ಅರುಣ್‌ ಜೇಟ್ಲಿ ಎಂಬ ಪ್ರೀತಿ ಪಾತ್ರ ರಾಜಕಾರಣಿ

Team Udayavani, Aug 25, 2019, 5:57 AM IST

ತಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿದವರ ಜತೆಗೂ ಜೇಟ್ಲಿ ಯಾವಾಗಲೂ ಗೌರವಯುತವಾಗಿ, ಸ್ನೇಹದಿಂದ ಮಾತಾಡುತ್ತಿದ್ದರು

ವಿರೋಧ ಪಕ್ಷಗಳನ್ನಾಗಲೀ, ಟೀಕೆಗಳನ್ನಾಗಲೀ ಮತ್ತು ಅನೇಕ ಕಾಯಿಲೆಗಳ ನಡುವೆಯೇ ಶಸ್ತ್ರ ಚಿಕಿತ್ಸೆಯ ನೋವನ್ನಾಗಲೀ…  ಹೀಗೆ ನಗುನಗುತ್ತಾ ಎದುರಿಸಿದ ಅರುಣ್‌ ಜೇಟ್ಲಿಯಂಥ ವಿಶಿಷ್ಟ ನಾಯಕ ಭಾರತದ ರಾಜ ಕಾರಣದಲ್ಲಿ ಮತ್ತೂಬ್ಬರು ಉಳಿದಿಲ್ಲ. ಈ ಪಂಜಾಬಿ ವ್ಯಕ್ತಿಯಲ್ಲಿದ್ದ ಆತ್ಮೀಯ ಗುಣ ಮತ್ತು ಸ್ನೇಹ ಪರತೆಯಿಂದಾಗಿಯೇ ಇಂದು ಅವರ ಅಗಲಿಕೆ ಅನೇಕ ಜನರಿಗೆ ಕಾಡುತ್ತಿದೆ.

ಅರುಣ್‌ ಜೇಟ್ಲಿಯವರ ನಿಧನಕ್ಕೆ ಅವರ ಪ್ರಖರ ರಾಜಕೀಯ
ವಿರೋಧಿಗಳಿಂದಲೂ ಸಾಗರೋಪಾದಿಯಲ್ಲಿ ಕಂಬನಿ ಹರಿದು ಬರುತ್ತಿರುವುದು ಇದೇ ಕಾರಣಕ್ಕಾಗಿಯೇ.

ಅರುಣ್‌ ಜೇಟ್ಲಿಯವರ ನಿಧನದೊಂದಿಗೆ ಭಾರತವು ತನ್ನ ಪ್ರೀತಿ ಪಾತ್ರ ರಾಜಕಾರಣಿಯನ್ನು ಕಳೆದುಕೊಂಡಿದೆ. ಕುಟುಂಬ ರಾಜಕಾರಣವನ್ನು ಧಿಕ್ಕರಿಸುತ್ತಾ, ತಮ್ಮ ದಿಟ್ಟತನ ಮತ್ತು ಪ್ರತಿಭೆಯಿಂದ ಎತ್ತರೆತ್ತರಕ್ಕೆ ಏರಿದ ವಿದ್ಯಾರ್ಥಿ ನಾಯಕರುಗಳ ಪ್ರತಿನಿಧಿಯಂತಿದ್ದವರು ಜೇಟ್ಲಿ.
ವಿದ್ಯಾರ್ಥಿ ಚಳವಳಿಯ ಮೂಲಕ ಮುಂಚೂಣಿಗೆ ಬಂದ ಅರುಣ್‌ ಜೇಟ್ಲಿಯವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲುವಾಸವನ್ನೂ ಅನುಭವಿಸಿದವರು. ಉದಾರೀಕರಣೋತ್ತರ ಭಾರತದಲ್ಲಿ ಅವರ ರಾಜಕೀಯ ಬೆಳವಣಿಗೆಯು ಬಿಜೆಪಿಯ ಬೆಳವಣಿಗೆಯ ಪ್ರತಿ ಫ‌ಲನದಂತಿತ್ತು. ಕಳೆದ ಒಂದು ತಿಂಗಳಲ್ಲಿ ನಡೆದ ಘಟನಾವಳಿಗಳು ನಿಜಕ್ಕೂ ಅವಾಸ್ತವಿಕ ಎನಿಸುವಂತೆ ಇವೆ. ಇದೇ ತಿಂಗಳಷ್ಟೇ ಸುಷ್ಮಾ ಸ್ವರಾಜ್‌ ಅವರೂ ನಿಧನರಾದರು.

1990ರಲ್ಲಿ ಎಲ್‌.ಕೆ. ಅಡ್ವಾಣಿಯವರು ಬೆಳೆಸಿದ ಎರಡನೇ ತಲೆಮಾರಿನ ನಾಯಕರಲ್ಲಿ ಸುಷ್ಮಾ, ಪ್ರಮೋದ್‌ ಮಹಾಜನ್‌, ಅರುಣ್‌ ಜೇಟ್ಲಿ ಪ್ರಮುಖರಾಗಿದ್ದರು. ಈಗ ಅರುಣ್‌ ಜೇಟ್ಲಿಯವರ ನಿಧನದಿಂದಾಗಿ
ಎರಡನೇ ತಲೆಮಾರಿನ ಕೊನೆಯ ಕೊಂಡಿ ಕಳಚಿದಂತಾಗಿದೆ.
ಈ ಎರಡನೇ ತಲೆಮಾರಿನ ನಾಯಕರ ರಾಜಕೀಯ ಪಯಣ ಆಡ್ವಾಣಿಯವರು ಪ್ಲಾನ್‌ ಮಾಡಿದ ರೀತಿಯಲ್ಲಿ ಸಾಗಲಿಲ್ಲ ಎನಿಸುತ್ತದೆ. ಆದರೆ ಈ ತಂಡದಲ್ಲಿ ಅರುಣ್‌ ಜೇಟ್ಲಿ ಕೇಂದ್ರ ವ್ಯಕ್ತಿಯಾಗಿಬಿಟ್ಟದ್ದು ಸತ್ಯ. ನರೇಂದ್ರ ಮೋದಿ ಎಂಬ ವ್ಯಕ್ತಿಗೆ  ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲುವ ಶಕ್ತಿಯಿದೆ ಎಂದು ಗುರುತಿಸಲು ಅತ್ತ ಪ್ರಮೋದ್‌ ಮಹಾಜನ್‌ಗಾಗಲಿ, ಇತ್ತ
ಸುಷ್ಮಾ ಸ್ವರಾಜ್‌ಗಾಗಲಿ ಸಾಧ್ಯವಾಗಿರಲಿಲ್ಲ. ಆದರೆ ಅರುಣ್‌ ಜೇಟ್ಲಿಯವರು ಈ ಸಂಗತಿಯನ್ನು ಸ್ಪಷ್ಟವಾಗಿ ಗ್ರಹಿಸಿದ್ದರು.

2001ರಲ್ಲಿ ಗುಜರಾತ್‌ ಮುಖ್ಯ ಮಂತ್ರಿ ಕೇಶುಭಾಯ್‌ ಪಟೇಲ್‌ರ ಜಾಗಕ್ಕೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರ ಮೋದಿಯನ್ನು ಮುಖ್ಯಮಂತ್ರಿಯಾಗಿ ನೇಮಿಸುವ ನಿರ್ಧಾರಕ್ಕೆ ಅರುಣ್‌ ಜೇಟ್ಲಿಯ ಬೆಂಬಲ ಮಹತ್ವದ್ದಾಗಿತ್ತು. ಇದಷ್ಟೇ ಅಲ್ಲದೇ, 2002ರಲ್ಲಿ ಗೋಧಾ ಗಲಭೆಯ
ನಂತರ ನರೇಂದ್ರ ಮೋದಿಯವರನ್ನು ಅಟಲ್‌ ಬಿಹಾರಿ ವಾಜಪೇಯಿಯವರ ಕೋಪದಿಂದ ರಕ್ಷಿಸುವಲ್ಲೂ ಮುಂದಿದ್ದರು ಜೇಟ್ಲಿ. ತನ್ಮೂಲಕ ಆ ಸಮಯದಲ್ಲಿ ದೆಹಲಿಯಲ್ಲಿನ ಮೋದಿಯ ಕೆಲವೇ ಕೆಲವು ಗೆಳೆಯರಲ್ಲಿ ತಾವೂ ಒಬ್ಬರು ಎನ್ನುವುದನ್ನು ತೋರಿಸಿ  ಕೊಟ್ಟಿದ್ದರು. ಅರುಣ್‌ ಜೇಟ್ಲಿ ಎಂಬ “ಸ್ನೇಹ ಶೀಲ ವಕೀಲರಿಗೆ’ ಮೋದಿ ಮತ್ತು ಅವರ ಆಪ್ತ ಅಮಿತ್‌ ಶಾ ಜತೆಗೆ ಆಳ ವಾದ ಸೈದ್ಧಾಂತಿಕ ಮತ್ತು ವೈಯಕ್ತಿಕ
ನಂಟಿತ್ತು. ಅಮಿತ್‌ ಶಾ ಅವರ ವಿರುದ್ಧ ಕಸ್ಟಡಿಯಲ್‌ ಸಾವಿನ ಪ್ರಕರಣಗಳು ಎದುರಾದಾಗ, ಅರುಣ್‌ ಜೇಟ್ಲಿ ಶಾ ಅವರನ್ನು ಪ್ರಶ್ನಾತೀತವಾಗಿ ಬೆಂಬಲಿಸಿದರು. ರಾಜ್ಯ ಸಭೆಯಲ್ಲಿ ಪ್ರತಿ ಪಕ್ಷದ ನಾಯಕರಾಗಿದ್ದ
ವೇಳೆಯಲ್ಲಿ ಶಾ, ಸಂಸತ್ತಿನಲ್ಲಿ ಅರುಣ್‌ ಜೇಟ್ಲಿಯವರ ಚೇಂಬರ್‌ಗೆ ನಿಯಮಿತವಾಗಿ ಭೇಟಿ ಕೊಡುತ್ತಿದ್ದರು.ಜೇಟ್ಲಿ ಅಮಿತ್‌ ಶಾ ಅವರಿಗೆ ಎದುರಾಗುತ್ತಿದ್ದ ಕಾನೂನು ಮತ್ತು ವೈಯಕ್ತಿಕ ದಾಳಿಗಳಿಂದ ರಕ್ಷಣೆ
ನೀಡುತ್ತಿದ್ದರು.

2014ರ ಲೋಕ ಸಭಾ ಚುನಾವಣೆಯಲ್ಲಿ ಅರುಣ್‌ ಜೇಟ್ಲಿಯವರು ಅಮೃತಸರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಅಮರಿಂದರ್‌ ಸಿಂಗ್‌ ವಿರುದ್ಧ ಸೋಲುಂಡರಾದರೂ, ಅಧಿಕಾರ ಸ್ತರದಲ್ಲಂತೂ ಈ
ಚುನಾವಣೆಯ ನಂತರದಲ್ಲಿ ಮೋದಿ, ಜೇದ್ಧ ಮತ್ತು ಅಮಿತ್‌ ಶಾ, ಕೇಂದ್ರ ಮಟ್ಟದಲ್ಲಿ ಪ್ರಮುಖ ಶಕ್ತಿ ಕೇಂದ್ರವಾದರು.

ಆ ಸಮಯದಲ್ಲಿ ಇಡೀ ದೇಶದಲ್ಲಿ ಬಿಜೆಪಿಯು ಪ್ರಚಂಡವಾಗಿ ಮುನ್ನಡೆಯಿತಾದರೂ, ಪಂಜಾಬ್‌ನಲ್ಲಿ ಮಾತ್ರ ಕಾಂಗ್ರೆಸ್‌ ಬಿಜೆಪಿಯ ಜೈತ್ರಯಾತ್ರೆಗೆ ಅಡ್ಡಿಯಾಯಿತು. ಅದೇಕೆ ಅರುಣ್‌ ಜೇದ್ಧ ಅಮೃತ ಸರದಿಂದ ಸ್ಪರ್ಧಿಸು ವಂಥ ತಪ್ಪು ಹೆಜ್ಜೆ ಇಟ್ಟರು ಎಂದು ನಾನು ಅಮಿತ್‌ ಶಾ ಅವರನ್ನು ಒಮ್ಮೆ ಕೇಳಿದ್ದೆ. ಆಗ ಅಮಿತ್‌ ಶಾ: “”ಪತಾ ನಹೀ ಓ ವಹಾಂ ಕ್ಯೂಂ ಗಯೇ. ಮೇ ತೋ ಚಾಹ್ತಾ ಥಾ ಕಿ ವೋ ಪಾಟ್ನಾ ಸೇ
ಲಡೇಂ ಔರ್‌ ಮೋದೀಜಿ ಬನಾ ರ ಸ್‌ಸೆ, ತಾಕೀ ಪೂರಿ
ಈಸ್ಟರ್ನ್ ಬೆಲ್ಟ್ ಮೇಂ ಲಹರ್‌ ಬನ್‌ ಜಾಯೇ”
(ಅದೇಕೆ ಅರುಣ್‌ ಜೇದ್ಧ ಅಮೃತಸರದಿಂದ ಸ್ಪರ್ಧಿಸಲು ನಿರ್ಧರಿಸಿದರೋ ನನಗೆ ತಿಳಿಯದು. ಉತ್ತರ ಪ್ರದೇಶ ಮತ್ತು ಬಿಹಾರದ ತುಂಬೆಲ್ಲ ಬಿಜೆಪಿ ಅಲೆ ಇರುತ್ತದೆ ಎಂಬ ಕಾರಣಕ್ಕಾಗಿ ಮೋದಿಯವರು ವಾರಾಣಾಸಿಯಿಂದ, ಅರುಣ್‌ ಜೇದ್ಧ ಪಾಟ್ನಾದಿಂದ  ಸ್ಪರ್ಧಿಸಬೇಕು ಎಂದು ನಾನು ಬಯಸಿದ್ದೆ.)
ಎಂದು ಅಮಿತ್‌ ಶಾ ಪ್ರಾಮಾಣಿಕ ಅಚ್ಚರಿಯಿಂದಲೇ ಹೇಳಿದ್ದರು.

2014ರಲ್ಲಿ ಎನ್‌ಡಿಎದ ಮೊದಲ ಆರು ತಿಂಗಳ ಆಡಳಿತದಲ್ಲೇ ಅರುಣ್‌ ಜೇಟ್ಲಿಯವರು ವಿತ್ತ ಸಚಿವಾಲಯ, ರಕ್ಷಣಾ ಸಚಿವಾಲಯ, ಕಾರ್ಪೊರೇಟ್‌ ವ್ಯವಹಾರ ಮತ್ತು ಮಾಹಿ ತಿ-ಪ್ರಸಾರದಂಥ ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಗರಿ ಸೇರಿಸಿಕೊಂಡರು. ಆರ್ಥಿಕತೆಗೆ ಸಂಬಂಧಿಸಿದ ಬಹುತೇಕ ಎಲ್ಲಾ ಪ್ರಮುಖ ನಿರ್ಧಾರಗಳಲ್ಲೂ ಪ್ರಧಾನಿ ಕಾರ್ಯಾಲಯದ ಪ್ರಭಾವವಿದೆ ಎಂಬರ್ಥದಲ್ಲಿ ಟೀಕೆ ಎದುರಾಗುವುದಕ್ಕೆ ಇದು ಕಾರಣವಾಯಿತು. ” ಇದು two-and-a-half men ಗಳು ಮುನ್ನಡೆಸುತ್ತಿರುವ ಸರ್ಕಾರ ‘ ಎಂಬ ಅರುಣ್‌ ಶೌರಿಯವರ
ಹೇಳಿಕೆಯಲ್ಲೂ ಈ ಟೀಕೆ ಪರೋಕ್ಷವಾಗಿ ಕಂಡಿತು. ಆದಾಗ್ಯೂ ಅರುಣ್‌ ಜೇಟ್ಲಿಯವರು ಜಿಎಸ್‌ಟಿ ಅನುಷ್ಠಾನಕ್ಕೆ ತಂದದ್ದನ್ನು ಮತ್ತು ಬ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿದ್ದನ್ನು ತಮ್ಮ ಸಾಧನೆ ಎಂದು ಪರಿಗಣಿಸುತ್ತಿದ್ದರಾದರೂ, ವಿತ್ತ ಸಚಿವರಾಗಿ ಅವರ ಆರ್ಥಿಕತೆಯ ನಿರ್ವಹಣಾ ಶೈಲಿಗೆ ವ್ಯಾಪಕ ಟೀಕೆಯಂತೂ ಎದುರಾಗಿತ್ತು.

ಆದರೆ ತಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವವರ ಜತೆಗೂ ಅರುಣ್‌ ಜೇಟ್ಲಿ ಯಾವಾಗಲೂ ಗೌರವಯುತವಾಗಿ ಮತ್ತು ಸಭ್ಯವಾಗಿಯೇ ಮಾತನಾಡುತ್ತಿದ್ದರು. ಅತ್ಯಂತ ಸರಳವಾಗಿ ಹೊಸ ಸ್ನೇಹಿತರನ್ನುಸಂಪಾದಿಸುತ್ತಿದ್ದರು. ಪಶ್ಚಿಮ ದೆಹಲಿಯ ಈ ಪಂಜಾಬಿ ವ್ಯಕ್ತಿಯಲ್ಲಿದ್ದ ಆತ್ಮೀಯ ಗುಣ ಮತ್ತು ಸ್ನೇಹ ಪರತೆಯಿಂದಾಗಿಯೇ ಇಂದು ಅವರ ಅಗಲಿಕೆಯು ಅನೇಕ ಜನರಿಗೆ ಕಾಡುತ್ತಿದೆ. ಅರುಣ್‌ ಜೇಟ್ಲಿಯವರ ನಿಧನಕ್ಕೆ ಅವರ ಪ್ರಖರ ರಾಜಕೀಯ ವಿರೋಧಿಗಳಿಂದಲೂ ಸಾಗರೋಪಾದಿಯಲ್ಲಿ ಕಂಬನಿ ಹರಿದು ಬರುತ್ತಿರುವುದು ಇದೇ ಕಾರಣಕ್ಕಾಗಿಯೇ. ದೆಹಲಿ ಯೂನಿವರ್ಸಿಟಿಯಲ್ಲಿನ ಅವರ ಎದುರಾಳಿ
ಶಶಿ ತರೂರ್‌ ಮತ್ತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯಚೂರಿಯವರ ಸಂತಾಪದ ನುಡಿಗಳು, ಅರುಣ್‌ ಜೇಟ್ಲಿಯವರು ಹೇಗೆ ಈಗಿನ ಧ್ರುವೀಕೃತ ಅಪನಂಬಿಕೆಯ ರಾಜಕೀಯ ವಾತಾವರಣದಲ್ಲೂ ಪಕ್ಷಾತೀತವಾಗಿ ಸ್ನೇಹಿತರನ್ನು ಸಂಪಾದಿಸಿದ್ದರು ಎನ್ನುವುದಕ್ಕೆ ದ್ಯೋತಕವಾಗಿ ನಿಲ್ಲುತ್ತದೆ.

ಅರುಣ್‌ ಜೇಟ್ಲಿಯವರ ನಿಧನದೊಂದಿಗೆ ಬಿಜೆಪಿಯಲ್ಲಿನ ಸ್ನೇಹ ಪರತೆಯ ಮತ್ತು ಪ್ರಜಾಪ್ರಭುತ್ವಿಯ ಚೈತನ್ಯವೊಂದು ಕಣ್ಮರೆಯಾದಂತಾಗಿದೆ.

ವಿರೋಧ ಪಕ್ಷಗಳನ್ನಾಗಲೀ, ಟೀಕೆಗಳನ್ನಾಗಲೀ ಮತ್ತು ಅನೇಕ ಕಾಯಿಲೆಗಳ ನಡುವೆಯೇ ಶಸ್ತ್ರ ಚಿಕಿತ್ಸೆಯ ನೋವನ್ನಾಗಲೀ… ಹೀಗೆ ನಗುನಗುತ್ತಾ ಎದುರಿಸಿದ ಅರುಣ್‌ ಜೇಟ್ಲಿಯಂಥ ವಿಶಿಷ್ಟ ನಾಯಕ ಭಾರತದ ರಾಜ ಕಾರಣದಲ್ಲಿ ಮತ್ಯಾರೂ ಉಳಿದಿಲ್ಲ.

– ಪೂರ್ಣಿಮಾ ಜೋಶಿ
ಕೃಪೆ: ಹಿಂದೂ ಬ್ಯುಸ್ನೆಸ್‌ಲೈನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ