ಮಹಾಪ್ರವಾಹಕ್ಕೆ ತತ್ತರಿಸಿದ ಬದುಕು

Team Udayavani, Aug 10, 2019, 5:34 AM IST

ಮಲೆನಾಡಿನವರು ಮಳೆಗೆ ಹೆದರುವು ದೆಂದರೇನು? ಮಳೆಯೇ ನಮ್ಮ ಒಡನಾಡಿ. ಆದರೆ ಈ ಬಾರಿಯ ಮಳೆಗಾಲ ಮಾತ್ರ ಆರಂಭ ದಿಂದಲೂ ಅಸಹಜವಾಗೇ ವರ್ತಿಸುತ್ತಿದೆ. ಮೇ ಕೊನೆಗೆ ಒಟ್ಟುಗೂಡಬೇಕಿದ್ದ ಮೋಡಗಳು ಇತ್ತ ಮುಖವೇ ಹಾಕದೇ ಬಾವಿ ಬರಿದಾಗಿ ಬರಗಾಲದ ಸೂಚನೆಯನ್ನು ಸುಸ್ಪಷ್ಟಗೊಳಿಸಿದವು. ‘ಜೂನ್‌ ಮೊದಲ ವಾರಕ್ಕೆ ಮಳೆಯಾಗದೇ ಏನು!’ ಎಂಬ ಹಿಂದಿನಿಂದಲೂ ಬಂದ ನಮ್ಮ ನಂಬಿಕೆಯನ್ನು ಅಕ್ಷರಶಃ ಹುಸಿಗೊಳಿಸಿ ಜೂನ್‌ ಮುಗಿಯುತ್ತಾ ಬಂದಂತೆ ಆಗೊಂದು ಈಗೊಂದು ಮಳೆ ಕಾಣಿಸಿ, ಜುಲೈನಲ್ಲೇ ಅದು ತನ್ನ ಪೂರ್ಣ ದರ್ಶನವಿತ್ತಿದ್ದು.

ಪ್ರತಿ ಮಳೆಗಾಲದ ಆರಂಭದಂತೆ ಮಿಂಚು, ಗುಡುಗುಗಳ ಆರ್ಭಟವಿಲ್ಲದೇ ಒಂದೇ ಸಮ ಸುರಿಯುತ್ತಾ ಬಂದದ್ದು ಅಸಹಜವೇ. ಆದರೂ ಇದು ಅಷ್ಟೊಂದು ಯೋಚಿಸುವ ವಿಷಯವೆನ್ನಿಸಲಿಲ್ಲ.

ಈಗಾಗಲೇ ನೆಟ್ಟು ಮುಗಿಸಿ ನಿರಾಳವಾದವರಿಗೆ ಕಳೆದ ನಾಲ್ಕೆ ೖದು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಕಳವಳ ಮೂಡುವ ಹೊತ್ತಿಗೇ ಇಡೀ ವಾತಾವರಣ ಒಂದು ಬಗೆಯ ವಿಲಕ್ಷಣತೆಯಿಂದಾಗಿ ಆತಂಕ ಸೃಷ್ಟಿಸಿತ್ತು.

ಯಾವ ಮೋಡ ಮುಸುಕಿದ ವಾತಾವರಣ ನಮ್ಮ ಮನಸನ್ನು ಮುದಗೊಳಿಸುತ್ತಿತ್ತೋ, ಯಾವ ಮಳೆ ನಮ್ಮಲ್ಲಿನ ಕವಿತೆಗೆ ಧ್ವನಿಯಾಗುತ್ತಿತ್ತೋ, ಯಾವ ಮಳೆ ನಮ್ಮ ಅಸ್ಮಿತೆಯಾಗಿತ್ತೋ ಅದಿಂದು ‘ಏನೋ ಆಗುವುದಿದೆ, ಏನೇನೂ ಸರಿಯಿಲ್ಲ’ ಎನ್ನುವ ಗಾಬರಿ ಮತ್ತು ಮುಗಿಲು ನೋಡಲೇ ಒಂದು ಬಗೆಯ ಕಸಿವಿಸಿಗೆ ಕಾರಣವಾಗಿತ್ತು. ಅಯ್ಯೋ ನಾವು ನೋಡದ ಮಳೆಯೇ? ಈ ಮಳೆ ಏನು ಮಾಡೀತು? ಎಂತೆಂಥ ಮಳೆಗಳನ್ನು ಕಂಡಿಲ್ಲ ನಮ್ಮ ಬದುಕು? ಏನೂ ಆಗಲಿಕ್ಕಿಲ್ಲ ಎನ್ನುವ ನಿರ್ಲಿಪ್ತತೆಯೊಂದಿಗೆ ಕೊಟ್ಟಿಗೆಗೋ, ಕೊಪ್ಪೆ ಸುಡಿದು ತೋಟಕ್ಕೋ ನಡೆದು ಬಿಡುವ ಹಿರಿಯರ ನಿರ್ಲಿಪ್ತ ಮಾತುಗಳಿಂದ ಉದಿಶ್ಯಪೂರ್ವಕವಾಗಿ ಧೈರ್ಯ ತಂದುಕೊಂಡರೂ ಸಮಾಧಾನಗೊಳ್ಳಲು ಶಕ್ಯವಾಗುತ್ತಿರಲಿಲ್ಲ. ಸಣ್ಣಪುಟ್ಟದ್ದಕ್ಕೆಲ್ಲ ದಿಗಿಲುಗೊಳ್ಳುತ್ತ ಬಂದ ನಮ್ಮ ಇಂದಿನ ಮನಸ್ಥಿತಿಯೂ ಕಾರಣವಿರಬಹುದು ಎನ್ನುವ ಸಮರ್ಥನೆ ಸೇರಿದರೂ…

ಆದರೆ ನಮ್ಮೆಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ಪ್ರಳಯೋಪಾದಿಯಾಗಿ ಮಳೆ ಸುರಿಯುತ್ತಲೇ ಇದೆ. ಅರ್ಧ ಕಿಲೋ ಮೀಟರ್‌ ದೂರದಲ್ಲಿ ಇದ್ದಕ್ಕಿದ್ದಂತೆ ಏರಿಬಿಟ್ಟ ಅರಬ್ಬಿಯ ಹಿನ್ನೀರು ನೆರೆಹೊರೆಯ ಮನೆಗಳ ಮೊಣಕಾಲು ಮುಳುಗಿಸಿಬಿಟ್ಟಿತ್ತು. ಅಲ್ಲಿಯವರನ್ನು ದೋಣಿಯ ಮೂಲಕ ಇತ್ತ ಕಡೆ ಸಾಗಿಸಲಾಗುತ್ತಿರುವ ದೃಶ್ಯ ಪ್ರತ್ಯಕ್ಷ ನೋಡುತ್ತಿರುವಾಗ್ಯೂ ನಾನಿದ್ದ ಪರಿಸರ ಹಿಂದೆ ಹೀಗಿದ್ದಿದ್ದಿಲ್ಲ.

ಸದಾ ಶಾಂತಚಿತ್ತದಿಂದ ತುಯ್ಯುತ್ತಾ ಬದುಕಿನ ಒಂದು ಭಾಗವಾಗಿದ್ದ ಹಿನ್ನೀರು ಹೀಗೆ ಏಕಾಏಕಿ ಜನಜೀವನವನ್ನು ಆಕ್ರಮಿಸಿಬಿಡಬಹುದೆಂಬ ಕಲ್ಪನೆ ನನಗಂತೂ ಊಹೆಗೂ ಮೀರಿದ ವಿಷಯ.

ದೋಣಿಯಲ್ಲಿ ಬರುತ್ತಿರುವವರ ದುಃಖೀತ ಮುಖಗಳು, ಸೊಂಟ ಮಟ್ಟದ ನೀರಿನಲ್ಲಿ ಮುಖ ಮೇಲೆ ಮಾಡಿ ಹೇಗೋ ದಡ ಸೇರುತ್ತಿರುವ ದನಕರುಗಳು, ಗೋಡೆ ಕುಸಿತದ ಭಯಕ್ಕೆ ದೋಣಿಗೆ ಅಂಗಲಾಚುತ್ತಿರುವವರ ಆಕ್ರಂದನ ಯಾವ ಕ್ಷಣದಲ್ಲಾದರೂ ನಮ್ಮನ್ನೂ ಮುಳುಗಿಸಿಬಿಡಬಹುದೆಂಬ ದಿಗಿಲು, ಹೃದಯ ಒಡೆದು ಹೋಗುವಂತೆ ಆರ್ಭಟಿಸುವ ಸಮುದ್ರದ ಮೊರೆತ, ಹೆಂಚುಗಳು ಹಾರುವಂತೆ ಬೀಸುಗಾಳಿಯೊಂದಿಗೆ ಸುರಿಯುತ್ತಿರುವ ಧೋ ಮಳೆ. ನಮ್ಮ ಎದೆ ಬಡಿತ ಹೆಚ್ಚಿಸುವಂತೆ ಇಂಚಿಂಚು ಮುಂದೆ ಬರುವ ಹಿನ್ನೀರು….

ಮೊಬೈಲ್ ಸಿಗ್ನಲ್ ಇಲ್ಲದೇ, ಕರೆಂಟ್ ಇಲ್ಲದೇ ಸಂಪೂರ್ಣ ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡು ನಡುಗಡ್ಡೆಯಾಗುವ ಸ್ಥಿತಿ ಹೇಳತೀರದು. ಅಲ್ಲಿ ಭೂಕುಸಿತ, ಇಲ್ಲಿ ಸೇತುವೆ ತುಂಬಿ ಸಂಚಾರ ನಿಂತು ಹೋಗಿದೆ. ಗಂಜಿ ಕೇಂದ್ರ ತೆರೆಯಲಾಗಿದೆ. ಲೈಟು ಕಂಬಗಳು ಬಿದ್ದಿವೆ.

ಮರಗಳು ಉರುಳಿವೆ. ಇಂಥದ್ದೇ ಸುದ್ದಿಗಳು. ಇದು ಕೇವಲ ಕುಮಟಾದ ಸ್ಥಿತಿ. ಮಿಕ್ಕ ತಾಲೂಕುಗಳು ಇನ್ನೆಂಥ ಪರಿಸ್ಥಿತಿ ಎದುರಿಸುತ್ತಿವೆಯೋ ಗೊತ್ತಿಲ್ಲ. ಘಟ್ಟದ ಮೇಲೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಭೂ ಕುಸಿದು ಕೊಂಡು ಎಗ್ಗಿಲ್ಲದೇ ಹರಿಯುತ್ತಿರುವ ನೀರು ಅನೇಕರ ಬದುಕನ್ನು ಮುಳುಗಿಸುತ್ತಿದೆ. ಇದೇ ಸ್ಥಿತಿ ಮುಂದು ವರಿದರೆ ಇನ್ನೊಂದೆರಡು ದಿನದಲ್ಲಿ ಉತ್ತರ ಕನ್ನಡವೇ ಜಲಸಮಾಧಿಯಾಗುವುದರಲ್ಲಿ ಅನುಮಾನವಿಲ್ಲ.

ಕವಿತಾ ಭಟ್

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಮ್ಮ ಮನವಿಯನ್ನು ಯಾರೂ ಕಿವಿಗೇ ಹಾಕಿಕೊಳ್ಳುತ್ತಿಲ್ಲ ಎಂದು ಸಾಮಾನ್ಯ ಜನರು ಒಂದೇ ಸಮನೆ ರೋದಿಸುತ್ತಿದ್ದಾರೆ. ಈ ನಡುವೆ ಜನಪ್ರತಿನಿಧಿಗಳು ಎನಿಸಿಕೊಂಡ ಕೆಲವರ...

  • ಎಲ್ಲಾ ಪ್ರಮುಖ ನದಿಗಳುದ್ದಕ್ಕೂ ಇಕ್ಕೆಲಗಳಲ್ಲಿ ಕನಿಷ್ಠ ಒಂದು ಕಿಲೋಮೀಟರ್‌ ಅಗಲದಷ್ಟು, ಮತ್ತು ಸಣ್ಣ ನದಿಗಳಿಗೆ ಕನಿಷ್ಠ ಐನೂರು ಮೀಟರ್‌ ಅಗಲದಷ್ಟು ಹಸಿರು ಹೊದಿಕೆ...

  • ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಇನ್ನೊಂದು ವಾರ ಅಥವಾ ಹತ್ತು ದಿನಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗುತ್ತದೆ ಎನ್ನುತ್ತಾರೆ ರಾಜ್ಯಪಾಲ...

  • 73ನೇ ಸ್ವಾತಂತ್ರ್ಯೋತ್ಸವಕ್ಕೆ ಇಂದು ಇಡೀ ದೇಶ ಸಾಕ್ಷಿಯಾಗುತ್ತಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹಲವು ಪ್ರಥಮಗಳಿಗೆ ಕಾರಣ ವಾಗುತ್ತಿದೆ. ಜಮ್ಮು ಮತ್ತು...

  • ದತ್ತು ಸ್ವೀಕಾರ: ಮಹಿಳೆಯರೇ ಹೆಚ್ಚು ಹೆಣ್ಣು ಮಕ್ಕಳಿಗೆ ವಿಶೇಷ ಬೇಡಿಕೆ ಮಣಿಪಾಲ: ಅನಾಥ, ನಿರ್ಗತಿಕರಿಗೂ ಒಂದು ಜೀವನ ಇದೆ. ಮಕ್ಕಳಿಲ್ಲದವರಿಗೆ, ಮಗು ಪಡೆಯಲು...

ಹೊಸ ಸೇರ್ಪಡೆ