ಆರ್ಥಿಕ ರಂಗದ ಪ್ರಭಾವಿ ಸುಧಾರಕ

ಅರುಣ ನೆನಪು

Team Udayavani, Aug 25, 2019, 4:01 AM IST

ಅರುಣ್‌ ಜೇಟ್ಲಿ ಬಿಜೆಪಿ ವಲಯದ ಪ್ರಭಾವಶಾಲಿ ಹೆಸರು. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಮೊದಲ ಅವಧಿಯ ಎನ್‌ಡಿಎ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಅವರು ಇದ್ದರು. ನರೇಂದ್ರ ಮೋದಿ ನೇತೃತ್ವದಲ್ಲಿನ ಎನ್‌ಡಿಎ ಸರ್ಕಾರ 2014ರ ಮೇನಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಅವರು ಮತ್ತಷ್ಟು ಪ್ರಭಾವಿಯಾದರು. ಪ್ರಧಾನಿ ಮೋದಿ ಜತೆಗೆ ವಿತ್ತ ಸಚಿವರಾಗಿ ಅರುಣ್‌ ಜೇಟ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರಿಗೆ ಹೆಚ್ಚಿನ ಅವಕಾಶ ಲಭ್ಯವಾಯಿತು.

ಅವರ ಅವಧಿಯಲ್ಲಿ ಸಾಧನೆ ಮಾಡಲಾಗಿರುವ ಪ್ರಮುಖ ಅಂಶವೆಂದರೆ ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗುವ ನಗದು ಸಹಾಯಧನವನ್ನು ಫ‌ಲಾನುಭವಿಗಳಿಗೇ ನೇರವಾಗಿ ವರ್ಗಾಯಿಸುವಂಥ ಮಹತ್ವದ ನಿರ್ಧಾರ ಕೈಗೊಂಡರು. ಹೀಗಾಗಿ, ಯಾವುದೇ ಕಲ್ಯಾಣ ಕಾರ್ಯಕ್ರಮದ ನಗದು ಮೊತ್ತ ಫ‌ಲಾನುಭವಿಗಳಿಗೆ ವರ್ಗಾವಣೆಯಾಗುವ ವ್ಯವಸ್ಥೆ ಜಾರಿಯಾಗಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಅನುಕೂಲವಾಯಿತು.

ಪ್ರಧಾನಿ ನರೇಂದ್ರ ಮೋದಿಯವರು ಕೈಗೊಳ್ಳಲು ಉದ್ದೇಶಿಸಿದ್ದ ಆರ್ಥಿಕ ಸುಧಾರಣೆಗಳ ಕನಸು ಯಶಸ್ವಿಯಾಗಿ ಜಾರಿಯಾಗುವ ನಿಟ್ಟಿನಲ್ಲಿ ಅವರು ಅವಿರತವಾಗಿ ಶ್ರಮಿಸಿದ್ದಾರೆ. “ಒಂದು ದೇಶ; ಒಂದು ತೆರಿಗೆ’ ಎಂಬ ಕಲ್ಪನೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) 2017ರಲ್ಲಿ ಅನುಷ್ಠಾನವಾಗುವು ದರಲ್ಲಿ ಜೇಟ್ಲಿ ಕೊಡುಗೆ ದೊಡ್ಡದು. ವಿವಿಧ ರಾಜ್ಯಗಳ ವಿತ್ತ ಸಚಿವರು, ಪ್ರತಿಪಕ್ಷಗಳ ನಾಯಕರ ಜತೆಗೆ ಬಹುಹಂತದಲ್ಲಿ ಚರ್ಚೆ, ಸಮಾಲೋಚನೆ ನಡೆಸಿ 1986ರಲ್ಲಿ ದೇಶದ ತೆರಿಗೆ ವ್ಯವಸ್ಥೆಯಲ್ಲಿ ತರುವ ಸುಧಾರಣೆ ಪ್ರಯತ್ನಕ್ಕೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹ, ಚಿಂತನೆ ಇರಲಿಲ್ಲ.

ಯುಪಿಎ ನೇತೃತ್ವದ ಎರಡು ಅವಧಿಗಳಲ್ಲಿ ಹೊಸ ಮಾದರಿಯ ತೆರಿಗೆ ವ್ಯವಸ್ಥೆಯ ಜಾರಿಗೆ ಪ್ರಯತ್ನಗಳು ನಡೆದಿದ್ದರೂ, ಶೀಘ್ರಗತಿಯಲ್ಲಿ ಸಹಮತ ಸಾಧಿಸಿ, ಜಾರಿಯಾಗಿಯೇ ಸಿದ್ಧ ಎಂಬ ವಾತಾವರಣದಲ್ಲಿ ಕೆಲಸ ನಡೆದದ್ದು ಜೇಟ್ಲಿ ಅವಧಿಯಲ್ಲಿ ಎಂದರೆ ಸರಿಯಾಗುತ್ತದೆ. ದಿವಾಳಿ ಕಾಯ್ದೆ: ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮೋಸ ಮಾಡಿ ಪರಾರಿಯಾಗುತ್ತಿರುವ ಉದ್ಯಮಿಗಳು, ಉದ್ಯಮ ಸಂಸ್ಥೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾರಿಗೆ ತರಲಾಗಿರುವ ಪ್ರಮುಖ ಕಾಯ್ದೆ.

2019ರ ಜುಲೈ-ಆಗಸ್ಟ್‌ನಲ್ಲಿ ಮುಕ್ತಾಯವಾದ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಅದಕ್ಕೆ ತರಲಾಗಿರುವ ತಿದ್ದುಪಡಿ ಕಾಯ್ದೆಗೆ ಕೂಡ ಅನುಮತಿ ಸಿಕ್ಕಿತ್ತು. ಅವರು ವಿತ್ತ ಸಚಿವರಾಗಿದ್ದಾಗ ಜಾರಿಯಾಗಿರುವ ಈ ಕಾಯ್ದೆಯಿಂದಾಗಿ 70 ಸಾವಿರ ಕೋಟಿ ರೂ.ಗಳನ್ನು ಕೇಂದ್ರದ ಬೊಕ್ಕಸಕ್ಕೆ ವಾಪಸ್‌ ಪಡೆಯಲಾಗಿದೆ. 4,452 ದಿವಾಳಿ ಕೇಸುಗಳನ್ನು ಇತ್ಯರ್ಥ ಪಡಿಸುವ ಮೂಲಕ 2-3 ಲಕ್ಷ ಕೋಟಿ ರೂ.ಗಳನ್ನು ಪಡೆದುಕೊಳ್ಳಲಾಗಿದೆ.

ಎನ್‌ಪಿಎ ಪ್ರಮಾಣ ತಡೆಗೆ ಕ್ರಮ: ಬ್ಯಾಂಕಿಂಗ್‌ ಕ್ಷೇತ್ರದ ದೊಡ್ಡ ಶತ್ರು ಅನುತ್ಪಾದಕ ಆಸ್ತಿ. ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ದಿವಾಳಿ ಕಾಯ್ದೆ ಜಾರಿಗೆ ತರುವ ಮೊದಲು 11 ಲಕ್ಷ ಕೋಟಿ ರೂ. ಮೌಲ್ಯದ ಅನುತ್ಪಾದಕ ಆಸ್ತಿ (ಎನ್‌ಪಿಎ) ಇದ್ದದ್ದು ಸದ್ಯ ಅದರ ಪ್ರಮಾಣ 8.5 – 9 ಲಕ್ಷ ಕೋಟಿ ರೂ.ಗೆ ಇಳಿದಿದೆ. ಅದಕ್ಕೆ ಜೇಟ್ಲಿ ಜಾರಿಗೆ ತಂದ ದಿವಾಳಿ ಕಾಯ್ದೆ. 2019 ಆ.13ಕ್ಕೆ ವರದಿಯಾಗಿರುವ ಮಾಹಿತಿ ಪ್ರಕಾರ ಶೇ.55ರಷ್ಟು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಪ್ರಮಾಣ ಕಡಿಮೆಯಾಗಿದೆ.

ಹಣಕಾಸು ಸಲಹಾ ಸಮಿತಿ: ದೇಶದ ಅರ್ಥ ವ್ಯವಸ್ಥೆ ನಿರ್ಧರಿಸುವ ಆರ್‌ಬಿಐಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಣಕಾಸು ಸಲಹಾ ಸಮಿತಿ ರಚನೆ ಮಾಡುವ ಬಗ್ಗೆ ನಿರ್ಧರಿಸಲಾಗಿತ್ತು. ಅದರಲ್ಲಿ ಜೇಟ್ಲಿ ಪಾತ್ರವೂ ಪ್ರಮುಖವಾದದ್ದು. ಒಟ್ಟು ಆರು ಮಂದಿ ಸದಸ್ಯರು ಇರುವ ಈ ಸಮಿತಿ ಬ್ಯಾಂಕ್‌ಗಳ ಮೇಲೆ ನಿಗದಿ ಮಾಡುವ ಸಾಲದ ಮೇಲಿನ ಬಡ್ಡಿ ದರ ನಿರ್ಧರಿಸುವುದರ ಬಗ್ಗೆ ಮೂರು ತಿಂಗಳಿಗೆ ಒಮ್ಮೆ ಸಭೆ ಸೇರಿ ನಿರ್ಧರಿಸುತ್ತದೆ.

ದೇಶದ ಅರ್ಥ ವ್ಯವಸ್ಥೆಗೆ ಹೆಚ್ಚಿನ ರೀತಿಯ ಸುಧಾರಣೆ ಮತ್ತು ಬಂಡವಾಳ ಹೂಡಿಕೆ ನಿಟ್ಟಿನಲ್ಲಿ ಸಹಮತದ ನಿರ್ಧಾರಗಳಿಂದ ಆರ್ಥಿಕ ನಿರ್ಧಾರಗಳ ಜಾರಿಗೆ ರಚಿಸಲಾಗಿರುವ ಸಮಿತಿಯನ್ನು ಜೇಟ್ಲಿಯವರ ಚಿಂತನೆ ಮೇರೆಗೆ ರಚಿಸಲಾಗಿದೆ. ಆರ್‌ಬಿಐ ಗವರ್ನರ್‌ ಆಗಿದ್ದ ಊರ್ಜಿತ್‌ ಆರ್‌.ಪಟೇಲ್‌ ನೇತೃತ್ವದ ಸಮಿತಿ ಅದನ್ನು ಪ್ರಸ್ತಾಪಿಸಿದ್ದರೂ, ಅದರ ರೂಪುರೇಷೆಗಳನ್ನು ವಿನ್ಯಾಸ ಮಾಡಿದ್ದು ಜೇಟ್ಲಿಯವರು.

ಸರ್ಕಾರಿ ಬ್ಯಾಂಕ್‌ಗಳ ಬಲಪಡಿಸುವಿಕೆ: ಹಲವು ದಶಕಗಳಿಂದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಸಮೂಹದಲ್ಲಿ ಇದ್ದ ಬ್ಯಾಂಕ್‌ಗಳನ್ನು ವಿಲೀನಗೊಳಿಸುವಿಕೆಯ ಪ್ರಕ್ರಿಯೆ ಕೈಗೂಡಿರಲಿಲ್ಲ. ಸ್ಟೇಟ್‌ ಬ್ಯಾಂಕ್‌ ಆಫ್ ಬಿಕಾನೇರ್‌ ಆ್ಯಂಡ್‌ ಜೈಪುರ್‌, ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್ ತಿರುವಾಂಕೂರು, ಸ್ಟೇಟ್‌ ಬ್ಯಾಂಕ್‌ ಆಫ್ ಹೈದರಾಬಾದ್‌, ಭಾರತೀಯ ಮಹಿಳಾ ಬ್ಯಾಂಕ್‌ ಅನ್ನು ವಿಲೀನಗೊಳಿಸುವಿಕೆಯ ನಿಟ್ಟಿನಲ್ಲಿ ಹಲವು ಹಂತಗಳಲ್ಲಿ ಮಾತುಕತೆ ನಡೆಸಿದ್ದರು. 2017ರಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡಿತ್ತು. ದೇನಾ ಬ್ಯಾಂಕ್‌, ವಿಜಯಾ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್ ಬರೋಡಾಗಳನ್ನು 2018ರಲ್ಲಿ ವಿಲೀನಗೊಳಿಸುವಿಕೆಯ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇನ್ನು ಸರ್ಕಾರಿ ಬ್ಯಾಂಕ್‌ಗಳಿಗೆ ಮರು ಬಂಡವಾಳ ಹೂಡುವ ನಿಟ್ಟಿನಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.

ಆರ್ಥಿಕ ಸದೃಢತೆ: ವಿತ್ತೀಯ ಸದೃಢತೆ ತಂದುಕೊಟ್ಟದ್ದು ಅವರ ಹೆಗ್ಗಳಿಕೆ. ಹಣದುಬ್ಬರ ಪ್ರಮಾಣ ತಗ್ಗಿಸಿದ್ದಾರೆ. 2019ರಲ್ಲಿ ವಿತ್ತೀಯ ಕೊರತೆ ಪ್ರಮಾಣ ಶೇ. 3.4 ಆಗಿತ್ತು. 2014ರಲ್ಲಿ ಹಣದುಬ್ಬರ ಶೇ.4.5 ಮತ್ತು ವಿತ್ತೀಯ ಕೊರತೆ ಪ್ರಮಾಣ ಶೇ. 9.5 ಆಗಿತ್ತು. ವಿತ್ತೀಯ ಶಿಸ್ತು ಪಾಲಿಸುವ ನಿಟ್ಟಿನಲ್ಲಿ ಅವರು ಕೈಗೊಂಡ ಕ್ರಮಗಳು ಶ್ಲಾಘನೀಯವಾಗಿದ್ದವು.

ನೋಟುಗಳ ಅಮಾನ್ಯ: ನರೇಂದ್ರ ಮೋದಿಯವರು 2016 ನ.8ರಂದು ಕೈಗೊಂಡಿದ್ದ ಬಲುದೊಡ್ಡ ಆರ್ಥಿಕ ಸುಧಾರಣೆಯ ನಿರ್ಧಾರವೆಂದರೆ 500 ರೂ., 1 ಸಾವಿರ ರೂ. ಮುಖಬೆಲೆಯ ನೋಟುಗಳ ಅಮಾನ್ಯ. ಕಪ್ಪುಹಣದ ವಿರುದ್ಧ ಕೈಗೊಳ್ಳಲಾಗಿರುವ ಪ್ರಮುಖ ಸರ್ಜಿಕಲ್‌ ಸ್ಟ್ರೈಕ್‌ ಎಂದೇ ಪರಿಗಣಿತವಾಗಿರುವ ಈ ಕ್ರಮ, ದೇಶದ ಅರ್ಥ ವ್ಯವಸ್ಥೆಯಲ್ಲಿ ಶಿಸ್ತು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಮಹತ್ವದ ಕ್ರಮ ಎಂದರೆ ತಪ್ಪಾಗಲಾರದು. ಕೇಂದ್ರ ಸರ್ಕಾರದ ವತಿಯಿಂದ ಪದೇ ಪದೆ ನಿಯಮಗಳು ಬದಲಾಗುತ್ತಿದ್ದ ಕಾರಣ ಟೀಕೆಗಳು ಎದುರಿಸುವಂತಾದರೂ ಇದೊಂದು ಬಲು ದೊಡ್ಡ ಸಾಧನೆಯೇ ಹೌದು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ