ಕೃಷ್ಣೆಯ ಪೂರ್ಣ ಬಳಕೆಗೆ ಕಾಲಹರಣವೇಕೆ?

ಕೃಷ್ಣಾ ಮತ್ತು ಉಪನದಿಗಳ ನೀರನ್ನು ಸದ್ಬಳಕೆ ಮಾಡಿಕೊಳ್ಳದಿದ್ದರೆ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ

Team Udayavani, Oct 14, 2019, 5:36 AM IST

krishne

1990-95ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಎದುರಾದ ಹಣಕಾಸಿನ ಅಡಚಣೆಯನ್ನು ಗಮನಿಸಿದ್ದ ಎಚ್‌.ಡಿ. ದೇವೆಗೌಡರು ಪ್ರಧಾನಿಯಾದ ಬಳಿಕ ನೀರಾವರಿ ಯೋಜನೆಗಳಿಗಾಗಿ ಕೇಂದ್ರದಿಂದ ರಾಜ್ಯಕ್ಕೆ ನೀಡುವ ವಾರ್ಷಿಕ 400 ಕೋಟಿ ಅನುದಾನವನ್ನು 700 ಕೋಟಿಗೆ ಏರಿಸಿದರು. ಈ ಸೌಲಭ್ಯವನ್ನು ಉಳಿದ ಎಲ್ಲ ರಾಜ್ಯಗಳು ಸಮರ್ಥವಾಗಿ ಉಪಯೋಗಿಸಿಕೊಂಡರೂ, ಕರ್ನಾಟಕದಲ್ಲಿ ಮಾತ್ರ ಯಾವುದೇ ಸರಕಾರಗಳು ಕೃಷ್ಣೆಗಾಗಿ ಈ ಸೌಲಭ್ಯವನ್ನು ಪೂರ್ಣ ಉಪಯೋಗಿಸಿಕೊಳ್ಳದಿರುವುದು ದುರ್ದೈವದ ಸಂಗತಿ.

ನದಿಗಳು ನಮ್ಮ ಜೀವಂತಿಕೆಯ ಸಂಕೇತ. “”ನದಿ ರಾಷ್ಟ್ರಸ್ಯ ಮಹಾ ಅಮೃತಂ” ಎಂದು ವೇದ-ಉಪನಿಷತ್ತುಗಳಲ್ಲಿ ಹೇಳಿರುವುದು ಮನುಕುಲಕ್ಕೆ ಇರುವ ನದಿಗಳ ಅವಶ್ಯಕತೆಯನ್ನು ಸಾರುತ್ತದೆ. 21ನೇ ಶತಮಾನದಲ್ಲಂತೂ ನದಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ನೀರಾವರಿ ಯೋಜನೆಗಳಿಗೆ ಆದ್ಯತೆ ಕೊಡದ ರಾಜ್ಯ ಅಭಿವೃದ್ಧಿ ಯಾಗಲು ಸಾಧ್ಯವಿಲ್ಲ. ಪ್ರತಿ ಪ್ರಾಂತ್ಯಕ್ಕೂ ಜೀವನದಿಗಳನ್ನು ಪ್ರಕೃತಿಮಾತೆ ಕರುಣಿಸಿದ್ದಾಳೆ. ಅದರಂತೆ ಕೃಷ್ಣೆ ನಮ್ಮ ಉತ್ತರ ಕರ್ನಾಟಕದ ಪಾಲಿಗೆ ಜೀವಗಂಗೆ.

ಕೃಷ್ಣಾ ನದಿಯ ವಿಸ್ತಾರ
ಮಹರಾಷ್ಟ್ರದ ಸಾತಾರಾ ಜಿಲ್ಲೆಯ ಮಹಾಬಳೇಶ್ವರದಲ್ಲಿ ಹುಟ್ಟುವ ಕೃಷ್ಣಾ ನದಿಯು ಭಾರತದಲ್ಲಿಯೇ 4ನೇ ಅತಿದೊಡ್ಡ ನದಿ. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರ ರಾಜ್ಯಗಳಲ್ಲಿ 1392 ಕಿ.ಮೀ ಹರಿದು ಆಂಧ್ರದ ಕೃಷ್ಣಾ ಜಿಲ್ಲೆಯ ಹಂಸಲಾದೇವಿ ಎಂಬಲ್ಲಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ ಕೃಷ್ಣೆಯ ಉದ್ದ 483 ಕಿ.ಮೀ. ವೀಣಾ, ಕೊಯ್ನಾ, ದೂಧ್‌ಗಂಗಾ, ಪಂಚಗಂಗಾ, ಘಟಪ್ರಭಾ, ಮಲಪ್ರಭಾ, ಭೀಮಾ, ತುಂಗಭದ್ರಾ, ಮೂಸಿ, ದಂಡಿ ಎಂಬ ಪ್ರಮುಖ ನದಿಗಳು ಸೇರಿದಂತೆ ಇವುಗಳ 75ಕ್ಕೂ ಅಧಿಕ ಉಪನದಿಗಳು ಕೃಷ್ಣೆಯನ್ನು ಸೇರಿಕೊಳ್ಳುತ್ತವೆ.

ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ 2,58,948 ಚದರ ಕಿ.ಮೀ. ಇದು ಭಾರತದ ಒಟ್ಟು ಭೂಪ್ರದೇಶದ ಶೇ. 8% ಭೂಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದೆ! ಅದರಲ್ಲಿ ಅತಿಹೆಚ್ಚು ಕರ್ನಾಟಕದಲ್ಲಿ ಅಂದರೆ 1,13,271 ಚ.ಕಿ.ಮೀ, ಮಹಾರಾಷ್ಟ್ರದಲ್ಲಿ 69,425 ಚ.ಕಿ.ಮೀ ಮತ್ತು ಆಂಧ್ರಪ್ರದೇಶ, ತೆಲಂಗಾಣದಲ್ಲಿÉ 76,252 ಚ. ಕಿ.ಮೀ. ವ್ಯಾಪಿಸಿದೆ. ಒಟ್ಟು ನದಿ ಪಾತ್ರದಲ್ಲಿ 2,03,000 ಚ. ಕಿ.ಮೀ ಕೃಷಿ ಯೋಗ್ಯ ಭೂಮಿ ಇದ್ದು, ಇದು ಭಾರತದ ಒಟ್ಟು ಕೃಷಿಯೋಗ್ಯ ಭೂಮಿಯ ಶೇ. 10.4% ಪ್ರತಿಶತವಾಗಿದೆ! ಕೃಷ್ಣಾ ಬೇಸಿನ್‌ ಮೂಲಕ ವಾರ್ಷಿಕ 2758.08 ಟಿಎಂಸಿ ಅಡಿ ನೀರು ಲಭ್ಯವಿದ್ದು, ಅದರಲ್ಲಿ 2048.25 ಟಿಎಂಸಿ ಅಡಿ ನೀರು ಬಳಕೆ ಸಾಧ್ಯವಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ
ಕರ್ನಾಟಕಕ್ಕೆ ದೊರೆಯುವ ಕೃಷ್ಣಾ ನದಿ ನೀರಿನ ಸದ್ಬಳಕೆಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ರೂಪಿಸಿ ಆಲಮಟ್ಟಿ ಆಣೆಕಟ್ಟು ನಿರ್ಮಾಣಕ್ಕೆ ರಾಜ್ಯ ಸರಕಾರ ಸಲ್ಲಿಸಿದ ಪ್ರಸ್ತಾವನೆಗೆ ಕೇಂದ್ರ ಸರಕಾರ 22-5-1959ರಂದು ತಾತ್ವಿಕ ಒಪ್ಪಿಗೆ ನೀಡಿತ್ತು. ಈ ಯೋಜನೆ ಅಧಿಕೃತವಾಗಿ ಜನ್ಮತಾಳಿ 6 ದಶಕ ಕಳೆದರೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ.

ಕೃಷ್ಣಾ ನದಿಯ ಎಲ್ಲ ಉಪನದಿಗಳು ಸೇರಿ ಕರ್ನಾಟಕಕ್ಕೆ ಲಭಿಸುವ ಒಟ್ಟು 734 ಟಿ.ಎಂ.ಸಿ ಅಡಿ ನೀರಿನ ಪೈಕಿ 303 ಟಿಎಂಸಿ ಅಡಿ ಕೃಷ್ಣಾದಿಂದಲೇ ದೊರೆಯುತ್ತದೆ. ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ ಬಚಾವತ್‌ ಆಯೋಗ ಸ್ಕೀಮ್‌ ಎನಲ್ಲಿ ನಿಗದಿ ಪಡಿಸಿದಂತೆ ಆಲಮಟ್ಟಿಯಲ್ಲಿ 123 ಟಿಎಂಸಿ ಅಡಿ, ಹಿಪ್ಪರಗಿಯಲ್ಲಿ 5 ಟಿಎಂಸಿ ಅಡಿ, ಹಾಗೂ ನಾರಾಯಣಪೂರದಲ್ಲಿ 37 ಟಿಎಂಸಿ ಅಡಿ ನೀರು ಸಂಗ್ರಹಿಸುವ ಮೂಲಕ ಪೂರ್ಣ 173 ಟಿಎಂಸಿ ಅಡಿ ನೀರು ಬಳಕೆಯೊಂದಿಗೆ 15,29,582.31 ಎಕರೆ ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆಯಿಂದ 201 ಗ್ರಾಮಗಳ ಮೇಲೆ ಪರಿಣಾಮ ಬೀರಿದ್ದು, 136 ಹಳ್ಳಿಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ.

ಬಚಾವತ್‌ ಆಯೋಗದ ಸ್ಕೀಮ್‌ ಬಿನಲ್ಲಿ ದೊರೆಯುವ 130 ಟಿಎಂಸಿ ಅಡಿ ನೀರನ್ನು ಉಪಯೋಗಿಸಿಕೊಂಡು ವಿಜಯಪುರ, ಬಾಗಲಕೊಟೆ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಗದಗ ಜಿಲ್ಲೆಗಳ 13,10,832.27 ಎಕರೆ ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯುಕೆಪಿ-3 ಅಡಿಯಲ್ಲಿ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸುವುದು ಸೇರಿದಂತೆ 9 ಉಪ ಯೋಜನೆಗಳನ್ನು ಅನುಷ್ಠಾನಗೊಳಿಸಲು 51,148.94 ಕೋಟಿ ರೂ. ವೆಚ್ಚವಾಗುತ್ತದೆ. ಇದರಿಂದಾಗಿ ಮತ್ತೆ ಬಾಗಲಕೋಟೆ, ವಿಜಯಪುರ ಜಿಲ್ಲೆಗಳ 20 ಗ್ರಾಮಗಳು, ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗಲಿವೆೆ.

ಜಲಾಶಯದ ಹಿನ್ನೀರಿನಲ್ಲಿ 45,452.28 ಎಕರೆ ಭೂಮಿ ಮುಳಗಡೆ, 9 ಉಪ ಯೋಜನೆಗಳ ಕಾಲುವೆ ನಿರ್ಮಾಣಕ್ಕಾಗಿ 21,746 ಎಕರೆ, ಗ್ರಾಮೀಣ ಭಾಗದಲ್ಲಿ 20 ಗ್ರಾಮಗಳ ಪುನರ್ವಸತಿಗಾಗಿ 4908 ಎಕರೆ ಹಾಗೂ ಬಾಗಲಕೋಟೆ ಪಟ್ಟಣದ ಪುನರ್ವಸತಿಗಾಗಿ 1640.20 ಎಕರೆ ಭೂಮಿಯನ್ನು ಸರಕಾರ ಭೂ-ಸ್ವಾಧೀನಪಡಿಸಿಕೊಳ್ಳುತ್ತಿದೆ. 1990-95ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾರ್ಯಗಳು ನಡೆಯುತ್ತಿದ್ದಾಗಿನ ಹಣಕಾಸಿನ ಅಡಚಣೆಯನ್ನು ಗಮನಿಸಿದ್ದ ಎಚ್‌.ಡಿ. ದೇವೆಗೌಡರು ಪ್ರಧಾನಿಯಾದ ಬಳಿಕ ನೀರಾವರಿ ಯೋಜನೆಗಳಿಗಾಗಿ ಕೇಂದ್ರದಿಂದ ರಾಜ್ಯಕ್ಕೆ ನೀಡುವ ವಾರ್ಷಿಕ 400 ಕೋಟಿ ಅನುದಾನವನ್ನು 700 ಕೋಟಿಗೆ ಏರಿಸಿದರು. ಈ ಸೌಲಭ್ಯವನ್ನು ಉಳಿದ ಎಲ್ಲ ರಾಜ್ಯಗಳು ಸಮರ್ಥವಾಗಿ ಉಪಯೋಗಿಸಿಕೊಂಡರೂ, ಕರ್ನಾಟಕದಲ್ಲಿ ಮಾತ್ರ ಯಾವುದೇ ಸರಕಾರಗಳು ಕೃಷ್ಣೆಗಾಗಿ ಈ ಸೌಲಭ್ಯವನ್ನು ಪೂರ್ಣಪ್ರಮಾಣದಲ್ಲಿ ಉಪಯೋಗಿಸಿಕೊಳ್ಳದಿರುವುದು ದುರ್ದೈವದ ಸಂಗತಿ.

ವಿಳಂಬದಿಂದ ಹೆಚ್ಚುತ್ತಿದೆ ಯೋಜನಾ ವೆಚ್ಚ
ನ್ಯಾ. ಬ್ರಿಜೇಶಕುಮಾರ ಆಯೋಗವು ದಿ. 30-12-2010 ರಂದು ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2ರಲ್ಲಿ ನೀಡಿದ ತೀರ್ಪಿನಂತೆ ಕರ್ನಾಟಕದ ಪಾಲಿನ 177 ಟಿಎಂಸಿ ಅಡಿ ನೀರಿನಲ್ಲಿ 130 ಟಿಎಂಸಿ ಅಡಿ ನೀರನ್ನು ಕೃಷ್ಣಾ ಮೇಲ್ದಂಡೆ ಯೋಜನೆ-3ರಡಿ ಬಳಕೆ ಮಾಡಲು ಕರ್ನಾಟಕ ಸರಕಾರ ತಿರ್ಮಾನಿಸಿ 24-01-2012ರಂದು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದರೂ ಇಂದಿನವರೆಗೂ ಯೋಜನೆಯಲ್ಲಿ ಪ್ರಗತಿಯಾಗಿಲ್ಲ. ಇದರಿಂದಾಗಿ ಯೋಜನಾ ವೆಚ್ಚ ವರ್ಷದಿಂದ ವರ್ಷಕ್ಕೆ ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. 2012ರಲ್ಲಿ ಯೋಜನೆಗೆ ಅನುಮೋದನೆ ದೊರೆತಾಗ ಇದ್ದ 17,207 ಕೋಟಿ ಯೋಜನಾ ವೆಚ್ಚ 09.10.2017ರಂದು ಪರಿಷ್ಕರಿಸಿದ ದರ ಪಟ್ಟಿಯಲ್ಲಿ 51,148.94 ಕೋಟಿಯಷ್ಟಾಗಿದೆ.

ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2ರ ತೀರ್ಪನ್ನು ಕರ್ನಾಟಕ, ಮಹಾರಾಷ್ಟ್ರ ಸರಕಾರಗಳು ಪುರಸ್ಕರಿಸಿದ್ದು, ಆಂಧ‌Å ಸರಕಾರ ತೀರ್ಪು ಪ್ರಶ್ನಿಸಿ ಸುಪ್ರಿಂಕೋರ್ಟ್‌ ಮೆಟ್ಟಿಲೇರಿದೆ. ಕರ್ನಾಟಕ ಸರಕಾರವು ನ್ಯಾಯವಾದಿ ನಾರಿಮನ್‌ ಅವರನ್ನು ವಕೀಲರನ್ನಾಗಿ ನೇಮಿಸಿದೆ. ಮುಂಬರುವ 15 ದಿನಗಳಲ್ಲಿಯೇ ಅಂತಿಮ ವಿಚಾರಣೆ ದಿನಾಂಕ ನಿಗದಿಯಾಗಿದೆ. ನಮ್ಮ ಕಾನೂನು ತಜ್ಞರ ತಂಡ ಬಲಾಡ್ಯವಾಗಬೇಕು. ಯೋಜನೆ ಅನುಷ್ಠಾನ ಗೊಳ್ಳುವವರೆಗೆ ನೀರು ಸಂಗ್ರಹ ಸಾಧ್ಯವಿಲ್ಲದ್ದರಿಂದ ಆಂಧ‌Å- ತೆಲಂಗಾಣ ಸರಕಾರಗಳು ಉದ್ದೇಶಪೂರ್ವಕವಾಗಿ ಕೋರ್ಟ್‌ ಮೂಲಕ ಕಾಲಹರಣ ಮಾಡುತ್ತಿವೆ. ಸುಪ್ರೀಂಕೋರ್ಟ್‌ ತೀರ್ಪು ಬಂದ ನಂತರ ಸಂಗ್ರಹಣೆಯಲ್ಲಿ 10-15 ಟಿಎಂಸಿ ಅಡಿ ವ್ಯತ್ಯಾಸವಾದರೂ ಸರಿದೂಗಿಸಬಹುದು. ಈಗ ಕಾಲಹರಣ ಮಾಡದೇ ಕೃಷ್ಣಾ ಕೊಳ್ಳದ ಎಲ್ಲ ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಇಚ್ಛಾಶಕ್ತಿ ಪ್ರಕಟಿಸುವುದರೊಂದಿಗೆ ಸರಕಾರವು ಮುತವರ್ಜಿ ವಹಿಸಿ ನ್ಯಾ. ಬ್ರಿಜೇಶಕುಮಾರ ಆಯೋಗದ ಕೃ.ಜ.ವಿ.ನ್ಯಾ. ತೀರ್ಪನ್ನು ಕೇಂದ್ರ ಸರಕಾರದಲ್ಲಿ ಗೆಜೆಟ್‌ ಹೊರಡಿಸಿ, ಭೂಸ್ವಾಧೀನಪಡಿಸಿ ಪುನರ್‌ವಸತಿ ಸೌಲಭ್ಯ ಕಲ್ಪಿಸಿ 130 ಟಿಎಂಸಿ ಅಡಿ ನೀರು ಸಂಗ್ರಹಿಸಲು ಮುಂದಾಗಬೇಕು.

ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರೆಯಲಿ
ಹೊಸ ಭೂಸ್ವಾಧೀನ ಕಾಯ್ದೆ-2013ರ‌ ಮಾರ್ಗಸೂಚಿಯಂತೆ ಭೂಸ್ವಾಧೀನ ಮತ್ತು ಪುನರ್‌ವಸತಿ ಹಾಗೂ ಪುನರ್‌ನಿರ್ಮಾಣ ಕಾಮಗಾರಿಗಳು ಸಮರೋಪಾದಿಯಲ್ಲಿ ನಡೆಯಬೇಕು. ಸರಕಾರ ಸಂತ್ರಸ್ತರಿಗೆ ಅನ್ಯಾಯವಾಗದಂತೆ ಏಕರೂಪ ಭೂಬೆಲೆಯೊಂದಿಗೆ ಸೂಕ್ತ ಸಹಾಯ ಮತ್ತು ಆಕರ್ಷಕ ಸೌಲಭ್ಯಗಳನ್ನು ನೀಡಬೇಕು. ಸಂತ್ರಸ್ತರಿಗೆ ಸರಕಾರ ನೀಡುವ ಪರಿಹಾರದ ಮೊತ್ತದಲ್ಲಿ ಸ್ವಲ್ಪ ಪಾಲು ಕೃಷ್ಣಾ ಬಾಂಡ್‌ಗಳ ರೂಪದಲ್ಲಿ ನೀಡಿದರೆ, ಸಂತ್ರಸ್ತರ ಭವಿಷ್ಯದ ದೃಷ್ಟಿಯಿಂದಲೂ ಒಳ್ಳೆಯದಾಗುತ್ತದೆ. ಸರಕಾರಕ್ಕೂ ಸದ‌Âದ ಮಟ್ಟಿಗೆ ಆರ್ಥಿಕ ಹೊರೆ ಕಡಿಮೆಯಾಗಬೇಕು.

ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ
ಕೇಂದ್ರ-ರಾಜ್ಯ ಎರಡೂ ಕಡೆ ಬಿಜೆಪಿ ಸರಕಾರವಿರು ವುದರಿಂದ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬಹುದು. ಈ ಮೂಲಕ ಕೇಂದ್ರದಿಂದ ಹೆಚ್ಚಿನ ನೆರವನ್ನು ಪಡೆಯಬಹುದು. ಇಲ್ಲವಾದಲ್ಲಿ ರಾಜ್ಯವೇ ಇದನ್ನು ಸವಾಲು ಎಂದು ಪರಿಗಣಿಸಿ ಮುಂಬರುವ 2-3 ಬಜೆಟ್‌ನಲ್ಲಿ ವಾರ್ಷಿಕ 20-30 ಸಾವಿರ ಕೋಟಿ ಹಣವನ್ನು ಈ ಯೋಜನೆಗೆ ನೀಡುವ ಮೂಲಕ 3-4 ವರ್ಷಗಳಲ್ಲಿ ಪೂರ್ಣ ಗೊಳಿಸಬಹುದು. ತೆಲಂಗಾಣದ ಚಂದ್ರಶೇಖರ್‌ ರಾವ್‌ರಂತೆ ರಾಷ್ಟ್ರೀಯ ಬ್ಯಾಂಕುಗಳ ಮೂಲಕ ಸಾಲ ಪಡೆಯ ಬಹುದು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೃಷ್ಣಾ ಬಾಂಡ್‌ ಮೂಲಕ ಹಣ ಸಂಗ್ರಹಿಸಿ ಯೋಜನೆ ಪೂರ್ಣಗೊಳಿಸಬಹುದು. ಸಾಲ ಪಡೆದು ಯೋಜನೆ ಪೂರ್ಣ ಗೊಳಿಸಿದರೂ, ಅಚ್ಚುಕಟ್ಟು ಪ್ರದೇಶ ಸಮೃದ್ಧ ನೀರಾವರಿ ಸೌಲಭ್ಯ ಪಡೆದು ಕೃಷಿ, ಕೈಗಾರಿಕೋದ್ಯಮ, ಸ್ಥಳೀಯ ಉದ್ಯಮ ವಿಕಾಸವಾಗಿ ಮುಂಬರುವ ವರ್ಷಗಳಲ್ಲಿ ತೆರಿಗೆ ರೂಪದಲ್ಲಿ ಸರಕಾರದ ಬೊಕ್ಕಸಕ್ಕೆ ಮರುಸಂದಾಯವಾಗುತ್ತದೆ. ಯೋಜನೆಯ ಪ್ರಥಮ ಆದ್ಯತೆಯಲ್ಲಿ ಭೂಸ್ವಾಧೀನ, ಪುನರ್‌ವಸತಿ-ಪುನರ್‌ನಿರ್ಮಾಣ ಕೆಲಸ ಪೂರ್ಣಗೊಳಿಸುವುದು. ಆಣೆಕಟ್ಟು ಎತ್ತರ ಹೆಚ್ಚಿಸಿ 130 ಟಿಎಂಸಿ ಅಡಿ ನೀರು ಸಂಗ್ರಹಿಸುವುದು. ಹಣಕಾಸಿನ ಲಭ್ಯತೆ ಮೇರೆಗೆ ಅಚ್ಚುಕಟ್ಟು ಪ್ರದೇಶದ ಉಳಿದ ಉಪಯೋಜನೆಗಳನ್ನು ಅನುಷ್ಠಾನ ಗೊಳಿಸಬಹುದು.

ಅಗತ್ಯ ಸಿಬಂದಿ ನಿಯೋಜಿಸಿ
ಯೋಜನೆಯ ಅನುಷ್ಠಾನಕ್ಕೆ ತಜ್ಞರು ಹಾಗೂ ಆಡಳಿತಾತ್ಮಕ ಕಾರ್ಯಗಳಿಗಾಗಿ ಸಮರ್ಪಕ ಸಿಬಂದಿಯ ಕೊರತೆ ಇದೆ. ಇರುವ ಬಹುಪಾಲು ಸಿಬ್ಬಂದಿ ಬೇರೆ ಇಲಾಖೆಗಳಿಂದ ತಾತ್ಕಾಲಿಕ ನಿಯುಕ್ತಿಗೊಂಡಿದ್ದಾರೆ. ಸರಕಾರ ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಬೇಕಾದರೆ ಅಗತ್ಯ ಸಿಬಂದಿ ನೇಮಿಸಬೇಕು.

ತ್ವರಿತಗತಿಯಲ್ಲಿ ಪೂರ್ಣಗೊಳ್ಳುವುದು ಮುಖ್ಯ
ಕೃಷ್ಣಾ ಮೇಲ್ದಂಡೆ ಯೋಜನೆ ಕಾಲಮಿತಿಯೊಳಗೆ ಪೂರ್ಣಗೊಂಡರೆ ದೇಶದ ವಾರ್ಷಿಕ ವರಮಾನದಲ್ಲಿ ಪ್ರತಿವರ್ಷ 6,000 ಕೋಟಿಯಷ್ಟು ಹೆಚ್ಚಳವಾಗುತ್ತದೆ. ಉತ್ತರ ಕರ್ನಾಟಕದಲ್ಲಿ ವಾರ್ಷಿಕ ಸರಾಸರಿ 550 ರಿಂದ 650 ಮಿ.ಮೀ ಮಳೆಯಾಗುತ್ತದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಕೃಷ್ಣಾ ಮತ್ತು ಅದರ ಉಪನದಿಗಳೇ ಉ.ಕಕ್ಕೆ ಆಧಾರ. ಈ ನದಿಗಳ ನೀರನ್ನು ಸದ್ಬಳಕೆ ಮಾಡಿಕೊಳ್ಳದಿದ್ದರೆ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ.

ಅನುಷ್ಠಾನಕ್ಕೆ ಹೊಸ ಮಾರ್ಗೊಪಾಯಗಳು
ಎಲ್ಲಾ ನೀರನ್ನು ಒಂದೇ ಕಡೆ ಜಲಾಶಯ ನಿರ್ಮಿಸಿ ಸಂಗ್ರಹಿ ಸುವುದು ಸ್ವಾತಂತ್ರ ಪೂರ್ವಕ್ಕೂ ಹಳೆಯದಾದ ವ್ಯವಸ್ಥೆ. ಇಂದು ಕಾಲ ಬದಲಾಗಿದೆ. ತಂತ್ರಜ್ಞಾನ, ಹೊಸತನ ನಮ್ಮನ್ನು ಆವರಿಸಿವೆ. ಯುಕೆಪಿ-3ರನ್ನು ಆಧುನಿಕವಾಗಿ ಅನುಷ್ಠಾನಗೊಳಿಸಬಹುದು.

ಪುನರ್‌ವಸತಿ ಮತ್ತು ಪುನರ್‌ನಿರ್ಮಾಣದ ದೃಷ್ಟಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಜಗತ್ತಿನಲ್ಲಿಯೇ ಅತಿದೊಡ್ಡ ಜನವಸತಿ ಸ್ಥಳಾಂತರ ಯೋಜನೆಯಾಗಿದೆ. ಈಗ ಮತ್ತೂಂದು ಪುನರ್‌ವಸತಿಗೆ ಸಜ್ಜಾಗಬೇಕಿರುವುದು ಕಳವಳದ ಸಂಗತಿ. ಬದಲಾಗಿ ಕೆಲವು ಅವಶ್ಯಕ ಹಳ್ಳಿಗಳಿಗೆ ನಾರ್ವೆ ಮಾದರಿ ತಡೆಗೋಡೆಯನ್ನು ನಿರ್ಮಿಸಿ ಮುಳುಗಡೆಯ ಪ್ರಮಾಣ ತಗ್ಗಿಸಬಹುದು.
ಕಾಲೇಶ್ವರಂ ಯೋಜನೆಯಡಿ ಗೋದಾವರಿ ನದಿ ನೀರನ್ನು ನೈಸರ್ಗಿಕ ಹರಿವಿಗೆ ತೊಂದರೆ ಮಾಡದೇ ಹಿಮ್ಮುಖವಾಗಿ ಲಿಫ್ಟ್ ಮಾಡಿ ವಾರ್ಷಿಕ 45 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ದೊರಕಿಸುವುದರ ಜೊತೆಗೆ ಹೈದ್ರಾಬಾದ್‌, ಸಿಕಂದರಾಬಾದ್‌ ಸೇರಿದಂತೆ ತೆಲಂಗಾಣದ ಒಟ್ಟು ಶೇ. 70ರಷ್ಟು ಗ್ರಾಮೀಣ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಬೃಹತ್‌ ಯೋಜನೆ ರೂಪಿಸಿದ್ದರೂ ಒಂದು ಹಳ್ಳಿಯೂ ಮುಳುಗಡೆಯಾಗಿಲ್ಲ! ಕಾಲುವೆ, ಬ್ಯಾರೇಜ್‌ಗೆ ಅತಿ ಕಡಿಮೆ ಪ್ರಮಾಣದಲ್ಲಿ ಭೂ- ಸ್ವಾಧೀನಪಡಿಸಿಕೊಳ್ಳಲಾಗಿದೆ. ನದಿಯಲ್ಲಿಯೇ ನೀರು ಸಂಗ್ರಹ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಯೋಜನೆಗಾಗಿ ಜರ್ಮನಿ, ಜಪಾನ್‌, ಫಿನ್‌ಲಾÂಂಡ್‌, ಆಸ್ಟ್ರೇಲಿ ಯಾದ ತಂತ್ರಜ್ಞಾನ ಮತ್ತು ಯಂತ್ರೋಪಕರಣ ಪಡೆಯಲಾ ಗುತ್ತಿದೆ. ಅಂತಹ ಅವಕಾಶ ಬಳಸಿಕೊಳ್ಳಬಹುದು.

ಘಟಪ್ರಭಾ-ಮಲಪ್ರಭಾಗೂ ಹರಿಸಬಹುದು-
ಕೃಷ್ಣೆಯ ನೀರನ್ನು ಆಲಮಟ್ಟಿ ಜಲಾಶಯದಲ್ಲಿ ಮಾತ್ರವಲ್ಲದೇ ಏತ ನೀರಾವರಿ ಯೋಜನೆಯ ಮೂಲಕ ಹಿಡಕಲ್‌ ಹಾಗೂ ನವಿಲುತೀರ್ಥ ಜಲಾಶಯಗಳಲ್ಲಿಯೂ ಸಂಗ್ರಹಿಸಬಹುದು. ಲಕ್ಷಾಂತರ ಎಕರೆ ಫ‌ಲವತ್ತಾದ ಭೂಮಿಯನ್ನು ಕೃಷ್ಣಾರ್ಪಣ ಮಾಡಿದ ಫ‌ಲವಾಗಿ ನಮಗೆ ಮಹಾತ್ಯಾಗಿಗಳು ಎಂಬ ಬಿರುದು ಬಿಟ್ಟು ಬೇರೇನೂ ದೊರೆತಿಲ್ಲ. 30 ಟಿಎಂಸಿ ಅಡಿ ನೀರನ್ನು ಘಟಪ್ರಭಾ, ಮಲಪ್ರಭಾ ನದಿಗಳಿಗೆ ಹರಿಸಿದರೆ ಆ ಜಲಾಶಯಗಳ ನೀರಿನ ಕೊರತೆಯನ್ನು ನೀಗಿಸುವುದರ ಜೊತೆಗೆ ಇಲ್ಲಿಯ ಪುನರ್‌ವಸತಿ ಮತ್ತು ಪುನರ್‌ನಿರ್ಮಾಣದ ಖರ್ಚು ಕಡಿಮೆ ಮಾಡಬಹುದು. ಇದರಿಂದ ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಮುಧೋಳ, ಬದಾಮಿ, ಜಮಖಂಡಿ, ಬೀಳಗಿ ಭಾಗಗಳ ಬರಡು ಭೂಮಿಗಳಿಗೆ ನೀರಾವರಿ ಸೌಲಭ್ಯ ದೊರೆಯುತ್ತದೆ.

ಯುಕೆಪಿ-3 ಅಡಿಯಲ್ಲಿ 9 ಉಪನೀರಾವರಿ ಯೋಜನೆಗಳಿವೆ. ಭೀಮಾ ನದಿ ತಿರುವು ಯೋಜನೆ ಹೊರತುಪಡಿಸಿ ಉಳಿದೆಲ್ಲ ಏತ ನೀರಾವರಿ ಯೋಜನೆಗಳಿಗೆ ಆಲಮಟ್ಟಿ ಜಲಾಶಯದಿಂದಲೇ ನೀರು ಪೂರೈಸಬೇಕು. ಬದಲಾಗಿ ಸದರಿ ಯೋಜನೆಗಳಿಗೆ ಸಮೀಪವಿರುವ ಗುಡ್ಡ, ಕಣಿವೆ, ತಗ್ಗು ಪ್ರದೇಶಗಳಲ್ಲಿ ಅಥವಾ ದೊಡ್ಡ ಕೆರೆಗಳಲ್ಲಿ ನೀರು ಸಂಗ್ರಹಿಸಿ ಬಳಸಿಕೊಳ್ಳಬಹುದು. ಇದರಿಂದ ಪುನರ್‌ವಸತಿ ಯೋಜನಾ ವೆಚ್ಚದ ಗಾತ್ರ ಕಡಿಮೆಯಾಗುತ್ತದೆ. ಯುಕೆಪಿ-3ರ ಅಡಿಯಲ್ಲಿ 18 ನಗರಗಳು ಸೇರಿದಂತೆ ನೂರಾರು ಹಳ್ಳಿಗಳಿಗೆ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಬೇಕಿದೆ. ತೆಲಂಗಾಣದಲ್ಲಿ ಚಂದ್ರಶೇಖರ ಜಾರಿ ಮಾಡಿರುವ ದೇಶದಲ್ಲಿಯೇ ಮಾದರಿಯಾದ ಶುದ್ಧ ಕುಡಿಯುವ ನೀರಿನ ಯೋಜನೆಯಾದ ಮಿಷನ್‌ ಭಗೀರಥದಂತೆ ಜಾರಿಗೊಳಿ ಸಬಹುದು.

ಕಾಲೇಶ್ವರಂ ಯೋಜನೆಯಿಂದ ಶೇ.70ರಷ್ಟು ತೆಲಂಗಾಣದ ಹಳ್ಳಿ ಮತ್ತು ನಗರ ಪ್ರದೇಶಗಳಿಗೆ ಕೊಳವೆ ಮೂಲಕ ಶುದ್ಧೀಕರಿಸಿದ ನೀರು ಸರಬರಾಜು ಮಾಡಲು ಸಾಧ್ಯವಾಗಬಹು ದಾದರೆ ಕೃಷ್ಣಾ ಮೇಲ್ದಂಡೆ ಯೋಜನೆ ಮೂಲಕವೂ ಬಹುಪಾಲು ಉತ್ತರ ಕರ್ನಾಟಕಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಿದೆ!

ಕೊಯ್ನಾ: ಪೋಲಾಗುತ್ತಿದೆ ನೀರು
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿ ಕೊಯ್ನಾ ಜಲಾಶಯವಿದೆ. ಜಲಾಶಯದ ಒಟ್ಟು 105 ಟಿಎಂಸಿ ಅಡಿ ನೀರಿನಲ್ಲಿ 67.5 ಟಿಎಂಸಿ ನೀರನ್ನು ವಿದ್ಯುತ್‌ ಉತ್ಪಾದನೆಗೆ ಮತ್ತು 37.5 ಟಿಎಂಸಿ ಅಡಿ ನೀರನ್ನು ಕೃಷಿಗಾಗಿ ಬಳಕೆ ಮಾಡುತ್ತಾರೆ. 65.7 ಟಿಎಂಸಿ ಅಡಿ ನೀರು ಪಶ್ಚಿಮಾಭಿಮುಖವಾಗಿ ಹರಿದು ಚಿಪೂÉನ್‌ ಮಾರ್ಗವಾಗಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನೀರು ನೈಸರ್ಗಿಕವಾಗಿ ಹರಿದಿದ್ದರೆ ಕರ್ನಾಟಕ ಹಾಗೂ ಉಳಿದ ಭಾಗೀದಾರ ರಾಜ್ಯಗಳಿಗೆ ಉಪಯೋಗವಾಗುತ್ತಿತ್ತು. ಆದರೆ ಮಹಾರಾಷ್ಟ್ರ ಸರಕಾರ ವಿದ್ಯುತ್‌ ಉತ್ಪಾದನೆಗಷ್ಟೆ ಬಳಸಿ ಪ್ರತಿ ತಿಂಗಳು 5.6 ಟಿಎಂಸಿ ಅಡಿ ನೀರನ್ನು ಸಮುದ್ರ ಸೇರಿಸುತ್ತಿದೆ. ಕರ್ನಾಟಕವು ಬೇಸಿಗೆ ಅವಧಿಯಲ್ಲಿ ಇದರಲ್ಲಿಯ ಶೇ. 30-40% ನೀರು ಪಡೆದು ಪ್ರತಿಯಾಗಿ ಅಷ್ಟೆ ಪ್ರಮಾಣದ ವಿದ್ಯುತ್‌ ನೀಡುವ ಯೋಜನೆಯನ್ನು ರೂಪಿಸಬಹುದು.

(ಲೇಖಕರು ಉದ್ಯಮಿ ಹಾಗೂ ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿಯ ಸಂಚಾಲಕರು)

– ಸಂಗಮೇಶ ಆರ್‌. ನಿರಾಣಿ

ಟಾಪ್ ನ್ಯೂಸ್

ಕೇನ್‌ ವಿಲಿಯಮ್ಸನ್‌ಗೆ ಎರಡು ತಿಂಗಳು ವಿಶ್ರಾಂತಿ

ಕೇನ್‌ ವಿಲಿಯಮ್ಸನ್‌ಗೆ ಎರಡು ತಿಂಗಳು ವಿಶ್ರಾಂತಿ

ಬ್ಯಾಟಿಂಗ್‌ನಲ್ಲಿ ಮಿಂಚಿದ ಹನುಮ ವಿಹಾರಿ, ಇಶಾನ್‌ ಕಿಶನ್‌ 

ಬ್ಯಾಟಿಂಗ್‌ನಲ್ಲಿ ಮಿಂಚಿದ ಹನುಮ ವಿಹಾರಿ, ಇಶಾನ್‌ ಕಿಶನ್‌ 

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಬಿಜೆಪಿಗೆ ದಲಿತರು ಆಡಳಿತದ ಪಾಲುದಾರರು: ಸಿ.ಟಿ.ರವಿ

ಬಿಜೆಪಿಗೆ ದಲಿತರು ಆಡಳಿತದ ಪಾಲುದಾರರು: ಸಿ.ಟಿ.ರವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೂಸ್ಟರ್‌ ಡೋಸ್‌ಗೆ ಈಗ ಕಾಲ ಪಕ್ವವಾಗಿದೆಯೇ?

ಮತ್ತೆ ಹುಟ್ಟುಹಾಕಿದೆ…ಬೂಸ್ಟರ್‌ ಡೋಸ್‌ಗೆ ಈಗ ಕಾಲ ಪಕ್ವವಾಗಿದೆಯೇ?

ಮಕ್ಕಳ ಹಕ್ಕುಗಳ ರಕ್ಷಣೆಗೆ ಗ್ರಾಮಸಭೆಗಳು ಸನ್ನದ್ಧ

ಮಕ್ಕಳ ಹಕ್ಕುಗಳ ರಕ್ಷಣೆಗೆ ಗ್ರಾಮಸಭೆಗಳು ಸನ್ನದ್ಧ

ನಮ್ಮ ಪ್ರೀತಿಯ ಅಪ್ಪು: ರಾಜನಂತೆ ಆಗಮನ ಮಹಾರಾಜನಂತೆ ನಿರ್ಗಮನ

ನಮ್ಮ ಪ್ರೀತಿಯ ಅಪ್ಪು: ರಾಜನಂತೆ ಆಗಮನ ಮಹಾರಾಜನಂತೆ ನಿರ್ಗಮನ

ಹಳ್ಳಿಯೊಂದರ ಕರುಣ ಕಥೆ ‘ಕಳ್ಳಿಗಾಡಿನ ಇತಿಹಾಸ’

ಹಳ್ಳಿಯೊಂದರ ಕರುಣ ಕಥೆ ‘ಕಳ್ಳಿಗಾಡಿನ ಇತಿಹಾಸ’

ದೇಗುಲಗಳು ಸರಕಾರದ ಮುಷ್ಟಿಯಿಂದ ಹೊರಬರಲಿ

ದೇಗುಲಗಳು ಸರಕಾರದ ಮುಷ್ಟಿಯಿಂದ ಹೊರಬರಲಿ

MUST WATCH

udayavani youtube

ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!

udayavani youtube

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

ಹೊಸ ಸೇರ್ಪಡೆ

ಹಣಕಾಸಿನ ಕೊರತೆ: ಹೊಸ ಬಿಪಿಎಲ್‌ ಕಾರ್ಡ್‌ ವಿತರಣೆ ವಿಳಂಬ

ಹಣಕಾಸಿನ ಕೊರತೆ: ಹೊಸ ಬಿಪಿಎಲ್‌ ಕಾರ್ಡ್‌ ವಿತರಣೆ ವಿಳಂಬ

ಕೇನ್‌ ವಿಲಿಯಮ್ಸನ್‌ಗೆ ಎರಡು ತಿಂಗಳು ವಿಶ್ರಾಂತಿ

ಕೇನ್‌ ವಿಲಿಯಮ್ಸನ್‌ಗೆ ಎರಡು ತಿಂಗಳು ವಿಶ್ರಾಂತಿ

ಬ್ಯಾಟಿಂಗ್‌ನಲ್ಲಿ ಮಿಂಚಿದ ಹನುಮ ವಿಹಾರಿ, ಇಶಾನ್‌ ಕಿಶನ್‌ 

ಬ್ಯಾಟಿಂಗ್‌ನಲ್ಲಿ ಮಿಂಚಿದ ಹನುಮ ವಿಹಾರಿ, ಇಶಾನ್‌ ಕಿಶನ್‌ 

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.