ವಂಚನೆಯ ಪೆಟ್ಟಿಗೆ ತತ್ತರಿಸಿದ ಬ್ಯಾಂಕುಗಳು

Team Udayavani, Sep 11, 2019, 5:32 AM IST

ಬ್ಯಾಂಕ್‌ಗಳು ದೇಶದ ಆರ್ಥಿಕ ವ್ಯವಸ್ಥೆಯ ಜೀವನಾಡಿಗಳು. 2008ರಲ್ಲಿ ವಿಶ್ವ ಆರ್ಥಿಕ ಬಿಕ್ಕಟ್ಟಿಗೆ ಅಮೆರಿಕದ ಬ್ಯಾಂಕ್‌ಗಳಲ್ಲಾದ ಬೆಳವಣಿಗೆಗಳೇ ಪ್ರಮುಖ ಕಾರಣವಾಗಿತ್ತು. ಆದರೆ, ನಮ್ಮ ಬ್ಯಾಂಕ್‌ಗಳು ಸದೃಢವಾಗಿದ್ದರಿಂದ ಆರ್ಥಿಕ ಬಿಕ್ಕಟ್ಟಿನ ಬಿಸಿ ಭಾರತಕ್ಕೆ ಅಷ್ಟಾಗಿ ತಟ್ಟಲಿಲ್ಲ. ಆದರೆ, ಇದೀಗ ಆನೇಕ ಸುಧಾರಣೆ ಕ್ರಮಗಳ ಹೊರತಾಗಿಯೂ ಭಾರತದ ಬ್ಯಾಂಕ್‌ಗಳು ಆರ್ಥಿಕ ಸಂಕಷ್ಟದ ಭೀತಿಯಲ್ಲಿವೆ. ಅನುತ್ಪಾದಕ ಸಾಲದ ಮೊತ್ತ (ಎನ್‌ಪಿಎ) ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ನಡುವೆಯೇ ದೊಡ್ಡ ಪ್ರಮಾಣದಲ್ಲಿ ಬ್ಯಾಂಕ್‌ ವಂಚನೆಗಳೂ ಕಂಡು ಬರುತ್ತಿವೆ. ಪ್ರಸಕ್ತ ವಿತ್ತ ವರ್ಷದ ಮೊದಲ ತ್ತೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ 18 ಬ್ಯಾಂಕುಗಳಲ್ಲಿ 32 ಸಾವಿರ ಕೋಟಿ ರೂ. ವಂಚನೆಯಾಗಿರುವುದನ್ನು ಆರ್‌ಬಿಐ ದೃಢಪಡಿಸಿದೆ. ಕಳೆದ ಆರ್ಥಿಕ ವರ್ಷ 72 ಸಾವಿರ ಕೋಟಿ ರೂ. ವಂಚನೆಯಾಗಿತ್ತು. ಇದೀಗ ಈ ವರ್ಷ ಮೊದಲು ತ್ತೈಮಾಸಿದಲ್ಲೇ ಕಳೆದ ವರ್ಷದ ಅರ್ಧದಷ್ಟು ಮೊತ್ತದ ವಂಚನೆಯಾಗಿದೆ. ಬ್ಯಾಂಕ್‌ ವಂಚನೆ ಹೊರೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಗ್ರಾಹಕರಿಗೆ ತಟ್ಟಲಿದೆ. ಇದು ಹೀಗೇ ಮುಂದುವರಿದರೆ ಬ್ಯಾಂಕ್‌ಗಳ ಮೇಲೆ ಜನರಿಗೆ ವಿಶ್ವಾಸ ಇಲ್ಲದಂತಾಗಲಿದೆ. ಬ್ಯಾಂಕ್‌ ವಂಚನೆಯ ಸ್ವರೂಪದ ಬಗ್ಗೆ ಆರ್‌ಬಿಐಗೂ ಪೂರ್ಣ ಮಾಹಿತಿ ಇಲ್ಲ. ಬ್ಯಾಂಕ್‌ಗಳಿಗೆ ಮತ್ತು ಗ್ರಾಹಕರಿಗೆ ವಂಚನೆಗಳು ಹೇಗೆ ನಡೆಯುತ್ತವೆ ಎಂಬುದರ ಕುರಿತು ಸ್ಥೂಲನೋಟ ಇಲ್ಲಿದೆ.

ಬ್ಯಾಂಕ್‌ಗಳಿಗೆ ವಂಚನೆ
ಮಾಹಿತಿ ಮುಚ್ಚಿಟ್ಟು ಸಾಲ ಪಡೆಯುವುದು
ಸಾಮಾನ್ಯವಾಗಿ ಯಾವುದೇ ಕಂಪನಿ ವ್ಯಾಪಾರ, ವಹಿವಾಟು, ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿ ಸಾಲ ಮಂಜೂರು ಮಾಡು ವುದು ವಾಡಿಕೆ. ಆದರೆ, ಕೆಲ ಕಂಪನಿಗಳು ತಮ್ಮ ಆರ್ಥಿಕ ಸ್ಥಿತಿ ನಷ್ಟದಲ್ಲಿದ್ದರೂ ಇದನ್ನು ಮುಚ್ಚಿಟ್ಟು ಲಾಭಾಂಶವನ್ನು ತೋರಿಸಿ ಸಾಲ ಪಡೆಯುತ್ತ ವೆ. ಸಂಸ್ಥೆಗಳು ದಿವಾಳಿಯಾದಾಗ ಈ ಸಾಲಗಳು ವಸೂಲಾತಿ ಆಗುವುದೇ ಇಲ್ಲ. ಇದರಲ್ಲಿ ಬ್ಯಾಂಕ್‌ ಅಧಿಕಾರಿಗಳು ಕೂಡ ಶಾಮೀಲಾಗಿರುವ ಸಾಧ್ಯತೆ ಇರುತ್ತದೆ

ನಕಲಿ ದಾಖಲೆ ಪತ್ರಗಳ ಬಳಕೆ
ಬ್ಯಾಂಕ್‌ಗಳಿಗೆ ನಕಲಿ ದಾಖಲೆ ಪತ್ರಗಳನ್ನು ಸಲ್ಲಿಸಿ ಸಣ್ಣ ಹಾಗೂ ದೊಡ್ಡ ಮೊತ್ತದ ಸಾಲ ಪಡೆಯುವುದು, ವೈಯಕ್ತಿಕ ಠೇವಣಿ ಹಾಗೂ ಹೂಡಿಕೆ ಹಣವನ್ನು ತೆಗೆದುಕೊಳ್ಳುವುದು ನಡೆಯುತ್ತಿ ದೆ. ಬೇರೆ ಶಾಖೆಗಳಿಗೆ ಹಣ ವರ್ಗಾವಣೆ ಮಾಡುವುದು. ಸಾಲ ವಸೂಲಾತಿ ಪ್ರಕ್ರಿಯೆ ನಡೆಯುವಾಗ ವಂಚನೆಯಾಗಿರುವುದು ಕಂಡು ಬರುತ್ತದೆ. ಆ ಹೆಸರಿನಲ್ಲಿ ಮೂಲ ವ್ಯಕ್ತಿ ಹಾಗೂ ದಾಖಲಾತಿಗಳೇ ಇರುವುದಿಲ್ಲ.

ಖೋಟಾ ನೋಟುಗಳು
ಖೋಟಾ ನೋಟುಗಳನ್ನು ಸೃಷ್ಟಿಸಿ ಹಣ ಚಲಾವಣೆ ಮಾಡ ಲಾಗುತ್ತದೆ. ದೊಡ್ಡ ಪ್ರಮಾಣದ ಹಣ ಬದಲಾವಣೆಗೆ ಖೋಟಾ ನೋಟುಗಳನ್ನು ಬಳಸಲಾಗುತ್ತಿದೆ. ಇದರಿಂದ ಬ್ಯಾಂಕ್‌ ಹಾಗೂ ಆರ್‌ಬಿಐಗೆ ಭಾರೀ ಪ್ರಮಾಣ ನಷ್ಟ ಉಂಟಾಗುತ್ತದೆ.

ಕಂಪ್ಯೂಟರ್‌ ವಂಚನೆ
ದೇಶದ ಬಹುತೇಕ ಬ್ಯಾಂಕಿಂಗ್‌ ವ್ಯವಸ್ಥೆ ಗಣಕೀಕೃತವಾಗಿದೆ. ಪ್ರತಿ ವಹಿವಾಟುಗಳನ್ನು ಕಂಪ್ಯೂಟರ್‌ ಮೂಲಕವೇ ನಡೆಸಲಾಗು ತ್ತದೆ. ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಅಕೌಂಟ್‌, ಬ್ಯಾಲೆನ್ಸ್‌ ಶೀಟ್‌, ಹಣ ವರ್ಗಾವಣೆ ದಾಖಲೆ, ಡೇಟಾಗಳು, ಆನ್‌ಲೈನ್‌ ವಹಿವಾಟುಗಳು ಸಂಗ್ರಹವಾಗಿರುತ್ತವೆ. ಹ್ಯಾಕರ್‌ಗಳಿಂದ ಕಂಪ್ಯೂಟರ್‌ ಪ್ರೋಗ್ರಾಂ, ಡೇಟಾಗಳನ್ನು ಕದಿಯುವುದು, ದಾಖಲಾತಿಗಳನ್ನು ಅಳಿಸುವುದು ನಡೆಯುತ್ತದೆ. ವಿಭಿನ್ನ ರೀತಿಯಲ್ಲಿ ಕಸರತ್ತು ನಡೆಸಿ ಹಣ ಲಪಟಾಯಿಸಲಾ ಗುತ್ತಿದೆ. ಯಾವುದೇ ಭಾಗದಲ್ಲಿ ಸೆಟಲೈಟ್‌ ಕಂಪ್ಯೂಟರ್‌ ಬಳಸಿ ವಂಚನೆ ನಡೆಯುವುದು ಕಂಡು
ಬರುತ್ತಿದೆ.

ಫೋರ್ಜರಿ ಚೆಕ್‌ನಿಂದ ಹಣ ಪಡೆಯುವುದು
ಬ್ಯಾಂಕ್‌ನ ನೈಜ ಠೇವಣಿದಾರರ ಹೆಸರು, ಸಹಿ, ಖಾತೆ ಸಂಖ್ಯೆಯ ಮಾಹಿತಿ ಪಡೆದು ನಕಲಿ ಚೆಕ್‌ಗಳಿಂದ ಹಣ ಡ್ರಾ ಮಾಡಿಕೊಳ್ಳಲಾಗುತ್ತದೆ. ಫೋರ್ಜರಿ ಚೆಕ್‌ಗಳನ್ನು ಬಳಸಿ 100 ರೂ.ನಿಂದ 1 ಲಕ್ಷ ರೂ.ವರೆಗೆ ಹಣ ಪಡೆಯುತ್ತಾರೆ. ಅಧಿಕ ಮೊತ್ತ ನಮೂದಿಸಿದರೆ ಅನುಮಾನ ಬರುತ್ತದೆ. ಹೀಗಾಗಿ ಸೀಮಿತ ಮೊತ್ತವನ್ನು ಮಾತ್ರ ಈ ರೀತಿ ಪಡೆಯಲಾಗುತ್ತದೆ. ನೈಜ ಗ್ರಾಹಕರು ಅಥವಾ ಠೇವಣಿದಾರರು ತಮ್ಮ ಹಣ ಬಿಡಿಸಿಕೊಳ್ಳಲು ಬಂದಾಗ ಖಾತೆಯಲ್ಲಿ ಬ್ಯಾಲೆನ್ಸ್‌ ಇಲ್ಲದಿರುವುದು ಕಂಡು ಬರುತ್ತದೆ.

ಆನ್‌ಲೈನ್‌ ಬ್ಯಾಂಕಿಂಗ್‌ ವಂಚನೆ
ಭಾರತದಲ್ಲಿ ಶೇ.18ರಷ್ಟು ಮಂದಿ ಆನ್‌ಲೈನ್‌ ಬ್ಯಾಂಕಿಂಗ್‌ ವಂಚನೆಗೊಳಗಾಗುತ್ತಿರುವುದು ಎಫ್ಐಎಸ್‌ ನಡೆಸಿದ ಸಮೀಕ್ಷೆ ಯಲ್ಲಿ ದೃಢಪಟ್ಟಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಪ್ರಮಾಣದ ಆನ್‌ಲೈನ್‌ ಬ್ಯಾಂಕಿಂಗ್‌ ವಂಚನೆಯಾಗಿದೆ. ಜರ್ಮನಿಯಲ್ಲಿ ಶೇ.8 ಹಾಗೂ ಐರೋಪ್ಯ ರಾಷ್ಟ್ರಗಳಲ್ಲಿ ಶೇ.6ರಷ್ಟು ಮಂದಿ ಮೋಸ ಹೋಗುತ್ತಿದ್ದಾರೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳಲ್ಲೇ ಈ ರೀತಿ ವಂಚನೆಯಾಗುತ್ತಿರುವುದು ಆತಂಕಕಾರಿ ಸಂಗತಿ. ಬ್ಯಾಂಕಿನ ವೆಬ್‌ಸೈಟ್‌ಗಳನ್ನು ನಕಲಿಯಾಗಿ ಸೃಷ್ಟಿಸಿ, ಗ್ರಾಹಕರಿಗೆ ಇ-ಮೇಲ್‌ ಕಳುಹಿಸಿ, ಕ್ರೆಡಿಟ್‌ ಕಾರ್ಡ್‌ ಹಾಗೂ ಡೆಬಿಟ್‌ ಕಾರ್ಡ್‌ ಮಾಹಿತಿ ಪಡೆಯುತ್ತಾರೆ. ನಕಲಿ ಕಾರ್ಡ್‌ಗಳನ್ನು ಬಳಸಿ ಹಣ ದೋಚುವುದು ಸಾಮಾನ್ಯವಾಗಿದೆ. ಅಲ್ಲದೇ ಬ್ಯಾಂಕ್‌ ಖಾತೆಗಳನ್ನು ಹ್ಯಾಕ್‌ ಮಾಡಿ ವಂಚನೆ ನಡೆಸಲಾಗುತ್ತಿದೆ. ಪ್ರಸ್ತುತ ವಿಶ್ವದಲ್ಲಿ ಬ್ಯಾಂಕ್‌ ವಂಚನೆ ಎಂಬುದು ದೊಡ್ಡ ಬ್ಯುಸಿನೆಸ್‌ ಆಗಿದೆ.

ಎಟಿಎಂಗಳಲ್ಲಿ ಹಣ ಡ್ರಾ ಮಾಡುವಾಗ ಎಚ್ಚರವಹಿಸಿ
ಎಟಿಎಂ ಕೇಂದ್ರಗಳಲ್ಲಿ ನಿಮಗೆ ಯಾವುದೇ ರೀತಿ ಸುಳಿವು ನೀಡದಂತೆ ಹಿಡನ್‌ ಕ್ಯಾಮರಾಗಳನ್ನು ಅಳವಡಿಸಿರಲಾಗಿರುತ್ತದೆ. ನೀವು ಎಟಿಎಂ ಕಾರ್ಡ್‌ನಿಂದ ಹಣ ಬಿಡಿಸುವಾಗ ನಿಮ್ಮ ಪಾಸ್‌ವರ್ಡ್‌ಗಳು ಈ ಕ್ಯಾಮರಾದಲ್ಲಿ ಸೆರೆಯಾಗಿರುತ್ತದೆ. ಈ ಮೂಲಕವೂ ನಿಮ್ಮ ಖಾತೆಯಿಂದ ಹಣ ದೋಚುವ ಸಾಧ್ಯತೆ ಇರುತ್ತದೆ.

ಮಾಹಿತಿ ಹಂಚಿಕೊಳ್ಳಬೇಡಿ
ಗ್ರಾಹಕರಿಗೆ ಕರೆ ಇಲ್ಲವೇ ಮೆಸೇಜ್‌ ಕಳುಹಿಸಿ ಬ್ಯಾಂಕ್‌ ಖಾತೆ ವಿವಿರ, ಪಾಸ್‌ವರ್ಡ್‌ ಅಥವಾ ಒಟಿಪಿ ನಂಬರ್‌ ಪಡೆದು ವಂಚಿಸಲಾಗುತ್ತಿದೆ. ಈ ರೀತಿ ಬ್ಯಾಂಕ್‌ನ ಯಾವುದೇ ಅಧಿಕಾರಿಗಳು ಕರೆ ಮಾಡಿ ಮಾಹಿತಿ ಪಡೆಯುವುದಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ನಿಮ್ಮ ಎಟಿಎಂ ಕಾರ್ಡ್‌ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಬೇಡಿ.

ವಸೂಲಾಗದ ಸಾಲ 8.40 ಲಕ್ಷ ಕೋಟಿ ರೂ.
2017ರ ಡಿಸೆಂಬರ್‌ ವೇಳೆಗೆ ಕೇಂದ್ರ ಸರ್ಕಾರದ ಮಾಹಿತಿಯಂತೆ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ 8,40,958 ಕೋಟಿ ರೂ. ಅನುತ್ಪಾದಕ ಸಾಲ (ಎನ್‌ಪಿಎ ) ಇದೆ. ಈ ಪೈಕಿ ಅಧಿಕ ಮೊತ್ತವು ಕೈಗಾರಿಕಾ ಸಾಲವಾಗಿದೆ. ನಂತರದ ಸ್ಥಾನದಲ್ಲಿ ಸೇವಾ ವಲಯ ಹಾಗೂ ಕೃಷಿ ಕ್ಷೇತ್ರಗಳಿವೆ. ಎಸ್‌ಬಿಐ-2,02, 200, ಪಿಎನ್‌ಬಿ- 55,200, ಐಡಿಬಿಐ-44,542, ಬ್ಯಾಂಕ್‌ ಆಫ್ ಇಂಡಿಯಾ- 43, 474, ಬ್ಯಾಂಕ್‌ ಆಫ್ ಬರೋಡಾ- 41,649, ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ-38, 047, ಕೆನರಾ ಬ್ಯಾಂಕ್‌- 37,794, ಐಸಿಐಸಿಐ ಬ್ಯಾಂಕ್‌ 33,849 ಕೋಟಿ ರೂ ಅನುತ್ಪಾದಕ ಸಾಲ ಹೊಂದಿವೆ.

ವಂಚನೆಗೊಳಗಾದ ಬ್ಯಾಂಕ್‌ಗಳು
ಈ ವರ್ಷ ಮೊದಲ ತ್ತೈಮಾಸಿದಲ್ಲೇ 32 ಸಾವಿರ ಕೋಟಿ ರೂ. ವಂಚನೆಯಾಗಿದೆ. ಅಂದರೆ, ಮೂರು ತಿಂಗಳ ಅವಧಿಯಲ್ಲಿ ಕಳೆದ ವರ್ಷದ ಅರ್ಧದಷ್ಟು ಹಣ ವಂಚನೆಯಾಗಿರುವುದು ಕಂಡು ಬಂದಿದೆ. ಈ ಪೈಕಿ ಬ್ಯಾಂಕುಗಳಲ್ಲಿ ದೇಶದ ಅತಿದೊಡ್ಡ ಸ್ಟೇಟ್‌ಬ್ಯಾಂಕ್‌ ಆಫ್ ಇಂಡಿಯಾದ ಪಾಲೇ ಹೆಚ್ಚು. ಶೇ.38ರಷ್ಟು ಅಂದರೆ 12,012 ಕೋಟಿ ರೂ.ಗಳ ವಂಚನೆ ಅನುಭವಿಸಿದ್ದು ಎಸ್‌ಬಿಐ ಎಂದೂ ತಿಳಿದುಬಂದಿದೆ. ನಂತರದ ಸ್ಥಾನದಲ್ಲಿ ಅಲಹಾಬಾದ್‌ ಬ್ಯಾಂಕ್‌ (2,855 ಕೋಟಿ ರೂ.), ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (2,526 ಕೋಟಿ ರೂ.) ಬ್ಯಾಂಕ್‌ ಆಫ್ ಬರೋಡ-(2,297 ಕೋಟಿ ರೂ.), ಒರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌- (2,133 ಕೋಟಿ ರೂ.), ಕೆನರಾ ಬ್ಯಾಂಕ್‌-(2,035 ಕೋಟಿ ರೂ.), ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ-(1,982 ಕೋಟಿ ರೂ.), ಯುನೈಟೆಡ್‌ ಬ್ಯಾಂಕ್‌ ಆಫ್ ಇಂಡಿಯಾ-(1,196 ಕೋಟಿ ರೂ.), ಕಾರ್ಪೋರೇಷ ನ್‌ ಬ್ಯಾಂಕ್‌-(960 ಕೋಟಿ ರೂ.), ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌-(934 ಕೋಟಿ ರೂ.), ಸಿಂಡಿಕೇಟ್‌ ಬ್ಯಾಂಕ್‌-(795 ಕೋಟಿ ರೂ.), ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ-(753 ಕೋಟಿ ರೂ.), ಬ್ಯಾಂಕ್‌ ಆಫ್ ಇಂಡಿಯಾ-(517 ಕೋಟಿ ರೂ.), ಯುಕೋ ಬ್ಯಾಂಕ್‌-(470 ಕೋಟಿ ರೂ.) ಇದೆ.

ಎಂ. ಆರ್‌. ನಿರಂಜನ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ