ಪರಿಚಿತರೇ ಬಂಧುಗಳು, ಸ್ನೇಹಿತರೇ ತವರು ಮನೆಯವರು !
Team Udayavani, May 20, 2021, 2:12 PM IST
ನಿಮ್ಮೂರು ಯಾವುದು?
ಮೊದಲೆಲ್ಲ ಹೀಗೊಂದು ಪ್ರಶ್ನೆ ಯಾರಾದರೂ ನನಗೆ ಕೇಳಿದರೆ ಒಮ್ಮೆಲೇ ನನಗೆ ಉತ್ತರಿಸಲು ಕಷ್ಟ ವಾಗುತ್ತಿತ್ತು, ಹುಟ್ಟಿ ಬೆಳೆದ ಊರನ್ನು ನನ್ನದೆನ್ನಬೇಕೋ, ಸೇರು ಒದ್ದು ಕಾಲಿಟ್ಟ ಗಂಡನ ಮನೆ ಇರುವ ಊರನ್ನು ನನ್ನದು ಅನ್ನಬೇಕೋ ಅನ್ನುವ ತರ್ಕ ಮನದಲ್ಲಿ ನಡೆದು ಲೋಕಾರೂಢಿಯಂತೆ ಗಂಡನ ಊರನ್ನೇ ನನ್ನೂರು ಎಂದು ಹೇಳಿ ಸುಮ್ಮನಾಗುತ್ತಿದೆ .
ನಿಜವಾದ ಪ್ರಶ್ನೆಗಳು ಆಮೇಲೆ ಶುರುವಾಗುತ್ತಿದ್ದವು. ಅರೆ ಮತ್ತೆ ನೀವು ಹೇಗೆ ಉತ್ತರ ಕರ್ನಾಟಕದ ಭಾಷೆ ಮಾತಾಡ್ತೀರಿ, ಜೋಳದ ರೊಟ್ಟಿ ಹೆಂಗ್ ಮಾಡ್ತೀರಿ, ಅಷ್ಟು ಖಾರ ಹೆಂಗ್ ತಿಂತೀರಿ, ಹಿಂಗೆ ಏನೇನೋ… ಒಮ್ಮೊಮ್ಮೆ ಗಂಡನ ಮನೆ ಅಕ್ಕ ಪಕ್ಕದ ಊರಿನವರು ಸಿಕ್ಕರೆ ಅಲ್ಲಿಗೆ ಮುಗೀತು. ನಿಮಗೆ ಈ ಅಂಗಡಿ ಗೊತ್ತಾ, ಆ ದೇವಸ್ಥಾನ ಗೊತ್ತಾ, ಆ ರಸ್ತೆ, ಇಂಥವರ ಮನೆ.. ಅಂತೆಲ್ಲ ಕೇಳಿದರೆ ನಾನು ಯಾಕಾದರೂ ಆ ಊರಿನಳು ಎಂದು ಹೇಳಿದೆನೋ ಅಂದುಕೊಳ್ಳುತ್ತ ಮನಸಲ್ಲೇ ಕಸಿವಿಸಿಗೊಳ್ಳುತ್ತಿದ್ದೆ.
ಹೌದಲ್ವಾ? ನೀವು ಯಾವ ಊರಿನವರು ಎಂದು ಹೇಳಬೇಕೆಂದರೆ ಮೊದಲು ನಮಗೆ ಅದು ಮನವರಿಕೆಯಾಗಬೇಕು, ಊರು ನಮ್ಮದು ಅನಿಸಬೇಕು. ಯಾರೋ ಹೊಸಬರು ಬಂದು ವಿಳಾಸ ಕೇಳಿದರೆ ನಿಂತÇÉೇ ಕೈಯ್ಯನ್ನು ಎಡಬಲ ತಿರುಗಿಸಿ ಕನಿಷ್ಠ ಪಕ್ಷ ಒಂದು 10- 15 ಕಿಲೋ ಮೀಟರ್ ಸುತ್ತಲಿನ ರಸ್ತೆ, ವಿಳಾಸ, ಪರಿಚಯ ಹೇಳುವಷ್ಟಾದರೂ ಆ ಊರಿನ ಅಂತರಂಗ ತಿಳಿದಿರಬೇಕು.
ಹಾಗೆ ನಾನು ಮದುವೆಯಾಗಿ ಹೋದ ಊರಿನ ಒಂದೆಂಟು ಮನೆ ಗಳು ಬಿಟ್ಟರೆ ಹೆಚ್ಚಿನದೇನೂ ನನಗೆ ಗೊತ್ತಿಲ್ಲವಾದ್ದರಿಂದ ನಾನು ನನ್ನ ಊರನ್ನು ಇತ್ತೀಚೆಗೆ ಯಾವುದೇ ಸಂಕೋಚವಿಲ್ಲದೆ ಉತ್ತರಕನ್ನಡ ದ ಮುಂಡಗೋಡ ಎಂದು ಹೇಳಿ ಕೊಳ್ಳುತ್ತೇನೆ. ಹಾಗೆ ಹೇಳುವಾಗ ತುಂಬಾ ಹಿತ, ಹೆಮ್ಮೆ ಸಮಾಧಾನ ವಾಗುತ್ತದೆ. ಏಕೆಂದರೆ ಆ ಊರಿನ ವರಿಗೆ ನನ್ನ ಪರಿಚಯವಿದೆ. ಇಂದಿಗೂ ಆ ಊರಿನ ಹಲವರ ಫೋನ್ ನಂಬರ್‌ಗಳು ಬಾಯಲ್ಲಿದೆ. ಪಿನ್ ಕೋಡ್ ಕೂಡ ಗೊತ್ತಿದೆ. ಹಾಗಾಗಿ ಅದೇ ನನ್ನ ಊರು. ನನ್ನ ತವರು ಮನೆ.
ತವರು ಮನೆಗೆ ಅಂಟಿಕೊಳ್ಳುವುದನ್ನ ಹೆಣ್ಣು ಜೀವಕ್ಕೆ ಯಾರು ಹೇಳಿ ಕೊಡುತ್ತಾರೆ ? ನಮಗ್ಯಾಕೆ ತವರೆಂದರೆ ಅಷ್ಟು ಇಷ್ಟ ? ಅಲ್ಲಿ ಶ್ರೀಮಂತಿಕೆ ತುಂಬಿ ತುಳುಕಾಡಬೇಕು ಅಂತೇನೂ ಇಲ್ಲ. ನಮಗಲ್ಲಿ ಹೋದಾಗ ಕೂತು ತಿನ್ನಲು ಸಿಗುತ್ತದೆ ಅಂತಾನೂ ಅಲ್ಲ, ಅದೊಂಥರಾ ಮೋಹ, ವ್ಯಾಮೋಹ ! ಅಲ್ಲಿ ಯಾರೋ ನಮಗಾಗಿ ಕಾಯುತ್ತಾರೆ, ನಮ್ಮಿಷ್ಟದ ಹಣ್ಣು, ಹೂವು, ತರಕಾರಿ ಸಿಕ್ಕಾಗ ನನ್ನ ನೆನಪು ಮಾಡಿಕೊಳ್ತಾರೆ, ಯಾವುದೋ ನನ್ನಿಷ್ಟದ ಹಾಡು ಟಿವಿಯಲ್ಲಿ ಬಂತೆಂದರೆ ನಾನೇ ಅಲ್ಲಿ ಕಾಣಿಸಿಕೊಂಡೆನೇನೋ ಅನ್ನುವಷ್ಟು ಖುಷಿಯಲ್ಲಿ ಸಂಭ್ರಮಿಸುತ್ತಾರೆ.
ವರುಷದ ಹಪ್ಪಳ ಸಂಡಿಗೆ ಉಪ್ಪಿನ ಕಾಯಿಗಳನ್ನು ನಮಗೂ ಸೇರಿಸಿ ಮಾಡಲಾಗುತ್ತದೆ. ನಾವು ಅಲ್ಲಿ ಇರದಿದ್ದರೂ ನಮಗೊಂದು ಸ್ಥಾನವಿದೆ. ನಾನು ನನ್ನ ತವರ ಮುಖ ನೋಡದೆ 3 ವರ್ಷಗಳು ಕಳೆದವು. ಅಮ್ಮ ಪ್ರತಿ ಬಾರಿ ಸಂಪಿಗೆ ಹೂವು, ದುಂಡು ಮಲ್ಲಿಗೆಯ ಹಾಳಿ, ಹೊಸತರದ ಗೊಂಡೆ ಹೂವು, ಮನೆಯಲ್ಲಿ ಬಿಟ್ಟ ಹಣ್ಣು ತರಕಾರಿ ಫೋಟೋಗಳನ್ನು ನೋಡಿ ಕಣ್ಣು ತುಂಬಿಕೊಳ್ಳುವುದು ಬಿಟ್ಟರೆ ಪ್ರಸ್ತುತ ಸಂದರ್ಭದಲ್ಲಿ ಬೇರೆ ದಾರಿಯೇ ಇಲ್ಲ.
ಇಲ್ಲಿಗೆ ಬಂದ ಅನಂತರ ಬರೀ ಮುಂಡಗೋಡವಲ್ಲ. ಇಡೀ ಭಾರತವೇ ನನ್ನ ತವರು, ನಿನ್ನ ಊರು ಯಾವುದು ಅನ್ನುವ ಬದಲು ದೇಶ ಅನ್ನುತ್ತಾರೆ. ಈಗ ಆ ಓಣಿ , ಈ ಗುಡಿಯಬಗ್ಗೆ ಕೇಳುವುದಿಲ್ಲ , ಅಪ್ಪಿತಪ್ಪಿ ಕೇಳಿದರೆ ತಾಜ್ ಮಹಲ್ ಬಗ್ಗೆ ಕೇಳಿ, ನೋಡಿಲ್ಲ ಅಂದಾಗ ಭಾರತದವರಾಗಿ ತಾಜ್‌ಮಹಲ್ ನೋಡಿಲ್ವಾ ಅನ್ನುವ ಮಾತು ಅವರು ಆಡಲ್ಲ. ಆದರೆ ನನಗದು ಸ್ಪಷ್ಟವಾಗಿ ಅವಳ ಮುಖಭಾವದಲ್ಲೇ ಕೇಳಿಸುತ್ತದೆ.
ಭಾರತದಲ್ಲಿ ಕೋವಿಡ್ ಎರಡನೇ ಅಲೆಯ ಅಬ್ಬರ ಶುರುವಾಗಿ, ಮಾಧ್ಯಮಗಳು ಅದನ್ನು ವಿಪರೀತ ವಾಗಿ ಬಿತ್ತರಿಸುತ್ತಿದ್ದಂತೆ , ಈ ನಾಡಿನ ಅದೆಷ್ಟು ಜನ ನನಗೆ ಮೆಸೇಜ್ ಕಳಿಸಿ, ನಿಮ್ಮ ಮನೆಯಲಿ ನಿಮ್ಮ ಭಾಗದಲ್ಲಿ ಎಲ್ಲವು ಕ್ಷೇಮವಲ್ಲವೇ? ಎಂದು ಕೇಳಿದಾಗೆಲ್ಲ ಮನಸು ತುಂಬಿ ಬಂದಿದೆ. ಒಂದು ರೀತಿಯ ಅಯೋಮಯ ಸ್ಥಿತಿ, ಸಹಾಯ ಯಾರಿಗೆ ಹೇಗೆ ಮಾಡುವುದು ? ಧನಸಹಾಯಗಳು ನಿಜಕ್ಕೂ ಅಗತ್ಯ ಇರುವವರಿಗೆ ತಲುಪುತ್ತಿದೆಯ?ಹೀಗೆ ಪ್ರಶ್ನೆಗಳ ಮಳೆಗೆ ಮನಸು ರೋಸಿ ಹೋಗಿತ್ತು. ಇನ್ನೆಷ್ಟು ದಿನ ಹೀಗೆ? ಇದಕ್ಕೆಲ್ಲ ಅಂತ್ಯವೇ ಇಲ್ಲವೇ ? ನಲುಗುತ್ತಿರುವ ನನ್ನ ನಾಡನ್ನು ಕಂಡು ಅಸಹಾಯಕ ಭಾವ ತುಳುಕಾಡುತ್ತಿತ್ತು.
ಆಗಲೇ ಆ ಸುದ್ದಿ ನೋಡಿದೆ. ನಾರ್ದರ್ನ್ ಐರ್ಲೆಂಡ್‌ನಲ್ಲಿ ತಯಾರಾದ ಮೂರು ಆಕ್ಸಿಜನ್ ತಯಾರಿಕಾ ಯಂತ್ರಗಳನ್ನು ಮತ್ತು ಯುಕೆಯ ಎಲ್ಲೆಡೆಯಿಂದ ಒಂದು ಸಾವಿರದಷ್ಟು ವೆಂಟಿಲೇಟರ್‌ಗಳನ್ನು ಬೆಲ್ಫಾ… ವಿಮಾನ ನಿಲ್ದಾಣದಿಂದಲೇ ಕಳಿಸುತ್ತಿದ್ದಾರೆ.
ಇನ್ನೆರಡು ದಿನಕ್ಕೆ ವಿಮಾನದಲ್ಲಿ ಮಷಿನ್‌ಗಳನ್ನೂ ಹಾಕುವ, ಅದನ್ನು ಹೊತ್ತೂಯ್ಯುವ ವಿಮಾನದ ಚಿತ್ರಗಳನ್ನ ಹಾಕುತ್ತಿದ್ದರು. ಆ ಬೃಹತ್ ವಿಮಾನ, ನನಗ್ಯಾಕೋ ಅಮ್ಮ ಪಾರ್ಸೆಲ್ ಕಳಿಸುತ್ತಿದ್ದ ಆ ಕೆಂಪು ಬಣ್ಣದ ಬೆಳಗಾವಿ – ಉಡುಪಿ ಬಸ್ ಮತ್ತು ಅದು ಬರುವ ತನಕ ಹುಬ್ಬಳ್ಳಿ ರಸ್ತೆಯತ್ತ ತಿರುಗಿ ನಿಂತು ಬಸ್ ಬಂದು ಇನ್ನು ಚಕ್ರವೂರುವ ಮೊದಲೇ ಆ ಪಾರ್ಸೆಲ್ ಅನ್ನು ಡ್ರೈವರ್ ಬಳಿ ಕೊಟ್ಟು ಮರಳುವಾಗ ಅಮ್ಮ ಅನುಭವಿಸುತ್ತಿದ್ದ ಆ ನಿರುಮ್ಮಳತೆ, ತವರಿಗೆ ಏನೋ ಕಳಿಸಿದೆ ಎಂಬ ಆ ಕಂಡು ಕಾಣಿಸದ ಆ ಚಿಕ್ಕ ಹೆಮ್ಮೆ, ಇಂದು ನಾನೂ ಅನುಭವಿಸಿದೆ. ಬರೀ ಚಿತ್ರ ವೀಡಿಯೊಗಳ ಮೂಲಕ.
ಪೃಥ್ವಿಯ ಯಾವ ಭಾಗದಲ್ಲಿ ಇದ್ದರೇನು? ನಾವು ಎಲ್ಲಿ ನೆಲೆಯೂರುತ್ತೇವೆಯೋ ಅಲ್ಲೇ ನಮ್ಮದೊಂದು ಪರಿಚಿತರೇ ನಮ್ಮ ಬಂಧುಬಳಗವಾದರೆ, ಆತ್ಮೀಯ ರಾಗುವ ಸ್ನೇಹಿತರು ತವರಿನ ಮನೆಯವರೆನಿಸುತ್ತಾರೆ. ಮೊನ್ನೆ ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡು ಬಂದ ನಾಲ್ಕು ದಿನ ಕುಳಿತುಕೊಳ್ಳಲೂ ಆಗದಷ್ಟು ಜ್ವರ, ನಿಶ್ಯಕ್ತಿ ಅದೆಷ್ಟು ಬಾರಿ ಅಪ್ಪ ಅಮ್ಮ ನೆನಪಾದರೋ , ಸಂಕಟಕ್ಕೆ ಸುಮ್ಮನೆ ದುಃಖ ಉಕ್ಕುತ್ತಿತ್ತು. ಕೆಟ್ಟ ಆಲೋಚನೆಗಳು ಬಂದು ಮುಕ್ಕುತ್ತಿದ್ದವು. ಈ ಮಧ್ಯೆ ನನ್ನ ಬೆಲ್ಫಾ… ತವರಿನವರು ಮುಂಜಾನೆ, ಮಧ್ಯಾಹ್ನ, ರಾತ್ರಿ ಎಂಬಂತೆ ಪಾಳಿಯಲ್ಲಿ ರುಚಿ ರುಚಿಯಾದ ಊಟ ಕಳಿಸಿಕೊಟ್ಟು , ನನ್ನ ಮಕ್ಕಳ ಕಾಳಜಿಯನ್ನೂ ಮಾಡಿ ಪದೇ ಪದೇ ಆರೋಗ್ಯ ವಿಚಾರಿಸುತ್ತಿದ್ದರು.
ಆ ದಿನ ಬೆಳಗ್ಗೆ ಬಿಸಿ ಚಪಾತಿ ಮುರಿದು, ಸಪ್ಪೆ ಬೇಳೆಯಲ್ಲಿ ಅದ್ದಿ ಬಾಯಿಗಿಟ್ಟರೆ ಬೇಡ ಬೇಡವೆಂದರೂ ಕಣ್ಣೀರು ಜಾರಿತು. ಇವೆಲ್ಲ ಬರೀ ಥ್ಯಾಂಕ್ಯೂ ಹೇಳಿ ಮುಗಿಸಿ ಬಿಡುವ ಋಣವಲ್ಲ !
ಹಾಲುಂಡ ತವರಿಗೆ ಏನೆಂದು ಹಾಡಲಿ.. ಹೊಳೆದಂಡಿಯಲಿರುವ ಕರಕಿಯ ಕುಡಿ ಹಂಗ| ಹಬ್ಬಲಿ ಅವರ ರಸಬಳ್ಳಿ.. ನನ್ನ ತವರೂ ನಾನಿರುವ ಊರಿನ ಒಳ್ಳೆತನದ, ನಿಸ್ಪೃಹತೆಯ ರಸಬಳ್ಳಿ ಅನಂತವಾಗಲಿ ಎಂಬುದೊಂದೇ ಹಾರೈಕೆ.
ಅಮಿತಾ ರವಿಕಿರಣ್
ಬೆಲ್ಫಾಸ್ಟ್, ನಾರ್ದನ್ ಐರ್ಲೆಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು
ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್
ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ
ಮಹಾ ತಿರುವು ; ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಟ್ಟ ಬಿಜೆಪಿ
ಸುರತ್ಕಲ್ ಸುತ್ತಮುತ್ತ 15 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಹೊಸ ಸೇರ್ಪಡೆ
ವಿವಿದ ಬೇಡಿಕೆಗೆ ಒತ್ತಾಯಿಸಿ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
ಶೀತಲ್ ಶೆಟ್ಟಿ ನಿರ್ದೇಶನದ ಮರ್ಡರ್ ಮಿಸ್ಟ್ರಿ ‘ವಿಂಡೋಸೀಟ್’ ಜರ್ನಿ ಶುರು
ಮಣಿಪುರ: ಧಾರಾಕಾರ ಮಳೆಗೆ ಭಾರೀ ಭೂಕುಸಿತ-14 ಮಂದಿ ಸಾವು, 60 ಜನರು ಜೀವಂತ ಸಮಾಧಿ?
ವಿದ್ಯುತ್ ಕಂಬಕ್ಕೆ ಬಿಯರ್ ಸಾಗಿಸುತ್ತಿದ್ದ ಲಾರಿ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು
ಸಾಮಾನ್ಯ ಮನುಷ್ಯನ ಅಸಾಮಾನ್ಯ ಶಕ್ತಿ: ಇಂದಿನಿಂದ ‘ಬೈರಾಗಿ’ ದರ್ಶನ