ಹೆಣ್ಣುಮಕ್ಕಳೇ ಅಳಬೇಡಿ, ಎದ್ದು ನಿಂತು ಹೋರಾಡಿ

ನನ್ನ ಮಗಳ ಹೆಸರನ್ನೇಕೆ ಮುಚ್ಚಿಡಬೇಕು? ನಿಜಕ್ಕೂ ಅಪರಾಧಿಗಳಿಗೆ ತಮ್ಮ ಹೆಸರು ಹೇಳಲು ನಾಚಿಕೆಯಾಗಬೇಕು

Team Udayavani, Dec 8, 2019, 5:45 AM IST

ನಾನು ನೀರು ಕುಡಿಯಲು ಗ್ಲಾಸನ್ನು ಎತ್ತಿಕೊಂಡಾಗೆಲ್ಲ ಮಗಳ ಕೊನೆಯ ಕ್ಷಣಗಳು ನೆನಪಾಗುತ್ತವೆ. ಅವಳು ನನ್ನತ್ತ ತಿರುಗಿ, “ಮಮ್ಮಿ ನನಗೆ ಬಾಯಾರಿಕೆ ಆಗ್ತಿದೆ’ ಅಂದಳು. ನಾನು ಅವಳಿಗೆ ನೀರು ಕುಡಿಸಲು ಮುಂದಾದಾಗ, ವೈದ್ಯರು, “”ಆಕೆಗೆ ಒಂದು ಚಮಚ ನೀರು ಕೂಡ ಕುಡಿಸುವಂತಿಲ್ಲ. ತುಂಬಾ ಅಪಾಯವಿದೆ” ಅಂದುಬಿಟ್ಟರು.

ಹೈದ್ರಾಬಾದ್‌ನಲ್ಲಿ ಆ ಹೆಣ್ಣುಮಗುವಿನ ಅತ್ಯಾಚಾರ- ಕೊಲೆ ನಡೆದ ನಂತರದಿಂದ ದೇಶಾದ್ಯಂತ ಬಹಳಷ್ಟು ಚರ್ಚೆಗಳು ಆದವು, ಪ್ರತಿಭಟನೆಗಳು ನಡೆದವು. ಮೊನ್ನೆಯಷ್ಟೇ, ದೆಹಲಿಯ ಸಂಸತ್‌ ಭವನದ ಮುಂದೆಯೂ ಪ್ರತಿಭಟನೆ ನಡೆದಿತ್ತು. ಹೆಣ್ಣುಮಗಳೊಬ್ಬಳು ಬೆಳಗ್ಗೆಯೇ ಬಂದು, ಫ‌ಲಕವೊಂದನ್ನು ಹಿಡಿದು ಕುಳಿತಿದ್ದಳು. “”ನಮಗೆ ನಮ್ಮದೇ ದೇಶದಲ್ಲಿ, ನಮ್ಮದೇ ಮನೆಗಳಲ್ಲಿ ಏಕೆ ಸುರಕ್ಷತೆಯಿಲ್ಲ?’ ಎಂದು ಆ ಫ‌ಲಕದಲ್ಲಿ ಬರೆದಿತ್ತು. ಪೊಲೀಸರು ಅಲ್ಲಿಗೆ ಬಂದವರೇ, ಆ ಹುಡುಗಿಯನ್ನು ಅರೆಸ್ಟ್‌ ಮಾಡಿ, ಕಪಾಳಕ್ಕೆ ಹೊಡೆದು, ಕಿರುಕುಳ ನೀಡಿದರು.

ನನ್ನ ಪ್ರಶ್ನೆ ಇಷ್ಟೆ- ಒಬ್ಬ ಹೆಣ್ಣುಮಗಳು ನಿಮ್ಮಲ್ಲಿ ಅಷ್ಟು ಹೆದರಿಕೆ ಹುಟ್ಟಿಸಿದಳೇ? ಹೆಣ್ಣು ಪ್ರತಿಭಟಿಸಿದ ಕೂಡಲೇ ಪ್ರತ್ಯಕ್ಷರಾಗುತ್ತೀರಿ, ಆದರೆ ಅತ್ಯಾಚಾರದಂಥ ಘಟನೆಗಳು ನಡೆದಾಗ ಅಲ್ಲೆಲ್ಲೂ ನಿಮ್ಮ(ಪೊಲೀಸರ) ಸುಳಿವೇ ಇರುವುದಿಲ್ಲ. ಘಟನೆ ನಡೆದ ಎಷ್ಟೋ ಹೊತ್ತಿನ ನಂತರ ಬರುತ್ತೀರಿ.

ಎಲ್ಲಕ್ಕಿಂತ ದುಃಖದ ವಿಷಯವೇನೆಂದರೆ, ನನ್ನ ಮಗಳ ಅತ್ಯಾಚಾರ-ಕೊಲೆ ಪ್ರಕರಣವಿರಲಿ, ಹೈದ್ರಾಬಾದ್‌ ಅಥವಾ ಉನ್ನಾವೋ ಪ್ರಕರಣಗಳಿರಲಿ ನಾವು ಅವುಗಳ ಬಗ್ಗೆ ಎರಡು-ಮೂರು ದಿನ ಮಾತನಾಡುತ್ತೇವಷ್ಟೆ. ಆ ನಂತರ ಏನಾಗುತ್ತದೆ? ಏಳು ವರ್ಷಗಳ ನಂತರವೂ ನಾನು ನಮಗೆ ನ್ಯಾಯ ಕೊಡಿಸಿ ಎಂದು ನ್ಯಾಯಾಲಯಗಳ ಮುಂದೆ, ನಾಯಕರ ಮುಂದೆ ಕೈಮುಗಿಯುತ್ತಲೇ ನಿಂತಿದ್ದೇನೆ. ಈ 7 ವರ್ಷಗಳಲ್ಲಿ ನಮ್ಮ ದೇಶದ ಎಷ್ಟೊಂದು ಹೆಣ್ಣುಮಕ್ಕಳು ಬಲಿಪಶುವಾದರೋ ನೀವೇ ನೋಡಿ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಕೂಡ ಎರಡು ಬಾರಿ ತೀರ್ಪು ಕೊಟ್ಟಾಗಿದೆ. ಆದರೂ ಅಪರಾಧಿಗಳು ನೇಣುಗಂಬವೇರಿಲ್ಲ.

ನವೆಂಬರ್‌ 28ನೇ ತಾರೀಖು ಪಟಿಯಾಲ ಕೋರ್ಟಿನಲ್ಲಿ ನಮ್ಮ ಅರ್ಜಿಯ ವಿಚಾರಣೆ ಇತ್ತು. ನ್ಯಾಯಾಧೀಶರೆಂದರು- “”ನೋಡಿ, ಅಪರಾಧಿಗಳಿಗೂ ಕೆಲವು ಹಕ್ಕುಗಳಿವೆ. ಆ ಹಕ್ಕುಗಳು ಮುಗಿಯುವವರೆಗೂ ಅವರನ್ನು ನಾವು ನೇಣಿಗೇರಿಸಲಾರೆವು”.

ನಾನು ಕೇಳುವುದಿಷ್ಟೆ- ಏಳು ವರ್ಷಗಳಾದರೂ ಅವರ ಹಕ್ಕುಗಳು ಮುಗಿದಿಲ್ಲವೇನು? ಹಾಗಿದ್ದರೆ ನಮ್ಮ ಹಕ್ಕುಗಳ ಕಥೆಯೇನು? ನಮ್ಮಂಥ ಅಪ್ಪ-ಅಮ್ಮಂದಿರಿಗೆ ಯಾವ ಹಕ್ಕೂ ಇಲ್ಲವೇ? ಬಲಿಯಾಗುವ ಆ ಹೆಣ್ಣುಮಕ್ಕಳಿಗೆ ಯಾವ ಹಕ್ಕೂ ಇಲ್ಲವೇ? ನಾವೇನು ತಪ್ಪು ಮಾಡಿದ್ದೇವೆ? ನನ್ನ ಮಗಳು ಏನು ತಪ್ಪು ಮಾಡಿದ್ದಳು? ಆ ಹೈದ್ರಾಬಾದ್‌ನ ಮಗು ಏನು ತಪ್ಪು ಮಾಡಿತ್ತು? ರಾತ್ರಿ 9 ಗಂಟೆಗೆ ಆಫೀಸಿಂದ ಹೊರಬಂದಳು ಎನ್ನುವುದೇ ಆಕೆ ಮಾಡಿದ ತಪ್ಪೇನು? ಎಲ್ಲೋ ಒಂದು ಕಡೆ, ನಮ್ಮ ನ್ಯಾಯಾಂಗ ವ್ಯವಸ್ಥೆಯೇ ಇದಕ್ಕೆ ಜವಾಬ್ದಾರ ಎಂದು ನನಗನ್ನಿಸುತ್ತದೆ.

ಇಂಥ ಪ್ರಕರಣಗಳು ಬೆಳಕಿಗೆ ಬಂದಾಗಲೆಲ್ಲ ದೇಶದಲ್ಲಿ ಫಾಸ್ಟ್‌ಟ್ರ್ಯಾಕ್‌ ಕೋರ್ಟ್‌ಗಳು ಸ್ಥಾಪನೆಯಾಗುತ್ತಿವೆ, ಕಠಿಣ ಕಾನೂನುಗಳನ್ನು ರೂಪಿಸಲಾಗುತ್ತಿದೆ ಎಂದೆಲ್ಲ ಮಾತುಗಳು ಕೇಳಿಬರುತ್ತವೆ. ಆದರೆ ಸತ್ಯವೇನು ಗೊತ್ತೇ? ಯಾವ ಕೋರ್ಟಿನಲ್ಲಿ ಒಂದು ವರ್ಷದಿಂದ ನಮ್ಮ ಅಪೀಲಿನ ಮೇಲೆ ವಿಚಾರಣೆ ನಡೆದಿದೆಯೋ ಆ ನ್ಯಾಯಾಲಯದಲ್ಲಿ ಕಳೆದ ಎರಡು ತಿಂಗಳಿಂದ ನ್ಯಾಯಾಧೀಶರೇ ಇಲ್ಲ. ಮೊದಲಿದ್ದ ನ್ಯಾಯಾಧೀಶರು ಹೋದ ನಂತರ ಇನ್ನೊಬ್ಬರು ಬಂದೇ ಇಲ್ಲ.

ಸಂತ್ರಸ್ತೆಯ ಹೆಸರೇಕೆ ಗೌಪ್ಯವಾಗಿಡಬೇಕು?
ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಬಹಿರಂಗಗೊಳಿಸಬಾರದು ಎನ್ನಲಾಗುತ್ತದೆ. ಆದರೆ ಸಂತ್ರಸ್ತೆ ಏನು ತಪ್ಪು ಮಾಡಿದ್ದಾಳೆಂದು ಆಕೆಯ ಹೆಸರನ್ನು ಗೌಪ್ಯವಾಗಿಡಬೇಕು? ನನ್ನ ಮಗಳ ಹೆಸರು “ಜ್ಯೋತಿ ಸಿಂಗ್‌’ ಎಂದು ಹೇಳುವುದಕ್ಕೆ ನನಗ್ಯಾವ ಹಿಂಜರಿಕೆಯೂ ಅಲ್ಲ. ನನಗೆ ನನ್ನ ಮಗಳ ಮೇಲೆ ಗರ್ವವಿದೆ. ಆಕೆ ತನ್ನ ಜೀವ ಉಳಿಸಿಕೊಳ್ಳಲು ಬಹಳ ಹೋರಾಡಿದಳು.

ಯಾರು ತಪ್ಪು ಮಾಡಿದ್ದಾರೋ ಅವರಿಗೆ ತಮ್ಮ ಹೆಸರು ಹೇಳಲು ನಾಚಿಕೆಯಾಗಬೇಕು, ಬೇಕಿದ್ದರೆ ಅವರು ತಮ್ಮ ಹೆಸರನ್ನು ಗೌಪ್ಯವಾಗಿ ಇಡಲಿ. ಈ ಅಪರಾಧಿಗಳ ಅಪ್ಪ- ಅಮ್ಮಂದಿರು ತಮ್ಮ ಮಕ್ಕಳ ಹೆಸರನ್ನು ಮುಚ್ಚಿಡಲಿ. ನಾವ್ಯಾಕೆ ನಮ್ಮ ಹೆಣ್ಣುಮಕ್ಕಳ ಹೆಸರನ್ನು ಮುಚ್ಚಿಡಬೇಕು? ಈ ರೀತಿಯ ಪರಿಸ್ಥಿತಿ ಸೃಷ್ಟಿಯಾಗುವುದಕ್ಕೆ ಕಾರಣ, ನಮ್ಮ ಸಮಾಜ. ಅಯ್ಯೋ ನಿಮ್ಮ ಮಗಳ ಮೇಲೆ ಈ ರೀತಿ ಆಗಿಹೋಗಿದೆ, ಆಕೆಯನ್ನು ನೌಕರಿಯಿಂದ, ಕಾಲೇಜಿನಿಂದ ಬಿಡಿಸಿಬಿಡಿ. ಮನೆಯಲ್ಲಿ ಕೂರಿಸಿಬಿಡಿ, ಈ ವಿಷಯ ಹೊರಗೆ ಬರಲು ಬಿಡಬೇಡಿ ಎಂದುಬಿಡುತ್ತಾರೆ. ಅಂದರೆ, ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಸಮಾಜ ಈ ರೀತಿಯ ಅಪರಾಧಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

ಇದರಿಂದಾಗಿ “ನೀವು ನಮ್ಮ ರೇಪ್‌ ಮಾಡಿ, ನಾವು ಮನೆಯಲ್ಲಿ ಕೂತುಬಿಡುತ್ತೇವೆ, ನಂತರ ನೀವು ಇನ್ನೊಬ್ಬರ ಮೇಲೆ ಅತ್ಯಾಚಾರ ಮಾಡಿ’ ಎಂದು ದುರುಳರಿಗೆಲ್ಲ ಸಂದೇಶ ಹೋಗುತ್ತದೆ. ನಾವೆಲ್ಲರೂ, ಮುಖ್ಯವಾಗಿ ಮಹಿಳೆಯರು ಎದ್ದು ನಿಲ್ಲಬೇಕು, ಧ್ವನಿಯೆತ್ತಬೇಕು. ನಾನು ಗಂಡುಮಕ್ಕಳಿಗೂ ಹೇಳುವುದಿಷ್ಟೇ- ಈ ವಿಷಯದಲ್ಲಿ ನಿಮಗೂ ಜವಾಬ್ದಾರಿಯಿದೆ. ನಿಮ್ಮ ಬದುಕಿನಲ್ಲೂ ಹೆಣ್ಣಿದ್ದಾಳೆ- ಅಮ್ಮನಾಗಿ, ಮಡದಿಯಾಗಿ, ತಂಗಿಯಾಗಿ…ಭವಿಷ್ಯದಲ್ಲಿ ಮಗಳಾಗಿ. ಹೀಗಾಗಿ ಆ ಹೆಣ್ಣುಮಕ್ಕಳಿಗಾಗಿ ನೀವು ಧ್ವನಿಯೆತ್ತಿ.

ಹೆಣ್ಣಿನ ಮೇಲೆಯೇ ಆರೋಪ
ಎಲ್ಲಕ್ಕಿಂತ ನೋವು ಕೊಡುವ ಸಂಗತಿಎಂದರೆ, ಸುತ್ತೂ ಬಳಸಿ ಸಮಾಜ ಮತ್ತೆ ಹೆಣ್ಣುಮಕ್ಕಳ ಮೇಲೆಯೇ ದೋಷ ಹೊರಿಸುತ್ತದೆ. 2012ರಲ್ಲಿ ನನ್ನ ಮಗಳನ್ನು ಇವರೆಲ್ಲ ಕೊಂದುಹಾಕಿದಾಗಲೂ, “ಆ ಹುಡುಗಿ ರಾತ್ರಿ 9 ಗಂಟೆಗೆ ಅಲ್ಲೇನು ಮಾಡುತ್ತಿದ್ದಳು?’ ಎಂದು ಪ್ರಶ್ನಿಸಲಾಯಿತು. ಈಗ 2019ರಲ್ಲೂ ಅದೇ ಮಾತನಾಡಲಾಗುತ್ತಿದೆ. ಆ ಹುಡುಗಿ ರಾತ್ರಿ ಹೊತ್ತೇಕೆ ಹೊರಗಿದ್ದಳು, ಆಕೆ ತನ್ನ ತಂಗಿಗ್ಯಾಕೆ ಫೋನ್‌ ಮಾಡಿದಳು, ಅದರ ಬದಲು ಪೊಲೀಸರಿಗೆ ಫೋನ್‌ ಮಾಡಬಹುದಿತ್ತಲ್ಲ ಅಂತ. ಅರೆ, ಫೋನ್‌ ಮಾಡಿದರೆ ಪೊಲೀಸರು ಬಂದು ಬಿಡುತ್ತಾರಾ? ನಾನು 7 ವರ್ಷಗಳಿಂದ ನಮ್ಮ ಸರ್ಕಾರಗಳಿಗೂ ಹೇಳುತ್ತಲೇ ಬಂದಿದ್ದೇನೆ-ದಯವಿಟ್ಟೂ ಕಣ್ತೆರೆದು ವಾಸ್ತವವನ್ನು ನೋಡಿ. ಇಲ್ಲದಿದ್ದರೆ, ಮುಂದೊಂದು ದಿನ ಈ ರಕ್ಕಸರೆಲ್ಲ ನಮ್ಮ ಮನೆಗಳಿಗೇ ಹೊಕ್ಕು ನಮ್ಮ ಹೆಣ್ಣುಮಕ್ಕಳನ್ನು ಹೊತ್ತೂಯ್ಯುತ್ತಾರೆ.

ಒಂದು ಹನಿ ನೀರಿಗಾಗಿ ಪರಿತಪಿಸಿದಳು
ಇಂದಿಗೂ ನಾನು ನೀರು ಕುಡಿಯಲು ಗ್ಲಾಸನ್ನು ಕೈಗೆತ್ತಿಕೊಂಡಾಗೆಲ್ಲ ನನ್ನ ಮಗಳ ಕೊನೆಯ ದಿನಗಳು ನೆನಪಾಗುತ್ತವೆ. ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗಳಿಗೆ ಮಧ್ಯದಲ್ಲಿ ಎಚ್ಚರವಾಗಿತ್ತು. ನನ್ನತ್ತ ತಿರುಗಿದವಳೇ, “ಮಮ್ಮಿ ನನಗೆ ಬಾಯಾರಿಕೆ ಆಗ್ತಿದೆ’ ಅಂದಳು. ನಾನು ಅವಳಿಗೆ ನೀರು ಕುಡಿಸಲು ಮುಂದಾದಾಗ, ವೈದ್ಯರು, “”ಆಕೆಗೆ ಒಂದು ಚಮಚ ನೀರು ಕೂಡ ಕುಡಿಸುವಂತಿಲ್ಲ. ತುಂಬಾ ಅಪಾಯವಿದೆ” ಅಂದುಬಿಟ್ಟರು. ನನ್ನ ಕಣ್ಣೆದುರೇ ನನ್ನ ಮಗಳು ಒಂದು ಹನಿ ನೀರಿಗಾಗಿ ಪರಿತಪಿಸಿ ಹೊರಟುಹೋದಳು.

ಐಷಾರಾಮಿ ಕಾರ್‌ ಖರೀದಿಸಿದ್ದೇನೆಂದು ಆರೋಪಿಸುತ್ತಾರೆ
2013ರಲ್ಲಿ ಕಾಂಗ್ರೆಸ್‌ ಸರ್ಕಾರ ನಿರ್ಭಯಾ ಫ‌ಂಡ್‌ ಸ್ಥಾಪಿಸಿತ್ತು. ಆ ಫ‌ಂಡ್‌ನಲ್ಲಿನ ಹಣದಿಂದ ಸಂತ್ರಸ್ತರಿಗೆ ಸಹಾಯ ಮಾಡುವ ಉದ್ದೇಶವಿತ್ತು. ಆದರೆ ಇಷ್ಟು ವರ್ಷಗಳಾದರೂ ನಿರ್ಭಯಾ ಫ‌ಂಡ್‌ನಿಂದ ಯಾರಿಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಫ‌ಂಡ್‌ಗೆ ನಮ್ಮ ಮಗಳ ಹೆಸರು ಇಡಲಾಗಿದೆಯಾದರೂ, ಅದಕ್ಕೂ ನಮಗೂ ಸಂಬಂಧ ಇಲ್ಲ. ನೋವಿನ ವಿಷಯ ಎಂದರೆ, ನಾನು ಎಲ್ಲೇ ಹೋಗಲಿ, ಒಬ್ಬರಲ್ಲ ಒಬ್ಬರು “ನಿರ್ಭಯಾ ಫ‌ಂಡ್‌’ಗೆ ಬಂದ ಹಣವನ್ನು ನಾವೇ ಬಳಸುತ್ತಿದ್ದೇವೆ ಎಂಬ ಧಾಟಿಯಲ್ಲಿ ಆರೋಪಿಸುತ್ತಾರೆ. ಅದ್ಯಾವುದೋ “ಮಸ್ಟಿರೀ..ಮಸ್ಟೀಸ್‌’ ಅಂತ ಕಾರು ಇದೆಯೆಂತಲ್ಲ (ಮರ್ಸಿಡಿಸ್‌ ಬೆಂಝ್), ನಾನು ಆ ಕಾರನ್ನು ಖರೀದಿಸಿದ್ದೇನೆ ಎಂದು ಆರೋಪಿಸುತ್ತಾರೆ. ನಿಜ ಹೇಳುತ್ತೇನೆ ಆ ಕಾರಿನ ಹೆಸರು ಕೂಡ ಉಚ್ಚರಿಸಲೂ ನನಗೆ ಬರುವುದಿಲ್ಲ, ಅದು ಹೇಗಿರುತ್ತದೆ ಅನ್ನುವುದೂ ನನಗೆ ತಿಳಿಯದು. ಈಗಲೂ ನಿರ್ಭಯಾ ಫ‌ಂಡ್‌ ಸರ್ಕಾರದ ಬಳಿಯೇ ಇದೆ. ಈ ರೀತಿಯ ಆರೋಪಗಳನ್ನು ಕೇಳಿದಾಗೆಲ್ಲ ರಾತ್ರಿ ನಿದ್ದೆಯೇ ಬರುವುದಿಲ್ಲ. ಅತ್ತ ಮಗಳಿಗಾಗಿ ಹೋರಾಡಲೋ ಅಥವಾ ಇತ್ತ ಜನರಿಗೆ ಉತ್ತರಿಸುತ್ತಾ ಕೂರಲೋ ಎನ್ನುವುದೇ ತಿಳಿಯುತ್ತಿಲ್ಲ.

ಕಣ್ಣೀರು ಹಾಕಬೇಡಿ, ಸದೃಢರಾಗಿ
ನನಗೂ ಒಂದು ವಿಷಯ ಗೊತ್ತಿದೆ, ಅದು ನಿಮಗೂ ಗೊತ್ತಿದೆ- ನಾನು ಎಷ್ಟೇ ಸಂಘರ್ಷ ಮಾಡಿದರೂ, ಎಷ್ಟೇ ಹೋರಾಟ ಮಾಡಿದರೂ, ಆಕಾಶ ಭೂಮಿಯನ್ನು ಒಂದು ಮಾಡಿದರೂ ನನ್ನ ಮಗಳು ನನಗೆ ಸಿಗುವುದಿಲ್ಲ. ಆದರೆ, ದೇಶದ ಯಾವುದೇ ಹೆಣ್ಣುಮಗುವಿಗೂ ಇಂಥ ಸ್ಥಿತಿ ಬರದೇ ಇರಲಿ ಎನ್ನುವದಕ್ಕಾಗಿಯೇ ನಾನು ಹೋರಾಡುತ್ತಿದ್ದೇನೆ. ದೇಶದ ಹೆಣ್ಣುಮಕ್ಕಳಿಗೆ ನನ್ನ ಸಂದೇಶವಿಷ್ಟೆ. ಇದು ಕಣ್ಣೀರು ಹಾಕುವ ಸಮಯವಲ್ಲ. ದಯವಿಟ್ಟೂ ಅಳಬೇಡಿ. ನಿಮ್ಮ ಶಕ್ತಿ-ಸಾಮರ್ಥ್ಯವನ್ನು ಗುರುತಿಸಿಕೊಳ್ಳಿ. ನಿಮಗೆ ಯಾರಿಂದಲೂ ಹಾನಿಯಾಗದಷ್ಟು ಗಟ್ಟಿಯಾಗಿ ಬೆಳೆದು ನಿಲ್ಲಿ. ನೀವು ಎಷ್ಟು ಸದೃಢರಾಗಬೇಕೆಂದರೆ, ನಿಮ್ಮತ್ತ ಯಾರೂ ಕೆಟ್ಟದೃಷ್ಟಿ ಹಾಕುವ ಧೈರ್ಯ ತೋರಿಸಬಾರದು.
(ಕೃಪೆ- ವೀ ದಿ ವಿಮನ್‌)

ಆಶಾದೇವಿ , ನಿರ್ಭಯಾ ತಾಯಿ

(ಕೃಪೆ- ವೀ ದಿ ವಿಮನ್‌)

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಲಂಕೆಯಲ್ಲಿ ಯುದ್ಧವೆಲ್ಲ ಮುಗಿದು, ಮರಳುವಾಗ ವಿಮಾನದ ಮೇಲಿಂದ ರಾಮನು ತನ್ನೊಲವಿನ ಮಡದಿ ಸೀತೆಗೆ ರಾಮೇಶ್ವರಂನ ದ್ವೀಪವನ್ನು ತೋರಿಸಿ- "ನೋಡಿಲ್ಲಿ, ಈ ದ್ವೀಪದಲ್ಲೇ...

  • ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಈಗಾಗಲೇ ಶುರುವಾಗಿದ್ದು, 26ಕ್ಕೆ ಕೊನೆಗೊಳ್ಳಲಿದೆ. ಜಗತ್ತಿಗೆ ಶಾಂತಿ ಬೋಧಿಸಿದ ಈ ಮಠದಲ್ಲಿ ಭೋಜನವೂ...

  • ರಂಗದ ಮೇಲೆ ಮಿಂಚಿನ ಬಳ್ಳಿಯೊಂದು ಝಳಪಿಸಿದಂತೆ ಅದಮ್ಯ ಚೈತನ್ಯದಿಂದ ಲೀಲಾಜಾಲವಾಗಿ ನರ್ತಿಸಿದವಳು ಭರತನಾಟ್ಯ ಕಲಾವಿದೆ ಹರ್ಷಿತಾ ಜಗದೀಶ್‌. ಅದು ಅವಳ ಮೊದಲ ರಂಗಾರ್ಪಣೆ...

  • ಕುರಿಗಾಹಿಯೊಬ್ಬನಿಗೆ ಭೀಮಾ ನದಿಯಲ್ಲಿ ಗಾಜಿನ ರೂಪದ ಕಂಬದಲ್ಲಿದ್ದ ದೇವಿ ಕಾಣಿಸಿಕೊಳ್ಳುತ್ತಾಳೆ. ಆ ದೇವಿಯನ್ನು ಒಂದು ಸರ್ಪವು ಕಾಯುತ್ತಿತ್ತು... ಭೀಮಾ ನದಿಯಲ್ಲಿ...

  • "ಅದೊಂದು ವಟವೃಕ್ಷ. ಅಲ್ಲೊಂದು ವಿಚಿತ್ರವಾದ ಸನ್ನಿವೇಶ. ಗುರುವನ್ನು ಸುತ್ತುವರಿದು ಶಿಷ್ಯರೆಲ್ಲ ಕುಳಿತಿದ್ದಾರೆ. ಶಿಷ್ಯರೆಲ್ಲರೂ ವೃದ್ಧರು. ಗುರುವಾದರೋ ಯುವಕ....