ಅವನ ಕಣ್ಣಲ್ಲಿ ನನ್ನೂರಿನ ಬೆಳಕು
Team Udayavani, May 6, 2021, 1:23 PM IST
ಸಣ್ಣ ಊರು ಹಳ್ಳಿಗಳಲ್ಲಿ ಬೆಳೆದ ನನ್ನಂಥ ಅನೇಕರಿಗೆ ಈ ಅನುಭವವಾಗಿರುತ್ತದೆ. ನಮ್ಮ ಊರಿನಲ್ಲಿರುವ ಪ್ರತಿಯೊಬ್ಬರೂ ನಮಗೆ ಪರಿಚಿತರೇ, ಎದುರಿಗೆ ಸಿಕ್ಕವರಿಗೊಂದು ನಮಸ್ಕಾರ, ತೀರಾ ಪರಿಚಿತರಾದರೆ ಅವರೊಂದಿಗೆ ಮಾತಾಡದೆ ನಮ್ಮ ದಾರಿ ಮುಂದೆ ಸಾಗುವುದಿಲ್ಲ.
ಆ ಊರಿನಲ್ಲಿರುವ ರಸ್ತೆಗಳು ಎಲ್ಲಿ ಮುಗಿಯುತ್ತವೆ, ಮುಗಿದ ಬಿಂದುವಿನಿಂದ ಯಾವ ಕವಲು ದಾರಿ ಮತ್ತೆ ಪುಟಿಯುತ್ತದೆ, ಮರದ ನೆರಳು, ಗುಡಿ ಗುಂಡಾರದ ಮೆಟ್ಟಿಲು, ಹರಿಯುವ ನೀರಿನ ನಾದ, ಸಂಜೆಯ ಕ್ರಿಮಿಕೀಟಗಳಿರಲಿ ಎಲ್ಲವೂ ಚಿರ ಪರಿಚಿತ. ಆ ದಾರಿಗಳಿಗೂ ನಾವು ಹಾಗೆ ನೆನಪಿರಬಹುದೇ? ಎನ್ನುವ ಆಲೋಚನೆ ಎಷ್ಟೋ ಸಲ ಕಾಡಿದೆ.
ಮುಂಜಾನೆ ಮುರ್ಕಿಯಲ್ಲಿ ಕುಳಿತು ಮಲ್ಲಿಗೆ ಮಾರುವ ಅಜ್ಜಿ, ಅಂಗಳಕ್ಕೆ ನೀರು ಹಾಕಿ ಸೆಗಣಿ ಸಾರಿಸುತ್ತಿರುವ ದೃಶ್ಯ, ಎಷ್ಟೋ ಬಾರಿ ಸಂಜೆ ಹೊತ್ತು ಬಸ್ ಸ್ಟಾಪ್‌ನಿಂದ ಮನೆಗೆ ನಡೆದು ಬರುವಾಗ ಮೂಗಿಗೆಡರುವ ಊದಿನಕಡ್ಡಿ, ಮಿರ್ಚಿ ಭಜ್ಜಿಯ ಘಮಲು, ಮೀನು ಮಾರ್ಕೆಟ್ ಬರುವ ಮೊದಲೇ ಸ್ವಾಗತಿಸುವ ವಾಸನೆ ಹೀಗೆ ಇನ್ನೂ ಏನೇನೋ ಎಲ್ಲವು ಸುಷುಪ್ತಿಯಲ್ಲಿ ಅಚ್ಚಾಗಿಬಿಟ್ಟಿರುತ್ತವೆ. ನಾವು ಹುಟ್ಟಿ ಬೆಳೆದ ಆ ಊರಿನಿಂದ ನಾವು ವರ್ಷಾನುಗಟ್ಟಲೆ ದೂರವಿದ್ದು ಮತ್ತೆ ಭೇಟಿ ಕೊಟ್ಟಾಗ ಬೇಡ ಬೇಡವೆಂದರೂ ಮನಸು ಆ ಹಳೆಯ ಚಿತ್ರವನ್ನೇ ಕಲ್ಪಿಸಿಕೊಳ್ಳುತ್ತದೆ. ಆ ಘಮಗಳನ್ನು ಆಘ್ರಾಣಿಸಲು ಹಾತೊರೆಯುತ್ತದೆ.
ಯಾವುದೇ ಊರು ಕೇರಿಯಾಗಲಿ ತನ್ನಿಂ ತಾನೇ ನಮ್ಮ ಮುಂದೆ ಬಿಚ್ಚಿಕೊಳ್ಳುವುದಿಲ್ಲ. ಅದೊಂದು ರೀತಿ ಫಜಲ್‌ನಂತೆ. ನಮಗೂ ಅದನ್ನು ಬಿಡಿಸಿ ಜೋಡಿಸಿ ಅರಿತುಕೊಳ್ಳುವ, ಬೆರೆತು ಹೋಗುವ ಆಸಕ್ತಿ ಇರಬೇಕು.
ಸುಮ್ಮನೆ ಯಾವುದೇ ಕೆಲಸ, ಕಾರಣ ವಿಲ್ಲದೆಯೇ ಊರಿನ ಬೀದಿ ಬೀದಿಗಳನ್ನು ಪರಿಚಯಿಸಿಕೊಳ್ಳುವುದು, ಆ ಊರಿನ ಕವಲುಗಳನ್ನು, ಅದರ ಚಂದವನ್ನು ನೋಡಿ ಕಣ್ಣರಳಿಸುವುದು, ಸಮಯವಿದ್ದಾಗ ನ್ಯಾವಿಗೇಶನ್ ಸಹಾಯವಿಲ್ಲದೆ ಗೊತ್ತಿರದ ಬೀದಿಗಳನ್ನು ಪರಿಚಯ ಮಾಡಿಕೊಳ್ಳಲು ಹೊರಟು ಬಿಡುವುದು ನನ್ನ ಅಭ್ಯಾಸ.
ನಾರ್ದರ್ನ್ ಐರ್ಲೆಂಡ್‌ಗೆ ಬಂದ ಅನಂತರವೂ ಈ ಅಭ್ಯಾಸ ಮುಂದು ವರಿದಿದೆ. ಅಪರಿಚಿತ ದಾರಿಗಳಲ್ಲಿ ಕಳೆದುಹೋಗುವ ಆ ನಿಮಿಷಗಳು ತುಂಬಾ ಖುಷಿ ಕೊಡುತ್ತವೆ. ಗೊತ್ತಿರದ ಹೂಗಳು, ಅವು ಅರಳುವ ಸಮಯ, ಈ ಮೊದಲು ಕಾಣದ ಹೊಸ ಜಾತಿಯ ಮರದ ನೆರಳು, ಆ ತಂಪಿನ ಕಂಪು, ಪಾಚಿ ಹತ್ತಿದ ಹಳೆ ಕಟ್ಟಡಗಳ ಗೋಡೆಗಳು, ಅಂಥದೇ ಇನ್ನೊಂದು ಕಟ್ಟಡದ ಮಗ್ಗುಲಿಗೆ ಢಾಳು ಬಣ್ಣಗಳಲ್ಲಿ ಹರಡಿಕೊಂಡ ಎತ್ತರೆತ್ತರದ ಗ್ರಾಫಿಟಿಗಳು, ಮತ್ತದನ್ನು ಬಿಡಿಸಿದ ಕಲಾವಿದನ ಪುಟ್ಟ ಸಹಿ ಎಲ್ಲವೂ ನನಗೆ ಬೆರಗು ಹುಟ್ಟಿಸುತ್ತದೆ. ಒಮ್ಮೆ ಇಂಥದೇ ಗ್ರಾಫಿಟಿ ತುಂಬಿದ ಬೀದಿಯ ತಿರುವಿನಲ್ಲಿ ಗೋಡೆಯ ಮೇಲೆ ಯಾರೋ ಕಲಾವಿದ ಕಾಳಿ ಮಾತೆಯ ಚಿತ್ರ ಬರೆದು ಅಂಟಿಸಿದ್ದ. ಅದನ್ನು ನೋಡಿ ನನಗೆ ನವರಾತ್ರಿಯ ಒಂಬತ್ತು ದಿನಗಳ ಸಂಭ್ರಮ ಒಂದು ಗಳಿಗೆಯÇÉೇ ಅನುಭವವಾಗಿತ್ತು.
ಮತ್ತೂಂದು ಸಲ ಐರಿಶ್ ûೌರಿಕನು ತನ್ನ ಅಂಗಡಿಯ ಕನ್ನಡಿ ಸುತ್ತ ಬೇರೆ ಬೇರೆ ದೇಶಗಳ ನೋಟುಗಳನ್ನು ಅಂಟಿಸಿದ್ದ. ಆ ದೃಶ್ಯವನ್ನು ಹತ್ತಿರದಿಂದ ನೋಡಲು ಮಗನನ್ನು ಹೇರ್‌ಕಟ್‌ಗೆ ಅಲ್ಲಿಗೆ ಕರೆದುಕೊಂಡು ಹೋಗಿದ್ದೆ. ಅವನ ಸಂಗ್ರಹದಲ್ಲಿ ಸರಿಸುಮಾರು 60 ದೇಶಗಳ ನೋಟುಗಳಿದ್ದವು, ಅವನು ಮಾತನಾಡುತ್ತ “ಇಲ್ಲಿರುವ ಎಲ್ಲ ನೋಟು ಗಳನ್ನು ನನ್ನ ಗಿರಾಕಿಗಳೇ ಕೊಟ್ಟಿದ್ದಾರೆ, ನೋಡು ನನ್ನ ಊರು ಎಷ್ಟು ವೈವಿಧ್ಯಮಯ ಜನರನ್ನು ಹೊಂದಿದೆ. ಹೆಮ್ಮೆಯಿಂದ ಹೇಳಿದ್ದ. ನಾನು ಕೆಲವು ರೂಪಾಯಿ ನೋಟುಗಳನ್ನು ಕೊಟ್ಟಿದ್ದೆ, Mr. Gandhi welcome to my abode ಎಂದು ಖುಷಿಯಿಂದ ಅವುಗಳನ್ನು ಕನ್ನಡಿಗೆ ಅಂಟಿಸಿದ್ದ.
ಕೊರೊನಾ ಬರುವುದಕ್ಕೂ ಮೊದಲು ನವೆಂಬರ್ ಆರಂಭದಿಂದ ಡಿಸೆಂಬರ್ ಮಧ್ಯದವರೆಗೂ ಬೆಲ್ಫಾÓr…ನಲ್ಲಿ ಕ್ರಿಸ್ಮಸ್ ಕಾಂಟಿನೆಂಟಲ್ ಮಾರ್ಕೆಟ್ ನಡೆಯುತ್ತದೆ. ಯೂರೋಪಿನ ಹಲವು ದೇಶಗಳ ತಿಂಡಿ, ಉಡುಪು ಕರಕುಶಲ ಸಾಮಗ್ರಿಗಳು, ಆಭರಣ, ಚಾಕಲೇಟ್ ಮತ್ತು ಸ್ಥಳೀಯ ತಿನಿಸು, ಪಾನೀಯಗಳ ಮಾರಾಟ, ಪ್ರದರ್ಶನ ಮಾಡುವ ಈ ಮಾರುಕಟ್ಟೆ ಒಂಥರಾ ನಮ್ಮೂರಿನ ಜಾತ್ರೆಯಂತಿರುತ್ತದೆ.
ಈ ಜಾತ್ರೆಗೆ ನಾನು ಕಳೆದ 8 ವರ್ಷಗಳಿಂದ ತಪ್ಪದೆ ಭೇಟಿ ನೀಡಿದ್ದೇನೆ. ಆ ದಿನಗಳ ಸಂಭ್ರಮವನ್ನು ಅನುಭವಿಸಿದ್ದೇನೆ. ಹಾಗೆ ಆ ವರ್ಷವೂ ನಾನು ನನ್ನ ಗೆಳತಿ ಭಜನೆ ತರಗತಿ ಮುಗಿಸಿಕೊಂಡು ಮನೆಗೆ ಹೋಗುವ ಸಮಯದಲ್ಲಿ ಕ್ರಿಸ್ಮಸ್ ಮಾರ್ಕೆಟ್ ಹೊಕ್ಕೆವು. ರುಮೇನಿಯ ಬಲ್ಗೇರಿಯಾ ದೇಶದ ಖಾರ ಬ್ರೆಡ್ ಬಹುಶಃ ಇಲ್ಲಿರುವ ಎಲ್ಲ ಭಾರತೀಯರೂ ತಿನ್ನಲು ಹವಣಿಸುವ ಕ್ರಿಸ್ಮಸ್ ಮಾರ್ಕೆಟ್ ತಿಂಡಿ. ನಾವು ಬೆಳಗ್ಗೆ ಹೋಗಿದ್ದರಿಂದ ಅಂಗಡಿ ಮುಂದೆ ಅಷ್ಟು ಜನರಿರಲಿಲ್ಲ.
ಹೋಗುತ್ತಲೇ ಅಲ್ಲಿದ್ದ ಒಬ್ಬ ಯುವಕ “ಬನ್ನಿ ಬನ್ನಿ’ ಎಂದು ನಗು ಮುಖದಿಂದ ಸ್ವಾಗತಿಸಿದ. ಯಾವ ದೇಶ ನಿಮ್ಮದು ಅಂದ, ನಾವಿಬ್ಬರು ಭಾರತ ಎಂದೆವು. ಓಹ್Ø ನನಗೆ ಭಾರತೀಯರು ಅಂದ್ರೆ ತುಂಬಾ ಇಷ್ಟ, ತುಂಬಾ ಒಳ್ಳೆ ಮನಸು ನಿಮ್ಮದು ಎಂದು ಒಂದೇ ಸಮನೆ ಹೊಗಳಿದ. ಗೆಳತಿ ಕನ್ನಡದಲ್ಲಿ ಎಷ್ಟು ಉಬ್ಬಿಸ್ತೀಯ ಬಿಡಪ್ಪ. ನಾವು ಬ್ರೆಡ್ ತಗೊಳ್ಳೋಕೆ ಬಂದ್ದಿದ್ದೀವಿ. ತಗೊಂತೀವಿ ಎಂದು ನಗುತ್ತ ನನ್ನತ್ತ ತಿರುಗಿ ಹೇಳಿದಳು. ಇಬ್ಬರು ನಕ್ಕು ಅವನತ್ತ ನೋಡುವಾಗ which state? ಎಂದು ಪ್ರಶ್ನಿಸಿದ. ಚೂರು ವಿಚಿತ್ರ ಮತ್ತು ವಿಸ್ಮಯವೆನಿಸಿತು. ಕಾರಣ ಇಲ್ಲಿಯವರು ದೇಶ ಯಾವುದು ಅಂತ ಕೇಳಿದ ಮೇಲೆ ‘which part of India?’ ‘ ಅನ್ನುವುದು ಸಾಮಾನ್ಯ. ಆದರೆ ಇವನು ನೇರ ಯಾವ ರಾಜ್ಯ ಅಂತ ಕೇಳಿದ್ದ. ನಾವಿಬ್ಬರು ಕರ್ನಾಟಕ ಎಂದಿದ್ದೇ ತಡ ಓಹ್ ಕನ್ನಡಿಗರಾ? ನಿಮ್ಮ ಮಾತು ಕೇಳಿ ಗೊತ್ತಾಯಿತು. ಆದರೂ ಕನ್ಫರ್ಮ್ ಮಾಡೋಕೆ ಕೇಳಿದೆ ಎಂದು ಕನ್ನಡದಲ್ಲೇ ಹೇಳಿದ.
ಅದೊಂಥರಾ ಕಿತ್ತೂರು ಚನ್ನಮ್ಮ ಮೂವಿಯಲ್ಲಿ ಬ್ರಿಟಿಷರು ಕನ್ನಡ ಮಾತನಾಡಿದಂತಿತ್ತು. ನಾನು ನನ್ನ ಗೆಳತಿಗೆ ಆಶ್ಚರ್ಯ, ಹಾಗೆ ಅವನನ್ನು ಆಡಿಕೊಂಡಿದ್ದಕ್ಕೆ ಸಂಕೋಚ ಅನುಭವಿಸುತ್ತಿರುವಾಗಲೇ ಅವನು ತನ್ನ ಕತೆಯನ್ನು ಒಂದೇ ಉಸಿರಿನಲ್ಲಿ ಹೇಳಿಬಿಟ್ಟ. ನಾನು ಕೆಲವು ವರ್ಷ ಮೈಸೂರಿನಲ್ಲಿದ್ದೆ. ಕನ್ನಡ ಎಷ್ಟು ಸಿಹಿಯಾದ ಭಾಷೆ, ನಿಮ್ಮ ಅಡುಗೆಗಳು, ಜೀವನ ಶೈಲಿ ಅದೆಷ್ಟು ಚಂದ. ನನಗೆ ತುಂಬಾ ಗೌರವವಿದೆ ಎಂದು ಕನ್ನಡದಲ್ಲೇ ಹೇಳಿದ್ದ. ನಾವಿಬ್ಬರೂ ಇನ್ನು ಈ ಅನುಭವ ಗುಂಗಿನಿಂದ ಹೊರ ಬಂದಿರಲಿಲ್ಲ. ನಾವು ಬ್ರೆಡ್ ತಗೊಂಡು ಆತ ಚಿಲ್ಲರೆಯನ್ನು ಕೊಡುವಾಗಲೂ ಕನ್ನಡದಲ್ಲೇ ಎಣಿಸಿ ಕೊಟ್ಟ.
ಈ ಘಟನೆ ನನ್ನೆಲ್ಲ ಸ್ನೇಹಿತರು ಸಾವಿರ ಬಾರಿಯಾದರೂ ನನ್ನ ಬಾಯಿಂದ ಕೇಳಿದ್ದಾರೆ. ಆದರೆ ನನಗೆ ಆ ದಿನ ಆದ ಖುಷಿ ಇನ್ನೂ ಮಾಸಿಲ್ಲ. ಯಾರೋ ಯುರೋಪಿಯನ್ ಕನ್ನಡ ನಾಡಿನಲ್ಲಿ ಇದ್ದ ಮಾತ್ರಕ್ಕೆ ಕನ್ನಡ ಕಲಿಯಬೇಕೆಂದೇನಿಲ್ಲ, ಮಾತನಾಡಬೇಕೆಂದಿಲ್ಲ.
ಆತನಿಗೆ ನಮ್ಮ ನಾಡು ತನ್ನದು ಎನಿಸಿರಬೇಕು, ನಮ್ಮ ನಾಡಿನ ಬೀದಿಗಳು ಮೊಗೆ ಮೊಗೆದು ಜೀವನ ಪ್ರೀತಿ ಕೊಟ್ಟಿರಬೇಕು. ಅದಕ್ಕೆ ಮೈಸೂರು ಬಿಟ್ಟು ವರ್ಷಗಳಾದರೂ ಕನ್ನಡಿಗರನ್ನು ಕಂಡು ಆತ ಅಷ್ಟು ಖುಷಿಯಾಗಿದ್ದು. ಅವನ ಒಂದು ಫೋಟೋ ಕ್ಲಿಕ್ ಮಾಡಲು ಸಾಧ್ಯವಾಗಲಿಲ್ಲ ಅನ್ನೋ ಒಂದು ಕಸಿವಿಸಿ ಆ ದಿನ ಉಳಿದು ಹೋಗಿತ್ತು. ಮರುದಿನ ಅದಕ್ಕಾಗಿ ಅಲ್ಲಿ ಹೋದರೂಆತ ಇರಲಿಲ್ಲ. ಆದರೆ ಅಪರಿಚಿತ ಮುಖಗಳ ನಡುವೆ ನಮ್ಮ ನಾಡನ್ನು ಹೊಗಳಿದ ಆತನ ಚಿತ್ರ ನನ್ನ ಮನಸಿನ ಪುಟಗಳಲ್ಲಿಅಚ್ಚಾಗಿ ಹೋಗಿದೆ.
ಅಮಿತಾ ರವಿಕಿರಣ್ ಬೆಲ್ಫಾಸ್ಟ್, ನಾರ್ದನ್ ಐರ್ಲೆಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು
ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್
ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ
ಮಹಾ ತಿರುವು ; ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಟ್ಟ ಬಿಜೆಪಿ
ಸುರತ್ಕಲ್ ಸುತ್ತಮುತ್ತ 15 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಹೊಸ ಸೇರ್ಪಡೆ
ದಾಖಲೆಯ ದೂರಕ್ಕೆ ಜಾವೆಲಿನ್ ಎಸೆದ ನೀರಜ್ ಚೋಪ್ರಾ; ಹೊಸ ದಾಖಲೆ ಬರೆದ ಚಿನ್ನದ ಹುಡುಗ| Video
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಇಂದು ಇಡಿ ವಿಚಾರಣೆ
ಸುಳ್ಯ-ಸಂಪಾಜೆಯಲ್ಲಿ ಮತ್ತೆ ಕಂಪನ; ಒಂದೇ ವಾರದಲ್ಲಿ ನಾಲ್ಕನೇ ಬಾರಿ ನಡುಗಿದ ಭೂಮಿ!
ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ ಲಕ್ಷ್ಮಿ ನಾರಾಯಣ್ಗೆ ಶೋಕಾಸ್ ನೋಟಿಸ್
ಇಂಗ್ಲೆಂಡ್ ವಿರುದ್ಧ ಟಿ20 ಏಕದಿನ ಸರಣಿಗೆ ತಂಡ ಪ್ರಕಟ; ಮರಳಿದ ಶಿಖರ್ ಧವನ್