ ಮತದಾನ ನಡೆದಿದ್ದು 1984ರಲ್ಲಿ. 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಶೇಕಡ 64.38 ಮತದಾನ ನಡೆದು ಈ ದಾಖಲೆ ಪತನಗೊಂಡಿತ್ತು.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೇನೆಂದರೆ 2014ರ ಲೋಕಸಭೆ ಚುನಾವಣೆಗೆ ಮೊದಲು ಯಾವ ಚುನಾವಣೆಯೂ ಒಂದೇ ಒಂದು ಬಾರಿ 1984ರ ಮತದಾನದ ಪ್ರಮಾಣವನ್ನು ಮುರಿದಿರಲಿಲ್ಲ. 2014ರ ಚುನಾವಣೆಯಲ್ಲಿಯೂ ಶೇಕಡ ಮತದಾನ ಏರಿಕೆಯಾದದ್ದು ಕೇವಲ ಶೇಕಡ 0.37 ರಷ್ಟು ಮಾತ್ರ. ಇನ್ನು ರಾಜ್ಯಗಳಲ್ಲಿ ಮತದಾನದ ಸ್ಥಿತಿಯನ್ನು ಗಮನಿಸುವುದಾದರೆ ಶೇಕಡ 87.82 ಮತದಾನ ನಡೆದ ನಾಗಾಲ್ಯಾಂಡ್‌ ದೇಶದಲ್ಲೇ ಅತಿ ಹೆಚ್ಚು ಪ್ರತಿಶತ ಮತದಾನ ನಡೆದ ರಾಜ್ಯವೆಂಬ ಹೆಗ್ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಶೇಕಡ 49.52 ಮತದಾನ ನಡೆದಿರುವ ಜಮ್ಮು ಮತ್ತು ಕಾಶ್ಮೀರ ಕೊನೆಯ ಸ್ಥಾನದಲ್ಲಿದೆ.

ಪರ- ವಿರೋಧ ವಾದಗಳು
ಕಡ್ಡಾಯ ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ ಪಾರದರ್ಶಕ ಅಡಳಿತಕ್ಕೆ ಸಹಕಾರಿಯಾಗಲಿದೆ. ಅದುದರಿಂದ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಇತ್ತೀಚೆಗೆ ನೋಟಾ ಆಯ್ಕೆಯನ್ನು ಕೂಡ  ನೀಡಲಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಯಾವ ವ್ಯಕ್ತಿಯೂ  ನಮಗೆ ಅರ್ಹರನಿಸದೇ ಇದ್ದಲ್ಲಿ ನಮ್ಮ ಮತವನ್ನು ನೋಟಾಗೆ ಚಲಾಯಿಸುವ ಅವಕಾಶವನ್ನು ನೀಡಲಾಗಿದೆ. ಈ ನಿಯಮ ಪಾಲನೆಯಾದದ್ದೇ ಆದಲ್ಲಿ ಚುನಾವಣಾ ಆಯೋಗ ಚುನಾವಣೆಗೆಂದು ವಿನಿಯೋಗಿಸುವ ಹಣವೂ ಸರಿಯಾಗಿ ಸದ್ಬಳಕೆ ಯಾಗುತ್ತದೆ ಎನ್ನುವುದು ಕಡ್ಡಾಯ ಮತದಾನದ ಪರವಾಗಿ ಇರುವ ವಾದಗಳಾಗಿವೆ. ಕಡ್ಡಾಯ ಮತದಾನವನ್ನು ಜಾರಿಗೆ ತರುವುದು ಸುಲಭದ ಮಾತಲ್ಲ. ಏಕೆಂದರೆ ಅದರ ಪ್ರಾಯೋಗಿಕ ಜಾರಿ ದೇಶದಲ್ಲಿ ಕಷ್ಟಸಾಧ್ಯ.

ಒತ್ತಾಯಪೂರ್ವಕವಾಗಿ ಮತದಾನ ಮಾಡಿಸುವುದು ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಹಾಗೆ ಎಂಬಿತ್ಯಾದಿ ವಿರೋಧ ವಾದಗಳೂ ಈ ವಿಷಯದಲ್ಲಿವೆ. 

ದೇಶದಲ್ಲಿ ಈ ರೀತಿಯ ಮತದಾನವನ್ನು ಜಾರಿಗೆ ತರಲು ಯತ್ನಿಸಿದ ಮೊದಲ ರಾಜ್ಯವೆಂದರೆ ಗುಜರಾತ್‌. ಗುಜರಾತ್‌ ಲೋಕಲ್‌ ಆಥಾರಿಟಸ್‌ ಲಾ ಬಿಲ್‌ 2009ನ್ನು ಜಾರಿಗೆ ತರುವ ಮೂಲಕ ಈ ಪ್ರಯತ್ನ ನಡೆದಿತ್ತು. 2015ರಲ್ಲಿ ಚುನಾವಣಾ ಆಯೊಗವು ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು (ಪಿಐಎಲ್‌) ಸಲ್ಲಿಸಿದ್ದು ಈ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಿತ್ತು. ಆಯೋಗ ಹೇಳುವಂತೆ ಮತದಾನ ಮೂಲಭೂತ ಹಕ್ಕಲ್ಲ. ಬದಲಾಗಿ ಅದೊಂದು ಶಾಸನಾತ್ಮಕ ಹಕ್ಕು. ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡ್ಡಾಯ ಮತದಾನ ಅಡ್ಡಿಮಾಡುವುದರಿಂದ ಅದನ್ನು ಜಾರಿಗೆ ತರುವುದು ಕಷ್ಟ ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಗೂ ಆತ ಮತದಾನ ಮಾಡುವ ಅಥವಾ ಮಾಡದಿರುವ ಹಕ್ಕಿದೆ ಎಂದು ಅಫಿಡವಿಟ್‌ ನಲ್ಲಿ ತಿಳಿಸಿದೆ.

ಇಷ್ಟೆಲ್ಲ ಏಳು ಬೀಳುಗಳನ್ನು ಕಂಡರೂ ಕೂಡಾ ಕಡ್ಡಾಯ ಮತದಾನ ಪರಿಕಲ್ಪನೆಯು ಬೂದಿ ಮುಚ್ಚಿದ ಕೆಂಡದಂತೆ ಇನ್ನೂ ಹೊಗೆಯಾಡುತ್ತಲೇ ಇದೆ. ಬೇರೆಲ್ಲ ಹಕ್ಕುಗಳನ್ನು ಹೋರಾಡಿಯಾದರೂ ಪಡೆಯುವ ಜನರು ತಮ್ಮ ಭವಿಷ್ಯವನ್ನು ನಿರ್ಧರಿಸುವ ಮತದಾನದ ಹಕ್ಕನ್ನು ಮಾತ್ರ ಯಾವ ಬೇಸರವೂ ಇಲ್ಲದೆ ವ್ಯರ್ಥಗೊಳಿಸುತ್ತಾರೆ. ಚುನಾವಣೆ ದಿನವನ್ನು ರಜೆಯ ದಿನವೆಂದು ಆನಂದಿಸುವ ಆಲಸಿ ಜನರೇ ಅನಂತರ ಸರಕಾರದ ವಿರುದ್ಧ ಗೊಣಗುತ್ತಾ ಇರುತ್ತಾರೆ. ಮತದಾನವೇ ಮಾಡದೆ ಸರಕಾರ ಸರಿಯಿಲ್ಲ ಎನ್ನುವ ನೈತಿಕ ಹಕ್ಕು ನಮಗಿದೆಯೇ? ಹೀಗಾಗಿ ಆಡಳಿತದಲ್ಲಿರುವ ಸರಕಾರವನ್ನು ಕೆಲಸ ಮಾಡದಿದ್ದಾಗ ದೂಷಿಸಲಾದರೂ ನಮಗೊಂದು ನೈತಿಕತೆ ಬೇಕು. ಅದಕ್ಕಾದರೂ ನಾವು ತಪ್ಪದೇ ಮತದಾನ ಮಾಡಬೇಕು.

*ಪ್ರಸನ್ನ ಹೆಗಡೆ ಊರಕೇರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ