ಮೇಸ್ಟ್ರ ಲೇಖನಿಯಿಂದ : ‘ನಮ್ಮ ಮಕ್ಕಳಿಗೆ ನಾವೇನು ಕಲಿಸಬೇಕು?’

ಮಕ್ಕಳ ದಿನದಿಂದು ಹೆತ್ತವರಿಗೆ ಕೆಲವೊಂದು ಅಮೂಲ್ಯ ಸಲಹೆಗಳು

Team Udayavani, Nov 14, 2019, 4:35 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಇಂದಿನ ಮಕ್ಕಳು ಹಿಂದಿನ ಕಾಲದ ಮಕ್ಕಳ ಹಾಗಿಲ್ಲ, ಅಪ್ಪ, ಅಮ್ಮನ ಮಾತನ್ನು ಕೆಳೋದಿಲ್ಲ, ತಾಳ್ಮೆ ಒಂದಿಷ್ಟೂ ಇಲ್ಲ. ಇನ್ನು ಹೆಣ್ಣು ಮಕ್ಕಳಾದ್ರೆ ಸ್ವಲ್ಪ ಪರ್ವಾಗಿಲ್ಲ ಆದ್ರೆ ಗಂಡು ಮಕ್ಕಳು ಏನೇ ಕೇಳಿದ್ರೂ, ಹೇಳಿದ್ರೂ ಅಮ್ಮನ ಮೇಲೆ ರೇಗ್ತಾರೆ… ಈ ರೀತಿಯ ಮಾತುಗಳು ದಿನ ನಿತ್ಯ ನಮ್ಮ ಸುತ್ತಮುತ್ತ ಕೇಳಿಬರುತ್ತಲೇ ಇರುತ್ತವೆ. ಇನ್ನು ಹೆತ್ತವರಿಗೆ ಅದರಲ್ಲೂ ಅಮ್ಮಂದಿರಿಗೆ ತಮ್ಮ ಮಕ್ಕಳನ್ನು ಹೇಗೆ ಹತೋಟಿಯಲ್ಲಿಡುವುದೆಂಬ ಚಿಂತೆ ಸರ್ವೇ ಸಾಮಾನ್ಯವಾಗಿದೆ. ನಿಮ್ಮನ್ನೂ ಈ ಚಿಂತೆ ಬಾಧಿಸುತ್ತಿದ್ದರೆ ಒಮ್ಮೆ ಈ ಲೇಖನವನ್ನು ಓದಿ

 

– ನಾರಾಯಣ ಭಟ್ ಟಿ., ರಾಮಕುಂಜ
ರಾಷ್ಟ್ರ – ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರು, ಶಿಕ್ಷಣ ಮಾರ್ಗದರ್ಶಕರು ಮತ್ತು ಲೇಖಕರು

ನಾವು ಯೋಚಿಸಬೇಕು ಮತ್ತು ಹಿರಿಯರಾದ ನಾವೇ ಯೋಚಿಸಬೇಕು! ; ಇದಕ್ಕೆಲ್ಲಾ ಯಾರು ಹೊಣೆ? ಶಿಕ್ಷಕರೇ, ಪೋಷಕರೇ, ಟಿ.ವಿ. ಮತ್ತು ಮಾಧ್ಯಮಗಳೇ? ಅಲ್ಲ ಮೊಬೈಲ್ ಎಂಬ ಮಾಯೆಯೇ???, ಆದರೆ ಇವೆಲ್ಲದರ ಪ್ರಭಾವ ನಮ್ಮ ಮಕ್ಕಳ ಮೇಲಾಗುತ್ತಿದೆ ಎನ್ನುವುದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ನಾವೆಲ್ಲಾ ಇಂದು ಆಲೋಚಿಸುವ ಪರಿಸ್ಥಿತಿ ಬಂದೊದಗಿದೆ. ಮತ್ತು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಮುಂದಿನ ಜನಾಂಗ ಇಂದು ನಡೆದುಕೊಳ್ಳುತ್ತಿರುವ ರೀತಿ ಮತ್ತು ಸಾಗುತ್ತಿರುವ ದಾರಿಯ ಕುರಿತಾಗಿ ನಾವೆಲ್ಲಾ ಸ್ವಲ್ಪ ಆಲೋಚಿಸುವುದು ಅತ್ಯಗತ್ಯವಲ್ಲವೇ?

ಮಕ್ಕಳು ನಾಲ್ಕೈದು ವರ್ಷ ಪ್ರಾಯಕ್ಕೆ ಬರುವಾಗಲೇ ಅವರ ಕೈಗೆ ಮೊಬೈಲ್ ಕೊಟ್ಟು ಅಭ್ಯಾಸ ಮಾಡಿದವರು ಯಾರು? ಟಿ.ವಿ. ಆನ್ಮಾಡಿ ಅದರಲ್ಲಿ ಕಾರ್ಟೂನ್ ಗಳನ್ನು ಹಾಕಿಕೊಟ್ಟು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾದವರು ಯಾರು? ಇನ್ನು ಕಾರಿನ ಸ್ಟಿಯರಿಂಗ್ ಹಿಡಿಸಿ ಮತ್ತು ಬೈಕಿನ ಹ್ಯಾಂಡಲ್ ಕೊಟ್ಟು ಡ್ರೈವಿಂಗ್ ಪಾಠ ಮಾಡಿದವರು ಯಾರು? ಮತ್ತು ನಮ್ಮ ಮಕ್ಕಳಿಗೆ ಇದನ್ನೆಲ್ಲಾ ಅಭ್ಯಾಸ ಮಾಡಿಸಿ ಆಮೇಲೆ ‘ನಮ್ಮ ಮಕ್ಕಳು ತುಂಬಾ ಆಕ್ಟಿವ್, ಇಷ್ಟು ಚಿಕ್ಕ ವಯಸ್ಸಿನಲ್ಲೇ ಎಲ್ಲಾ ಗೊತ್ತುಂಟು, ನನಗಿಂತಲೂ ಶಾರ್ಪ್. ನಮಗೆ ಗೊತ್ತಿಲ್ಲದ ಸಂಗತಿಗಲೆಲ್ಲಾ ಅವನಿಗೆ/ಅವಳಿಗೆ ಗೊತ್ತಿದೆ’ ಎಂದು ಸಿಕ್ಕ ಸಿಕ್ಕವರ ಮುಂದೆಲ್ಲಾ ಹೊಗಳಿ ಸಂತೋಷಪಡುವವರು ನಾವೇ ಅಲ್ಲವೇ? ಹಾಗಾದರೆ ಈ ವಿಚಾರದಲ್ಲಿ ತಪ್ಪು ಯಾರದ್ದು…!?

ಯಾವುದೇ ವಿಚಾರವನ್ನು ಮಕ್ಕಳಿಗೆ ತಿಳಿಸ ಬೇಕಾದ ಜವಾಬ್ದಾರಿ ಮೊದಲಾಗಿ ಹೆತ್ತವರದ್ದು. ಆದರೆ ಯಾವ ವಿಷಯವನ್ನು ಯಾವ ಸಂದರ್ಭದಲ್ಲಿ ಅಥವಾ ಪ್ರಾಯದಲ್ಲಿ ನಮ್ಮ ಮಕ್ಕಳಿಗೆ ತಿಳಿಸಿ ಕೊಡಬೇಕು ಎಂಬ ವಿಚಾರದಲ್ಲಿ ಹೆತ್ತವರಾದ ನಾವು ಇಂದು ಸೋತಿದ್ದೇವೆ. ಕಾನೂನಿನ ಪ್ರಕಾರ ಹದಿನೆಂಟು ವರ್ಷಕ್ಕಿಂತ ಮೊದಲು ವಾಹನ ಚಾಲನೆ ಮಾಡುವುದು ಅಪರಾಧ. ಆದರೆ ಮಕ್ಕಳಿಗೆ ನಾವಿಂದು ಆರೇಳು ವರ್ಷದಲ್ಲೇ ಡ್ರೈವಿಂಗ್ ರುಚಿ ಹತ್ತಿಸಿದ ಕಾರಣ ಅವರು ಬುದ್ದಿ ತಿಳಿದಾಕ್ಷಣ ಬೈಕ್ ಬೇಕು ಕಾರು ಬೇಕು ಎಂದು ಹೆತ್ತವರನ್ನು ಪೀಡಿಸುವುದರಲ್ಲಿ ವಿಶೇಷವೇನೂ ಇಲ್ಲ, ಯಾಕೆಂದರೆ ಅವರ ಪ್ರಕಾರ ಅವರಿಗೆ ಡ್ರೈವಿಂಗ್ ಚೆನ್ನಾಗಿ ಗೊತ್ತಿದೆ! ಈಗ ಹೇಳಿ ಈ ವಿಚಾರದಲ್ಲಿ ತಪ್ಪು ಯಾರದ್ದು?

ಮಕ್ಕಳದ್ದು ಕುತೂಹಲದ ಮನಸ್ಸು, ತನ್ನ ಪರಿಸರದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಮಕ್ಕಳು ಸೂಕ್ಷ್ಮವಾಗಿ ಮತ್ತು ಅಷ್ಟೇ ವೇಗವಾಗಿ ಗ್ರಹಿಸಿಕೊಳ್ಳುತ್ತಾರೆ. ಅವರಿಗೆ ಎಲ್ಲವೂ ಬೇಕೆಂಬ ಆಸೆ ಇರುವುದು ಸಹಜವೇ, ಆದರೆ ಯಾವ ವಿಷಯವನ್ನು ಯಾವ ಪ್ರಾಯದಲ್ಲಿ ತಿಳಿದುಕೊಳ್ಳಬೇಕು ಮತ್ತು ಯಾವ ಕೆಲಸವನ್ನು ಯಾವಾಗ ಮಾಡಬೇಕು ಎಂಬ ವಿಚಾರವನ್ನು ಮಕ್ಕಳಿಗೆ ಮನದಟ್ಟಾಗುವ ರೀತಿಯಲ್ಲಿ ತಿಳಿಹೇಳುವ ಪೋಷಕರಿದ್ದಾಗ ಈಎಲ್ಲಾ ಸಮಸ್ಯೆಗಳಿಗೆ ಅರ್ಧ ಪರಿಹಾರ ಸಿಕ್ಕಿದಂತೆಯೇ. ಈಗ ಹೇಳಿ ಹಾಗಾದರೆ ತಪ್ಪು ಯಾರದ್ದು!?

ತಾನು ನೆಟ್ಟ ಸಸಿಗೆ ಎಷ್ಟು ದಿನಗಳಲ್ಲಿ ಎಷ್ಟು ಗೊಬ್ಬರ ಹಾಕಬೆಕೆಂಬ ಅನುಭವ ಕೃಷಿಕನಿಗಿರಬೇಕು, ಅದಿಲ್ಲದೇ ಹೋದರೆ ಗಿಡಕ್ಕೇ ಆಪತ್ತು. ಹಾಗೆಯೇ ಮಕ್ಕಳು ಸುಮಾರು ಇಪ್ಪತ್ತು ವರ್ಷ ಪ್ರಾಯಕ್ಕೆ ತಲುಪುವವರೆಗೆ ಅವರಿಗೆ ಯಾವುದನ್ನು ತಿಳಿಸುತ್ತಾ ತಿದ್ದಬೇಕೆಂಬ ಅರಿವು ಪೋಷಕರಲ್ಲಿದ್ದಾಗ ಮಿತಿಯಲ್ಲಿ ಸಾಗಲು ಸಾಧ್ಯ, ಮತ್ತಿದು ಹುಟ್ಟಿನಿಂದಲೇ ಪ್ರಾರಂಭವಾಗಬೇಕು.

ಮಕ್ಕಳನ್ನುಸರಿಯಾಗಿಬೆಳೆಸಲುಪೋಷಕರುಮಾಡಬೇಕಾಗಿರುವುದೇನು?

ಶಿಕ್ಷಣದ ವಿಚಾರದಲ್ಲಿರಲಿ ಗಮನ: ಶಾಲೆಗಳಲ್ಲಿ ಪಠ್ಯಕ್ರಮಕ್ಕೆ ಅನುಗುಣವಾಗಿ ಶಿಕ್ಷಕರು ಬೋಧನೆ ಮಾಡುತ್ತಾರೆ. ಇದು ಎಲ್ಲಾ ಮಕ್ಕಳಿಗೂ ಏಕಪ್ರಕಾರವಾಗಿ ಅರ್ಥವಾಗಬೇಕೆಂದೇನೂ ಇಲ್ಲ. ಕೆಲವು ಮಕ್ಕಳು ಶಿಕ್ಷಕರು ತರಗತಿಯಲ್ಲಿ ಹೇಳಿಕೊಡುವುದನ್ನು ಆ ಕ್ಷಣಕ್ಕೇ ಗ್ರಹಿಸಿದರೆ ಇನ್ನು ಕೆಲವರಿಗೆ ಈ ಸಾಮರ್ಥ್ಯ ಸ್ವಲ್ಪ ಕಡಿಮೆ ಇರುತ್ತದೆ. ಇಂತಹ ಮಕ್ಕಳ ಮೇಲೆ ಪೋಷಕರು ಗಮನ ಕೊಡುವುದು ಅತ್ಯಗತ್ಯ.

ಕಲಿಕೆಯಲ್ಲಿ ಹಿಂದುಳಿದಿರುವ ಒಂದು ಮಗು ಬೇರೆ ವಿಚಾರದಲ್ಲಿ ಚುರುಕು ಮತಿಯದ್ದಾಗಿರಬಹುದು ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಹೆತ್ತವರು ಮೊದಲನೆಯದ್ದಾಗಿ ಮಾಡಬೇಕು.ಇದಕ್ಕಾಗಿ ಮಕ್ಕಳ ವೇಳಾಪಟ್ಟಿಯಲ್ಲಿ ಆಟ, ಕಥೆ, ಟಿವಿ, ನಿದ್ದೆ, ಕುಣಿದು ಕುಪ್ಪಳಿಸಲೂ ಸಮಯವಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರ ಮೆಲಿರುತ್ತದೆ.

ನಮ್ಮ ಮಕ್ಕಳು ಪ್ರಕೃತಿಯೊಂದಿಗೆ ಬೆರೆಯಲಿ: ಮಕ್ಕಳು ಮಣ್ಣಲ್ಲಿ ಆಡುವುದರಿಂದ ಅಲರ್ಜಿ ಉಂಟಾಗುತ್ತದೆ, ಬಿಸಿಲಲ್ಲಿ ಆಡುವುದರಿಂದ ಚರ್ಮ ಕಪ್ಪಾಗುತ್ತದೆ, ಫ್ರೆಂಡ್ಸ್ ಜೊತೆ ಬೆರೆಯುವುದರಿಂದ ಬುದ್ದಿ ಹಾಳಾಗುತ್ತದೆ ಎಂಬೆಲ್ಲಾ ಆತಂಕ ಮಕ್ಕಳ ಪೋಷಕರಲ್ಲಿರುವುದು ಸಹಜವೇ. ಆದರೆ ಈ ವಿಚಾರದಲ್ಲಿ ಮಕ್ಕಳ ಮೇಲೆ ಸೂಕ್ತ ನಿಗಾ ಇರಿಸಿ ಅವರನ್ನು ಎಲ್ಲರೊಂದಿಗೆ, ಎಲ್ಲದರೊಂದಿಗೆ ಮುಕ್ತವಾಗಿ ಬೆರೆಯಲು ಬಿಟ್ಟಲ್ಲಿ ಮಕ್ಕಳ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ. ಇನ್ನು ಟಿವಿ, ಮೊಬೈಲ್ ಗಳಿಂದ ಸಿಗದೇ ಇರುವ ಪಾಠ ಮಕ್ಕಳಿಗೆ ಪ್ರಕೃತಿಯಲ್ಲಿ ಬೆರೆಯುವದರಿಂದಲೇ ಸಿಗುತ್ತದೆ ಎಂಬುದನ್ನು ಮರೆಯದಿರಿ. ಮಕ್ಕಳು ಹೊರಗಿನ ಪರಿಸರದಲ್ಲಿ ಆಟವಾಡುವುದರಿಂದ ಬುದ್ದಿಗೂ, ದೇಹಕ್ಕೂ ಉತ್ತಮ ವ್ಯಾಯಾಮವೂ ಸಿಕ್ಕಂತಾಗುತ್ತದೆ.

ಹಿರಿಯರೊಂದಿಗೆ ಬೆರೆಯಲಿ ನಮ್ಮ ಮಕ್ಕಳು:
ಮಕ್ಕಳು ಹಿರಿಯರೊಂದಿಗೆ ಮಾತನಾಡುವಾಗ ಹೇಗೆ ವರ್ತಿಸಬೇಕೆಂಬ ವಿಚಾರವನ್ನು ಹೆತ್ತವರು ತಮ್ಮ ಮಕ್ಕಳಿಗೆ ಹೇಳಿಕೊಡುವುದು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ. ಹಿರಿಯರೊಂದಿಗೆ ಮಕ್ಕಳು ಮಾತನಾಡುವ ಸಂದರ್ಭದಲ್ಲಿ ಅವರ ಮಾತಿನ ಶೈಲಿ, ಹಾವ – ಭಾವ, ವರ್ತನೆ, ಧ್ವನಿಯ ಏರಿಳಿತಗಳೆಲ್ಲಾ ಹಿರಿಯರ ಮೇಲೆ ಪ್ರಭಾವವನ್ನು ಬೀರುತ್ತದೆ ಎಂಬುದನ್ನು ನಾವು ಮರೆಯಬಾರದು. ಮಾತಿನಿಂದಲೇ ಗೆಳೆತನ – ಹಗೆತನ ಸಾಧ್ಯ, ಮಾತು ಬಲ್ಲವ ಜಗತ್ತನ್ನೇ ಗೆಲ್ಲಬಲ್ಲ. ಸ್ನೇಹಿತರ ಜೊತೆ ಮಾತನಾಡುವುದಕ್ಕೂ ಹಿರಿಯರೊಂದಿಗೆ ಮಾತನಾಡುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎಂಬುದನ್ನು ನಮ್ಮ ಮಕ್ಕಳಿಗೆ ಹೇಳಿಕೊಡುವುದು ಬಹಳ ಅವಶ್ಯ.

ಮಕ್ಕಳಲ್ಲಿ ಸ್ವಚ್ಛತೆಯ ಪ್ರಜ್ಞೆ ಮೂಡಿಸಿ: ನಮ್ಮ ಮಕ್ಕಳಲ್ಲಿ ಸ್ವಚ್ಛತೆಯ ಪ್ರಜ್ಞೆಯನ್ನು ಮೂಡಿಸುವುದು ಇಂದು ಅನಿವಾರ್ಯವಾಗಿದೆ. ಒಂದು ಮಗು ತನ್ನ ದೇಹ ಸೌಂದರ್ಯ ಮತ್ತು ಸ್ವಚ್ಛತೆಯ ಕಡೆಗೆ ಗಮನ ಕೊಟ್ಟರಷ್ಟೇ ಸಾಲದು, ತನ್ನ ಸುತ್ತಲಿನ ಪರಿಸರ ಮತ್ತು ಪ್ರಕೃತಿಯ ಸ್ವಚ್ಛತೆಯತ್ತ ಗಮನಕೊಡುವಂತೆ ಮಾಡುವುದು ಮತ್ತು ಆ ಮೂಲಕ ನಮ್ಮ ಸುತ್ತಲಿನ ಪರಿಸರದ ಸೌಂದರ್ಯವನ್ನು ಕಾಪಾಡುವಲ್ಲಿ ಈ ಭಾವೀ ಜನಾಂಗದ ಪಾತ್ರ ಮುಖ್ಯವಾದುದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಹೆತ್ತವರ ಮೇಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಕ್ಕ ಸಿಕ್ಕಲ್ಲಿ ಉಗುಳುವುದು, ಎಲ್ಲೆಂದರಲ್ಲಿ ಕಸಗಳನ್ನು ಎಸೆಯುವುದು ಮುಂತಾದ ವಿಚಾರದಲ್ಲಿ ನಮ್ಮ ಮಕ್ಕಳನ್ನು ಅವರ ಬಾಲ್ಯದಲ್ಲಿಯೇ ನಾವು ತಿದ್ದಿದರೆ ಮುಂದೆ ಅವರು ಪ್ರಾಯ ಪ್ರಬುದ್ಧರಾದಾಗ ಇನ್ನೊಬ್ಬರನ್ನು ತಿದ್ದುವ ಗುಣವನ್ನು ಬೆಳೆಸಿಕೊಂಡಿರುತ್ತಾರೆ. ಆ ಸಂದರ್ಭದಲ್ಲಿ ಅದರ ಪೂರ್ತಿ ಶ್ರೇಯ ನಿಮಗೇ ಸಿಗುತ್ತದೆ ಎನ್ನುವುದನ್ನು ಹೆತ್ತವರು ಮರೆಯಬಾರದು.

ಆರೋಗ್ಯಯುತವಾಗಿರಲಿ ಮಕ್ಕಳ ಆಹಾರ ಪದ್ಧತಿ: ಬೆಳೆಯುವ ಮಕ್ಕಳ ದೈಹಿಕ ಮತ್ತು ಮನೋ ವಿಕಾಸಕ್ಕೆ ಪೌಷ್ಠಿಕಾಂಶಭರಿತ ಆಹಾರ ಸೇವನೆ ಮಕ್ಕಳಿಗೆ ಅತ್ಯವಶ್ಯವಾಗಿರುತ್ತದೆ ಎಂಬುದನ್ನು ಹೆತ್ತವರು ಮರೆಯಲೇಬಾರದು. ನಮ್ಮ ಹಿರಿಯರು ಅನುಸರಿಸುತ್ತಿದ್ದ ಆಹಾರ ಪದ್ಧತಿಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡುತ್ತಾ ಅವರ ಮನಸ್ಸನ್ನು ಸಾಂಪ್ರದಾಯಿಕ ಆಹಾರ ಪದ್ಧತಿಗಳತ್ತ ಆಕರ್ಷಿಸುವಂತೆ ಮಾಡುವ ಜವಾಬ್ದಾರಿ ಹೆತ್ತವರದ್ದೇ ಆಗಿದೆ.

ಈಗಂತೂ ಮಕ್ಕಳು ಹೊರಗಡೆ ಅಂಗಡಿಗಳಲ್ಲಿ ಸಿಗುವ ಬಣ್ಣದ ಪ್ಯಾಕೆಟ್ ಗಳಿಗೆ ಮಾರು ಹೋಗಿ ಅವುಗಳ ದಾಸರಾಗಿಬಿಡುತ್ತಾರೆ. ಜಂಕ್ ಫುಡ್ ಗಳೇ ಮಕ್ಕಳ ಆಹಾರವಾಗಬಾರದು ಎಂಬ ಪ್ರಜ್ಞೆ ನಮ್ಮಲ್ಲಿರಬೇಕು. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಣ್ಣ ಪುಟ್ಟ ಆರೋಗ್ಯ ತೊಂದರೆಗಳಿಗೆ ಅಮ್ಮ ಇರುವ ಅಡುಗೆ ಮನೆಯೇ ಔಷಧಾಲಯ ಮತ್ತು ತಾಯಿಯೇ ಡಾಕ್ಟರ್ ಎಂಬ ವಾತಾವರಣ ನಮ್ಮ ಆಧುನಿಕ ಕುಟುಂಬಗಳಿಂದ ದೂರವಾಗುತ್ತಿರುವುದು ದುರಂತವೇ ಸರಿ.

ಮಕ್ಕಳು ಪುಸ್ತಕಗಳನ್ನು ಓದಲಿ: ಮನೆಗೊಂದು ಮರ ಇರುವಂತೆ ಮನೆಗೊಂದು ಲೈಬ್ರೇರಿ ಇದ್ದರೆ ಹೊರಗಿನ ಪರಿಸರ ಮತ್ತು ಮನೆಯೊಳಗಿನ ಪರಿಸರ ಎರಡೂ ಉತ್ತಮವಾಗಿರುತ್ತದೆ. ಮಕ್ಕಳ ಪ್ರಾಯಕ್ಕೆ ತಕ್ಕನಾಗಿರುವ ಪುಸ್ತಕಗಳನ್ನು ಖರೀದಿಸಿ ಅವುಗಳನ್ನು ಮಕ್ಕಳು ಓದುವಂತೆ ಮಾಡಿ. ಮಕ್ಕಳ ಜೊತೆ ಮನೆ ಮಂದಿಯೂ ಪುಸ್ತಕಗಳನ್ನು ಓದಿದಲ್ಲಿ ಮಕ್ಕಳಿಗೆ ಅದರಿಂದ ಸ್ಪೂರ್ತಿ ಸಿಗುತ್ತದೆ. ಸುಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆ, ನೀತಿ ಕಥೆಗಳನ್ನು ಮಕ್ಕಳಿಗೆ ಓದಿಸುವುದರಿಂದ ಅವರಲ್ಲಿ ಉತ್ತಮ ಸಂಸ್ಕಾರ ಬೆಳೆಯುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪತ್ರಿಕೆಗಳನ್ನೂ ಓದುವ ಹವ್ಯಾಸ ನಮ್ಮ ಮಕ್ಕಳಲ್ಲಿ ಬೆಳೆಯಲಿ.

ಶಿಸ್ತು ಮಕ್ಕಳ ಬದುಕಿನ ಒಂದು ಅಂಗವಾಗಲಿ: ಕೈ ಕಟ್ಟಿ ಬಾಯಿ ಮುಚ್ಚಿ ಇರುವದೇ ಶಿಸ್ತು ಅಲ್ಲ. ನಮ್ಮ ಮಕ್ಕಳು ಮುಂಜಾನೆ ಏಳುವಲ್ಲಿಂದ ರಾತ್ರಿ ಮಲಗುವವರೆಗೂ ಅವರು ಮಾಡುವ ಪ್ರತೀ ಕೆಲಸಗಳಲ್ಲಿ ಅಚ್ಚುಕಟ್ಟುತನ, ಸ್ವಚ್ಛತೆ, ಸಮಯ ಪಾಲನೆ, ಮಿತ ಬಳಕೆ, ಕಠಿಣ ಪರಿಶ್ರಮ, ಪರಸ್ಪರ ಗೌರವ, ಸ್ನೇಹ ಸೌಹಾರ್ಧತೆಗಳೇ ಶಿಸ್ತು ಎಂದೆಣಿಸಿಕೊಳ್ಳುತ್ತವೆ. ಇನ್ನು ಆಹಾರದಲ್ಲಿ, ಸಮಾಜಮುಖಿಯಾಗಿ ವ್ಯವಹರಿಸುವಲ್ಲಿ, ಶಾಲೆಯಲ್ಲಿ ಹೀಗೆ ಎಲ್ಲಾ ಕಡೆಗಳಲ್ಲಿ ವ್ಯವಹರಿಸುವ ಸಂದರ್ಭದಲ್ಲಿ ಮಕ್ಕಳಲ್ಲಿ ಒಂದು ರೀತಿಯ ಶಿಸ್ತನ್ನು ಮೂಡಿಸುವಲ್ಲಿ ಹೆತ್ತವರು ಸಫಲರಾದರೆ ತಮ್ಮ ಮಕ್ಕಳ ವಿಚಾರದಲ್ಲಿ ಅವರು ಗೆದ್ದಂತೆಯೇ ಸರಿ!

ತಪ್ಪುಗಳನ್ನು ಟೀಕಿಸುವುದಕ್ಕಿಂತ ತಪ್ಪು ಮಾಡದಿರುವುದೇ ಶ್ರೇಷ್ಠ. ಬೋಧಿಸುವುದಕ್ಕಿಂತ ಅನುಷ್ಠಾನ ಪರಿಣಾಮಕಾರಿ. ನಮ್ಮ ಮಕ್ಕಳಿಂದ ನಾವು ನಿರೀಕ್ಷಿಸುವುದನ್ನು ನಾವೇ ಅವರಿಗೆ ಮಾಡಿ ತೋರಿಸಿದರೆ ನಮ್ಮ ಮಕ್ಕಳ ಪಾಲಿಗೆ ನಾವೊಂದು ರೋಲ್ ಮಾಡೆಲ್ ಗಳಾಗುತ್ತೇವೆ ಎಂಬುದನ್ನು ಮರೆಯದಿರೋಣ. ನಮ್ಮ ಹಿರಿಯರು ಹಾಕಿಕೊಟ್ಟಿರುವ ಸಂಪ್ರದಾಯಗಳನ್ನು ನಾವೂ ಅರಿತುಕೊಂಡು ಅವುಗಳನ್ನು ನಮ್ಮ ಮಕ್ಕಳಿಗೂ ತಿಳಿಸಿ ಕೊಡುವುದರಿಂದ ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆ, ನಂಬಿಕೆ, ಆತ್ಮ ವಿಶ್ವಾಸ ಮೂಡಿಬಂದು ಅವರು ಈ ಸಮಾಜದ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

ಅದಕ್ಕೇ ತಾನೇ ನಮ್ಮ ಹಿರಿಯರು ಹೇಳಿದ್ದು, ‘ಮನೆಯೇ ಮೊದಲ ಪಾಠಶಾಲೆ ; ತಾಯಿ ತಾನೇ ಮೊದಲ ಗುರು’. ಈ ನಾಣ್ಣುಡಿ ಯಾವತ್ತೂ ಸುಳ್ಳಾಗದಿರಲಿ…

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ