ಅಮೀರ್‌ ಖುಸ್ರೊ ಕವ್ವಾಲಿಯ ಜನಕ

ದಿಲ್‌ವಾಲೋಂಕೀ ದಿಲ್ಲಿ

Team Udayavani, Jul 28, 2019, 5:00 AM IST

ಸೂಫಿಸಂ ಧರ್ಮವೂ ಅಲ್ಲ , ತತ್ವಶಾಸ್ತ್ರವೂ ಅಲ್ಲ. ಅದು ಆಸ್ತಿಕತೆಯೂ ಅಲ್ಲ, ನಾಸ್ತಿಕತೆಯೂ ಅಲ್ಲ, ನೀತಿಬೋಧನೆಯೂ ಅಲ್ಲ. ಸೂಫಿಸಂ ಅನ್ನು ಧರ್ಮವೆಂದು ಕರೆಯುವುದೇ ಆದಲ್ಲಿ ಅದು ಪ್ರೀತಿ ಮತ್ತು ಸಾಮರಸ್ಯದ ಧರ್ಮ”

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಫಿಸಂ ಅಲೆಯನ್ನು ಜನಪ್ರಿಯಗೊಳಿಸಿದ್ದ ಹಜ್ರತ್‌ ಇನಾಯತ್‌ ಖಾನ್‌ ಸೂಫಿಸಂ ಬಗ್ಗೆ ಹೇಳುವುದು ಹೀಗೆ. ಸೂಫಿಸಂಗೂ, ಸಂಗೀತಕ್ಕೂ ಇರುವ ನಂಟು ಎಲ್ಲರಿಗೂ ತಿಳಿದಿರುವಂಥದ್ದೇ. ಆದರೆ ಸೂಫಿಸಂತರು ಸಂಗೀತಕ್ಕಷ್ಟೇ ಸೀಮಿತವಾಗಲಿಲ್ಲ. ಬದಲಾಗಿ ಆಧ್ಯಾತ್ಮ, ಬದುಕು, ಸಹಬಾಳ್ವೆಗಳೆಲ್ಲವೂ ಸೂಫಿಸಂನ ಆತ್ಮಗಳಾದವು. ಇನ್ನು ಮಹಾನ್‌ ಪ್ರತಿಭಾವಂತರನ್ನೊಳಗೊಂಡ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯ ಗರಿಮೆ ಬೇರೆ. ಚಿಶಿ¤ ಸಂಪ್ರದಾಯವನ್ನಷ್ಟೇ ನೋಡಿದರೂ ಖ್ವಾಜಾ ಮೊಯಿನುದ್ದೀನ್‌ ಚಿಶಿ¤, ಹಜ್ರತ್‌ ಕುತುಬುದ್ದೀನ್‌ ಬಖೀ¤ಯಾರ್‌ ಕಾಕಿ, ಬಾಬಾ ಫ‌ರೀದುದ್ದೀನ್‌ ಜಂಗ್‌-ಎ-ಶಕರ್‌ (ಬಾಬಾ ಫ‌ರೀದ್‌) ರಂಥಾ ಮಹಾಮೇಧಾವಿಗಳನ್ನೊಂಡ ಪರಂಪರೆಯು ಬಾಬಾ ಫ‌ರೀದರ ತರುವಾಯ ನಿಜಾಮುದ್ದೀನ್‌ ಔಲಿಯಾರನ್ನು ಜಗತ್ತಿಗಾಗಿ ನೀಡಿದರೆ ಔಲಿಯಾರು ಅಮೀರ್‌ ಖುಸ್ರೋನೆಂಬ ಮಹಾಪ್ರತಿಭಾವಂತನನ್ನು ರೂಪಿಸಿದರು. ದಿಲ್ಲಿಯೆಂಬ ಹೂವಿನಲ್ಲಿ ಸಾಹಿತ್ಯ-ಸಂಗೀತ-ಆಧ್ಯಾತ್ಮಗಳ ಅಪೂರ್ವ ಸಂಗಮದಿಂದ ಹುಟ್ಟಿದ್ದ ಈ ಸುಗಂಧವು ಮುಂದೆ ಜಗತ್ತಿಗೆಲ್ಲ ಹಬ್ಬಿದ್ದು ಈಗ ಇತಿಹಾಸ.

ಖುಸ್ರೊನೆಂಬ ಸವ್ಯಸಾಚಿ
ಅಮೀರ್‌ ಖುಸ್ರೊನನ್ನು ಸವ್ಯಸಾಚಿ ಎಂದು ಕರೆದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಈತನಿಗೆ ಹಲವು ಭಾಷೆಗಳಲ್ಲಿ ಪಾಂಡಿತ್ಯವಿದ್ದರೆ ಇತಿಹಾಸದ ಕಡೆಗೆ ಒಲವಿತ್ತು. ಅಮೀರ್‌ ಖುಸ್ರೋ ಮಹಾಕವಿಯಷ್ಟೇ ಅಲ್ಲ, ಸಂಗೀತಗಾರನೂ ಆಗಿದ್ದ. ಕವ್ವಾಲಿಯಂಥ ಸಂಗೀತ ಪ್ರಕಾರಗಳಲ್ಲಿ ಖುಸ್ರೋನ ದಟ್ಟ ಪ್ರಭಾವವಿದೆ. ಸಾಝಿYರಿ, ಬಖಾರಾಜ್‌, ಉಸಾಕ್‌, ಮುವಾಫಿಖ್‌ ರಾಗಗಳಲ್ಲದೆ ಕೌಲ್‌, ಕಲಾºನಾ, ಖ್ಯಾಲ್‌, ತರಾನಾ, ನû… ಮತ್ತು ಗುಲ್‌ ಸಂಗೀತ ಪ್ರಕಾರಗಳೂ ಗರಿಗಳಂತೆ ಖುಸ್ರೋನ ಸಾಧನೆಯ ಮುಕುಟವನ್ನು ಸೇರಿವೆ. ಕವ್ವಾಲಿ ಪ್ರಕಾರವನ್ನು ಅಭಿವೃದ್ಧಿಪಡಿಸಲೆಂದೇ “ಕವ್ವಾಲ್‌ ಬಚ್ಚಾ’ ಎಂದು ಕರೆಯಲ್ಪಡುತ್ತಿದ್ದ ಹನ್ನೆರಡು ಮಂದಿ ಶಿಷ್ಯರ ತಂಡವನ್ನು ಖುಸ್ರೋ ಕಟ್ಟಿದ್ದನಂತೆ. ಗದ್ಯವನ್ನೂ ಸೇರಿದಂತೆ ಗಝಲ್‌, ರುಬಾಯಿ, ಕತಾ, ತಕೀಬಂಧ, ದೋಹಾಗಳಂಥಾ ಹಲವು ಪದ್ಯಪ್ರಕಾರಗಳಲ್ಲೂ ಈತ ಬರೆದಿದ್ದ. ಇನ್ನು ಮಕ್ಕಳ ಬಗ್ಗೆ ಬಹಳ ಪ್ರೀತಿಯಿದ್ದ ಖುಸ್ರೋ ಮಕ್ಕಳ ಮನರಂಜನೆಗಾಗಿ “ಪಹೇಲಿ’ (ಒಗಟು)ಗಳನ್ನು ರಚಿಸಿದವನೂ ಹೌದು.

“ಕವ್ವಾಲಿಯ ಜನಕ’ನೆಂದು ಖ್ಯಾತಿವೆತ್ತ ಖುಸ್ರೋ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಪರ್ಷಿಯನ್‌ ಮತ್ತು ಅರೇಬಿಕ್‌ ಅಂಶಗಳನ್ನು ಪರಿಚಯಿಸಿದವನು. ತಬಲಾ ಮತ್ತು ಸಿತಾರ್‌ನಂಥ ಸಂಗೀತದ ಉಪಕರಣಗಳನ್ನು ರೂಪಿಸುವಲ್ಲೂ ಖುಸ್ರೊ ನೀಡಿದ ಕೊಡುಗೆಗಳನ್ನು ಇತಿಹಾಸವು ಸ್ಮರಿಸುತ್ತದೆ. “ಉರ್ದು ಭಾಷೆಯ ಪಿತಾಮಹ’ನೆಂಬ ಬಿರುದನ್ನು ಹೊಂದಿರುವ ಅಮೀರ್‌ ಖುಸ್ರೋ ತನ್ನನ್ನು ತಾನು ತೂತಿ-ಎ-ಹಿಂದ್‌ (ಹಿಂದೂಸ್ತಾನದ ದನಿ) ಎಂದು ಕರೆದುಕೊಂಡವನಾಗಿದ್ದ. ಖುಸ್ರೋನಿಗೆ ಭಾರತದ ಮತ್ತು ಈ ನೆಲದ ಭಾಷೆ-ಸಂಸ್ಕೃತಿಗಳ ಬಗ್ಗೆ ಅಪಾರ ಅಭಿಮಾನವಿತ್ತು. ಟರ್ಕಿಷ್‌, ಅರೇಬಿಕ್‌ ಮತ್ತು ಪರ್ಷಿಯನ್‌ ಭಾಷೆಗಳನ್ನು ಕಲಿತಿದ್ದ ಖುಸ್ರೋ ಉತ್ತರಭಾರತದ ಭಾಷೆಗಳಾದ ಬ್ರಿಜ್‌ ಭಾಷಾ, ಅವಧ್‌ ಮತ್ತು ಖರೀ ಬೋಲಿಗಳನ್ನೂ ಬಲ್ಲವನಾಗಿದ್ದ. ಸಂಸ್ಕೃತದ ಸೌಂದರ್ಯಕ್ಕೆ ಮಾರುಹೋಗಿದ್ದ. ಖುಸ್ರೋನಿಂದಾಗಿ ಉರ್ದು ಭಾಷೆಯು ಸೂಫಿಗಳ ಆಡುಭಾಷೆ ಮತ್ತು ಲಿಖೀತ ಭಾಷೆಗಳ ರೂಪದಲ್ಲಿ ಬಹುಬೇಗನೇ ಜನಪ್ರಿಯತೆಯನ್ನು ಪಡೆದುಕೊಂಡಿತ್ತು.

ಗುರುಶಿಷ್ಯರ ಜೋಡಿ
ಹಜ್ರತ್‌ ನಿಜಾಮುದ್ದೀನ್‌ ಔಲಿಯಾ ಮತ್ತು ಅಮಿರ್‌ ಖುಸ್ರೋ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗಾಗಿ ಒಬ್ಬರನ್ನು ಮತ್ತೂಬ್ಬರ ಹೆಸರಿಲ್ಲದೆ ದಾಖಲಿಸುವುದು ಅಸಾಧ್ಯವೇ ಸರಿ. ಖುಸ್ರೋ ಔಲಿಯಾರ ಶಿಷ್ಯನಾಗಿದ್ದು ಗುರುವಾಗಿ ಔಲಿಯಾರ ಭಾಗ್ಯವೋ, ಶಿಷ್ಯನಾಗಿ ಖುಸ್ರೋನ ಭಾಗ್ಯವೋ ಎಂದು ಹೇಳುವುದು ಕಷ್ಟ. ಖುಸ್ರೋನ ಸಾಹಿತ್ಯದಲ್ಲಿ ಆತ್ಮದಂತಿದ್ದ ಭಾವತೀವ್ರತೆಗಳು ಆತನ ಬದುಕಿನಲ್ಲೂ ಸಾಕಷ್ಟಿತ್ತು ಮತ್ತು ಇದರ ಸಿಂಹಪಾಲು ಗುರುವಾದ ಔಲಿಯಾರಿಗೆ ಮೀಸಲಾಗಿತ್ತು. ಗುರುವಿಗೂ ಕೂಡ ತನ್ನ ಪ್ರತಿಭಾವಂತ ಶಿಷ್ಯನ ಬಗೆಗಿದ್ದ ಅಭಿಮಾನವು ಪದಗಳಿಗೆ ಮೀರಿದ್ದು. “”ಈ ಜಗತ್ತಷ್ಟೇ ಏಕೆ? ನನಗೆ ನನ್ನ ಬಗ್ಗೆಯೇ ಬೇಸರ ಮೂಡಬಹುದು. ಆದರೆ ಇಂಥಾ ಬೇಸರವು ನನಗೆ ನಿನ್ನ ಬಗ್ಗೆ ಮೂಡಲು ಸಾಧ್ಯವಿಲ್ಲ”, ಎಂದು ಖುಸ್ರೋನಿಗೆ ಹೇಳುತ್ತಾರೆ ಔಲಿಯಾ. ಇವರಿಬ್ಬರ ಈ ಗಾಢವಾದ ಬಂಧವು ಮೊದಲ ಭೇಟಿಯಿಂದ ಹಿಡಿದು ಸಾವಿನವರೆಗೂ ಮುಂದುವರಿಯಿತು.

ಅಮೀರ್‌ ಖುಸ್ರೋ ವೈರಾಗ್ಯ-ವೈಭವಗಳೆರಡನ್ನೂ ಹತ್ತಿರದಿಂದ ಕಂಡವನು. ಆತ ಸೂಫಿ ಸಂತನಷ್ಟೇ ಆಗಿರಲಿಲ್ಲ. ಜಲಾಲುದ್ದೀನ್‌ ಖೀಲ್ಜಿ , ಕುತುಬುದ್ದೀನ್‌ ಮುಬಾರಕ್‌, ಯಾಸುದ್ದೀನ್‌ ತುಲಘಕ್‌ ಮತ್ತು ಮೊಹಮದ್‌ ಬಿನ್‌ ತುಘಲಕ್‌ರಂಥ ದಿಲ್ಲಿಯ ಹಲವು ಸುಲ್ತಾನರ ಆಸ್ಥಾನಕವಿಯೂ ಆಗಿದ್ದ. ಎರಡು ವಿರುದ್ಧ ಧ್ರುವಗಳಾದ ಸಂತ ಮತ್ತು ಸುಲ್ತಾನರಿಬ್ಬರ ಪ್ರಶಂಸೆಯನ್ನೂ, ಪ್ರೀತಿಯನ್ನೂ ಏಕಕಾಲದಲ್ಲಿ ಪಡೆದುಕೊಂಡ ಅಪರೂಪದ ವ್ಯಕ್ತಿ ಈತ. ಇತ್ತ ತಾವು ಸಾವಿನಲ್ಲೂ ಖುಸ್ರೋನ ಜೊತೆಗಿರಬೇಕೆಂಬುದು ಔಲಿಯಾರ ಇಚ್ಛೆಯಾಗಿತ್ತು. ಆದರೆ, ಇಸ್ಲಾಮಿಕ್‌ ಷರಿಯಾದ ಪ್ರಕಾರ ಇಬ್ಬರಿಗೆ ಒಂದೇ ಸಮಾಧಿಯನ್ನು ಕಟ್ಟಿಸುವುದು ಅಸಾಧ್ಯವಾದ್ದರಿಂದ ಔಲಿಯಾರ ಆಣತಿಯಂತೆ ಗುರುಶಿಷ್ಯರ ಸಮಾಧಿಗಳನ್ನು ಅಕ್ಕಪಕ್ಕದಲ್ಲಿ ನಿರ್ಮಿಸಲಾಯಿತು. ಔಲಿಯಾರ ದೇಹಾಂತ್ಯದಿಂದ ಕಂಗೆಟ್ಟು ದಿನಗಟ್ಟಲೆ ಅತ್ತಿದ್ದ ಖುಸ್ರೋ ತೀವ್ರ ಮಾನಸಿಕ ಯಾತನೆಯಿಂದಾಗಿ ಆರು ತಿಂಗಳಲ್ಲೇ ಪ್ರಾಣಬಿಟ್ಟಿದ್ದ.

ಚಿರಂಜೀವಿ ಖುಸ್ರೊ
“”ಕಾವ್ಯದ ಎಲ್ಲಾ ಪ್ರಕಾರಗಳಲ್ಲೂ ಈ ಮಟ್ಟಿನ ಪ್ರೌಢಿಮೆಯನ್ನು ಹೊಂದಿರುವ ವ್ಯಕ್ತಿಯೊಬ್ಬ ಹಿಂದೆಂದೂ ಇರಲಿಲ್ಲ, ಮುಂದೆಯೂ ಬರುವ ಸಾಧ್ಯತೆಗಳಿಲ್ಲ”, ಎಂದು ಖುಸ್ರೋನ ಬಗ್ಗೆ ದಾಖಲಿಸುತ್ತಾರೆ ಮಧ್ಯಯುಗದ ಖ್ಯಾತ ಇತಿಹಾಸಕಾರಲ್ಲೊಬ್ಬನಾಗಿದ್ದ ಜೀಯಾವುದ್ದೀನ್‌ ಬರನಿ. ಖುಸ್ರೋನ ಕವ್ವಾಲಿಗಳು ಆರುನೂರು ವರ್ಷಗಳ ನಂತರವೂ ಸೂಫಿ ಜನಪದ, ಸಾಹಿತ್ಯ, ಸಿನೆಮಾ ಸೇರಿದಂತೆ ಸಂಗೀತಲೋಕದಲ್ಲಿ ಜೀವಂತವಾಗಿವೆ. ದಿಲ್ಲಿಯ ನಿಜಾಮುದ್ದೀನ್‌ ದರ್ಗಾದ ಪ್ರಮುಖ ಆಕರ್ಷಣೆಗಳಲ್ಲಿ ಕವ್ವಾಲಿ ಕಾರ್ಯಕ್ರಮಗಳೂ ಒಂದು. ಪ್ರವಾಸಿಗರಿಗೂ, ಭಕ್ತಾದಿಗಳಿಗೂ, ಕಾವ್ಯಾಸಕ್ತರಿಗೂ ಔಲಿಯಾರಂತೆ ಶಿಷ್ಯ ಖುಸ್ರೋ ಕೂಡ ದೈವಾಂಶ ಸಂಭೂತ.

ಛಾಪ್‌ ತಿಲಕ್‌ ಸಬ್‌ ಚೀನೀ ರೇ, ಮೋಸೇ ನೈನಾ ಮಿಲಾಯ್ಕೆ (ಒಂದು ಕಣ್ಣೋಟ ಮಾತ್ರದಿಂದ ನನ್ನ ಸೌಂದರ್ಯ, ಗುರುತುಗಳೆಲ್ಲವನ್ನೂ ಕಸಿದುಕೊಂಡೆ)”, ಎಂದು ಬರೆಯುತ್ತಾರೆ ಮಹಾಕವಿ ಹಜ್ರತ್‌ ಆಮೀರ್‌ ಖುಸ್ರೋ. ಇಂಡೋ-ಇಸ್ಲಾಮಿಕ್‌ ಸಂಸ್ಕೃತಿಗಳೆರಡನ್ನೂ ಸಮಾನವಾಗಿ ಪ್ರೀತಿಸಿದ್ದ ಈತ ಸಾಂಸ್ಕೃತಿಕ ನೆಲೆಯಲ್ಲಿ ಇವೆರಡರ ನಡುವಿನ ಸೇತುವೆಯಾದವನೂ ಹೌದು. ಖುಸ್ರೋ ಹೆಮ್ಮೆಪಟ್ಟ ಈ ನೆಲದ ಮನ ಮತ್ತು ಮಣ್ಣಿನಲ್ಲಿ ಆತನ ಘಮವು ಇಂದಿಗೂ ಜೀವಂತವಾಗಿರುವುದು ಕಾಕತಾಳೀಯವಲ್ಲವೇನೋ !

ಪ್ರಸಾದ್‌ ನಾೖಕ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ