ಕಾರ್ಯದಕ್ಷತೆ ಬದಲಾದ್ರೆ ದೇಶ ಬದಲಾಗುತ್ತೆ

Team Udayavani, Dec 26, 2018, 6:00 AM IST

ಸರಕಾರದ ಉದ್ಯೋಗಿಯಾಗಿದ್ದವನು ಸರಿಯಾಗಿ ತನ್ನ ಕರ್ತವ್ಯ ನಿರ್ವಹಿಸಬೇಕಾದರೆ ಆತ ತನ್ನ ಮತ್ತು ಕುಟುಂಬದ ಭರಣ-ಪೋಷಣೆಯ ಕುರಿತು ನಿಶ್ಚಿಂತನಾಗಿರಬೇಕು ಎನ್ನುವ ದೃಷ್ಟಿಯಿಂದ ಸರಕಾರ ತನ್ನ ನೌಕರರಿಗೆ ಆಕರ್ಷಕ ವೇತನ ನೀಡುತ್ತದೆ. ಕಾಲ ಕಾಲಕ್ಕೆ ಭತ್ಯೆ, ವಿವಿಧ ಸವಲತ್ತುಗಳನ್ನು ನೀಡಿ ಆದರ್ಶ ಉದ್ಯೋಗದಾತನಾಗಿ ನಡೆದುಕೊಳ್ಳುತ್ತದೆ. 

ಖಾಸಗಿ ಕ್ಷೇತ್ರದಲ್ಲಿ ಇಲ್ಲದ ನೌಕರಿ ಭದ್ರತೆಯ ಕಾರಣದಿಂದಾಗಿ ಅನೇಕರು ಸರಕಾರಿ ನೌಕರಿ ಎಂದರೆ ತಾವು ಸರಕಾರದ “ಜಮಾಯಿ ಬಾಬು’ ಅರ್ಥಾತ್‌ ಅಳಿಯಂದಿರು ಇದ್ದಂತೆ ಎಂದು ತಿಳಿಯುವುದಷ್ಟೇ ಅಲ್ಲ, ಕೆಲವು ನೌಕರರು ರಾಜಾರೋಷವಾಗಿ ಹಾಗೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ! ನಾಲ್ಕೈದು ಎಕರೆ ಜಮೀನು ಹೊಂದಿದ ಕೃಷಿಕನಿಗಿಂತಲೂ ಸರಕಾರದ ನಾಲ್ಕನೇ ದರ್ಜೆ ನೌಕರನೋರ್ವನ ಜೀವನ ಮಟ್ಟ ಉತ್ತಮವಾದದ್ದು ಎನ್ನುವ ಧಾರಣೆ-ಧೋರಣೆ ನಮ್ಮ ಸಮಾಜದಲ್ಲಿದೆ. ದೇಶದ ಜನರ ಹಸಿವನ್ನು ಹಿಂಗಿಸಲು ಮಳೆ-ಬಿಸಿಲೆನ್ನದೇ ಬೆವರು ಹರಿಸಿ ದುಡಿಯುವ ರೈತನಿಗಿಂತಲೂ ಸರಕಾರದ ಕೆಳ ಹಂತದ ನೌಕರರೇ ಉತ್ತಮ ಮಟ್ಟದ ಜೀವನ ನಿರ್ವಹಣೆ ಮಾಡುತ್ತಾರೆ ಎನ್ನುವ ಕಟು ವಾಸ್ತವಕ್ಕೆ ಸಾಕ್ಷ್ಯಾಧಾರಗಳು ಬೇಕಿಲ್ಲ. ಸರಕಾರಿ ನೌಕರರು ದೇಶದ ಸಾಮಾನ್ಯ ಪ್ರಜೆಗಿಂತ ಹಲವು ಪಟ್ಟು ಉತ್ತಮ ಸ್ಥಿತಿಯಲ್ಲಿ ಇದ್ದರೂ ಸರ‌ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಕೆಲಸ ಸಂಭವವಿಲ್ಲ ಎನ್ನುವ ಸ್ಥಿತಿ ಏಕೆ ಇದೆ? 

ಅದಕ್ಷ ಕಾರ್ಯಸಂಸ್ಕೃತಿ
ಸರ್ಕಾರಿ ಕಚೇರಿಗಳ ಕಾರ್ಯ ಸಂಸ್ಕೃತಿಯ (work culture) ವಾಸ್ತವ ತಿಳಿಯಲು ಹೆಚ್ಚೇನೂ ಶ್ರಮ ಪಡಬೇಕಿಲ್ಲ. ತಾಲೂಕಿನ ಶಕ್ತಿ ಕೇಂದ್ರವೆನಿಸಿದ ಯಾವುದೇ ತಾಲೂಕು ಕಚೇರಿಗೆ ಒಂದು ಸುತ್ತು ಹೊಡೆದು ಬಂದರೆ ನಮ್ಮ ಸರಕಾರಿ ನೌಕರರು ಎಷ್ಟು ವೇಗವಾಗಿ ಕೆಲಸ ಮಾಡುತ್ತಾರೆ ಎನ್ನುವುದು ತಿಳಿಯುತ್ತದೆ. ತಮ್ಮೆದುರು ನಿಂತಿರುವ ಅಮಾಯಕ ಶ್ರೀಸಾಮಾನ್ಯನನ್ನು ಪ್ರಶ್ನೆಗಳ ಜಾಲದಲ್ಲಿ ಕೆಡವಿ ಅಸಹಾಯಕನಾಗಿಸುವ ಸರಕಾರಿ ನೌಕರರ ನಿಪುಣತೆ ಕಂಡು ನೀವು ಆಶ್ಚರ್ಯಚಕಿತರಾಗಬಹುದು. ಅನ್ನದಾತರ ಸಮಸ್ಯೆಗಳಿಗೆ ನಮ್ಮ ನೌಕರಶಾಹಿ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎನ್ನುವ ಸತ್ಯದರ್ಶನವಾಗುತ್ತದೆ. ದೂರ ದೂರದ ಊರುಗಳಿಂದ ರೇಶನ್‌ ಕಾರ್ಡ್‌ ನವೀಕರಿಸಲೆಂದೋ, ಪಹಣಿ ಪತ್ರದ ನ್ಯೂನತೆ ಸರಿಪಡಿಸಲೆಂದೋ ಬಂದವರು ಅಥವಾ ತಲೆಯ ಮೇಲೊಂದು ಸೂರು ಕಟ್ಟಿಕೊಳ್ಳಲು ತಮ್ಮ ಬಳಿ ಇರುವ ಅಂಗೈ ಅಗಲದ ಜಮೀನಿನ ಭೂ ಪರಿವರ್ತನೆಗೆಂದು ಅಲೆಯುತ್ತಿರುವ ಗ್ರಾಮೀಣರನ್ನು ಒಂದರೆಕ್ಷಣ ಮಾತನಾಡಿಸಿದರೆ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳುವ ಕಷ್ಟದ ಅರಿವಾಗುತ್ತದೆ. ಒಬ್ಬೊಬ್ಬರದು ಒಂದೊಂದು ಕತೆ, ಕೇಳುತ್ತಾ ಹೋದರೆ ಯಾವ ಸರಕಾರ ಬಂದರೂ ಕಚೇರಿಗಳಲ್ಲಿನ ಕಾರ್ಯದಕ್ಷತೆಯಲ್ಲಿ ಗುಣಾತ್ಮಕ ಸುಧಾರಣೆ ಮಾಡಲು ಸಾಧ್ಯವಿಲ್ಲವೇನೋ ಎಂಬ ಹತಾಶೆ ನಮ್ಮನ್ನಾವರಿಸಿಕೊಂಡು ಬಿಡುತ್ತದೆ. 

ಸರಕಾರವೇನೋ ಜನರಿಗೆ ಸಮಯಬದ್ಧ ಸೇವೆ ಸಿಗಲಿ ಎಂದು ಸಕಾಲ’ , “e-ಕ್ಷಣ’ ಮೊದಲಾದ ಆಕರ್ಷಕ ಕಾರ್ಯಕ್ರಮಗಳನ್ನು ಅತ್ಯುತ್ಸಾಹದಿಂದ ರೂಪಿಸಿದೆ. ಜನನ/ಮರಣ ಪ್ರಮಾಣ ಪತ್ರ ನೀಡಲು 3-7 ಕೆಲಸದ ದಿನಗಳು, ತೆರಿಗೆ ತೀರುವಳಿ ಪ್ರಮಾಣ ಪತ್ರ 15 ಕೆಲಸದ ದಿನಗಳು, ಹಿರಿಯ ನಾಗರಿಕರ ಗುರುತಿನ ಚೀಟಿ 17 ಕೆಲಸದ ದಿನಗಳು, ಜಾತಿ ಪ್ರಮಾಣ ಪತ್ರ 21 ಕೆಲಸದ ದಿನಗಳು, ವಾಹನ ಚಾಲನಾ ಪರವಾನಗಿ 30 ಕೆಲಸದ ದಿನಗಳು ಎಂದು ತನ್ನ ಜಾಲತಾಣದಲ್ಲಿ ಘೋಷಿಸಿಕೊಂಡಿದೆ. ಕಾಂಚಾಣ ನೀಡದೆ ಕಾರ್ಯ ಸಿದ್ಧಿಯಾಗದು. ಪುತ್ರಿಯ ಪಾಸ್‌ಪೋರ್ಟ್‌ ವೆರಿಫಿಕೇಶನ್‌ ಕೆಲಸವಿಟ್ಟುಕೊಂಡು ಪೋಲೀಸ್‌ ಸ್ಟೇಷನ್ನಿಗೆ ಹೋಗಿದ್ದ ಮಿತ್ರರೋರ್ವರ ಕೆಲಸ ಮಾಡಿಕೊಡಲು ಕಾನ್‌ಸ್ಟೆಬಲ್‌ ಓರ್ವರು ನಿರ್ಲಜ್ಜರಾಗಿ ಲಂಚದ ಬೇಡಿಕೆ ಇಟ್ಟಿದ್ದು ಕಂಡು ದಂಗಾಗಿದ್ದರು. “ಮಾಮೂಲಿ’ ಕೊಡದೆ ಸರಕಾರದ ಭಾಗ್ಯಗಳ ಬಾಗಿಲು ಸಾಮಾನ್ಯ ಜನರಿಗೆ ತೆರೆಯುವುದಿಲ್ಲ. ಕೊಟ್ಟದ್ದನ್ನು ತೆಪ್ಪಗೆ ಜೇಬಿಗಿಳಿಸಿ ಬೆಲ್ಲದಂತಹ ಸವಿ ಮಾತನಾಡಿ ಕಳುಹಿಸುವ ನೌಕರರನ್ನು ಉತ್ತಮ ರೆಂದು, ಕೊಟ್ಟದ್ದು ಕಡಿಮೆಯಾಯಿತೆಂದು ಸತಾಯಿಸುವವರನ್ನು ಅಧಮರೆಂದು, ಕಾಡಿ-ಬೇಡಿ ಪಡಕೊಂಡ ನಂತರವೂ ಕೆಲಸ ಮಾಡಿಕೊಡದವನನ್ನು ದ್ರೋಹಿ ಎಂದು ಮನದಲ್ಲೇ ಹಳಿದು ಬಗ್ಗಿ ನಡೆಯುವ ಮನಸ್ಥಿತಿಗೆ ನಾವು ಒಗ್ಗಿಕೊಂಡಿದ್ದೇವೆ. 

ಧಾವಂತ ಬೇಡ 
ಕೇವಲ ಸರಕಾರಿ ವ್ಯವಸ್ಥೆಯೇ ಎಲ್ಲಾ ಸಮಸ್ಯೆಗಳಿಗೆ ಕಾರಣ ಎಂದು ದೂರುವಂತಿಲ್ಲ. ಕೊಂಚ ಮಟ್ಟಿಗೆ ಸಾಮಾನ್ಯ ಜನತೆಯ ಮಾನಸಿ ಕತೆಯೇ ಕಚೇರಿಗಳಲ್ಲಿನ ವಿಳಂಬಗತಿ ಮತ್ತು ಭ್ರಷ್ಟಾಚಾರಕ್ಕೆ ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ತಮ್ಮ ಕೆಲಸ ಶೀಘ್ರ ಆಗಬೇಕು ಎನ್ನುವ ನಮ್ಮ ಧಾವಂತವೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಿತ್ರರೊಬ್ಬರು ಭೂ ಪರಿವರ್ತನೆಗೆಂದು ಅಲಿನೇಶನ್‌ ನಕ್ಷೆಗಾಗಿ ತಾಲೂಕು ಕಚೇರಿಯಲ್ಲಿ ಎರಡು ಸಾವಿರ ರೂ. ಸರಕಾರಿ ಶುಲ್ಕ ಕಟ್ಟಿ ಬಂದಿದ್ದರು. ಭೂ ಮಾಪನ ವಿಭಾಗದಿಂದ ಸರ್ವೇ ನಡೆಸಲು ಬಂದ ನೌಕರ ಸರ್ವೇ ಕೆಲಸ ಪೂರೈಸಿ ದೇಶಾವರಿ ನಗೆ ಬೀರುತ್ತ ನಿಮ್ಮ ಫೈಲ್‌ ಮೂವ್‌ ಆಗಬೇಕಾದರೆ ಇಷ್ಟು ಕೊಡಬೇಕಾಗುತ್ತದೆ ಎಂದ. ಅಷ್ಟೊಂದು ಏಕೆ ಎಂದಿದ್ದಕ್ಕೆ ನಿಮ್ಮ ಫೈಲ್‌ ಮೂವ್‌ ಮಾಡಿಸಲು ಕಚೇರಿಯಲ್ಲಿ ಎಲ್ಲರಿಗೂ ಮಾಮೂಲಿ ಕೊಡಬೇಕು ಇಲ್ಲಾ ಅಂದ್ರೆ ಅದು ಅಲ್ಲೇ ಒಂದೆಡೆ ಬಿದ್ದಿರುತ್ತದೆ ಎಂದ. ಸರ್ವೆ ಮಾಡಿಸಲು ನಾನು ಸರಕಾರಕ್ಕೆ ಎರಡು ಸಾವಿರ ಕಟ್ಟಿದ್ದೇನಲ್ಲಾ, ನೀವು ನಿಮ್ಮ ಕೆಲಸ ಮಾಡಿ, ಫೈಲ್‌ ಮೂವ್‌ ನಾನು ಮಾಡಿಸುತ್ತೇನೆ, ಅದರ ಚಿಂತೆ ನನಗೆ ಬಿಡಿ ಎಂದಾಗ ಆತ ಪೆಚ್ಚು ಮೋರೆ ಹಾಕಿ ನಡೆದ. ಒಂದೆರಡು ಬಾರಿ ಅವರಿಗೆ ತನ್ನ ಕೆಲಸ ಎಲ್ಲಿಗೆ ಬಂತು ಎಂದು ಕಚೇರಿಗೆ ಅಲೆದು ವಿಚಾರಿಸಬೇಕಾಯಿತು. ತಾಳಿದವನು ಬಾಳಿಯಾನು ಎನ್ನುವಂತೆ ಎಲ್ಲಿಯೂ ಯಾರಿಗೂ ಏನೂ ಕೊಡದೇ ನಕ್ಷೆ ಸಿದ್ದವಾಯಿತು ಎನ್ನುತ್ತಾರೆ ಅವರು. ಈಗ ಹೇಳಿ ಎಲ್ಲಿ ನಮ್ಮ ಕೆಲಸ ತಡವಾಗುತ್ತದೋ ಎಂದು ಗಡಿಬಿಡಿ ಮಾಡಿ ಕೇಳಿದಷ್ಟು ಬಿಸಾಕಿ ಕೆಲಸ ಮಾಡಿಕೊಳ್ಳುವ ನಮ್ಮ ಪ್ರವೃತ್ತಿಯೇ ನೌಕರರಲ್ಲಿ ಲಂಚಕ್ಕಾಗಿ ಅಂಗಲಾಚುವ ಕೆಟ್ಟ ಚಾಳಿ ಬೆಳೆಯಲು ಕಾರಣವಾಗುತ್ತಿದೆಯೆಂದು ಎನ್ನಿಸುತ್ತಿಲ್ಲವೇ? 

ಸರಕಾರಿ ಕಚೇರಿಗಳಲ್ಲಿ ಆಯಕಟ್ಟಿನ ವಿಭಾಗದಲ್ಲಿ ಕುಳಿತ ನೌಕರರು ಗುರುತು- ಪರಿಚಯದವರನ್ನು ಕಂಡರೂ ತಮ್ಮ ಚಾಳಿಯನ್ನು ಬಿಡುವುದಿಲ್ಲ ಎನ್ನುವ ತಮ್ಮ ಅನುಭವವನ್ನು ಸಜ್ಜನರೋರ್ವರು ಇತ್ತೀಚೆಗೆ ಹಂಚಿಕೊಂಡರು. ಶಿಕ್ಷಣ ಇಲಾಖೆಯಲ್ಲಿ ಉನ್ನತ ಹು¨ªೆಯಿಂದ ಕೆಲ ದಿನಗಳ ಹಿಂದಷ್ಟೇ ನಿವೃತ್ತರಾಗಿದ್ದ ಆ ಸಜ್ಜನ ಮಹಾಶಯರು ತಹಸೀಲ್ದಾರರೊಂದಿಗಿನ ತನ್ನ ಹಳೆಯ ಪರಿಚಯದ ಸಲುಗೆಯಿಂದ ತುಂಬು ಆತ್ಮವಿಶ್ವಾಸದಿಂದ ಕಾರ್ಯ ನಿಮಿತ್ತ ಕಾಣಲು ಹೋಗಿದ್ದರು. ತಹಸೀಲ್ದಾರರೋ ಇವರನ್ನು ತಾವು ಇದುವರೆಗೆ ಕಂಡೇ ಇಲ್ಲ ಎನ್ನುವಂತೆ ಕಟುವಾಗಿ ವ್ಯವಹರಿಸಿ ಸಾಗ ಹಾಕಿದರು! ಕಂದಾಯ ಇಲಾಖೆಯ ಕಚೇರಿಗಳ ಒಂದು ಮೇಜಿನಿಂದ ಇನ್ನೊಂದು ಮೇಜಿಗೆ ಫೈಲ್‌ ಮೂವ್‌ ಆಗಬೇಕಾದರೆ ಸಾಕಷ್ಟು ಸಮಯ ಬೇಕಾಗುತ್ತದೆ ! ಭೂ ಪರಿವರ್ತನೆಯಂತಹ ಕ್ಲಿಷ್ಟ ಪ್ರಕ್ರಿಯೆಯ ಕೆಲಸವನ್ನು ಸ್ನೇಹಿತರೋರ್ವರ ತಾಂತ್ರಿಕ ಸಲಹೆ, ಮಾರ್ಗದರ್ಶನದೊಂದಿಗೆ ಮಧ್ಯವರ್ತಿಗಳ ಸಹಾಯ ಪಡೆಯದೇ ಮಾಡಿಕೊಂಡ ಅನುಭವದ ಆಧಾರದ ಮೇಲೆ ಬೆಂಬಿಡದ ತ್ರಿವಿಕ್ರಮನಂತೆ ಹಿಂಬಾಲಿಸಿದರೆ ಕಾರ್ಯ ಅಸಾಧ್ಯವೇನಲ್ಲ ಎನ್ನಬಲ್ಲೆ. 

ಬದಲಾಗಲಿ ಮಾನಸಿಕತೆ
ಭೂ ಪರಿವರ್ತನೆಯಂತಹ ಕೆಲಸಗಳಿಗೆ ಪಹಣಿ ಪತ್ರಿಕೆ (RTC)  ಯಲ್ಲೇನಾದರೂ ನ್ಯೂನತೆ ಇದ್ದರೆ ಸರಿಪಡಿಸಿಕೊಳ್ಳುವುದು, ನಕ್ಷೆ , ಎಮ್‌ ಆರ್‌ ಕಾಪಿ, ಎನುಬರೆನ್ಸ್‌ ಸರ್ಟಿಫಿಕೆಟ್‌, ಆಕಾರ್‌ ಬಂದ್‌ ಮೊದಲಾದ ಸಂಬಂಧ ಪಟ್ಟ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಬೇಕಾಗುತ್ತದೆ. ಇಷ್ಟೊಂದು ದಾಖಲೆಗಳನ್ನು ಕಲೆ ಹಾಕುವಲ್ಲಿ ಸಮಯ ಬೇಕಾಗುತ್ತದೆ ನಿಜ. ಈ ಜಂಜಾಟದ ಕೆಲಸ ತಮ್ಮಿಂದಾಗದು, ಹಣ ಬಿಸಾಕಿದರೆ ಎಲ್ಲಾ ಆಗುತ್ತದೆ ಎನ್ನುವ ಭಾವನೆ ಜನಸಾಮಾನ್ಯರಲ್ಲಿ ವ್ಯಾಪಕವಾಗಿದೆ. ಈ ಜಂಜಾಟಗಳನ್ನು ಹೀರಿಕೊಂಡು ತಾವೂ ತಿಂದು, ಕಚೇರಿಗಳ ನೌಕರರಿಗೂ ಲಂಚ ತಿನ್ನಿಸಿ ಕೆಲಸ ಮಾಡಿಕೊಡುವ ಒಂದು ವರ್ಗ ಎಲ್ಲೆಡೆ ಹುಟ್ಟಿಕೊಂಡಿದೆ. ಡ್ರೈವಿಂಗ್‌ ಲೈಸೆನ್ಸ್‌ ಬೇಕೆ, ಜಾತಿ ಸರ್ಟಿಫಿಕೆಟ್‌ ಬೇಕೆ, ಲ್ಯಾಂಡ್‌ ಕನ್ವರ್ಷನ್‌ ಮಾಡಿಕೊಡಬೇಕೆ? ಹಣ ಬಿಸಾಕಿ ತಲೆ ಬಿಸಿ ಇಲ್ಲ ಎನ್ನುವ ನಮ್ಮ ಧೋರಣೆ ಬದಲಾಗಬೇಕಾಗಿದೆ. 

 ಕಚೇರಿಗಳಲ್ಲಿ ಕೆಲಸ ಯಾಕೆ ಆಗುತ್ತಿಲ್ಲ ಎನ್ನುವುದರ ಕುರಿತು ನಾವು ಅರಿಯುವ ಪ್ರಯತ್ನ ಮಾಡಬೇಕು. ನಿರ್ದಿಷ್ಟ ಅವಧಿಯಲ್ಲಿ ಕೆಲಸವಾಗದಿದ್ದಾಗ ಸಂಬಂಧಿತ ಮೇಲಧಿಕಾರಿಗಳ ಅವಗಾಹನೆಗೆ ತರುವ ಸಣ್ಣ ಯತ್ನವನ್ನಾದಾರೂ ಮಾಡಬಹುದಲ್ಲ? ವಿಳಂಬವನ್ನು ವಿರೋಧಿಸುವ, ಕಿರುಕುಳವನ್ನು ಪ್ರತಿಭಟಿಸುವ ಸಾಹಸ ಮಾಡೋಣ. ಲಂಚ ಕೊಡಲಿಲ್ಲ ಎಂಬ ನೆಲೆಯಲ್ಲಿ ಏಳೆಂಟು ತಿಂಗಳಿಂದ ಮಾಜಿ ಸೈನಿಕರೋರ್ವರ ನೌಕರಿ ವೆರಿಫಿಕೇಶನ್‌ ಗ್ರಾಮ ಲೆಕ್ಕಿಗರ ಕಚೇರಿಯಲ್ಲಿ ಮಿಸುಕಾಡದೆ ಕುಳಿತಾಗ ಮನನೊಂದ ಅವರು ಜಿಲ್ಲಾಧಿಕಾರಿಗಳಿಗೆ ಒಂದು ಇ ಮೇಲ್‌ ಸಂದೇಶ ಕಳುಹಿಸಿದರು. ಜಿಲ್ಲಾಧಿಕಾರಿಯವರಿಂದ ಎಚ್ಚರಿಕೆ ಪಡೆದ ಗ್ರಾಮ ಲೆಕ್ಕಿಗ ಆ ಕ್ಷಣ ಫೈಲ್‌ ವಿಲೇವಾರಿ ಮಾಡಿದರು! ಪ್ರಧಾನ ಮಂತ್ರಿ ನರೇಂದ್ರ ಮೋದಿ “ಈಸ್‌ ಆಫ್ ಡೂಯಿಂಗ್‌ ಬಿಜಿನೆಸ್‌’ ನಲ್ಲಿ ಭಾರತದ ಸ್ಥಾನ ಇನ್ನಷ್ಟು ಮೇಲೆ ಬರಬೇಕು ಎಂದು ಅಪೇಕ್ಷಿಸುತ್ತಿದ್ದಾರೆ. ನಮ್ಮ ಕಚೇರಿಗಳಲ್ಲಿನ ಕಾರ್ಯ ಸಂಸ್ಕೃತಿಯನ್ನು ಬದಲಿಸುವ ಚಿಕ್ಕ ಪ್ರಯತ್ನವನ್ನು ಎಲ್ಲರೂ ಮಾಡುವಂತಾಗಲಿ. ಹಣ ಎಸೆದು ಕೆಲಸ ಮಾಡಿಸಿಕೊಳ್ಳುವ ನಮ್ಮ ಪವೃತ್ತಿ ಬದಲಾಗಲಿ. ನಮ್ಮ ಕಚೇರಿಗಳ ಕಾರ್ಯದಕ್ಷತೆ ಬದಲಾದರೆ ದೇಶವೂ ಬದಲಾಗುವುದರಲ್ಲಿ ಸಂದೇಹವಿಲ್ಲ. 

ಬೈಂದೂರು ಚಂದ್ರಶೇಖರ ನಾವಡ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ