ಮಕ್ಕಳ ಮನಸ್ಸೇಕೆ ದುರ್ಬಲವಾಗುತ್ತಿದೆ?

Team Udayavani, Jan 7, 2018, 6:00 AM IST

ಇತ್ತೀಚೆಗೆ ಸುದ್ದಿಯೊಂದನ್ನು ಓದಿ ದಿನವಿಡೀ ಕುಗ್ಗಿ ಹೋಗಿದ್ದೆ. ಅಂಗಳದಲ್ಲಿ ಆಡುತ್ತಿದ್ದಂತಿದ್ದ ಶಾಲಾ ಹುಡುಗಿಯೊಬ್ಬಳು ಎದ್ದು ಮರಕ್ಕೆ ನೇಣು ಹಾಕಿಕೊಳ್ಳುತ್ತಾಳೆಂದರೆ, ಹದಿನೆಂಟು ದಾಟದ ಸರಿಯಾಗಿ ಪ್ಯಾಂಟು ಕೂಡ ಹಾಕಿಕೊಳ್ಳಲು ಬಾರದ ಹುಡುಗನೊಬ್ಬ ಅವಳೊಂದಿಗೆ ಸಾವಿಗೆ ಜೊತೆಯಾಗುತ್ತಾನೆಂದರೆ ಇದೆಂತಹ ದುರ್ವಿಧಿಯೆನಿಸಿತು. 

ಶಾಲಾ ಉಡುಗೆಯಲ್ಲೇ ಇರುವ ಆಕೆ, ಕನಿಷ್ಠ ಮೂಗಿನ ಕೆಳಗೆ ಕಪ್ಪು ಸಹ ಮೂಡದ ಆತ ಆ ಎರಡು ದೇಹಗಳು ಮರದಲ್ಲಿ ನೇತಾಡುತ್ತಿದ್ದರೆ ಯಾರ ಕರುಳಾದರೂ ಕಿತ್ತು ಬರದೇ ಇರದು. ಕೇವಲ ಜ್ವರ ಬಂದ ಕಾರಣಕ್ಕೆ ಆ ಹೆಣ್ಣು ಮಗಳನ್ನು ಎತ್ತಿಕೊಂಡು ಆ ತಂದೆ ತಾಯಿಗಳು ಅದೆಷ್ಟು ಆಸ್ಪತ್ರೆಗಳನ್ನು ಸುತ್ತಿ ಉಳಿಸಿಕೊಂಡಿದ್ದರೋ? ಮನೆಗೆ ಗಂಡು ಹುಟ್ಟಿದ ಎಂಬ ಕಾರಣಕ್ಕೆ ಆತನ ತಂದೆ ತಾಯಿ ಸಿಹಿ ಹಂಚಿ ಅದೆಷ್ಟು ಸಂಭ್ರಮಿಸಿದ್ದರೋ? ಅದೆಲ್ಲವೂ ಒಂದು ಕ್ಷಣದಲ್ಲಿ ಮಣ್ಣಾಗಿತ್ತು.
 
ಬಹುಶಃ ಅಂತಹ ಘಟನೆಯನ್ನು ಆ ಜಿಲ್ಲೆ ಇದುವರೆಗೂ ನೋಡಿರಲಾರದು. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಒಂದು ಊರು. ಆಕೆ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು. ಆತ ಪಿಯುಸಿ. ಬಸ್ಸಿನಲ್ಲಿ ಒಟ್ಟಿಗೆ ಹೋಗಿ ಬರುವಾಗ ಒಂದು ಸೆಳೆತಕ್ಕೆ ಒಳಗಾಗಿದ್ದರು. ವಯಸ್ಸಲ್ಲದ ವಯಸ್ಸಿನಲ್ಲಿ ಮದುವೆಗೆ ಹಠ ಹಿಡಿದರೆ ಯಾರು ತಾನೆ ಒಪ್ಪಲು ಸಾಧ್ಯ? ಒಪ್ಪದೇ ಇರುವ ಒಂದೇ ಕಾರಣಕ್ಕೆ ಎಂತಹ ಆತುರದ ನಿರ್ಧಾರ! 

ಇಲ್ಲಿ ಆ ಸಾವುಗಳ ವಿಚಾರವನ್ನು ಹೈಲೈಟ್‌ ಮಾಡುವುದು ನನ್ನ ಉದ್ದೇಶವಲ್ಲ. ಆದರೆ ನಮ್ಮ ಮಕ್ಕಳು ಮಾನಸಿಕವಾಗಿ ಎಷ್ಟು ಅಸುರಕ್ಷಿತರಾಗಿದ್ದಾರೆ ಅನ್ನುವುದರ ಬಗೆಗೆ ನನ್ನ ಕಾಳಜಿ. ಇನ್ನೂ ನಿಜ ಬದುಕಿನ ಬಾಗಿಲಿಗೂ ಕೂಡ ಬರದೇ ಅದಕ್ಕೂ ಮೊದಲೇ ಯಾತ್ರೆ ಮುಗಿಸುತ್ತಿದ್ದಾರೇಕೆ? ಮಗುವೊಂದು ಧಾರಾವಾಹಿ ನೋಡಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಸತ್ತು ಹೊಯ್ತಲ್ಲ ಮೊನ್ನೆ ದಾವಣಗೆರೆಯಲ್ಲಿ? ಇಂಥ ಘಟನೆಗಳು ಪದೇ ಪದೆ ಸಂಭವಿಸುತ್ತಿರುವುದಕ್ಕೆ ಏನು ಕಾರಣ? ಮಕ್ಕಳನ್ನು ಬದುಕಲು ಕೂಡ ಬಿಡದಷ್ಟು ಒತ್ತಡಮಯವಾದವೇ ಹೊರ ಪ್ರಭಾವಗಳು? ಅವರನ್ನು ಅವು ಆ ಮಟ್ಟಿಗೆ ಮುತ್ತಿಕೊಂಡು ಉಸಿರುಗಟ್ಟಿಸುತ್ತಿವೆಯೇ? 

ನಮ್ಮ ಶಿಕ್ಷಣ ವ್ಯವಸ್ಥೆ, ನಮ್ಮ ಮಾಧ್ಯಮಗಳು, ಪೋಷಕರು ಇವರೆಲ್ಲರೂ ಕೂಡ ಇದಕ್ಕೆ ಕಾರಣರೇ. ಎಸ್ಸೆಸ್ಸೆಲ್ಸಿ, ಪಿಯುಸಿ ಓದುವ ಮಗುವೊಂದು ಕಡಿಮೆ ಅಂಕ ಗಳಿಸಿದೆ ಎಂದು ಕಾರಣವೇ ಅಲ್ಲದ ಕಾರಣಕ್ಕೆ “ನಾನು ಸತ್ತು ಹೋಗ್ತಿàನಿ’ ಅಂತ ಹೊರಡುತ್ತೆ ಅಂದರೆ ಅದುವರೆಗೂ ಅದು ಶಾಲೆಯಲ್ಲಿ ಕಲಿತಿದ್ದು ಏನನ್ನು? ಕೇವಲ ಅಂಕಗಳನ್ನು ಪಡೆಯುವುದು ಮಾತ್ರವಾ? ಬರೀ ಕಂಠಪಾಠವಾ? ಹಾಗಿದ್ದರೆ ಅದು ಓದಿದ ಪಾಠದಲ್ಲಿ ಜೀವನ ಪ್ರೀತಿ ತುಂಬುವ ಸಂಗತಿಗಳು, ಜೀವನ ಮೌಲ್ಯಗಳು ಇಲ್ಲವೇ? ಇನ್ನು ಪ್ರೀತಿ ಪ್ರೇಮದ ವಿಚಾರಕ್ಕೆ ಬಂದರೆ, ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆಯೇ ಮಕ್ಕಳೇಕೆ ಪ್ರೀತಿ-ಪ್ರೇಮದ ಜಾಲದಲ್ಲಿ ಸಿಲುಕುತ್ತಿದ್ದಾರೆ? ಹೆತ್ತವರನ್ನು ಮರೆತು ನನಗೆ ಅವನೇ ಬೇಕು, ಅವಳೇ ಬೇಕು ಅನ್ನುವಷ್ಟರ ಮಟ್ಟಿಗೆ ಜಿದ್ದಿಗೆ ಬೀಳುತ್ತಾರೆ ಎಂದರೆ ನಮ್ಮ ಸಮಾಜ ಅವರಿಗೆ ಬದುಕುವ ಮಾರ್ಗವನ್ನು ಕಲಿಸುತ್ತಿಲ್ಲ ಎಂದೇ ಅರ್ಥವಲ್ಲವೇ?  ಹಾದಿ ತಪ್ಪಿಸುವ ಕೆಲಸದಲ್ಲಿ ಮಾಧ್ಯಮಗಳಂತೂ ಹದ್ದು ಮೀರಿ ನಿಂತಿವೆ. ಸಿನೆಮಾ, ಧಾರಾವಾಹಿಗಳಂತೂ ಈ ವಿಷಯದಲ್ಲಿ ಪೈಪೋಟಿಗಿಳಿದುಬಿಟ್ಟಿವೆ. ಹರೆಯದ ಮನಸ್ಸನ್ನು ಸೆಳೆದು, ಕೆಡಿಸಿ ಬಿಸಾಡಿ ಬಿಡುತ್ತವೆ. ಅಲ್ಲಿನ ಉತ್ಪ್ರೇಕ್ಷಿತ ಕಥೆಗಳು, ಪ್ರೀತಿ ಪ್ರೇಮದ ವಿಜೃಂಭಣೆಯನ್ನು ನೋಡುವ ಮಕ್ಕಳು ಸಿನೆಮಾ, ಸೀರಿಯಲ್‌ಗ‌ಳಲ್ಲಿ ಆಗುವಂಥದ್ದನ್ನು ಬಿಟ್ಟು ತಮ್ಮ ಜೀವನದಲ್ಲಿ ಬೇರೇನು ನಿರೀಕ್ಷೆ ಮಾಡಲು ಸಾಧ್ಯ? 

ಇನ್ನು ಪ್ರೀತಿ ಪ್ರೇಮದ ವಿಷಯ ಬಂದಾಗ ಪತ್ರಿಕೆಗಳು ವರದಿಗೆ ಬಹಳಷ್ಟು ಜಾಗ ವ್ಯಯಿಸುತ್ತವೆ. ಆದರೆ ಮಕ್ಕಳಿಗೆ ನೈತಿಕ ಪಾಠ ಮಾಡುವುದನ್ನು ಬಿಟ್ಟು ವಿಷಯವನ್ನು ರಂಜಿಸುತ್ತವೆ. ಸುದ್ದಿ ವಾಹಿನಿಗಳು ಗಂಟೆಗಟ್ಟಲೆ ಪ್ರಸಾರಕ್ಕಿಳಿಯುತ್ತವೆ. ಈ ಘಟನೆಯನ್ನೇ ಹೋಲುವ ಸಿನೆಮಾದ ತುಣುಕುಗಳನ್ನು ಬಿತ್ತರಿಸುತ್ತವೆ. ದುರಂತವೆಂದರೆ, ಇದನ್ನೆಲ್ಲ ನೋಡುವ ಹದಿಹರೆಯದವರು ಪ್ರೀತಿಯಲ್ಲಿ ಸಾವನ್ನೇ ಗೆಲುವು ಎಂಬ ಆದರ್ಶವಾಗಿ ತೆಗೆದುಕೊಳ್ಳುವ ಅಪಾಯವಿಲ್ಲವೇ ಇಲ್ಲಿ? 

ಇನ್ನು ಪೋಷಕರ ವಿಷಯಕ್ಕೆ ಬರೋಣ. ಮಗುವೊಂದು ಬೇರೆ ಕಡೆ ಏನನ್ನೋ ಹುಡುಕುತ್ತಿದೆ ಎಂದರೆ ಮನೆಯಲ್ಲಿ ಪ್ರೀತಿ ಕಡಿಮೆಯಾಗಿದೆ ಎಂದೇ ಅರ್ಥವಲ್ಲವೇ? ಬಹುತೇಕ ಬಾರಿ ಪ್ರೀತಿಯೆಂಬ ವ್ಯಾಮೋಹಕ್ಕೆ ಅವರು ಸಿಲುಕುವುದೂ ಕೂಡ ಮನೆಯಲ್ಲಿನ ನಿಷ್ಕಾಳಜಿಯಿಂದಾಗಿ ಮನಸ್ಸಿನಲ್ಲಿ ಸೃಷ್ಟಿಯಾದ ನಿರ್ವಾತವನ್ನು ತುಂಬುವುದಕ್ಕಾಗಿಯೇ. ನಿಮ್ಮ ಕಾಳಜಿ ಕಡಿಮೆಯಾಗಿದೆ. ನಿಮ್ಮ ನಿಗಾ ಕಡಿಮೆಯಾಗಿದೆ, ಇಲ್ಲವೇ ಸಾಕಷ್ಟು ಬಿಗಿಯಲ್ಲಿಟ್ಟಿದ್ದೀರಿ ಎಂದೇ ಅರ್ಥ. ಇನ್ನೂ ಕೆಲವು ಪೋಷಕರು ತಮ್ಮ ಕಷ್ಟಗಳು, ತಮ್ಮ ಬದುಕು, ತಮ್ಮ ಕನಸುಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವುದಿಲ್ಲ. ಮಕ್ಕಳು ಸುಖವಾಗಿರಲಿ ಎಂದು ಒಂದು ಡಬ್ಬಿಯಲ್ಲಿ ಹಾಕಿಟ್ಟ ಒಡವೆಯಂತೆ ನೋಡಿಕೊಳ್ಳುತ್ತಾರೆ. ಇದರಿಂದಾಗಿ ಬದುಕನ್ನು ದಿಟ್ಟತನದಿಂದ ಎದುರಿಸುವ ಗುಣವೇ ಮಕ್ಕಳಲ್ಲಿ ಬೆಳೆಯುವುದಿಲ್ಲ. 

ವೈಫ‌ಲ್ಯವೆನ್ನುವುದು ಘೋರ ಅಪರಾಧ ಎಂಬ ಭಾವನೆ ಅವರಲ್ಲಿ ಬಂದುಬಿಡುತ್ತದೆ. ಸಣ್ಣ ಸಣ್ಣ ಸೋಲಿಗೂ ಸಾವೇ ಪರಿಹಾರ ಎಂದು ಭಾವಿಸಿಬಿಡುತ್ತಾರೆ. ಇದೆಲ್ಲದರ ಜೊತೆಗೆ ಅಕ್ಕ ಪಕ್ಕದ ಮನೆಯವರು, ಒಡನಾಡಿಗಳು, ಶಾಲೆಯ ಶಿಕ್ಷಕರು, ಊರು ಕೇರಿಯ ಜನರು ಮಕ್ಕಳನ್ನು ನೋಡುವ, ನೋಡಿಕೊಳ್ಳುವ, ಅವರನ್ನು ನಡೆಸಿಕೊಳ್ಳುವ ರೀತಿಯಲ್ಲಿ ಎಲ್ಲೋ ಹದ ತಪ್ಪಿದೆ ಅನ್ನಿಸುವುದಿಲ್ಲವೇ? ಹಿಂದೆ ಒಂದು ಮಗುವಿಗೆ ಅಪ್ಪ ಅಮ್ಮನದ್ದಷ್ಟೇ ಅಲ್ಲ, ಊರಿನ ಹಿರಿಯರ ಮಾರ್ಗದರ್ಶನವೂ ಇರುತ್ತಿತ್ತು. ಆದರೆ ಈಗ ಕೂಡು ಕುಟಂಬಗಳು, ಆಪ್ತ ಸಾಮಾಜಿಕ ವ್ಯವಸ್ಥೆ ಇಲ್ಲದಿರುವುದರಿಂದ ಮಕ್ಕಳು ತಮ್ಮ ನೋವಿನಲ್ಲಿ ಒಂಟಿಯಾಗುತ್ತಿದ್ದಾರೆ.  

ಪ್ರೀತಿ ಪ್ರೇಮ, ಪರೀಕ್ಷೆಯಲ್ಲಿ ಫೇಲು, ಮಾಸ್ತರರ ಗದರಿಕೆ, ತಂದೆ ತಾಯಿಯ ಜೋರು ಮಾತಿಗೂ ನೇರವಾಗಿ ಸಾವನ್ನು ಆಯ್ಕೆ ಮಾಡಿಕೊಂಡಿರುವ ಘಟನೆಗಳು ದಿನ ನಿತ್ಯವೂ ಪತ್ರಿಕೆಯಲ್ಲಿ ತುಂಬಿರುತ್ತವೆ. ಇದು ಅನಾರೋಗ್ಯಕರ ಸಮಾಜದ ಲಕ್ಷಣ. ಮಕ್ಕಳನ್ನು ಬೆಳೆಸುವ ರೀತಿಯೇ ದೋಷಪೂರಿತವಾಗಿದೆ ಎಂದರ್ಥ. ಹದಿಹರೆಯದ ಸಮಯದಲ್ಲಿ ಮಕ್ಕಳಲ್ಲಿ ತೀವ್ರ ವೇಗದಲ್ಲಿ ದೈಹಿಕ ಮಾನಸಿಕ ಬದಲಾವಣೆಗಳಾಗುತ್ತವೆ. ತಮಗೆ ಏನಾಗುತ್ತಿದೆ ಎನ್ನುವ ಅರಿವೂ ಅವರಿಗೆ ಇರುವುದಿಲ್ಲ. ಇದರೊಟ್ಟಿಗೆ ಬದುಕಿನ ಮೌಲ್ಯಗಳು, ಜೀವನದ ಆಗಾಧತೆ, ಕಷ್ಟಗಳು, ವೈಫ‌ಲ್ಯಗಳನ್ನು ಎದುರಿಸುವ ಪರಿ ಇವೆಲ್ಲವೂ ಅವರಿಗೆ ಗೊತ್ತಾಗಬೇಕು. ಒಟ್ಟಲ್ಲಿ ನಿಜಕ್ಕೂ ಇಂತಹ ಘಟನೆಗಳು ಖೇದಕರ. ಈ ವಿಷಯದಲ್ಲಿ ರಾಜ್ಯ ಮಟ್ಟದಲ್ಲಿ ಚರ್ಚೆಯ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವುದಕ್ಕಾಗಿ ಒಂದು ಸಮಾಜವಾಗಿ ನಾವೆಲ್ಲ ತಯಾರಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅನೇಕ ಮೊಗ್ಗುಗಳು ಅರಳಿ ಬದುಕು ನೋಡುವ ಮುನ್ನವೇ ಉರುಳಿ ಬೀಳುತ್ತವೆ.

– ಸದಾಶಿವ್‌ ಸೊರಟೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ