ದೇವ ಮಾನವರಿಂದ ಪಾರಾಗಬಲ್ಲದೇ ಈ ದೇಶ?

Team Udayavani, Nov 2, 2019, 4:24 AM IST

ಆಂಧ್ರದಲ್ಲಿ ಗುಮಾಸ್ತನಾಗಿದ್ದು ಅನಂತರ ದಿಢೀರನೆ ದೇವ ಮಾನವನಾಗಿ ಪರಿವರ್ತನೆ ಹೊಂದಿ ಕೋಟಿಗಳ ಸ್ವರ್ಣ ಸಾಮ್ರಾಜ್ಯದಲ್ಲಿ ಮೆರೆದಾಡಿದ ವಿಜಯ ಕುಮಾರ್‌ ಯಾನೆ ಕಲ್ಕಿ ಭಗವಾನ್‌ ಈಗ ಪತ್ನಿ ಪುತ್ರನ ಸಮೇತ ಮಂಗಮಾಯವಾಗಿದ್ದಾನೆ. ನಮ್ಮ ದೇಶದ ಜನರಿಗೆ ಇದೆಲ್ಲಾ ತೀರಾ ಸಾಮಾನ್ಯ. ಕಾವಿ ಕಂಡಲ್ಲಿ ಕಾಲಿಗೆರಗುತ್ತಾರೆ, ಕಲ್ಲು ಕಂಡಲ್ಲಿ ಕೈ ಮುಗಿಯುತ್ತಾರೆ.

ದೇವಮಾನವರ ಹಾವಳಿ ದೇಶಕ್ಕೆ ಹೊಸದೇನಲ್ಲ. ದಿ.ಪ್ರಧಾನಿ ಇಂದಿರಾ ಗಾಂಧಿಯವರ ಕಾಲದಲ್ಲಿ ಸಮಗ್ರ ರಾಜಕಾರಣವನ್ನೇ ನಿಯಂತ್ರಿಸುತ್ತಿದ್ದ ಧೀರೇಂದ್ರ ಬ್ರಹ್ಮಚಾರಿ ಎಂಬ ದೇವ ಮಾನವ ತುರ್ತು ಪರಿಸ್ಥಿತಿಯ ಹೇರಿಕೆಯ ಪ್ರಧಾನ ರೂವಾರಿಯಾಗಿದ್ದ ವಿಚಾರ ಎಲ್ಲರಿಗೂ ತಿಳಿದದ್ದೇ. ಇಂದಿರಾ ಅಪಾರ ಚಾಣಾಕ್ಷರಾಗಿದ್ದರೂ ಹೇಗೋ ಏನೋ ಆತನ ಬಲೆಗೆ ಬಿದ್ದು ಒದ್ದಾಡಿದರು. ಅನಂತರ ವಾಸ್ತವವನ್ನರಿತ ಇಂದಿರಾ ಆ ಕಾಲದ ದುಷ್ಟ ಚತುಷ್ಟಯಗಳನ್ನು ದೂರವಿರಿಸಿ ಪುನರಪಿ ಪ್ರಧಾನಿ ಯಾದರು. ಅದು ಇತಿಹಾಸ.

ಅನಂತರದ ಅವಧಿಯಲ್ಲಿ ಅತೀ ಹೆಚ್ಚು ಸದ್ದು ಮಾಡಿದ ಸ್ವಯಂ ಘೋಷಿತ ದೇವಮಾನವನೆಂದರೆ ಚಂದ್ರ ಸ್ವಾಮಿ ಎಂಬ ಮಹಾ ಪ್ರಚಂಡ ಕಾವಿಧಾರಿ. ಗಣಪತಿ ದೇವರ ಮೂರ್ತಿ ಹಾಲು ಕುಡಿವ ಕತೆ ಕಟ್ಟಿ ಸಮಗ್ರ ದೇಶವನ್ನೇ ಸಮೂಹ ಸನ್ನಿಗೊಳ ಪಡಿಸಿದ ಚಂದ್ರ ಸ್ವಾಮಿ ದೇಶ ವಿದೇಶದಲ್ಲಿ ಸಾವಿರಾರು ಅನುಯಾಯಿಗಳನ್ನು ಹೊಂದಿದ್ದ. ತಾನು ಮನಸ್ಸು ಮಾಡಿದರೆ ಪ್ರಪಂಚವನ್ನೇ ನಾಶ ಮಾಡಬಲ್ಲೆ ಎಂದು ಸಾರಿ ಸಾರಿ ಹೇಳುತ್ತಿದ್ದ ಈ ದೇವ ಮಾನವನ ಗತಿ ಏನಾಯಿತೆಂದು ಬೇರೆ ಹೇಳಬೇಕಿಲ್ಲ.

ಕಾಯದ ಲೋಲುಪತೆಯ ರಜನೀಶ್‌ ವಾಮಾಚಾರದಲ್ಲಿ ಪಂಚಮ ಕಾರದ ಪ್ರತಿಪಾದನೆ ಕೆಲವೆಡೆ ಆಚರಣೆಯಲ್ಲಿದೆ. ಇದರಲ್ಲಿ ಪ್ರಧಾನವಾದ ಮೈಥುನ ಕ್ರಿಯೆಯಿಂದಲೂ ಸಾಕ್ಷಾತ್ಕಾರ ಸಾಧ್ಯ ಎಂದು ಪ್ರತಿಪಾದಿಸಿದ ರಜನೀಶ್‌ ತತ್ವಗಳತ್ತ ಒಂದು ಕಾಲ ದಲ್ಲಿ ಹಿಂದಿ ಚಲನಚಿತ್ರ ರಂಗದ ಪ್ರಮುಖ ನಟ ನಟಿ ಯರು ತಗಲು ಹಾಕಿಕೊಂಡಿದ್ದರು. ದೇಶ ವಿದೇಶಗಳಲ್ಲಿ ಆಶ್ರಮ ಗಳನ್ನು ಕಟ್ಟಿ, ಅನುಯಾಯಿಗಳನ್ನು ಹೊಂದಿದ್ದ ರಜನೀಶ್‌ ಹಣ, ಆಸ್ತಿಪಾಸ್ತಿಗಳನ್ನು ಅಧಿಕವಾಗಿ ಹೊಂದಿರಲಿಲ್ಲ. ತನ್ನನ್ನು ತಾನು ದೇವಮಾನವನೆಂದು ಘೋಷಿಸಿಕೊಳ್ಳದಿದ್ದರೂ ಅಂಧಾನು ಕರಣೆಯ ಜನ ಅವರನ್ನು ಪೂಜಿಸತೊಡಗಿದ್ದರು. ಅವರ ವಿಚಿತ್ರ ಉಪನ್ಯಾಸಗಳಿಗೆ ಮುಗಿಬೀಳುತ್ತಿದ್ದರು.ಮನಃಶಾಂತಿಯ ಹೆಸರಲ್ಲಿ ಸಾಕ್ಷಾತ್ಕಾರದ ನೆಪದಲ್ಲಿ ನಡೆಯುತ್ತಿದ್ದ ನೈತಿಕತೆ ರಹಿತವಾದ ಚಟುವಟಿಕೆಗಳು ಜನರನ್ನು ಎಚ್ಚರಿಸಲೇ ಇಲ್ಲ.

ತಂದೆಯ ಶವದ ಎದೆಯ ಮೇಲೇರಿ ಉನ್ಮತ್ತನಂತೆ ಪ್ರೇತನೃತ್ಯ ಮಾಡಿದ, ಕಾಮೋದ್ರೇಕದ ಮಾತ್ರೆಗಳನ್ನು ಸೇವಿಸಿ ತಮಿಳು ಚಿತ್ರ ನಟಿಯೊಂದಿಗೆ ರಾಸಲೀಲೆ ಮಾಡಿ ಸಿಕ್ಕಿ ಬಿ ದ್ದ ಬಿಡದಿಯ ನಿತ್ಯಾನಂದನಂತಹವರೂ ಭಗ ವಾನ್‌ ಶ್ರಿಕೃಷ್ಣನ ಅಪರಾವತಾ ರವೆಂದು ಪೂಜಿಸಲ್ಪಡುತ್ತಾರೆ. ಬಾನಲ್ಲಿ ಚಲಿಸುವ ಚಂದ್ರ ಸೂರ್ಯರೂ ತನ್ನ ಅಣತಿಗಾಗಿ ಕಾಯು ತ್ತಾರೆ ಎನ್ನುತ್ತಾ ದಿನಕ್ಕೊಂದು ದೇವರ ರೂಪ ಧರಿಸುವ ಈತನ ಅಪಾರ ಆಸ್ತಿಯ ಮುಟ್ಟುಗೋಲಿಗೆ ಆದೇಶವಿದ್ದರೂ ಅದರ ಪಾಲನೆಗಳೇ ನಡೆಯುವುದಿಲ್ಲ. ಏಕೆಂದರೆ ಈತ ಸ್ವಯಂ ಘೋಷಿತ ದೇವಮಾನವ. ದೇವರನ್ನು ಎಂದಾದರು ಐಟಿ, ಕಾನೂನುಕಟ್ಟಳೆ, ನ್ಯಾಯ-ನೀತಿಗಳು ಅಷ್ಟು ಸುಲಭವಾಗಿ ಮುಟ್ಟಲು ಸಾಧ್ಯವೇ?

ದಪ್ಪ ಮೀಸೆಯನ್ನು ಬಿಟ್ಟು, ಕನ್ನಡಕ ತೊಟ್ಟು, ಮೋರೆಗೆ ಬಂಗಾರದ ಕಿರೀಟ ತೊಡಿಸಿ,ಅದರ ಅಕ್ಕಪಕ್ಕದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ, ಮಾರುತಿ, ಗಣಪತಿ, ಸುಬ್ರಹ್ಮಣ್ಯ, ದೇವಿ, ಇತ್ಯಾದಿ ದೇವರುಗಳ ಮುಖವನ್ನು ಮುದ್ರಿಸಿಕೊಂಡು ತಾವೇ ಮಹಾವಿಷ್ಣು ಎಂದು ಬಿಂಬಿಸಿಕೊಳ್ಳುವ ಮೂಢರ ಕ್ಯಾಲೆಂಡರನ್ನು ಕೆಲವೆಡೆ ಕಂಡು ದಂಗು ಬಡಿದದ್ದಿದೆ. ಕೇಳಿದರೆ ಅವರೇ ನಿಜವಾದ ದೇವರು ಎಂಬ ಉತ್ತರ ಬೇರೆ. ಇದನ್ನು ಮುಗ್ಧತೆ ಎನ್ನಬೇಕೋ? ಮೌಡ್ಯದ ಪರಾಕಾಷ್ಠೆ ಎನ್ನಬೇಕೋ? ಭಾರತವು ಭೌತಿಕ ರಾಷ್ಟ್ರವಲ್ಲ. ಆಧ್ಯಾತ್ಮಿಕ ದೇಶವೆಂದೇ ಪ್ರಪಂಚದಲ್ಲಿ ಹಿರಿಮೆ ಪಡೆದಿದೆ. ಇಲ್ಲಿ ಹಲವು ಪಂಥ- ಸಿದ್ಧಾಂತ ಗಳಿವೆ. ವೇದ, ಪುರಾಣ, ಉಪನಿಷತ್ತುಗಳ ದಾರ್ಶನಿಕತೆ ಇದೆ. ಸಾವಿರಾರು ಸಾಧು, ಸಂತ, ಮಹಾಂತ, ಮಹಾತ್ಮರ ಇತಿಹಾಸ ವಿದೆ. ಬುದ್ಧ, ಜಿನೇಂದ್ರ, ನಾನಕ, ಆಚಾರ್ಯತ್ರಯರು, ಪತಂಜಲಿ, ಪರಮಹಂಸ, ದಯಾನಂದ, ವಿವೇಕಾನಂದ, ಚೈತನ್ಯ ಮೊದಲಾದ ಸ್ಮರಣೀಯ ನಾಮಗಳು ಹಲವಿವೆ. ಆದರೆ ಇವರಾರು ತಮ್ಮನ್ನು ತಾವು ದೇವರೆಂದು ಹೇಳಿಕೊಳ್ಳಲಿಲ್ಲ. ಪ್ರಾಪಂಚಿ ಕವಾಗಿ ಯೋಚಿಸುವು ದಾದರೆ ಏಸು ಕ್ರಿಸ್ತ, ಪೈಗಂಬ ರರು ಕೂಡ ತಾವು ಅನ್ವೇಷಕರು ಮತ್ತು ಪ್ರವಾದಿಗಳೆಂದೇ ಕರೆಸಿ ಕೊಂಡರು. ಬಹುಶಃ ಆ ಕಾಲದಲ್ಲಿ ದೇವಮಾನವ ಎಂಬ ಶಬ್ದವೇ ಹುಟ್ಟಿರಲಿಲ್ಲ ವೇನೋ? ಏಕೆಂದರೆ ಅವರಿಗೆ ದೇವರು ಎಂದರೆ ಸರ್ವಶಕ್ತ, ಧರ್ಮ ಎಂದರೆ ಆಚರಣೆ, ಮೋಕ್ಷ , ಮುಕ್ತಿ ಎಂದರೆ ವೇದಾಂತ ಅಧ್ಯಾತ್ಮ ಎನ್ನುವುದು ಸ್ಪಷ್ಟವಾಗಿ ತಿಳಿದಿತ್ತು. ದುರಂತವೆಂದರೆ ಇದ್ಯಾವುದರ ಕನಿಷ್ಠ ತಿಳಿವಳಿಕೆಯೂ ಇಲ್ಲದ ಸಾಮಾನ್ಯರು ಇಂದು ಮಂಕು ಬೂದಿ ಎರಚುವ ಏಕೈಕ ಸಿದ್ಧಾಂತದ ಮೂಲಕವೇ ದೇವಮಾನವ, ಆಚಾರ್ಯ, ಸ್ವಾಮಿ, ಮಠಾಧಿಪತಿ, ಪೀಠಾಧಿಪತಿ, ಆಶ್ರಮವಾಸಿ, ಬಾಬಾ ಎಂದು ಸ್ಥಾಪಿಸಿಕೊಳ್ಳುತ್ತಾರೆ. ಭೋಗ-ಲಾಲಸೆ, ಲೋಲುಪತೆಯ ಕೇಂದ್ರಗಳನ್ನು ದೇವರು ಧರ್ಮದ ತೆರೆಯಲ್ಲಿ ತೆರೆದು ಭಾರತದ ಆಧ್ಯಾತ್ಮಿಕ ಪರಂಪರೆಗೆ ಮಸಿ ಬಳಿಯುತ್ತಾರೆ.

ಮಾನವನೆಂದಿಗೂ ದೇವರಾಗಲು ಸಾಧ್ಯವಿಲ್ಲ. ಆದರೆ ದೇವರು ಮಾನವನಾಗಿ ಆವತರಿಸಲು ಸಾಧ್ಯವಿದೆ. ಈ ಎರಡು ತತ್ವ ಸಿದ್ಧಾಂತಗಳ ತುಲನೆಯಲ್ಲಿ ಎಡವುವವರು ಸದಾ ಹರಕೆಯ ಕುರಿಗಳಾಗಿಯೇ ಇರುತ್ತಾರೆ. ಇದು ನಮ್ಮ ದೇಶದ ದುರಂತ.

ಇದೀಗ ಕಲ್ಕಿ ಮಹಾಶಯನಿಗೆ ಒದಗಿದ ದುರ್ಗತಿ ಗಮನಿಸುವಾಗ ಹೊಸ ಆಶಾಕಿರಣವೊಂದು ಮಿನುಗಿದಂತೆ ಆಗುತ್ತಿದೆ. ಅಲ್ಲವೇ?

-ಮೋಹನ್‌ ದಾಸ್‌, ಸುರತ್ಕಲ್

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ಸಿಲಿಕಾನ್‌ ಸಿಟಿಯೆಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆಯಿಂದ ಸರಬರಾಜಾಗುವ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ ಎಂಬ...

  • ಉಡುಪಿ: ತುಳಸೀ ಎಲೆಗೆ ವಿದ್ಯುನ್ಮಾನ ಉಪಕರಣಗಳಲ್ಲಿರುವ ರೇಡಿಯೇಶನ್‌ (ವಿಕಿರಣಗಳು) ತಡೆಗಟ್ಟುವ ಶಕ್ತಿ ಇದೆ ಎಂದು ಯೋಗಗುರು ಬಾಬಾ ರಾಮದೇವ್‌ ಹೇಳಿದರು. ಶ್ರೀಕೃಷ್ಣ...

  • ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಇನ್ನಷ್ಟು ಸರಳೀ ಕೃತಗೊಳಿಸುವ ಮತ್ತು ಜಿಎಸ್‌ಟಿ ರಿಟರ್ನ್ಸ್ ಫೈಲಿಂಗ್‌ ಪ್ರಕ್ರಿಯೆಯನ್ನು ಬಳಕೆದಾರ...

  • ಮನುಷ್ಯ ಚಟುವಟಿಕೆಯಿಂದ ಇರಲು ಮೆದುಳಿನ ಆರೋಗ್ಯವೂ ಅತಿ ಮುಖ್ಯ. ಮೆದುಳಿನ ನರಮಂಡಲದಲ್ಲಿ ಏರುಪೇರಾಗಿ ಅದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವರಿಗೆ...

  • ಬೆಂಗಳೂರು: ಹದಿನೈದು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಂಡಾಯ ಶಮನಗೊಳಿಸಿ ನಿಟ್ಟುಸಿರು ಬಿಟ್ಟಿದ್ದ...