ವಿಜಯನಗರ ಸಾಮ್ರಾಜ್ಯಕ್ಕಾಗಿ ಹೋರಾಟ

Team Udayavani, Oct 1, 2019, 5:36 AM IST

ಗಣಿನಾಡು ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ
ರಚಿಸಬೇಕೆಂಬ ಕೂಗು ಇಂದು ನಿನ್ನೆಯದಲ್ಲ. ಒಂದೂವರೆ ದಶಕ (2004)ದ ಹೋರಾಟದ ಹಿನ್ನೆಲೆಯಿದೆ. ಇಷ್ಟು ವರ್ಷಗಳ ಕಾಲ ಮೌನವಾಗಿದ್ದ ಜಿಲ್ಲೆ ರಚನೆಯ ಕೂಗು ಇದೀಗ ಅನರ್ಹ ಶಾಸಕ ಆನಂದ್‌ಸಿಂಗ್‌ ಅವರ ರಾಜಕೀಯ ಪ್ರತಿಷ್ಠೆಗಾಗಿ ಪುನಃ ಮುನ್ನೆಲೆಗೆ ಬಂದಿದೆ. ವಿಜಯನಗರ ಜಿಲ್ಲೆ ರಚಿಸುವುದು ಸಿಂಗ್‌ಗೆ ಪ್ರತಿಷ್ಠೆಯಾದರೆ ಇದನ್ನು ವಿರೋಧಿ ಸುತ್ತಿರುವ ರೆಡ್ಡಿ ಸಹೋದರರಿಗೆ “ಜಿಲ್ಲೆಯ ಮೇಲಿನ ತಮ್ಮ ಹಿಡಿತ ಕೈತಪ್ಪಲಿದೆಯೇ? ಪಕ್ಷದಲ್ಲಿ ವರ್ಚಸ್ಸು ಕುಸಿಯುತ್ತಿದೆಯೇ? ಜಿಲ್ಲೆಯಲ್ಲಿ ಪರ್ಯಾಯ ನಾಯಕ ಬೆಳೆಯುತ್ತಿದ್ದಾನೆಯೇ?’ ಎಂಬ ಆತಂಕ ಎದುರಾಗಿದೆ. ವಿಜಯನಗರ ಜಿಲ್ಲೆ ರಚನೆಗೆ ಆರಂಭದಲ್ಲೇ ಪರ-ವಿರೋಧ ವ್ಯಕ್ತವಾಗುತ್ತಿದ್ದು, ರಾಜ್ಯ ಸರ್ಕಾರ ಕೈಗೊಳ್ಳುವ ನಿರ್ಣಯ ಕುತೂಹಲ ಮೂಡಿಸಿದೆ.

ವಿಜಯನಗರ ಜಿಲ್ಲೆ ರಚನೆಗಾಗಿ ಸೆ.18ರಂದು ಆನಂದ್‌ಸಿಂಗ್‌ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ ಮರುದಿನವೇ ಇದಕ್ಕೆ ಸಂಬಂಧಿ ಸಿದಂತೆ ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಲು ಪ್ರಸ್ತಾವನೆ ಸಲ್ಲಿಸುವಂತೆ ಬಳ್ಳಾರಿ ಜಿಲ್ಲಾ ಧಿಕಾರಿಗಳಿಗೆ ಪತ್ರ ಬರೆದಿರುವುದು ಬಿಜೆಪಿ ಶಾಸಕರನ್ನು ಕೆರಳಿಸಿದೆ. ಅಲ್ಲದೇ ಬಳ್ಳಾರಿ ಸೇರಿದಂತೆ ಪಶ್ಚಿಮ ತಾಲೂಕುಗಳಲ್ಲೂ ವಿರೋಧ ವ್ಯಕ್ತವಾಗುತ್ತಿದ್ದು, ಅಖಂಡ ಬಳ್ಳಾರಿ ಜಿಲ್ಲೆಯನ್ನು ಮುಂದುವರೆಸಬೇಕು ಅಥವಾ ಹೊಸಪೇಟೆಯನ್ನು ಬಿಟ್ಟು ಬೇರೆ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಹೊಸಪೇಟೆಯಲ್ಲೂ ವಿಜಯನಗರ ಜಿಲ್ಲೆ ಪರವಾಗಿ ಹಲವಾರು ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸುತ್ತಿವೆ.

ರೆಡ್ಡಿಗಳಿಂದ ವಿರೋಧವೇಕೆ?
ವಿಜಯನಗರ ಜಿಲ್ಲೆ ಮಾಡುವಂತೆ ಬಿಜೆಪಿಯೇತರ ಅನರ್ಹ ಶಾಸಕ ಆನಂದ್‌ಸಿಂಗ್‌ ಮನವಿ ಸಲ್ಲಿಸಿದಾಕ್ಷಣ ಸಿಎಂ ಯಡಿಯೂರಪ್ಪ ಸ್ಪಂದಿಸಿ ಜಿಲ್ಲಾಧಿ ಕಾರಿಗಳಿಗೆ ಪತ್ರ ಬರೆದಿರುವುದು ರೆಡ್ಡಿ ಸಹೋದರರಾದ ಶಾಸಕ ಜಿ. ಸೋಮಶೇಖರರೆಡ್ಡಿ, ಜಿ.ಕರುಣಾಕರರೆಡ್ಡಿ ಅವರನ್ನು ಪರೋಕ್ಷವಾಗಿ ಕೆರಳಿಸಿದೆ. ಈ ಕುರಿತಂತೆ ಈಗಾಗಲೇ ಬಹಿರಂಗವಾಗಿಯೇ ರೆಡ್ಡಿ ಸಹೋದರರಿಬ್ಬರೂ ಅಸಮಾಧಾನ ಹೊರಹಾಕಿದ್ದಾರೆ. ಕೇವಲ ಬಿಜೆಪಿಯೇತರ ವ್ಯಕ್ತಿಯೊಬ್ಬ ನೀಡಿದ ಮನವಿಗೆ ಸಿಎಂ ಸ್ಪಂದಿಸಿದರೆ ಜಿಲ್ಲೆಯಲ್ಲಿರುವ ನಾಲ್ವರು ಬಿಜೆಪಿ ಶಾಸಕರು ನಾವೇನು ಪಕ್ಷದಲ್ಲಿ ಇದ್ದೀವಾ ಅಥವಾ ಇಲ್ಲ ಎಂಬ ಅನುಮಾನ ನಮಗೆ ಕಾಡುತ್ತಿದೆ ಎಂದು ಕರುಣಾಕರ ರೆಡ್ಡಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಜತೆಗೆ ಜಿ. ಸೋಮಶೇಖರರೆಡ್ಡಿ, ಒಬ್ಬ ರಾಜೀನಾಮೆ ನೀಡಿದ್ದಕ್ಕೆ ಬಳ್ಳಾರಿ ವಿಭಜನೆಗೆ ಮುಂದಾದರೆ, ನಾಲ್ವರು ಬಿಜೆಪಿ ಶಾಸಕರು ರಾಜೀನಾಮೆ ನೀಡಿದರೆ? ಎಂಬ ಪ್ರಶ್ನೆಯನ್ನು ಸಹ ಪರೋಕ್ಷವಾಗಿ ಸಿಎಂ ಮುಂದಿಟ್ಟಿದ್ದಾರೆ. ಅಲ್ಲದೇ, ಸಿಎಂ ಬಿಎಸ್‌ವೈ, ಆನಂದ್‌ಸಿಂಗ್‌ ಮನವಿಗೆ ಮಣೆ ಹಾಕಿರುವುದು, ಹಿಂದೊಮ್ಮೆ ಬಿಜೆಪಿ ಸರ್ಕಾರವನ್ನು, ಬಳ್ಳಾರಿ ಜಿಲ್ಲೆಯನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದ ರೆಡ್ಡಿ ಸಹೋದರರಿಗೆ ಇರುಸು ಮುರುಸು ಉಂಟು ಮಾಡಿದೆ. ಬಿಜೆಪಿಯಲ್ಲಿ ರೆಡ್ಡಿ ಸಹೋದರರ ವರ್ಚಸ್ಸು ಕುಂಠಿತವಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಜಿಲ್ಲೆಯಲ್ಲಿ ರೆಡ್ಡಿ ಸಹೋದರರಿಗೆ ಪರ್ಯಾಯ ನಾಯಕ ಬೆಳೆಯುತ್ತಿದ್ದಾನೆ ಎಂಬ ಆತಂಕವೂ ರೆಡ್ಡಿ ಸಹೋದರರನ್ನು ಕಾಡುತ್ತಿದೆ. ಹೀಗಾಗಿ ವಿಜಯನಗರ ಜಿಲ್ಲೆ ರಚನೆಗೆ ರೆಡ್ಡಿ ಸಹೋದರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿಗೇನು ಲಾಭ?
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರ (ಹೊಸಪೇಟೆ) ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಮೇಲಾಗಿ ಹೊಸಪೇಟೆ, ಕಮಲಾಪುರ, ಹಗರಿಬೊಮ್ಮನಹಳ್ಳಿಯಲ್ಲಿ ಆರ್‌ಎಸ್‌ಎಸ್‌ ಸಂಘಟನೆ ಸಹ ಬಲಿಷ್ಠವಾಗಿವೆ. ಹೀಗಾಗಿ ಅಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಿಷ್ಠಪಡಿಸುವ ಸಾಧ್ಯತೆಯಿದೆ. ಇನ್ನು ಬಳ್ಳಾರಿಯಲ್ಲಿ ಆರ್‌ಎಸ್‌ಎಸ್‌ ಪ್ರಭಾವ ಅಷ್ಟಾಗಿ ಇಲ್ಲ. ಬಳ್ಳಾರಿ, ಬಳ್ಳಾರಿ ಗ್ರಾಮೀಣ, ಸಂಡೂರು, ಸಿರುಗುಪ್ಪ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ತನ್ನದೇ ಆದ ಮತಗಳಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ದಿಸಿದ್ದ ಮಾಜಿ ಶಾಸಕ ಅನಿಲ್‌ಲಾಡ್‌ 61 ಸಾವಿರ, ಸಿರುಗುಪ್ಪದಲ್ಲಿ ನಾಗೇಂದ್ರ ಸಂಬಂಧಿ ಮುರಳಿಕೃಷ್ಣ 60 ಸಾವಿರ ಮತ ಪಡೆದು ಬಿಜೆಪಿಗೆ ಅಚ್ಚರಿ ಮೂಡಿಸಿದ್ದರು. ಅಲ್ಲದೇ, ಕಳೆದ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರೂ ಬಳ್ಳಾರಿ, ಬಳ್ಳಾರಿ ಗ್ರಾಮೀಣ, ಸಂಡೂರು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷ ಮುನ್ನಡೆ ಸಾಧಿಸಿದೆ. ಹೀಗಾಗಿ ವಿಜಯನಗರ ಜಿಲ್ಲೆಯಾದರೆ ಅಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗುವುದರ ಜತೆಗೆ ಪಕ್ಷದ ಉಸ್ತುವಾರಿಯನ್ನು ಆನಂದ್‌ಸಿಂಗ್‌ಗೆ ನೀಡಬಹುದು.

ಇದು ಯಾರ ಐಡಿಯಾ?
ವಿಜಯನಗರ ಜಿಲ್ಲೆ ರಚನೆಯಾಗಬೇಕು ಎಂಬ ಕೂಗು ಕಳೆದ ಒಂದೂವರೆ ದಶಕದಿಂದ ಕೇಳಿಬರುತ್ತಿದೆಯಾದರೂ ಅದಕ್ಕೆ ಅನರ್ಹ ಶಾಸಕ ಆನಂದ್‌ಸಿಂಗ್‌ರಿಂದ ಮತ್ತಷ್ಟು ಪುಷ್ಟಿ ಬಂದಂತಾಗಿದೆ. ಬಿಜೆಪಿಯಿಂದ ಸತತ ಎರಡು (2008, 2013) ಬಾರಿ ಆಯ್ಕೆಯಾಗಿದ್ದ ಆನಂದ್‌ಸಿಂಗ್‌, 2018ರಲ್ಲಿ ಕೇವಲ 8228 ಮತಗಳ ಅಂತರದಿಂದ ಜಯಗಳಿಸಿದರು. ಇದು ಸಿಂಗ್‌ಗೆ ಹ್ಯಾಟ್ರಿಕ್‌ ಗೆಲುವು ಎನಿಸಿದರೂ ಅಂತರ ಕಡಿಮೆಯಾಗಿರುವುದು ಕ್ಷೇತ್ರದಲ್ಲಿ ತಮ್ಮ ವರ್ಚಸ್ಸು ಕುಸಿಯುತ್ತಿದೆ ಎಂಬ ಅನುಮಾನ ಮೂಡಿಸಿತ್ತು. ಹಾಗಾಗಿ ಕಾಂಗ್ರೆಸ್‌ ತೊರೆದು ವಾಪಸ್‌ ಬಿಜೆಪಿ ಸೇರುವ ಮುನ್ನ ಜಿಂದಾಲ್‌ಗೆ ಜಮೀನು ಪರಭಾರೆ ಮತ್ತು ವಿಜಯನಗರ ಜಿಲ್ಲೆ ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಹೈಕಮಾಂಡ್‌ ಸೂಚನೆಯಂತೆ ಜಿಂದಾಲ್‌ ಬೇಡಿಕೆ ಕೈಬಿಟ್ಟ ಆನಂದ್‌ಸಿಂಗ್‌, ವಿಜಯನಗರ ಜಿಲ್ಲೆ ರಚನೆ ಬೇಡಿಕೆ ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ತಮ್ಮ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಈ ಐಡಿಯಾವನ್ನು ಉಪಯೋಗಿಸಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು.

ಆನಂದ್‌ ಸಿಂಗ್‌ ಲೆಕ್ಕಾಚಾರ ಏನು?
ಮೂಲತಃ ಜೆಡಿಎಸ್‌ನಲ್ಲಿದ್ದ ಆನಂದ್‌ಸಿಂಗ್‌ ಅವರನ್ನು 2008ರ ವಿಧಾನಸಭೆ ಚುನಾವಣೆ ವೇಳೆ ಮಾಜಿ ಸಚಿವ ಜನಾರ್ದನ ರೆಡ್ಡಿಯವರೇ ಸಿಂಗ್‌ ಮನೆಗೆ ಹೋಗಿ ಬಿಜೆಪಿಗೆ ಕರೆತಂದು ರಾತ್ರೋರಾತ್ರಿ ವಿಜಯನಗರ ಕ್ಷೇತ್ರದಿಂದ ಕಣಕ್ಕಿಳಿಸಿದ್ದರು. ಕಾರ್ಯಕ್ರಮವೊಂದರಲ್ಲಿ ಆನಂದ್‌ಸಿಂಗ್‌ ಸಹ ಜನಾರ್ದನರೆಡ್ಡಿ ಅವರನ್ನು ತನ್ನ ರಾಜಕೀಯ ಗುರುವೆಂದು ಹೇಳಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಮೂಲ ಬಿಜೆಪಿ, ಸಿಂಗ್‌ ಬೆಂಬಲಿಗರ ನಡುವೆ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಆನಂದ್‌ಸಿಂಗ್‌ ಬಿಜೆಪಿ ತೊರೆದು 2018 ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೇರಿ ಹ್ಯಾಟ್ರಿಕ್‌ ಜಯ ಗಳಿಸಿದ್ದರು. ಆದರೆ, ಇದೀಗ ವಾಪಸ್‌ ಬಿಜೆಪಿಗೆ ಸೇರಲಿರುವ ಆನಂದ್‌ಸಿಂಗ್‌, ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ. ಇದೀಗ ಜಿಲ್ಲೆ ರಚನೆಯಿಂದಾಗಿ ಕ್ಷೇತ್ರದಲ್ಲಿ ನಿಧಾನವಾಗಿ ಕುಸಿಯುತ್ತಿದ್ದ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ರೆಡ್ಡಿಗಳಿಗೆ ಪರ್ಯಾಯವಾಗಿ ಬೆಳೆಯಲು ತಂತ್ರಗಾರಿಕೆ ಹೆಣೆದಿದ್ದಾರೆ.

ಶ್ರೀರಾಮುಲು ನಿಲುವೇನು?
ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಇಕ್ಕಟ್ಟಿಗೆ ಸಿಲುಕಿದ್ದಾರೆ. ಇತ್ತೀಚೆಗಷ್ಟೇ ವಿಜಯನಗರ ಜಿಲ್ಲೆ ರಚನೆಗೆ ವಿರೋಧ ವ್ಯಕ್ತಪಡಿಸಿದ್ದ ರಾಮುಲು, ಸಚಿವ ಸಂಪುಟ ಸಭೆ ಚರ್ಚೆಯಲ್ಲಿ ನಾವು ಭಾಗವಹಿಸಿ ವಿರೋಧ ವ್ಯಕ್ತಪಡಿಸುತ್ತೇವೆ ಎಂದಿದ್ದರು. ಆದರೆ, ಎರಡು ದಿನಗಳ ಹಿಂದೆ ವಿಜಯನಗರ ಜಿಲ್ಲೆ ರಚನೆಗೆ ವಿರೋಧವಿದ್ದರೂ, ಪಕ್ಷದ ನಿರ್ಣಯಗಳಿಗೆ ಬದ್ಧ ಎನ್ನುವ ಮೂಲಕ ಗೊಂದಲದ ಹೇಳಿಕೆ ನೀಡಿದ್ದರು. ವಿಜಯನಗರ ಜಿಲ್ಲೆ ವಿರೋಧಿಸಿ ಹೈಕಮಾಂಡ್‌ ಜತೆ ಮಾತನಾಡಲಾರದೆ, ಸರ್ಕಾರ ಕೈಗೊಂಡಿರುವ ನಿರ್ಣಯ ಒಪ್ಪಿಕೊಳ್ಳಲಾರದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.

ರೆಡ್ಡಿಗಳ ಮೂಲೆಗುಂಪು ಮಾಡುವ ಪ್ರಯತ್ನ?
ಒಂದು ಕಾಲದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೆಡ್ಡಿ ಸಹೋದರರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗುತ್ತಿದೆಯಾ? ಬಳ್ಳಾರಿ ವಿಭಜನೆಗೆ ಆನಂದ್‌ಸಿಂಗ್‌ ಮನವಿಗೆ ಮಣೆ ಹಾಕಿದಂತೆ ಯಡಿಯೂರಪ್ಪ, ರೆಡ್ಡಿ ಸಹೋದರರ ವಿರೋಧವನ್ನು ಪರಿಗಣಿಸುತ್ತಿಲ್ಲ. ಅ.2ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲೆ ರಚನೆ ವಿಷಯ ಚರ್ಚೆಗೆ ಬರುವ ಸಾಧ್ಯತೆಯಿದ್ದರೂ, ಈವರೆಗೂ ರೆಡ್ಡಿ ಸಹೋದರರು ಸೇರಿ ಜಿಲ್ಲೆಯ ಬಿಜೆಪಿ ಶಾಸಕರನ್ನು ಕರೆದು ಚರ್ಚಿಸಿಲ್ಲ. ಇದನ್ನು ಗಮನಿಸಿದರೆ ಮೇಲ್ನೋಟಕ್ಕೆ ರೆಡ್ಡಿ ಸಹೋದರರನ್ನು ನಿರ್ಲಕ್ಷಿಸಿ ಪರ್ಯಾಯವಾಗಿ ಅನರ್ಹ ಶಾಸಕ ಆನಂದ್‌ಸಿಂಗ್‌ಗೆ ಮಣೆ ಹಾಕುತ್ತಿರುವುದು ಕಂಡುಬರುತ್ತಿದೆ.

ಕಾಂಗ್ರೆಸ್‌-ಜೆಡಿಎಸ್‌ಗೆ ಆಗುವ ಲಾಭ-ನಷ್ಟವೇನು?
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ನೀಡುತ್ತಿದ್ದ ಜೆಡಿಎಸ್‌ ಸದ್ಯ ನೆಲಕಚ್ಚಿದೆ. ಗ್ರಾಮೀಣ ಭಾಗದಲ್ಲಿ ಜೆಡಿಎಸ್‌ಗೆ ಕಾರ್ಯಕರ್ತರಿದ್ದರೂ ಸಂಘಟನೆ, ಸಮರ್ಥ ನಾಯಕನ ಕೊರತೆಯಿಂದಾಗಿ ಬಲಿಷ್ಠಗೊಳ್ಳುತ್ತಿಲ್ಲ. ಜೆಡಿಎಸ್‌ನಿಂದ ಮತಗಳ ವಿಭಜನೆಗಷ್ಟೇ ಸೂಕ್ತ ಹೊರತು ಕಾಂಗ್ರೆಸ್‌-ಬಿಜೆಪಿ ಪಕ್ಷಗಳಿಗೆ ನಷ್ಟವೇನೂ ಇಲ್ಲ. ಇನ್ನು ಜಿಲ್ಲೆ ವಿಭಜನೆಯಿಂದಾಗಿ ಕಾಂಗ್ರೆಸ್‌ಗೆ ಭಾರಿ ನಷ್ಟವಾಗುವ ಸಾಧ್ಯತೆಯಿದೆ. ವಿಜಯನಗರ ಜಿಲ್ಲೆಯಾದರೆ ಆನಂದ್‌ಸಿಂಗ್‌ ನೇತೃತ್ವದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗುವ ಸಾಧ್ಯತೆಯಿದೆ. ಇದರಿಂದ ಕಾಂಗ್ರೆಸ್‌ ಭದ್ರಕೋಟೆ ಎನಿಸಿಕೊಂಡಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಭಾರಿ ಪೆಟ್ಟು ಬೀಳುವ ಸಾಧ್ಯತೆಯಿದೆ.

ವೆಂಕೋಬಿ ಸಂಗನಕಲ್ಲು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ