ಆಧುನಿಕ ರಾಜಕೀಯಕ್ಕೂ ಸಲ್ಲುವ ಬಸವಣ್ಣ ವಚನಗಳು

Team Udayavani, May 7, 2019, 6:52 AM IST

ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಬಸವ ಯುಗ ಒಂದು ಮಹತ್ತರ ಘಟ್ಟ. ಸಮಷ್ಟಿ ಜಾಗೃತಿಗಾಗಿ ಈ ಕಾಲದ ಶರಣರು ಕನ್ನಡ ಭಾಷೆಯನ್ನು ಬಳಸಿಕೊಂಡರು. ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಬೀರಿದ ಪ್ರಭಾವ ಆ ಕಾಲದ ಯುಗ ಧರ್ಮವನ್ನು ರೂಪಿಸಿತು. ವಿಚಾರ ಕ್ರಾಂತಿಗೆ ಅಡಿಪಾಯ ಹಾಕಿತು. ವಚನವೆಂಬ ವಿಶಿಷ್ಟ ಪ್ರಕಾರವನ್ನು ಶರಣರು ಬಹು ಶಕ್ತಿಯುತವಾಗಿ ಬೆಳೆಸಿದರು.ಇಂತಹ ಶರಣ ಪರಂಪರೆಯಲ್ಲಿ ಪ್ರಮುಖರು ಬಸವಣ್ಣ. ಮೇ 7ರಂದು ಬಸವ ಜಯಂತಿ.

ಬಸವೇಶ್ವರರನ್ನು ಅನುಭಾವಿ, ಧಾರ್ಮಿಕ ಮುಖಂಡ , ಕ್ರಾಂತಿಕಾರಿ, ಕಾಯಕ ನಿಷ್ಠೆಯ ಪ್ರತಿಪಾದಕ, ಸಾಮಾಜಿಕ ಸಮಾನತೆಯನ್ನು ಸಾಧಿಸಿದ ಸಮಾಜ ಸುಧಾರಕ ಎಂದು ಬಣ್ಣಿಸುತ್ತಾರೆ. ಬಸವಣ್ಣನವರನ್ನು ಕವಿ ಬೇಂದ್ರೆ ಅವರು ಜಗದ್ವಿಲಕ್ಷಣ ಎಂದು ಕರೆದಿದ್ದಾರೆ. ಅಸ್ಪೃಶ್ಯತೆಯ ನಿವಾರಣೆಯ ಹಾದಿಯಲ್ಲಿ ಪ್ರಜಾಪ್ರಭುತ್ವವಾದಿ ಸರಕಾರಗಳು ಸಾಗುವುದಕ್ಕೆ ಬಹಳ ಮುಂಚೆಯೇ ರಾಜಪ್ರಭುತ್ವದಲ್ಲಿ ಅವರದ್ದು ಜಾತಿ ಭೇದ ನಿರಸನ ಶಸ್ತ್ರ. ಇಲ್ಲಿ ಅವರಿಗೆ ಶಸ್ತ್ರವಾದದ್ದು ವಚನಗಳು. ಸಮಗಾರ ಹರಳಯ್ಯ ಒಮ್ಮೆ ಶರಣು ಎಂದರೆ ಬಸವಣ್ಣ ‘ಶರಣು ಶರಣು’ ಎಂದು ನುಡಿದರು. ಬಸವಣ್ಣನವರ ಅನುಭವ ಮಂಟಪದ ಪ್ರಯೋಗದ ಫ‌ಲವಾಗಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸ್ವಾತಂತ್ರ್ಯ ಏಕಕಾಲಕ್ಕೆ ಬಹು ಸಂಖ್ಯೆಯ ಜನರಿಗೆ ದೊರೆಯುವಂತಾಯಿತು.

ಭಾರತೀಯ ಸಾಂಪ್ರದಾಯಿಕ ಪರಂಪರೆಗೆ , ಅದರ ರೀತಿನೀತಿಗಳಿಗೆ ವಿರುದ್ಧವಾಗಿ ನಿಂತವರು ಮತ್ತು ನಡೆದವರು ಬಸವಣ್ಣ. ಅವರು ಬಾಳಿ ಬದುಕಿದ ಕಾಲ 12ನೇ ಶತಮಾನ. ಈ ಕಾಲವನ್ನು ಚಾರಿತ್ರಿಕ ಘಟ್ಟವಾಗಿಸಿದ್ದು ಶರಣ ಚಳವಳಿ. ಈ ಚಳವಳಿಯಲ್ಲಿ ಮೂಡಿ ಬಂದ ವಚನಗಳು ಕನ್ನಡ ಭಾಷೆಗೆ ನೀಡಿದ ಶಕ್ತಿ ಅಪೂರ್ವವಾದುದು. ಅವುಗಳ ಓದು ,ಮರು ಓದು ಹೊಸ ಹೊಸ ಅರ್ಥಗಳನ್ನು , ವಿಚಾರಧಾರೆಗಳನ್ನು ಮುಖಾಮುಖೀಯಾಗಿಸುತ್ತದೆ.

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ
ಇವ ನಮ್ಮವ, ಇವ ನಮ್ಮವ , ಇವ ನಮ್ಮವನೆಂದಿಸಯ್ಯ
ಕೂಡಲಸಂಗಮದೇವಯ್ಯ ನಿಮ್ಮಯ ಮನೆ ಮಗನೆಂದೆನಿಸಯ್ಯ

ಗುರುತಿಸುವಿಕೆಗೆ ಸಂಬಂಧಿಸಿದ ಈ ವಚನ ಆಧುನಿಕ ಕಾಲಘಟ್ಟದಲ್ಲಿ ಪ್ರಮುಖ ರಾಜಕೀಯ ನಾಯಕರ ಭಾಷಣದಲ್ಲಿ ಪ್ರಸ್ತಾಪಿಸಲ್ಪಟ್ಟಿತ್ತು ಎಂದರೆ ಅದು ಆ ವಚನದ ಶಕ್ತಿ ಮತ್ತು ಸಾರ್ವಕಾಲಿಕ ಪ್ರಸ್ತುತತೆಗೆ ಒಂದು ಸಾಕ್ಷಿ. ಭಕ್ತಿ ಮತ್ತು ಕಾಯಕವನ್ನು ಮುಖ್ಯವಾಹಿನಿಗೆ ತಂದರು ಬಸವಣ್ಣ. ಬಹುಶಿಸ್ತೀಯ ಅಧ್ಯಯನಕ್ಕೆ ಹೇಳಿ ಮಾಡಿಸಿದಂತಿರುವ ವಚನಗಳು ಜೀವನದ ಸಮಗ್ರವೇ ಸಾಹಿತ್ಯವಾದಂತಿವೆ. ನುಡಿನಡೆಯಲ್ಲಿ ಸಮಾನತೆಯನ್ನು ಹೇಳಲು, ಕಾಯಕದ ಮಹತ್ವವನ್ನು ಸಾರಲು ವಚನಗಳನ್ನು ಬಳಸಿದ ವಚನಕಾರರು ಅಧಿಕಾರ ಕೇಂದ್ರಗಳ ಬಗ್ಗೆ ತಿರಸ್ಕಾರ ಹೊಂದಿದ್ದರು.

ಬಸವಣ್ಣ ಮತ್ತು ಆವರ ಸಮಕಾಲೀನರಲ್ಲಿ ಕಂಡು ಬರುವ ಸಮಾನತೆ ಇಂದು ಎಂ.ಎಸ್‌. ಆಶಾದೇವಿ ಮತ್ತು ಆಧುನಿಕ ಸ್ತ್ರೀವಾದಿ ಚಿಂತಕರು ಹುಡುಕುವಂತಹ ಸ್ತ್ರಿ ಸಂವೇದನೆ , ಸಮಾನತೆಗೆ ಸಾಟಿ ಇಲ್ಲದಿರಬಹುದು, ಆದರೆ ಅದು ಹನ್ನೆರಡನೆಯ ಶತಮಾನದ ಚಾರಿತ್ರಿಕ ಘಟ್ಟದಲ್ಲಿ ಸಾಧಿತವಾದ ಸಮಾನತೆ , ಆ ಕಾಲಕ್ಕೆ ದೊಡ್ಡದು ಎಂಬುದನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ.

ಬಸವಣ್ಣ ಒಂದು ವಚನದಲ್ಲಿ ‘ನೆಲನಾಳ್ದನ ಹೆಣವೇ ಇದೆ; ಬನ್ನಿ ಕೊಳ್ಳಿ ಎಂದರೆ ಒಂದಡಕೆಗೆ ಕೊಳ್ಳುವರಿಲ್ಲ’ ಎನ್ನುತ್ತಾರೆ.ಪ್ರಭುತ್ವದ ವಿರುದ್ಧ ದಿಕ್ಕಿನಲ್ಲಿ ನಿಂತು ಇಂತಹ ಮಾತುಗಳನ್ನು ಜನಸಮುದಾಯದ ನಡುವೆ ಮಂಡಿಸುವ ಧೈರ್ಯವನ್ನು ತೋರಿದವರು ವಚನಕಾರರು. ಡಾ| ಡಿ.ಆರ್‌. ನಾಗರಾಜ್‌ ಒಂದೆಡೆ ಹೇಳುತ್ತಾರೆ ‘ಕನ್ನಡ ಸಾಹಿತ್ಯ ಸಂಸ್ಕೃತಿಯಲ್ಲಿ ಎರಡು ಬಗೆಯ ಬೆಳವಣಿಗೆಯನ್ನು ಕಾಣುತ್ತೇವೆ. ಒಂದನ್ನು ವಿಶ್ವದೇಸಿ ಮಾರ್ಗ ಎಂದು ಕರೆಯಲು ಸಾಧ್ಯವಿದೆ.ಎರಡನೆಯದ್ದು ಪ್ರಾದೇಶಿಕ ದೇಸಿ. ಹನ್ನೆರಡನೆಯ ಶತಮಾನದ ವಚನ ಚಳವಳಿಯಿಂದಲೇ ಈ ಪ್ರಾದೇಶಿಕ ದೇಸಿಯ ಪ್ರಾರಂಭ (ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ ಪುಟ 49)

ಇಂಗಳೇಶ್ವರ ಬಾಗೇವಾಡಿಯಲ್ಲಿ ಬಸವಣ್ಣನವರ ಜನನವಾಯಿತು . ಮಾದರಸ- ಮಾದಲಾಂಬೆ ಅವರು ತಂದೆ ತಾಯಿ. ಹುಟ್ಟಿದೂರನ್ನು ಬಿಟ್ಟು ಕೃಷ್ಣ ಮತ್ತು ಮಲಪ್ರಭಾ ನದಿಗಳ ಸಂಗಮ ಸ್ಥಳವಾದ ಕಪ್ಪಡಿ ಸಂಗಮಕ್ಕೆ ಬಂದು ವಿದ್ಯಾಭ್ಯಾಸ ಮಾಡಿದ ಅವರ ಮುಂದಿನ ಪ್ರಯಾಣ ಮಂಗಳವಾಡಕ್ಕೆ , ಅಲ್ಲಿ ಬಿಜ್ಜಳನ ಆಸ್ಥಾನದಲ್ಲಿ ನೆಲೆ. ಕಲ್ಯಾಣದ ಚಾಲುಕ್ಯರಿಗೆ ಸಾಮಂತನಾಗಿದ್ದ ಬಿಜ್ಜಳ ಮುಂದೆ ತಾನೇ ಚಕ್ರವರ್ತಿಯಾಗುವ ಸಂದರ್ಭ ಬಂದು ಮಂಗಳವಾಡದಿಂದ ಕಲ್ಯಾಣಕ್ಕೆ ಹೋದಾಗ , ಆತನನ್ನು ಅನುಸರಿಸಿ ಬಸವಣ್ಣನವರೂ ಕಲ್ಯಾಣಕ್ಕೆ ಬಂದರು ಎಂದು ಇತಿಹಾಸದ ಆಕರಗಳು ಹೇಳುತ್ತವೆ. ವರ್ಣ ಸಂಕರ ಕಾರಣವಾಗಿ ಅಲ್ಲಿ ಸಂಭವಿಸಿದ ಕ್ರಾಂತಿ ಶರಣರನ್ನು ಚದುರಿಸುತ್ತದೆ. ಬಿಜ್ಜಳನ ಕೊಲೆಯಾಗುತ್ತದೆ. ಬಸವಣ್ಣನವರು ಸಂಗಮದಲ್ಲಿ ಐಕ್ಯರಾಗುತ್ತಾರೆ. ತಮ್ಮ ಜೀವಿತ ಕಾಲದಲ್ಲಿ ಅವರು ಇಡೀ ಸಮುದಾಯವನ್ನು ಪ್ರಭಾವಿಸಿದರು.

ಬಸವಣ್ಣನವರ ವಚನಗಳ ಅಂಕಿತ ‘ಕೂಡಲಸಂಗಮದೇವ’ . ಈ ವಚನಗಳು ಜೀವನದರ್ಶನವಾಗಿದ್ದವೇ ಹೊರತು ಸಾಹಿತ್ಯಕೃತಿಗಳಾಗಬೇಕು ಎಂದು ರಚಿತವಾದಂತಹವಲ್ಲ. ಈ ವಚನಗಳಿಗೆ ಅವರು ಬಳಸಿದ ಭಾಷೆ ಕನ್ನಡ. ನುಡಿದಂತೆ ನಡೆ ಎಂದರು. ಸಮಾನ ಅವಕಾಶದ ಆದರ್ಶ ಸಮಾಜ ರಚನೆಗೆ ಮುಂದಾದರು. ಇದಕ್ಕೆ ದಯವೇ ಧರ್ಮದ ಮೂಲವಯ್ಯ ಎಂಬ ಸಾರ್ವಕಾಲಿಕವಾದ ಸೂತ್ರವನ್ನು ಅಳವಡಿಸಿದರು. ಅವರು ನಿರ್ದೇಶಿಸಿದ ಕಾಯಕ ಒಂದು ಮಟ್ಟದಲ್ಲಿ ಉದ್ಯೋಗದಲ್ಲಿ ಮೇಲು ಕೀಳಿಲ್ಲ ಎಂಬುದನ್ನು ಸಾರಲು ಶಕ್ತವಾಯಿತು. ಕಾಯಕವೇ ಕೈಲಾಸ ಎಂದವರು ಸಾರಿದ್ದಲ್ಲದೆ ‘ಅನುಭವ ಮಂಟಪದಲ್ಲಿ ‘ ಎಲ್ಲರಿಗೂ ಚರ್ಚೆಯ ಅವಕಾಶ ಒದಗಿಸಿ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಪಾರ್ಲಿಮೆಂಟಿನ , ವಿಧಾನ ಮಂಡಲದ ಪೂರ್ವ ಮಾದರಿಯನ್ನು ನಿರ್ಮಿಸಿದ್ದರು. ಶರಣರು ವಚನಗಳಲ್ಲಿ ಪ್ರಕೃತಿ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡಲಿಲ್ಲ. ಅವರಲ್ಲಿ ಜೀವನ ಸೌಂದರ್ಯಕ್ಕೆ ಹೆಚ್ಚು ಆದ್ಯತೆ. ಮಾತಿಗೆ ಮೀರಿದ ಅನುಭವವನ್ನು ಮಾತಿನಲ್ಲಿ ಹಿಡಿದಿಡುವ ಸಾಹಸದ ಪ್ರತೀಕ ಅವರ ವಚನಗಳು. ನಾನಾ ಕಾಯಕದವರು ಒಂದೆಡೆ ಸೇರಿದ್ದರಿಂದ ಭಾಷೆಗೆ ಹೊಸ ಕಸುವು ದಕ್ಕಿತು. ಇದಕ್ಕೆಲ್ಲ ಮೂಲ ಪ್ರೇರಕರಾದವರು ಬಸವಣ್ಣನವರು. ಇಂದು ವಿದೇಶಗಳಲ್ಲೂ ಬಸವ ತತ್ವ ಪ್ರಚಾರ ನಡೆಯುತ್ತಿದೆ. ಅವರ ಪುತ್ಥಳಿಗಳು ಅನಾವರಣಗೊಂಡಿವೆ.

ಅರಮನೆ ಸಾಹಿತ್ಯ ಜನರತ್ತ ಹೊರಳಿದಾಗ ಅಲ್ಲಿ ಕಾಯಕವೇ ಕೈಲಾಸವಾಯಿತು. ವ್ಯವಸ್ಥೆಯ ವಿರುದ್ಧ ನಿಂತ ಬಸವಣ್ಣ ಅವರ ನೇತೃತ್ವದ ಕಲ್ಯಾಣದ ಕ್ರಾಂತಿ 9 ಶತಮಾನಗಳ ಬಳಿಕವೂ ಸಮಕಾಲೀನ ಬರಹಗಾರರನ್ನು ಕಾಡುತ್ತಲೇ ಇದೆ. 20ನೇ ಶತಮಾನದಲ್ಲಿ ಎಚ್.ಎಸ್‌. ಶಿವಪ್ರಕಾಶ್‌ ಮಹಾಚೈತ್ರ, ಲಂಕೇಶರು ಸಂಕ್ರಾಂತಿ ಗಿರೀಶ ಕಾರ್ನಾಡರು ತಲೆದಂಡ , ಚಂದ್ರಶೇಖರ ಕಂಬಾರರು ಶಿವರಾತ್ರಿ ನಾಟಕಗಳನ್ನು ಬರೆಯಲು ಪ್ರೇರಣೆ ನೀಡಿತೆಂದರೆ ಅದು ಸೃಷ್ಟಿಸಿದ ಜ್ಞಾನರಾಶಿ ತಲ್ಲಣಗಳನ್ನು ಹುಟ್ಟಿಸುತ್ತಲೇ ಇದೆ ಎಂದು ಭಾವಿಸಬಹುದು.

ಭಾರತೀಯ ಸಾಂಪ್ರದಾಯಿಕ ಪರಂಪರೆಗೆ , ಅದರ ರೀತಿನೀತಿಗಳಿಗೆ ವಿರುದ್ಧವಾಗಿ ನಿಂತವರು ಮತ್ತು ನಡೆದವರು ಬಸವಣ್ಣ. ಅವರು ಬಾಳಿ ಬದುಕಿದ ಕಾಲ 12ನೇ ಶತಮಾನ. ಈ ಕಾಲವನ್ನು ಚಾರಿತ್ರಿಕ ಘಟ್ಟವಾಗಿಸಿದ್ದು ಶರಣ ಚಳವಳಿ. ಈ ಚಳವಳಿಯಲ್ಲಿ ಮೂಡಿ ಬಂದ ವಚನಗಳು ಕನ್ನಡ ಭಾಷೆಗೆ ನೀಡಿದ ಶಕ್ತಿ ಅಪೂರ್ವವಾದುದು. ಅವುಗಳ ಓದು ,ಮರು ಓದು ಹೊಸ ಹೊಸ ಅರ್ಥಗಳನ್ನು , ವಿಚಾರಧಾರೆಗಳನ್ನು ಮುಖಾಮುಖೀಯಾಗಿಸುತ್ತದೆ. ಬಸವಣ್ಣ ಮತ್ತು ಆವರ ಸಮಕಾಲೀನರಲ್ಲಿ ಕಂಡು ಬರುವ ಸಮಾನತೆ ಇಂದು ಎಂ.ಎಸ್‌. ಆಶಾದೇವಿ ಮತ್ತು ಆಧುನಿಕ ಸ್ತ್ರೀವಾದಿ ಚಿಂತಕರು ಹುಡುಕುವಂತಹ ಸ್ತ್ರಿ ಸಂವೇದನೆ , ಸಮಾನತೆಗೆ

ಸಾಟಿ ಇಲ್ಲದಿರಬಹುದು, ಆದರೆ ಅದು ಹನ್ನೆರಡನೆಯ ಶತಮಾನದ ಚಾರಿತ್ರಿಕ ಘಟ್ಟದಲ್ಲಿ ಸಾಧಿತವಾದ ಸಮಾನತೆ , ಆ ಕಾಲಕ್ಕೆ ದೊಡ್ಡದು ಎಂಬುದನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ