ಚುನಾವಣೆ ಹೊಸ್ತಿಲಲ್ಲಿ ಅಫ್ಘಾನಿಸ್ಥಾನ್‌

ಕಣದಲ್ಲೀಗ ಟ್ರಂಪ್, ಪುಟಿನ್‌, ತಾಲಿಬಾನ್‌!

Team Udayavani, Sep 19, 2019, 5:00 AM IST

ತಾಲಿಬಾನ್‌ನೊಂದಿಗಿನ ಮಾತುಕತೆಯನ್ನು ಅಮೆರಿಕ ತುಂಡರಿಸುತ್ತಿದ್ದಂತೆಯೇ ಅಫ್ಘಾನಿಸ್ತಾನ ಅಗ್ನಿ ಕುಂಡವಾಗಿ ಬದಲಾಗಿದೆ. ಅಫ್ಘಾನಿಸ್ತಾನದಲ್ಲಿ ಸೆ. 28ಕ್ಕೆ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ತಾಲಿಬಾನಿಗಳು ರಕ್ತಪಾತ ನಡೆಸಲಾರಂಭಿಸಿದ್ದಾರೆ. ಅದರಲ್ಲೂ 2ನೇ ಬಾರಿ ಅಧಿಕಾರಕ್ಕೇರಲು ಉತ್ಸುಕರಾಗಿರುವ ಅಫ್ಘಾನ್‌ ಅಧ್ಯಕ್ಷ
ಅಶ್ರಫ್ ಘನಿ ಮೇಲಂತೂ ಉಗ್ರರು ವ್ಯಗ್ರರಾಗಿದ್ದಾರೆ. ಈ ಕಾರಣಕ್ಕಾಗಿಯೇ ಮಂಗಳವಾರ ಅಶ್ರಫ್ ಘನಿಯವರ ಚುನಾವಣಾ ರ್ಯಾಲಿಯ ಮೇಲೆ ತಾಲಿಬಾನಿಗಳಿಂದ ಆತ್ಮಾಹುತಿ ದಾಳಿ ನಡೆದಿದೆ. ಈ ಘಟನೆಯಲ್ಲಿ ಘನಿ ಪಾರಾಗಿದ್ದಾರಾದರೂ, 26 ಜನ ಮೃತಪಟ್ಟಿದ್ದಾರೆ.

ಮತ್ತೂಂದು ಪ್ರತ್ಯೇಕ ದಾಳಿಯಲ್ಲಿ 28 ಜನ ಸಾವಿಗೀಡಾಗಿದ್ದಾರೆ. ಘನಿಯಿಂದಾಗಿಯೇ ಅಮೆರಿಕ ತನ್ನೊಂದಿಗಿನ ಮಾತುಕತೆ ತುಂಡರಿಸಿದೆ ಎಂಬ ಸಿಟ್ಟು ತಾಲಿಬಾನ್‌ಗಿದೆ. ತಾಲಿಬಾನ್‌- ಅಮೆರಿಕ ನಡುವಿನ ಮಾತುಕತೆ ಮುರಿದುಬಿದ್ದದ್ದು ಭಾರತ ಮತ್ತು ಸಾಮಾನ್ಯ ಅಫ್ಘಾನ್ನರ ಪಾಲಿಗಂತೂ ಸಿಹಿ ಸುದ್ದಿ. ಆದರೆ 18 ವರ್ಷಗಳಲ್ಲೇ ತಾಲಿಬಾನ್‌ ಬಲಿಷ್ಠವಾಗಿ ಬೆಳೆದು ನಿಂತಿರುವುದರಿಂದ, ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಭಾರತದ ಪಾಲಿಗೂ ಮುಖ್ಯವಾಗಿರುವುದರಿಂದ… ಅಲ್ಲೇನಾಗುವುದೋ ಎಂಬ ಆತಂಕವಂತೂ ನಮ್ಮ ದೇಶಕ್ಕೆ ಇದ್ದೇ ಇದೆ…

ಮಾತುಕತೆಯ ತಿರುಳೇನಿತ್ತು?
ಕಳೆದ ಅಕ್ಟೋಬರ್‌ ತಿಂಗಳಿಂದಲೂ ಅಮೆರಿಕ ಮತ್ತು ತಾಲಿಬಾನ್‌ನ ನಡುವೆ ಒಟ್ಟು 9 ಸುತ್ತಿನ ಮಾತುಕತೆಗಳಾಗಿವೆ. ಕೆಲವು ಷರತ್ತುಗಳನ್ನು ಎರಡೂ ಕಡೆಯಿಂದಲೂ ಇಡಲಾಗಿತ್ತು. ಅಮೆರಿಕವು ಅಫ್ಘಾನಿಸ್ತಾನದಿಂದ ತನ್ನ ಸೇನೆ ಮತ್ತು ನ್ಯಾಟೋ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು ಎನ್ನುವುದೇ ತಾಲಿಬಾನ್‌ನ ಪ್ರಮುಖ ಬೇಡಿಕೆಯಾಗಿದ್ದರೆ, ಅತ್ತ ಅಮೆರಿಕ, “”ತಾಲಿಬಾನ್‌ ಸಂಘಟನೆ ಬೇರೆ ದೇಶಗಳ ಉಗ್ರರಿಗೆ ಆಫ್ಘಾನಿಸ್ತಾನದಲ್ಲಿ ನೆಲೆ ಕಲ್ಪಿಸಬಾರದು, ಅಫ್ಘಾನಿಸ್ತಾನವನ್ನು ಲಾಂಚ್‌ಪ್ಯಾಡ್‌ ಮಾಡಿಕೊಂಡು ಅನ್ಯ ದೇಶಗಳ ಮೇಲೆ ಮತ್ತು ತನ್ನ ನಾಗರಿಕರ ಮೇಲೆ ಉಗ್ರವಾದ ನಡೆಸಬಾರದು” ಎಂದು ಹೇಳಿತ್ತು. ಎಂಟು ಸುತ್ತಿನವರೆಗೂ ತಾಲಿಬಾನ್‌ ಅಮೆರಿಕದ ಮಾತಿಗೆ ತಲೆದೂಗಿತ್ತಾದರೂ, ಕೊನೆಯ ಸುತ್ತಿನ ಮಾತಿಗೂ ಮುನ್ನ ತಾಲಿಬಾನ್‌ನ ಉಗ್ರನೊಬ್ಬ ಆತ್ಮಾಹುತಿ ದಾಳಿಯಲ್ಲಿ ಅಮೆರಿಕನ್‌ ಸೈನಿಕನನ್ನು ಕೊಂದ ಕಾರಣ, ಟ್ರಂಪ್‌ ಸರ್ಕಾರ ಮಾತುಕತೆಯನ್ನು ರದ್ದುಗೊಳಿಸಿ ಬಿಟ್ಟಿತು. ಎಲ್ಲಿಯವರೆಗೂ ಅಮೆರಿಕ ಅಫ್ಘಾನ್‌ ನೆಲದಲ್ಲಿ ಇರುತ್ತದೋ ಅಲ್ಲಿಯವರೆಗೂ ಅಶ್ರಫ್ ಘನಿ ಸರ್ಕಾರ ನಿರ್ವಿಘ್ನವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ತನ್ನನ್ನು ಹತ್ತಿಕ್ಕುತ್ತದೆ ಎನ್ನುವುದು ತಾಲಿಬಾನ್‌ಗೆ ತಿಳಿದಿದೆ. ಈ ಕಾರಣಕ್ಕಾಗಿಯೇ ಅದು ಮಾತು ಕತೆ ಮುರಿದ ನಂತರ ದಿಕ್ಕು ತೋಚದೆ ವ್ಯಗ್ರವಾಗಿದೆ. ಅದರ ಈ ಸಿಟ್ಟು ಅಶ್ರಫ್ ಘನಿಯವರ ಮೇಲೆ ಹೊರಳಿರುವುದು ನಿಜಕ್ಕೂ ಆತಂಕದ ವಿಷಯ.

ಮೊದಲಿಗಿಂತ ಬಲಿಷ್ಠವಾಗಿದೆ ತಾಲಿಬಾನ್‌
ಸ್ಪೆಷಲ್‌ ಇನ್ಸ್‌ಪೆಕ್ಟರ್‌ ಜನರಲ್‌ ಫಾರ್‌ ಅಫ್ಘಾನಿಸ್ತಾನ್‌ ರೀಕನ್‌ಸ್ಟ್ರಕ್ಷನ್‌ ( SIGAR) ಪ್ರಕಾರ, ಈ ವರ್ಷದ ಜನವರಿ 31ರ ವೇಳೆಗೆ ಆಫ್ಘಾನಿಸ್ತಾನದಲ್ಲಿ 229 ಜಿಲ್ಲೆಗಳು( 56.3 ಪ್ರತಿ ಶತ) ಅಶ್ರಫ್ ಘನಿ ಸರ್ಕಾರದ ಹಿಡಿತದಲ್ಲಿದ್ದರೆ, 59 ಜಿಲ್ಲೆಗಳು ತಾಲಿಬಾನ್‌ನ ಹಿಡಿತದಲ್ಲಿವೆ. ಉಳಿದ 119 ಜಿಲ್ಲೆಗಳಲ್ಲಿ ಅಫ್ಗನ್‌ ಸರ್ಕಾರ ಮತ್ತು ತಾಲಿಬಾನ್‌ ನಡುವೆ ಜಿದ್ದಾ ಜಿದ್ದಿ ನಡೆದೇ ಇದೆ. ಅಚ್ಚರಿಯ ವಿಷಯವೆಂದರೆ, 2001ರ ನಂತರದ ಕೆಲ ವರ್ಷಗಳಲ್ಲಿ ಅಜಮಾಸು ಅಸ್ತಿತ್ವವನ್ನೇ ಕಳೆದುಕೊಂಡಿದ್ದ ತಾಲಿಬಾನ್‌, ಈಗ ಬಲಿಷ್ಠವಾಗಿ ಬೆಳೆದು ನಿಂತಿದೆ. ಅಮೆರಿಕದ ಉಪಸ್ಥಿತಿಯ ಹೊರತಾಗಿಯೂ ಅದು ಹೇಗೆ ಮತ್ತೆ ಗಟ್ಟಿಯಾಯಿತು ಎನ್ನುವ ಪ್ರಶ್ನೆ ಎದುರಾಗುತ್ತದೆ.. “”ರಷ್ಯಾದ ಬೆಂಬಲದಿಂದ ತಾಲಿಬಾನ್‌ ಮತ್ತೆ ಬಲಿಷ್ಠವಾಗಿದೆ, ಪುಟಿನ್‌ ಸರ್ಕಾರವೇ ತಾಲಿಬಾನಿಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸುತ್ತಿದೆ” ಎನ್ನುವುದು ಅಮೆರಿಕನ್‌ ರಕ್ಷಣಾ ಪರಿಣತರವಾದ.  ಈ ವಾದವನ್ನು ಸುಳ್ಳೆಂದು ತೆಗೆದುಹಾಕುವುದಕ್ಕೂ ಆಗುವುದಿಲ್ಲ.

ಅಫ್ಘಾನಿಸ್ತಾನದಲ್ಲಿ ಅಮೆರಿಕ…
2001ರ ಸೆಪ್ಟೆಂಬರ್‌ 11ರ ದಾಳಿಯ ನಂತರ, ಅಮೆರಿಕ ತನ್ನ ಮಿತ್ರ ರಾಷ್ಟ್ರಗಳ ಸಹಾಯದಿಂದ ಅಫ್ಘಾನಿಸ್ತಾನಕ್ಕೆ ಕಾಲಿಟ್ಟಿತು. ಅಲ್‌ಖೈದಾವನ್ನು ಬಗ್ಗು ಬಡಿಯುವುದು ಮತ್ತು ಅದಕ್ಕೆ ಅಫ್ಘಾನಿಸ್ತಾನದಲ್ಲಿ ಭದ್ರ ನೆಲೆ ಒದಗಿಸುತ್ತಿದ್ದ ತಾಲಿಬಾನ್‌ ಅನ್ನು ನಿರ್ನಾಮ ಮಾಡುವ ಉದ್ದೇಶ ತನಗಿದೆಯೆಂದು ಅಮೆರಿಕ ಹೇಳುತ್ತದೆ. ಸದ್ಯಕ್ಕೆ ಅಫ್ಘಾನಿಸ್ತಾನದಲ್ಲಿ 14,000ಕ್ಕೂ ಹೆಚ್ಚು ಅಮೆರಿಕನ್‌ ಸೈನಿಕರು ಮತ್ತು 39 ನ್ಯಾಟೋ ಮಿತ್ರ ರಾಷ್ಟ್ರಗಳ 17,000 ಸೈನಿಕರು ಇದ್ದಾರೆ.

ಅಮೆರಿಕ ಅಫ್ಘಾನಿಸ್ತಾನ ತೊರೆದರೆ ಏನಾಗಬಹುದು?
ವಿಶ್ವಸಂಸ್ಥೆಯ ಪ್ರಕಾರ 2018ರೊಂದರಲ್ಲೇ 3,804 ನಾಗರಿಕರು( 927 ಮಕ್ಕಳನ್ನೊಳಗೊಂಡು) ಅಫ್ಘಾನಿಸ್ತಾನದಲ್ಲಿ ಮೃತಪಟ್ಟಿದ್ದಾರೆ. ಇವರೆಲ್ಲ ತಾಲಿಬಾನಿಗಳಿಂದಷ್ಟೇ ಹತರಾದವರಲ್ಲ. ಅಮೆರಿಕನ್‌ ಮತ್ತು ಅಫ್ಘಾನಿಸ್ತಾನಿ ಸೇನೆಯು ನಡೆಸುವ ಪ್ರತಿದಾಳಿಗ ವೇಳೆಯೂ ಸಾವಿರಾರು ನಾಗರಿಕರು ಮೃತ ಪಡುತ್ತಿದ್ದಾರೆ. ಒಟ್ಟಲ್ಲಿ ಸಾಮಾನ್ಯ ಅಫ್ಘನ್‌ ನಾಗರಿಕರಿಗೆ ಶಾಂತಿ ಎನ್ನುವುದು ಮರೀಚಿಕೆಯಾಗಿಬಿಟ್ಟಿದೆ. ಹಾಗೆಂದು ಅಮೆರಿಕ ಅಫ್ಘಾನಿಸ್ತಾನದಿಂದ ಹೊರಟು ಹೋದರೆ ಸಮಸ್ಯೆಯೇನೂ ಕಡಿಮೆಯಾಗದು. ಆಗ ತಾಲಿಬಾನ್‌ ಇಡೀ ಅಫ್ಘಾನಿಸ್ತಾನವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಬಹುದು. ಅದೇನಾದರೂ ಸಾಧ್ಯವಾದರೆ, ಭಾರತಕ್ಕೂ ಈ ಉಗ್ರರಿಂದ ಅಪಾಯ ತಪ್ಪಿದ್ದಲ್ಲ. ಅದಷ್ಟೇ ಅಲ್ಲದೇ ಭಾರತವೂ ಹಲವು ವರ್ಷಗಳಿಂದ ಆಫ್ಘಾನಿಸ್ತಾನದ ಮೂಲ ಸೌಕರ್ಯಾಭಿವೃದ್ಧಿಯಲ್ಲಿ ಬೃಹತ್‌ ಹೂಡಿಕೆಗಳನ್ನು ಮಾಡುತ್ತಿದ್ದು, ಆ ಯೋಜನೆಗಳ ಸ್ಥಿತಿ ಅಡ ಕತ್ತರಿಯಲ್ಲಿ ಸಿಲುಕುತ್ತದೆ. ಇರಾಕ್‌-ಸಿರಿಯಾ ಸೇರಿದಂತೆ ಮಧ್ಯ ಪ್ರಾಚ್ಯದಲ್ಲಿ ನೆಲೆ ಕಳೆದುಕೊಂಡಿರುವ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು (ಐಸಿಸ್‌) ಈಗಾಗಲೇ ಆಫ್ಘಾನಿಸ್ತಾನದಲ್ಲಿ ನೆಲೆ ಕಂಡುಕೊಳ್ಳಲಾರಂಭಿಸಿದ್ದು, ಅಮೆರಿಕದ ಅನುಪಸ್ಥಿತಿಯು ಈ ಸಂಘಟನೆಯ ವಿಸ್ತರಣೆಗೆ ಅವಕಾಶ ಒದಗಿಸುತ್ತದೆ. ಹೀಗಾಗುವುದು ಭಾರತಕ್ಕೂ ಅಪಾಯಕಾರಿ. ಅಮೆರಿಕ ಆಫ್ಘಾನಿಸ್ತಾನದಿಂದ ತೊಲಗಲಿ, ಅಮೆರಿಕನ್‌ ವಿರೋಧಿ ಸರ್ಕಾರ ಬರಲಿ ಎಂದೇ ಪಾಕಿಸ್ತಾನ ಮತ್ತು ಚೀನಾ ಕಾದು ಕುಳಿತಿವೆ. ಹಾಗೇನಾದರೂ ಆದರೆ, ಭಾರತವು ಪ್ರಮುಖ ಮಿತ್ರ ರಾಷ್ಟ್ರವೊಂದನ್ನು ಕಳೆದುಕೊಂಡಂತಾಗುತ್ತದೆ. ಈ ಎಲ್ಲಾ ಕಾರಣಗಳಿಂದಲೇ ಅಮೆರಿಕವು ಆಫ್ಘಾನಿಸ್ತಾನದಲ್ಲಿ ಉಳಿಯುವುದು ಮತ್ತು ಅಶ್ರಫ್ ಘನಿ ಸರ್ಕಾರ ಮತ್ತೂಮ್ಮೆ ಅಧಿಕಾರಕ್ಕೇರುವುದು ಭಾರತಕ್ಕಂತೂ ಬಹಳ ಮುಖ್ಯ.

ರಷ್ಯಾಕ್ಕೆ ತಾಲಿಬಾನ್‌ ನಿಯೋಗ!
ಅಮೆರಿಕವು ತನ್ನೊಂದಿಗೆ ಮಾತುಕತೆ ತುಂಡರಿಸಿ ಮರು ದಿನವೇ, ತಾಲಿಬಾನ್‌ ರಷ್ಯಾದತ್ತ ಮುಖ ಮಾಡಿತು! ತಾಲಿಬಾನ್‌ನ ನಿಯೋಗವೊಂದು ಮಾಸ್ಕೋದಲ್ಲಿ ರಷ್ಯನ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಬಂದಿದೆ. ಇದು ತಾಲಿಬಾನ್‌ನ ಮೊದಲ ಅಂತಾರಾಷ್ಟ್ರೀಯ ನಿಯೋಗ ! ಈ ಮಾತುಕತೆಯನ್ನು ರಷ್ಯಾ ಕೂಡ ಖಚಿತಪಡಿಸಿದೆ. ರಷ್ಯಾದ ವಿಶೇಷಾಧಿಕಾರಿ ಜಮೀರ್‌ ಕುಬುಲೋವ್‌, “ತಾಲಿಬಾನ್‌-ಅಮೆರಿಕ ನಡುವಿನ ಶಾಂತಿ ಮಾತುಕತೆ ರದ್ದಾಗಿದೆಯಷ್ಟೇ ಹೊರತು, ಸತ್ತು ಹೋಗಿಲ್ಲ’ ಎಂದು ಹೇಳಿದ್ದಾರೆ. ತಾಲಿಬಾನ್‌ನೊಂದಿಗೆ ಮಾತುಕತೆ ಮುಂದುವರಿಸಲು ತಾನು ಅಮೆರಿಕದೊಂದಿಗೆ ಮಾತನಾಡುವುದಾಗಿಯೂ ರಷ್ಯಾ ಹೇಳಿದೆ! ಇದನ್ನೆಲ್ಲ ನೋಡಿದಾಗ, ತಾಲಿಬಾನ್‌ ಮತ್ತೆ ಬೆಳೆದು ನಿಲ್ಲುವುದಕ್ಕೆ ರಷ್ಯಾ ಕಾರಣ ಎನ್ನುವ ಅಮೆರಿಕದ ಆರೋಪದಲ್ಲಿ ವಾಸ್ತವಾಂಶ ಇರುವುದು ಅರಿವಾಗುತ್ತದೆ. ಹಾಗೆ ನೋಡಿದರೆ , ದಶಕಗಳಿಂದ ಈ ರಾಷ್ಟ್ರದಲ್ಲಿ ಅಮೆರಿಕಕ್ಕಿಂತಲೂ ರಷ್ಯಾದ ಪ್ರಾಬಲ್ಯವೇ ಅಧಿಕವಿತ್ತು. ಆದರೆ ಯಾವಾಗ ಅಮೆರಿಕವು ಆಫ್ಘಾನಿಸ್ತಾನಕ್ಕೆ ಕಾಲಿಟ್ಟಿತೋ, ಆಗಿನಿಂದ ಆ ರಾಷ್ಟ್ರದಲ್ಲಿ ರಷ್ಯಾದ
ಆಟ ನಡೆಯುತ್ತಿಲ್ಲ.

ಅಶ್ರಫ್ ಘನಿ ವರ್ಸಸ್‌ ಪುಟಿನ್‌
ಆಫ್ಘಾನಿಸ್ತಾನದಲ್ಲಿ ರಷ್ಯನ್‌ ಪ್ರಭಾವ ಕಡಿಮೆಯಾಗುವಲ್ಲಿ ಘನಿ ಪಾತ್ರ ಬಹಳ ಇದೆ. ಈ ಕಾರ ಣಕ್ಕೇ, ಈ ಚುನಾವಣೆಯಲ್ಲಿ ಘನಿ ಸೋತರೆ ರಷ್ಯಾಕ್ಕೆ ಹೆಚ್ಚು ಲಾಭವಾಗಲಿದೆ. ಅದಕ್ಕೇ ಪುಟಿನ್‌ ಸರ್ಕಾರ, ಈ ಚುನಾವಣೆಯಲ್ಲಿ ಘನಿ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿರುವ ಎ.ಅಬ್ದುಲ್ಲಾ ಅವರ ಚುನಾವಣಾ ರ್ಯಾಲಿಗಳಿಗೆ ಫ‌ಂಡಿಂಗ್‌ ಮಾಡುತ್ತಿದೆ ಎನ್ನುವ ಅನುಮಾನವೂ ಇದೆ. ಇನ್ನು, ಕೆಲ ವರ್ಷಗಳಿಂದ ಅಮೆರಿಕದ ಮೇಲೆ ತೀವ್ರವಾಗಿ ಹರಿಹಾಯುತ್ತಿರುವ ಹಮೀದ್‌ ಕಝಾಯಿಯವರ ಬಗ್ಗೆಯೂ ರಷ್ಯಾಕ್ಕೆ (ಪುಟಿನ್‌ಗೆ) ತುಂಬಾ ಸಾಫ್ಟ್ ಕಾರ್ನರ್‌ ಇದೆ.

ರಾಘವೇಂದ್ರ ಆಚಾರ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ