ಸಮರ ಗೆದ್ದ ಆರತಿ


Team Udayavani, May 7, 2021, 1:42 PM IST

Arathi won the battle

ನಾನು ನಿನ್ನತ್ರ ಏನೋ ಹೇಳ್ಬೇಕು….
ಹೇಳು, ಹೇಳೋಕೆ ಮೊದಲು ಸರಿಯಾಗಿ ಕೇಳಿಸ್ಕೋ. ನೀನು ಒಂದ್ಸಾರಿ ಹೇಳಿದ ಮೇಲೆ ಮುಗೀತು. ಅದನ್ನು ಹಿಂದಕ್ಕೆ ತಗೋಳ್ಳೋ ಹಾಗಿಲ್ಲ. ಹಾಗಿದ್ದರೆ ಮಾತ್ರ ಹೇಳು ನೀನು ಎಲ್ಲರಿಗಿಂತ ಯಾವಾಗಲೂ ಎರಡು ಹೆಜ್ಜೆ ಮುಂದೆ. ನಿನಗೀಗಾಲೇ ವಿಷಯದ ವಾಸನೆ ಬಂದಂಗಿದೆ.

ನಿನಗೆಷ್ಟು ವರ್ಷ? ಐವತ್ತರ ಹತ್ತಿರ… ಹತ್ತಿರ..

ಅಕಸ್ಮಾತ್‌ ಈಗಲೂ ನೀನು ಹೆದರಿದ್ರೆ, ಜನರಿಗೆ ಅಂಜಿದ್ರೆ… ಅಲ್ಲಿಗೆ ಮುಗೀತು. ಮುಂದೆ ಮತ್ತೆ ಯಾವತ್ತೂ ನೀನು ಧ್ವನಿ ಎತ್ತೋಕ್ಕಾಗಲ್ಲ. ವಾಸ್ತವ ಅಂದ್ರೆ ನಿನಗೆ ಅಲ್ಲ, ನಿನ್ನನ್ನು ಗೌರವದಿಂದ ಕಾಣೋ ನೂರಾರು ಜನ ಕೂಡ ಇನ್ನೊಂದು ತಲೆಮಾರಿನ ಕಾಲ ಸೋಲಿನ ಹೆದರಿಕೆಯಲ್ಲಿ ಸುಮ್ಮನಾಗಬಹುದು. ಜತೆಗೆ ಇಷ್ಟು ವರ್ಷ ಕಷ್ಟ ಪಟ್ಟು ದುಡಿದದ್ದು, ಒಳ್ಳೆಯ ಹೆಸರುಗಳಿಸಿದ್ದು ಎಲ್ಲ ನಿರ್ನಾಮ ಆಗಬಹುದು. ಹೂಂ… ಆಗ್ಲಿ ಬಿಡು. ಮೂವತ್ತು ವರ್ಷ ದುಡಿದದ್ದಕ್ಕೆ, ಜೀವನನೇ ತೇದಿದ್ದಕ್ಕೆ, ಮಾಡ್ಕೊಂಡ ಎಲ್ಲ ಸಂಧಾನಗಳಿಗೆ ಕೊನೆಗೊಂದು ಸಮಾಧಾನ, ಹೆಮ್ಮೆಯಾದ್ರೂ ಉಳಿಯಬಹುದು. ಅಕಸ್ಮಾತ್‌ ಅದೂ ಸಿಗದಿದ್ರೂ ಪ್ರಯತ್ನ ಪಟ್ಟ ತೃಪ್ತಿನಾದ್ರೂ ಇರುತ್ತೆ. ಇನ್ನೊಬ್ಬರಿಗೆ- ನಾನು ಧೈರ್ಯದಿಂದ ಏನೆಲ್ಲ ಮಾಡಿದ್ದೆ ಎಂಬುದನ್ನಾದ್ರೂ ಹೇಳಬಹುದು. ಇದುವರೆಗೆ ಪ್ರಪಂಚದ ಅನ್ಯಾಯನ್ನೆಲ್ಲ ಶೋಧಿಸಿ, ವರದಿ ಮಾಡಿ, ಬರೆದು ಹೋರಾಡಿದ್ದು ಸಾಕು.. ಈಗ ಹೋಮ್‌ ಟೈಂ.

ಹೇಳು…

ಆರತಿ ಸುಮ್ಮನೆ ಸೂಕಿಯ ಕಡೆ ನೋಡಿದಳು. ಏನು ಹೇಳಬೇಕಿತ್ತು?
ಸುಕನ್ಯಾ ಆರತಿಯ ಸೀನಿಯರ್‌. ಒಂದು ಕಾಲದಲ್ಲಿ ಆರತಿ ಸುಕನ್ಯಾಳಂತೆ ಆಗಬೇಕು ಎಂದುಕೊಂಡಿದ್ದವಳು. ಸೂಕಿ ಈಗ ಸ್ವಯಂ ನಿವೃತ್ತಿ ತಗೊಂಡು ಆ್ಯಕ್ಟಿವ್… ಆಗಿ, ಬರಹಗಾರ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಳು.

ಸುಕನ್ಯಾಳಿಗೆ ಎಲ್ಲವೂ ಗೊತ್ತು. ಮುಚ್ಚಿದ ಬಾಗಿಲಿನ ಹಿಂದಿನ ಆರತಿಯ ಇದುವರೆಗಿನ ಹೋರಾಟಕ್ಕೆಲ್ಲ ಸೂಕಿಯ ನೈತಿಕ ಬೆಂಬಲ ಇದ್ದದ್ದು ಸಹಾಯವಾಗಿತ್ತು. ಆದ್ರೆ ನನ್ನ ಮುಂದಿನ ಹೆಜ್ಜೆ ಏನಂತ ಹೇಳ್ಳೋಕೆ ಮೊದಲೇ “ಮುಂದಿಟ್ಟ ಹೆಜ್ಜೆ ಹಿಂದಿಡಬಾರದು ಎಂದು’ ಪ್ರಾಮಿಸ್‌ ಕೇಳಿ ತನ್ನನ್ನು ಕಮಿಟ್‌ ಮಾಡಿಸ್ತಿ¨ªಾಳೆ. ನನಗೂ ಅದೇ ಬೇಕಿತ್ತಲ್ಲವೇ ಅಂದುಕೊಂಡಳು ಆರತಿ. ಐ ಆ್ಯಮ್‌ ಗೋಯಿಂಗ್‌ ಪಬ್ಲಿಕ್‌ ಈ ಗುಟ್ಟನ್ನು ಸಾರ್ವಜನಿಕಗೊಳಿಸಲಿದ್ದೇನೆ.

ಸೂಕಿಯ ಮುಖದಲ್ಲಿ ಮೊದಲ ಬಾರಿಗೆ ಆಶ್ಚರ್ಯ ಅನಂತರ ಮೆಚ್ಚುಗೆ ಮೂಡಿತು. ಆರತಿಯಂತೆಯೇ ಅನ್ಯಾಯಗಳ ವಿರುದ್ಧ ಸಿಡಿದೇಳುವ ಕಿಡಿಗಳನ್ನು ಹೊತ್ತ ಸೂಕಿ ಮೀನ-ಮೇಷ ಎಣಿಸದೆ ಒಂದೇ ಮಾತಿನಲ್ಲಿ ಅಭಯ ನೀಡಿ ಬಿಟ್ಟಳು.

ಐ ವಿಲ್‌ ಸ್ಟಾಂಡ್‌ ವಿಥ್‌ ಯು.. ಆಲ್‌ ದಿ ಬೆಸ್ಟ್

ಓಯಸಿಸ್‌ನಂತಹ ಸೂಕಿಯ ಬಳಿ ಅಷ್ಟನ್ನೇ ಕೇಳಲು ಬಯಸಿ ಬಂದಿದ್ದ ಆರತಿ ನೆಮ್ಮದಿಯಿಂದ ಎದ್ದು ಹೊರಟಳು. ಈ ರಣಕಹಳೆ ಊದಿದ ಮೇಲೆ ಆರತಿ ತನ್ನದೇ ಚಕ್ರವ್ಯೂಹದ ಮಧ್ಯೆ ಸಿಲುಕುವವಳಿದ್ದಳು.ಅಲ್ಲಿಂದ ಬಿಡುಗಡೆ ಸಿಗುವುದೋ ಅಥವಾ ಅತೀ ದೊಡ್ಡ ಕಾರ್ಪೋರೆಟ್‌ ಅವಳನ್ನು ಸಣ್ಣ ಹುಳುವೆಂದು ಹೊಸಕಿ ಹಾಕವಂತೆ ಮುಗಿಸಿಬಿಡುತ್ತದೆಯೋ ಎನ್ನುವ ಬಗ್ಗೆ ಆರತಿಗೆ ನಿಖರತೆಯಿರಲಿಲ್ಲ.

ಮಲ್ಟಿ ಮಿಲಿಯನ್‌ ಡಾಲರ್‌ ಕಾರ್ಪೋರೆಟ್‌ನ ಎದುರು ಕೇವಲ ಒಬ್ಬ ಉದ್ಯೋಗಿಯಾಗಿದ್ದ ಆರತಿ ಕೋರ್ಟ್‌ ಕಟ್ಟೆ ಹತ್ತಿದ್ದಳು. ಅವರ ಬಳಿ ಪ್ರಪಂಚದಾದ್ಯಂತ ಮೂರು ಸಾವಿರ ಜನರಾದರೂ ಕೆಲಸ ಮಾಡುತ್ತಿದ್ದರು. ಅವರಲ್ಲಿ ಅರ್ಧ ಜನ ಮಹಿಳೆಯರೇ ಇದ್ದರು. ಮಾಧ್ಯಮ ಜಗತ್ತಿನ ಎಲ್ಲ ಕ್ಷೇತ್ರದಲ್ಲೂ ದುಡಿಯುತ್ತಿದ್ದರು.

ವಿಚಾರ ಗೊತ್ತಿದ್ದರೂ ಯಾರೊಬ್ಬರೂ ಯಾಕೆ ಉಸಿರೆತ್ತಿಲ್ಲ? ಸಂಸ್ಥೆಯ ವಿರುದ್ಧ ಹೋರಾಡಿ ಗೆಲ್ಲಲು ಸಾಧ್ಯವೇ ಇಲ್ಲ ಎನ್ನುವ ಕಾರಣವೇ ಇರಬೇಕು ಅಥವಾ ನೂರಾರು ಜನ ಸುಮ್ಮನಿರುವಾಗ ತಾವೊಬ್ಬರು ಮಾತ್ರ ಯಾಕೆ ಕೆಟ್ಟವರಾಗಬೇಕೆಂಬ ಭಯವಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ “ಕೆಲಸ ಹೋದರೆ’ ಎನ್ನುವ ಆತಂಕ ! ಆರತಿ ತನ್ನ ಬದುಕನ್ನು ಒಮ್ಮೆ ನಿರುಕಿಸಿದಳು.

ಜರ್ನಲಿಸಂ ಮತ್ತು ಸಮೂಹ ಸಂವಹನ ಕ್ಷೇತ್ರದಲ್ಲಿ ಮೊದಲ ರ್‍ಯಾಂಕ್‌ ಪಡೆದವಳು. ಬ್ರಾಡ್‌ ಕಾಸ್ಟಿಂಗ್‌ ವಿಚಾರದಲ್ಲಿ ದೈತ್ಯ ಸಂಸ್ಥೆಯಾಗಿದ್ದ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ತನ್ನೆಲ್ಲ ಸೃಜನಶೀಲ ಪ್ರತಿಭೆಯನ್ನು ದುಡಿಮೆಗಿಳಿಸಿ ಮೂರು ದಶಕಗಳ ಕಾಲ ದುಡಿದಿದ್ದಳು. ಅವಳ ಬಹುತೇಕ ಸಹೋದ್ಯೋಗಿಗಳಿಗಿಂತ ಹೆಚ್ಚು ಕೊಡುಗೆಗಳನ್ನು ನೀಡಿದ್ದಳು. ತಾನು ಕೆಲಸ ಮಾಡುತ್ತಿದ್ದ ಕಂಪೆನಿ ಮತ್ತಷ್ಟು ಬೆಳೆಯಲು ತನ್ನ ಬೆವರನ್ನು ಸುರಿಸಿದ್ದಳು. ಆ ಚಕ್ಕರಿನಲ್ಲಿ ತನ್ನ ವೈಯಕ್ತಿಕ ಜೀವನ, ಸಾಂಗತ್ಯ, ತಾಯ್ತನವನ್ನು, ಹಾಲಿಡೇಗಳನ್ನು ಬಹಳಷ್ಟು ಮಟ್ಟಿಗೆ ಬಲಿಕೊಟ್ಟಿದ್ದಳು.

ಹಲವೆಡೆ ಓಡಾಡಿ ವರದಿ ಮಾಡುವುದು, ನ್ಯೂಸ್‌ ಓದುವುದು, ಸಂದರ್ಶನಗಳನ್ನು ನಡೆಸುವುದು, ಇನ್ವೆಸ್ಟಿಗೇಟಿವ್‌ ರಿಪೋರ್ಟ್‌ ತಯಾರಿಸುವುದು ಮಾತ್ರವಲ್ಲದೆ ಪ್ರಪಂಚದ ಹಲವು ಯುದ್ಧ ಭೂಮಿಗಳಿಗೆ ಭೇಟಿಕೊಟ್ಟು ವಾರ್‌ ಜರ್ನಲಿಸಂನ ಸೀನಿಯರ್‌ ರಿಪೋರ್ಟರ್‌ ಆಗಿಯೂ ಕೆಲಸ ಮಾಡಿದ್ದಳು. ತೆರೆಯ ಹಿಂದೆ ಹಲವು ಹೊಸ ಕಾರ್ಯಕ್ರಮಗಳಿಗೆ ರೂಪುರೇಷೆ ಬರೆದಿದ್ದಳು. ಕೆಲವರು ಅವಳ ಐಡಿಯಾಗಳನ್ನು ಆರಂಭದಲ್ಲಿ ಸಂದೇಹಿಸಿದರೂ ಅವು ಸೂಪರ್‌ ಹಿಟ್‌ ಆದಾಗ ಬಾಯ್ತುಂಬ ಹೊಗಳಿದ್ದರು. ಮಾಧ್ಯಮ ರಂಗದ ಗಟ್ಟಿಗಿತ್ತಿ ಎನ್ನಿಸಿ ಅವಳ ಪಾಪ್ಯುಲಾರಿಟಿಯೂ ಬೆಳೆದಿತ್ತು.

ಕನಸು, ಪ್ರತಿಭೆ, ಪ್ರಯತ್ನ, ಅವಿರತ ದುಡಿಮೆಗಳಿಂದ ಅವಳ ಹೆಸರು ಉತ್ತುಂಗಕ್ಕೇರಿತ್ತು. ಅದಕ್ಕೆ ತಕ್ಕಂತೆ ನಿಧಾನವಾಗಿ ಸಂಬಳವೂ ಹೆಚ್ಚಿದ್ದರಿಂದ ಸಿಟಿಯಲ್ಲಿ ಸುಖವಾಗಿ ಬದುಕಲು ಮತ್ತು ಮಕ್ಕಳನ್ನು ಓದಿಸಲು ಸಾಧ್ಯವಾಗಿತ್ತು. ವರ್ಷಗಳು ಉರುಳಿದಂತೆ ಮಾಧ್ಯಮ ರಂಗದಲ್ಲಿ ಹೆಸರುಗಳಿಸಬೇಕು ಎನ್ನುವ ಹೊಸ ತಲೆಮಾರಿನ ಹಲವರಿಗೆ ಸ್ಫೂರ್ತಿಯೂ ಆದಳು.

ಆರತಿ ಜೂನಿಯರ್‌ ಆಗಿದ್ದಾಗ ಸೀನಿಯರ್‌ ರಿಪೋರ್ಟರ್‌ ಆಗಿದ್ದ ಸುಕನ್ಯಾಳಂತೆ ಆಗಬೇಕೆಂದುಕೊಂಡಿದ್ದಳು. ಜತೆಯಲ್ಲೇ ಕೆಲಸ ಮಾಡಲು ಶುರು ಮಾಡಿದ ಅನಂತರ ಇಬ್ಬರೂ ವಯಸ್ಸಿನ ಅಂತರದ ವ್ಯತ್ಯಾಸವಿಲ್ಲದೆ ಆಪ್ತ ಗೆಳತಿಯರಾಗಿದ್ದರು. ಸುಕನ್ಯಾ ರಿಟೈರ್‌ ಆದ ಅನಂತರವೂ ಆರತಿ ಅವಳನ್ನು ತನ್ನ ಮಾರ್ಗದರ್ಶಿ ಮಾಡಿಕೊಂಡಿದ್ದಳು. ಸುಕನ್ಯಾ ತನ್ನ ಕಾಲದಲ್ಲಿ ಮಾಡಲಾಗದ ಹಲವು ಕೆಲಸಗಳನ್ನು ಆರತಿ ತನ್ನ ಕಾಲದಲ್ಲಿ ಮಾಡಿದ್ದಳು, ಮಾಡುವವಳಿದ್ದಳು. ಆದರೆ ಕಾಲ ಸುಕನ್ಯಾಳಿಗಿಲ್ಲದ ಹಲವು ಬದಲಾವಣೆಗಳನ್ನು ಆರತಿಯ ಪಾಲಿಗೆ ಒದಗಿಸಿತ್ತು. ಮಾಹಿತಿ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲ ತಾಣಗಳು ಮಾಧ್ಯಮ ರಂಗಗಳಿಗೆ ಹಲವು ಹೊಸ ರೂಪಗಳನ್ನು ನೀಡಿದ್ದವು. ಜಗತ್ತೇ ಒಂದು ಪುಟ್ಟ ಮನೆ ಎನ್ನುವಂತೆ ವಿಚಾರಗಳು ಕ್ಷಣಾರ್ಧದಲ್ಲಿ ವಿನಿಮಯಗೊಳ್ಳುತ್ತಿದ್ದವು.

ತನ್ನ ಈ ಹೋರಾಟದಲ್ಲಿ ಆರತಿ ಗುರಿ ತಲುಪುವಳ್ಳೋ, ಮುಳುಗುವಳ್ಳೋ ಅವಳಿಗೆ ತಿಳಿದಿರಲಿಲ್ಲ. ಎರಡೂ ಬಗೆಯ ಫ‌ಲಿತಾಂಶವನ್ನು ಎದುರಿಸಲು ಆರತಿ ತಯಾರಾಗುತ್ತಿದ್ದಳು. ಮರಕ್ಕಿಂತ ಮರ ದೊಡ್ಡದು ಎನ್ನುವಂತೆ ಅವಳ ಕ್ಷೇತ್ರದಲ್ಲೂ ನೂರಾರು ದಿಗ್ಗಜರಿದ್ದರು ಎನ್ನುವುದನ್ನು ಮರೆಯದೆ, ಅತ್ಯಂತ ಗೌರವದಿಂದ ನಡೆದುಕೊಳ್ಳುತ್ತಿದ್ದ ಆರತಿಯ ಮನಃಸ್ವಾಸ್ಥ್ಯ ಹಾರಿಹೋದದ್ದೇ ಇತ್ತೀಚೆಗಿನ ಐದು ವರ್ಷಗಳಿಂದ. ಇವೆಲ್ಲ ಶುರುವಾದ ದಿನ ಅವಳಿಗಿನ್ನೂ ಚೆನ್ನಾಗಿ ನೆನಪಿದೆ.

ಗಡಿಯಲ್ಲಿ ನಡೆಯುತ್ತಿದ್ದ ಯುದ್ಧದ ಕುರಿತು ಅಲ್ಲಿ ಹೋಗಿ ವರದಿ ಮಾಡಿ, ಬಹಳಷ್ಟು ಸಣ್ಣ- ಪುಟ್ಟ ಪರ್ಯಾಯ ಕಾರ್ಯಕ್ರಮಗಳಿಗೆ ಮಾಹಿತಿ ಸಂಗ್ರಹಿಸಿ ಅವತ್ತು ರಾಜಧಾನಿಗೆ ಹಿಂತಿರುಗಿದ್ದಳು. ಅವಳ ಕೆಲಸದ ಲೈನ್‌ನಲ್ಲಿ ಸತತ ಪ್ರಯಾಣ ಮತ್ತು ಕೆಲಸಕ್ಕೆ ಒಗ್ಗಿಕೊಂಡಿದ್ದ ಆರತಿಗೆ ಇತ್ತೀಚೆಗೆ ವಯಸ್ಸಿನ ಕಾರಣ ಜರ್ಜರಿತವಾಗುತ್ತಿದ್ದ ದೇಹ ದೂರು ಹೇಳುತ್ತಿತ್ತು.

ಕಾರ್ಯಕ್ರಮವೊಂದರ ರೆಕಾರ್ಡಿಂಗ್‌ ಮುಗಿಸಿ, ಮೇಕಪ್‌ನ ಮುಖವನ್ನು ಶುದ್ಧವಾಗಿ ತೊಳೆದು ಉಸ್ಸಪ್ಪಾ ಎಂದು ಕ್ಯಾಂಟೀನ್‌ಗೆ ಬಂದ ಆರತಿಗೆ ಅಲ್ಲೇ ಇದ್ದ ತನ್ನದೇ ವಯಸ್ಸಿನ ಮತ್ತೂಬ್ಬ ಪ್ರಸಿದ್ಧ ವರದಿಗಾರ ಮೈಕ್‌ ಕಣ್ಣಿಗೆ ಬಿದ್ದ. ಅವನೊಡನೆ ಕಾಫಿ ಹೀರಲು ಜತೆಯಾದಳು. ಅವನೂ ಇವಳಂತೆಯೇ ಟಾಪ್‌ ಲೀಸ್ಟ್ ನಲ್ಲಿದ್ದ ಜರ್ನಲಿಸ್ಟ್ – ರಿಪೋರ್ಟರ್‌ ಮತ್ತು ಹಲವು ಕಾರ್ಯಕ್ರಮಗಳ ಸಂಪಾದಕನಾಗಿದ್ದವನು.ಅದೂ ಇದೂ ಮಾತಾಡುತ್ತ ವಯಸ್ಸಿನ ಬಗ್ಗೆಯೂ ಮಾತು ತಿರುಗಿತ್ತು. ಮೈಕ್‌ ಆರತಿಯ ಮಾತನ್ನು ಒಪ್ಪುತ್ತ, ಈಗಲೂ ಮೊದಲಿನಂತೆ ಕೆಲಸ ಮಾಡುವುದು ದುಸ್ತರವಾಗುತ್ತಿದೆ. ಕೆಲವೊಮ್ಮೆ ಬರೇ ಒಂದು ಲಕ್ಷಕ್ಕಾಗಿ ನೂರಾರು ಗಂಟೆಗಳನ್ನು ವ್ಯಯಿಸಿ ಕೇವಲ ಒಂದು ಗಂಟೆಯ ಕಾರ್ಯಕ್ರಮ ಬಿತ್ತರಿಸುವಾಗ ತನಗೂ ಅತೀ ಬೇಸರವಾಗುತ್ತದೆ ಎಂದಿದ್ದ.

ಆರತಿಯ ಕಾಫಿ- ಕಪ್ಪು ನಿಯಂತ್ರಣ ತಪ್ಪಿ ಟೇಬಲ್ಲನ್ನು ಗುದ್ದಿತ್ತು. ಗರಬಡಿದು ಕುಳಿತ ಆರತಿಯ ಬಾಯಿಂದ ಒಂದು ಮಾತೂ ಹೊರಡಲಿಲ್ಲ. ಸಾವರಿಸಿಕೊಂಡು ಆ ಭೇಟಿಯನ್ನು ಮುಗಿಸಿ ಹೊರಬಂದಿದ್ದಳು.ಆದರೆ, ಮೈಕ್‌ನ ಮಾತು ಆರತಿಯನ್ನು ತಲೆಯನ್ನು ಹುಳದಂತೆ ಕೊರೆಯಲು ಪ್ರಾರಂಭಿಸಿತು. ಒಂದು ಗಂಟೆಯ ಕಾರ್ಯಕ್ರಮ ರೂಪಿಸಲು ಅವರು ಕೆಲಸ ಮಾಡುತ್ತಿದ್ದ ಸಂಸ್ಥೆ ಮೈಕ್‌ಗೆ ಲಕ್ಷ ರೂಪಾಯಿ ಸಂಭಾವನೆ ಕೊಡುತ್ತಿತ್ತು. ಆದರೆ ಅಂಥದ್ದೇ ಕಾರ್ಯಕ್ರಮವನ್ನು ರೂಪಿಸಲು ಆರತಿಗೆ ಸಿಗುತ್ತಿದ್ದದ್ದು ಖರ್ಚು ಕಳೆದು ಕೇವಲ ಇಪ್ಪತ್ತು ಸಾವಿರ ರೂ. ಮಾತ್ರ. ಅಂದರೆ ಶೇ.80ರಷ್ಟು ವ್ಯತ್ಯಾಸ!ಅವರಿಬ್ಬರ ಕೆಲಸಗಳ ನಡುವೆ ಇದ್ದ ವ್ಯತ್ಯಾಸ ಏನು ಎಂಬುದು ಅವಳಿಗೆ ಅರ್ಥವಾಗಲಿಲ್ಲ. ಯಾರ ಬಳಿಯೂ ತಟ್ಟೆಂದು ಅವಳು ಯುದ್ಧಕ್ಕೆ ಹೋಗಲಿಲ್ಲ.

ತನ್ನ ಇನ್ವೆಸ್ಟಿಗೇಟಿವ್‌ ಜರ್ನಲಿಸಂ ಅನ್ನು ಬಳಸಿ ತನ್ನ ಸಂಸ್ಥೆಯ ತಳವನ್ನೇ ಶೋಧಿಸತೊಡಗಿದಳು. ಅವಳು ಕಂಡು ಹಿಡಿದ ವಿಚಾರಗಳು ಅವಳಿಗೆ ಇನ್ನಿಲ್ಲದಂತೆ ಶಾಕ್‌ ನೀಡಿ ಅವಳ ರಕ್ತ ಕುದಿಯುವಂತೆ ಮಾಡಿತ್ತು.ಒಂದೇ ಕೆಲಸವನ್ನು ಮಾಡುತ್ತಿದ್ದರೂ ಪುರುಷ ಸಹೋದ್ಯೋಗಿಗಳ ದುಡಿಮೆ ದುಪ್ಪಟ್ಟಿತ್ತು. ಅದೇ ಕೆಲಸವನ್ನು ನಿರ್ವಹಿಸುವ ಹೆಂಗಸರ ಗಳಿಕೆ ಅರ್ಧದಷ್ಟೂ ಇರಲಿಲ್ಲ. ಕೆಲವು ವಿಷಯಗಳಲ್ಲಿ ಶೇ. 85ರಷ್ಟು ವ್ಯತ್ಯಾಸವಿತ್ತು!

ಒಂದೇ ರೀತಿಯ ಕೆಲಸವಾಗಿದ್ದು ಕಾರ್ಯಕ್ರಮದ ರೇಟಿಂಗ್‌, ಪಾಪ್ಯುಲಾರಿಟಿ ಒಂದೇ ಆಗಿದ್ದ ಶೋಗಳಲ್ಲಿ ಕೂಡ ಹೆಂಗಸರ ಸಂಬಳ ಗಂಡಸರಿಗಿಂತ ತೀರಾ ಕಡಿಮೆಯಾಗಿತ್ತು. ಈ ವಿಚಾರಗಳನ್ನು ಸಾಕ್ಷಿ ಸಮೇತ ಕಲೆ ಹಾಕಲು ಆರತಿಗೆ ಒಂದು ವರ್ಷ ಬೇಕಾಯಿತು. ಅದನ್ನು ಕೆಲಸದಲ್ಲಿದ್ದ ಇನ್ಯಾರ ಬಳಿಯೂ ಚರ್ಚಿಸುವುದು ಅಪಾಯಕಾರಿಯಾಗಿತ್ತು.ಜಗತ್ತಿನ ವಿಪರ್ಯಾಸಗಳಲ್ಲಿ ಗಂಡು- ಹೆಣ್ಣಿನ ನಡುವಿನ ತಾರತಮ್ಯವೂ ಒಂದು ಎಂಬ ಅರಿವಿದ್ದರೂ 21ನೇ ಶತಮಾನದಲ್ಲಿ, ಅದರಲ್ಲೂ ತಾನು ಕೆಲಸ ಮಾಡುತ್ತಿದ್ದ ಆತ್ಯಾಧುನಿಕ ಪ್ರತಿಷ್ಠಿತ ಸಂಸ್ಥೆಯಲ್ಲೂ ಇಂತಹ ಅನ್ಯಾಯ ಅವಳಿಂದ ಸಹಿಸಲಾಗಲಿಲ್ಲ. ನಿಧಾನಕ್ಕೆ ಕಾನೂನುಬದ್ಧವಾಗಿ ತನ್ನ ಹೋರಾಟವನ್ನು ಆರಂಭಿಸಿದ್ದಳು.ಮೊದಲು ಈ ಬಗ್ಗೆ ಲಿಖೀತ ರೂಪದಲ್ಲಿ ದೂರುಕೊಟ್ಟಳು. ಕೆಲಸದ ಬೇಡಿಕೆಗಳು ಒಂದೇ ಆಗಿದ್ದು, ತಾನು ಅವುಗಳನ್ನು ಬೇರೆಯವರಷ್ಟೇ ಕ್ಷಮತೆಯಿಂದ ನಿರ್ವಹಿಸಿದರೂ ಶೇ. 80ರಷ್ಟು ಕಡಿಮೆ ಸಂಬಳ ಪಡೆಯುವ ಬಗ್ಗೆ ಕಾರಣ ಕೇಳಿದಳು.

ಸಂಸ್ಥೆ ಇದನ್ನು ಉಪೇಕ್ಷಿಸಿತು. ಮುಖತಃ ಭೇಟಿಯ ಅವಕಾಶಗಳನ್ನು ನೀಡಲು ನಿರಾಕರಿಸಿತು. ಸಂಧಾನದ ಯಾವುದೇ ಹಾದಿಗಳು ಇಲ್ಲವಾದಾಗ ಆರತಿ ವಿಧಿಯಿಲ್ಲದೆ ಕೋರ್ಟ್‌ನ ಕಟಕಟೆ ಹತ್ತಿದ್ದಳು. ಆಶ್ಚರ್ಯವೆಂದರೆ ಆಗಲೂ ಕಾರ್ಪೋರೆಟ್‌ ನಿರ್ದಾಕ್ಷಿಣ್ಯವಾಗಿ ನಡೆದುಕೊಂಡಿತ್ತು.

ಈ ತಣ್ಣಗಿನ ಸಮರ ನಾಲ್ಕು ವರ್ಷಗಳ ಕಾಲ ಕೋರ್ಟ್‌ನಲ್ಲಿ ತೆವಳಿದ್ದರೂ ಅವಳಿಗೆ ಪರಿಹಾರ ಸಿಗಲಿಲ್ಲ. ಇದರಿಂದ ಸಂಸ್ಥೆಗೆ ಕಳಂಕ ಬರುತ್ತದೆ ಎಂದು ಮೊದಲು ಅವಳನ್ನು ಕೆಲಸದಿಂದ ವಜಾ ಮಾಡಿ, ಅನಂತರ ಕೋರ್ಟ್‌ನಲ್ಲಿ ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದರಿಂದ ಆರತಿಯೂ ಸಹನೆಯಿಂದ ನ್ಯಾಯಕ್ಕಾಗಿ ಕಾದು ಕುಳಿತಳು.ಅನಂತರ ಕಾರ್ಪೋರೆಟ್‌ ಲಾಯರುಗಳು ಅವಳಿಗೆ ಒಂದಷ್ಟು ದುಡ್ಡು ಕೊಟ್ಟು ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಿದರೂ ಅವಳು ಒಪ್ಪಲಿಲ್ಲ. ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಲಿಂಗ ಬೇಧದ ತಾರತಮ್ಯದ ವಿರುದ್ಧ ಹೋರಾಡುವುದೇ ಈಗವಳ ಬದುಕಿನ ಹೊಸ ಕೆಲಸವಾಗಿ ಹೋಯಿತು.

ದೈತ್ಯ ಸಂಸ್ಥೆಯೊಂದರ ಎದುರು ಗುಬ್ಬಚ್ಚಿಯಂತೆ ನಡೆಸಿದ ಈ ಹೋರಾಟದಿಂದ ಏನೂ ಸುಧಾರಿಸಲಿಲ್ಲ. ಅವರಿವರು ಆರತಿಯ ಬಗ್ಗೆ ಮಾತಾಡುವುದು ಜಾಸ್ತಿಯಾಯಿತು. ಮೇಲಿನವರು ಅವಳನ್ನು ಉಪೇಕ್ಷೆಯಿಂದ ಕಾಣುವುದು ಹೆಚ್ಚಾಯಿತು. ಹೀಗಾಗಿ ಆರತಿ, ತನ್ನ ಕೊನೆಯ ಆಸ್ತ್ರವನ್ನು ಪ್ರಯೋಗಿಸಲು ಮುಂದಾದಳು. ತನ್ನ ಹೋರಾಟವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲು ತಯಾರಾಗಿ ಬಿಟ್ಟಿದ್ದಳು.ಇಷ್ಟು ವರ್ಷಗಳ ತನ್ನ ಕೆಲಸದಲ್ಲಿ ಆರತಿ ಹಲವು ಸಾಧಕರನ್ನು ಸಂದರ್ಶಿಸಿದ್ದಳು. ನೂರಾರು ಹೋರಾಟಗಳ ಹಲವು ಮುಖಗಳನ್ನು ಅರೆದು ಕುಡಿದಿದ್ದಳು. ಅವುಗಳ ಹಿಂದಿನ ವ್ಯಕ್ತ- ಅವ್ಯಕ್ತ ಮುಖಗಳನ್ನು ಅನಾವರಣಗೊಳಿಸಿದ್ದಳು.

ಬಹುತೇಕರು ಅವರ ವೈಯಕ್ತಿಕ ಹೋರಾಟ ಶುರು ಮಾಡುತ್ತಿದ್ದುದೇ ಐವತ್ತರ ಆಸುಪಾಸಿನಲ್ಲಿ. ಅಂದರೆ, ಅಷ್ಟರಲ್ಲಿ ಒಂದಿಷ್ಟು ಸಂಸಾರದಲ್ಲಿ ಭದ್ರತೆ ಗಳಿಸಿರಬೇಕು, ಮಕ್ಕಳು ಒಂದು ಹಂತಕ್ಕೆ ಬಂದಿರಬೇಕು ಮತ್ತು ಹೋರಾಡಲು ಶಕ್ತಿ ಉಳಿದಿರಬೇಕಿತ್ತು. ಹೋರಾಟದ ಫ‌ಲ ಅವರ ಮುಂದಿನ ಬದುಕನ್ನು ಹಸನು ಮಾಡುವಂತಿದ್ದರೆ ಮಾತ್ರ ಅದಕ್ಕೆ ಅರ್ಥವಿತ್ತು. ಇಲ್ಲದಿದ್ದರೆ ಅವರು ಹೋರಾಟಕ್ಕೆ ಇಳಿಯುವ ಸಾಧ್ಯತೆಯೇ ಬಹಳ ಕಡಿಮೆಯಿತ್ತು. ತಮ್ಮದೇ ದುಡಿಮೆಯಲ್ಲದೆ ಬೇರೆ ಆದಾಯ ಮೂಲವಿದ್ದರಷ್ಟೇ ಜನರಿಗೆ ಹುಂಬು ಧೈರ್ಯವಿರುತ್ತಿದ್ದುದು. ತಾನೂ ಅವರಂತೆಯೇ ಎನ್ನುವುದು ಅವಳಿಗೆ ಮೊದಲ ಬಾರಿಗೆ ಅರಿವಿಗೆ ಬಂದಿತ್ತು.
ಅವಳ ಕೆಲಸದಲ್ಲಿ ಭಾವನೆಗಳಿಗಿಂತ ಬುದ್ಧಿವಂತಿಕೆಯೇ ಪ್ರಧಾನವಾಗಬೇಕಿತ್ತು. ತನ್ನದೇ ಆದ ಭಾವ ಸಂಘರ್ಷಣೆಗಳನ್ನೆಲ್ಲ ಕಟ್ಟಿಟ್ಟು, ಸ್ಥಿತ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕಿತ್ತು. ಪ್ರತಿಸ್ಪರ್ಧಿಗಳಿಂದ ಸತತವಾಗಿ ಕಲಿಯಬೇಕಿತ್ತು. ಅದು ನಾಚಿಕೆಯ ವಿಚಾರವಾಗಿರಲಿಲ್ಲ. ಅಸ್ತಿತ್ವವನ್ನು ಜೀವಂತವಾಗಿಟ್ಟುಕೊಳ್ಳಲು ಹೊಸ, ಹೊಸ ತಂತ್ರಗಳನ್ನು ಬಳಸುತ್ತಿರಬೇಕಿತ್ತು.

ಜಗತ್ತಿಗೆ ಜ್ಞಾನವನ್ನು ಹರಡುವ ನೈತಿಕ ಜವಾಬ್ದಾರಿಯನ್ನು ಹೆಮ್ಮೆಯಿಂದ ಹೇಳಿಕೊಂಡು ಬದುಕುವ ಮಾಧ್ಯಮವನ್ನು ಮಣಿಸಲು ಅವಳು ಸಮರ ಸಾರಿದ್ದಳು.
ಒಬ್ಬಳೇ ಆಗಿದ್ದ ಆರತಿ ಇದ್ದಕ್ಕಿದ್ದಂತೆ ನೂರು, ಸಾವಿರ, ಲಕ್ಷವನ್ನು ದಾಟಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಪ್ರಪಂಚದ ಎಲ್ಲರ ಗಮನ ಸೆಳೆದಳು. ಅವಳ ಬೆಂಬಲಕ್ಕೆ ಹಲವಾರು ಮಂದಿ ನಿಂತರು. ಅದರ ಹಿಂದೆಯೇ ಸಂಸ್ಥೆಯ ಒಪ್ಪಂದವನ್ನು ಮುರಿದದ್ದಕ್ಕಾಗಿ ಆಕೆಯನ್ನು ಕೆಲಸದಿಂದ ವಜಾ ಮಾಡಲಾಯಿತು.

ಈಗ ಆರತಿಗೆ ಕೆಲಸದ ಒತ್ತಡವಿಲ್ಲದೆ ತನ್ನ ದಿನವನ್ನು ಪೂರ್ತಿಯಾಗಿ ಸಮಾನ ಕೆಲಸ, ಸಮಾನ ಸಂಬಳದ ಹೋರಾಟಕ್ಕೆ ಮುಡಿಪಾಗಿಟ್ಟಳು. ಸಂವಿಧಾನದ ಕಡತದಲ್ಲಿ ಸತ್ತಂತೆ ಮಲಗಿ ವಿರಮಿಸಿದ್ದ “ಸಮಾನ ಕೆಲಸಕ್ಕೆ ಸಮಾನ ವೇತನ’ ಎಂಬ ಕಾಯಿದೆ ಮೈ ಮೇಲಿದ್ದ ಧೂಳನ್ನು ಕೊಡವಿ ಮತ್ತೆ ಜೀವ ಪಡೆದುಕೊಂಡಿತು. ಈ ಹೋರಾಟದಲ್ಲಿ ದೊರೆಯುವ ನ್ಯಾಯ ಐತಹಾಸಿಕ ನಿರ್ಣಯವಾಗಬಲ್ಲದೆಂಬ ಟಾಂ, ಟಾಂ ಹಬ್ಬಿದಂತೆ ನ್ಯಾಯಾಲಯದ ಮೇಲೂ ಒತ್ತಡ ಹೆಚ್ಚಾಯಿತು. ಇವೆಲ್ಲ ಹೀಗಾಗಿ ನ್ಯಾಯಾಧೀಶರು ಜಾಗರೂಕರಾದರು. ನ್ಯಾಯಾಲಯ ಆರತಿ ಮತ್ತು ಮೈಕ್‌ ಸಂಬಳದ ನಡುವಿನ ವ್ಯತ್ಯಾಸಕ್ಕೆ ಸಂಸ್ಥೆಯ ಬಳಿ ಕಾರಣ ಕೇಳಿತು. ಆಯಾ ವ್ಯಕ್ತಿಯ ವರ್ಚಸ್ಸಿಗೆ ತಕ್ಕಂತೆ ನಾವು ಸಂಬಳ ನೀಡುತ್ತೇವೆ. ಇದರಲ್ಲಿ ಲಿಂಗಭೇದವಿಲ್ಲ ಎಂಬ ಸಂಸ್ಥೆಯ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. ನಿಮ್ಮ ವಾದಕ್ಕೆ ತಕ್ಕ ರುಜುವಾತು ಸಲ್ಲಿಸಿ ಎಂಬ ಬೇಡಿಕೆಯನ್ನು ಮುಂದಿಟ್ಟಿತು.

ಆರತಿಗೆ ಸಮಾನ ಸಂಬಳ ಕೊಟ್ಟರೆ ತಮ್ಮ ಸಂಸ್ಥೆಯ ಇನ್ನೂ ಹಲವು ಮಹಿಳಾ ಉದ್ಯೋಗಿಗಳು ಇದೇ ದಾರಿ ಅನುಸರಿಸಿ ಆಗ್ರಹಿಸುತ್ತಾರೆ ಎಂಬ ವಿಚಾರ ಗೊತ್ತಿದ್ದರೂ ಸಂಸ್ಥೆಗೆ ನ್ಯಾಯಾಲಯ ಒಪ್ಪುವಂಥ ರುಜುವಾತು ನೀಡುವುದು ಅಸಾಧ್ಯವಾಯಿತು. ಆರತಿ ನೀಡಿದ ಸಾಕ್ಷಿ ಮತ್ತು ಆಧಾರಗಳು ಆ ಮಟ್ಟಿಗೆ ಬಲವಾಗಿದ್ದವು.

ಕೊನೆಗೆ ದೈತ್ಯ ಕಾರ್ಪೋರೆಟ್‌ ಸಂಸ್ಥೆ ಆರತಿಯ ಬೇಡಿಕೆಯಂತೆ ಕಳೆದ ಹಲವು ವರ್ಷಗಳ ಸಂಬಳಗಳ ವ್ಯತ್ಯಾಸವನ್ನು ತುಂಬಿಕೊಡುವುದಾಗಿ ಒಪ್ಪಿಕೊಂಡಿತು. ಅಲ್ಲದೆ ಅವಳ ಕೆಲಸವನ್ನು ಅವಳಿಗೆ ಮರಳಿಸಿತು.ಆರತಿಯ ಹೋರಾಟ ತಿಳಿದವರಿಗೆಲ್ಲ ಈ ವಿಚಾರ ಮಿಂಚಿನ ವೇಗದಲ್ಲಿ ತಲುಪಿತು. ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಸುಕನ್ಯಾ ಸತತವಾಗಿ ಆರತಿಯ ಹಿಂದೆ ನಿಂತು ಈ ವಿಚಾರಕ್ಕೆ ಎಲ್ಲೆಡೆ ಮನ್ನಣೆ ಸಿಗುವಂತೆ ಮತ್ತೆ ಮತ್ತೆ ಲೇಖನಗಳನ್ನು ಬರೆದಿದ್ದಳು. ಆರತಿಯ ಹೋರಾಟದ ಫ‌ಲವಾಗಿ ಸಂಸ್ಥೆಯ 700ಕ್ಕೂ ಹೆಚ್ಚು ಮಹಿಳೆಯರು ತಮ್ಮ ವೇತನದಲ್ಲಿ ಹೆಚ್ಚಳವನ್ನು ಪಡೆದುಕೊಂಡರು. ಒಟ್ಟಿನಲ್ಲಿ ಆರತಿ ಅವರೆಲ್ಲರಿಗೂ ಪ್ರೇರಣೆಯಾದ ಶಕ್ತಿಯಾಗಿದ್ದಳು.

(ಬಿ.ಬಿ.ಸಿ. ಸಂಸ್ಥೆಯ ವಿರುದ್ಧ 2020ರ ಜನವರಿಯಲ್ಲಿ ಸಮಾನ ಸಂಬಳದ ಬಗ್ಗೆ ಹೋರಾಡಿ ಗೆದ್ದ ಸಮೀರ ಅಹಮದ್‌ ಬದುಕಿನಿಂದ ಪ್ರೇರಿತಳಾಗಿ ಬರೆದ ಕಥೆ. ಆದರೆ ಎಲ್ಲ ಪಾತ್ರಗಳು, ಮಾಹಿತಿಗಳು ಮತ್ತು ಸಂದರ್ಭಗಳು ಕಲ್ಪನೆ ಮಾತ್ರ. ನಿಜ ಘಟನೆಗೂ ಈ ಕಥೆಗೂ ಸಂಬಂಧವಿಲ್ಲ. )

ಡಾ| ಪ್ರೇಮಲತಾ ಬಿ. ಲಂಡನ್‌

ಟಾಪ್ ನ್ಯೂಸ್

ಉಡುಪಿ : ಮನೆಗೆ ನುಗ್ಗಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಉಡುಪಿ : ಮನೆಗೆ ನುಗ್ಗಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಸುಬ್ರಹ್ಮಣ್ಯ : ವ್ಯಕ್ತಿಗೆ ಚೂರಿ ಇರಿತ; ಆರೋಪಿ ಪರಾರಿ

ಸುಬ್ರಹ್ಮಣ್ಯ : ವ್ಯಕ್ತಿಗೆ ಚೂರಿ ಇರಿತ; ಆರೋಪಿ ಪರಾರಿ

1-sa-dsd

ಅಮರನಾಥ ಯಾತ್ರೆ : ಬೆಳಗ್ಗೆ 7 ರಿಂದ ಸಂಜೆ 6 ರ ನಡುವೆ ಮಾತ್ರ ಪ್ರಯಾಣ

mamata

ಸಿಎಂ ಮಮತಾ ಬ್ಯಾನರ್ಜಿ ಮನೆಯಲ್ಲಿ ಭಾರಿ ಭದ್ರತಾ ಲೋಪ ; ತನಿಖೆ

kejriwal 2

ಉದಯಪುರ-ಅಮರಾವತಿ ಹತ್ಯೆಗಳನ್ನು ಖಂಡಿಸಿದ ದೆಹಲಿ ಸಿಎಂ ಕೇಜ್ರಿವಾಲ್

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೋದ ಯುವತಿ ನಾಪತ್ತೆ

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೋದ ಯುವತಿ ನಾಪತ್ತೆ

1-sf-s-fdf

ಪ್ರಧಾನಿ ಕಚೇರಿ ಅಧಿಕಾರಿ ಎಂದು ಡಿಸಿಗೆ ಕರೆ : ದೂರು ದಾಖಲು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದುಬಾರಿ ಈ ನಗರ : ಭಾರತದಲ್ಲಿ ಮುಂಬಯಿ ಅತೀ ವೆಚ್ಚದ ನಗರ

ದುಬಾರಿ ಈ ನಗರ : ಭಾರತದಲ್ಲಿ ಮುಂಬಯಿ ಅತೀ ವೆಚ್ಚದ ನಗರ

ಯುಎಫ್ಒ ಎಂಬ ಕೌತುಕ: ಇಂದು ವಿಶ್ವ UFO ದಿನಾಚರಣೆ

ಯುಎಫ್ಒ ಎಂಬ ಕೌತುಕ: ಇಂದು ವಿಶ್ವ UFO ದಿನಾಚರಣೆ

ಈ ದ್ರೌಪದಿ ಪಟ್ಟ ಕಷ್ಟ ಎಷ್ಟು ಗೊತ್ತೆ?

ಈ ದ್ರೌಪದಿ ಪಟ್ಟ ಕಷ್ಟ ಎಷ್ಟು ಗೊತ್ತೆ?

eirth-qauke

ಬೆಚ್ಚಿಬೀಳಿಸುವ ಭೂಕಂಪಗಳಿಗೆ ಕಾರಣವೇನು?

ಬೆಳಕು ಬೀರುವ ಕಿಟಿಕಿಗಳಾಗಿ ಸದಾ ತೆರೆದಿರಲಿ

ಬೆಳಕು ಬೀರುವ ಕಿಟಿಕಿಗಳಾಗಿ ಸದಾ ತೆರೆದಿರಲಿ

MUST WATCH

udayavani youtube

ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!

udayavani youtube

ಮದ್ರಸಾದಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

udayavani youtube

ಎಂ.ಎಸ್ ಧೋನಿಯ 17 ವರ್ಷ ಹಿಂದಿನ ದಾಖಲೆ ಮುರಿದ ರಿಷಭ್ ಪಂತ್

udayavani youtube

ಮಲ್ಪೆಯಲ್ಲಿ ಲಂಗರು ಹಾಕಿದ್ದ ದೋಣಿಯ ಅವಶೇಷ ಕಾಪು ಪರಿಸರದಲ್ಲಿ ಪತ್ತೆ… ಅಪಾರ ನಷ್ಟ

udayavani youtube

ಹುಣಸೂರು : ಆಕಸ್ಮಿಕ ಬೆಂಕಿಗೆ ಲಕ್ಷಾಂತರ ರೂಪಾಯಿ ನಷ್ಟ… ಕಂಗಾಲಾದ ಮಾಲೀಕ

ಹೊಸ ಸೇರ್ಪಡೆ

ಉಡುಪಿ : ಮನೆಗೆ ನುಗ್ಗಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಉಡುಪಿ : ಮನೆಗೆ ನುಗ್ಗಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಸುಬ್ರಹ್ಮಣ್ಯ : ವ್ಯಕ್ತಿಗೆ ಚೂರಿ ಇರಿತ; ಆರೋಪಿ ಪರಾರಿ

ಸುಬ್ರಹ್ಮಣ್ಯ : ವ್ಯಕ್ತಿಗೆ ಚೂರಿ ಇರಿತ; ಆರೋಪಿ ಪರಾರಿ

1-sa-dsd

ಅಮರನಾಥ ಯಾತ್ರೆ : ಬೆಳಗ್ಗೆ 7 ರಿಂದ ಸಂಜೆ 6 ರ ನಡುವೆ ಮಾತ್ರ ಪ್ರಯಾಣ

mamata

ಸಿಎಂ ಮಮತಾ ಬ್ಯಾನರ್ಜಿ ಮನೆಯಲ್ಲಿ ಭಾರಿ ಭದ್ರತಾ ಲೋಪ ; ತನಿಖೆ

kejriwal 2

ಉದಯಪುರ-ಅಮರಾವತಿ ಹತ್ಯೆಗಳನ್ನು ಖಂಡಿಸಿದ ದೆಹಲಿ ಸಿಎಂ ಕೇಜ್ರಿವಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.